Homeಅಂಕಣಗಳುಕೃಷಿ ಕಥನಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

ಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

- Advertisement -
- Advertisement -

ಮಳೆನೀರು ಸಂಗ್ರಹದ ಸಾಂಪ್ರದಾಯಿಕ ವಿಧಾನಗಳಾದ ಕೆರೆಗಳು, ಬಾವಿಗಳು, ಚೆಕ್‍ಡ್ಯಾಂಗಳು, ಗುಂಡಿಗೊಟರುಗಳು, ಹಳ್ಳಕೊಳ್ಳಗಳು 20ನೆಯ ಶತಮಾನದ ಅರ್ಧಭಾಗದವರೆಗೂ ತಮ್ಮ ಕರ್ತವ್ಯ ನಿರ್ವಹಿಸಿದವು. ದೇಸಿ ತತ್ವಜ್ಞಾನಗಳ ನೆಲೆಯಲ್ಲಿ ರೂಪುಗೊಂಡಿದ್ದ ಈ ಬಗೆಯ ನೀರ ನೆಲೆಗಳು ಬಹು ಉಪಯೋಗಿಯೂ, ಸುಸ್ಥಿರವೂ ಆಗಿದ್ದವು. ಆದರೀಗ ಮನುಷ್ಯರ ವೇಗ ಮತ್ತು ಅವೇಗದ ಕಾರಣದಿಂದಾಗಿ ಈ ಬಗೆಯ ಸಾಂಪ್ರದಾಯಿಕ ನೀರ ನೆಲೆಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳುತ್ತಿವೆ. ಆಧುನಿಕ ತಂತ್ರಜ್ಞಾನಗಳ ಜೊತೆಗೆ ಸಾಂಪ್ರದಾಯಕ ನೀರ ನೆಲೆಗಳನ್ನು ಉಳಿಸಿಕೊಂಡು ಅವುಗಳ ರೂಪುರೇಷೆಗಳನ್ನು ಬದಲಿಸಿ ಬಳಸಿಕೊಳ್ಳಬೇಕಾಗಿದೆ. ಎಲ್ಲಿ ಮಳೆ ಬೀಳುತ್ತದೆಯೋ ಅಲ್ಲೇ ನೀರು ಸಂಗ್ರಹಿಸಲು ಇರುವ ಅತ್ಯುತ್ತಮ ಜನಪದ ಜ್ಞಾನ ಮಾರ್ಗಗಳಾಗಿ ಇವುಗಳನ್ನು ಅರ್ಥೈಸಬೇಕಾಗಿದೆ.

ಮನುಷ್ಯರ ನೀರದಾಹ ಹೆಚ್ಚಿದಂತೆ ಭೂಮಿಯ ಮೇಲಿನ ಮತ್ತು ಭೂಮಿಯೊಳಗಿನ ನೀರಿನ ಬಳಕೆ ಗಡಿ ಮೀರಿದೆ. ಪರಿಸ್ಥಿತಿ  ಹೀಗಿರುವಾಗ ಕೆರೆ ಕಟ್ಟೆ ಬಾವಿಗಳ ನೀರು ಇವರಿಗೆ ಯಾವ ಲೆಕ್ಕ ಎಂಬಂತಾಗಿದೆ. ಇದರ ಪರಿಣಾಮವಾಗಿ ಸಾಂಪ್ರದಾಯಿಕ ನೀರ ತಾಣಗಳು ತೀವ್ರ ಉದಾಸೀನಕ್ಕೆ ಒಳಗಾಗಿ ಕಣ್ಮರೆಯಾಗುತ್ತಿವೆ.

