Homeಮುಖಪುಟಕೋವಿಡ್ ನಿಯಮ ಉಲ್ಲಂಘನೆಯಾಗಿದ್ದರೆ ಭಾರತ್‌ ಜೋಡೋ ಯಾತ್ರೆ ನಿಲ್ಲಿಸಿ: ರಾಹುಲ್‌ ಗಾಂಧಿಗೆ ಕೇಂದ್ರ ಸಚಿವರ ಪತ್ರ

ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದರೆ ಭಾರತ್‌ ಜೋಡೋ ಯಾತ್ರೆ ನಿಲ್ಲಿಸಿ: ರಾಹುಲ್‌ ಗಾಂಧಿಗೆ ಕೇಂದ್ರ ಸಚಿವರ ಪತ್ರ

- Advertisement -
- Advertisement -

“ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಬೇಕು. ಪ್ರೊಟೊಕಾಲ್‌ ಅನುಸರಿಸುತ್ತಿಲ್ಲವಾದರೆ ರಾಷ್ಟ್ರೀಯ ಹಿತಾಸಕ್ತಿಯ ಕಾರಣದಿಂದ ಯಾತ್ರೆಯನ್ನು ನಿಲ್ಲಿಸಬೇಕು” ಎಂದು ಕೇಂದ್ರ ಆರೋಗ್ಯ ಸಚಿವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ.

ಕಳೆದ ವರ್ಷವೇ ಭಾರತದಲ್ಲಿ ಕೋವಿಡ್ ನಿಯಮಾವಳಿಗಳನ್ನು ಸಡಿಲಿಸಿರುವುದರಿಂದ “ಇದು ಬಿಜೆಪಿಯ ಸಾಮಾನ್ಯ ತಂತ್ರ” ಎಂದು ಕಾಂಗ್ರೆಸ್ ಟೀಕಿಸಿದೆ. ಕೋವಿಡ್‌ ಪ್ರೋಟೋಕಾಲ್ ಏನೆಂದು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಸಚಿವ ಮನ್ಸುಖ್ ಮಾಂಡವಿಯಾ ಪತ್ರ ಬರೆದಿದ್ದು, “ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ಬಳಕೆ ಸೇರಿದಂತೆ ಕೋವಿಡ್ ನಿಯಮಾವಳಿಗಳನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕು. ಲಸಿಕೆ ಹಾಕಿದವರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಬೇಕು ಎಂದು ರಾಹುಲ್‌ ಗಾಂಧಿಯವರಲ್ಲಿ ನಾನು ವಿನಂತಿಸುತ್ತೇನೆ” ಎಂದಿದ್ದಾರೆ.

“ಈ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ದೃಷ್ಟಿಯಿಂದ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ಸಮಸ್ಯೆ ದೇಶದಲ್ಲಿ ಉಂಟಾಗದಂತೆ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಲ್ಲಿ ‘ಭಾರತ್ ಜೋಡೋ ಯಾತ್ರೆ’ಯನ್ನು ಸ್ಥಗಿತಗೊಳಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಡಿಸೆಂಬರ್ 20ರಂದು ಯಾತ್ರೆಯು ರಾಜಸ್ಥಾನದಲ್ಲಿ ಸಾಗಿದ್ದು, ಬುಧವಾರ ಹರಿಯಾಣ ರಾಜ್ಯವನ್ನು ಪ್ರವೇಶಿಸಿದೆ.

