Homeನ್ಯಾಯ ಪಥಚುನಾವಣೆಯ ಸಂದರ್ಭದಲ್ಲಿ ಭುಗಿಲೇಳುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಭಾಷಾ ನಂಟು ಇದೆಯೇ?

ಚುನಾವಣೆಯ ಸಂದರ್ಭದಲ್ಲಿ ಭುಗಿಲೇಳುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಭಾಷಾ ನಂಟು ಇದೆಯೇ?

- Advertisement -
- Advertisement -

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಈಗ ಏಕಾಏಕಿಯಾಗಿ ಸ್ಫೋಟಿಸಿದ ಭಾಷಾಂಧತೆಯು ಏಕಾಏಕಿ ಹುಟ್ಟಿಕೊಂಡದ್ದೇನಲ್ಲ; ಅಷ್ಟೇ ಅಲ್ಲದೆ, ಅದು ಪ್ರಾಥಮಿಕವಾಗಿ ಭಾಷೆಗೆ ಸಂಬಂಧಿಸಿದ್ದೂ ಅಲ್ಲ. ಮರಾಠಿಯ ಕುರಿತು ಬೆಳಗಾವಿ-ನಿಪ್ಪಾಣಿ ಪ್ರದೇಶದ ಜನರ ಸಹಿಷ್ಣುತೆಯು ಮುಗಿದೇಹೋಯಿತೇನೋ, ಅಥವಾ ಕನ್ನಡದ ಕುರಿತು ಕೊಲ್ಲಾಪುರ-ಸಾಂಗ್ಲಿಯಲ್ಲಿರುವ ಜನರ ಸಹಿಷ್ಣುತೆಯು ಮುಗಿದೇ ಹೋಯಿತೇನೋ ಎಂಬಂತೆಯೂ ಅಲ್ಲ. ಈ ಎರಡೂ ಭಾಷೆಗಳನ್ನೂ ಮಾತನಾಡುವ ಜನರ ಸಂಖ್ಯೆ ತೀರಾ ದೊಡ್ಡದಾಗಿದೆ. ದ್ವಿಭಾಷೆಯ ಪರಂಪರೆಯು ಈ ಪ್ರದೇಶದ ಸಂಸ್ಕೃತಿಯಲ್ಲಿ ಅತ್ಯಗತ್ಯವಾದ ಅಂಶವಾಗಿದೆ. ವಿವಾದಿತ ಗಡಿಯ ಎರಡೂ ಕಡೆಗಳಲ್ಲಿರುವ ಜಾತಿಗಳು ಮತ್ತು ಸಮುದಾಯಗಳು, ತಮ್ಮ ವಿಸ್ತರಿತ ಕುಟುಂಬಗಳನ್ನು ಎರಡೂ ಕಡೆಗಳಲ್ಲಿ ಹರಡಿಕೊಂಡಿವೆ. ಕನ್ನಡ ಮತ್ತು ಮರಾಠಿ ಎರಡರ ಇತಿಹಾಸದುದ್ದಕ್ಕೂ ಪರಿಸ್ಥಿತಿ ಇದುವೇ ಆಗಿತ್ತು.

