ಚೈನಾದ ಮಿಲಿಟರಿ ಭಾರತದೊಳಕ್ಕೆ ನುಗ್ಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದನ್ನು ನಂಬುತ್ತೇನೆ. ರಕ್ಷಣಾ ಸಚಿವಾಲಯದವರು ವೆಬ್‍ಸೈಟಿನಲ್ಲಿ ಚೈನಾ ಸೈನ್ಯ ಭಾರತದ ಅತಿಕ್ರಮ ಪ್ರವೇಶ ಮಾಡಿದೆ ಎಂದು ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಿದ್ದರೂ ನಾನು ಪ್ರಧಾನ ಮಂತ್ರಿಯ ಮಾತನ್ನೆ ನಂಬುತ್ತೇನೆ. ಚೈನಾದ ಸೈನ್ಯ ಅತಿಕ್ರಮಿಸಿ ಗೋಗ್ರಾ, ಪಾಂಗಾಂಗ್ ಸರೋವರದ ಉತ್ತರ ಕಿನಾರೆ ಪ್ರದೇಶಗಳಿಗೆ ಮೇ 17,18 2020ರಂದು ಅತಿಕ್ರಮ ಪ್ರವೇಶ ಮಾಡಿದೆ ಎಂದು ಅಧಿಕೃತ ದಾಖಲೆ ತಿಳಿಸುತ್ತದೆ. ಪ್ರಧಾನಿಗಳ ರಕ್ಷಣೆಗಾಗಿ ಈ ಅಧಿಕೃತ ದಾಖಲೆಯನ್ನು ವೆಬ್‍ಸೈಟ್‍ನಿಂದ ಕೂಡಲೇ ತೆಗೆದು ಹಾಕಲಾಯಿತು ಎಂಬುದನ್ನು ನಾವು ಗಮನಿಸಬೇಕು. ಹಿಂದೆ ನಿರುದ್ಯೋಗಕ್ಕೆ ಮತ್ತು ಜಿಡಿಪಿಗೆ ಸಂಬಂಧಿಸಿದ ವರದಿಗಳನ್ನು ವೆಬ್‍ಸೈಟ್‍ನಿಂದ ತೆಗೆದುಹಾಕಿದಂತೆಯೇ ಈಗ ಈ ಅಧಿಕೃತ ದಾಖಲೆಗಳನ್ನೂ ತೆಗೆದು ಹಾಕಲಾಗಿದೆಯಾದರೂ ನಾವು ಪ್ರಧಾನಿಗಳ ಮಾತನ್ನು ನಂಬುತ್ತಾ ಇರಬೇಕು. ನಮ್ಮನ್ನೀಗ ನಿರುದ್ಯೋಗ ಸಮಸ್ಯೆ ಕಾಡುತ್ತಿಲ್ಲ. ನಮ್ಮನ್ನು ಇಂದು ಚೈನಾ ಸಮಸ್ಯೆಯೂ ಕಾಡುತ್ತಿಲ್ಲ.

photo courtesy: Business Standard

ಮೋದಿಯವರು ಹೀಗೆ ಹೇಳುತ್ತಾರೆ: My government is delivering on the promise of minimum government and maximum governance. ನಾನು ಮೋದಿಯವರ ಈ ಮಾತನ್ನು ನಂಬುತ್ತೇನೆ. ಇದನ್ನು ಕಾಣದವರು ಕುರುಡರು ಎಂದೇ ನನ್ನ ಭಾವನೆ. ಕೆಲವೇ ತಿಂಗಳ ಹಿಂದೆ ಲಕ್ಷಾಂತರ ಹತಾಶರಾದ ಕಾರ್ಮಿಕರು ರಸ್ತೆಗಳಲ್ಲಿ ಸಾಲುಗಟ್ಟಿ ನಡೆದು ಹೋಗುತ್ತಿದ್ದರು ಆಗ ಸರ್ಕಾರ ಎಲ್ಲಿತ್ತೋ ಏನು ಮಾಡುತ್ತಿತ್ತೋ ತಿಳಿಯದು. ಆಗ ಮೋದಿ ಸರ್ಕಾರದ maximum governance ಎಲ್ಲಿ ಅಡಗಿ ಕೂತಿತ್ತೋ ಗೊತ್ತಿಲ್ಲ.

