Homeಅಂಕಣಗಳುಕೃಷಿ ಕಥನಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- "ಬೆಳಕಿನ ಬೇಸಾಯ"

ಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- “ಬೆಳಕಿನ ಬೇಸಾಯ”

- Advertisement -
- Advertisement -

ಕೃಷಿ ಲೋಕದ ಪಡಿಪಾಟಲಿನಿಂದ ಹೊರಬರಲು ಪರ್ಯಾಯಗಳ ಗುಚ್ಛಗಳನ್ನು ರೈತಾಪಿಗೆ ನೀಡುತ್ತಲೇ ಬಂದಿರುವ ಪಥ ದರ್ಶಕರಿದ್ದಾರೆ. ಫುಕೋಕಾ, ಬಿಲ್ ಮಾಲಿಸನ್, ಧಾಬೋಲ್ಕರ್ ಮುಂತಾದವರು ವಿಶಿಷ್ಟ ತಂತ್ರೋಪಾಯಗಳ ತತ್ವಗಳನ್ನು ಮುಂದಿಟ್ಟರೆ, ಭಾಸ್ಕರ ಸಾವೆ, ನಾರಾಯಣ ರೆಡ್ಡಿಯಂಥವರು ಇವುಗಳನ್ನೆಲ್ಲಾ ಅಳವಡಿಸಿಕೊಳ್ಳುವ ಮ್ಯಾಪ್ ಒಂದನ್ನು ಮುಂದಿಟ್ಟರು.

ಸುಸ್ಥಿರ ಕೃಷಿಯ ಬಗೆಗಿನ ಈ ಕಾಳಜಿಗಳನ್ನು ಸ್ಥೂಲವಾಗಿ ಹೀಗೆ ಹಿಡಿದಿಡಬಹುದು.

1. ಮಣ್ಣಿನ ಗುಣಮಟ್ಟದ ಅವನತಿ

2. ನೀರಿನ ದುರುಪಯೋಗ ಅಥವಾ ಜಾಣ ಉಪಯೋಗದ ಅವಜ್ಞೆ

3. ಬೆಳೆಗಳ ಆಯ್ಕೆ ಮತ್ತು ಸಾಂದ್ರತೆಯ ಗೊಂದಲ

4. ಪೋಷಕಾಂಶಗಳ ಮೂರಾಬಟ್ಟೆ ಬಳಕೆ

5. ರೋಗ/ಕೀಟಬಾಧೆಗೆ ಅಸಡ್ಡಾಳ ಕೀಟನಾಶಕ ಬಳಕೆ

ಇವುಗಳ ಇತಿಹಾಸ ನೋಡಿದರೆ ಇವು ನಮ್ಮನ್ನು ಅರ್ಧ ಶತಮಾನದ ಹಿಂದೆ ಜರುಗಿದ ಪಲ್ಲಟಗಳ ಮೂಲಕ್ಕೆ ಒಯ್ಯುತ್ತವೆ. ಈ ಪಲ್ಲಟ ತಂದ ಆತ್ಯಂತಿಕ ಪರಿಣಾಮಗಳ ಬಗ್ಗೆ ಸರಕಾರ ದೊಡ್ಡ ಮಟ್ಟದಲ್ಲಿ ಸ್ಪಂದಿಸಿಲ್ಲ. ಆದರೆ ಸೂಕ್ಷ್ಮ ವೈಜ್ಞಾನಿಕ ಧೋರಣೆಯ ಹಲವಾರು ರೈತರು ಪರ್ಯಾಯಗಳನ್ನು ಮುಂದಿಟ್ಟಿದ್ದಾರೆ.

