Homeಅಂಕಣಗಳುಮನೋರೋಗಕ್ಕೆ ಚಿಕಿತ್ಸೆಯುಂಟು: ಅದನ್ನು ಗುರುತಿಸಿದರೆ ಮಾತ್ರ : ಯೋಗೇಶ್ ಮಾಸ್ಟರ್

ಮನೋರೋಗಕ್ಕೆ ಚಿಕಿತ್ಸೆಯುಂಟು: ಅದನ್ನು ಗುರುತಿಸಿದರೆ ಮಾತ್ರ : ಯೋಗೇಶ್ ಮಾಸ್ಟರ್

ತನ್ನಲ್ಲಿ ಮತ್ತು ಇತರರಲ್ಲಿ ರೋಗಲಕ್ಷಣಗಳನ್ನು ಕಂಡುಕೊಂಡು, ಎಚ್ಚೆತ್ತುಕೊಂಡು ಮಾನಸಿಕವಾಗಿ ಎಲ್ಲರೂ ಗುಣಮುಖರಾಗಲಿ ಎಂಬುದೇ ಸಿ ಆರ್ ಚಂದ್ರಶೇಖರ್ ಅವರ ಈ ಕೃತಿಯ ಉದ್ದೇಶ.

- Advertisement -
- Advertisement -

ಮನೋರೋಗ ಅಂದರೆ ಯಾವುದು? ಮನೋರೋಗಿಗಳು ಎಂದರೆ ಯಾರು?

ಯಾರನ್ನೂ ಸೇರದೇ, ತಮ್ಮ ಪಾಡಿಗೆ ತಾವು ಏನೇನೋ ಮಾತಾಡಿಕೊಂಡು, ಯಾವುದೋ ಮೂಲೆಯಲ್ಲಿ, ಕತ್ತಲೆಯಲ್ಲಿ, ಯಾರಿಗೂ, ಯಾವುದಕ್ಕೂ ಸ್ಪಂದಿಸದೇ, ಅಥವಾ ಎಲ್ಲಕ್ಕೂ ಭಯಂಕರವಾಗಿ ಪ್ರತಿಕ್ರಿಯಿಸುತ್ತಾ ಇರುವವರೋ ಅಥವಾ ಬಟ್ಟೆ ಹರಿದುಕೊಂಡು, ಯಾರನ್ನೂ ಗುರುತಿಸದೇ, ಯಾರೆಂದರೆ ಅವರಿಗೆ ಕಲ್ಲುಗಳಲ್ಲಿ ಹೊಡೆಯುತ್ತಾ ಇರುವವರು ಎಂದೇನಾದರೂ ಅಂದುಕೊಂಡಿದ್ದರೆ ಅವರ ಬಗ್ಗೆ ನನಗೆ ತೀವ್ರ ಅನುಕಂಪವಿದೆ.

ತಲೆಗೆ, ಕಣ್ಣಿಗೆ, ಹೊಟ್ಟೆಗೆ, ಬೆನ್ನಿಗೆ, ಚರ್ಮಕ್ಕೆ, ಕೈ ಕಾಲಿಗೆ ನೋವೋ, ಬಾವೋ, ತುರಿಕೆಯೋ, ಊತವೋ, ಉರಿಯೋ ಎಂತದ್ದೋ ಬರುತ್ತದೆ. ಯಾವುದೇ ಕಾರಣದಿಂದ ಸಮಸ್ಯೆ ಬಂದು ಅದು ಆ ಹೊತ್ತಿಗೆ, ಒಂದು ಮಟ್ಟಕ್ಕೆ ಕಾಣಿಸಿಕೊಳ್ಳುವುದು. ಅದಕ್ಕೆ ಬೇಕಾದ ಔಷಧವನ್ನು ತೆಗೆದುಕೊಳ್ಳುತ್ತೇವೆ. ನಿವಾರಿಸಿಕೊಳ್ಳುತ್ತೇವೆ. ನೋವು, ಬಾವು, ಊತ, ಉರಿ ಹೋಯಿತೆಂದರೆ ಸಮಸ್ಯೆ ಹೋಯಿತೆಂದರ್ಥ. ಒಂದು ವೇಳೆ ಯಾವುದೇ ಒಂದು ಸಮಸ್ಯೆ ಬಂದು, ಸಣ್ಣ ಪುಟ್ಟ ಮದ್ದುಗಳಿಂದ, ಉಪಚಾರಗಳಿಂದ ಹೋಗದೇ ಒಂದೇ ಸಮನೆ ಕಾಡುತ್ತಿದ್ದರೆ ಅದಕ್ಕೆ ರೋಗ ಎನ್ನಬಹುದೇನೋ. ಅದಕ್ಕೂ ದೀರ್ಘಕಾಲದ ಉಪಚಾರ, ನಿಯಮಿತ ಮದ್ದಿನ ಸೇವನೆ ಇರುತ್ತದೆ. ಒಟ್ಟಾರೆ ದೇಹಕ್ಕೆ ಏನಾದರೂ ಆದರೆ ಕಾಣುವಂತಹ ಲಕ್ಷಣಗಳಿಂದ ಸಮಸ್ಯೆಯನ್ನೋ, ರೋಗವನ್ನೋ ಪತ್ತೆ ಹಚ್ಚಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ಮಾಡುತ್ತೇವೆ ಅಥವಾ ಮಾಡಿಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿಗೂ ಆಗಾಗ ಸಮಸ್ಯೆ ಬರುತ್ತದೆ. ಆ ಸಮಸ್ಯೆಯನ್ನು, ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅದು ರೋಗವಾಗಿ ಮುಂದುವರಿಯುತ್ತದೆ. ವಿಪರ್ಯಾಸವೆಂದರೆ ತಮಗೆ ತಲೆನೋವು ಇದೆ ಎಂದು ಒಪ್ಪಿಕೊಂಡಂತೆ, ಸಕ್ಕರೆ ಖಾಯಿಲೆ ಅಥವಾ ರಕ್ತದೊತ್ತಡ ಇದೆ ಎಂದು ಒಪ್ಪಿಕೊಂಡಂತೆ ಮನೋರೋಗವಿದೆ ಎಂದು ಒಪ್ಪಿಕೊಳ್ಳಲು ಸಾಮಾನ್ಯವಾಗಿ ತಯಾರಿರುವುದಿಲ್ಲ. ಅದೇ ಸಮಸ್ಯೆ.