ಪ್ರಧಾನ ಮಂತ್ರಿಗಳು ಎಲೆಕ್ಟೊರಲ್ ಬಾಂಡ್‍ಗಳನ್ನು ಹೊಸದಾಗಿ ಹೊರತಂದರು. ಈ ಮೂಲಕ ರಾಷ್ಟ್ರದಲ್ಲಿ ಮುಚ್ಚುಮರೆ ಇಲ್ಲದ transparence ರಾಜಕೀಯವನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದರು. ಆದರೆ ಒಬ್ಬ ಮಾಜಿ ಚುನಾವಣಾ ಆಯೋಗದ ಅಧಿಕಾರಿಗಳು ಈ ಎಲೆಕ್ಟೊರಲ್ ಬಾಂಡುಗಳು ನಮ್ಮ ಚುನಾವಣಾ ವ್ಯವಸ್ಥೆಯಗೆ ತುಂಬ ಅಪಾಯ ಒಡ್ಡುತ್ತದೆ ಎಂದು ಹೇಳಿದರು. (ಎಲೆಕ್ಟೊರಲ್ ಬಾಂಡುಗಳನ್ನು ಯಾರು ಬೇಕಾದರು ಕೊಳ್ಳಬಹುದು. ಹಣವನ್ನು ತಮಗೆ ಬೇಕಾದ ಯಾವ ರಾಜಕೀಯ ಪಕ್ಷಕ್ಕೆ ಬೇಕಾದರೂ ಹಾಕಬಹುದು. ಬಾಂಡ್ ಕೊಂಡವರ ಹೆಸರನ್ನು ಬಹಿರಂಗಗೊಳಿಸುವುದಿಲ್ಲ. ಯಾರು ಎಷ್ಟು ಹಣ ಹಾಕಿದರು ಎಂಬುದನ್ನು ರಹಸ್ಯವಾಗಿ ಇಡಲಾಗುತ್ತದೆ ಎಂದು ಮೋದಿ ಸರ್ಕಾರ ತಿರ್ಮಾನಿಸಿತು. ಎಲೆಕ್ಟೊರಲ್ ಬಾಂಡ್ ಮಾರಾಟದಿಂದ ಬಿಜೆಪಿಗೆ ಶೇ90ರಷ್ಟು ಹಣ ಜಮಾ ಆದರೆ ಉಳಿದ 10% ಹಣ ಮಿಕ್ಕೆಲ್ಲ ಪಾರ್ಟಿಗಳಿಗೂ ಹಂಚಿಕೆಯಾಯಿತು.)

photo courtesy; Deccan Chronicle

ಎಲೆಕ್ಟೊರಲ್ ಬಾಂಡುನ್ನು ಬಿಡುಗಡೆ ಮಾಡುವ ಮೊದಲು ಮೋದಿ ಸರ್ಕಾರ ಚುನಾವಣಾ ಆಯೋಗದೊಡನೆ ಸಮಾಲೋಚನೆ ನಡೆಸಿರಲಿಲ್ಲ. ಆದರಂತೆಯೇ ಮೋದಿಯವರು  PMCARES fund ಒಂದನ್ನು transparencyಯನ್ನು ಎತ್ತಿ ಹಿಡಿಯಲು ಜಾರಿಗೆ ತಂದರು. ಆ ಮೂಲಕ ಸಂಗ್ರಹವಾದ ಹಣವೆಷ್ಟು? ಅದು ಏನಾಗಿದೆ? ಯಾರ್ಯಾರು ಕೊಟ್ಟವರು ಎಂಬುದು ನಮಗೆ ಗೊತ್ತಿಲ್ಲದಿರಬಹುದು. ಆದರೆ ಪ್ರಧಾನಿಗಳು ಹೇಳುತ್ತಾರೆ ನಾನು ಅದರ ರಕ್ಷಣೆ ಮಾಡುತ್ತೇನೆ ಎಂದು. ಅಷ್ಟೇ ಸಾಕು ನನಗೆ.

