2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಈಗ ಮತ್ತಷ್ಟು ಮುಂದೆ ಹೋಗಿದ್ದು, ಮುಂದಿನ ಆದೇಶಗಳವರೆಗೆ ಜನಗಣತಿಯನ್ನು 2024-25ಕ್ಕೆ ಮುಂದೂಡಲಾಗಿದೆ.
ಜನಗಣತಿಗೂ ಮುಂಚೆಯೇ ಮಾಡಬೇಕಿರುವ ಆಡಳಿತಾತ್ಮಕ ಗಡಿಗಳನ್ನು ನಿರ್ದಿಷ್ಟೀಕರಿಸುವ ಕೆಲಸವನ್ನು ಭಾರತೀಯ ರಿಜಿಸ್ಟ್ರಾರ್ ಜನರಲ್ (RGI) ಕಚೇರಿಯು ಜೂನ್ 30, 2023 ರವರೆಗೆ ವಿಸ್ತರಿಸಿದೆ.
2023ರಲ್ಲಿ ಹಲವು ರಾಜ್ಯ ಚುನಾವಣೆಗಳಿವೆ. 2024ಕ್ಕೆ ಲೋಕಸಭಾ ಚುನಾವಣೆ ನಡೆಯಬೇಕಿದೆ. ಅಲ್ಲದೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಮಾಡಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಜನಗಣತಿಯು ವಿಳಂಬವಾಗುತ್ತಿದೆ ಎನ್ನಲಾಗಿದೆ.
ಕೋವಿಡ್ ಸಾಂಕ್ರಾಮಿಕ, ಲಾಕ್‌ಡೌನ್, ವ್ಯಾಕ್ಸಿನ್ ಡ್ರೈವ್ ಇತ್ಯಾದಿ ಕಾರಣಗಳಿಗಾಗಿ ಜನಗಣತಿಯನ್ನು ಆರಂಭಿಸಲು ಸಾಧ್ಯವಾಗಿಲ್ಲ, ಅಲ್ಲದೆ ನಂತರದ ಜನಗಣತಿ ನಡೆಸುವ ಅವಧಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಭಾರತೀಯ ರಿಜಿಸ್ಟ್ರಾರ್ ಜನರಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಜನಗಣತಿ ನಿಯಮಗಳು, 1990 ರ ನಿಯಮ 8(iv) ರ ಪ್ರಕಾರ, ಜನಗಣತಿ ಆಯುಕ್ತರು ಸೂಚಿಸಿದ ದಿನಾಂಕದಿಂದ ಆಡಳಿತ ಘಟಕಗಳ ಗಡಿಗಳನ್ನು ನಿರ್ಧರಿಸಲಾಗುತ್ತದೆ. ಇದು ಜನಗಣತಿ ಉಲ್ಲೇಖ ದಿನಾಂಕದಿಂದ ಒಂದು ವರ್ಷಕ್ಕಿಂತ ಮುಂಚಿತವಾಗಿರಬಾರದು ಎಂಬ ನಿಯಮವಿದೆ. ಹಾಗಾಗಿ ಗಡಿಗಳ ನಿರ್ಧಾರವಾಗದೇ ಜನಗಣತಿ ಮಾಡಲು ಸಾಧ್ಯವಾಗುತ್ತಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರವು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಮಾಡಲು ಮುಂದಾದಾಗ ಅದರ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದವು. ಅದು ಸಹ ಜನಗಣತಿಗೆ ಮಾರಕವಾಗಿ ಪರಿಣಮಿಸಿದೆ.
ಇದನ್ನೂ ಓದಿ; ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಜನ ಸೇರಿಸಲು ಡ್ಯಾನ್ಸರ್ ಬಳಕೆ: ವಿಡಿಯೋ ವೈರಲ್