ಇವುಗಳಲ್ಲಿ ಬಹು ಮುಖ್ಯವಾದದ್ದು ಪ್ರಸಕ್ತ ಸರಕಾರ ಪ್ರೋತ್ಸಾಹಿಸುತ್ತಿರುವ ರಾಸಾಯನಿಕ ಬಳಕೆ ಮತ್ತು ಏಕಬೆಳೆಯ ವಿರುದ್ಧ ಪ್ರತಿಕ್ರಿಯಿಸಿದ ಚಿಂತನೆಗಳು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ರೈತರ ಹಿಡುವಳಿ ವಿಘಟನೆಗೊಂಡು ಸರಾಸರಿ ಎರಡು ಎಕರೆಗೆ ಬಂದು ನಿಂತಿದೆ. ಬಹುತೇಕ ಸಣ್ಣ ರೈತರು ಅರೆಕಾಲಿಕ ಕೃಷಿ ಕೂಲಿಗಳಾಗಿ ಬದುಕುತ್ತಿದ್ದಾರೆ. ಅರ್ಥಾತ್, ಕೃಷಿ ಭೂಮಿ ಅವರಿಗೆ ಸುಭದ್ರ ಜೀವನೋಪಾಯ ಒದಗಿಸುತ್ತಿಲ್ಲ.

ಹಿಂದೆಯೂ ಸಣ್ಣ ರೈತರಿಗೆ ಭೂಮಿಯೊಂದೇ ಏಕೈಕ ಆದಾಯ ಮೂಲವಾಗಿರಲಿಲ್ಲ. ಆಗಲೂ ಅದು ಆದಾಯದ ಅರ್ಧಾಂಶ ಮಾತ್ರ ಪೂರೈಸುತ್ತಿತ್ತು. ಆದರೆ ಮನೆಗೆ ಬೇಕಾದ ದವಸ ಧಾನ್ಯ ಬೆಳಕೊಂಡು ಒಂದು ಮಟ್ಟದ ಪ್ರಾಥಮಿಕ ಭದ್ರತೆಯನ್ನು ಪಡೆಯುವುದು ಬೇಸಾಯದ ಪ್ರಮುಖ ಗುರಿಯಾಗಿತ್ತು. ಈಗ ಈ ಪ್ರಾಥಮಿಕ ಭದ್ರತೆಯೂ ಮರೀಚಿಕೆಯಾಗಿದೆ.

ರೈತರಿಗೆ ಯಾವುದೇ ಒಳಸುರಿಯ ಬಳಕೆಯ ವೈಜ್ಞಾನಿಕ ತತ್ವಗಳ ಅರಿವು ಮೂಡಿಸದೇ ಇದ್ದದ್ದು ಹಸಿರು ಕ್ರಾಂತಿ ಮಾಡಿದ ಘೋರ ಅಪರಾಧ. ಕೃಷಿಯೆಂಬುದು ಅದ್ಭುತವಾದ ವೈಜ್ಞಾನಿಕ ಪ್ರಯೋಗ. ಪ್ರತಿ ಹಂಗಾಮು, ಪ್ರತಿ ವರ್ಷ ಬದಲಾಗಬಹುದಾದ ಸನ್ನಿವೇಶಗಳಿಗೆ ವೈಜ್ಞಾನಿಕ ಅರಿವಿನೊಂದಿಗೆ ಪ್ರತಿಕ್ರಿಯಿಸುವ ಕೌಶಲ್ಯ ಅದು.

