Homeಅಂಕಣಗಳುಗಾಂಧಿ, ಅಂಬೇಡ್ಕರ್, ಭಗತ್, ಮಾರ್ಕ್ಸ್ ಪ್ರಶ್ನೆ??

ಗಾಂಧಿ, ಅಂಬೇಡ್ಕರ್, ಭಗತ್, ಮಾರ್ಕ್ಸ್ ಪ್ರಶ್ನೆ??

- Advertisement -
- Advertisement -

-ಪ್ರೊ. ಅವಿಜಿತ್ ಪಾಠಕ್, ಸಮಾಜ ಶಾಸ್ತ್ರ ಪ್ರಾಧ್ಯಾಪಕರು, ಜೆಎನ್‌ಯು

ಸಂಗ್ರಹಿತ ಭಾವಾನುವಾದ: ನಿಖಿಲ್ ಕೋಲ್ಪೆ

ಕೃಪೆ: ದಿವೈರ್‌

ನೀವು ಬಿ.ಆರ್. ಅಂಬೇಡ್ಕರ್ ಅಥವಾ ಕಾರ್ಲ್ ಮಾರ್ಕ್ಸ್ ಅಂತವರನ್ನು ಮೆಚ್ಚುವವರಾಗಿರಬಹುದು; ಆದರೂ ಗಾಂಧಿಯವರ ಜೊತೆಗೆ ಸುಲಭದಲ್ಲಿ ಹೆಜ್ಜೆ ಹಾಕಬಹುದು. ಉದಾಹರಣೆಗೆ ಅಂಬೇಡ್ಕರ್ ಅವರಿಗೆ ವ್ಯತಿರಿಕ್ತವಾಗಿ ಗಾಂಧಿಯವರ ಜಾತಿಯ ಪ್ರಶ್ನೆಗೆ ಸಂಬಂಧಿಸಿದ ನಿಲುವು ‘ಕ್ರಾಂತಿಕಾರಿ’ ಅನಿಸುವ ಬದಲು ಮೃದು ಅಥವಾ ‘ಸುಧಾರಣಾವಾದಿ’ಯಾಗಿ ಕಾಣಬಹುದು. ಇದೇ ಹೊತ್ತಿಗೆ ಅಂಬೇಡ್ಕರ್ ಅವರು ತಮ್ಮ ‘ಜಾತಿ ನಿರ್ಮೂಲನೆ ಮತ್ತು ಹಿಂದೂತ್ವದ ತತ್ವಶಾಸ್ತ್ರ’ (Annihilation of Caste and the Philosophy of Hinduism) ಕೃತಿಯಲ್ಲಿ ಹಿಂದೂತ್ವ, ಬ್ರಾಹ್ಮಣೀಕೃತ ಧರ್ಮಗ್ರಂಥಗಳು, ಆ ಧರ್ಮದಲ್ಲಿ ಅಂತರ್ಗತವಾಗಿರುವ ಶ್ರೇಣೀಕೃತ  ಮತ್ತು ಹೊರಗಿಡುವ ವ್ಯವಸ್ಥೆ (ಅಥವಾ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆ ನಿರಾಕರಣೆ) ಬಗ್ಗೆ ತೀಕ್ಷ್ಣವಾದ ಟೀಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಗಾಂಧಿಯವರ ದಾರಿ ಬೇರೆಯಾಗಿದ್ದರೂ, ಅತ್ಯಂತ ಸುಧಾರಣಾವಾದಿಯಾಗಿತ್ತು. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದಾಗ, ‘ಬಹಿಷ್ಕೃತ’ನಾಗುವುದೆಂದರೇನು ಎಂದು ಕಂಡುಕೊಂಡಂದಿನಿಂದ, ದಕ್ಷಿಣ ಆಫ್ರಿಕಾದಲ್ಲಿ ‘ಒಂದು ಪುಸ್ತಕದ ಮಾಂತ್ರಿಕ ಪ್ರಭಾವ’ದ ಅಸಾಧಾರಣ ಕ್ಷಣವು ಅವರನ್ನು ಜಾನ್ ರಸ್ಕಿನ್ ಅವರ ವೃತ್ತಿ ಗೌರವದ ಸಿದ್ಧಾಂತಕ್ಕೆ ಹತ್ತಿರವಾದದ್ದು, 1920ರ ಆರಂಭ ಕಾಲದಲ್ಲಿ ಅಸ್ಪೃಶ್ಯತೆಯು ಹಿಂದೂ ಧರ್ಮದ ಗಂಭೀರವಾದ ನೈತಿಕ-ಆಧ್ಯಾತ್ಮಿಕ ಸಮಸ್ಯೆ ಮತ್ತು ಅದನ್ನು ತೊಡೆದುಹಾಕಲೇಬೇಕು ಎಂಬ ಪ್ರಾಮಾಣಿಕ ಅರಿವು ಉಂಟಾದದ್ದು, ಶುದ್ಧ-ಅಶುದ್ಧ, ಬುದ್ಧಿ-ಶ್ರಮ ನಡುವೆ ತಾರತಮ್ಯ ಮಾಡುವ ಸಿದ್ಧಾಂತವನ್ನು ವಿರೋಧಿಸುವ ‘ನಯೀ ತಾಲೀಮ್’ (ಹೊಸ ತರಬೇತಿ, ಶಿಕ್ಷಣ) ಪರವಾಗಿ ಅವರ ಪ್ರತಿಪಾದನೆ ಮತ್ತು ತಮ್ಮ ಆಶ್ರಮಗಳಲ್ಲಿ ಸಮುದಾಯ ಬದುಕು, ಸಹಭೋಜನಕ್ಕೆ, ಎಲ್ಲರೂ ಬೇಧವಿಲ್ಲದೆ ಶೌಚಾಲಯ ಶುಚಿಗೊಳಿಸುವ- ಮುಂತಾಗಿ, ಒತ್ತುನೀಡುವ ಅವರ ಪ್ರಯೋಗಗಳು ಅಥವಾ ಅಂತರ್ಜಾತೀಯ ವಿವಾಹದ ಪರವಾಗಿ ಅವರ ಬಲವಾದ ಪ್ರತಿಪಾದನೆ- ಹೀಗೆ ಅವರ ಹಾದಿ ಹಂತಹಂತವಾಗಿ ವಿಕಸನಗೊಂಡದ್ದು.

