Homeಎಕಾನಮಿವೇಗವಾಗಿ ಮುಂದೋಡುತ್ತಿರುವ ರೇಸಿಂಗ್ ಕಾರಿನ ಟೈರುಗಳನ್ನ ಶೂಟ್ ಮಾಡಿದಂತೆ...

ವೇಗವಾಗಿ ಮುಂದೋಡುತ್ತಿರುವ ರೇಸಿಂಗ್ ಕಾರಿನ ಟೈರುಗಳನ್ನ ಶೂಟ್ ಮಾಡಿದಂತೆ…

ಉದ್ಯೋಗ ನಷ್ಟ ಮತ್ತು ಅಸಂಘಟಿತ ಉದ್ದಿಮೆಗಳ ಮುಚ್ಚುವಿಕೆಯ ದೀರ್ಘಕಾಲೀನ ಪರಿಣಾಮವನ್ನು ಈ ಆರ್ಥಿಕ ಕುಸಿತದಲ್ಲಿ ಕಾಣುತ್ತಿದ್ದೇವೆ

- Advertisement -
- Advertisement -

Demonetization in a booming like shooting economy is at the tyres of a racing car”           ಇದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಹೇಳಿದ ಮಾತು.

ಈ ಮಾತು ಈಗ ಭಾರತದ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಕೇಂದ್ರ ಸರ್ಕಾರದ ಅಥವಾ ಪ್ರಧಾನಿ ಮೋದಿಯವರ ಬೆಂಬಲಿಗರು ಈಗಿನ ಪರಿಸ್ಥಿತಿಗೆ ಜಾಗತಿಕ ಆರ್ಥಿಕ ಹಿನ್ನಡೆಯೇ ಕಾರಣ ಅಂತ ಎಷ್ಟೇ ಚೀರಾಡಿದರೂ (ಅವರ್ಯಾರೂ ಕೂಡ ತಮ್ಮ ಮಾತಿಗೆ ಪೂರಕವಾದ ಅಂಕಿಅಂಶಗಳನ್ನ ಕೊಡ್ತಿಲ್ಲ) ದೇಶದ ಆರ್ಥಿಕ ಹಿಂಜರಿತಕ್ಕೆ ಮೂಲಕಾರಣ ಡಿಮಾನಿಟೈಸೇಷನ್ ಮತ್ತು ಅಪ್ರಬುದ್ಧ ಜಿಎಸ್ಟಿ ಜಾರಿ ಎಂದು ಜಗತ್ತಿನ ಎಲ್ಲ ಪ್ರಮುಖ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಇದು ಹೇಗೆ ಮತ್ತು ಇದರಿಂದ ಹೊರಬರುವ ದಾರಿಗಳೇನು ಎಂದು ಸಂಕ್ಷಿಪ್ತವಾಗಿ ನೋಡೋಣ.
ಒಬ್ಬ/ಳು ತನ್ನ ಸಾಮಥ್ರ್ಯಕ್ಕೆ ತಕ್ಕ ಉದ್ಯೋಗ ಪಡೆದಾಗ ಅಲ್ಲಿ ದುಡಿಯುವ ಹಣವನ್ನು ತನಗೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಬಳಸುತ್ತಾನೆ/ಳೆ. ಆ ಅಂಗಡಿಯವನು/ಳು ಇಂಥ ವ್ಯಾಪಾರದಿಂದ ಬಂದ ಹಣವನ್ನು ತನ್ನ ಅಗತ್ಯದ ವಸ್ತುಗಳನ್ನು ಕೊಳ್ಳಲು ಬಳಸುವುದಲ್ಲದೆ, ತನ್ನ ಅಂಗಡಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಬಳಸುತ್ತಾನೆ/ಳೆ. ಇದರಿಂದಾಗಿ ಆ ಅಂಗಡಿಗೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸುವ ಅಥವಾ ವಿತರಿಸುವ ಕಂಪನಿಗೂ ಬೇಡಿಕೆ ಹೆಚ್ಚಾಗುತ್ತದೆ. ಜೊತೆಗೆ ಅಂತಹ ಅಂಗಡಿ ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವವರಿಗೂ ಸಂಬಳ ಸುಲಭವಾಗಿ ದೊರೆತು ಅವರೂ ಅದನ್ನು ಮಾರುಕಟ್ಟೆಯಲ್ಲಿ ಖರ್ಚು ಮಾಡುತ್ತಾರೆ. ಹೀಗೆ ಹಲವು ಸ್ತರಗಳಲ್ಲಿ ಒಂದಕ್ಕೊಂದು ಪೂರಕವಾದ ಬೇಡಿಕೆ ಹೆಚ್ಚಾಗಿ ಅದಕ್ಕೆ ತಕ್ಕಂತೆ ಉತ್ಪಾದನೆಯೂ ಹೆಚ್ಚುತ್ತಾ ಹೋಗಿ ಆರ್ಥಿಕತೆ ವೇಗವಾಗಿ ಬೆಳೆಯುತ್ತದೆ.

