Homeಮುಖಪುಟದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

ದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

- Advertisement -
- Advertisement -

“ಈಗ ಮಾಡೀವಿ ಆರಂಭ,
ವಿಧಾನಸೌಧದಿ ರಣಗಂಬ”

ಆ ಹತ್ತು ದಿನಗಳ ಕಾಲ ಕರ್ನಾಟಕದ ರೈತರು ಮತ್ತು ಸಾಮಾನ್ಯ ಜನತೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಡಿದ ಪರಿಯನ್ನು ನೆನೆಸಿಕೊಂಡರೆ ರೋಮಾಂಚನ, ವಿಷಾದ, ದುಃಖ – ಈ ಎಲ್ಲ ಭಾವನೆಗಳು ಉಕ್ಕುಕ್ಕಿ ಬರುತ್ತವೆ. ಅನುಮಾನವಿದ್ದರೆ ಅಂದಿನ ಪತ್ರಿಕೆಗಳ ಪುಟಗಳನ್ನು ತಿರುವಿ ಹಾಕಿ. ಮುಖ್ಯವಾಗಿ ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ. ಉಳಿದ ಪತ್ರಿಕೆಗಳಲ್ಲಿ ಹಲವು ಇನ್ನೂ ಹುಟ್ಟಿರಲಿಲ್ಲ. ಟಿವಿಯಂತೂ ಇಲ್ಲವೇ ಇಲ್ಲ ಬಿಡಿ. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ಗಳು ಈ ರೋಮಾಂಚನವನ್ನು ತಾವೇ ಅನುಭವಿಸಿದುವು. ಅಂದು ಈ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿದ್ದ ಹರಿಕುಮಾರ್‌ರವರು ಮಲಪ್ರಭಾ ರೈತರ ಹೋರಾಟದ ಬಗ್ಗೆಯೇ ಒಂದು ವಿಶೇಷ ಪುರವಣಿಯೊಂದನ್ನು ಹೊರತಂದರು. ಅಂತಹುದು ಅದೇ ಮೊದಲು; ಮತ್ತೆ ಅಂತಹ ತುರ್ತುಗಳು ಎದುರಾಗಿದ್ದರೂ ಇಲ್ಲಿಯವರೆಗೆ ಮತ್ತೊಂದು ಅಂತಹ ಸಂಚಿಕೆ ಪ್ರಜಾವಾಣಿಯಲ್ಲಿ ಸಾಧ್ಯವಾಗಿಲ್ಲ.

ನರಗುಂದ ಬಂಡಾಯದ ನಂತರ ರಾಜ್ಯದೆಲ್ಲೆಡೆಯಲ್ಲಿ ನಡೆದ ಹೋರಾಟಗಳ ತೀವ್ರ ಸ್ವರೂಪ ಮತ್ತು ಅವುಗಳ ಮೇಲೆ ಅಲ್ಲಲ್ಲಿ ಗೋಲೀಬಾರ್, ದಿನದಿನವೂ ಹತ್ಯೆಗಳು, ಇವು ರಾಜ್ಯದ ಜನರಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಜನಾಭಿಪ್ರಾಯದ ಅಲೆಯನ್ನು ಸೃಷ್ಟಿಸಿತು. ಈ ಪ್ರಮಾಣದ ದೌರ್ಜನ್ಯಗಳಿಗೆ ಶಿಕ್ಷೆಯಾಗಿ ಗುಂಡೂರಾವ್ ಸರ್ಕಾರದ ಪತನವೇ ಆಗಬೇಕಾಗಿತ್ತು. ಆದರೆ ಇಂದಿರಾ ರೈತ ಚಳವಳಿಯ ಉರುಬನ್ನು ನಿಲ್ಲಿಸಲು ಮಾತ್ರ ಆದೇಶ ನೀಡಿದರು. ಅಂತಹ ಪ್ರಯತ್ನಗಳನ್ನು ಸರ್ಕಾರ ಆರಂಭಿಸಿತು. ಅಂದು ಕೃಷಿ ಮಂತ್ರಿ ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಯಿತು. ಅದು ಎರಡು ವರದಿಗಳನ್ನು ಸಲ್ಲಿಸಿತು.

