Homeಅಂಕಣಗಳುಜನಸಾಮಾನ್ಯರ ಬರ್ಬರ ದಮನಕ್ಕೆ ನಿಂತ ಇರಾನ್ ಪ್ರಭುತ್ವ

ಜನಸಾಮಾನ್ಯರ ಬರ್ಬರ ದಮನಕ್ಕೆ ನಿಂತ ಇರಾನ್ ಪ್ರಭುತ್ವ

- Advertisement -
- Advertisement -

ಒಂದು ಧಾರ್ಮಿಕ ಪ್ರಭುತ್ವ ಅಧಿಕಾರ ನಡೆಸಿದರೆ ಏನೆಲ್ಲ ಅನಾಹುತಗಳಾಗಬಹುದು ಎನ್ನುವುದಕ್ಕೆ ಇರಾನ್ ದೇಶ ಜ್ವಲಂತ ಉದಾಹರಣೆಯಾಗಿ ನಮ್ಮ ಕಣ್ಮುಂದೆ ಇದೆ. ಸೆಪ್ಟಂಬರ್ 13ರಂದು ಇರಾನ್ ದೇಶದ ವಸ್ತ್ರಸಂಹಿತೆಯನ್ನು ಧಿಕ್ಕರಿಸಿ, ತಲೆಯ ಮೇಲೆ ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಕಾಣಿಸಿಕೊಂಡರು ಎಂಬ ಕಾರಣಕ್ಕೆ 22 ವರ್ಷದ ಮಾಶ ಅಮಿನಿ ಎಂಬ ಯುವತಿಯನ್ನು ಇರಾನ್‌ನ ಇಸ್ಲಾಮಿಕ್ ರಿಪಬ್ಲಿಕ್ ಸರ್ಕಾರದ ’ಮೊರಾಲಿಟಿ ಪೊಲೀಸರು’ (ಗಸ್ತ್-ಇ-ಇರ್ಶಾದ್ ಎಂಬ ನೈತಿಕ ಪೊಲೀಸ್ ಪಡೆ) ಬಂಧಿಸಿದ್ದರು. ಮಾಶ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಮೇಲೆ ಇರಾನ್ ದೇಶದಾದ್ಯಂತ ಸಾವಿರಾರು ಪ್ರತಿಭಟನೆಗಳು ಸ್ಫೋಟಗೊಂಡಿದ್ದವು. ಸಾರ್ವಜನಿಕವಾಗಿ ತಲೆಗೂದಲನ್ನು ಪ್ರದರ್ಶಿಸುವ, ಕತ್ತರಿಸಿಕೊಳ್ಳುವ ಸಾಂಕೇತಿಕ ಪ್ರತಿಭಟನೆಗಳ ಮೂಲಕ ಮಹಿಳೆಯರು ಹಲವು ವರ್ಷಗಳ ಧಾರ್ಮಿಕ ದಮನಕ್ಕೆ ತಮ್ಮ ಪ್ರತಿರೋಧವನ್ನು ಒಡ್ಡಿದ್ದರು. ಆದರೆ ಇರಾನ್‌ನ ಧಾರ್ಮಿಕ ಪ್ರಭುತ್ವ ತನ್ನ ಜನರ ವಿರುದ್ಧವೇ ಹಿಂಸಾತ್ಮಕವಾಗಿ ತಿರುಗಿಬಿದ್ದಿತು. ಸಾವಿರಾರು ಜನರನ್ನು ಬಂಧಿಸಿ ಕಿರುಕುಳ ಕೊಟ್ಟಿತು. ಖಾಸಗಿ ವಕೀಲರನ್ನು ನೇಮಿಸಿಕೊಂಡು ಡಿಫೆಂಡ್ ಮಾಡಿಕೊಳ್ಳುವ ಅವಕಾಶವನ್ನೂ ಕೊಡದೆ, ನಾಮಕಾವಸ್ಥೆಯ ತ್ವರಿತ ವಿಚಾರಣೆ ನಡೆಸಿ ಗರಿಷ್ಠ ಶಿಕ್ಷೆಯನ್ನು ನೀಡಲಾರಂಭಿಸಿತು. ಪ್ರಭುತ್ವದ ಪಾಪದ ತುತ್ತತುದಿಯೇನೋ ಎಂಬಂತೆ ಈಗ ಇಬ್ಬರು ಯುವಕರನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ ಅದರ ಫೋಟೋಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಡಿಸೆಂಬರ್ 12 ರಂದು, ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಕೊಲೆ ಮಾಡಿದ ಆರೋಪ ಹೊರಿಸಿ 23 ವರ್ಷದ ಮಜಿದೇರ್ಜ ರಹ್ನವಾರ್ಡ್ ಎಂಬುವವರನ್ನು ಕ್ರೇನಿಗೆ ನೇಣುಬಿಗಿದು ಸಾರ್ವಜನಿಕವಾಗಿ ಮರಣದಂಡನೆಗೆ ಒಳಪಡಿಸಿದೆ. ಈ ಮರಣದಂಡನೆಗೆ ಜಗತ್ತಿನಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನಿನ ಶೋಚನೀಯ ಪರಿಸ್ಥಿತಿಯನ್ನು ಕಂಡು ಮರುಗಿದ್ದಾರೆ.