ಅವು ಇದ್ದ ಜಾಗಗಳು ಬಡಾವಣೆ, ಅಪಾರ್ಟ್‍ಮೆಂಟ್‍ಗಳಾಗಿ ಬದಲಾಗಿವೆ. ನಗರಗಳ ಯದ್ವಾತದ್ವಾ ಬೆಳವಣಿಗೆಯ ಆಕ್ರಮಣಕ್ಕೆ ಸಿಕ್ಕಿದ ಈ ಜಲತಾಣಗಳು ಖಾಸಗಿ ಒಡೆತನಕ್ಕೆ ಕಾನೂನು ಬಾಹಿರವಾಗಿ ವರ್ಗಾವಣೆಯಾಗಿವೆ. ಅಳಿದುಳಿದಿರುವ ಕೆರೆಕಟ್ಟೆಗಳ ನಗರಗಳ ಕಿಸುಬಾಯಿಗೆ ಅರೆಕಾಸಿನ ಮಜ್ಜಿಗೆಯಂತಾಗಿವೆ. ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಗ್ರಾಮಾಂತರ ಭಾಗಗಳಲ್ಲಿ ಕೆರೆ ಕಟ್ಟೆ, ಹಳ್ಳಗಳು ಆಕ್ರಮಣಕ್ಕೊಳಗಾಗಿವೆ, ಇಲ್ಲವೆ ಅನಾಥವಾಗಿವೆ.

ನೀರಿನ ತೀವ್ರ ಅಭಾವವು ಈ ಸಾಂಪ್ರದಾಯಿಕ ಜಲತಾಣಗಳ ಕಡೆಗೆ ಸಮುದಾಯ ಮತ್ತು ಸರ್ಕಾರಗಳು ಗಮನ ಹರಿಸಲೇಬೇಕಾದ ಒತ್ತಡಕ್ಕೆ ಒಳಗಾಗಿವೆ. ಇದರ ಪರಿಣಾಮವಾಗಿ ಅನೇಕ ಸರ್ಕಾರಿ ಯೋಜನೆಗಳು ಲೆಕ್ಕವಿಲ್ಲದಷ್ಟು ಹಣ ವ್ಯಯಿಸುತ್ತಿರುವುದು ನಿಜವೆ.

ಈಗ ಅಳಿದುಳಿದಿರುವ ಈ ಜಲತಾಣಗಳನ್ನು ಉಳಿಸುವ, ಅಭಿವೃದ್ಧಿಪಡಿಸುವ ಉದ್ದೇಶ ಈ ಯೋಜನೆಗಳ ಹಿಂದಿನ ಆಶಯವಾಗಿದ್ದರೂ ಫಲಿತಾಂಶ ಆಶಾದಾಯಕವಾಗಿಲ್ಲ. ನೀರಿನ ಕೊರತೆಯ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿರುವುದು ನೀರ ತಾಣಗಳ ಮತ್ತು ಒಟ್ಟು ನೀರಿನ ನಿರ್ವಹಣೆಯಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತಿದೆ.

ಎಲ್ಲೆಲ್ಲಿ ಜಲತಾಣಗಳ ನಿರ್ವಹಣೆ ಉತ್ತಮವಾಗಿದೆಯೋ ಅಲ್ಲಿ ಸಮುದಾಯಗಳ ಕೃಷಿ ಮತ್ತು ಪಶುಪಾಲನೆ ಆಧಾರಿತ ಬದುಕು ಸಹ್ಯವಾಗಿದೆ. ಮಿಕ್ಕೆಡೆಗಳಲ್ಲಿ ಬೇಸಿಗೆಯ ದಿನಗಳು ಅತ್ಯಂತ ಧಾರುಣ ಸ್ಥಿತಿಗೆ ಕಾರಣವಾಗಿದೆ.

ಈ ನಡುವೆ ಸ್ವಯಂ ಸೇವಾ ಸಂಸ್ಥೆಗಳು ಎರಡು ಮೂರು ದಶಕಗಳಿಂದ ಕೈಗೊಂಡ ನೀರಿನ ಚಳವಳಿಗಳ ಪರಿಣಾಮ ಸಾಂಪ್ರದಾಯಿಕ ಜಲತಾಣಗಳು ಅಲ್ಪಸ್ವಲ್ಪವಾದರೂ ಉಸಿರಾಡುವಂತಾಗಿದೆ. ಕೆರೆಕಟ್ಟೆ ಹಳ್ಳಗಳ ಪ್ರಾಮುಖ್ಯತೆಯನ್ನು ಸಾರುವ ಅನೇಕ ಕಾರ್ಯಕ್ರಮಗಳು ಸರ್ಕಾರದ ಯೋಜನೆಗಳ ಭಾಗವಾಗಿ ಸಾಕಾರಗೊಳ್ಳುತ್ತಿವೆ.

