“ನೂತನ ಪಿಂಚಣಿ ಯೋಜನೆ (ಎನ್‌ಪಿಸ್) ಕುರಿತು ಚುಕ್ಕಿ ಗುರುತಿನ ಪ್ರಶ್ನೆಯನ್ನು ಕೇಳಿದವರಿಗೆ ಸರ್ಕಾರ ಸಿದ್ಧ ಉತ್ತರವನ್ನು ಈವರೆಗೆ ನೀಡುತ್ತಾ ಬಂದಿದೆ. ಶಾಸಕ ರೇಣುಕಾಚಾರ್ಯರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಜಾರಿಗೊಳಿಸುವ ಯೋಜನೆ ಇಲ್ಲ ಎಂದಿದ್ದಾರೆ. ಇದನ್ನು ಬದಿಗಿಟ್ಟು ಸದನದಲ್ಲಿ ಸರ್ಕಾರ ಚರ್ಚೆ ಮಾಡಬೇಕು” ಎಂದು ’ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ’ದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್.ದಯಾನಂದ್ ಒತ್ತಾಯಿಸಿದರು.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಸಿದ್ಧ ಉತ್ತರವನ್ನು ಈಗ ನೀಡಿದ್ದಾರೆ. ಚರ್ಚೆ ಮಾಡುವುದಾಗಿಯೂ ಹೇಳಿದ್ದಾರೆ. ನಾವು ಅದಕ್ಕಾಗಿ ಕಾಯುತ್ತಿದ್ದೇವೆ. ಈ ಚರ್ಚೆ ಆದ ನಂತರ ಸದನದಲ್ಲಿ ಕೈಗೊಂಡ ನಿರ್ಧಾರದ ಆಧಾರದಲ್ಲಿ ನಮ್ಮ ಹೋರಾಟದ ನಿಲುವನ್ನು ವ್ಯಕ್ತಪಡಿಸುತ್ತೇವೆ” ಎಂದಿದ್ದಾರೆ.
“ಒಪಿಎಸ್‌ನಿಂದ ಆರ್ಥಿಕ ಹೊರೆಯಾಗುತ್ತದೆ” ಎಂಬ ಸರ್ಕಾರದ ನಿಲುವನ್ನು ಟೀಕಿಸಿದ ಅವರು, “ಆರ್ಥಿಕ ಹೊರೆಯಾಗುತ್ತದೆ ಎಂಬುದು ಸುಳ್ಳು. ಇಲ್ಲಿಯವರೆಗೆ ಎನ್‌ಪಿಎಸ್ ಜಾರಿಗೊಳಿಸದೆ ಒಪಿಎಸ್ ಅನ್ನೇ ಮುಂದುವರಿಸುತ್ತಿರುವ ಪಶ್ಚಿಮ ಬಂಗಾಳದ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು ಹೇಗೆ? 2021- 22ರಲ್ಲಿ ಪಶ್ಚಿಮ ಬಂಗಾಳದ ಅಭಿವೃದ್ಧಿ ಪ್ರಮಾಣ ಶೇ. 12.8ರಷ್ಟಿದೆ. ಕರ್ನಾಟಕದಲ್ಲಿ ಶೇ. 9.5ರಷ್ಟಿದೆ” ಎಂದು ವಿವರಿಸಿದರು.