ಆದರೆ ಮೋದಿಯವರು ತಾವು ಹೇಳಿದಂತೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಿರಲಿ, ಇದ್ದಕ್ಕಿದ್ದಂತೆ ಡಿಮಾನೆಟೈಸೇಷನ್ ಮಾಡುವ ಮೂಲಕ ಕನಿಷ್ಟ ಐವತ್ತು ಲಕ್ಷ ಮಂದಿಯ ಉದ್ಯೋಗಗಳನ್ನು ಕೇವಲ ಆ ಮೂರು ತಿಂಗಳುಗಳಲ್ಲಿ ಕಸಿದುಕೊಂಡು ಬಿಟ್ಟರು.

ಇವತ್ತು ನಮ್ಮ ದೇಶದಲ್ಲಿ ಶೇ. ತೊಂಬತ್ತರಷ್ಟು ಉದ್ಯೋಗಿಗಳು ಕೆಲಸ ಮಾಡುತ್ತಿರುವುದೇ ಅಸಂಘಟಿತ ವಲಯದ ಉದ್ದಿಮೆಗಳಲ್ಲಿ ಹಾಗೂ ದೇಶದ ಜಿಡಿಪಿಯಲ್ಲಿ ಈ ಅಸಂಘಟಿತ ವಲಯದ ಕೊಡುಗೆ ಶೇ45 ರಷ್ಟಿದೆ. ಈ ಅಸಂಘಟಿತ ಉದ್ಯಮಗಳೆಲ್ಲ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಾಗಿದ್ದು ಇವೆಲ್ಲವೂ ನಗದಿನ ರೂಪದಲ್ಲೇ ತಮ್ಮ ವ್ಯವಹಾರ ಮಾಡುತ್ತವೆ.

ಇದ್ದಕ್ಕಿದ್ದಂತೆ ಡಿಮಾನೆಟೈಸೇಷನ್ ಮೂಲಕ ನಗದಿನ ಹರಿವೇ ನಿಂತುಹೋದಾಗ ಸಾವಿರಾರು ಉದ್ದಿಮೆಗಳು ಬಾಗಿಲು ಮುಚ್ಚಿದ ಪರಿಣಾಮ ಲಕ್ಷಾಂತರ ಮಂದಿ ತಮ್ಮ ಕೆಲಸ ಕಳೆದುಕೊಂಡರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದಂತೆ ಡಿಮಾನೆಟೈಸೇಷನ್ನಿನ ತಕ್ಷಣದ ಪರಿಣಾಮವಾಗಿಯೇ ಮುಂದಿನ ತ್ರೈಮಾಸಿಕದಲ್ಲಿಯೇ ಜಿಡಿಪಿ ದರ ಶೇ. ಎರಡರಷ್ಟು ಕುಸಿಯಿತು.

ಆದರೆ ಉದ್ಯೋಗ ನಷ್ಟ ಮತ್ತು ಅಸಂಘಟಿತ ಉದ್ದಿಮೆಗಳ ಮುಚ್ಚುವಿಕೆಯ ದೀರ್ಘಕಾಲೀನ ಪರಿಣಾಮವನ್ನು ಈ ಆರ್ಥಿಕ ಕುಸಿತದಲ್ಲಿ ಕಾಣುತ್ತಿದ್ದೇವೆ