ನಗರ ಪ್ರದೇಶಗಳಲ್ಲಿ ಮಳೆನೀರಿನ ಸಂಗ್ರಹದ ಬಗೆಗಿನ ಅರಿವು ಹೆಚ್ಚುತ್ತಿದೆ. ನೀರಿನ ಮಿತ ಬಳಕೆ ಮತ್ತು ಮರುಬಳಕೆಯ ಕಡೆಗೂ ಗಮನ ಹರಿಯಬೇಕಾಗಿದೆ. ನೀರು ಶುದ್ಧೀಕರಣ ಘಟಕಗಳನ್ನು ಎಲ್ಲೆಡೆಯೂ ಸ್ಥಾಪಿಸುತ್ತಿರುವುದು, ಸಾಂಪ್ರದಾಯಿಕ ನೀರ ತಾಣಗಳನ್ನು ರಕ್ಷಿಸಬೇಕೆಂಬ ಸ್ಥಳೀಯ ಸಂಸ್ಥೆಗಳ ಕಾಳಜಿ ಆಶಾದಾಯಕವಾದ ಬೆಳವಣಿಗೆಯಾಗಿದೆ. ನಗರ ಪ್ರದೇಶಗಳಲ್ಲಿ ಪಾತಾಳ ಮುಟ್ಟಿದ ಅಂತರ್ಜಲ ಸ್ಥಿತಿ ನಗರ ಪ್ರದೇಶದ ಜನರು ಮಳೆ ನೀರಿಗೆ ನೇರವಾಗಿ ಕೈಯೊಡ್ಡಿ ನೀರ ಭಿಕ್ಷೆಯನ್ನು ಸಂಗ್ರಹಿಸುವ ಒತ್ತಡಕ್ಕೆ ಒಳಗಾಗುವಂತೆ ಮಾಡಿದೆ. ನೀರಿನ ಗುಣಮಟ್ಟ ಅಧೋಗತಿಗೆ ಇಳಿದಿರುವುದು ಇದಕ್ಕೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಸ್ವಂತ ಖರ್ಚಿನಲ್ಲಿ ಮಳೆನೀರು ಸಂಗ್ರಹಿಸಲು ನೀರಿನ ಸಂಪುಗಳನ್ನು ನಿರ್ಮಿಸಿಕೊಳ್ಳುತ್ತಿರುವುದು ನೀರ ಬಳಕೆಗೆ ಮಿತವ್ಯಯದ ಕ್ರಮಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಪೂರಕವಾಗಿ ನೀರು ಶುದ್ದೀಕರಣಕ್ಕೆ ಮಳೆ ನೀರು ಸಂಗ್ರಹಕ್ಕೆ ನೀರಿನ ಮರುಬಳಕೆಗೆ ಬೇಕಾದ ತಾಂತ್ರಿಕತೆಯನ್ನೂ ಮಾರುಕಟ್ಟೆ ಒದಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ತಕ್ಷಣಕ್ಕೆ ನೀರಿಗಾಗಿ ಯುದ್ದಗಳು ಆಗಿಬಿಡುತ್ತವೆಂದೋ, ನಗರಗಳ ಜನಕ್ಕೆ ನಾಳೆಯೇ ನೀರಿಲ್ಲದಂತಾಗಿ ಅವರು ದಿಕ್ಕಾಪಾಲಾಗುತ್ತಾರೆಂದೊ ಹೇಳಲು ಈಗಲೇ ಸಾಧ್ಯವಿಲ್ಲ. ಆದರೆ ನೀರಿನ ಕೊರತೆ ನಗರ, ಪಟ್ಟಣ, ಹಳ್ಳಿಗಳೆಂಬ ಬೇಧವಿಲ್ಲದೆ ದಿನದಿಂದ ದಿನಕ್ಕೆ ತೀವ್ರವಾಗಿ ಕಾಡುತ್ತಿದೆ ಎಂಬುದಂತೂ ಸ್ಪಷ್ಟ. ಅತಿಹೆಚ್ಚು ಮಳೆ ಬೀಳುವ ಅಸ್ಸಾಂ, ಅತಿ ಕಡಿಮೆ ಮಳೆ ಬೀಳುವ ರಾಜಸ್ಥಾನ, ಎರಡೂ ಕಡೆಗಳಲ್ಲಿ ನೀರಿನ ಸಂಕಟ ಎದುರಾಗಿದೆ. ಕೈಗಾರಿಕೆ, ಕೃಷಿಗೆ ನೀರಿನ ಬಳಕೆ ಮಾಡುವುದರ ಜೊತೆಗೆ ನೀರು ಕಲುಷಿತಗೊಳಿಸುತ್ತಿರುವುದು ಇನ್ನೊಂದು ದೊಡ್ಡ ದುರಂತ ಕತೆ. ಹವಾಮಾನ ಬದಲಾವಣೆಯ ಪರಿಣಾಮವೆಂಬಂತೆ ಅತಿವೃಷ್ಟಿ, ಅನಾವೃಷ್ಟಿಗಳು ವಕ್ಕರಿಸುತ್ತಿವೆ.