ವಿಧಾನಸಭೆ, ಪರಿಷತ್ತುಗಳಲ್ಲಿ ಆಕ್ರೋಶ ವ್ಯಕ್ತವಾಯಿತು. ಸರ್ಕಾರವನ್ನು ಖಂಡಿಸಿ ಭಾಷಣಗಳ ಮೇಲೆ ಭಾಷಣಗಳಾದವು. ಆದರೆ ಆಗಿನ ವಿರೋಧ ಪಕ್ಷಗಳು ಮುಖ್ಯವಾಗಿ ಜನತಾ ಪಕ್ಷ, ಮುಖ್ಯಮಂತ್ರಿಯ ರಾಜೀನಾಮೆಯಿರಲಿ, ಒಬ್ಬ ಮಂತ್ರಿಯ ರಾಜೀನಾಮೆಯನ್ನೂ ಕೇಳಲಿಲ್ಲ ಎಂಬುದು ಆಶ್ಚರ್ಯಕರವಾಗಿತ್ತು. ಚರ್ಚೆಗಳು ಮತ್ತು ಅದಕ್ಕೆ ಮುಖ್ಯಮಂತ್ರಿಯಿಂದ ಸಮರ್ಥನೆ ಇಷ್ಟಕ್ಕೇ ಈ ಕಾರ್ಯಕಲಾಪಗಳು ಸೀಮಿತವಾದವು. ಸರ್ಕಾರದ ದಬ್ಬಾಳಿಕೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರು ನೀಡಿದ ಸಮರ್ಥನೆ ಎಂದರೆ “ಯಾರ್‍ಯಾರೋ ದೊಡ್ಡದೊಡ್ಡ ಭೂಮಾಲಕರು ಕೋಟ್ಯಂತರ ರೂ ತೆರಿಗೆ ಕೊಡಲು ತಪ್ಪಿಸಿಕೊಂಡು, ಆಯಾಯ ಊರುಗಳಲ್ಲಿ ಪ್ರಚೋದನೆ ಮಾಡಿ ಮುಗ್ಧರನ್ನು ಆಹುತಿಗೆ ತಳ್ಳುತ್ತಿದ್ದಾರೆ. ಸ್ವಾರ್ಥ ಸಾಧಿಸುತ್ತಿದ್ದಾರೆ. ಇದನ್ನು ನಾವು ನೋಡುತ್ತಾ ಸುಮ್ಮನೆ ಕೂರಬೇಕೇ” ಎಂದು.

ನಾಲ್ಕಾರು ಕಡೆ ಗುಂಡೇಟು ಮತ್ತು ಹದಿನೈದು ಸಾವು ಸಂಭವಿಸಿ ರಾಜ್ಯಾದ್ಯಂತ ಹಾಹಾಕಾರ ಎದ್ದ ಮೇಲೆ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ 29.07.80ರಂದು ವಿರೋಧ ಪಕ್ಷಗಳು ಧರಣಿ ಆರಂಭಿಸಿದವು. ಅಂದೇ ಮೇಲೆ ಉಲ್ಲೇಖಿಸಿದ ಸಮಿತಿ ಒಂದು ಮಧ್ಯಂತರ ವರದಿಯನ್ನು ನೀಡಿತು.

ಈ ಎಲ್ಲ ಒತ್ತಡಗಳ ಫಲವಾಗಿ ಬಂಧಿಸಿದ ರೈತರನ್ನು ಬಿಡುಗಡೆ ಮಾಡಲಾಯಿತು. ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿಯ ನಾಯಕರನ್ನು ಆಹ್ವಾನಿಸಿ ಅವರೊಂದಿಗೆ ಮುಖ್ಯಮಂತ್ರಿಯೇ ಮಾತುಕತೆ ನಡೆಸಿದರು.

ಈ ಆಧಾರದ ಮೇಲೆ ಮುಖ್ಯಮಂತ್ರಿ ನರಗುಂದ ಮತ್ತು ನವಲಗುಂದ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವ ಮತ್ತು ಶಾಸಕಾಂಗದ ಜಂಟಿ ಸಮಿತಿಯೊಂದನ್ನು ನೇಮಿಸುವ ಬಗ್ಗೆ ಒಪ್ಪಿಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ ಮರುದಿನ ಜುಲೈ 30ರಂದು 85 ಕೋಟಿ ರೂಗಳಿಗಿಂತ ಹೆಚ್ಚು ಪರಿಹಾರವನ್ನು ಘೋಷಿಸಿದರು. ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿಯವರ ನೇತೃತ್ವದಲ್ಲಿ ಒಂದು ಶಾಸಕಾಂಗ ಜಂಟಿ ಸಮಿತಿಯನ್ನು ಹಾಗೂ ಒಂದು ನ್ಯಾಯಾಂಗ ತನಿಖೆ ಆಯೋಗವನ್ನು ನೇಮಿಸಲು ಒಪ್ಪಿಕೊಳ್ಳಲಾಯಿತು.

ಘೋಷಿಸಿದ ಈ ಪರಿಹಾರಗಳಲ್ಲಿ ರೈತರಿಗೆ ಬಹಳ ಮುಖ್ಯವಾದುದು ಬೆಟರ್‌ಮೆಂಟ್ ಲೆವಿ ರದ್ದತಿ, ನೀರಿನ ಕರದ ಬಗ್ಗೆ ಪುನರ್ ಪರೀಶಿಲನೆ, ಬೆಂಬಲ ಬೆಲೆ ನಿಗದಿ ಮಾಡಿ ತಕ್ಷಣವೇ ಮುಸುಕಿನ ಜೋಳ ಮತ್ತಿತರ ಫಸಲುಗಳನ್ನು ಕೊಳ್ಳಲು ಅಂದಿಗೆ ದೊಡ್ಡ ಮೊತ್ತವಾದ 25 ಕೋಟಿ ಹಣ ಬಿಡುಗಡೆ.

ಇವುಗಳ ಜೊತೆಗೆ ರಾಜ್ಯದ ಎಲ್ಲ ರೈತರಿಗೆ ಪ್ರಯೋಜನ ದೊರಕುವಂತೆ ಪಂಪ್‌ಸೆಟ್‌ಗಳ ವಿದ್ಯುತ್ ದರ ಕಡಿತ, ರಸಗೊಬ್ಬರದ ಮೇಲೆ ತೆರಿಗೆ ಇಳಿಕೆ, ಸರ್ಕಾರ ನೇರವಾಗಿ ಕೊಟ್ಟಿದ್ದ ತಕಾವಿ ಸಾಲ ಪೂರ್ತಿ ಮನ್ನಾ, ಸಹಕಾರಿ ಸಾಲಗಳ ಮೇಲೆ ದಂಡ ಶುಲ್ಕ ಮನ್ನಾ ಮತ್ತು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅರ್ಹತೆ ಆಧಾರದ ಮೇಲೆ ಸಾಲಮನ್ನಾ ಇತ್ಯಾದಿ.