“ರಾಜಸ್ಥಾನ, ಛತ್ತೀಸ್‌ಘಡ, ಜಾರ್ಖಾಂಡ್ ರಾಜ್ಯಗಳಂತೆ ಸರ್ಕಾರ ಚಿಂತನೆ ಮಾಡಬೇಕು. ಹಿಮಾಚಲ ಪ್ರದೇಶದಲ್ಲಿ ವೋಟ್ ಫಾರ್ ಒಪಿಎಸ್ ಅಭಿಯಾನ ಮಾಡಿದ್ದೆವು. ಸರ್ಕಾರ ಬದಲಾಗಲು ಕಾರಣವಾದೆವು. ಈಗ ಮೊದಲ ಕ್ಯಾಬಿನೇಟ್‌ನಲ್ಲಿಯೇ ಒಪಿಎಸ್ ಜಾರಿಗೊಳಿಸುವುದಾಗಿ ಸರ್ಕಾರ ಹೇಳಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ನೌಕರರ ಮತಗಳು ನಿರ್ಣಾಯಕವಾಗಲಿವೆ. ಒಂದು ಕ್ಷೇತ್ರದಲ್ಲಿ ಕನಿಷ್ಠ ಮೂರು ಸಾವಿರ ಮತಗಳು ಒಪಿಎಸ್‌ಗಾಗಿ ಬಿದ್ದರೆ, ಫಲಿತಾಂಶ ವ್ಯತಿರಿಕ್ತವಾಗಿರುತ್ತದೆ. ಈ ಎಚ್ಚರಿಕೆ ಆಡಳಿತರೂಢ ಪಕ್ಷಗಳಿಗೆ ಖಂಡಿತ ಇದೆ. ಹೀಗಾಗಿ ಸದನದಲ್ಲಿ ಎನ್‌ಪಿಎಸ್ ರದ್ದುಗೊಳಿಸುವ ಚರ್ಚೆ ಮಾಡುತ್ತಾರೆಂಬ ವಿಶ್ವಾಸವಿದೆ” ಎಂದರು.
“ಪ್ರಸ್ತುತ ಒಬ್ಬ ಮನುಷ್ಯನ ಜೀವಿತಾವಧಿ ಸರಾಸರಿ 72 ವರ್ಷಗಳು. 60 ವರ್ಷಕ್ಕೆ ನಾವು ನಿವೃತ್ತಿಯಾದರೆ 12 ವರ್ಷಗಳು ಮಾತ್ರ ಪಿಂಚಣಿಯನ್ನು ಸರ್ಕಾರ ಕೊಡಬೇಕಾಗುತ್ತದೆ. ಸರ್ಕಾರ ಮತ್ತು ಸಮಾಜಕ್ಕಾಗಿ ದುಡಿದ ವರ್ಗಕ್ಕೆ ಒಪಿಎಸ್ ನೀಡಲು ಸಾಧ್ಯವಿಲ್ಲವಾ? ಎಷ್ಟೋ ಮಂದಿ ನೌಕರರು ಈಗ 500, 1000 ಪಿಂಚಣಿ ಪಡೆಯುತ್ತಾ, ಇಳಿ ವಯಸ್ಸಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯುತ್ತಿದ್ದಾರೆ” ಎಂದು ವಿಷಾದಿಸಿದರು.
“ಇತ್ತೀಚೆಗೆ ಗಂಗಾವತಿಗೆ ಹೋಗಿದ್ದೆ. ಅನ್ನದಾನಪ್ಪ ಎಂಬುವರ ನೋವಿನ ಕತೆ ಕೇಳಿ ಆತಂಕಗೊಂಡೆ. ಅವರು ಒಟ್ಟು 33 ವರ್ಷ ಸರ್ಕಾರಕ್ಕೆ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಪರ್ಮನೆಂಟ್ ಮಾಡಲಾಗುತ್ತದೆ. 