ಬಹುಶಃ ಯುವಜನರು ‘ಸಂವಾದ ವಿಮುಖ ಅಸ್ಮಿತೆಯ ರಾಜಕೀಯ’ದ ಉತ್ಪನ್ನವಾದ ‘ಅಂಬೇಡ್ಕರ್ ವಿರುದ್ಧ ಗಾಂಧಿ’ ಎಂಬ ದ್ವಂದ್ವದಿಂದಾಚೆಗೆ ಮುಕ್ತ ಮನಸ್ಸಿನಿಂದ ನೋಡಬೇಕಾದ ಅಗತ್ಯವಿದೆ ಮತ್ತು ಜಾತಿ ಸಮಸ್ಯೆಗೆ ವೈವಿದ್ಯಮಯ ಮತ್ತು ಬಹುಮುಖಿಯಾದ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ಅದೇ ರೀತಿಯಲ್ಲಿ ಭಗತ್ ಸಿಂಗ್ ಅವರಿಗೆ, ತನ್ನ ಉತ್ಸಾಹಿ ಕ್ರಾಂತಿಕಾರಿ ಮನೋಭಾವದ ಹೊರತಾಗಿಯೂ, ದಂಗುಬಡಿಸುವಷ್ಟು ವೈವಿಧ್ಯಮಯವಾದ ದೇಶವೊಂದರಲ್ಲಿ ಮಹಿಳೆಯರ ಮತ್ತು ಪುರುಷರ, ರೈತರ, ಕಾರ್ಮಿಕರ ಮತ್ತು ಬೂರ್ಜ್ವಾಗಳ, ಹಿಂದೂಗಳ ಮತ್ತು ಮುಸ್ಲಿಮರ ಸಾಮೂಹಿಕ ಭಾಗವಹಿಸುವಿಕೆ ಹಾಗೂ ಬಹುತೇಕ ಶಾಂತಿಯುತವಾದ ಪ್ರತಿರೋಧದ ವಿಧಾನ ಇಲ್ಲದೇ ವಸಾಹತು ವಿರೋಧಿ ಸ್ವಾತಂತ್ರ್ಯ ಚಳವಳಿಯೊಂದು ಬಹುಕಾಲ ಮುಂದುವರಿಯಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಲು ಸಮಯಾವಕಾಶ ಇರಲಿಲ್ಲ ಎಂಬುದನ್ನು ನಾವು ಮರೆಯಬಾರದು.