ಇನ್ನೊಂದು ಸಮಾಧಾನ ವಿಷಯವೆಂದರೆ ನೀರು ಎಲ್ಲಿಯೋ ಹೋಗಿ ಅಡಗಿ ಕೂರುವುದಿಲ್ಲ. ಅದು ಪ್ರತಿ ವರ್ಷವೂ ಭೂಮಿಗೆ ಸುರಿದೇ ಸುರಿಯುತ್ತದೆ. ಮಳೆಯ ರೂಪದಲ್ಲಿ, ಹಿಮದಲ್ಲಿ ಇದಕ್ಕೆ ಪೂರಕವೆಂಬಂತೆ ಬಳಕೆಯಾಗುವ ನೀರು ಪೂರ್ಣವಾಗಿ ಅದಕ್ಕೆ ಬಳಸಲ್ಪಟ್ಟು ಇಲ್ಲವಾಗಿ ಬಿಡುವುದಿಲ್ಲ. ಆ ನೀರನ್ನು ಮರು ಬಳಸಬಹುದು, ಹಿಂಗಿಸಬಹುದು, ಶುದ್ದೀಕರಿಸಬಹುದು. ಆದರೆ ಕೃಷಿ ಕ್ಷೇತ್ರದಲ್ಲಿ ನೀರಿನ ಸದ್ಭಳಕೆ ಮತ್ತು ಮಿತ ಬಳಕೆ ಆಗುತ್ತಿಲ್ಲವೆಂಬುದು ಆಡಳಿತವ್ಯವಸ್ಥೆಯ ದೋಷವಾಗಿದೆ. ಈಗಿಂದೀಗಲೇ ಕೃಷಿ ಸಮುದಾಯಗಳನ್ನು ಒಳಗೊಂಡಂತೆ ಕ್ರಿಯಾ ಯೋಜನೆ ಜಾರಿಯಾಗಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ನೀರಿನ ಬಗೆಗೆ ಅರಿವು ಹೆಚ್ಚಿದೆ. ನೀರು ಎಂದರೇನು? ನೀರಿನ ದುರ್ಬಳಕೆ ಹೇಗೆ ಆಗುತ್ತದೆ? ನೀರಿನ ಹಂಚಿಕೆಯ ದೋಷಗಳಾವುವು? ನೀರಿನ ಮೂಲಗಳು ಹೇಗೆ ಕಡೆಗಣಿಸಲ್ಪಟ್ಟವು? ಮಳೆ ನೀರನ್ನು ಅದು ಎಲ್ಲಿ ಬೀಳುತ್ತದೆಯೋ ಅಲ್ಲಿ ಯಾಕೆ ಹಿಡಿಯಬೇಕು? ನಗರಗಳ ನೀರ ದಾಹಕ್ಕೆ ತೆರಬೇಕಾದ ಬೆಲೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೇಲೆದ್ದು ಚರ್ಚೆಗೆ ತನ್ಮೂಲಕ ನೀರ ತಿಳುವಳಿಕೆಗೆ ಕಾರಣವಾಗಿದೆ. ನೀರ ಸಾಕ್ಷರತೆ ಇದ್ದಕ್ಕಿದ್ದಂತೆ ಆದ ಜ್ಞಾನೋದಯವೇನಲ್ಲ. ಸಾಕಷ್ಟು ಏಟು ತಿಂದ ಮೇಲೆ ಪ್ರತಿಯೊಬ್ಬರ ಬುಡಕ್ಕೆ ಬೆಂಕಿ ಹೊತ್ತಿದ ಮೇಲೆ ಆದ ಬದಲಾವಣೆ.