ಯಾವುದೇ ಶಿಕ್ಷೆ ಅಪರಾಧಿಯ ಪರಿವರ್ತನೆಗೆ ಕಾರಣವಾಗಿ ಅದು ಮುಂದೆ ಉತ್ತಮ ಸಮಾಜಕ್ಕೆ ದಾರಿಯಾಗಬೇಕೆಂಬ ತಿಳಿವಳಿಕೆಯಲ್ಲಿ ಜಗತ್ತಿನಾದ್ಯಂತ ಮರಣದಂಡನೆಯನ್ನು ಶಿಕ್ಷೆಯ ಪಟ್ಟಿಯಿಂದ ತೆಗೆದುಹಾಕುವ ಸುಧಾರಣೆಗಳಾಗಿವೆ ಮತ್ತು ಇನ್ನೂ ಹಲವೆಡೆ ಚರ್ಚೆಗಳಾಗುತ್ತಿವೆ. ಆದರೆ, 21ನೇ ಶತಮಾನದಲ್ಲಿ, ಜನರನ್ನು ಬೆದರಿಸಲೋ ಎಂಬಂತೆ ಈ ಬರ್ಬರ ಶಿಕ್ಷೆಯನ್ನು ಸಾರ್ವಜನಿಕ ಪ್ರದರ್ಶನವಾಗಿ ನೆರವೇರಿಸಿರುವುದು ಮಾನವೀಯತೆ ತಲೆತಗ್ಗಿಸಬೇಕಾದ ಸಂಗತಿ. 1976ರ ನಂತರ ಸುಮಾರು 75 ದೇಶಗಳು ಮರಣ ದಂಡನೆಯನ್ನು ರದ್ದುಪಡಿಸುವ ನಿರ್ಧಾರವನ್ನು ಕೈಗೊಂಡಿವೆ. ಅದರಲ್ಲಿ ಕೆಲವು ದೇಶಗಳು ಎಲ್ಲಾ ಅಪರಾಧಗಳಿಗೂ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿದ್ದರೆ, ಕೆಲವು ದೇಶಗಳು ಸಾಮಾನ್ಯ ಅಪರಾಧಗಳಿಗೆ ಮಾತ್ರ ರದ್ದುಗೊಳಿಸಿವೆ. ಆದರೆ ಭಾರತದಲ್ಲಿ ಕೂಡ ಇನ್ನೂ ಮರಣದಂಡನೆ ಅಬಾಲಿಷ್ ಮಾಡಿಲ್ಲ. ಇರಾನ್ ಮತ್ತು ಚೀನಾ ದೇಶಗಳು ಮರಣದಂಡನೆಯನ್ನು ವಿಧಿಸುವುದರಲ್ಲಿ ಬರ್ಬರತೆಯ ಪೈಪೋಟಿ ಮೆರೆಯುತ್ತವೆ ಎನ್ನುತ್ತವೆ ಹಲವು ಅಧ್ಯಯನಗಳು. ಆದರೆ ಮರಣದಂಡನೆ ನಾಗರಿಕ ಸಮಾಜದಲ್ಲಿ ಇರುವುದಕ್ಕೆ ಅರ್ಹವಲ್ಲ ಎಂಬ ಚಿಂತನೆ ಹಲವು ಶತಮಾನಗಳಷ್ಟು ಹಿಂದಿನದು.