ಇದನ್ನೂ ಓದಿ: ಯುವಜನರು ಗಾಂಧೀಜಿಯನ್ನೇಕೆ ತಿಳಿಯಬೇಕು?

ಆದುದರಿಂದ, ಹುತಾತ್ಮ ಭಗತ್ ಸಿಂಗ್ ಅವರನ್ನು ಮೆಚ್ಚಿಕೊಳ್ಳುವುದು ಅಥವಾ ಅವರಿಗೆ ನಮಿಸುವುದರ ಅರ್ಥ- ನೀಲಿ ಬೆಳೆಯುವ ರೈತರು, ಗಿರಣಿ ಕಾರ್ಮಿಕರು, ಹರಿಜನರು ಮತ್ತು ಮಹಿಳೆಯರು, ರವೀಂದ್ರನಾಥ ಠಾಗೋರ್ ಅವರಿಂದ ಹಿಡಿದು ಜಿ.ಡಿ. ಬಿರ್ಲಾ ಅವರಂತಹ ವ್ಯಕ್ತಿಗಳು ಸೇರಿದಂತೆ ಎಲ್ಲರನ್ನೂ ಒಟ್ಟಿಗೆ ತಂದು ಮೂರು ದಶಕಗಳ ಕಾಲ ಆಲದ ಮರದಂತೆ ಬದುಕಿದ್ದ ಗಾಂಧಿಯವರ ಮೌಲ್ಯವನ್ನು ಕಡೆಗಣಿಸುವುದು ಎಂದಾಗಬೇಕಿಲ್ಲ.

ಇದೇ ರೀತಿಯಲ್ಲಿ, ಆಧುನಿಕ ಕೈಗಾರಿಕಾ ಬಂಡವಾಳವಾದದ ಕುರಿತು ಅನೇಕ ವಿಮರ್ಶೆಗಳಿವೆ. ಇವರಲ್ಲಿ ಕಾರ್ಲ್ ಮಾರ್ಕ್ಸ್ ಅವರು ತನ್ನ ದ್ವಂದ್ವಾತ್ಮಕ ಭೌತಿಕವಾದ (dialectical materialism)ದಿಂದ ಅದ್ಭುತ ಎನಿಸುತ್ತಾರೆ. ಈ ವಿಧಾನದಿಂದಲೇ ಅವರು ಇತಿಹಾಸದ ದ್ವಂದ್ವಗಳನ್ನು ಪರಿಶೀಲಿಸಿದರು; ಕಾರ್ಮಿಕರ ಸಂಕಷ್ಟದಿಂದ ಹಿಡಿದು ಸರಕುಗಳ ಮೇಲಿನ ಮೋಹದ ತನಕ ಬಂಡವಾಳವಾದದ ನೈತಿಕ ಬಿಕ್ಕಟ್ಟನ್ನು ಕಂಡುಕೊಂಡರು. ಗಾಂಧಿಯವರು ಆಧುನಿಕತೆಯ ಕ್ರೂರ ಶಕ್ತಿ, ಅತಿಯಾದ ಆಸೆ ಮತ್ತು ಲಾಲಸೆಗಳಿಂದ ಸಾಂಸ್ಕೃತಿಕ/ ಪಾರಿಸರಿಕವಾಗಿ ತೆರಬೇಕಾಗಿರುವ ಬೆಲೆಯನ್ನು ಕಂಡುಕೊಂಡರು. ‘ಯಂತ್ರಗಳು, ವೈದ್ಯರು, ವಕೀಲರು ಮತ್ತು ನ್ಯಾಯಾಲಯಗಳ’ ನಡುವೆ ಸಮುದಾಯದ ನೈತಿಕ ಬಲದ ಅವನತಿಯನ್ನು ಕಂಡರು.