ನಮ್ಮ ವಾತಾವರಣ ಹೇಗಿದೆ? ಅದರ ಮೂಲ ಪರಿಕರಗಳ ಕೆಲಸವೇನು? ಸಸ್ಯವೊಂದು ಏನೇನು ಪೋಷಕಾಂಶಗಳನ್ನು ಯಾಕೆ ಮತ್ತು ಹೇಗೆ ಬಳಸುತ್ತದೆ? ಸಸ್ಯವೊಂದರಲ್ಲಿ ಆಗುವ ಹಂತಹಂತದ ಬದಲಾವಣೆಗಳೇನು? ಮಣ್ಣಿನಲ್ಲಿ ಯಾವ ರೀತಿಯ ಪ್ರಕ್ರಿಯೆ ನಡೆಯುತ್ತದೆ? ಇವೆಲ್ಲಾ ರೋಮಾಂಚನಕಾರಿ ತಿಳಿವಳಿಕೆ. ಇವುಗಳ ಮೂಲ ವಿವರಗಳನ್ನು ಮನದಟ್ಟು ಮಾಡುವುದು ರಾಕೆಟ್ ಸಯನ್ಸ್ ಅಲ್ಲ. ಈ ವಿವರಗಳನ್ನು ಕರಗತ ಮಾಡಿಕೊಂಡಂತೆಯೇ, ರೈತನೊಬ್ಬನ ಗಮನಿಸುವ ಶಕ್ತಿ ಹೆಚ್ಚುತ್ತದೆ. ಗಮನಿಸುವ ಶಕ್ತಿ ಹೆಚ್ಚಿದಷ್ಟೂ ಇನ್ನೂ ಆಳವಾದ ಸಂಗತಿಗಳು ಅರಿವಿಗೆ ಬರುತ್ತವೆ. Observation power ಹೆಚ್ಚಿದಷ್ಟೂ ರೈತನೊಬ್ಬ ವಿಜ್ಞಾನಿಯೂ ಆಗುತ್ತಾನೆ, ವೃತ್ತಿಯ ಕುಶಲಿಯೂ ಆಗುತ್ತಾನೆ. ಅದಕ್ಕೇ “ರೈತನ ಹೆಜ್ಜೆ ಗುರುತೇ ಅತ್ಯುತ್ತಮ ಗೊಬ್ಬರ” ಎಂಬ ಚೈನಾದ ಗಾದೆ ಅಷ್ಟು ಮುಖ್ಯವೆನಿಸುವುದು.

ಇವ್ಯಾವುದೂ ಅರಿವಾಗಿ ದಕ್ಕದೇ, ಕೊಟ್ಟದ್ದು “ಎರಚು, ಸಿಂಪಡಿಸು, ಬೆಳೆ..!” ಎಂಬ ಆಜ್ಞೆಯನ್ನು ಸರಕಾರ ಮಾಡುತ್ತಾ ಬಂದು ರೈತರನ್ನು ಹೇಳಿದ್ದನ್ನು ಅನುಷ್ಠಾನ ಮಾಡುವ ಕುರಿಗಳನ್ನಾಗಿಸಿತು. ಹೀಗೆ ನೀಡಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ಏನಾದರೂ ಹೆಚ್ಚು ಕಮ್ಮಿಯಾದರೆ, ಸರಕಾರ ಈ ಅನಾಹುತದ ಜವಾಬ್ದಾರಿ ಹೊರಲು ಎಂದೂ ತಯಾರಿರಲಿಲ್ಲ. ಇದು ದೇವಸ್ಥಾನಗಳಲ್ಲಿ ಪುರೋಹಿತರು ಹೇಳಿದಂತೆ ಅಂಗ ಭಂಗಿ ಪ್ರದರ್ಶಿಸಿ ಪೂಜೆ ಮಾಡಿಸಿದ ಹಾಗೆ! ಇಂತಹ ಅಧ್ವಾನಗಳ ಕ್ರೋಢೀಕೃತ ಪರಿಣಾಮವೇ ಈಗ ನಾವು ನೋಡುತ್ತಿರುವ ಗ್ರಾಮ ಭಾರತ.

