Homeಕರ್ನಾಟಕಬೆಂಗಳೂರು ಪೊಲೀಸರ ವಶದಲ್ಲಿದ್ದ ದಲಿತ ಯುವಕನ ಸಾವು - ಲಾಕಪ್ ಡೆತ್ ಆರೋಪ

ಬೆಂಗಳೂರು ಪೊಲೀಸರ ವಶದಲ್ಲಿದ್ದ ದಲಿತ ಯುವಕನ ಸಾವು – ಲಾಕಪ್ ಡೆತ್ ಆರೋಪ

- Advertisement -
- Advertisement -

ಬೆಂಗಳೂರಿನ ಜಾಲಿ ಮೊಹಲ್ಲಾದ ನಿವಾಸಿ ದಲಿತ ಯುವಕ ವಿನೋದ್‌ ಎಂಬಾತ ಪೊಲೀಸರ ವಶದಲ್ಲಿದ್ದಾಗಲೇ ಸಾವನ್ನಪ್ಪಿರುವ ಘಟನೆ ಜನವರಿ 05ರಂದು ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ.

2017ರಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಎಂಬ ಆರೋಪದಡಿ ಬುಧವಾರ ಬಂಧನಕ್ಕೊಳಗಾಗಿದ್ದ 23 ವರ್ಷದ ವಿನೋದ್ ರಾಮಚಂದ್ರನ್ ಗುರುವಾರ ಬೆಳಿಗ್ಗೆ 3.45ರ ಸಮಯದಲ್ಲಿ ಲಾಕಪ್‌ನಲ್ಲಿ ಮಲಗಿದ್ದಾಗಲೇ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೋದ್ ಕುಟುಂಬ ಪೊಲೀಸರ ಹೇಳಿಕೆಯನ್ನು ಅಲ್ಲಗೆಳೆದಿದ್ದು ಪೊಲೀಸರ ದೌರ್ಜನ್ಯ ಮತ್ತು ಕಿರುಕುಳದಿಂದಲೇ ವಿನೋದ್ ಸಾವನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.

ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಿನೋದ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಕೋರ್ಟ್ ಆದೇಶದಂತೆ ಬುಧವಾರ ಮಧ್ಯಾಹ್ನ 12.30ರ ಸಮಯದಲ್ಲಿ ಜಾಲಿ ಪಾಳ್ಯದಿಂದ ಬಂಧಿಸಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿರಿಸಲಾಗಿತ್ತು. ಆದರೆ ಗುರುವಾರ ಬೆಳ್ಳಂಬೆಳಿಗ್ಗೆ 3 ಗಂಟೆ ಸಮಾರಿಗೆ ನೋಡಿದಾಗ ವಿನೋದ್ ಲಾಕಪ್‌ನಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದಾನೆಂದು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಸುಮಾರು 5 ಗಂಟೆ ಸಮಯಲ್ಲಿ ಜಾಲಿ ಪಾಳ್ಯಕ್ಕೆ ತೆರಳಿದ್ದ ಪೊಲೀಸರು ಅವರ ತಾಯಿಗೆ ವಿನೋದ್ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿಸಿದ್ದರು. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ವಿನೋದ್ ಸಾವನಪ್ಪಿರುವುದನ್ನು ಖಚಿತಪಡಿಸಿಕೊಂಡು ಕುಟುಂಬಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಈ ಕುರಿತು ಮಾಹಿತಿ ನೀಡಿದ್ದು, “ಆರೋಪಿ ವಿರುದ್ಧ 2017ರಲ್ಲಿ ಕಾಟನ್ ಪೇಟೆ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿತ್ತು‌‌‌. ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್​ ಜಾರಿಯಾಗಿತ್ತು. ಬುಧವಾರ ಆತನನ್ನು ಪೊಲೀಸರು ಬಂಧಿಸಿ ಕಾಟನ್‌ಪೇಟೆ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ರಾತ್ರಿ ಠಾಣೆಯಲ್ಲಿ ಮಲಗಿದ್ದ ಆರೋಪಿಯನ್ನು ಗುರುವಾರ ಮುಂಜಾನೆ 3‌.45 ವೇಳೆಗೆ ಪೊಲೀಸ್ ಸಿಬ್ಬಂದಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಪ್ರಜ್ಞೆ ತಪ್ಪಿದ್ದರಿಂದ ಕೂಡಲೇ ಆಸ್ಪತ್ರೆಗೆ‌ ದಾಖಲಿಸಿದ್ದಾರೆ. ಆದರೆ ಮಾರ್ಗ‌ಮಧ್ಯಯೇ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವೆಂದು ಪ್ರಕರಣ ದಾಖಲಿಸಿ, ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ್ದೇವೆ. ಅಲ್ಲದೆ, ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಹಿಸಲಾಗಿದೆ” ಎಂದಿದ್ದಾರೆ.