ಆದುದರಿಂದ, ಆಧುನಿಕ ಬಂಡವಾಳವಾದದ ದೋಷಗಳನ್ನು ಅರ್ಥಮಾಡಿಕೊಳ್ಳುವ ಪ್ರಾಮಾಣಿಕ ಇಚ್ಛೆ ಇರುವ ಯುವಜನರು, ಗಾಂಧಿ ಮತ್ತು ಮಾರ್ಕ್ಸ್ ಇಬ್ಬರ ಜೊತೆಗೂ ಸಂವಾದ ನಡೆಸಬೇಕು ಎಂದು ನನ್ನ ಭಾವನೆ. ಯುವಜನರು ಗಾಂಧಿಯವರ ಜೊತೆ ಪ್ರಯೋಗಕ್ಕಿಳಿಯಬಹುದೆ? ನಾವಿಂದು ಗ್ರಾಹಕವಾದವೇ (consumerism) ಹೊಸ ಮಂತ್ರವಾಗಿರುವ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಸರ್ವವ್ಯಾಪಿಯಾದ ಸಂಸ್ಕೃತಿ ಉದ್ಯಮದಿಂದ ಗ್ಲಾಮರೀಕರಣಗೊಂಡ ಮಾರುಕಟ್ಟೆ ಪ್ರೇರಿತ ಹುಸಿ ಅಗತ್ಯಗಳು ನಮ್ಮ ಜೀವನವನ್ನೇ ವಸಾಹತೀಕರಣಗೊಳಿಸಿವೆ. ಸಮಾಜ ಶಾಸ್ತ್ರಜ್ಞ ಅಲ್ರಿಚ್ ಬೆಕ್ (Ulrich Beck) ವಾದಿಸುವಂತೆ ಬಳಕೆ ಕೇಂದ್ರಿತ ಅತಿ ಆಧುನಿಕತೆಯು ಹವಾಮಾನ ಬದಲಾವಣೆ, ಪರಿಸರ ದುರಂತ, ತಂತ್ರಜ್ಞಾನದ ಹಿಂಸಾಚಾರದ ಭಯ ತುಂಬಿದ ‘ಅಪಾಯಕಾರಿ ಸಮಾಜ’ವನ್ನು ಹುಟ್ಟುಹಾಕಿದೆ. ಹೊಸ ಎಡಪಂಥೀಯ ಚಿಂತಕರಾದ ಎರಿಕ್ ಫ್ರಾಮ್ (Erich Fromm) ಮತ್ತು ಹರ್ಬರ್ಟ್ ಮಾರ್ಕ್ಯೂಸ್ (Herbert Marcuse) ಅಂತವರು ಈ ‘ಉಳ್ಳವರ ಅಸ್ತಿತ್ವ’ದ ವಿಧಾನವು ಸಾಮಾಜಿಕ ನಿಯಂತ್ರಣದ ಹೊಸ ಮಾದರಿಯನ್ನು ಹುಟ್ಟುಹಾಕಿದೆ.

ಗಾಂಧಿಯವರು ಈ ಅಪಾಯದ ಸಾಧ್ಯತೆಯನ್ನು ಮುಂಗಾಣಬಲ್ಲವರಾಗಿದ್ದರು ಎಂದು ಯೋಚಿಸುವಂತೆ ನಾನು ಯುವಜನರನ್ನು ಒತ್ತಾಯಿಸುತ್ತೇನೆ. ಆದುದರಿಂದಲೇ ಅವರು ಸ್ವಯಂ ನಿಯಂತ್ರಣ, ಸ್ವಾವಲಂಬನೆ, ಸರಳತೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದಕ್ಕೆ ಅಷ್ಟೊಂದು ಮಹತ್ವ ನೀಡಲು ಸಾಧ್ಯವಾದುದರಲ್ಲಿ ಅಚ್ಚರಿಯೇನಿಲ್ಲ. ಇದಕ್ಕೆ ಹೊರತಾಗಿ ಬೇರೆ ದಾರಿ ಇರುವಂತೆ ಕಾಣುವುದಿಲ್ಲ. ಗಾಂಧಿಯವರೇನೂ ಮಧ್ಯಯುಗದವರಾಗಿರಲಿಲ್ಲ. ಬದಲಾಗಿ ಅವರಿಗೆ ನಮ್ಮಲ್ಲಿ ಬದಲಿ/ ಪರಿಸರ ಸೂಕ್ಷ್ಮತೆಯುಳ್ಳ/ ಶಾಂತಿಯುತವಾದ ಸಮುದಾಯ ಕೇಂದ್ರಿತ ಜೀವನ ವಿಧಾನವನ್ನು ಪ್ರೇರೇಪಿಸಲು ಶಕ್ತರಾಗಿದ್ದಾರೆ. ತಂತ್ರಜ್ಞಾನಾಧರಿತ ಬಂಡವಾಳವಾದವು ‘ಉತ್ತಮ ಜೀವನ’ದ ಹೆಸರಿನಲ್ಲಿ ನಮ್ಮನ್ನು ಗುಲಾಮರನ್ನಾಗಿ ಮಾಡಿರುವ ಆಮಿಷದ ರಾಜಕಾರಣದಿಂದ ದೂರವುಳಿಯಲು ಈ ತರಹದ ಮನುಷ್ಯನಿಗೆ ಮಾತ್ರ ಸಾಧ್ಯ.