ಮಾಶ ಅಮಿನಿ

ಕೆಲವು ವಾರಗಳಿಂದ ನ್ಯಾಯಪಥ ಪತ್ರಿಕೆಯಲ್ಲಿ ರಷ್ಯಾದ ಮಹಾನ್ ಸಾಹಿತಿ ಫ್ಯೋದೋರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಕಾದಂಬರಿಯ ಅನುವಾದವನ್ನು ಸರಣಿ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ’ದ ಈಡಿಯಟ್’ ಮೊದಲು ಪ್ರಕಟಗೊಂಡಿದ್ದು 1869ರಲ್ಲಿ. ಅದೇ ಕಾದಂಬರಿಯಲ್ಲಿ ಪ್ರಿನ್ಸ್ ಮೂಯಿಶ್ಕಿನ್ ಮರಣದಂಡನೆ ಬಗ್ಗೆ ಹೇಳುವ ಮಾತುಗಳು ಕಳೆದ ವಾರದ ಸಂಚಿಕೆಯಲ್ಲಿಯೇ ಪ್ರಕಟವಾಗಿತ್ತು. ಇಲ್ಲಿ ಆ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವುದಾದರೆ, “ನನ್ನ ನಂಬಿಕೆಯ ಪ್ರಕಾರ ಕೊಲೆ ಮಾಡಿದವನಿಗೆ ಮರಣದಂಡನೆಯನ್ನ ವಿಧಿಸುವುದು ಅವನ ಅಪರಾಧಕ್ಕೆ ಸರಿಸಮಾನವಲ್ಲದಷ್ಟು ಘೋರವಾದ ಮತ್ತು ಅಳತೆ ಮೀರಿದ ಶಿಕ್ಷೆ. ನ್ಯಾಯಾಲಯದ ತೀರ್ಪಿನ ಕಾರಣದಿಂದ ಕೊಲ್ಲುವುದು ಒಬ್ಬ ಅಪರಾಧಿಯು ಇನ್ನೊಬ್ಬನನ್ನು ಕೊಂದಿದ್ದಕ್ಕಿಂತ ಹೆಚ್ಚು ಘೋರವಾದದ್ದು. ಒಬ್ಬ ಮನುಷ್ಯನನ್ನು ಗಾಢಾಂಧಕಾರದ ಕಾಡಿನಲ್ಲಿ ಅಥವ ಇನ್ನೆಲ್ಲಿಯಾದರೂ, ರಾತ್ರಿಯ ವೇಳೆ ದರೊಡೆಕೋರರು ದಾಳಿಮಾಡಿದಾಗ ಆತ ಅನುಮಾನವಿಲ್ಲದೇ ಭರವಸೆಯಿಂದಿರುತ್ತಾನೆ ಮತ್ತು ಸಾಯುವವರೆಗೂ ಬಚಾವಾಗಬಹುದು ಅನ್ನುವ ಭರವಸೆಯಿಂದ ಇರುತ್ತಾನೆ. ಅವನ ಕತ್ತನ್ನು ಕುಯ್ದ ನಂತರವೂ ಕೂಡ, ಒಬ್ಬ ಮನುಷ್ಯ ತಪ್ಪಿಸಿಕೊಂಡು ಓಡಿ ಹೋಗಿರುವ, ಅಥವಾ ಈ ಎಲ್ಲಾ ಸಂದರ್ಭಗಳಲ್ಲಿಯೂ ಒಂದು ಮಟ್ಟದ ಭರವಸೆಯೊಂದಿಗೆ ಕ್ಷಮಾದಾನಕ್ಕಾಗಿ ಅರಸಿರುವ ಅನೇಕ ಉದಾಹರಣೆಗಳಿವೆ.