ಪ್ರಧಾನ ಮಂತ್ರಿಗಳು ಖೊಟಾನೋಟುಗಳ ಹಾವಳಿ, ಉಗ್ರರ ಹಾವಳಿ ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟಲು ನೋಟುಗಳ ಅಪಮೌಲ್ಯ ಮಾಡಿದರು. ನೋಟುಗಳ ಅಪಮೌಲ್ಯ ಮಾಡಿದ್ದರಿಂದ ಮೋದಿ ಹೇಳಲಾದ ಯಾವ ಉದ್ದೇಶವೂ ಈಡೇರಲಿಲ್ಲ. ಅದು ಒಂದು ಪ್ರಮಾದದ ಪ್ರಸಂಗವೇ ಸರಿ.

ಪ್ರಧಾನಮಂತ್ರಿಗಳು ಭಾರತ ಸ್ವಾತಂತ್ರ್ಯದ ಉದಯದ spirit ಅನ್ನು ಪ್ರಚೋದಿಸಲು GSTಯನ್ನು ಜಾರಿಗೆ ತಂದರು. ಅದು ಒಳ್ಳೆಯ ಮತ್ತು ಸರಳವಾದ ಕರವಾಗಿದ್ದು ಅವರ Inspired choice ಆಗಿತ್ತು. ಆದರೆ GST ಒಳ್ಳೆಯ Inspired choice ಆಗಲಿಲ್ಲವೆಂಬುದು ನನ್ನ ಅಭಿಪ್ರಾಯ. ವಿಶ್ವಬ್ಯಾಂಕ್ ಕೂಡ GSTಯನ್ನು ಒಂದು ಬಹಳ ಗೋಜಿನ ತೆರಿಗೆ ಮತ್ತು ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಯೋಜನೆ ಎಂದು ಅಭಿಪ್ರಾಯಪಟ್ಟಿದೆ. ಆದರೂ ಈ ತೆರಿಗೆಯನ್ನು ಒಳ್ಳೆಯದು ಮತ್ತು ಸರಳವಾದದ್ದು ಎಂದು ನಾವು ಭಾವಿಸಬೇಕು. ಹೀಗೆ ನಾವು ಹೇಳಿದರೆ ಪ್ರಧಾನಿಗಳಿಗೆ ಬಹಳ ಸಂತೋಷವಾಗುವುದು.