ಕನ್ನಡದ ಅನೇಕ ಪ್ರಸಿದ್ಧ ಲೇಖಕರು ಸಹಜ ರೀತಿಯಲ್ಲಿ ಮರಾಠಿ ಮಾತನಾಡುವವರೂ ಆಗಿದ್ದರು. ಅವರಲ್ಲಿ ಕೆಲವರನ್ನಷ್ಟೇ ಹೆಸರಿಸುವುದಾದಲ್ಲಿ, ಮಹಾನ್ ಕವಿ ದ.ರಾ.ಬೇಂದ್ರೆ, ನಾಟಕಕಾರ ಗಿರೀಶ್ ಕಾರ್ನಾಡ್, ಕಾದಂಬರಿಕಾರ ಶಾಂತಿನಾಥ ದೇಸಾಯಿ, ಗಾಯಕ ಭೀಮಸೇನ ಜೋಷಿ, ಕತೆಗಾರ-ಸಿನಿಮಾ ಹಾಡುಗಳ ರಚನೆಕಾರ ಜಯಂತ ಕಾಯ್ಕಿಣಿ ಸೇರಿದ್ದಾರೆ. ಇನ್ನೊಂದು ಕಡೆಯಲ್ಲಿ ಮರಾಠಿಯ ಅತ್ಯಂತ ಪ್ರಸಿದ್ಧ ಬರಹಗಾರ ಜಿ.ಎ. ಕುಲಕರ್ಣಿಯವರು ತಮ್ಮ ವೃತ್ತಿಜೀವನದ ಬಹುಕಾಲವನ್ನು ಕರ್ನಾಟಕದಲ್ಲಿ ಕಳೆದವರು ಮತ್ತು ತಮ್ಮ ಅದ್ಭುತ ಕಥಾನಕಗಳನ್ನು ಇಲ್ಲಿನ ಪರಿಸರದಿಂದಲೇ ರೂಪಿಸಿಕೊಂಡವರು. ಅದೇ ರೀತಿಯಲ್ಲಿ 20ನೇ ಶತಮಾನದ ಮರಾಠಿ ನಾಟಕರಂಗವು ಕನ್ನಡ ನಾಟಕರಂಗದ ಪ್ರಭಾವದಿಂದಲೇ ಹುಟ್ಟಿಕೊಂಡಿತು. ಕನ್ನಡದ ಮಹಾನ್ ಸಂಗೀತಗಾರರೆಲ್ಲರೂ ನುಡಿಸುತ್ತಿದ್ದ ಹಾರ್ಮೋನಿಯಂ ಮತ್ತು ಸಿತಾರ್‌ಗಳು ಕಳೆದ ನೂರಿಪ್ಪತ್ತು ವರ್ಷಗಳಿಂದ ಮಹಾರಾಷ್ಟ್ರದ ಮೀರಜ್ ಪಟ್ಟಣದಲ್ಲಿಯೇ ತಯಾರಾಗುತ್ತಿವೆ.

ಹಿಂದೆ, ಬಸವಣ್ಣನವರ ಅನುಯಾಯಿಗಳ ವಚನಗಳು ಮರಾಠಿಗರ ಮನಸ್ಸನ್ನು ಪ್ರವೇಶಿಸಿದಷ್ಟೇ ಸುಲಭವಾಗಿ ತುಕಾರಾಮರ ಭಜನೆಗಳು ಕನ್ನಡಿಗರ ಹೃದಯಕ್ಕೆ ದಾರಿಮಾಡಿಕೊಂಡಿವೆ. ಮರಾಠಿಯ ಸಾವಿರಾರು ಶಬ್ದಗಳು ಕನ್ನಡ ಮೂಲದವುಗಳು ಮತ್ತು ಅದೇ ರೀತಿಯಲ್ಲಿ ಅಷ್ಟೇ ಸಂಖ್ಯೆಯ ಕನ್ನಡ ಶಬ್ದಗಳು ಇಂಡೋ ಆರ್ಯನ್ ಬೇರುಗಳನ್ನು ಹೊಂದಿದ್ದು, ಮರಾಠಿಯ ಮೂಲಕ ಕನ್ನಡದಲ್ಲಿ ಸಮ್ಮಿಳಿತಗೊಂಡವು. ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ದೈವ ಎಂದರೆ ಪಂಡರಾಪುರದ ವಿಠೋಬ. ಒಂದು ಜನಪ್ರಿಯ ಜಾನಪದ ಗಾದೆ ಅವನ ಮೂಲವು ಕರ್ನಾಟಕ ಎಂದು ಹೇಳುತ್ತದೆ. ಕರ್ನಾಟಕದ “ಕಶೀದ” ಕಸೂತಿಯ ಸೀರೆಗಳು ಯಾವತ್ತೂ ಮಹಾರಾಷ್ಟ್ರದ ಚೆಲುವೆಯರ ಉಡುಪುಗಳ ನಡುವೆ ಹೆಮ್ಮೆಯ ಸ್ಥಾನ ಪಡೆದಿದ್ದರೆ, ಯುಗಗಳಿಂದ ಕರ್ನಾಟಕದ ಮಹಿಳೆಯರು ತಮ್ಮ ಮದುವೆಯ ಉಡುಪಾಗಿ ಮಹಾರಾಷ್ಟ್ರದ “ಪೈತಾಣಿ” ಇರಬೇಕು ಎಂದು ಬಯಸುತ್ತಾ ಬಂದಿದ್ದಾರೆ. ಎರಡೂ ಭಾಷೆಗಳು, ರಾಜ್ಯಗಳು, ಸಂಸ್ಕೃತಿಗಳು ಈ ರೀತಿಯ ಸಾಂಸ್ಕೃತಿಕ ಬಾಂಧವ್ಯದಲ್ಲಿ ಬೆಸೆದಿರುವಾಗ, ಇದೀಗ ಸ್ಫೋಟಿಸಿರುವ ಕೋಪದ ಮೂಲ ಯಾವುದು?

