“ಹಿಂದುಳಿದ ಜಾತಿಗಳಿಗೆ ಅನ್ಯಾಯವಾದರೆ ಸಹಿಸಲ್ಲ, ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವುದಿಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ನಡೆಸುತ್ತೇನೆ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮೀಸಲಾತಿ ಕುರಿತು ಆಗುತ್ತಿರುವ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, “ಹಿಂದುಳಿದ ಸಮುದಾಯದಲ್ಲಿ 102 ಜಾತಿಗಳಿವೆ, ಒಟ್ಟು ಜನಸಂಖ್ಯಾ ಪ್ರಮಾಣ ಶೇಕಡಾ 52ರಷ್ಟಿದ್ದರೂ ಕೇವಲ ಶೇಕಡಾ 27ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಶೇಕಡಾ 4ರಷ್ಟಿರುವವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗಿದೆ, ಇದು ತಪ್ಪು” ಎಂದು ತಿಳಿಸಿದ್ದಾರೆ.
“ಬೇರೆ ರಾಜ್ಯಗಳಲ್ಲಿ ಶೇಕಡಾ 50ರ ಮಿತಿಯನ್ನು ಮೀರಿ ಮೀಸಲಾತಿ ನೀಡಿದರೆ ರದ್ದುಪಡಿಸಲಾಗುತ್ತದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಎಲ್ಲ ನಿಯಮಾವಳಿಗಳನ್ನು ಮೀರಿ ಮೀಸಲಾತಿ ಹೆಚ್ಚಿಸುವ ಘೋಷಣೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ” ಎಂದಿದ್ದಾರೆ.
“ಹಿಂದುಳಿದ ಜಾತಿಗಳಿಗೆ 2ಎನಲ್ಲಿ ಮೀಸಲಾತಿ ನೀಡಲಾಗಿದ್ದರೂ ಇತ್ತೀಚೆಗೆ ಬೇರೆ ಜಾತಿಗಳು ಈ ಗುಂಪಿಗೆ ಸೇರಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಹಿಂದೆ ಲಿಂಗಾಯತ ಸಾದರರು ಹಿಂದೂ ಸಾದರ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆಯಲು ಪ್ರಯತ್ನಿಸಿದ್ದರು. ಮೀಸಲಾತಿ ದುರುಪಯೋಗ ತಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮೀಸಲಾತಿ ಹೋರಾಟ ಪರ್ವ
ರಾಜ್ಯದಲ್ಲಿ ಈಗ ಮೀಸಲಾತಿ ಹೋರಾಟ, ಆಗ್ರಹಗಳ ಪರ್ವ ಆರಂಭವಾಗಿದೆ. ಒಂದಲ್ಲ ಒಂದು ಸಮುದಾಯವು ಮೀಸಲಾತಿ ಸಂಬಂಧ ಹೋರಾಟಕ್ಕೆ ಮುಂದಾಗುತ್ತಿವೆ. ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ನಾಯಕ ಸಮುದಾಯ ಹೋರಾಟ ಮಾಡಿ ತಕ್ಕ ಮಟ್ಟಿನ ಯಶಸ್ಸು ಪಡೆದಿದೆ. ಜಸ್ಟೀಸ್ ಎಚ್.ಎನ್. ನಾಗಮೋಹನದಾಸ್ ವರದಿ ಅನ್ವಯ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ 17ಕ್ಕೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ 7ಕ್ಕೂ ಹೆಚ್ಚಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪು ತಡೆಯಾಗಿರುವುದರಿಂದ ಸರ್ಕಾರ, ‘ಕಾಂತರಾಜ್ ಆಯೋಗದ ವರದಿ’ಯನ್ನು ಬಿಡುಗಡೆ ಮಾಡುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ. ಇದರ ನಡುವೆ ಮೀಸಲಾತಿ ಹೋರಾಟಗಳು ಬಿರುಸು ಪಡೆಯುತ್ತಿವೆ.
1990ರ ಅವಧಿಯಲ್ಲಿ ರಚನೆಯಾದ ಮಂಡಲ್ ಆಯೋಗದ ಮೂಲಕ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು. ಆದರೆ ಒಟ್ಟು ಶೇ. 50ರಷ್ಟು ಮೀಸಲಾತಿ ಮಿತಿಯನ್ನು ಮೀರದಂತೆ ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತು. ಹೀಗಾಗಿ ಶೇ.52ರಷ್ಟು ಮೀಸಲಾತಿಯ ಬದಲು ಕೇವಲ ಶೇ.27ರಷ್ಟು ಮೀಸಲಾತಿ ಪ್ರಾತಿನಿಧ್ಯ ಒಬಿಸಿಗಳಿಗೆ ದೊರಕಿತು.