ಮೊದಲೇ ಡಿಮಾನೆಟೈಸೇಷನ್ನಿಂದ ಹೊಡೆತ ತಿಂದಿದ್ದ ಅಸಂಘಟಿತ ವಲಯಕ್ಕೆ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಹೊಡೆತ ನೀಡಿದ್ದು ಸರಿಯಾದ ತಯಾರಿಯಿಲ್ಲದ ಜಿಎಸ್ಟಿಯ ಆತುರಾತುರದ ಜಾರಿ. ಇದರಿಂದ ಜಿಎಸ್‍ಟಿ ಅಳವಡಿಸಿಕೊಳ್ಳಲು ಸರಿಯಾದ ಸೌಲಭ್ಯ ಮತ್ತು ಶಕ್ತಿ ಹೊಂದಿರದಿದ್ದ ಬಹುತೇಕ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಲ್ಲದೇ ಹಲವಾರು ಮದ್ಯಮ ಗಾತ್ರದ ಉದ್ದಿಮೆಗಳೂ ಹೊಡೆತ ತಿಂದವು. ಹಲವಾರು ಉದ್ದಿಮೆಗಳು ಮುಚ್ಚಿಕೊಂಡವು ಮತ್ತು ಇನ್ನೂ ಸಹಸ್ರಾರು ಉದ್ದಿಮೆಗಳ ಲಾಭಾಂಶ, ವ್ಯವಹಾರ ಎಲ್ಲ ಕಡಿಮೆಯಾಯಿತು.

ಇದರ ಪರಿಣಾಮ ಮತ್ತಷ್ಟು ಉದ್ಯೋಗ ನಷ್ಟ ಮತ್ತು ಆರ್ಥಿಕತೆಗೆ ಹೊಡೆತ. ಈ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಅನೇಕ ರೀತಿಯಲ್ಲಿ ಅವಲಂಬಿತವಾಗಿದ್ದ ಭಾರೀ ಉದ್ದಿಮೆಗಳು ಕೂಡ ಕೆಲಕಾಲದ ಬಳಿಕ ಈ ಜಿಎಸ್ಟಿ ಹೊಡೆತವನ್ನು ಪರೋಕ್ಷವಾಗಿ ಅನುಭವಿಸಿ ಹಿಂಜರಿತಕ್ಕೆ ಒಳಗಾದವು.

ಹಾಗಾಗಿಯೇ, ಇವತ್ತಿನ ಆರ್ಥಿಕ ಹಿಂಜರಿತ ಏನಿದೆ ಅದು ನಮ್ಮ ದೇಶದ ಪ್ರಧಾನಿ ಮತ್ತು ಕೇಂದ್ರ ಸರ್ಕಾರ ತಾನಾಗಿಯೇ ಸ್ವಯಂಕೃತಾಪರಾಧದಿಂದ ತಂದಿಟ್ಟುಕೊಂಡದ್ದೇ ಹೊರತು ಇದಕ್ಕೆ ಕೇವಲ ಜಾಗತಿಕ ಹಿಂಜರಿತ ಕಾರಣವಲ್ಲ. ಆದರೆ, ಇದರ ಕಷ್ಟ ಉಣ್ಣುತ್ತಿರುವವರು ನಮ್ಮಂತ ಕೋಟಿಕೋಟಿ ಜನಸಾಮಾನ್ಯರು.

ಈ ಆರ್ಥಿಕ ಹಿಂಜರಿತಕ್ಕೆ ಪರಿಹಾರವಿಲ್ಲವೆ? ಇದರಿಂದ ಹೊರಬರಲು ತೆಗೆದುಕೊಳ್ಳಬೇಕಾದ ಕ್ರಮಗಳೇನು?

ದೇಶದ ಮತ್ತು ಜಗತ್ತಿನ ಎಲ್ಲ ಆರ್ಥಿಕ ತಜ್ಞರು ಹೇಳಿರುವಂತೆ ಈಗಿನ ಆರ್ಥಿಕ ಹಿಂಜರಿತ ಉಂಟಾಗಿರುವುದು ಬೇಡಿಕೆಯ ಕೊರತೆಯಿಂದ. ಅಂದರೆ, ಈ ದೇಶದ ಜನರಲ್ಲಿ ಕೊಳ್ಳುವ ಶಕ್ತಿ ಉಡುಗಿರುವುದರಿಂದ. ಹಾಗಾಗಿ, ಬಹುತೇಕ ಎಲ್ಲ ಆರ್ಥಿಕ ತಜ್ಞರ ಅಭಿಪ್ರಾಯ ಈ ದೇಶದ ಜನಗಳ ಅದರಲ್ಲೂ ಗ್ರಾಮಾಂತರ ಪ್ರದೇಶದ ಜನಗಳ ಕೈಯಲ್ಲಿ ಹೆಚ್ಚು ಹಣ ಓಡಾಡುವಂತೆ ಮಾಡಿ ಅವರ ಕೊಳ್ಳುವ ಶಕ್ತಿ ಹೆಚ್ಚಾಗುವಂತೆ ಮಾಡುವುದು. ಇದರಿಂದ ಬೇಡಿಕೆ ಹೆಚ್ಚಾಗಿ ಅದಕ್ಕೆ ತಕ್ಕಂತೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಯಾವಾಗ ಉತ್ಪಾದನೆ ಹೆಚ್ಚಾಗಬೇಕಾದ ಸನ್ನಿವೇಶ ಬರುತ್ತದೋ ಆಗ ಹೆಚ್ಚಿನ ಖಾಸಗಿ ಬಂಡವಾಳವೂ ಹರಿದುಬರುತ್ತದೆ. ಬಂಡವಾಳ ಮತ್ತಷ್ಟು ಉದ್ಯೋಗಗಳನ್ನು ಸೃಷ್ಟಿಸಿ ಆರ್ಥಿಕತೆ ಈ ಹಿಂಜರಿತದಿಂದ ಹೊರಬರಲು ಸಾಧ್ಯವಾಗುತ್ತದೆ.