ಕೆಂಪೇಗೌಡ ಆಯೋಗವೆಂಬ ನ್ಯಾಯಾಂಗ ಆಯೋಗವನ್ನು 21.08.80ರಂದು ನೇಮಿಸಲಾಯಿತು. ಈ ಆಯೋಗಕ್ಕೆ ಸರ್ಕಾರ ನೀಡಿದ ಕಾರ್ಯಸೂಚಿ ಎಷ್ಟು ಸೀಮಿತವಾಗಿತ್ತೆಂದರೆ ಅದು ಜನರ ಕಣ್ಣೊರೆಸಲು ರಚಿಸಿದ್ದೆಂಬುದು ಸ್ಪಷ್ಟವಾಗಿತ್ತು. ರಾಜ್ಯದ ಹಲವಾರು ಕಡೆಗಳಲ್ಲಿ ನಡೆದ ಚಳವಳಿ, ಅವುಗಳ ಕಾರಣಗಳು, ಗುಂಡೇಟು ಮತ್ತು ರೈತರ ಹತ್ಯೆ ಇವಕ್ಕೆ ಮತ್ತು ಆಯೋಗಕ್ಕೇನು ಸಂಬಂಧವಿರಲಿಲ್ಲ. ಮಲಪ್ರಭಾ ಪ್ರದೇಶದ ರೈತ ಚಳವಳಿಗೆ ಸಂಬಂಧಿಸಿದಂತೆ ಕೂಡಾ ನರಗುಂದ, ನವಲಗುಂದ ಎರಡೇ ತಾಲ್ಲೂಕಿಗೆ ಮಾತ್ರ ಅದನ್ನು ಸೀಮಿತಗೊಳಿಸಲಾಗಿತ್ತು. ಸವದತ್ತಿ ತಾಲೂಕು, ರೋಣ ತಾಲೂಕಿನ ಪ್ರಸ್ತಾಪ ಕೂಡಾ ಇರಲಿಲ್ಲ. ಈ ಆಯೋಗದ ಮುಂದೆ ಕೃಷಿ ಅಧಿಕಾರಿಯಾಗಿ ನಾನೂ ಹಾಜರಾಗಿ ಸಾಕ್ಷಿ ಹೇಳಿದೆ. ಸರ್ಕಾರದ ಅಧಿಕಾರಿಗಳ ಅದಕ್ಷತೆ, ಜನರ ಮನವಿಗೆ ಸ್ಪಂದಿಸದ ಅಧಿಕಾರಿಶಾಹಿ ಮನಸ್ಥಿತಿಯೇ ಈ ಚಳವಳಿಗೆ ಕಾರಣ, ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಅಂದಿನ ಘಟನೆಗಳನ್ನು ನಿವಾರಿಸಬಹುದಾಗಿತ್ತು ಎಂಬ ತೀರ್ಮಾನಕ್ಕೆ ಈ ಆಯೋಗ ಬಂದಿತು. ತನಗೆ ನೀಡಿದ್ದ ವ್ಯಾಪ್ತಿಯಲ್ಲಿ ರೈತರ ಚಳವಳಿಯನ್ನು ಸಮರ್ಥಿಸಿತು. ಸರ್ಕಾರ ಈ ರೀತಿಯಾಗಿ ಮಣಿದದ್ದು ರೈತರ ಹೋರಾಟಕ್ಕೆ ಸಂದ ದೊಡ್ಡ ಜಯ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ರೈತ ಸಮುದಾಯದಲ್ಲಿ ಮೂಡಿದ ಎಚ್ಚರ ರಾಜ್ಯದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ಮುಂದೆಂದೂ ಇಲ್ಲದಂತೆ ಬದಲಾಯಿಸಿತು.

ಜುಲೈ ಹೋರಾಟದ ಅಲೆ ಎಂದು ಕರೆಯಬಹುದಾದ ಈ ಸರಣಿಯ ನಂತರವೂ ಹೊಗೆಸೊಪ್ಪು, ಕಬ್ಬು, ಆಲೂಗಡ್ಡೆ ಮೊದಲಾದ ಬೆಳೆಗಾರರ ನಡುವೆ ಹಾಗೂ ಬರಗಾಲಪೀಡಿತ ರೈತರ ನಡುವೆ ಹಲವು ಪ್ರದೇಶಗಳಲ್ಲಿ ಹೋರಾಟಗಳು ಸ್ಫೋಟಿಸುತ್ತಲೇ ಇದ್ದವು. ಗುಂಡೂರಾವ್ ಸರ್ಕಾರ ಜುಲೈ ಹೋರಾಟದ ಸ್ಫೋಟಗಳಿಂದ ಯಾವುದೇ ಪಾಠ ಕಲಿಯಲಿಲ್ಲ. 1983ರವರೆಗೆ ಅವರ ಅಧಿಕಾರಾವಧಿಯ ಉದ್ದಕ್ಕೂ ಹಲವು ಬಾರಿ ಗುಂಡು ಹಾರಿಸಲಾಯಿತು. ನಿಪ್ಪಾಣಿಯಲ್ಲಿ 20 ದಿನಗಳಿಗೂ ಹೆಚ್ಚು ಕಾಲದಿಂದ ಹೋರಾಟ ಮಾಡುತ್ತಿದ್ದ ಹತ್ತಾರು ಸಾವಿರ ಹೊಗೆಸೊಪ್ಪು ಬೆಳೆಗಾರರ ಮೇಲೆ ಗುಂಡು ಹಾರಿಸಿ 11 ಜನರನ್ನು, ಶಿವಮೊಗ್ಗದ ನಾಗಸಮುದ್ರದಲ್ಲಿ 3 ಜನ, ಮಂಡ್ಯದ ಗೆಜ್ಜಲಗೆರೆಯಲ್ಲಿ ಇಬ್ಬರನ್ನು ಕೊಂದು ಹಾಕಲಾಯಿತು. ಇನ್ನು ಗುಂಡೇಟಿನಿಂದ, ಲಾಠಿ ಚಾರ್ಜ್‌ಗಳಿಂದ ಗಾಯಗೊಂಡವರು, ಬಂಧನಕ್ಕೀಡಾದವರಿಗೆ ಲೆಕ್ಕವೇ ಇಲ್ಲ. ರೈತರ ಮೇಲೆ ಮಾತ್ರವಲ್ಲದೆ ಕಾರ್ಮಿಕರ ಹೋರಾಟಗಳ ಮೇಲೂ ಇಂತಹುದೇ ದೌರ್ಜನ್ಯಗಳನ್ನು ಗುಂಡೂರಾವ್ ಸರ್ಕಾರ ಎಸಗಿತು. ಬೆಂಗಳೂರಿನಲ್ಲಿ ಬೆಲೆ ಏರಿಕೆಯ ವಿರುದ್ಧ, ವೇತನ ಏರಿಕೆಗಾಗಿ ಕೇಂದ್ರ ಸರ್ಕಾರದ ಒಡೆತನದ ಸಾರ್ವಜನಿಕ ರಂಗದ ಸುಮಾರು ಒಂದೂಕಾಲು ಲಕ್ಷ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರದ ಸಮಯದಲ್ಲಿಯೂ ಕೂಡಾ ಗಂಡು ಹಾರಿಸಲಾಯಿತು. ಈ ಪ್ರಮಾಣದ ಗುಂಡಿನ ದಾಳಿ ಬ್ರಿಟಿಷರ, ರಾಜ ಪ್ರಭುತ್ವದ ಕಾಲವನ್ನೂ ಸೇರಿಸಿದಂತೆ ಹಿಂದೆಂದೂ ಆಗಿರಲಿಲ್ಲ. ಇಲ್ಲಿಯವರೆಗೆ ಮತ್ತೆ ಯಾವ ಸರ್ಕಾರವೂ ಇಂತಹ ದುಷ್ಟ ಧೈರ್ಯ ಮಾಡಿಲ್ಲ.