ಮೂಡುವ ಭಾವನೆಗಳಿಂದಾಗಿ, ಮಾಡುವ ಆಲೋಚನೆಗಳಿಂದಾಗಿ, ತೋರುವ ವರ್ತನೆಗಳಿಂದಾಗಿ, ನೀಡುವ ಪ್ರತಿಕ್ರಿಯೆಗಳಿಂದಾಗಿ, ಸ್ಪಂದಿಸುವ ರೀತಿಗಳಿಂದಾಗಿ ರೋಗಗ್ರಸ್ತ ಮನಸ್ಥಿತಿಯು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಅದನ್ನು ಆ ಹೊತ್ತಿನ ಸಂಗತಿ ಅಥವಾ ಸನ್ನಿವೇಶಕ್ಕೆ ತಮ್ಮ ಪ್ರತಿಕ್ರಿಯೆ ಅಥವಾ ತಮ್ಮ ಮೇಲಾಗಿರುವ ಪ್ರಭಾವ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಅದು ಮತ್ತೂ ದೊಡ್ಡ ಸಮಸ್ಯೆ. ಹೀಗಾಗಿ ತಾವೇ ತಮ್ಮ ಮನೋರೋಗವನ್ನು ಪತ್ತೆ ಹಚ್ಚಿಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರು ಪತ್ತೆ ಹಚ್ಚಿದರೆ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಮಾಜದಲ್ಲಿ ಮನೋರೋಗಿಗಳು ತುಂಬಾ ಸಹಜವಾಗಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ಅವರೂ ಇರ್ತಾರೆ. ಅವರಿರೋದೇ ಹಾಗೆ ಅಂತ ಉಳಿದವರೂ ಇರ್ತಾರೆ.

photo courtesy: Amazon

ತನ್ನನ್ನು ತಾನು ಅರಿಯುವಂತಹ, ತನ್ನೊಳಗಿನ ಮತ್ತು ವಿಶ್ವದ ಆಂತರ್ಯದ ರಹಸ್ಯವನ್ನು ತಿಳಿಯುವಂತಹ ಆಧ್ಯಾತ್ಮದಲ್ಲಿ ಆತ್ಮ ಸಾಕ್ಷಾತ್ಕಾರ ಅತ್ಯಂತ ಮಹತ್ತರವಾದದ್ದು ಮತ್ತು ಉನ್ನತವಾದದ್ದು. ಹಾಗೆಯೇ ಯಾರೊಬ್ಬರೂ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ತನ್ನನ್ನು ತಾನು ಮಾನಸಿಕ ನೆಲೆಯಿಂದ ತಿಳಿಯುವುದು ಮತ್ತು ಸಮಸ್ಯೆಗಳಿದ್ದಲ್ಲಿ ಪತ್ತೆ ಹಚ್ಚುವುದು, ರೋಗವಾಗಿದ್ದಲ್ಲಿ ಅದನ್ನು ಗುಣಪಡಿಸಿಕೊಳ್ಳೋದು ಬಹಳ ಮುಖ್ಯವಾದದ್ದು. ಇದು ಆಧ್ಯಾತ್ಮಿಕ ಸಾಧನೆಗಿಂತಲೂ ಬಹಳ ಹೆಚ್ಚಿನದು ಎಂದು ನನ್ನ ಅಭಿಪ್ರಾಯ. ತಾನೂ, ತನ್ನೊಂದಿಗೆ ಇತರರು, ಕುಟುಂಬ, ಸಮಾಜ, ದೇಶ ಎಲ್ಲವೂ ಆರೋಗ್ಯವಾಗಿರಲು ಸಾಧ್ಯವಾಗುವುದು ಇದರಿಂದ ಎಂದೇ ನನ್ನ ಅಂಬೋಣ.