ಮೋದಿಯವರು ಕೈಗೊಂಡಿದ್ದ ಚುನಾವಣಾ ರ್‍ಯಾಲಿಗಳನ್ನು ಕಾಂಗ್ರೆಸ್ ತನ್ನ ಪ್ರತಿಕ್ರಿಯೆಗಳಲ್ಲಿ ಉಲ್ಲೇಖಿಸಿದೆ. ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ನಡೆಸಿದ ಚುನಾವಣಾ ಪ್ರಚಾರ ಮತ್ತು ಎರಡು ರಾಜ್ಯಗಳಲ್ಲಿ ಬಿಜೆಪಿ ನಡೆಸುತ್ತಿರುವ ಚುನಾವಣಾ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಉಲ್ಲೇಖಿಸಿದೆ. “ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಯಾತ್ರೆಗಳನ್ನು ನಡೆಸುತ್ತಿದೆ. ಆರೋಗ್ಯ ಸಚಿವರು ಅವರಿಗೆ ಪತ್ರ ಕಳುಹಿಸಿದ್ದಾರೆಯೇ?” ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದಾರ.

“ದಯವಿಟ್ಟು ಕೋವಿಡ್ ಪ್ರೋಟೋಕಾಲ್‌ಗಳನ್ನು ಪ್ರಕಟಿಸಿ. ನಾವು ಅವುಗಳನ್ನು ಅನುಸರಿಸುತ್ತೇವೆ” ಎಂದು ಪಕ್ಷವು ಸ್ಪಷ್ಟಪಡಿಸಿದೆ.

ಚೀನಾದಲ್ಲಿ ಕೋವಿಡ್ ಏರಿಕೆಯಾಗುತ್ತಿದೆ ಎಂಬುದು ಸಾಂಕ್ರಾಮಿಕ ರೋಗದ ಭೀತಿಯ ಚರ್ಚೆಗೆ ಅವಕಾಶ ನೀಡಿದೆ. ಕೆಲವು ಮಾನದಂಡಗಳನ್ನು ಮರು ಹೇರುವ ಬಗ್ಗೆ ಆರೋಗ್ಯ ಸಚಿವಾಲಯ ಇಂದು ಸಭೆ ನಡೆಸಿದೆ.

ಸಚಿವರು ಉಲ್ಲೇಖಿಸಿರುವ ಪತ್ರದಲ್ಲಿ, “ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಯಾತ್ರೆಯಲ್ಲಿ ಭಾಗವಹಿಸಿದ ನಂತರ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ” ಎಂದು ಗಮನ ಸೆಳೆಯಲಾಗಿದೆ.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, “ಬಿಜೆಪಿಯವರು ಭಯಭೀತರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗುಜರಾತ್‌ನಲ್ಲಿ ಮತ ಕೇಳಲು ಮೋದಿಜಿ ಮನೆ ಮನೆಗೆ ಹೋದಾಗ ಮಾಸ್ಕ್‌ ಧರಿಸಿದ್ದರಾ?” ಎಂದು ಕೇಳಿದ್ದಾರೆ.

“ಬಿಜೆಪಿಯು ಗೋದಿ ಮೀಡಿಯಾಗಳ ಮೂಲಕ ಹರಡುವ ಪ್ರೊಪೊಗಾಂಡಕ್ಕೆ ಈ ಯಾತ್ರೆಯು ಕಡಿವಾಣ ಹಾಕಿದೆ” ಎಂದಿರುವ ಅವರು, “ಈಗ ರಾಹುಲ್ ಗಾಂಧಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಯಾತ್ರೆಯ ಬಗ್ಗೆ ಮಾತನಾಡಲಾಗುತ್ತಿದೆ, ಇದು ಭಾರಿ ಪರಿಣಾಮ ಬೀರುತ್ತಿದೆ. ಅದಕ್ಕಾಗಿಯೇ ಮೋದಿ ಸರ್ಕಾರವು (ಮನ್ಸುಖ್) ಮಾಂಡವಿಯಾ ಅವರನ್ನು ನಿಯೋಜಿಸಿ ಯಾತ್ರೆಯ ವಿರುದ್ಧ ಜರನ್ನು ಎತ್ತಿಕಟ್ಟಲು ಪ್ರಯತ್ನಿಸಿದೆ” ಎಂದು ಆರೋಪಿಸಿದ್ದಾರೆ.

ಕೇಂದ್ರ ಸಚಿವರ ಪತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...