ದಶಕಗಳ ಕಾಲ ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜನಪರ ಚಳವಳಿಗಳ ಸಂಗಾತಿ, ಯುವ ಹೋರಾಟಗಾರ ತ್ರಿಮೂರ್ತಿ ಮಂಡ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಜನಶಕ್ತಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ, ಜನಚಿಂತನಾ ಕೇಂದ್ರ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಇತ್ತೀಚಿಗಿನ ದಲಿತರ ಸಾಂಸ್ಕೃತಿಕ ಪ್ರತಿರೋಧ, ಒಳಮೀಸಲಾತಿ ಹೋರಾಟದಲ್ಲಿಯೂ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟದ ಪ್ರಚಾರದ ಕೆಲಸದಲ್ಲಿ ನಿರತರಾಗಿದ್ದರು.
ಮೂಲತಃ ಕುಂಬಳಗೋಡು ಬಳಿಯ ದೇವಗೆರೆಯವರಾದ ತ್ರಿಮೂರ್ತಿಯವರು 2010-11 ರಲ್ಲಿ ಚಳವಳಿಗೆ ತೆರೆದುಕೊಂಡಿದ್ದರು. ಆನಂತರ ಭೂಮಿ- ವಸತಿ ಹೋರಾಟ, ಕೋಮು ಸೌಹಾರ್ದ ಚಳವಳಿ, ದಲಿತ ಚಳವಳಿ ಮತ್ತು ಮಹಿಳಾ ಚಳವಳಿಗಳಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದರು. ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು, ಪರಿಶ್ರಮ ಹಾಕಿ ಕೆಲಸ ಮಾಡುತ್ತಿದ್ದರು ಎಂಬ ಹೆಗ್ಗಳಿಕೆ ಅವದ್ದಾಗಿತ್ತು.
ವಯಕ್ತಿಕ ಕಾರಣಗಳಿಂದ ಬೇಸತ್ತು ಮಂಡ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಲ್ಲಾ ಜನಪರ ಚಳವಳಿಗಳ ಪರವಾಗಿ ತುಡಿಯುತ್ತಿದ್ದ ಅವರ ಅಕಾಲಿಕ ನಿಧನಕ್ಕೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನಪರ ಚಳವಳಿಗಳ ಸಂಗಾತಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಹೋರಾಟದ ಸ್ಥಳದಲ್ಲಿ ಇಂದು ತ್ರಿಮೂರ್ತಿ ನೆನಪಿನ ಶ್ರದ್ಧಾಂಜಲಿ ಸಭೆ ನಡೆಸಿದೆ.

“ಬೆಂಗಳೂರಿನಲ್ಲಿ ಪೌರ ಕಾರ್ಮಿಕರ ಹೋರಾಟ ಹುರಿಗೊಳ್ಳುತ್ತಿದ್ದಾಗ ಬೆಳಂಬೆಳಗ್ಗೆ ಶ್ರಮಿಕರ ವಸತಿ ಮತ್ತು ಕೆಲಸದ ಪ್ರದೇಶಗಳಲ್ಲಿ ಅಲೆದೆಲೆದು ಸಂಘಟನೆ ಬಲಪಡಿಸಲು ಶ್ರಮಿಸಿದವರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಚಟುವಟಿಕೆಗಳು ಸಕ್ರಿಯವಾಗಿದ್ದಾಗ ಅದರ ದಕ್ಷ ಸಂಘಟಕರಾಗಿ ದುಡಿದವರು. ಮಂಗಳೂರಿನ ಸಹಬಾಳ್ವೆ ಸಾಗರ ಸಮಾವೇಶ ಸಂಘಟಿಸುವುದರಲ್ಲಿ ಮುಖ್ಯ ಜವಬ್ದಾರಿ ನಿರ್ವಹಿಸಿದವರು. ಸಂವಿಧಾನ ಉಳಿವಿಗಾಗಿ ಕರ್ನಾಟಕ ಅಭಿಯಾನ ಶುರುವಾದಾಗ ಅದರ ಸೋಷಿಯಲ್ ಮೀಡಿಯಾ ಕೆಲಸವನ್ನು ಮೈಮೇಲೆ ಹೊತ್ತು ಮಾಡಿದವರು. ಪೆಡೆಸ್ಟ್ರಿಯನ್ ಪಿಚ್ಚರ್ಸಸ್ ನ ಕಾರ್ಯಚಟುವಟಿಕೆಗಳಲ್ಲಿ, ಲಗೋರಿ ಗುಂಪಿನ ಚಾಲನೆಯಲ್ಲಿ ಮನಸ್ಸಿಟ್ಟು ಕೆಲಸ ಮಾಡಿದವರು. ವೈಚಾರಿಕ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ವೈಚಾರಿಕ ಗ್ರಹಿಕೆಯನ್ನು ಬೆಳೆಸಬೇಕು ಎಂಬ ಉತ್ಕಟ ಬಯಕೆಯೊಂದಿಗೆ ಜನ ಚಿಂತನಾ ಕೇಂದ್ರದ ಕೇಂದ್ರ ತಂಡದ ಭಾಗವಾಗಿ ಅನೇಕ ಜವಬ್ದಾರಿಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು, ಮಾತ್ರವಲ್ಲದೆ ಕರ್ನಾಟಕದ ಸಮಸ್ತ ಚಳವಳಿಗಳೂ ತನ್ನವೆಂದು ತೊಡಗಿಸಿಕೊಂಡವರು…. ಇಂತಹ ದಿಟ್ಟ ಸಂಗಾತಿಯ ಅಗಲಿಕೆ ಸಂಘಟನೆಗೆ ಮತ್ತು ಹೋರಾಟದ ವಲಯಕ್ಕೆ ಅಘಾತ ನೀಡಿದೆ” ಎಂದು ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸಂತಾಪ ವ್ಯಕ್ತಪಡಿಸಿದೆ.

“ಸಾಮಾಜಿಕ ಮತ್ತು ಚಳವಳಿಯ ಕಾರಣಗಳಷ್ಟೇ ಅಲ್ಲದೇ ಕೌಟುಂಬಿಕ ಕಾರಣಗಳಿಗೂ ಬಂದೊದಗುತ್ತಿದ್ದ ತ್ರಿಮೂರ್ತಿಯ ದಿಢೀರ್ ಅಗಲಿಕೆ ನಮ್ಮ ಮನೆಯವರಿಗೆಲ್ಲಾ ಆಘಾತದ ಮತ್ತು ನೋವಿನ ಸಂಗತಿಯೇ. ಹೆಚ್ಚು ಹೇಳಲು ತೋಚುತ್ತಲೂ ಇಲ್ಲ, ಕಷ್ಟವಾಗುತ್ತಲೂ ಇದೆ. ಆದರೆ ನಾವ್ಯಾರೂ ಯಾಕೆ ತ್ರಿಮೂರ್ತಿಗೆ ನೆನಪಿಗೆ ಬರಲೇ ಇಲ್ಲ. ನಮ್ಮ ಸಂಬಂಧಗಳ ಆಪ್ತತೆಯನ್ನು ಮತ್ತು ಆತ್ಮೀಯತೆಯನ್ನು ಅನುಮಾನಿಸುವಷ್ಟು ’ನಾನು’ ಅಪ್ರಮಾಣಿಕವಾಗಿ ಅವನಿಗೆ ಕಂಡೆನೇ ಎಂಬುದಂತೂ ಪದೇ ಪದೇ ಅನ್ನಿಸುತ್ತಿದೆ. ನಾನು ಇನ್ನೆಷ್ಟು ಮುಕ್ತವಾಗಿ ಕಾಣಿಸಿಕೊಳ್ಳಬೇಕಿತ್ತೋ?” ಎಂದು ಬರಹಗಾರ ಯೋಗೇಶ್ ಮಾಸ್ಟರ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಎಲ್ಲರಿಗೂ ಆಪ್ತ ಸಮಾಲೋಚನೆಯ ಅಗತ್ಯವಿದೆ. ಅದನ್ನು ಕಡೆಗಣಿಸಬೇಡಿ. ಮನಸ್ಸು ಸೂಕ್ಷ್ಮ ಮತ್ತು ಭಾವುಕ. ಅದಕ್ಕೆ ಪದೇ ಪದೇ ಸಮಾಲೋಚನೆಯ ಮೂಲಕ ಅದರ ಬಲವನ್ನು ಹೆಚ್ಚಿಸಬೇಕಾಗುತ್ತದೆ.
