ಭಾರತ ದೇಶದ 140 ಕೋಟಿ ಜನರಲ್ಲಿ ಕೇವಲ 100 ಜನ ಮಾತ್ರ ಅತೀ ಶ್ರೀಮಂತರಾಗುವುದು ನ್ಯಾಯವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಭಾರತ್ ಜೋಡೋ ಜಾತ್ರೆಯ 112ನೇ ದಿನವಾದ ಇಂದು ಉತ್ತರ ಪ್ರದೇಶದಿಂದ ಹರಿಯಾಣ ರಾಜ್ಯ ಪ್ರವೇಶಿಸಿ ಪಾಣಿಪತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇದೆ. ದೇಶದ ಜನಸಂಖ್ಯೆ 140 ಕೋಟಿ ಇದೆ. ಆದರೆ ದೇಶದ ಒಟ್ಟು ಸಂಪತ್ತಿನ ಶೇಕಡ 50 ರಷ್ಟನ್ನು ದೇಶದ ಕೇವಲ 100 ಶ್ರೀಮಂತರು ಮಾತ್ರ ಹೊಂದಿದ್ದಾರೆ. ನಿಮಗೆ ಇದರಲ್ಲಿ ನ್ಯಾಯ ಕಾಣುತ್ತಿದೆಯೇ? ಇದು ನರೇಂದ್ರ ಮೋದಿಯವರ ಭಾರತದ ವಾಸ್ತವಸ್ಥಿತಿ” ಎಂದು ಹೇಳಿದ್ದಾರೆ.
“ನೀವು ಭಾರತದ ಎಲ್ಲಾ ಕಾರ್ಪೊರೇಟ್ ಲಾಭಗಳನ್ನು ನೋಡಿದರೆ, 90 ಪ್ರತಿಶತದಷ್ಟು ಲಾಭವು ಕೇವಲ 20 ಕಾರ್ಪೊರೇಟ್‌ಗಳಿಗೆ ಮಾತ್ರ ದಕ್ಕುಕತ್ತಿದೆ ಮತ್ತು ಈ ದೇಶದ ಅರ್ಧದಷ್ಟು ಸಂಪತ್ತು ಕೇವಲ 100 ಜನರ ಕೈಯಲ್ಲಿದೆ. ಇದು ನರೇಂದ್ರ ಮೋದಿಯವರ ಭಾರತದ ಸತ್ಯದರ್ಶನ” ಎಂದು ಅವರು ಹೇಳಿದ್ದಾರೆ.
“ಮೋದಿ ಸರ್ಕಾರವು ಎರಡು ಭಾರತಗಳನ್ನು ಸೃಷ್ಟಿಸಿದೆ. ಒಂದು ಬಡವರು ಮತ್ತು ಸಾಮಾನ್ಯ ಜನರು ವಾಸಿಸುವ ಭಾರತ. ಮತ್ತೊಂದು ಎಲ್ಲಾ ಸಂಪತ್ತನ್ನು ಹೊಂದಿರುವ ಕೇವಲ 200-300 ಜನರು ವಾಸಿಸುವ ಭಾರತವಾಗಿದೆ. ನಿಮ್ಮ ಬಳಿ ಏನೂ ಇಲ್ಲ. ನಿಮ್ಮ ಬಳಿ ಕೇವಲ ಪಾಣಿಪತ್ ನೀಡುವ ಗಾಳಿ ಮಾತ್ರ ಇದೆ ಅದು ಸಹ ಉಸಿರಾಡಲು ಕಷ್ಟವಾದ ಗಾಳಿಯಾಗಿದ್ದು, ಅದರಿಂದ ಕ್ಯಾನ್ಸರ್ ಬರುತ್ತದೆ” ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಣಿಪತ್ ಅತಿ ಸಣ್ಣ ಕೈಗಾರಿಕೆಗಳ ಕೇಂದ್ರವಾಗಿದೆ. ಆದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಹಾಳುಮಾಡಿದೆ. ಇದು ಪಾಣಿಪತ್ ಕಥೆ ಮಾತ್ರವಲ್ಲ ಬದಲಿಗೆ ಇಡೀ ದೇಶದ ಕಥೆಯಾಗಿದೆ. ಜಿಎಸ್‌ಟಿ ಮತ್ತು ನೋಟು ನಿಷೇಧ ದೇಶದ ಬೆನ್ನೆಲುಬು ಮುರಿದಿದೆ. ನಿರುದ್ಯೋಗದಲ್ಲಿ ಶೇ.38 ರಷ್ಟು ಹೆಚ್ಚಿರುವ ಹರಿಯಾಣ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದರು.
ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಜಮ್ಮು ಕಾಶ್ಮೀರ ಮುಖಂಡರು
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಪ್ರವೇಶಿಸುವ ಮುನ್ನವೇ ಕಾಂಗ್ರೆಸ್ ತೊರೆದು ಗುಲಾಮ್ ನಬಿ ಆಜಾದ್ ಅವರ ಡೆಮಾಕ್ರಟಿಕ್ ಆಜಾದ್ ಪಕ್ಷ ಸೇರಿದ್ದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಪೀರ್ಜಾದಾ ಮೊಹಮ್ಮದ್ ಸಯೀದ್, ಬಲ್ವಾನ್ ಸಿಂಗ್ ಸೇರಿದಂತೆ ಇತರ ಪ್ರಮುಖ ನಾಯಕರು ಇಂದು ಮತ್ತೆ ಕಾಂಗ್ರೆಸಿಗೆ ವಾಪಸ್ಸಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಲ ತರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ