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೇಲ್ಜಾತಿ ಬಡವರಿಗೆಂದು, ಎಂಟು ಲಕ್ಷ ರೂ. ಆದಾಯ ಮಿತಿಯನ್ನು ವಿಧಿಸಿ ಶೇ.10ರಷ್ಟು ಇಡಬ್ಲ್ಯೂಎಸ್ (ಆರ್ಥಿಕವಾಗಿ ಹಿಂದುಳಿದ ವರ್ಗ) ಕೋಟಾವನ್ನು ನೀಡಿತು. ಮೇಲ್ಜಾತಿಗಳಿಗೆ ನೀಡಿರುವ ಅವೈಜ್ಞಾನಿಕ ಮೀಸಲಾತಿಯ ಫಲವೋ ಅಥವಾ ಸಮುದಾಯಗಳಲ್ಲಿ ಮೀಸಲಾತಿ ಕುರಿತು ಹುಟ್ಟಿರುವ ಆಸಕ್ತಿಯ ಕಾರಣವೋ- ಮೀಸಲಾತಿ ಹೋರಾಟಗಳು ಮುನ್ನೆಲೆಗೆ ಬಂದಿವೆ. ರಾಜ್ಯದಲ್ಲೂ ವಿವಿಧ ಸಮುದಾಯಗಳು ಹೋರಾಟಕ್ಕೆ ಧಮುಕಿವೆ. ಚುನಾವಣೆ ಹೊಸ್ತಿಲಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ತರಬೇಕೆಂದು ಮೂರು ದಶಕಗಳಿಂದ ನಡೆಯುತ್ತಿರುವ ಹೋರಾಟ ಈಗ ತೀವ್ರವಾಗಿದೆ. ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ನಡೆಯುತ್ತಿದ್ದು, ಪ್ರಸ್ತುತ 3ಬಿಯಲ್ಲಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಲಾಗಿದೆ.
ಒಕ್ಕಲಿಗ ಉಪಪಂಗಡಗಳನ್ನು ಒಳಗೊಂಡು ರಾಜ್ಯದ ಇತರ ಹಿಂದುಳಿದ ವರ್ಗಗಳ ‘ಪ್ರವರ್ಗ–3ಎ’ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಮುಂಬರುವ ಜನವರಿ 23ರ ಒಳಗೆ ಶೇ 4 ರಿಂದ ಶೇ 12ಕ್ಕೆ ಹೆಚ್ಚಿಸ ಬೇಕು ಎಂದು ಒಕ್ಕಲಿಗ ಸಮುದಾಯ ಆಗ್ರಹಿಸುತ್ತಿದೆ. ಬೃಹತ್ ಹೋರಾಟದ ಎಚ್ಚರಿಕೆಯನ್ನೂ ನೀಡಿದೆ.
ಪರಿಶಿಷ್ಟ ಜಾತಿ ಪಟ್ಟಿಯೊಳಗೆ ಮಡಿವಾಳ ಸಮುದಾಯವನ್ನು ಸೇರಿಸಬೇಕು ಎಂಬ ಕೂಗು ಎದ್ದಿದೆ. ಸವಿತಾ ಸಮಾಜವೂ ಮೀಸಲಾತಿ ಹೋರಾಟದ ಎಚ್ಚರಿಕೆ ನೀಡಿದೆ. ತಮ್ಮ ಸಮುದಾಯಕ್ಕೆ ಪ್ರವರ್ಗ 1 ಮೀಸಲಾತಿ ನೀಡದಿದ್ದಲ್ಲಿ ರಾಜ್ಯಾದ್ಯಂತ ಕ್ಷೌರದಂಗಡಿ ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸವಿತಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ತಮ್ಮನ್ನು ಸೇರಿಸಬೇಕು ಎಂದು ಹಲವು ಸಮುದಾಯಗಳು ಆಗ್ರಹಿಸುತ್ತಿವೆ. ಪ್ರವರ್ಗ 2ಎನಲ್ಲಿ ಇರುವ ಕುರುಬ, ಉಪ್ಪಾರ, ಈಡಿಗ ಸಮುದಾಯಗಳು ತಮ್ಮನ್ನು ಎಸ್.ಟಿ. ಸೇರಿಸಬೇಕೆಂದು ಆಗ್ರಹಿಸುತ್ತಿವೆ. ಈ ಸಂಬಂಧ ಹೀಗಾಗಲೇ ಬೃಹತ್ ಹೋರಾಟಗಳೂ ನಡೆದಿವೆ.