ನೀರಿಲ್ಲ, ನೀರು ಹೀರಿಟ್ಟುಕೊಳ್ಳುವ ಶಕ್ತಿ ಭೂಮಿಗಿಲ್ಲ. ಸ್ವಂತ ಬೀಜವಿಲ್ಲ; ಬಳಸುವ ಬೀಜದ ಬಗ್ಗೆ ಗ್ಯಾರಂಟಿ ಇಲ್ಲ. ಗೊಬ್ಬರವಿಲ್ಲ; ಬಳಸುವ ಗೊಬ್ಬರದ ವೈಪರೀತ್ಯ ನಿಯಂತ್ರಣ ಗೊತ್ತಿಲ್ಲ. ರೋಗ ಯಾಕೆ ಬಂತು/ಬರುತ್ತೆ ಅಂತ ಗೊತ್ತಿಲ್ಲ; ಕೀಟನಾಶಕ ಹೊಡೆಯುವುದಷ್ಟೇ ಗೊತ್ತು. ಆದರೂ ರೈತರಿಗೆ ಹೇಳುವ ಪ್ರಯತ್ನ ಆಗಲೇಬೇಕಲ್ಲ; ಊರಿಗೆ, ಜಿಲ್ಲೆಗೆ, ರಾಜ್ಯಕ್ಕೆ ಬೋಧೆ ಮಾಡುವುದು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಆದರೆ ಆಸಕ್ತಿಯುಳ್ಳ ರೈತನಿಗೆ ಹೊರದಾರಿ ತಿಳಿಸುವ ಕೆಲಸ ಮಾತ್ರ ಪ್ರಮುಖವಾದದ್ದು.

ಇದನ್ನೂ ಓದಿ: ಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

ಅವಿನಾಶ್ ಅವರ ’ಬೆಳಕಿನ ಬೇಸಾಯ’ ಈ ಎಲ್ಲವನ್ನೂ ತಾಳ್ಮೆಯಿಂದ ಹೇಳುವ ಪುಸ್ತಕ. ಓದಿ ಅರಿತದ್ದನ್ನು, ಮಾಡಿ ತಿಳಿದದ್ದನ್ನು ಅನುಭವದ ಆಧಾರದ ಮೇಲೆ ಅವರು ಪ್ರಸ್ತುತಪಡಿಸುತ್ತಾರೆ.

ಈ ಪುಸ್ತಕದಲ್ಲಿ ಕೃಷಿಯ ವೈಜ್ಞಾನಿಕ ಮೂಲ ವಿಷಯಗಳ ವಿವರಣೆ ಇದೆ. ಮೊದಲ ನಾಲ್ಕು ಅಧ್ಯಾಯಗಳಲ್ಲಿ ಬೆಳಕು, ಭೂಮಿ, ಜೀವಾಣು ಮತ್ತು ಜೀವ ಚೈತನ್ಯ ಪೂರೈಸಲು ಬೇಕಾದ ತಯಾರಿಗಳ ಸ್ಥೂಲ ವಿವರಣೆ ಇದೆ. ಬಳಿಕ ಬೆಳೆಗಳ ಸಂಯೋಜನೆಯ ತಾರ್ಕಿಕ ವಿವರಗಳಿವೆ.