ಎಪ್ಪತ್ತು ಎಂಬತ್ತರ ದಶಕಗಳಲ್ಲಿನ ನೀರ ಕಾಳಜಿ ಕೇವಲ ಬೃಹತ್ ನೀರಾವರಿ ಯೋಜನೆಗಳನ್ನು ಕೈಗೊಳ್ಳುವುದು, ಡ್ಯಾಂ ಮತ್ತು ಚಾನಲ್ ನಿರ್ಮಾಣ, ಡ್ಯಾಂಗಳಿಂದ ದೂರದೂರದ ಪ್ರದೇಶಗಳಿಗೆ ನೀರನ್ನು ಹರಿಸುವುದು ಮುಂತಾದ ವಿಚಾರಗಳಿಗೆ ಸೀಮಿತವಾಗಿತ್ತು. 80ರ ದಶಕದ ಕೊನೆಯಲ್ಲಿ ಅಪ್ಪಳಿಸಿದ ಬರಗಾಲವು ಕೇವಲ ಡ್ಯಾಂ ಮತ್ತು ಚಾನಲ್‍ಗಳು ನೀರಿನ ಬರವನ್ನು ಹಿಂಗಿಸಲು ಸಾಲದು ಎಂಬ ಸತ್ಯವನ್ನು ಬಯಲು ಮಾಡಿತು. ಆಗ ದೆಹಲಿ ಮೂಲದ `ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವಿರಾನ್‍ಮೆಂಟ್’ ಸಂಸ್ಥೆಯು ಸಾಂಪ್ರದಾಯಿಕ ಜಲ ಸಂಗ್ರಹಣೆಯ ವಿಧಾನಗಳ ಕಡೆಗೆ ಗಮನ ಸೆಳೆಯಿತು. ಆಗ ಆರಂಭವಾದದ್ದು ಮಳೆ ನೀರಿನ ಸಂಗ್ರಹ ಚಳವಳಿ. ಮಳೆ ಎಲ್ಲಿ ಬೀಳುತ್ತದೆಯೋ ಅಲ್ಲಿಯೇ ಮಳೆ ನೀರನ್ನು ಸಂಗ್ರಹಿಸಬೇಕೆಂಬ ದೇಸೀ ಜ್ಞಾನ ಪ್ರಚಾರ ಪಡೆದು ಮುನ್ನೆಲೆಗೆ ಬಂದಿತು. ಈ ಕ್ರಿಯಾ ಆಂದೋಲನವನ್ನು ದೇಶವ್ಯಾಪಿಯಾಗಿ ಕೈಗೆತ್ತಿಕೊಂಡ ಎರಡು ಸಂಸ್ಥೆಗಳೆಂದರೆ `ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ ಮತ್ತು ರಾಜೇಂದ್ರಸಿಂಗ್ ನೇತೃತ್ವದ `ತರುಣ ಭಾರತ ಸಂಘ’. ಇದರ ಪರಿಣಾಮವಾಗಿ ದೇಶದಾದ್ಯಂತ ಕೆರೆ, ಕಟ್ಟೆ, ಕೃಷಿ ಹೊಂಡಗಳ, ಚೆಕ್‍ಡ್ಯಾಂಗಳ ಕಡೆಗಿನ ಗಮನ ಹಬ್ಬಿತು.