ಪೊಲೀಸ್ ಕಿರುಕುಳದಿಂದ ವಿನೋದ್ ಸಾವು – ಸ್ಲಂ ಮಹಿಳಾ ಸಂಘಟನೆ ಆರೋಪ

ಪೊಲೀಸ್ ಕಿರುಕುಳದಿಂದಲೇ ವಿನೋದ್ ಸಾವನಪ್ಪಿದ್ದಾರೆ ಎಂದು ಸ್ಲಂ ಮಹಿಳಾ ಸಂಘಟನೆಯ ಮುಖಂಡೆ ಜಾನ್ಸಿ ಆರೋಪಿಸಿದ್ದಾರೆ. “ವಿನೋದ್‌ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರ ಕತ್ತಿನ ಹಿಂಭಾಗದಲ್ಲಿ ರಕ್ತ ಸೋರುತ್ತಿತ್ತು ಎಂದು ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಶವಗಾರದ ವಾಚ್‌ಮನ್ ಕೂಡ ಅದನ್ನೆ ಹೇಳಿದ್ದಾರೆ. ಆದರೆ ಪೊಲೀಸರು ಪ್ರಜ್ಞೆ ತಪ್ಪಿ ಸಾವನಪ್ಪಿದ್ದಾನೆ ಎಂದು ಒಮ್ಮೆ, ಹೃದಯಾಘಾತವಾಗಿ ಬಿದ್ದು ಸಾವನಪ್ಪಿದ್ದಾನೆ ಎಂದು ಮತ್ತೊಮ್ಮೆ ಹೇಳುವ ಮೂಲಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದರೆ. ಪೊಲೀಸ್ ಕಿರುಕುಳವೇ ವಿನೋದ್ ಸಾವಿಗೆ ಕಾರಣ” ಎಂದು ಆರೋಪಿಸಿದ್ದಾರೆ.

ಪೊಲೀಸರು ಬಲವಂತವಾಗಿ ವಿನೋದ್ ಅಂತ್ಯಕ್ರಿಯೆ ನಡೆಸಿದ್ದಾರೆ. ಅವರ ತಾಯಿಯನ್ನು ಹೊರತುಪಡಿಸಿ ಉಳಿದ ಯಾರಿಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಇದು ಕಾನೂನುಬಾಹಿರವಾಗಿದ್ದು ಈ ಪ್ರಕರಣದಲ್ಲಿ ಎಲ್ಲಾ ಸಿಸಿಕ್ಯಾಮರಗಳನ್ನು ಪರಿಶೀಲಿಸಬೇಕು. ಸಮರ್ಪಕ ತನಿಖೆ ನಡೆದು ವಿನೋದ್ ಸಾವಿನ ನಿಖರ ಕಾರಣ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಲಾಕಪ್ ಡೆತ್ …. ಪೋಲೀಸರು ತಮ್ಮ ಜವಾಬ್ದಾರಿಯನ್ನು ಮರೆತು … ಹುಡುನನನ್ನು ಲಾಕಪ್ ನಲ್ಲಿಯೇ ಕೊಂದು ಹಾಕಿದ್ದಾರೆ೦ದರೆ… ಸರಕಾರದ ಸಪೋರ್ಟ್ ಇಲ್ಲದಿದ್ದರೆ ಇದು ಸಾಧ್ಯವೇ?..
    ಆದಕ್ಕೆನೇ ಪೋಲೀಸರ ಮಕ್ಕಳು ಅಡ್ಡ ಕಾಯದಲ್ಲೆ ಹೋಗೋದು …. ಉಪ್ಪು ತಿಂದವರು ನೀರು ಕುಡಿತ್ತಾರೆ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...