ಪುಸ್ತಕದ ಆರಂಭಕ್ಕೇ ಅವಿನಾಶ್ ಅವರು ತಮ್ಮ ಬೌದ್ಧಿಕ ಋಣವನ್ನು ಉಲ್ಲೇಖಿಸುತ್ತಾರೆ. ಧಾಬೋಲ್ಕರ್ ಅವರ ತತ್ವಗಳನ್ನು ಅನುಭವಪ್ರೇರಿತ ಉದಾಹರಣೆಗಳ ಮೂಲಕ ಅವರು ಮಂಡಿಸುತ್ತಾರೆ. ಹಾಗೆಯೇ ನಾರಾಯಣ ರೆಡ್ಡಿಯವರು ಕಲಿಸಿದ ಪಾಠಗಳ ಬಗ್ಗೆಯೂ. ಬೆಳೆಗಳ ಸಂಯೋಜನೆಯಲ್ಲಿ ಸ್ವಾವಲಂಬಿಯಾಗುವುದನ್ನು ಸಾಧಿಸುವ ವಿವರಗಳು ಇಲ್ಲಿವೆ. ಕೃಷಿಗೆ ಅದರಲ್ಲೂ ಸುಸ್ಥಿರ ಕೃಷಿಗೆ ಬಹುಮುಖ್ಯ ಕೊಂಡಿಯಾಗಿರುವ ಪಶು ಸಾಕಣೆ ಬಗ್ಗೆ ಅವಿನಾಶ್ ತಾಳ್ಮೆಯಿಂದ ಚರ್ಚಿಸುತ್ತಾರೆ. ನಾಟಿ ಹಸುವನ್ನು ಧಾರ್ಮಿಕ ನಿಲುವಿನಲ್ಲಿ ಮುಂದಿಡುವ ಮಂದಿಯ ಮಧ್ಯೆ ಅವಿನಾಶ್ ಮಿಶ್ರ ತಳಿಗಳ ಬಗ್ಗೆಯೂ ಚರ್ಚಿಸುತ್ತಾರೆ. ಇದು ಗಮನಾರ್ಹ.

ಹಸುವಿನ ಬಳಕೆಯೇ ಇಲ್ಲದ ಚೀನಾ ಜಗತ್ತಿನಲ್ಲೇ ಅತ್ಯಧಿಕ ಸಾವಯವ ಭೂ ಪ್ರದೇಶ ಹೊಂದಿದೆ! ಹಂದಿ ಹಿಕ್ಕೆ, ಮನುಷ್ಯನ ಮಲಮೂತ್ರಗಳನ್ನು ಬಳಕೆ ಮಾಡುವ ಚೀನಾ ಕೃಷಿಯಲ್ಲಿ ಧಾರ್ಮಿಕ ಬೇತಾಳವನ್ನು ಹೆಗಲಿಗೇರಲು ಬಿಟ್ಟಿಲ್ಲ.

ಕುರಿ, ಮೇಕೆ ಸಾಕಣೆಯಲ್ಲಿ ರೋಗ ನಿಯಂತ್ರಣ ಇತ್ಯಾದಿ ಬಗ್ಗೆ ಕೆಲವು ಟಿಪ್ಸ್ ನೀಡುವ ಲೇಖಕರು ಅಧ್ಯಾಯದ ಕೊನೆಯಲ್ಲಿ, “ಇಲ್ಲಿರುವುದು ಕೇವಲ ಒಂದೆರಡು ಉದಾಹರಣೆ ಮಾತ್ರ. ನಮ್ಮ ರೈತರ ಹತ್ತಿರ, ಮೂಲ ನಿವಾಸಿಗಳಲ್ಲಿ, ದನಗಾಹಿಗಳಲ್ಲಿ ಇನ್ನೂ ಹಲವಾರು ಉತ್ತರಗಳು, ವಿಧಾನಗಳು, ನಾಟಿ ಔಷಧಿಗಳ ಭಂಡಾರವೇ ಇವೆ. ಇವುಗಳನ್ನು ಕ್ರೋಢೀಕರಿಸುವ ಕೆಲಸಕಾರ್ಯಗಳಾದಾಗ ಮಾತ್ರ ಇನ್ನೂ ಹತ್ತು ಹಲವು ಸರಳ ವಿಧಾನಗಳು ತಿಳಿಯಬಹುದು” ಎನ್ನುತ್ತಾರೆ. ಈ ಎಚ್ಚರ ಬಹಳ ಮುಖ್ಯವಾದದ್ದು.