ಅದು ಭಾಷೆ ಅಲ್ಲವೆಂದಾದಲ್ಲಿ, ಕೆಟ್ಟದಾಗಿ ಅಧ್ವಾನಗೊಳಿಸಲಾಗಿರುವ ಪ್ರಾದೇಶಿಕ ಗಡಿಯ ಹಠಾತ್ ನೆನಪು ಜನರಿಗೆ ಕಿರಿಕಿರಿ ಉಂಟುಮಾಡಿತೆ? ಕಳೆದ ಆರು ದಶಕಗಳಲ್ಲಿ ಗಡಿ ವ್ಯಾಖ್ಯಾನವು ಹಾದುಹೋಗಿರುವ ಪುನರಾವರ್ತನೆಗಳನ್ನು ನೋಡುವ ತನಕ ಯಾರೂ ಕೂಡಾ ಹೀಗೆ ಭಾವಿಸಬಹುದು. ಶಾತವಾಹನ, ವಕಾಟಕ, ರಾಷ್ಟ್ರಕೂಟ, ಚಾಲುಕ್ಯ ಮತ್ತು ಯಾದವ ಅರಸರ ಕಾಲಗಳಲ್ಲಿ ಮತ್ತು ಮರಾಠ, ಪೇಶ್ವೆ, ನಂತರ ವಸಾಹತುಶಾಹಿ ಆಡಳಿತದ ಕಾಲಗಳಲ್ಲಿ ಕೂಡಾ ಪೂರ್ವ ಮತ್ತು ದಕ್ಷಿಣ ಮಹಾರಾಷ್ಟ್ರದ ಗಡಿಗಳು ಲೆಕ್ಕವಿಲ್ಲದಷ್ಟು ಸಲ ಬದಲಾಗಿರುವುದನ್ನು ಮತ್ತೆ ಉಲ್ಲೇಖಿಸುವ ಅಗತ್ಯವಿಲ್ಲ.