1990ರ ದಶಕಗಳಲ್ಲಿ ಸಂಭವಿಸಿದ ಬರಗಾಲಗಳು ಸರ್ಕಾರವನ್ನು ಎಚ್ಚರಿಸಿ ಕೃಷಿ ಹೊಂಡ, ಚೆಕ್‍ಡ್ಯಾಂ, ಕೆರೆಕಟ್ಟೆ ಉಡಾವಣೆಯ ಭಜನೆ ಆರಂಭಿಸುವಂತೆ ಮಾಡಿದವು. ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆ ಇದಕ್ಕೆ ಬಳಕೆಯಾಯಿತು.

70ರ ದಶಕದಲ್ಲಿ ನಿಧಾನವಾಗಿ ಆರಂಭವಾಗಿ 80 ಮತ್ತು 90ರ ದಶಕದ ಹೊತ್ತಿಗೆ ತೀವ್ರವಾಗಿ ಹೊತ್ತಿಕೊಂಡ ಬೋರ್‍ವೆಲ್ ಕ್ರಾಂತಿ ಅಂತರ್ಜಲಕ್ಕೆ ಕನ್ನ ಹಾಕಿತು. ನೂರು ಅಡಿ ಆಳದಿಂದ ಆರಂಭವಾದ ಈ ಬೋರ್‍ವೆಲ್‍ಗಳು ಎರಡು ದಶಕಗಳಲ್ಲಿ 1200 ಅಡಿ ಆಳಕ್ಕೆ ತಲುಪಿದ್ದು ಈಗ ಅದರ ತೀವ್ರ ಪರಿಣಾಮಗಳು ಇಕ್ಕಡಿಸುತ್ತಿವೆ.

ಆಳದ ನೀರಿನಲ್ಲಿರುವ ಅತಿಯಾ ಲವಣಾಂಶಗಳು ಸಮುದಾಯಗಳ ಆರೋಗ್ಯವನ್ನು ಅಧೋಗತಿಗೆ ಒಯ್ದಿವೆ. ಬೋರ್‍ವೆಲ್ ನೀರು ಶುದ್ಧವಾದ ನೀರು ಎಂಬ ಗ್ರಹಿಕೆ ತಪ್ಪೆಂದು ಬಹುಬೇಗ ಗೊತ್ತಾಗಿದೆ. ಹಾಗೆಯೇ ಕೃಷಿ ತೋಟಗಾರಿಕೆಗೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾದ ಈ ನೀರು ಹಿಂದೆಂದೂ ಕಂಡರಿಯದ ರೋಗಗಳಿಗೆ ಕಾರಣವಾಗಿದೆ.

ಅತಿಯಾದ ಅಂತರ್ಜಲ ಬಳಕೆಯಿಂದ ಅಂತರ್ಜಲ ಬರಿದಾಗುವ ಜೊತೆಗೆ ನೀರಿನ ಪಸೆಯನ್ನು ನಿರ್ನಾಮ ಮಾಡುತ್ತಿದೆ. ಇದರಿಂದ ಶೇ 53ರಷ್ಟು ಮಳೆ ಆಶ್ರಯದಲ್ಲೇ ನಡೆಯುವ ಕೃಷಿಗೆ ಭಾರಿ ಹೊಡೆತ ಬಿದ್ದಿದೆ. ಭೂಮಿಯ ಮೇಲ್ಪದರದ ನೀರು ವಾತಾವರಣವನ್ನು ತಂಪಾಗಿ ಇಟ್ಟರೆ ಮಾತ್ರ ಮಳೆ ಆಶ್ರಿತ ಕೃಷಿ ಸಾಧ್ಯ. ಇಲ್ಲದಿದ್ದರೆ ಮಳೆ ಬೀಳುವಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳೆ ವಿಫಲವಾಗುವುದು ಶತಸಿದ್ಧ. ಮಳೆ ನೀರನ್ನು ಹಿಂಗಿಸುವ ಗೋಜಿಗೆ ಹೋಗದೆ ಹಾಗೆ ಮಾಡುವ ನಾಟಕವಾಡಿದ ಪರಿಣಾಮ ಇಂದು ಮಳೆ ಆಶ್ರಿತ ಕೃಷಿ ಸರ್ವನಾಶದ ಅಂಚಿಗೆ ತಲುಪಿದೆ.