ಯಾವುದೇ ಒಬ್ಬ ವ್ಯಕ್ತಿಯು ತನ್ನನ್ನು ತಾನು ಮತ್ತು ಇತರರನ್ನು ಅವರವರ ವರ್ತನೆಗಳ, ಭಾವನೆಗಳ, ವಿಚಾರಗಳ, ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಮನೋವೈಜ್ಞಾನಿಕವಾಗಿ ಅರಿಯುತ್ತಾನೋ ಆಗ ಅವನಿಗೆ ಸಮಸ್ಯೆಗಳನ್ನು, ಸಂಘರ್ಷಗಳ ಕಾರಣಗಳನ್ನು, ಸಂಬಂಧಗಳಲ್ಲಿನ ಬಿರುಕುಗಳನ್ನು, ಖಿನ್ನತೆಗೆ ಮೂಲಗಳನ್ನು, ಭಿನ್ನ ಮನಸ್ಥಿತಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಗ್ರಹ ತೋರುವ ಎಡೆಯಲ್ಲಿ ಅನುಕಂಪ ತೋರಲು ಸಾಧ್ಯವಾಗುತ್ತದೆ. ದ್ವೇಷ ಸಾಧಿಸುವ ಬದಲು ಪ್ರೀತಿಸಲು ಸಾಧ್ಯವಾಗುತ್ತದೆ. ದೂರುವ ಬದಲು ತಿದ್ದಲು ಸಾಧ್ಯವಾಗುತ್ತದೆ. ದೂಷಿಸುವ ಬದಲು ಅರಿಯಲು ಸಾಧ್ಯವಾಗುತ್ತದೆ. ವ್ಯಕ್ತಿಯೊಬ್ಬನ ಮಾತಿಗೆ, ಕೃತ್ಯಕ್ಕೆ ಆತನನ್ನೇ ಎತ್ತಿ ಎಸೆಯುವ ಬದಲು, ಅವನ ಯಾವುದೋ ದೋಷಪೂರಿತ ಗುಣದ ಕಣವನ್ನು ಹೆಕ್ಕಿ ಎಸೆಯಲು ಸಾಧ್ಯವಾಗುತ್ತದೆ. ಮೆತ್ತಿಕೊಂಡಿರುವ ಮಲಿನವನ್ನು ತೊಳೆಯಲು ಸಾಧ್ಯವಾಗುತ್ತದೆ. ಕಾಟ ಕೊಡುವ ಅವರ್ಯಾರದೋ ಹಟಕ್ಕೆ, ಮುಂದುವರಿಯಲು ಬಿಡದ ಇವರ್ಯಾರದೋ ಮೌಢ್ಯಕ್ಕೆ, ಎಷ್ಟೇ ತಿಳಿಯಾದ ತಿಳುವಳಿಕೆಯನ್ನು ನೀಡಿದರೂ ತಾವೆಂದಿಗೂ ಬಿಡದ ತಮ್ಮ ವಾದಕ್ಕೆ ಕಾರಣಗಳು ತಿಳಿಯುತ್ತವೆ.

ಹೀಗೆ ಮನೋವಿಜ್ಞಾನವು ವ್ಯಕ್ತಿಯ ಮತ್ತು ಸಮಾಜದ ಹೂರಣವನ್ನು ಅರಿವಿಗೆ ತರುತ್ತಾ ವ್ಯಕ್ತಿಗತವಾದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಕೃತಿಯನ್ನು ಓದುವಾಗ ಯಾವುದೇ ಸಮಾಜದ ಮಟ್ಟಿಗಾದರೂ ರಾಕೆಟ್ ವಿಜ್ಞಾನವು ಮನೋವಿಜ್ಞಾನದ ಅಗತ್ಯದ ಮುಂದೆ ಮೊದಲನೆಯ ಪ್ರಾಧಾನ್ಯತೆ ಆಗಲಾರದು ಎಂಬುದು ನಾನು ಗ್ರಹಿಸಿದ್ದು.