ಆಧುನಿಕ ಭಾರತದಲ್ಲಿ ರಾಜ್ಯದ ರಚನೆಗೆ ಸ್ವಲ್ಪ ಮೊದಲ ತನಕ ಉತ್ತರ ಕರ್ನಾಟಕದ ದೊಡ್ಡ ಭಾಗವು ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ಜೊತೆಗಿದ್ದು, ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸೇರಿತ್ತು. ಸ್ವಾತಂತ್ರ್ಯಾನಂತರ ರಾಜ್ಯಗಳ ರಚನೆಯು ಭಾಷಾ ಬಹುಸಂಖ್ಯಾತತೆಯ ಆಧಾರದಲ್ಲಿ ನಡೆಯಿತು. ಮಹಾರಾಷ್ಟ್ರದ ಉತ್ತರ ಮತ್ತು ಈಶಾನ್ಯದಲ್ಲಿ ಮರಾಠಿ, ಗುಜರಾತಿ, ಹಿಂದಿ ಅಥವಾ ತೆಲುಗು ಭಾಷೆಗಳಿಗಿಂತ ಹೆಚ್ಚೇನೂ ಬೇರೆಯಾಗಿರದ ಭಾಷೆಗಳನ್ನು ಮಾತನಾಡುವ ಹಲವಾರು ಆದಿವಾಸಿ ಸಮುದಾಯಗಳು ಇರುವ ಕಾರಣದಿಂದ ಗಾಢವಾದ ಭಾಷಾವಾರು ವಿಭಜನೆಯು ಬಹಳಷ್ಟು ತೆಳುವಾಯಿತು. ಅವು ಎರಡು ಭಾಷೆಗಳ ನಡುವೆ ಹೆಚ್ಚುವರಿ ಭಾಷೆಗಳಾಗಿ ಕೆಲಸ ಮಾಡಿದವು.

ಮರಾಠಿ ಮತ್ತು ಕನ್ನಡದ ನಡುವೆ ಇಂತಹ ಯಾವುದೇ ಹೆಚ್ಚುವರಿ ಭಾಷೆಯಿಲ್ಲ. ಆದುದರಿಂದ ಎರಡೂ ರಾಜ್ಯಗಳ ಪ್ರಾದೇಶಿಕ ಗಡಿಯ ಉದ್ದಕ್ಕೂ ಎರಡೂ ಕಡೆಯ ದ್ವಿಭಾಷಿಕತೆಯ ಹೊರತಾಗಿಯೂ, ಎರಡೂ ಭಾಷೆಗಳ ನಡುವಿನ ವ್ಯತ್ಯಾಸವು ಇರುವುದಕ್ಕಿಂತಲೂ ಗಾಢವಾಗಿ, ಆಳವಾಗಿ ಕಾಣಿಸಿಕೊಳ್ಳುತ್ತದೆ. ಹೀಗಿದ್ದರೂ, ಇದೇನೂ ಹೊಸ ಸಂಶೋಧನೆ ಅಲ್ಲ. ಯಾವೂದೇ ಅಸಮ್ಮತಿ, ಅಸಮಾಧಾನ ಇಲ್ಲದೇ ಗಡಿಯನ್ನು ಗುರುತಿಸಬೇಕಾದ ಬಹುತೇಕ ಅಸಾಧ್ಯವಾದ ಈ ಕೆಲಸವು ವರ್ಷಗಳಲ್ಲಿ ವಿವಾದಗಳ ಹಲವು ಹಂತಗಳನ್ನು ದಾಟಿಹೋಗಿದೆ.