ಇದನ್ನೂ ಓದಿ: ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

ಆದರೆ ಮರಣದಂಡನೆಯ ಸಮಯದಲ್ಲಿ ಆ ಕೊನೆಯ ಭರವಸೆಯನ್ನು- ಯಾವುದು ಸಾಯುವ ಬಗೆಗಿನ ಘೋರತೆಯನ್ನ ಅಳತೆಗೆ ಸಿಗದಷ್ಟು ಕಮ್ಮಿಮಾಡುತ್ತಾ ಹೋಗುತ್ತದೊ, ಅದನ್ನ ಆಳದಿಂದ ಕಿತ್ತುಕೊಳ್ಳಲಾಗುತ್ತದೆ ಮತ್ತು ಅದನ್ನು ಖಚಿತತೆ ಬದಲಿಸಿಬಿಡುತ್ತದೆ. ಅವನಿಗಾಗಲೇ ಶಿಕ್ಷೆ ವಿಧಿಸಲಾಗಿದೆ, ಮತ್ತು ಅದರ ಜೊತೆಗೆ ಸಾವಿನಿಂದ ಬಚಾವಾಗಲು ಸಾಧ್ಯವೇ ಇಲ್ಲ ಅನ್ನುವ ಭಯಾನಕವಾದ ಖಚಿತತೆ, ನಾನು ಅದನ್ನ ಪ್ರಪಂಚದಲ್ಲೇ ಅತ್ಯಂತ ಭೀಕರವಾದ ವೇದನೆ ಎಂದು ಪರಿಗಣಿಸುತ್ತೇನೆ. ಯುದ್ಧದಲ್ಲಿ ನೀನು ಒಬ್ಬ ಸೈನಿಕನನ್ನು ಒಂದು ಫಿರಂಗಿಯ ಬಾಯಿಗೆ ಕಟ್ಟಿ ಅವನ ಮೇಲೆ ಗುಂಡು ಹಾರಿಸಬಹುದು- ಆ ಸಂದರ್ಭದಲ್ಲೂ ಅವನಿಗೊಂದು ಭರವಸೆ ಇರುತ್ತದೆ. ಆದರೆ ಅದೇ ಸೈನಿಕನ ಮುಂದೆ ಅವನ ಮರಣದಂಡನೆಯ ತೀರ್ಪನ್ನು ಓದಿದಾಗ, ಅವನು ಹುಚ್ಚನಂತಾಗುತ್ತಾನೆ ಅಥವ ಕಣ್ಣೀರಿಟ್ಟು ಗೋಳಾಡಲು ಶುರುಮಾಡುತ್ತಾನೆ. ಯಾವ ಮನುಷ್ಯನೇ ಆದರೂ ಹುಚ್ಚನಾಗದೇ ಈ ಹಿಂಸೆಯನ್ನ ಅನುಭವಿಸುತ್ತಾನೆ ಎಂದು ಹೇಳುವಷ್ಟು ಧೈರ್ಯ ಯಾರಿಗಿದೆ? ಇಲ್ಲ ಇಲ್ಲ, ಇದೊಂದು ದುರುಪಯೋಗ, ನಾಚಿಕೆಗೇಡಿನದು, ಇದು ಅನಗತ್ಯವಾದದ್ದು. ಇಂತಹದ್ದು ಅಸ್ತಿತ್ವದಲ್ಲಿ ಯಾತಕ್ಕೋಸ್ಕರ ಇರಬೇಕು? ಯಾರಿಗೆ ಮರಣ ದಂಡನೆಯನ್ನ ವಿಧಿಸಲಾಗಿತ್ತೋ, ಯಾರು ಈ ರೀತಿಯ ಮಾನಸಿಕ ವೇದನೆಯನ್ನ ಸ್ವಲ್ಪ ಕಾಲವಾದರೂ ಅನುಭವಿಸಿದ್ದರೋ, ಅಂತಹವರಲ್ಲಿ ಕೆಲವರು ಕ್ಷಮಾದಾನದಿಂದ ಉಳಿದಿರುವ ಬಗ್ಗೆ ಅನುಮಾನಗಳಿಲ್ಲ; ಆದರೆ, ಬಹುಶಃ ಅಂತಹವರು ತಾವು ಮಾನಸಿಕವಾಗಿ ಅನುಭವಿಸಿದ ಭಾವನೆಗಳ ಬಗ್ಗೆ ನಂತರದ ದಿನಗಳಲ್ಲಿ ಯೋಚಿಸಿರಲಿಕ್ಕೂ ಸಾಧ್ಯವಿದೆ. ನಮ್ಮ ಲಾರ್ಡ್ ಕ್ರಿಸ್ತ ಆ ರೀತಿಯ ವೇದನೆ ಮತ್ತು ಭಯದ ಬಗ್ಗೆ ಹೇಳಿದ್ದರು. ಇಲ್ಲ ಇಲ್ಲ! ಕೂಡದು! ಯಾವುದೇ ಮನುಷ್ಯನನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವಹಾಗಿಲ್ಲ, ನಡೆಸಿಕೊಳ್ಳಬಾರದು!”; ಕ್ಯಾಪಿಟಲ್ ಫನಿಷ್‌ಮೆಂಟ್ ಬಗೆಗೆ ಇಂತಹದೇ ಚಿಂತನೆಗಳನ್ನು ಚಿಂತಕ-ಲೇಖಕ ಆಲ್ಬೆ ಕಮು ಕೂಡ ವ್ಯಕ್ತಪಡಿಸುತ್ತಾರೆ. ಕ್ರಿಸ್ಟೋಫ್ ಕೀಶ್ಲೊವಸ್ಕಿ ಅವರ ’ದ ಶಾರ್ಟ್’ ಫಿಲ್ಮ್ ಅಬೌಟ್ ಕಿಲ್ಲಿಂಗ್ ಸಿನಿಮಾ ಕೂಡ ಮರಣದಂಡನೆಯ ವಿರುದ್ಧ ಒಂದು ದಿಟ್ಟ ಹೇಳಿಕೆಯನ್ನು ನೀಡಿತ್ತು. ಯುರೋಪಿನ ಕೆಲವು ದೇಶಗಳಲ್ಲಿ ಮರಣದಂಡನೆಯನ್ನು ರದ್ದುಗೊಳಿಸಲು ಈ ಸಿನಿಮಾ ಪ್ರಭಾವ ಬೀರಿತ್ತು ಎಂದು ಕೂಡ ಚರ್ಚಿಸಲಾಗುತ್ತದೆ. ಈ ಚರ್ಚೆಗೆ ಇನ್ನೂ ಹಲವು ಉದಾಹರಣೆಗಳಿವೆ. ಜಗತ್ತು ಇಂದು ಹೆಚ್ಚು ಮಾನವೀಯತೆಯ ಕಡೆಗೆ ತುಡಿಯಬೇಕಿರುವ ಸಂದರ್ಭದಲ್ಲಿ, ಕೆಲವೇ ದಿನಗಳ ಅಂತರದಲ್ಲಿ ಮೋಶೆನ್ ಶೇಖರಿ ಮತ್ತು ಮಜಿದೇರ್ಜ ರಹ್ನವಾರ್ಡ್ ಅವರುಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಮೂಲಕ ಇರಾನ್ ಪ್ರಭುತ್ವ ತನ್ನ ಪ್ರಜೆಗಳ ಜೊತೆಗೆ ಅನಾಗರಿಕವಾಗಿ ನಡೆದುಕೊಂಡಿದೆ.