photo courtesy: IAS Express

ಹೀಗೆ ಯೋಚನೆ ಮಾಡುವಾಗ ಪ್ರಧಾನಿಗಳ ಬಗೆಗೆ ಅಸಹನೆಯ ಸಾಂಕ್ರಾಮಿಕ ರೋಗ ಬೆಳೆಯುತ್ತಿರುವುದು ಕಂಡು ಬರುತ್ತದೆ. ಪ್ರಧಾನಿಗಳು ಮುಸ್ಲಿಂ ಸ್ತ್ರೀಯರ ಪರವಾಗಿ ಒಂದು ಸಮರವನ್ನೇ ಹೂಡಿ ವಿಜಯಗಳಿಸಿದ್ದಾರೆ. ಮೋದಿಯವರು ಇನ್‍ಸ್ಟೆಂಟ್ ಟ್ರಿಪಲ್ ತಲಾಕ್ ಘೋಷಿಸುವುದು ಕ್ರಿಮಿನಲ್ ಅಪರಾಧ ಎಂದು ಸಾರಿದರು. ಸರ್ವೋಚ್ಚ ನ್ಯಾಯಲಯ ಟ್ರಿಪಲ್ ತಲಾಕ್ ಅಸಿಂಧು ಎಂದು ಮಾತ್ರ ತಮ್ಮ ತೀರ್ಪಿನಲ್ಲಿ ಹೇಳಿದ್ದರೆ ಮೋದಿಯವರು ಅದನ್ನು  criminal offence ಎಂದು ಹೇಳಿರುವುದು ಸರಿಯಲ್ಲ. ಅದು  criminal offence ಎಂದು ಮೋದಿ ಹೇಳಿರುವುದು ಮುಸ್ಲಿಂ ಗಂಡಸರ ವಿರೋಧವಾಗಿ ಎಂದು ನನಗನಿಸುತ್ತದೆ. ಮೋದಿಯವರ ಉದ್ದೇಶ ಮುಸ್ಲಿಂ ಗಂಡಸರನ್ನು ಮುಸ್ಲಿಮೇತರ ಪುರುಷರ ದರ್ಜೆಗೆ ತರುವುದೇ ಇರಬಹುದು. ಮುಸ್ಲಿಮೇತರ ಗಂಡಸರಂತೆ ಇನ್ನು ಮೇಲೆ ಮುಸ್ಲಿಂ ಗಂಡಸರು ತಮ್ಮ ಹೆಂಡತಿಯರನ್ನು ತ್ಯಜಿಸಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಬಹುದು. ಏಕೆಂದರೆ ಅವರು ವಿಚ್ಛೇದನ ಮಾಡುವುದಾಗಿ ಘೋಷಣೆ ಮಾಡುವುದರ ಜೊತೆಗೆ ಜುಲ್ಮಾನೆ ನೀಡಬೇಕಾಗುತ್ತೆ. ಎಂತಹ ಘನಂದಾರಿ ಕೆಲಸ ಮಾಡಿದ್ದಾರೆ ಮೋದಿಯವರು!

ಪ್ರಾಧಾನಿಗಳು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂದು ಘೋಷಿಸಿ ಅವರು ಹೇಗೆ ತಮ್ಮ ಪಕ್ಷದ ಜನರ ವಿಕಾಸಕ್ಕೆ ಕಾರಣರಾಗಿದ್ದಾರೆ ಎಂಬುದನ್ನು ನೀವು ಕಣ್ಣು ತೆರೆದು ನೋಡಬೇಕು. ಮೋದಿ ಸರ್ಕಾರದ ಅನುರಾಗ್ ಥಾಕೂರ್ ಎಂಬುವವರು ತಮ್ಮ ಧೋರಣೆಯನ್ನು ಒಪ್ಪದವರಿಗೆ ಸಾಯಿಸುವ ಬೆದರಿಕೆ ಒಡ್ಡಿದ್ದಾರೆ. ಪಾರ್ಲಿಮೆಂಟ್ ಸದಸ್ಯರಾದ ತೇಜಸ್ವಿ ಸೂರ್ಯ ಹಿಂದೂಗಳು ರಾಷ್ಟ್ರದ ಆಡಳಿತವನ್ನು control ಮಾಡುವ ಅಧಿಕಾರ ಪಡೆಯುವುದರ ಮೂಲಕ ಧರ್ಮವನ್ನು ಎತ್ತಿ ಹಿಡಿಯುವುದಕ್ಕೆ ಸಾಧ್ಯವಾದಿತು ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿಯ ಸಂಬಿತ್ ಪಾತ್ರಾ ಕಾಂಗ್ರೆಸ್ಸಿನ ದಿವಂಗತ ರಾಜೀವ್ ತ್ಯಾಗಿಯನ್ನು ‘ಖೋಟಾ ಹಿಂದು’ ಎಂದು ಮೂದಲಿಸಿದ್ದಾರೆ.