ನೊಂದವರ ಮತ್ತು ಶೋಷಿತರ ಪರ ಹೋರಾಡುತ್ತಿದ್ದ, ಸಾಮಾಜಿಕ ನ್ಯಾಯವನ್ನೊದಗಿಸಲು ಹೆಣಗಾಡುತ್ತಾ ಅನ್ಯಾಯವಾಗಿ ಸಾವನ್ನು ತಂದುಕೊಂಡ ತ್ರಿಮೂರ್ತಿಗೆ ವಿದಾಯದ ವಂದನೆ ಸಲ್ಲಿಸಲು ನನ್ನಿಂದಂತೂ ಆಗುವುದಿಲ್ಲ. ಒಂದು ಹೋರಾಟದ ಜೀವದ ಕತೆ ಹೀಗೆ ಮುಗಿಯಕೂಡದಿತ್ತು ಎಂದು ಯೋಗೇಶ್ ಮಾಸ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ.
“ಸುಮಾರು ವರ್ಷಗಳಿಂದ ಜನ ಚಳವಳಿಯಲ್ಲಿ ತೊಡಗಿಸಿಕೊಂಡ ಕರ್ನಾಟಕ ಜನಶಕ್ತಿಯ ಹೋರಾಟದ ಒಡನಾಡಿ, ಗೆಳೆಯ ತ್ರಿಮೂರ್ತಿ ಅವರು ಅಕಾಲಿಕವಾಗಿ ನಮ್ಮನ್ನಗಲಿರುವುದು ಅತೀವ ನೋವು ತಂದಿದೆ. ಜನಪರ ಕಾಳಜಿಯೊಂದಿಗೆ ಹಲವಾರು ಚಳವಳಿಗಳಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಹಲವರ ಮನಸ್ಸಲ್ಲಿ ಮನೆಮಾಡಿದ್ದರು. ಸೂಕ್ಷ್ಮ-ಸೌಜನ್ಯದ, ಸಹೃದಯಿ ಗೆಳೆಯರೊಬ್ಬರ ಅಗಲಿಕೆ ನಂಬಲಸಾಧ್ಯವಾಗಿದೆ. 2014ರ ಸಂದರ್ಭದಲ್ಲಿ ತಿಂಥಿಣಿಯಲ್ಲಿ ಆಯೋಜಿಸಿದ್ದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಸಮ್ಮೇಳನದಲ್ಲಿ ಒಟ್ಟಿಗೆ ಕೆಲಸ ಮಾಡಿದ ಸಂದರ್ಭದಲ್ಲಿನ ಸ್ಮರಣೀಯ ಕ್ಷಣಗಳನ್ನು ಇಂದಿಗೂ ಮರೆಯಲಾಗದು. ಗೆಳೆಯ ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ, ಮಾನಸಿಕವಾಗಿ ಜೊತೆಗಿರುತ್ತಾರೆ. ಬದ್ಧತೆ, ಸಮರ್ಪಣಾ ಮನೋಭಾವ, ಜನಪರ ಕಾಳಜಿಯ ಮೂಲಕ ನಮ್ಮಲ್ಲಿ ತ್ರಿಮೂರ್ತಿಯವರು ಎಚ್ಚರ ಪ್ರಜ್ಞೆಯಾಗಿರುತ್ತಾರೆ” ಎಂದು ಹೋರಾಟಗಾರ ನಾಗರಾಜ ಪೂಜಾರ್ ಬರೆದಿದ್ದಾರೆ.
ತ್ರಿಮೂರ್ತಿಯವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ದೇವಗೆರೆಗೆ ತರುತ್ತಿದ್ದು ಸಂಜೆ 4 ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಜೀವ ಅಮೂಲ್ಯವಾಗಿದೆ ಮತ್ತು ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಖಿನ್ನತೆ ಎನಿಸಿದರೆ ದಯವಿಟ್ಟು ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮತ್ತು ಭಾವನಾತ್ಮಕ ಬೆಂಬಲ ಪಡೆಯಿರಿ.
ಸಹಾಯ (24-ಗಂಟೆ): 080 65000111, 080 65000222
24×7 ಸಹಾಯವಾಣಿ: 98204667260
ಭಾರತದಾದ್ಯಂತ ಸಹಾಯವಾಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.