ಅದಕ್ಕೆ ಕೇಂದ್ರ ಸರ್ಕಾರ ಮಾಡಬೇಕಿರುವುದು ಅತಿಮುಖ್ಯವಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಹಣ ಕೊಡುವುದು ಹಾಗೂ ಆ ಯೋಜನೆಯಡಿಯಲ್ಲಿನ ಕೂಲಿಯನ್ನು ದುಪ್ಪಟ್ಟುಗೊಳಿಸುವುದು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಗಮನಾರ್ಹವಾಗಿ ಹೆಚ್ಚುತ್ತದೆ. ಜೊತೆಗೆ ರೈತರಿಗೆ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ಕೊಡುವುದು. ಇವೆರಡೂ ತ್ವರಿತವಾಗಿ ಮಾಡಬಲ್ಲಂತ ಕೆಲಸಗಳು.

ಹಾಗೆಯೇ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು (ರಸ್ತೆ, ಸೇತುವೆ, ಕಿರುನೀರಾವರಿ, ವಿದ್ಯುತ್ ಇತ್ಯಾದಿ) ಹೆಚ್ಚೆಚ್ಚು ಬಂಡವಾಳವನ್ನು ಸರ್ಕಾರವೇ ತೊಡಗಿಸುವುದು. ಇದರಿಂದಾಗಿಯೂ ಲಕ್ಷಾಂತರ ಉದ್ಯೋಗ ತಾತ್ಕಾಲಿಕವಾಗಿಯಾದರೂ ಸೃಷ್ಟಿಯಾಗಿ ಜನಗಳ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ.

ಇದರ ಜೊತೆಗೆ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯನ್ನು ಕಡಿಮೆ ಮಾಡಿದರೆ ಅದರಲ್ಲಿ ಉಳಿಯುವ ಹಣವನ್ನು ಅವರು ಖರ್ಚು ಮಾಡುವುದರಿಂದಲೂ ಬೇಡಿಕೆ ಹೆಚ್ಚುತ್ತದೆ. ಈ ದೇಶದಲ್ಲಿ ಅಂದಾಜು ಐದು ಕೋಟಿ ಕುಟುಂಬಗಳು ಆದಾಯ ತೆರಿಗೆ ಪಾವತಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಬೇಡಿಕೆ ಹೆಚ್ಚಳ ಮಾಡುವಲ್ಲಿ ಒಂದು ಮಟ್ಟಕ್ಕೆ ಪರಿಣಾಮಕಾರಿಯಾಗಿಯೇ ಆಗಿರುತ್ತದೆ.