ರೈತ ಚಳವಳಿಯ ಬೆಳವಣಿಗೆ

ರೈತ ಹೋರಾಟದ ಈ ಬೃಹತ್ ಅಲೆ ಮಲಪ್ರಭಾ ರೈತ ಹೋರಾಟಗಾರರನ್ನು ದೊಡ್ಡ ಕ್ರಿಮಿನಲ್‌ಗಳಂತೆ ಬಿಂಬಿಸಿ ಅವರನ್ನು ದೀರ್ಘಕಾಲದ ಜೈಲು ಶಿಕ್ಷೆಗೆ ತುತ್ತಾಗಿಸುವುದರಿಂದ ತಪ್ಪಿಸಿತು. ರಾಜ್ಯದ ಜನರು ಅವರುಗಳನ್ನು ಮೆಚ್ಚುಗೆಯಿಂದ ನೋಡುವಂತಾಯಿತು.

ಸ್ವಾತಂತ್ರ್ಯಪೂರ್ವದಿಂದಲೇ ಕರ್ನಾಟಕದ ಕೆಲ ಭಾಗಗಳಲ್ಲಿ ಕ್ರಿಯಾಶೀಲವಾಗಿದ್ದ, ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದ ರೈತ ಚಳವಳಿ, ಕರ್ನಾಟಕ ಏಕೀಕರಣವಾದ ಕೂಡಲೇ 1957ರಲ್ಲಿ ಕರ್ನಾಟಕ ಪ್ರಾಂತ ರೈತ ಸಂಘವಾಗಿ ಸಂಘಟಿತವಾಗಿತ್ತು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕ್ರಿಯಾಶೀಲವಾಗಿ, ಗೇಣಿ ರೈತರ ಸಮಸ್ಯೆ, ಭೂ ಸುಧಾರಣೆ ಮೊದಲಾದ ಸಮಸ್ಯೆಗಳನ್ನು ಎತ್ತಿಕೊಂಡು ಚಳವಳಿ ನಡೆಸುತ್ತಿತ್ತು. ಅದು ಕರ್ನಾಟಕದ ಮೊತ್ತ ಮೊದಲ ರೈತ ಸಂಘಟನೆಯಾಗಿತ್ತು.