ಅದೇ ರೀತಿಯಲ್ಲಿ, ಆಧ್ಯಾತ್ಮಿಕತೆ ಕಳೆದುಕೊಂಡ ಜಾತ್ಯತೀತತೆಯ ಬಗ್ಗೆಯೂ ಗಾಂಧಿಯವರಿಗೆ ತೃಪ್ತಿ ಇರಲಿಲ್ಲ. ಆದರೆ, ಅವರ ಧಾರ್ಮಿಕತೆಯು ಪುರೋಹಿತಶಾಹಿಯ ಸಂಪ್ರದಾಯವಾದವನ್ನು ಅಥವಾ ಮೂಲಭೂತವಾದದ ಹಿಂಸಾಮಾರ್ಗವನ್ನು ಪ್ರೋತ್ಸಾಹಿಸುವ ಬದಲಾಗಿ ಸಕ್ರಿಯ ರಾಜಕಾರಣಕ್ಕೆ ಹೊಸ ಅರ್ಥವನ್ನು ನೀಡಿತು. ಗಾಂಧಿಯವರು ರಾಜಕೀಯವನ್ನು ತನ್ನ ಸಾಧನಾ ಮಾರ್ಗವನ್ನಾಗಿ ಕಂಡರು. ಭಗವದ್ಗೀತೆಯ ‘ನಿಷ್ಕಾಮ ಕರ್ಮ’ ಮತ್ತು ಏಸುಕ್ರಿಸ್ತನ ‘ಬೆಟ್ಟದ ಮೇಲಿನ ಪ್ರವಚನ’ ಬೋಧಿಸಿದ ಪ್ರೇಮದ ಸಾಧ್ಯತೆಗಳ ಕುರಿತು ನಿರಂತರ ಚಿಂತಿಸುವ ಮೂಲಕ ಜಗತ್ತಿನ ದೈನಂದಿನ ಜೀವನಕ್ಕೆ ಇನ್ನಷ್ಟು ಹೆಚ್ಚಿನ ಅರ್ಥವನ್ನು ಕೊಡಲು ಬಯಸಿದರು.

ಅಂತರ್ಧಮೀಯ ಸಂವಾದಗಳು, ಪ್ರೇಮದ ಧಾರ್ಮಿಕತೆ, ದಿಗಂತಗಳ ಸಮನ್ವಯವು ಅವರಿಗೆ ಕೋಮುವಾದ ಮತ್ತು ಸಂಘಟಿತ ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷದ ಸಿದ್ಧಾಂತವನ್ನು ಎದುರಿಸುವ ನೈತಿಕ/ ರಾಜಕೀಯ/ ಮಾನಸಿಕ ಬಲವನ್ನು ಒದಗಿಸಿದುದರಲ್ಲಿ ಅಚ್ಚರಿಯಿಲ್ಲ.

ಅಂಬೇಡ್ಕರ್ ಅವರು ಕೂಡಾ ಬೌದ್ಧ ಧರ್ಮದ ಬಗ್ಗೆ ಮಾತನಾಡಿದರು. ಆದರೆ, ಅವರ ಬೌದ್ಧ ಧರ್ಮವು ದಮಮಕಾರಿ/ ಬ್ರಾಹ್ಮಣಶಾಹಿ ಹಿಂದೂತ್ವಕ್ಕೆ ಸಿಟ್ಟಿನ ಪ್ರತಿಕ್ರಿಯೆಯಾಗಿತ್ತು. ಗಾಂಧಿಯವರ ಧಾರ್ಮಿಕತೆಯು ಸಿಟ್ಟಿಗಿಂತ ಹೆಚ್ಚಾಗಿ ಪ್ರೀತಿಯದ್ದಾಗಿತ್ತು. ಅಂಬೇಡ್ಕರ್ ಅವರಿಗೆ ವ್ಯತಿರಿಕ್ತವಾಗಿ ಅವರು ‘ಹಿಂದೂ’ ಆಗಿ ಉಳಿದೂ ಕೂಡ ಅದರ ಮಿತಿಗಳನ್ನು ಮೀರಬಲ್ಲವರಾಗಿದ್ದರು.