ಇದೆಲ್ಲದರಿಂದ ವಿತ್ತೀಯ ಕೊರತೆ (Fiscal deficit) ಹೆಚ್ಚಾದರೂ ಕೂಡ ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸರ್ಕಾರ ಮೇಲಿನಂಥ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ. (ವಾಸ್ತವವಾಗಿ ಈಗಾಗಲೇ ಬಹಳ ನಿಧಾನವಾಗಿ ಹೋಗಿದೆ)
ಇಷ್ಟೆಲ್ಲಾ ಮಾಡಿದರೂ ಕೂಡ ಆರ್ಥಿಕ ಚೇತರಿಕೆಗೆ ಕನಿಷ್ಟ ಒಂದು ವರ್ಷ ಬೇಕಾಗುವಂತಹ ವಿಷಮ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಸರ್ಕಾರ ಬೇಡಿಕೆ ಹೆಚ್ಚಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಉತ್ಪಾದನೆ ಮತ್ತು ಅದರಿಂದ ಮತ್ತಷ್ಟು ಸರಬರಾಜು ಹೆಚ್ಚಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಕಾರ್ಪೊರೇಟ್ ಟ್ಯಾಕ್ಸನ್ನು 35% ರಿಂದ 25% ಗೆ ಇಳಿಸಿದ್ದು ಆರ್ಥಿಕ ಚೇತರಿಕೆಗೆ ಸರ್ಕಾರ ತೆಗೆದುಕೊಂಡ ಅತ್ಯಂತ ಪ್ರಮುಖ ಕ್ರಮ. ತಮ್ಮ ಲಾಭದ ಮೇಲೆ ಕಟ್ಟುವ ತೆರಿಗೆ ಕಡಿಮೆಯಾದ ಕಾರಣಕ್ಕೆ ಅನೇಕ ಕಂಪನಿಗಳು ಹೆಚ್ಚು ಉತ್ಪಾದಿಸುತ್ತವೆ ಮತ್ತು ಹೊಸದಾಗಿ ಬಂಡವಾಳ ಹೂಡುತ್ತವೆ. ಅದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಸರ್ಕಾರದ ನಿರೀಕ್ಷೆ.

ಆದರೆ, ಈಗ ತಾವು ಉತ್ಪಾದಿಸಿರುವ ಉತ್ಪನ್ನಗಳು ಮಾರಾಟವಾದಾಗ ತಾನೇ ಕಂಪನಿಗಳಿಗೆ ಲಾಭ ಮತ್ತು ಲಾಭದ ಮೇಲಿನ ತೆರಿಗೆ ಇಳಿಕೆಯ ಲಾಭ ಎರಡೂ ಸಿಗುವುದು? ಆದರೆ, ಈಗಾಗಲೆ ಉತ್ಪನ್ನವಾಗಿರುವ ವಸ್ತುಗಳಿಗೇ ಬೇಡಿಕೆ ಇಲ್ಲದಿರುವಾಗ ಈ ಕಂಪನಿಗಳು ಮತ್ತಷ್ಟು ಉತ್ಪಾದನೆ ಯಾಕೆ ಮಾಡುತ್ತವೆ?

ಹಾಗಾಗಿ, ಸರ್ಕಾರ ಇಲ್ಲಿಯತನಕ ತೆಗೆದುಕೊಂಡ ಯಾವ ಕ್ರಮಗಳೂ (ಕಾರ್ಪೋರೇಟ್ ತೆರಿಗೆ ಕಡಿತ, ಬ್ಯಾಂಕುಗಳ ವಿಲೀನ ಇತ್ಯಾದಿ) ಆರ್ಥಿಕ ಹಿಂಜರಿತದಿಂದ ದೇಶವನ್ನು ಹೊರತರುವಲ್ಲಿ ಪರಿಣಾಮಕಾರಿಯಾಗಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡಬಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳುತ್ತಿಲ್ಲ.

ಇದರ ಜೊತೆಗೆ ಜಾಗತಿಕ ಹಿಂಜರಿತ ಮತ್ತು ತೈಲ ಬೆಲೆ ಹೆಚ್ಚಳವೂ ಸೇರಿ ದೇಶ ಆರ್ಥಿಕ ಹಿಂಜರಿತದಿಂದ ಹೊರಬರುವ ಲಕ್ಷಣ ಸದ್ಯದ ಭವಿಷ್ಯದಲ್ಲೆಲ್ಲೂ ಕಾಣಿಸುತ್ತಿಲ್ಲ. ಇದರ ಹೊಡೆತದಲ್ಲಿ ಜನಸಾಮಾನ್ಯರ ಬದುಕು ಮತ್ತಷ್ಟು ಅಸಹನೀಯವಾಗಲಿದ್ದು, ಬಡತನದ ದಾರುಣತೆ ಇನ್ನೂ ಹೆಚ್ಚಲಿದ್ದು, ಇದರೊಳಗೆ ಬದುಕುಳಿಯುವುದೇ ಒಂದು ಸವಾಲಾಗಲಿದೆ.
ಡಾ.ಬಿ.ಸಿ.ಬಸವರಾಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...