ನಗರ ಪ್ರದೇಶದ ಜನ ತಮ್ಮ ಮನೆಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲು ನಿರಾಕರಿಸುತ್ತಾ ದೂರದ ಕಾವೇರಿ, ಗಂಗಾ ನದಿಗಳ ಪೂರ್ಣ ನೀರು ತಮಗೇ ಬೇಕೆಂದು ನಾಚಿಕೆಯಿಲ್ಲದೆ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇವರಿಗೆ ನೀರಿನ ಬಳಕೆಯಲ್ಲಿ ಸಂಯಮವಿಲ್ಲ. ಮಳೆ ನೀರು ಹಿಡಿದಿಟ್ಟುಕೊಳ್ಳುವ ವಿವೇಕವೂ ಇಲ್ಲ. ಇವರ ತಿಕ ಮಕ, ಬಟ್ಟೆ ಕಾರುಗಳನ್ನು ತೊಳೆಯಲು ಎಷ್ಟು ನೀರಾದರೂ ಸಾಲದಾಗಿದೆ. ನಗರಗಳಲ್ಲೇ ಬಡಪಾಯಿಗಳ ಪಾಡು ಹೇಳ ತೀರದಾಗಿದೆ. ಈ ಪರಿಸ್ಥಿತಿ ಬಹುಬೇಗ ಬದಲಾಗಬೇಕು.  ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಕಟ್ಟಡಗಳಿವೆ. ಇವುಗಳಲ್ಲಿ ಕೇವಲ ಒಂದೂವರೆ ಲಕ್ಷ ಮನೆಗಳು ಮಾತ್ರ ಮಳೆ ನೀರು ಸಂಗ್ರಹಿಸಿ ಬಳಸುತ್ತಿವೆ. ಇದು ನೀರ ನಿರ್ಲಕ್ಷ್ಯವಲ್ಲ, ಊರ ನಿರ್ಲಕ್ಷ್ಯ. ಇಂಥವರಿಗೆ ಚುರುಕು ಮುಟ್ಟಿಸಬೇಕು.

ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೃಷಿ ಕ್ಷೇತ್ರದಲ್ಲೂ ತೀವ್ರ ಬದಲಾವಣೆಗಳನ್ನು ತರಬೇಕಾಗಿದೆ. ಡ್ಯಾಂಗಳ ನೀರನ್ನು ನಿರ್ಲಜ್ಜವಾಗಿ ಬಳಸುವುದು ಈಗಾಗಲೇ ರೂಡಿಯಾಗಿರುವ ಚಾಳಿ. ಈ ಚಾಳಿ ಹೇಗೆ ಯಾರಿಂದ ಆರಂಭವಾಯಿತು? ನೀರ ನಿರ್ಲಜ್ಜ ಬಳಕೆಯ ಹಿಂದಿನ ಮನೋಸ್ಥಿತಿ ಎಂತಹುದು ಎಂಬುದಿಲ್ಲ ಚರ್ಚೆಗೆ ಹೊರತಾದ ವಿಷಯ.