ಜಫರ್ ಫನಾಹಿ

ಇದು ಮರಣದಂಡನೆಯ ಮಾತಾದರೆ, ಅಸಮಾನತೆಯನ್ನು ಸೃಷ್ಟಿಸುತ್ತಿರುವ ಕೆಲವು ಧಾರ್ಮಿಕ ಸಂಗತಿಗಳನ್ನು ಯಾವುದೇ ಮಟ್ಟಕ್ಕಿಳಿದು ಪೋಷಿಸಿಕೊಳ್ಳಲು ಇರಾನ್ ಧಾರ್ಮಿಕ ಪ್ರಭುತ್ವ ದಮನಕಾರಿಯಾಗುತ್ತಿರುವುದು ಮಾನವ ಇತಿಹಾಸದ ದುರಂತದ ಸಂಗತಿಗಳಲ್ಲಿ ಒಂದು. ವಸ್ತ್ರಸಂಹಿತೆಯ ವಿರುದ್ಧ ಪ್ರಾರಂಭವಾದ ಪ್ರತಿಭಟನೆಗಳಲ್ಲಿ, ಪೊಲೀಸರ ದಮನದಿಂದ ನೂರಾರು ಜನ ಮೃತಪಟ್ಟಿದ್ದರೆ, ಸಾವಿರಾರು ಜನ ಗಾಯಗೊಂಡಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದನ್ನೇ ನೆಪಮಾಡಿಕೊಂಡಿರುವ ಸರ್ವೋಚ್ಛ ನಾಯಕ ಅಯಾತೊಲ್ಲಾ ಖಮೇನಿ ಮತ್ತು ಅಧ್ಯಕ್ಷ ಇಬ್ರಾಹಿಮ ರೈಸಿ ಅವರ ನೇತೃತ್ವದ ಸರ್ಕಾರದ ಏಜೆನ್ಸಿಗಳು ಸಾವಿರಾರು ಪ್ರತಿಭಟನಾಕಾರರನ್ನು ಬಂಧಿಸಿ ಕಿರುಕುಳ ನೀಡುತ್ತಿವೆ. ಈ ದಮನ ನೀತಿಯನ್ನು ಸಮರ್ಥಿಸಿಕೊಳ್ಳಲು, ಈ ಪ್ರತಿಭಟನೆಗಳನ್ನು ತಮ್ಮ ವಿರೋಧಿ ರಾಷ್ಟ್ರ ಅಮೆರಿಕ ಸೃಷ್ಟಿಸುತ್ತಿದೆ ಎಂಬ ನರೆಟಿವ್‌ಗಳನ್ನು ಇರಾನ್ ಪ್ರಭುತ್ವ ಕಟ್ಟುತ್ತಿದೆ. ಅಮೆರಿಕ ಇರಾನ್ ದೇಶದ ವಿರುದ್ಧ ಐತಿಹಾಸಿಕವಾಗಿ ಸಮಸ್ಯಾತ್ಮಕ ಸಂಬಂಧ ಹೊಂದಿದೆ ಹಾಗೂ ಇರಾನ್‌ನ ವಿರುದ್ಧ ತನ್ನ ಕುಟಿಲ ನೀತಿಯನ್ನು ಆಗಾಗ ಬಳಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಧಾರ್ಮಿಕ ಪ್ರಭತ್ವದ ಹಲವು ವರ್ಷಗಳ ದಮನಕಾರಿ ನೀತಿಗಳ ವಿರುದ್ಧ ಸಿಡಿದೆದ್ದ ಸಾಮಾನ್ಯ ನಾಗರಿಕರ ಪ್ರತಿಭಟನೆಗಳನ್ನು ಬೇರೆ ದೇಶವೊಂದರ ಸಂಚು ಎಂಬಂತೆ ನಿರೂಪಿಸಿ, ನಾಗರಿಕರ ಮೇಲಿನ ತನ್ನ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದು ನೀಚತನದ ಪರಮಾವಧಿಯೇ ಸರಿ.

