Homeಮುಖಪುಟಭಾರತ್‌ ಜೋಡೋದಲ್ಲಿ ರಾಹುಲ್‌ ಜೊತೆ ಸಂವಾದ ನಡೆಸಿದವರ ವಿಚಾರಣೆಗೆ ಮುಂದಾದ ಗುಪ್ತಚರ ಇಲಾಖೆ: ಕಾಂಗ್ರೆಸ್‌

ಭಾರತ್‌ ಜೋಡೋದಲ್ಲಿ ರಾಹುಲ್‌ ಜೊತೆ ಸಂವಾದ ನಡೆಸಿದವರ ವಿಚಾರಣೆಗೆ ಮುಂದಾದ ಗುಪ್ತಚರ ಇಲಾಖೆ: ಕಾಂಗ್ರೆಸ್‌

- Advertisement -
- Advertisement -

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದವರನ್ನು ಗುಪ್ತಚರ ದಳದ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

“ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ, ರಾಹುಲ್ ಗಾಂಧಿಯವರಿಗೆ ಸಲ್ಲಿಸಿರುವ ಜ್ಞಾಪಕ ಪತ್ರಗಳ ಪ್ರತಿಗಳನ್ನು ಕೋರುತ್ತಿದ್ದಾರೆ” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಟ್ವೀಟ್ ಮಾಡಿದ್ದಾರೆ.

“ಯಾತ್ರೆಯ ವಿಚಾರದಲ್ಲಿ ರಹಸ್ಯವಾಗಿ ಏನೂ ಇಲ್ಲ. ಆದರೆ ಇದು ಸ್ಪಷ್ಟವಾಗಿ ಜಿ2 (ನರೇಂದ್ರ ಮೋದಿ ಮತ್ತು ಅಮಿತ್ ಶಾ) ಗಲಾಟೆಯಾಗಿದೆ” ಎಂದು ದೂರಿದ್ದಾರೆ.

ಭಾರತೀಯ ಜನತಾ ಪಕ್ಷದ ದ್ವೇಷದ ರಾಜಕಾರಣವನ್ನು ಎದುರಿಸುವ ಗುರಿಯನ್ನು ಇಟ್ಟುಕೊಂಡು ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಡಿಸೆಂಬರ್ 24 ರಂದು ರಾಷ್ಟ್ರದ ರಾಜಧಾನಿಯನ್ನು ಪ್ರವೇಶಿಸಿತ್ತು.

ಕಾಂಗ್ರೆಸ್ ಸಂವಹನ ವಿಭಾಗದ ಕಾರ್ಯದರ್ಶಿ ವೈಭವ್ ವಾಲಿಯಾ ಟ್ವೀಟ್ ಮಾಡಿದ್ದು, “ಡಿಸೆಂಬರ್ 23 ರಂದು ಬೆಳಿಗ್ಗೆ ಕೆಲವು ಅನಧಿಕೃತ ವ್ಯಕ್ತಿಗಳು ನಮ್ಮ ಕಂಟೇನರ್‌ಗೆ ಪ್ರವೇಶಿಸಿದರು. ಹೊರಬರುವಾಗ ನಮಗೆ ಸಿಕ್ಕಿಬಿದ್ದರು. ಭಾರತ್ ಜೋಡೋ ಯಾತ್ರಿಗಳ ಪರವಾಗಿ ನಾನು ಸೊಹ್ನಾ ಸಿಟಿ ಪಿಎಸ್‌ಗೆ ದೂರು ನೀಡಿದ್ದೇನೆ. ಪ್ರತಿಯನ್ನು ಲಗತ್ತಿಸಲಾಗಿದೆ. ಅನೌಪಚಾರಿಕವಾಗಿ ತಿಳಿದ ಮಾಹಿತಿಯ ಪ್ರಕಾರ ಅವರು ರಾಜ್ಯದ ಗುಪ್ತಚರ ಇಲಾಖೆಯವರಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 20ರಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತ್ ಜೋಡೋ ಯಾತ್ರೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ನೆರೆಯ ಚೀನಾದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಬೆಳವಣಿಗೆಗಳ ಬೆನ್ನಲ್ಲಿ ರಾಹುಲ್ ಗಾಂಧಿಯವರಿಗೆ ಪತ್ರವನ್ನು ಬರೆದಿದ್ದರು.

ಕೋವಿಡ್ -19 ಪ್ರೋಟೋಕಾಲ್ಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಮೆರವಣಿಗೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್‌‌ಗೆ ಪತ್ರ ಬರೆದ ಕೆಲವು ದಿನಗಳ ನಂತರ ಕಾಂಗ್ರೆಸ್‌ನ ಇತ್ತೀಚಿನ ಆರೋಪಗಳು ಹೊರಬಿದ್ದಿವೆ.

ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಕೇಂದ್ರವು ನೆಪ ಹೇಳುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ರಾಹುಲ್ ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದಾರೆ.

ಹರಿಯಾಣದ ನುಹ್‌ನಲ್ಲಿ ಮಾತನಾಡಿದ್ದ ರಾಹುಲ್‌, “ಈ ಯಾತ್ರೆ ಕಾಶ್ಮೀರದವರೆಗೂ ಸಂಚರಿಸಲಿದೆ. ಈಗ ಬಿಜೆಪಿಯವರು ಹೊಸ ಐಡಿಯಾವನ್ನು ಮಾಡಿದ್ದಾರೆ. ಕೋವಿಡ್ ಬರುತ್ತಿದೆ, ಹಾಗಾಗಿ ಯಾತ್ರೆ ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ನೋಡಿ, ಈಗ ಯಾತ್ರೆ ನಿಲ್ಲಿಸಲು ಸಬೂಬು ಹೇಳಲಾಗುತ್ತಿದೆ. ಮಾಸ್ಕ್ ಧರಿಸಿ, ಯಾತ್ರೆ ನಿಲ್ಲಿಸಿ… ಇವೆಲ್ಲ ನೆಪಗಳಷ್ಟೆ. ಅವರು ಈ ದೇಶದ ಶಕ್ತಿ ಮತ್ತು ಸತ್ಯದ ಬಗ್ಗೆ ಹೆದರುತ್ತಾರೆ” ಎಂದಿದ್ದರು.

ಜೈರಾಂ ರಮೇಶ್ ಟ್ವೀಟ್ ಮಾಡಿ, “Omicron ಸಬ್-ವೇರಿಯಂಟ್ BF.7 ಉಲ್ಬಣದ 4 ಪ್ರಕರಣಗಳು ಗುಜರಾತ್ ಮತ್ತು ಒಡಿಶಾದಲ್ಲಿ ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ವರದಿಯಾಗಿದೆ. ಆರೋಗ್ಯ ಸಚಿವರು ನಿನ್ನೆ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ ಮತ್ತು ಇಂದು ಪ್ರಧಾನಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. #BharatJodoYatra ಮರುದಿನ ದೆಹಲಿ ಪ್ರವೇಶಿಸಲಿದೆ. ಕ್ರೊನಾಲಜಿ ಅರ್ಥ ಮಾಡಿಕೊಳ್ಳಿ” ಎಂದಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read