ಹಲವಾರು ಸಮಿತಿಗಳು ವಿವಾದವನ್ನು ಬಗೆಹರಿಸಲು ಭಾರೀ ಪ್ರಯತ್ನಗಳನ್ನು ಮಾಡಿವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಿ, ಕಾದಾಡಲಾಗಿದೆ. ಎರಡೂ ರಾಜ್ಯಗಳು ತರ್ಕ ಮತ್ತು ವಾದಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ತಮ್ಮ ತಮ್ಮ ದಾವೆಗಳನ್ನು ಸಮರ್ಥಿಸಿ ಅವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೊಯ್ಯಲು ಸಾಧ್ಯವಾಗುವಂತೆ ತಮ್ಮದೇ ಆಯೋಗಗಳನ್ನೂ ನೇಮಿಸಿವೆ. ದ್ವಿಪಕ್ಷೀಯ ಒಪ್ಪಂದಕ್ಕೆ ಬರಲು ಜನಸಂಖ್ಯಾ ಗಣನೆ ಕೂಡಾ ಮಾಡಲಾಗಿದೆ. ಆಡಳಿತ ಸಂರಚನೆ, ಉಪವಿಭಾಗಿಯ ತಾಲೂಕುಗಳ ಪುನರ್‌ರಚನೆ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ ಅವುಗಳ ಪ್ರಾತಿನಿಧ್ಯದ ಲೆಕ್ಕಾಚಾರದ ಪ್ರಯೋಗಗಳನ್ನೂ ಮಾಡಲಾಗಿದೆ. ಈ ಪ್ರದೇಶಗಳ ಜನರು ಇದಕ್ಕೆ ಒಗ್ಗಿಕೊಂಡು, ರಾಜಿ ಮಾಡಿಕೊಂಡು, ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ. ಈ ಹೊತ್ತಿಗೆ ತೀವ್ರಗಾಮಿಗಳು ಕೂಡಾ ಗತಕಾಲಕ್ಕೆ ಸೇರಿಹೋಗಿದ್ದಾರೆ. ವಿವಾದವು ಭಾಷೆಯ ಹೆಸರಿನಲ್ಲಿ ನಡೆಯುತ್ತಿದೆ. ಆದರೆ, ಅದು ಹೂರಣದಲ್ಲಿ ಭಾಷೆಗೆ ಸಂಬಂಧಿಸಿದ್ದಲ್ಲ. ಅದು ಗಡಿಯ ಹೆಸರಿನಲ್ಲಿ ನಡೆಯುತ್ತಿದೆ. ಆದರೆ, ಅದು ಹೂರಣದಲ್ಲಿ ಪ್ರದೇಶಕ್ಕೆ ಸಂಬಂಧಿಸಿದ್ದಲ್ಲ. ರಾಜಕಾರಣಿಗಳು ಬಯಸಿ ಕಿಡಿ ಹಚ್ಚಿದಾಗಲೆಲ್ಲಾ ಈ ಪ್ರದೇಶವು ಅಶಾಂತಿಯನ್ನು ಕಾಣುತ್ತದೆ ಎಂದು ಜನರಿಗೆ ಗೊತ್ತಿದೆ.

ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಇತ್ತೀಚಿನ ಸಮಯದಲ್ಲಿ ಭ್ರಷ್ಟಾಚಾರ ಮಿತಿಮೀರಿರುವ ಕುರಿತ ಸುದ್ದಿಗಳು ಧಾರಾಳವಾಗಿ ಬರುತ್ತಿವೆ. ಪೊಲೀಸ್ ನೇಮಕಾತಿ ಹಗರಣ, 40% ಕಮಿಷನ್ ಮುಂತಾದ ಹಲವಾರು ಹಗರಣಗಳು ನಡೆದಿವೆ. ರಾಜ್ಯದಲ್ಲಿ ಕಳೆದ ಮಳೆಗಾಲದಲ್ಲಿ ಹೊಂಡಬಿದ್ದ ರಸ್ತೆಗಳು ಹಾಗೆಯೇ ಇವೆ. ಕೈಗಾರಿಕೆಗಳು ದಕ್ಷಿಣದ ಬೇರೆ ರಾಜ್ಯಗಳಿಗೆ ವಲಸೆ ಹೋಗಲಾರಂಭಿಸಿವೆ. ಅಲ್ಪಸಂಖ್ಯಾತರಿಗೆ ವ್ಯಾಪಾರ ದಿಗ್ಬಂಧನಗಳನ್ನು ಹೇರುವುದರ ಮೂಲಕ, ಹಿಜಾಬ್, ಲವ್ ಜಿಹಾದ್ ಮುಂತಾದವುಗಳನ್ನು ವಿವಾದವನ್ನಾಗಿ ಮಾಡುವುದರ ಮೂಲಕ, ಮಾಧ್ಯಮಗಳು ಕ್ರಿಮಿನಲ್ ಪ್ರಕರಣಗಳನ್ನು ಬಹಳ ದೊಡ್ಡ ರಾಷ್ಟ್ರೀಯ ಸಂಚುಗಳೋ ಎಂಬಂತೆ ಬಿಂಬಿಸುವುದರ ಮೂಲಕ, ಅಲ್ಪಸಂಖ್ಯಾತರ ವಿರುದ್ಧ ಬಹುಸಂಖ್ಯಾತರನ್ನು ಎತ್ತಿಕಟ್ಟಿ, ಈ ಎಲ್ಲವುಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಮಾಡಲಾಗುತ್ತಿರುವ ಪ್ರಯತ್ನಗಳು ಫಲ ನೀಡುವುದು ಕಡಿಮೆಯಾಗುತ್ತಿದೆ. ಸ್ಥಳೀಯಾಡಳಿತ ಚುನಾವಣೆಗಳು ಕೂಡಾ ಆಳುವ ಪಕ್ಷಕ್ಕೆ ಹೆಚ್ಚೇನೂ ಒಳ್ಳೆಯ ಸುದ್ದಿಯನ್ನು ತರಲಿಲ್ಲ. ಮಹಾರಾಷ್ಟ್ರದಲ್ಲಿ ಆಳುವ ಕೂಟವು ಕೂಡಾ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಗಡಿಯ ಎರಡೂ ಕಡೆಗಳಲ್ಲಿ ಪರಿಸ್ಥಿತಿಯು ಬಿಜೆಪಿಗೆ ಬಹಳಷ್ಟು ಚಿಂತೆಯನ್ನು ಉಂಟುಮಾಡಿದೆ. ಈ ಸನ್ನಿವೇಶದಲ್ಲಿ ಭಾಷಾಂಧತೆಯನ್ನು ಬಡಿದೆಬ್ಬಿಸುವುದು ರಾಜಕೀಯ ಅಸ್ತ್ರವೊಂದನ್ನು ಒದಗಿಸುತ್ತದೆ.