ಉ.ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೇ ಶ್ಯಾಮರಾವ್ ಪರುಳೇಕರ್, ಎನ್.ಎಲ್.ಉಪಾಧ್ಯಾಯ ಮೊದಲಾದವರ ನೇತೃತ್ವದಲ್ಲಿ ಕಿಸಾನ್‌ಸಭಾ ನಾಯಕರು ಸ್ವತಂತ್ರವಾಗಿ ಭೂ ಹೋರಾಟಗಳ ನೇತೃತ್ವ ವಹಿಸಿದ್ದರು. ದಿನಕರ ದೇಸಾಯಿಯವರ ಪ್ರಸಿದ್ಧ ಗೇಣಿ ರೈತರ ಹೋರಾಟ ಕೆಂಬಾವುಟದಡಿಯಲ್ಲಿ ಸಂಘಟಿತವಾದ ರೈತರ ಹೋರಾಟವಾಗಿತ್ತು. ಕೆಂಪು ಬಾವುಟವು ರೈತನದೋ ಎಂದು ಅವರ ಕವನದಲ್ಲಿ ಅದು ಪ್ರತಿಧ್ವನಿಸಿದೆ. ಪ್ರಸಿದ್ಧ ಕಾಗೋಡು ಸತ್ಯಾಗ್ರಹದ ಗಣಪತಿಯಪ್ಪನವರು ಈ ಉತ್ತರ ಕನ್ನಡದ ಕೆಂಬಾವುಟದ ಹೋರಾಟದಿಂದ ಪ್ರೇರಣೆ ಪಡೆದು ಕಾಗೋಡು ಸತ್ಯಾಹ ಆರಂಭಿಸಿದರು ಎಂಬುದನ್ನು ನೆನಪಿಸಿಕೊಳ್ಳೋಣ. ಈ ಹೋರಾಟದ ನೇತೃತ್ವವನ್ನು ಮುಂದೆ ಗೋಪಾಲ ಗೌಡರು ವಹಿಸಿಕೊಂಡು ಮುನ್ನಡೆಸಿದರು. ಕೇರಳದ ಮಲಬಾರ್ ಪ್ರದೇಶದ ಕಿಸಾನ್‌ಸಭಾ ನೇತೃತ್ವದ ರೈತ ಚಳವಳಿಗಳಿಂದ ಪ್ರೇರಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗೇಣಿದಾರರು ಸ್ವಾತಂತ್ರ್ಯ ಪೂರ್ವದಲ್ಲೇ ಪ್ರಶ್ನೆಗಳನ್ನು ಎತ್ತಿದ್ದರು. ಸ್ವಾತಂತ್ರ್ಯಾನಂತರ ಬಿವಿ ಕಕ್ಕಿಲ್ಲಾಯ, ಕೃಷ್ಣ ಶೆಟ್ಟರು, ಕೃಷ್ಣಪ್ಪ, ಜನಾರ್ಧನ ನಾಯಕ್, ಅಬ್ರಹಾಂ ಕರ್ಕಡ ಮೊದಲಾದವರ ನೇತೃತ್ವದಲ್ಲಿ ರೈತ ಚಳವಳಿ ಬಿರುಸಾಗಿತ್ತು. ಬಿಜಾಪುರ, ಕೊಡಗು, ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿಯೂ ಭೂ ಸುಧಾರಣೆಗಾಗಿ ಹೋರಾಟಗಳು ನಡೆದಿದ್ದವು.