ಸೀಮಿತವಾದಿ ಮಾರ್ಕ್ಸ್‌ವಾದಿಗಳು ಸಂಘಟಿತ ಧರ್ಮಗಳ ಸ್ವರೂಪದ ವಿಸ್ಮೃತಿಯ ಆಚೆಗೆ ನೋಡಲು ನಿರಾಕರಿಸುತ್ತಿರುವಾಗ, ಗಾಂಧಿಯವರು ಧಾರ್ಮಿಕತೆಯನ್ನು ಪ್ರಾರ್ಥನೆ ಮತ್ತು ಪ್ರತಿರೋಧದ ತತ್ವಜ್ಞಾನ ಮತ್ತು ವಿಧಾನವನ್ನಾಗಿ ಪರಿವರ್ತಿಸಬಲ್ಲವರಾಗಿದ್ದರು. ಗಾಂಧಿಯವರ ಸತ್ಯದ ಹುಡುಕಾಟವು ನಂಬಿಕೆಯ ಆಧಾರದಲ್ಲಿ ಜನರನ್ನು ವಿಭಜಿಸುವ ರಾಜಕೀಯವನ್ನು ಪ್ರತಿರೋಧಿಸುವ ಆಧ್ಯಾತ್ಮಿಕ ಬಲವನ್ನು ಅವರಿಗೆ ನೀಡಿತು. ಸಾವರ್ಕರ್‌ಗಾಗಲೀ, ಜಿನ್ನಾಗಾಗಲೀ ಇದು ಅರ್ಥವಾಗಿರಲಿಲ್ಲ.

ಕೊನೆಯದಾಗಿ, ಗಾಂಧಿಯವರು ತಮ್ಮ ಸಕ್ರಿಯ ಧಾರ್ಮಿಕತೆಯ ಮೂಲಕ ಅಹಿಂಸೆಗೆ ಒಂದು ಧನಾತ್ಮಕ ಮತ್ತು ಜೀವಪ್ರೇಮಿಯಾದ ಅರ್ಥವನ್ನು ನೀಡಬಲ್ಲವರಾಗಿದ್ದರು. ಅದು ನ್ಯಾಯದ ಸಂಘರ್ಷದಿಂದ ಪಲಾಯನವಾಗಲೀ, ಹೇಡಿತನವಾಗಲೀ ಅಲ್ಲ. ಅದು, ಆತ್ಮಬಲದಿಂದ, ಆಂತರಿಕ ಮಥನದಿಂದ, ಆಂತರಿಕ ಪ್ರಾರ್ಥನೆಯಿಂದ ಹೊರಹೊಮ್ಮುವ ಅತ್ಯನ್ನತ ಮಟ್ಟದ ಧೈರ್ಯ.

