Homeಮುಖಪುಟಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನಕ್ಕೆ ಖಂಡನೆ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನಕ್ಕೆ ಖಂಡನೆ

- Advertisement -
- Advertisement -

ತೋಟಗಾರಿಕೆ ಸಚಿವ ಮುನಿರತ್ನರವರು 40% ಕಮಿಷನ್‍ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ಬಂಧನಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಸರ್ಕಾರ ನಡೆಸುತ್ತಿರುವ ಭಾರೀ ಭ್ರಷ್ಟಾಚಾರ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಸಮರ್ಪಕ ತನಿಖೆ ನಡೆಸುವುದು ಬಿಟ್ಟು ಭ್ರಷ್ಟಾಚಾರದ ವಿರುದ್ಧ ದನಿಯೆತ್ತುತ್ತಿರುವ 80 ವರ್ಷದ ಕೆಂಪಣ್ಣನವರನ್ನು ರಾತ್ರೋರಾತ್ರಿ ಬಂಧಿಸುವುದು ಎಷ್ಟು ಸರಿ? ಎಂದು ಹಲವರು ಖಂಡಿಸಿದ್ದಾರೆ.

ಕರ್ನಾಟಕದಲ್ಲಿ ಎಂತಹ  ನ್ಯಾಯ ವ್ಯವಸ್ಥೆಯಿದೆ? 40% ದಂಧೆಯನ್ನು ಬಯಲಿಗೆಳೆದ ವ್ಯಕ್ತಿಗೆ ಜೈಲು ಶಿಕ್ಷೆ. ಆದರೆ ಪಕ್ಷದ ಕಾರ್ಯಕರ್ತ ಸಂತೋಷ್‌ ಆತ್ಮಹತ್ಯೆಗೆ ಕಾರಣರಾದ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಎಲ್ಲವೂ ಆಡಳಿತ ಪಕ್ಷದ ದುಷ್ಕೃತ್ಯಗಳನ್ನು ರಕ್ಷಿಸಲು ನಡೆಯುತ್ತಿದೆ ಎಂದು ಸಹನಾ ಎಂಬುವವರು ಕಿಡಿಕಾರಿದ್ದಾರೆ.

40% ಕಮಿಷನ್ ವಿಚಾರ ಬಹಿರಂಗಪಡೆಸಿದ ವ್ಯಕ್ತಿಯನ್ನು, 40% ಕಮಿಷನ್ ಪಡೆದ ಆರೋಪ ಹೊತ್ತ ವ್ಯಕ್ತಿಯಿಂದ ಬಂಧಿಸಲಾಗಿದೆ. ಕೆಂಪಣ್ಣನವರೆ, ಕಾನೂನಿನ ನ್ಯಾಯಾಲಯದಲ್ಲೂ, ಜನತಾ ನ್ಯಾಯಾಲಯದಲ್ಲೂ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಆಪ್ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ ಕೆಂಪಣ್ಣನವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

40% ಭ್ರಷ್ಟಾಚಾರ ಆರೋಪಿಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ.‌ ಅದೂ ಮುನಿರತ್ನ ವಿರುದ್ಧ ಆರೋಪದ ಬಗ್ಗೆ. ‌ಹಾಗೆ ಮಾಡಿದರೆ ಎಲ್ಲಾ ಬಿಜೆಪಿ ನಾಯಕರನ್ನು ಬಂಧಿಸಬೇಕು, ಮುನಿರತ್ನ ಬಿಜೆಪಿ ಸೇರುವುದಕ್ಕೆ ಮುನ್ನ ‌ಭ್ರಷ್ಟರೇ ಆಗಿದ್ದರು, ನಂತರ ಪಾವನರಾದರು.‌ ಹೀಗೆ ಜನಸಾಮಾನ್ಯರನ್ನು ಹೆದರಿಸುವ ಕ್ರಮವನ್ನು ಕಂಡಿಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಅಕ್ಕಿ ಟ್ವೀಟ್ ಮಾಡಿದ್ದಾರೆ.

 

ರಾಜ್ಯದ ಎಲ್ಲಾ ಕಾಮಗಾರಿಗಳಲ್ಲಿ 40% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಂಪಣ್ಣವನರು ಆರೋಪ ಮಾಡಿದ್ದರು. ಆನಂತರ ಪ್ರಧಾನಿಯವರಿಗೂ ಪತ್ರ ಬರೆದಿದ್ದರು. ಆನಂತರ ಸಚಿವ ಮುನಿರತ್ನ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಹಾಗಾಗಿ ಸಚಿವ ಮುನಿರತ್ನ ಡಿ ಕೆಂಪಣ್ಣ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿ 19 ಮಂದಿಯ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಈ ವಾರೆಂಟ್ ಜಾರಿ ಆಗಿದ್ದ ಹಿನ್ನೆಲೆಯಲ್ಲಿ ವೈಯಾಲಿಕಾವಲ್ ಪೊಲೀಸರು ಕೆಂಪಣ್ಣರ ಸಹಿತ ಕೃಷ್ಣಾ ರೆಡ್ಡಿ, ನಟರಾಜು ಹಾಗೂ ಗುರುಸಿದ್ದಪ್ಪ ಎಂಬವರನ್ನು ಬಂಧಿಸಿದ್ದಾರೆ

ಚಿತ್ರ ನಿರ್ಮಾಪಕರೂ ಆಗಿರುವ ಸಚಿವ ಮುನಿರತ್ನ, ಅರ್ಜಿಯಲ್ಲಿ “ಶ್ರೀ ಕೃಷ್ಣದೇವರಾಯ ಸಿನಿಮಾ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದೆ. ಪ್ರತಿವಾದಿಗಳಾದ ಕೆಂಪಣ್ಣ ಮತ್ತಿತರರು ಆರೋಪ ಮಾಡಿದ್ದರಿಂದ ಆ ಸಿನಿಮಾ ನಿರ್ಮಾಣ ನಡೆಯುವುದು ಅನುಮಾನವಾಗಿದೆ. ಗುತ್ತಿಗೆದಾರರ ಸಂಘದ ಆರೋಪದಿಂದ ಇತರೆ ರಾಜ್ಯಗಳಲ್ಲಿ ಸಿನಿಮಾ ಹಂಚಿಕೆಗೆ ಹಿಂಜರಿಯುತ್ತಿದ್ದಾರೆ. ಐತಿಹಾಸಿಕ ಸಿನಿಮಾ ನಿರ್ಮಾಣಕ್ಕೆ ಪೆಟ್ಟು ಬಿದ್ದಿದೆ. ಇದರಿಂದ ಸುಮಾರು 100 ಕೋಟಿ ರೂ. ನಷ್ಟವಾಗಿದೆ. ಅಲ್ಲದೆ, ಕಳೆದ ನಾಲ್ಕು ದಶಕಗಳಿಂದ ಗಳಿಸಿರುವ ಘನತೆಗೆ ಧಕ್ಕೆಯಾಗಿದೆ. ಆದ್ದರಿಂದ 50 ಕೋಟಿ ರೂಪಾಯಿ ಪರಿಹಾರ ನೀಡಬೇಕು” ಎಂದು ಕೋರಿದ್ದರು.

ಇದನ್ನೂ ಓದಿ; 40% ಕಮಿಷನ್‌ನಿಂದ ಕರುನಾಡು ಕಳೆದುಕೊಳ್ಳುತ್ತಿರುವುದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...