ಪ್ರಭುತ್ವದ ವಿರುದ್ಧ ಮಾತನಾಡುವುದರ ವಿರುದ್ಧ ಸೆನ್ಸಾರ್ ವಿಧಿಸುವುದು, ಕಲಾವಿದ ಚಿಂತಕರನ್ನು ಬಂಧಿಸುವಂತಹ ಕುಖ್ಯಾತ ಕೆಲಸಗಳಿಗೆ ಇರಾನ್ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇರಾನ್ ಸಿನಿಮಾಗಳನ್ನು ಅನುಸರಿಸುವವರಿಗೆ ನಿರ್ದೇಶಕ ಜಫರ್ ಫನಾಹಿ ಚಿರಪರಿಚಿತ ಹೆಸರು. ಇರಾನ್‌ನ ಸೆನ್ಸಾರ್‌ಗಳನ್ನು ಅಣಕಿಸಿ ಸಿನಿಮಾಗಳನ್ನು ಮಾಡಿದವರು ಅವರು. ಇದನ್ನು ಸಹಿಸಿಕೊಳ್ಳದ ಪ್ರಭುತ್ವ ಅವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿತು. ಇತ್ತೀಚಿಗೆ ಅವರನ್ನು 6 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಿದ್ದು ಆಕ್ರೋಶಕ್ಕೆ ಗುರಿಯಾಗಿತ್ತು. ಇನ್ನೂ ಸ್ವಲ್ಪ ಹಿಂದೆ ಹೋದರೆ, ಸಲ್ಮಾನ್ ರಶ್ದಿ 1988ರಲ್ಲಿ ’ದ ಸಟಾನಿಕ್ ವರ್ಸಸ್’ ಕಾದಂಬರಿ ಬರೆದಾಗ ಅದು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂಬ ಪ್ರತಿಪಾದಿಸಿ, ಅಂದಿನ ಇರಾನಿನ ಪರಮೋಚ್ಚ ನಾಯಕ ಅಯಾತೊಲ್ಲ ಖೊಮೇನಿ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದ. ಈ ಫತ್ವಾ ಎಂತಹ ಗಂಭೀರ ತಿರುವು ಪಡೆದಿತ್ತೆಂದರೆ ರಶ್ದಿ ತಲೆಮರೆಸಿಕೊಂಡು ಬದುಕಬೇಕಾಯಿತು. ’ದ ಸೇಲ್ಸ್‌ಮ್ಯಾನ್’ ಸಿನಿಮಾ ಖ್ಯಾತಿಯ ತರಾನೆ ಆಲಿದೂಸ್ತಿ ಅವರು ಹಿಜಾಬ್ ವಿರುದ್ಧದ ಹೋರಾಟಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಅವರನ್ನು ಈಗ ಪೊಲೀಸರು ಬಂಧಿಸಿರುವ ಬಗ್ಗೆ ವರದಿಗಳು ಮೂಡಿವೆ. ಹೀಗೆ ಸಾಮಾನ್ಯ ಜನರಿಂದ ಹಿಡಿದು ಚಿಂತಕ ಕಲಾವಿದರನ್ನು ಬಿಡದಂತೆ ಹಿಂಸಿಸುತ್ತಿರುವ ಇರಾನಿನ ದಮನಕಾರಿ ಪ್ರಭುತ್ವದ ವಿರುದ್ಧ ಅಲ್ಲಿನ ಜನರು ಹೋರಾಡಿ ಗೆಲುವು ಸಾಧಿಸುತ್ತಾರೆ ಎಂಬ ಆಶಯವನ್ನು ಇರಿಸಿಕೊಳ್ಳುವುದು ಒಳ್ಳೆಯದೇ ಆದರೂ, 21ನೇ ಶತಮಾನದಲ್ಲಿ ಯಾವ ಅಂಕೆಯೂ ಇಲ್ಲದೆ ನಿರಂಕುಶವಾಗಿ ಬೆಳೆಯುತ್ತಿರುವ ಪ್ರಭುತ್ವಗಳು ಅದಕ್ಕೆ ಅವಕಾಶ ನೀಡುತ್ತವೆಯೇ ಎಂಬ ಆತಂಕವೂ ಮೂಡುತ್ತದೆ. ಇದರ ಜೊತೆಗೆ ಧಾರ್ಮಿಕ ತೀವ್ರವಾದ ಕೂಡ ಬೆರೆತಿರುವ ಇರಾನಿನ ಇಸ್ಲಾಮಿಕ್ ರಿಪಬ್ಲಿಕ್‌ನಲ್ಲಿ ದಮನಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ಯಾವುದೇ ನಿರಂಕುಶ ಪ್ರಭುತ್ವದ ಜೊತೆ ಧಾರ್ಮಿಕ ಮೂಲಭೂತವಾದ ಸೇರಿಕೊಂಡರೆ ಆಗುವ ಈ ಅನಾಹುತಗಳು ಭಾರತಕ್ಕೂ ಎಚ್ಚರ ನೀಡುವಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...