ಬಹಳ ವ್ಯವಸ್ಥಿತವಾಗಿ, ಕೇಂದ್ರ ಗೃಹ ಮಂತ್ರಿ- ಇಡೀ ಭಾರತದಲ್ಲಿ ಹಿಂದಿಯನ್ನು ಹೇರುವ ಹೊಸ ಪ್ರಯತ್ನವನ್ನು ಮಾಡಿದಾಗ, ಕರ್ನಾಟಕದಲ್ಲಿ ಕನ್ನಡದ ವಕೀಲರಂತೆ ವರ್ತಿಸುವ ಬಿಜೆಪಿಗಾಗಲೀ, ಮಹಾರಾಷ್ಟ್ರದಲ್ಲಿ ಮರಾಠಿಯ ವಕೀಲರಂತೆ ವರ್ತಿಸುವ ಬಿಜೆಪಿಗಾಗಲೀ ಪ್ರತಿಭಟಿಸುವ ಯಾವ ಅಗತ್ಯವೂ ಕಾಣಲಿಲ್ಲ. ನಿಜ ಹೇಳಬೇಕೆಂದರೆ, ಎರಡೂ ಭಾಷೆಗಳಾಗಲೀ, ಗಡಿಯ ಎರಡೂ ಕಡೆಗಳಲ್ಲಿ ಇರುವ ಜನರಾಗಲೀ- ಅವರಿಗೆ ನೈಜ ವಿಷಯವೇ ಅಲ್ಲ. ಈ ಪ್ರದೇಶದ ಸಮುದಾಯಗಳಿಗೆ ಏನೇ ಹಾನಿಯನ್ನು ಬೇಕಾದರೂ ತರಲಿ; ರಾಜಕೀಯದ ದೊಣ್ಣೆನಾಯಕರಿಗೆ ಬೇಕಾಗಿರುವುದು- ಜನರ ಅಸಮಾಧಾನವನ್ನು ಬೇರೆಡೆಗೆ ತಿರುಗಿಸುವುದು ಮಾತ್ರ. ದುರದೃಷ್ಟವಶಾತ್ ದೇಶದ ಬಹುತೇಕ ಮಾಧ್ಯಮಗಳು ಈ ಸತ್ಯವನ್ನು ಹೇಳುವ ಧೈರ್ಯವನ್ನು ಕಳೆದುಕೊಂಡಿವೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ’ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ದ ಅಧ್ಯಕ್ಷರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...