ಅಖಿಲ ಭಾರತಕಿಸಾನ್ ಸಭಾ 1979ರಲ್ಲಿ ಭಾರತದ ಕೃಷಿ ಪರಿಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ಮಾಡಿ, ಭೂಮಿಯ ಒಡೆತನ, ಗೇಣಿ ಸಮಸ್ಯೆಗಳ ಜೊತೆಗೆ, ಬೆಳೆ, ಬೆಲೆ, ನೀರಾವರಿ ಸಮಸ್ಯೆಗಳು ತೀವ್ರವಾಗಿದ್ದು, ಭೂಮಿ ಮೂಲಭೂತ ಪ್ರಶ್ನೆಯಾಗಿರುವಾಗಲೇ ಈ ಸಮಸ್ಯೆಗಳ ಮೇಲೆ ರೈತ ಹೋರಾಟಗಳನ್ನು ರೂಪಿಸಬೇಕು ಎಂದು ತೀರ್ಮಾನಿಸಿತ್ತು. ಭಾರತದ ರೈತ ಚಳವಳಿಯಲ್ಲಿ ಇದು ವಾರಣಾಸಿ ಸಮ್ಮೇಳನದ ನಿಲುವು ಎಂದು ಪ್ರಸಿದ್ಧವಾಗಿದೆ. ದೇಶಾದ್ಯಂತ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆಯ ಸಮಸ್ಯೆಗಳನ್ನು ಗುರುತಿಸಿ, ಅಧ್ಯಯನ ಮಾಡಿ ಚಳವಳಿಗಳನ್ನು ವಿಸ್ತರಿಸುವುದರಲ್ಲಿ, ಹಲವು ರೈತ ಚಳವಳಿಗಳ ಮೇಲೆ ಪ್ರಭಾವ ಬೀರುವುದರಲ್ಲಿ ಪಾತ್ರ ವಹಿಸಿದೆ. ಮಲಪ್ರಭಾ ಹೋರಾಟದ ಉರುಬಿನ ನಂತರ ಪ್ರಾಂತ ರೈತ ಸಂಘದ ರಾಜ್ಯ ಮಂಡಳಿಯ ನೇತೃತ್ವದಲ್ಲಿ ಈ ಹೋರಾಟನಿರತ ಹಾಗೂ ಬಂಧಿತ ರೈತರಿಗೆ ಬೆಂಬಲ ಘೋಷಿಸಿ ವಿವಿಧ ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ಪ್ರತಿಭಟನೆಗಳು ನಡೆಸಿದವು. ಅದರ ಘಟಕಗಳು ಮತ್ತಷ್ಟು ಕ್ರಿಯಾಶೀಲವಾಗಿ ರೈತ ಹೋರಾಟಗಳನ್ನು ಸಂಘಟಿಸಿದವು. ಮಲಪ್ರಭಾ ರೈತರ ಚಳವಳಿಯನ್ನು ರಾಜ್ಯಾದ್ಯಂತ ವಿಸ್ತರಿಸುವಲ್ಲಿ ಗಣನೀಯ ಪಾತ್ರ ವಹಿಸಿದವು. ಹೊಸದಾಗಿ ಹಲವು ಜಿಲ್ಲೆಗಳಲ್ಲಿ ಪ್ರಾಂತ ರೈತ ಸಂಘದ ಘಟಕಗಳು ಆರಂಭವಾದುವು. ಮಲಪ್ರಭಾ ಹೋರಾಟದ ನಾಯಕ ವಿ.ಎನ್.ಹಳಕಟ್ಟಿಯವರು ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ನಾಯಕರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಆ ವೇಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ರೈತರ ಸ್ಥಳೀಯ ಸಮಸ್ಯೆಗಳನ್ನು ಎದುರಿಸಲು ಕಬ್ಬು ಬೆಳೆಗಾರರ ಸಂಘ ಮಂತಾದವುಗಳನ್ನು ರಚಿಸಿಕೊಂಡಿದ್ದ ರೈತ ಸಂಘಗಳು ಎಚ್ಚರಗೊಂಡವು. ರೈತ ಹೋರಾಟಗಳಲ್ಲಿ ಪಾಲ್ಗೊಳ್ಳಲಾರಂಭಿಸಿದವು. ಇದರಲ್ಲಿ ಶಿವಮೊಗ್ಗದ ರುದ್ರಪ್ಪನವರ ನೇತೃತ್ವದ ಕಬ್ಬು ಬೆಳೆಗಾರರ ಸಂಘವೂ ಒಂದು.