ಅಂಚಿಗೆ ಸರಿದಿರುವ ನಮ್ಮ ದೇಶೀ ಜ್ಞಾನದ ಕೊನೆ ಕೊಂಡಿಗಳು ನಾಶವಾಗುವ ಹಂತದಲ್ಲಿ ನಾವಿದ್ದೇವೆ. ನೈಜ ವೈಜ್ಞಾನಿಕ ವಿಧಾನಗಳ ಬದಲಿಗೆ ಗತದ ಹುಂಬ ವೈಭವೀಕರಣದ ಈ ದಿನಗಳಲ್ಲಿ ವೈಜ್ಞಾನಿಕ ನಿಕಷದೊಂದಿಗೇ ಈ ಜ್ಞಾನ ರಾಶಿಯನ್ನು ಪುನಶ್ಚೇತನಗೊಳಿಸಬೇಕಿದೆ. ಧಾಬೋಲ್ಕರ್ ಮುಂದಿಟ್ಟ ಬೆಳಕಿನ ಬೇಸಾಯ ಹಾಗೂ ಹತ್ತು ಗುಂಟೆ ಜಮೀನಿನಲ್ಲಿ ಬೇಕಾದಷ್ಟು ಬೆಳೆದುಕೊಳ್ಳುವ ಮಾದರಿಗೆ ಅವಿನಾಶ್ ಟ್ರೆಂಚ್ ವ್ಯವಸ್ಥೆಯನ್ನು ಸೇರ್ಪಡೆಗೊಳಿಸುತ್ತಾರೆ. ಇದು ಸ್ವಾಗತಾರ್ಹ. ಮಲೆನಾಡಿನ ತೋಟಗಳಲ್ಲಿ ಬಹುತೇಕ ರೈತರು ಈ ಟ್ರೆಂಚ್ ಅಳವಡಿಸಿಕೊಂಡು ಕೃಷಿ ತ್ಯಾಜ್ಯ ಮರುಬಳಕೆಯನ್ನು ಮಾಡುತ್ತಿದ್ದಾರೆ. ಬಯಲು ಸೀಮೆಯಲ್ಲಿ ಈ ವಿಧಾನಕ್ಕೆ ಚಾಲನೆ ಸಿಕ್ಕರೆ ಅಲ್ಲಿಯೂ ಕೃಷಿ ಸುಧಾರಣೆ ಸಾಧ್ಯವಾಗುತ್ತದೆ.

ಈ ಕೃತಿಯಲ್ಲಿ ಮಿತಿಗಳಿಲ್ಲವೆಂದಲ್ಲ. ಕೃಷಿ ಕುರಿತಾದ ಬಹುತೇಕ ಎಲ್ಲಾ ಪುಸ್ತಕಗಳೂ ರೈತನೊಬ್ಬ ವ್ಯಕ್ತಿಯಾಗಿ ಮಾಡಬಹುದಾದ ಬದಲಾವಣೆಗಳ ಬಗ್ಗೆ ಮಾತಾಡುತ್ತವೆ. ವಿವರಣೆಗೆ ನೀಡುವ ಒಂದೋ ಎರಡೋ ಎಕರೆಯ ವಿನ್ಯಾಸದ ಮೂಲಕ ಆಸಕ್ತರು ಪ್ರಯೋಗ ಮಾಡಬಹುದೆಂಬ ಮಾದರಿಯನ್ನು ಮುಂದಿಡುತ್ತದೆ.