ಆದುದರಿಂದ, ಸತ್ಯಾಗ್ರಹಕ್ಕೆ ನಿರಂತರವಾದ ಆತ್ಮವಿಮರ್ಶೆ, ಕಠಿಣ ಪರಿಶ್ರಮ ತಮ್ಮ ಆಂತರಿಕ ಪ್ರಪಂಚದ ಒಳಗೆಯೇ ಬೇಕಾಗುತ್ತದೆ. ಶೋಷಕನ ದಮನಕಾರಿ ಶಕ್ತಿಯನ್ನು ಅಂತರ್ಗತಗೊಳಿಸುವುದು ಮತ್ತು ಆತನ ಸ್ವಂತ ಆಟದಲ್ಲಿ ಆತನನ್ನು ಸೋಲಿಸಲು ಯತ್ನಿಸುವುದು ಸುಲಭ. ಆದರೆ ಆಶೀಷ್ ನಂದಿ ಅವರ ಪದವೊಂದನ್ನು ಬಳಸುವುದಾದರೆ, ಅವರು ‘ಆತ್ಮೀಯ ಶತ್ರು’ವಿನ ದಾರಿ ತುಳಿಯಲು ನಿರಾಕರಿಸಿದರು. ಬದಲಾಗಿ ಅವರು ದಮನಕಾರಿ ಬಲವನ್ನು ಆತ್ಮಬಲದಿಂದ ಎದುರಿಸಲು ಬಯಸಿದರು. ಕ್ರೂರವಾದ ದೈಹಿಕ ಆಕ್ರಮಣವನ್ನು, ಪ್ರೀತಿ, ಕಾಳಜಿ ಮತ್ತು ಪ್ರತಿರೋಧದ ನೈತಿಕ ಅಸ್ತ್ರದಿಂದ ಎದುರಿಸಲು ಬಯಸಿದರು. ಶತ್ರುವನ್ನು ಕೊಲ್ಲುವ ಸಂಪ್ರದಾಯವನ್ನು- ಅವರು ಸಾಯಲು ಸಿದ್ಧವಾಗುವ ಮಹಾನ್ ಕಲೆಯಿಂದ ಎದುರಿಸಲು ಬಯಸಿದರು.

ಇಂದು ನಾವು ಮಿಲಿಟರಿವಾದ, ಕಣ್ಗಾವಲು ವ್ಯವಸ್ಥೆ, ಸರಕಾರಿ ಪ್ರಾಯೋಜಿತ ಹಿಂಸಾಚಾರ, ಎಲ್ಲಾ ರೀತಿಯ ಭಯೋತ್ಪಾದಕ ಅಥವಾ ‘ಹಿಂಸಾಚಾರ ವಿರೋಧಿ’ ಹಿಂಸಾತ್ಮಕ ಪ್ರತೀಕಾರ ಕ್ರಮಗಳಿಂದ ತಪ್ಪಿಸಿಕೊಳ್ಳಲಾಗದ ಕಾಲದಲ್ಲಿದ್ದೇವೆ. ಪರಮಾಣು ಆಸ್ತ್ರಗಳು ಮತ್ತು ಆತ್ಮಹತ್ಯಾ ಬಾಂಬರ್‌ಗಳು ಇರುವ ಪ್ರಪಂಚದಲ್ಲಿ ಹಿಂಸೆಯನ್ನು ವೈಭವೀಕರಿಸಿ, ಸಾಮಾನ್ಯ ವಿಷಯ ಎಂಬಂತೆ ಮಾಡಿದರೆ, ನಾವೊಂದು ಹಿಂಸಾಚಾರದ ಚಕ್ರದಲ್ಲಿ ಸಿಕ್ಕಿಬೀಳುತ್ತೇವೆ ಎಂದು ನಮಗೆಲ್ಲಾ ಅರ್ಥವಾಗಬೇಕು. ಈ ಚಕ್ರವ್ಯೂಹದಿಂದ ಹೊರಗೆ ಬರಲು ನಮಗೆ ಸಾಧ್ಯವೇ? ನಮಗೆ ಈ ವಿನಾಶಕಾರಿ ವ್ಯವಸ್ಥೆಯಿಂದ ಹೊರಬರಲು ಸಾಧ್ಯವೇ?

ಈ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ. ಆದರೆ, ಒಂದು ವಿಷಯ ನನಗೆ ಖಡಾಖಂಡಿತವಾಗಿ ಗೊತ್ತು. ಅದೆಂದರೆ, ನೀವು, ಯುವಜನರು, ಯಾವತ್ತಾರೂ ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದಾದರೆ, ಗಾಂಧಿಯವರ ಜೊತೆ ಒಮ್ಮೆ ಮಾತಾಡಲೇಬೇಕು. ಅವರನ್ನು ತಿಳಿಯಬೇಕು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲಿಂಗಾನುಪಾತದ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟ ಅಜಿತ್ ಪವಾರ್

0
ಲಿಂಗಾನುಪಾತಕ್ಕೆ ದ್ರೌಪದಿಯ ಉದಾಹರಣೆ ಕೊಡುವ ಮೂಲಕ ಮತ್ತು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಾತ್ರ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿವಾದ ಸೃಷ್ಟಿಸಿದ್ದಾರೆ. ಬಾರಾಮತಿ...