ಇರಲಿ, ತನ್ನಲ್ಲಿ ಮತ್ತು ಇತರರಲ್ಲಿ ರೋಗಲಕ್ಷಣಗಳನ್ನು ಕಂಡುಕೊಂಡು, ಎಚ್ಚೆತ್ತುಕೊಂಡು ಮಾನಸಿಕವಾಗಿ ಎಲ್ಲರೂ ಗುಣಮುಖರಾಗಲಿ ಎಂಬುದೇ ಸಿ ಆರ್ ಚಂದ್ರಶೇಖರ್ ಅವರ ಈ ಕೃತಿಯ ಉದ್ದೇಶ.

ಮನೋರೋಗಕ್ಕೆ ನಾನಾ ಕಾರಣಗಳಿದ್ದಂತೆ, ನಾನಾ ಆಯಾಮಗಳೂ, ಮುಖಗಳೂ, ರೀತಿಗಳೂ ಇವೆ. ಯಾವುದೇ ಆದರೂ ಗುರುತು ಹಚ್ಚಲು ಸಾಕಷ್ಟು ಸಾಧ್ಯವಿದೆ. ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ.

ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯ ಮಾತು ತಿಳಿವಿನ ಕಾಲ ಪಕ್ವವಾಗಿಲ್ಲದಿದ್ದಾಗ ಹುಟ್ಟಿದೆ. ಆದರೆ ಇಂದು ಹಾಗಿಲ್ಲ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬುದೇನೂ ನಿಜವಲ್ಲ. ಆಯಾ ಕಾಲಘಟ್ಟದಲ್ಲಿ, ಆಯಾ ವ್ಯವಸ್ಥೆಗಳಿಗೆ ಅನುಗುಣವಾಗಿ ಹುಟ್ಟಿರುವ ಗಾದೆಗಳು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಇರಲಿ, ಸಧ್ಯಕ್ಕೆ ಇಷ್ಟು ನಂಬೋಣ. ಯಾವುದೇ ಮನೋರೋಗಕ್ಕೆ ಮದ್ದಿದೆ. ಆದರೆ ಗುರುತಿಸಬೇಕು, ಒಪ್ಪಿಕೊಳ್ಳಬೇಕು ಮತ್ತು ಚಿಕಿತ್ಸೆ ನೀಡಬೇಕು. ವ್ಯಕ್ತಿಗತವಾಗಿ ಒಬ್ಬ ಮಾನಸಿಕವಾಗಿ ಆರೋಗ್ಯವಂತನಾದರೆ ಅವನು ಆರೋಗ್ಯಕರವಾದಂತಹ ಪರಿಸರ ನಿರ್ಮಿಸುವುದರಲ್ಲಿ, ಆರೋಗ್ಯಕರವಾದಂತಹ ವಾತಾವರಣವನ್ನು ಮೂಡಿಸುವುದರಲ್ಲಿ ತನ್ನ ಪಾತ್ರ ನಿರ್ವಹಿಸುತ್ತಾನೆ. ತಾನೂ ನೆಮ್ಮದಿಯಾಗಿ ಬಾಳುತ್ತಾನೆ, ಇತರರನ್ನೂ ಬಾಳಗೊಡುತ್ತಾನೆ. ಈ ದಿಕ್ಕಿನಲ್ಲಿ ಈ ಪುಸ್ತಕವೂ ಸೇರಿದಂತೆ ಡಾ ಸಿ ಆರ್ ಚಂದ್ರಶೇಖರ್ ಅವರ ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ನವ ಕರ್ನಾಟಕ ಪ್ರಕಾಶನದಲ್ಲಿ ದೊರಕುತ್ತದೆ. ಕನ್ನಡದಲ್ಲಿ ಲಭ್ಯವಿರುವ ಈ ಪುಸ್ತಕಗಳು ನಮ್ಮ ಮಾನಸಿಕ ಸಮಸ್ಯೆಗಳನ್ನು ಗುರುತಿಸಿಕೊಳ್ಳಲು ಮತ್ತು ಪರಿಹರಿಸಿಕೊಳ್ಳಲು ನೆರವಾಗುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಂತ ಅರಿವಿನಿಂದ ಒಪ್ಪಿಕೊಳ್ಳುವುದೇ ಅಲ್ಲವೇ ನಮ್ಮ ಬಹು ದೊಡ್ಡ ಸಮಸ್ಯೆ!


ಇದನ್ನು ಓದಿ: ರೋಹಿಂಗ್ಯಾರನ್ನು ಕಂಡಲ್ಲಿ ಶೂಟ್ ಮಾಡಲು ಆದೇಶಿಸಲಾಗಿತ್ತು: ತಪ್ಪೊಪ್ಪಿಕೊಂಡ ಸೈನಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...