13 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅವರಿಗೆ 548 ರೂಪಾಯಿ ಪಿಂಚಣಿ ನಿಗದಿಯಾಗುತ್ತದೆ. ಈ ಹಣದಲ್ಲಿ ಅವರು ಒಂದು ಗ್ಯಾಸ್ ಸಿಲಿಂಡರ್ ಕೂಡ ಖರೀದಿಸಲು ಸಾಧ್ಯವಿಲ್ಲ. ವಾರದ ಸಂತೆ ಖರ್ಚು, ಮನೆಯ ಬಾಡಿಗೆ ಕಟ್ಟಲು ಆಗುತ್ತದೆಯಾ? ಸರ್ಕಾರಿ ನೌಕರರು ಒತ್ತಡದ ಸೇವೆಯನ್ನು ಸಲ್ಲಿಸುತ್ತಾ ನಲವತ್ತು ವರ್ಷಕ್ಕೆ ಮಧುಮೇಹ, ರಕ್ತದೊತ್ತಡ ಮೊದಲಾದ ರೋಗಗಳಿಗೆ ತುತ್ತಾಗುತ್ತಾರೆ. ನಿವೃತ್ತಿಯಾದ ಬಳಿಕ ಕನಿಷ್ಠ ಮಾತ್ರೆಗಳನ್ನು ಖರೀದಿಸಲು ಸಾಧ್ಯವಾಗದ ಸ್ಥಿತಿಗೆ ಎನ್‌ಪಿಎಸ್ ತಂದಿಟ್ಟಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿರಿ: ’ವೋಟ್ ಫಾರ್ ಒಪಿಎಸ್’; ಸರ್ಕಾರಿ ನೌಕರರ ಕೂಗು ಆಲಿಸುವರೇ ಬೊಮ್ಮಾಯಿ?
ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ ಪ್ರತಿಕ್ರಿಯಿಸಿ, “ಸರ್ಕಾರಿ ನೌಕರರ ಸಮಸ್ಯೆಯ ಕುರಿತು ಚರ್ಚಿಸಬೇಕು ಎಂದು ನೂರಕ್ಕೂ ಹೆಚ್ಚು ಶಾಸಕರು ಆಗ್ರಹಿಸುತ್ತಿದ್ದಾರೆ. ಸದನದಲ್ಲಿ ಮುಖ್ಯಮಂತ್ರಿಯವರು ನೀಡುವ ಮೌಖಿಕವಾದ ಉತ್ತರ ರೆಕಾರ್ಡ್ ಆಗುತ್ತದೆ. ಅವರ ಉತ್ತರದ ಬಳಿಕ ನಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಒಂದು ಗಟ್ಟಿಯಾದ ಹೋರಾಟಕ್ಕೆ ನಾವು ಮುನ್ನುಡಿಯನ್ನು ಬರೆದಿದ್ದೇವೆ. ಹತ್ತುಗಳಿಂದ ಮಾಡುತ್ತಿರುವ ಅಹೋರಾತ್ರಿ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಎನ್‌ಪಿಎಸ್ ನೌಕರರ ಸಂಘದ ಸುಮಾರು 20 ಜನ ಮುಖಂಡರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿಯವರನ್ನು ಭೇಟಿಯಾಗಿ ಮಾತನಾಡಿದ್ದಾರೆ. ನಮ್ಮ ಸಂಧ್ಯಾಕಾಲದ ಬದುಕಿನ ಸವಾಲನ್ನು ತಿಳಿಸಿದ್ದೇವೆ. ಚುನಾವಣೆಗೆ ನಿಂತಿದ್ದ ಸಂದರ್ಭದಲ್ಲಿ ಎನ್‌ಪಿಎಸ್ ರದ್ದತಿ ಮಾಡಲು ಹೋರಾಡುವುದಾಗಿ ತಾವು ನೀಡಿದ್ದ ಭರವಸೆಗೆ ಬದ್ಧರಾಗಿರಬೇಕೆಂದು ಕೋರಿದ್ದೇವೆ. ಹೋರಾಟಕ್ಕೆ ಬೆಂಬಲ ನೀಡಬೇಕೆಂದು ತಿಳಿಸಿದ್ದೇವೆ. ಅವರು ತಮ್ಮ ನಿಲುವನ್ನು ಬದಲಿಸಿಕೊಂಡು ನಮ್ಮ ಹೋರಾಟದ ಪರವಾಗಿ ಮಾತನಾಡಿದ್ದಾರೆ” ಎಂದರು.