ಪೌರ ತಿದ್ದುಪಡಿ ಕಾಯಿದೆಯ ವಿಚಾರ ಬಂದಾಗ ಪ್ರಧಾನಿಗಳು ಯಾರಿಗೆ ಮತ ನೀಡುವ ಅಧಿಕಾರ ಇರಬೇಕೆಂಬುದನ್ನು ಪ್ರಸ್ತಾಪಿಸಿ 130 ಕೋಟಿ ಭಾರತೀಯರಿಗೆ ಈ ಕಾಯ್ದೆ ಬಾಧಿಸುವುದಿಲ್ಲ ಎಂದು ಹೇಳಿದ್ದಾರೆ.

CAA ಭಾರತೀಯರಿಗೆ ಸಮಸ್ಯೆಯಾಗುವುದಿಲ್ಲವಾದರೆ ಇದನ್ನು ವಿರೋಧಿಸಲು ಸಾವಿರಾರು ಮಂದಿ ಪ್ರತಿಭಟನೆ ನಡೆಸಲು ಬೀದಿಗಿಳಿದದ್ದೂ, ಕೆಲವರು ಈ ಸಂದರ್ಭದಲ್ಲಿ ಸತ್ತದ್ದೂ ಯಾವ ಕಾರಣಕ್ಕೆ?

photo courtesy: India Today

ಕೆಲವು ಜನ ಸಿಎಎಯನ್ನು ಎನ್‍ಆರ್‌ಸಿ ತಳಕು ಹಾಕುತ್ತಾರೆ. ಅವರೆಲ್ಲ ಸಿಎಎ ಮತ್ತು ಎನ್‍ಆರ್‌ಸಿ, ಇವುಗಳ deadly combination ಭಾರತೀಯ ಮುಸ್ಲಿಮರ ಪೌರತ್ವ ಹಕ್ಕಿಗೆ ಧಕ್ಕೆ ತರುವುದೆಂದು ಭಾವಿಸುತ್ತಾರೆ. ನಮ್ಮ ಪ್ರಧಾನಮಂತ್ರಿ NRC ಬಗೆಗೆ ಪಾರ್ಲಿಮೆಂಟಿನಲ್ಲೇ ಆಗಲಿ ಮಂತ್ರಿಮಂಡಲ ಸಭೆಯಲ್ಲಾಗಲಿ ಚರ್ಚೆಯಾಗಿಲ್ಲ ಎಂದು ಹೇಳುತ್ತಾರೆ. ಆದರೆ ಅವರ ಬಲಗೈಭಂಟ ಗೃಹಸಚಿವರು ‘ಯಾವ ಮಸೂದೆಯನ್ನು ಮೊದಲು ರಚಿಸಲಾಯಿತು ಯಾವುದನ್ನು ಆ ನಂತರ ರಚಿಸಲಾಯಿತು ಎಂದು ಮೊದಲು ತಿಳಿದುಕೊಳ್ಳಿ. ಮೊದಲು CAB ರಚಿತವಾದದ್ದು ಆನಂತರ NRC’ ಎಂದಿದ್ದಾರೆ.

ಕೊರೋನಾ ವಿಪತ್ತು ಆರಂಭವಾಗುವುದಕ್ಕೆ ಮೊದಲೇ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಅಂದಿನಿಂದಲೇ ಪ್ರಧಾನಿಗಳ crisis management ಅನ್ನು ನಿರ್ವಹಿಸುವ ರೀತಿಯಿಂದ ಆರ್ಥಿಕತೆ ಎಲ್ಲರನ್ನೂ ಸಮನಾಗಿ ಬಾಧಿಸುತ್ತಿದೆ. ಇದು ವಿಕಾಸದ ಶುಭಸೂಚನೆ ಅಲ್ಲದಿರಬಹುದು ಆದರೆ ಇದಕ್ಕೆ ‘ಸಬ್ಕಾ’ ಅನ್ವಯಿಸುವುದು.

ವಿಕಾಸದ ಮಾತು ನನ್ನನ್ನು ಕಾಶ್ಮೀರದ ಸಮಸ್ಯೆಗಳ ಕಡೆಗೆ ನೋಡುವಂತೆ ಮಾಡಿದೆ. ಆರ್ಟಿಕಲ್ 370 ಮತ್ತು 35ಎ ಮಿತಿಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಭಯೋತ್ಪಾದನೆ ಮತ್ತು ಪ್ರತ್ಯೇಕತೆಗೆ ಅವಕಾಶ ಮಾಡಿಕೊಟ್ಟಿತ್ತು. ಈಗ 370 ಮತ್ತು 35ಎ ತೆಗೆದು ಹಾಕಿದ ಮೇಲೆ ಭ್ರಷ್ಟಾಚಾರ ಮತ್ತು ಪ್ರತ್ಯೇಕತಾಭಾವನೆ ತೊಲಗಿದೆ. ಅಲ್ಲದೆ ಈವರೆಗೆ ಕಾಶ್ಮೀರ ಅಭಿವೃದ್ಧಿಯನ್ನೇ ಕಂಡಿರಲಿಲ್ಲ. ಈಗ ಅಭಿವೃದ್ಧಿ ಶೀಘ್ರಗತಿಯಲ್ಲಿ ಆಗುತ್ತಿದೆ. ಆದರೆ ಕೆಲ professional pessimistಗಳು ಹೇಳುತ್ತಾರೆ 2019ರ ಆಗಸ್ಟ್‍ನಿಂದ ಕಾಶ್ಮೀರದ ಹಣಕಾಸಿನ ಪರಿಸ್ಥಿತಿ ಶೇ50ರಷ್ಟು ಕುಸಿದಿದೆ ಎಂದು. ಈ ಮಾತನ್ನು ನಂಬುವುದಕ್ಕೇ ಆಗುವುದಿಲ್ಲ ಎನ್ನುತ್ತಾರೆ ಮೋದಿ.

ಮತ್ತೊಮ್ಮೆ ನಾನು ಹೇಳಬಯಸುತ್ತೇನೆ: ನಾನು ಪ್ರಧಾನಿಯವರ ಮಾತುಗಳನ್ನು ನಂಬುತ್ತೇನೆ, ಪ್ರಧಾನಿಯವರನ್ನು ನಂಬುತ್ತೇನೆ.

ರಾಜೀವ್ ತ್ಯಾಗಿಯ ಆತ್ಮಕ್ಕೆ ಶಾಂತಿ ದೊರೆಯಲಿ. ನಮ್ಮ ಹೋರಾಟ ಮಾತ್ರ ಮುಂದುವರಿಯಲಿದೆ. ನನ್ನ ಅಭಿಪ್ರಾಯಗಳು ನನ್ನ ಸ್ವಂತದ್ದು ಎನ್ನುತ್ತಾರೆ ಲೇಖಕ ಸಲ್ಮಾನ್ ಅನೀಸ್ ಸೋಜ್. ನಮ್ಮೆಲ್ಲರದೂ ಇದೇ ಅಭಿಪ್ರಾಯ ಎಂದು ನಾವೂ ಹೇಳೋಣವೇ?


ಇದನ್ನು ಓದಿ: ಇದು ಕೆ.ಎಲ್.‌ ಅಶೋಕ್‌ರವರ ವೈಯಕ್ತಿಕ ಸಮಸ್ಯೆ ಅಲ್ಲ. ಸುಮ್ಮನಿದ್ದರೆ ನಾಳೆ ಎಲ್ಲರಿಗೂ ಹೀಗಾಗುವುದರಲ್ಲಿ ಸಂಶಯವಿಲ್ಲ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಎಚ್.ಎಸ್ ದೊರೆಸ್ವಾಮಿ
+ posts

LEAVE A REPLY

Please enter your comment!
Please enter your name here