ಆದರೆ ನಮ್ಮ ಕೃಷಿ ಲೋಕ, ಅದರಲ್ಲೂ ಹವಾಮಾನ ಬದಲಾವಣೆಯ ಕಾರ್ಮೋಡ ಆವರಿಸಿರುವ ಈ ದಿನಗಳಲ್ಲಿ ಸಾಮುದಾಯಿಕವಾಗಿ ಸಂಕಷ್ಟ ಅನುಭವಿಸುತ್ತಿದೆ. ಒಂದು ಸಾಮುದಾಯಿಕ ಕೃಷಿ ವ್ಯವಸ್ಥೆಯಲ್ಲುಂಟಾದ ಏರುಪೇರುಗಳ ಬಗ್ಗೆ, ಈ ಪುಸ್ತಕದಲ್ಲೂ ಯಾವುದೇ ವಿಶ್ಲೇಷಣೆ ಇಲ್ಲ. ಉದಾಹರಣೆಗೆ, “ಸಾರ್ ಫೆನ್ಸ್ ಇದೆ ಅಂದ್ರೆ ಕಾಸಿರೋ ಹೊರಗಿನೋರು ಮಾಡಿರೋ ಜಮೀನು ಅಂತ ಗ್ಯಾರಂಟಿ!” ಎಂದು ರೈತನೊಬ್ಬ ನನ್ನಲ್ಲಿ ಹೇಳಿದ್ದ. ಅರ್ಥಾತ್ ಅವಿನಾಶ್ ಮುಂದಿಡುವ ಮಾದರಿಗಳ ಬಲು ದೊಡ್ಡ ಸವಾಲು ಮಳೆ ಆಶ್ರಿತ ಕೃಷಿಯ ಮೂಲಭೂತ ಅಸಹಾಯಕತೆಯಲ್ಲಿದೆ. ನೀವು ಸುಮ್ಮನೆ ಗಮನಿಸಿದರೂ ಮುಕ್ಕಾಲು ಪಾಲು ನಮ್ಮ ಕೃಷಿ ಜಮೀನುಗಳಿಗೆ ಬೇಲಿ ಇಲ್ಲ; ಅಷ್ಟೇಕೆ ಅವು ಚಿಕಣಿ ಚಿಕಣಿ ತುಂಡುಗಳಾಗಿ ಹರಿದುಹಂಚಿ ಹೋಗಿವೆ. ಈ ಭೂಮಿ ಹರಿದು ಹಂಚಾದರೆ ಹೋಗಲಿ. ಆದರೆ ಭೂಮಿಯೊಂದಿಗೆ ಮನಸುಗಳೂ ಒಡೆದು ಹೋದಂತಿವೆ. ಹತ್ತು ಎಕರೆಯಷ್ಟು ಕ್ರೋಢೀಕೃತ ಜಮೀನಿಗೆ ಸಾಮಾನ್ಯ ಬೇಲಿ, ಬೆಳೆಯನ್ನು ಸೂಚಿಸಿದರೂ ತಲೆದೂಗುವ ರೈತರು ಸಿಗುತ್ತಿಲ್ಲ. ಈ ವಾಸ್ತವ ಸಮುದಾಯ ಮತ್ತು ಸರಕಾರದ ಕರ್ತವ್ಯಲೋಪದ ಕಡೆ ಬೆಟ್ಟು ಮಾಡಿ ತೋರುತ್ತದೆ.

ಇದನ್ನೂ ಓದಿ: ಕೃಷಿಕಥನ 03: ರೈತರದು ಆತ್ಮಹತ್ಯೆಯಲ್ಲ, ಹತ್ಯೆ

ತಮ್ಮ ಟ್ರೆಂಚ್ ಮತ್ತು ಬೆಳೆ ವಿನ್ಯಾಸದ ಬಗ್ಗೆ ನಿಖರವಾಗಿ ಬರೆಯುವ ಅವಿನಾಶ್ ಮಳೆ ಆಶ್ರಿತ ಕೃಷಿಯಲ್ಲೂ ಇದು ಸಾಧ್ಯ ಎಂದಾಗ ಅದು ಅಷ್ಟೇನೂ ವಿಶ್ವಾಸಾರ್ಹವಾಗಿ ಕಾಣುವುದಿಲ್ಲ. ಅದೊಂದು ಆಶಯವಾಗಿಯಷ್ಟೇ ಕಂಡುಬರುತ್ತದೆ. ಮಣ್ಣಿನ ಪುನರುಜ್ಜೀವನ, ಬೆಳೆಗಳ ಸಾಂದ್ರೀಕರಣ ಮತ್ತು ವೈವಿಧ್ಯತೆಯ ಮಾದರಿ ಯಶಸ್ಸು ಕಾಣಲು ನೀರಿನ ಮೂಲ ಇರುವುದು ಮತ್ತು ಬೇಲಿ ಅನಿವಾರ್ಯ. ಅಂದರೆ ಆರಂಭಿಕ ಬಂಡವಾಳ ಇಲ್ಲಿ ಅಪೇಕ್ಷಿತ.

