‘ಇಡೀ ದೇಶವನ್ನು ಬಿಹಾರವನ್ನಾಗಿ ಪರಿವರ್ತಿಸುತ್ತೀರಿ’ ಎಂದು ಬಿಹಾರ ರಾಜ್ಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಪಿಯೂಶ್ ಗೋಯಲ್ ಇಂದು ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದಾರೆ.
ರಾಜ್ಯಸಭೆಯಲ್ಲಿ ಆರ್‌ಜೆಡಿ ಪಕ್ಷದ ಸದಸ್ಯರಾದ ಮನೋಜ್ ಝಾ ರವರು ಮಾತನಾಡುತ್ತಿದ್ದ ವೇಳೆ ಅದನ್ನು ತಡೆದು ಪಿಯೂಶ್ ಗೋಯಲ್ “ಇವರು ಈ ರೀತಿ ಮಾತನಾಡಿದರೆ, ಇಡೀ ದೇಶವನ್ನು ಬಿಹಾರವನ್ನಾಗಿ ಪರಿವರ್ತಿಸುತ್ತಾರೆ” ಎಂದು ಹೇಳಿದ್ದರು.
ಇದರಿಂದ ಕೆರಳಿದ ಬಿಹಾರದ ಸದಸ್ಯರು ಬಿಹಾರ ರಾಜ್ಯವನ್ನು ಅವಹೇಳನಕಾರಿ ಪದವಾಗಿ ಬಳಸುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು.
ಬಿಹಾರ ರಾಜ್ಯವನ್ನು ಅವಮಾನಿಸುವ ಪಿಯೂಶ್ ಗೋಯಲ್ ಅವರ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಹಲವು ರಾಜ್ಯಸಭಾ ಸದಸ್ಯರು ಇಂದು ಪ್ರತಿಭಟನೆ ನಡೆಸಿದ್ದರು.
ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಆ ವಿಡಿಯೋವನ್ನು ಹಂಚಿಕೊಂಡು, “ನೋಡಿ ಕೇಂದ್ರ ಸಚಿವರ ಅವಿವೇಕತನದಿಂದ ಮತ್ತು ಅಹಂಕಾರದಿಂದ ಬಿಹಾರ ಮತ್ತು ಅಲ್ಲಿನ ಜನರನ್ನು ಹಂಗಿಸುತ್ತಿದ್ದಾರೆ. 2.5 ಲಕ್ಷ ಕೋಟಿ ರೂಗಳ ಯೋಜನೆಗಳನ್ನು ಅವರ ಸ್ವಂತ ರಾಜ್ಯ ಮಹಾರಾಷ್ಟ್ರದಿಂದ ಗುಜರಾತ್‌ಗೆ ತಗೆದುಕೊಂಡು ಹೋದಾಗಲೂ ಅವರು ಒಂದು ಮಾತು ಆಡಲಿಲ್ಲ. ಇದು ಅವರ ನಿಲುವನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮನೋಜ್ ಝಾರವರು ಉಪರಾಷ್ಟ್ರಪತಿ ಜಗದೀಪ್ ಧಂಕರ್‌ರವರಿಗೆ ಪತ್ರ ಬರೆದು ಕೇಂದ್ರ ಸಚಿವರು ಕ್ಷಮೆಯಾಚಿಸಬೇಕು ಮತ್ತು ಶ್ರೇಷ್ಠತೆಯ ವ್ಯಸನದಿಂದ ಕೂಡಿರುವ ಆ ಹೇಳಿಕೆಯನ್ನು ಕಡತದಿಂದ ತೆಗೆಯಬೇಕೆಂದು ಒತ್ತಾಯಿಸಿದ್ದರು.
ಈ ಅಹಂಕಾರಿ ಜನರು ಬಿಹಾರದ ಜನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಾರೆ. ಹಾಗಾಗಿ ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತಾರೆ. ಭಾರತದ ಎಲ್ಲಾ ರಾಜ್ಯಗಳನ್ನು ಕೇಂದ್ರ ಸರ್ಕಾರ ಸಮಾನವಾಗಿ ಪರಿಗಣಿಸಬೇಕು ಎಂದು ಕಿಡಿಕಾರಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವರು, “ಬಿಹಾರ ರಾಜ್ಯವನ್ನು ಅಥವಾ ಬಿಹಾರದ ಜನರನ್ನು ಅವಮಾನಿಸುವ ಯಾವ ಉದ್ದೇಶವು ನನಗಿಲ್ಲ. ಅದು ಯಾರ ಭಾವನೆಗಾದರೂ ನೋವುಂಟು ಮಾಡಿದರೆ, ನಾನು ಕೂಡಲೇ ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತೇನೆ” ಎಂದು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮೋದಿ ಹೇಳಿದಂತೆ 2002ರ ಮೊದಲು ಅಹಮದಾಬಾದ್ ಜಿಲ್ಲೆಯಲ್ಲಿ ಒಂದೇ ಒಂದು ವಿಶ್ವವಿದ್ಯಾಲಯವಿತ್ತೇ?