ಕಬ್ಬು ಮತ್ತು ಭತ್ತ ಈ ಎರಡೂ ಬೆಳೆಗಳನ್ನು ಡ್ಯಾಂ ನೀರಿನಲ್ಲಿ ಬೆಳೆಯುವುದು ಕಡ್ಡಾಯವೇನೋ ಎಂಬಂತಾಗಿದೆ. ಅತಿ ನೀರಿನ ಬಳಕೆಯಿಂದಾಗಿ ನಾಲಾ ಬಯಲುಗಳು ಚೌಳು ಭೂಮಿಯಾಗಿ ಬದಲಾಗುತ್ತಿದ್ದರೂ ಎಚ್ಚರವನ್ನೂ ಮಾಡಿಲ್ಲ. ರೈತರು ಕಬ್ಬು ಮತ್ತು ಭತ್ತ ಬೆಳೆದು ಸುಖವಾಗಿರುವುದು ಅಷ್ಟರಲ್ಲೇ ಇದೆ. ಬೆಳೆ ಪರ್ಯಾಯ ಪದ್ಧತಿ ಜಾರಿಯಾಗಬೇಕು, ನೀರಿನ ಮಿತಬಳಕೆ ಕಡ್ಡಾಯವಾಗಬೇಕು.

ಅತಿಯಾದ ಅಂತರ್ಜಲ ಬಳಕೆಗೆ ಈ ನಾಲಾ ಬಯಲುಗಳಲ್ಲಿ ಆಗುತ್ತಿರುವ ನೀರ ನಿರ್ಲಜ್ಜ ಬಳಕೆಯೇ ಪ್ರೇರಣೆಯಾಗಿದೆ. ಬೋರ್‍ವೆಲ್ ನೀರಾವರಿ ಆತಂಕಕಾರಿಯಾಗಿ ಬೆಳೆದು ಇದೀಗ ದುರಂತ ಅಂತ್ಯದತ್ತ ಸಾಗಿದೆ. ಬೆಳೆ ಪದ್ಧತಿಗಳ ಅವೈಜ್ಞಾನಿಕ ಅಳವಡಿಕೆ ಅಂತರ್ಜಲ ಅಂತ್ಯಕ್ಕೆ ಕಾರಣವಾಗಿದೆ. ಉದಾಹರಣೆಗೆ ಬಯಲು ಸೀಮೆಗಳಲ್ಲಿ ಹಬ್ಬಿರುವ ತೆಂಗು ಮತ್ತು ಅಡಕೆ ತೋಟಗಳು.

ಇದೇ ಹೊತ್ತಿನಲ್ಲಿ ಕೆರೆಗಳು ಹೂಳು ತುಂಬುತ್ತಿವೆ, ಇಲ್ಲವೇ ಒತ್ತುವರಿಯಾಗಿ ಕಣ್ಮರೆಯಾಗುತ್ತಿವೆ. ಹಳ್ಳಗಳು, ರಾಜಕಾಲುವೆಗಳು ಹೇಳ ಹೆಸರಿಲ್ಲದಂತೆ ನುಂಗಲ್ಪಟ್ಟಿವೆ. ಯಾವ ಅಡೆತಡೆಯಿಲ್ಲದೆ ಲಕ್ಷಾಂತರ ಬೋರ್‍ವೆಲ್‍ಗಳು ಕೊರೆಯಲ್ಪಡುತ್ತಿವೆ. ಕೊನೆಯುಸಿರೆಳೆಯುತ್ತಿರುವ ಬೋರ್‍ವೆಲ್‍ಗಳಿಗೆ ಲೆಕ್ಕವಿಲ್ಲ. ನಾಲಾ ಬಯಲುಗಳಲ್ಲಿ ನೀರಿನ ಚೆಲ್ಲಾಟ ಯಥಾಸ್ಥಿತಿ ಮುಂದುವರಿಯುತ್ತಿದೆ. ಇಷ್ಟಾದರು ನೀರ ನಿಯಂತ್ರಣಕ್ಕೆ, ನೀರ ಹಂಚಿಕೆಗೆ ತೀವ್ರ ಕ್ರಮಗಳೇನೂ ಜಾರಿಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಿಮಗಿದು ಗೊತ್ತೆ? ಎಳನೀರು ಕಿತ್ತರೆ ಫಸಲು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...