ಇದನ್ನು ಟೀಕೆಯಾಗಿ ಹೇಳುತ್ತಿಲ್ಲ. ಆದರೆ ಸಾಲದಲ್ಲಿ ಬಿದ್ದು ಕುಸಿದಿರುವ ನಮ್ಮ ರೈತರನ್ನು ಸಮದಾಯವಾಗಿ ಸುಸ್ಥಿರ ಕೃಷಿಯತ್ತ ಒಯ್ಯುವ ಮಾರ್ಗೋಪಾಯಗಳ ಬಗ್ಗೆ ನಾವು ಇಂದು ಹೆಚ್ಚು ಚರ್ಚಿಸಬೇಕಾಗಿದೆ. ಈ ಅರಿವು ’ಬೆಳಕಿನ ಬೇಸಾಯ’ ಲೇಖಕ ಅವಿನಾಶ್ ಅವರಿಗೆ ಇದೆ ಎಂಬುದಕ್ಕೆ ಪುಸ್ತಕದಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಆದರೆ ಅವು ಮುಖ್ಯ ಪ್ರಸ್ಥಾನವಾಗಿಲ್ಲ. ಮುಂದಿನ ಕೃತಿಗಳಲ್ಲಿ ಅವಿನಾಶ್ ಈ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು ಎಂಬ ನಿರೀಕ್ಷೆ ನನ್ನದು.

ಸುಸ್ಥಿರ ಕೃಷಿಯ ಬಗೆಗಿನ ಈ ಮೌಲಿಕ ಕೃತಿ ಬೇಸಾಯದಲ್ಲಿ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಎಲ್ಲಾ ಆಸಕ್ತರಿಗೂ ಖಂಡಿತಾ ಕೈಪಿಡಿಯಾಗಬಲ್ಲದು.

ಪುಸ್ತಕ: ಬೆಳಕಿನ ಬೇಸಾಯ
ಲೇಖಕರು: ಅವಿನಾಶ್ ಟಿ.ಜಿ.ಎಸ್
ಪ್ರಕಟಣೆ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: 235 ರೂಗಳು
ಪುಸ್ತಕಗಳಿಗಾಗಿ ಸಂಪರ್ಕಿಸಿ: 9449174662

 

ಕೆ.ಪಿ.ಸುರೇಶ್

ಕೆ.ಪಿ.ಸುರೇಶ್
ಇಂಗ್ಲಿಷ್ ಅಧ್ಯಾಪಕರಾಗಲು ಎಂ.ಎ ಓದಿದ್ದ ಕೆ.ಪಿ.ಸುರೇಶ ಅವರು ಕೃಷಿಯಲ್ಲಿ ತೊಡಗಲು ಸುಳ್ಯ ತಾಲೂಕಿನ ತಮ್ಮ ಊರಿಗೆ ಮರಳಿದ್ದರು. ತಮ್ಮ ಸ್ವಂತ ಅನುಭವ, ಅಧ್ಯಯನ ಹಾಗೂ ಒಳನೋಟಗಳ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ತಜ್ಞರಿಗೂ, ರೈತರಿಗೂ ಪಾಠ ಮಾಡಬಲ್ಲರು. ಅಪಾರ ಕೀಟಲೆಯ ಸ್ವಭಾವದ ಅವರು ಹಲವು ವಿಚಾರಗಳ ಕುರಿತು ಬರೆಯುತ್ತಿರುವ ಆಲ್‌ರೌಂಡರ್ ಕೂಡ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...