ಈ ಹೋರಾಟಗಳಲ್ಲೆಲ್ಲಾ ಪಾಲ್ಗೊಂಡ ಸಂಘಟನೆಗಳು, ಮಲಪ್ರಭಾ ಹೋರಾಟಗಾರರು ಸೇರಿದಂತೆ ಮತ್ತು ಅವುಗಳ ನಾಯಕರು ಆಗಸ್ಟ್ 11ರಂದು ಸಭೆ ಸೇರಿ ಇಡೀ ರಾಜ್ಯದ ರೈತರ ಸಮಸ್ಯೆಗಳನ್ನು ಚರ್ಚಿಸಿ ಸಮಗ್ರ ಒತ್ತಾಯಗಳ ಪಟ್ಟಿಯನ್ನು ಸಿದ್ಧ ಮಾಡಿದವು. ಈ ಸಂದರ್ಭದಲ್ಲಿ ಸಮಾಜವಾದಿ ಹಾಗೂ ಜೆಪಿ ಚಳವಳಿಯಲ್ಲಿ ಕ್ರಿಯಾಶೀಲವಾಗಿದ್ದ ಪ್ರೊ.ನಂಜುಂಡಸ್ವಾಮಿಯವರು ರೈತ ಚಳವಳಿಗೆ ಪ್ರವೇಶ ಮಾಡಿದರು. ಆದರೆ ಅವರು ಮಲಪ್ರಭಾ ರೈತ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘಗಳ ಜೊತೆಗೆ ಸೇರಿ ಒಗ್ಗಟ್ಟಿನ ಚಳವಳಿ ಕೈಗೊಳ್ಳಲು ಒಪ್ಪದೆ ಪ್ರತ್ಯೇಕಗೊಳ್ಳಲು ಉಜ್ಜುಗಿಸಿದರು. ಸೆಪ್ಟೆಂಬರ್‌ನಲ್ಲಿ ಒಂದು ರೈತ ಸಮಾವೇಶ ನಡೆಸಿ ಕರ್ನಾಟಕ ರಾಜ್ಯ ರೈತ ಸಂಘದ ಸ್ಥಾಪನೆ ಮಾಡಿದರು.

ಹೀಗೆ ಕರ್ನಾಟಕದ ಎಲ್ಲಾ ರೈತರ ಒಗ್ಗಟ್ಟಿನ ಸಮನ್ವಯ ಸಮಿತಿಯ ಬದಲಾಗಿ ಎರಡು ರಾಜ್ಯವ್ಯಾಪಿ ರೈತ ಸಂಘಗಳು ಕೆಲಸ ಮಾಡುವಂತಾಯಿತು. ಕೃಷಿಗೆ ಸಂಬಂಧಿಸಿದಂತೆ ಈ ಎರಡು ರೈತ ಸಂಘಗಳ ವಿಚಾರ ಪ್ರಣಾಳಿಕಯೂ ಭಿನ್ನವಾಗಿದ್ದಿತು. ಈ ಸಂಘಗಳ ಒತ್ತಾಯಗಳು ಮತ್ತು ಹೋರಾಟಕ್ಕೆ ಎತ್ತಿಕೊಂಡ ಸಮಸ್ಯೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಈ ಎರಡೂ ರೈತ ಚಳವಳಿಯ ಧಾರೆಗಳು ಅಂದಿನಿಂದಲೇ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಕರ್ನಾಟಕದ ರೈತ ಚಳವಳಿ ಮತ್ತಷ್ಟು ಉನ್ನತ ಸ್ತರವನ್ನು ಮುಟ್ಟಲು ಸಾಧ್ಯವಾಗುತ್ತಿತ್ತಲ್ಲಾ ಎಂಬುದು ಮುಂದಿನ ವರ್ಷಗಳಲ್ಲಿ ನಂಜುಂಡಸ್ವಾಮಿಯವರ ಜೊತೆ ಈ ಬಗ್ಗೆ ಹಲವು ಬಾರಿ ಸಂವಾದಿಸಿದ ನನ್ನ ಹಳಹಳಿಕೆಯಾಗಿದೆ. ಹೀಗೆ ಒಂದು ಧಾರೆ ಪ್ರಾಂತ ರೈತ ಸಂಘವಾಗಿ ಮತ್ತೊಂದು ಧಾರೆ ರಾಜ್ಯ ರೈತ ಸಂಘವಾಗಿ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ತೀವ್ರಗೊಳಿಸಿದವು.

(ಕೃಷಿ ಕಾರ್ಪೊರೆಟೀಕರಣ ಲೇಖನ ಸರಣಿಯ ಭಾಗವಾದ ಈ ಬರಹ ಎರಡು ಭಾಗಗಳಲ್ಲಿ ಪ್ರಕಟಗೊಳ್ಳಲಿದೆ. ಮುಂದಿನ ಭಾಗದಲ್ಲಿ: ದೇಶಾದ್ಯಂತ ಹಬ್ಬಿದ ರೈತ ಚಳವಳಿ, ರಾಜ್ಯದ ರಾಜಕೀಯಕ್ಕೆ ಮಹಾತಿರುವು)

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80 ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...