Homeನ್ಯಾಯ ಪಥಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

- Advertisement -
- Advertisement -

ಹಾವೇರಿಯಲ್ಲಿ ಜನವರಿ 6-7-8 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದದ ಸುಳಿಯಲ್ಲಿದೆ. ಹಿಂದೆ ಹಲವು ಬಾರಿ ಸಾಹಿತ್ಯ ಸಮ್ಮೇಳನಗಳು ವಿವಿಧ ಕಾರಣಗಳಿಗೆ ಪ್ರತಿರೋಧಗಳನ್ನು ಎದುರಿಸಿದ್ದವು. ಇನ್ನೂ ಕೆಲವು ಬಾರಿ ಸಮ್ಮೇಳನಗಳಿಗೆ ಪರ್ಯಾಯ ಸಮಾವೇಶಗಳೂ ನಡೆದಿದ್ದಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಲಿಂದಲೂ, ಕರ್ನಾಟಕದ ಏಕೀಕರಣ, ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಶಿಕ್ಷಣದ ಕೂಗು ಹೀಗೆ ಕೆಲವು ಸಂಗತಿಗಳಲ್ಲಿ ಜನಸಾಮಾನ್ಯರ ಅಭಿಪ್ರಾಯ ರೂಪಿಸಲು ಅದು ತನ್ನ ಛಾಪು ಮೂಡಿಸಿತು. ಆದರೆ, ಈ ದೇಶದ ಮೂಲಭೂತ ಸಮಸ್ಯೆಗಳು ಎನ್ನಬಹುದಾದ ಮತ್ತು ವಿವಿಧ ಕಾಲಘಟ್ಟಗಳಲ್ಲಿ ಈ ದೇಶದ ಆತ್ಮವನ್ನು ಕಿತ್ತುತಿಂದ ಜಾತೀಯತೆ, ಕೋಮು ವಿಷಮತೆ, ಆರ್ಥಿಕ ಅಸಮಾನತೆ ಮುಂತಾದ ವಿಷಯಗಳ ಬಗ್ಗೆ ಸಾಹಿತ್ಯ ಪರಿಷತ್ತು ಚರ್ಚೆಗಳನ್ನು ಎತ್ತಿಕೊಂಡದ್ದು ಅಥವಾ ಆ ವಿಷಯಗಳಲ್ಲಿ ಜನರ ತಿಳಿವಳಿಕೆಯನ್ನು ರೂಪಿಸುವತ್ತ ಕೆಲಸ ಮಾಡಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಾಹಿತ್ಯ ಪರಿಷತ್ತಿನ ಆರಂಭಿಕ ಕಾರ್ಯ ಚಟುವಟಿಕೆಗಳ ಸಾರ್ವಜನಿಕ ದಾಖಲೆಗಳಾದ ’ಕನ್ನಡ ನುಡಿ’ ಅಥವಾ ’ಸಾಹಿತ್ಯ ಪರಿಷತ್ ಪತ್ರಿಕೆ’ಯ ಹಳೆಯ ಸಂಚಿಕೆಗಳನ್ನು ಗಮನಿಸಿದರೆ ಇದು ನಮಗೆ ಸುಲಭಕ್ಕೆ ಮನದಟ್ಟಾಗುತ್ತದೆ. ಇದು ಬರಬರುತ್ತಾ ’ವಿಐಪಿ’ ಸಂಸ್ಕೃತಿಯನ್ನು ಬೆಳೆಸಿಕೊಂಡು, ಬೃಹತ್ ಮಟ್ಟದ ಸಮಾವೇಶವನ್ನು ಆಯೋಜಿಸಿ ಮುಗಿಸುವ ವಾರ್ಷಿಕ ಸಂಪ್ರದಾಯವನ್ನು ತನ್ನದಾಗಿಸಿಕೊಂಡಿತೇ ಹೊರತು ನಾಡಿನ ನೈಜ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕನ್ನಡಿಗರ ಸಂಸ್ಥೆಯಾಗಿ ಬೆಳೆಯದೇ ಇದ್ದುದಕ್ಕೆ ಆರಂಭಿಕ ದಿನಗಳ ’ಶುದ್ಧ ಸಾಹಿತ್ಯ ನಿಷ್ಠೆ’ಯ ಕಾಳಜಿಯೂ ಕಾರಣವಾಗುತ್ತದೆ. ಕನಿಷ್ಠ ಹಿಂದೆ ಸಾರ್ವಜನಿಕ ಹಣವನ್ನು ಹದ್ದುಬಸ್ತಿನಿಂದ ಖರ್ಚು ಮಾಡುತ್ತಿದ್ದ ಸಂಸ್ಥೆ ಇಂದು ದುಂದುವೆಚ್ಚಕ್ಕೆ ಮುಂದಾಗಿರುವುದು ಮಾತ್ರ ದೊಡ್ಡ ಸಾಧನೆಯಾಗಿದೆ!

ನಮ್ಮೆಲ್ಲರವು ಅಲ್ಪಾಯುಷಿ ನೆನಪುಗಳಾದ್ದರಿಂದ ಇತ್ತೀಚಿನ ಸಾಹಿತ್ಯ ಸಮ್ಮೇಳನಗಳ ವಿವಾದಗಳಲ್ಲಿ ಕೆಲವನ್ನು ಇಲ್ಲಿ ನೆನಪಿಸಿಕೊಳ್ಳಬಹುದು; 2019ರಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ನಡೆಯಿತು. ಅಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದವರು ಚಂದ್ರಶೇಖರ ಕಂಬಾರರು. ಆ ಸಮ್ಮೇಳನದಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ನಡೆಯುವ ಊಳಿಗಮಾನ್ಯ ಮೆರವಣಿಗೆಯನ್ನು ನಡೆಸಬಾರದೆಂದು ಹಲವು ಪ್ರಾಜ್ಞರು ಕರೆನೀಡಿದರು. ಆದರೆ, ಕಂಬಾರರು ಅದರ ಬಗ್ಗೆ ತುಟಿಕ್‌ಪಿಟಿಕ್ ಅನ್ನಲಿಲ್ಲ. ಅಂದಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಏನೇನೋ ಸಬೂಬು ನೀಡಿ ಈ ಪ್ರತಿಗಾಮಿ ಮೆರವಣಿಗೆಯನ್ನು ಸಮರ್ಥಿಸಿಕೊಂಡರು. ಕೊನೆಗೆ ಅದು ನಡೆದೇ ತೀರಿತು. ಈ ಬಾರಿಯ ಸಮ್ಮೇಳನದಲ್ಲಿ ಕೂಡ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಮಹಿಳಾ ಸಾಹಿತಿಗಳಿಗೆ ಪ್ರಾತಿನಿಧ್ಯ ನೀಡಿಲ್ಲವೆಂದು ’ಕರ್ನಾಟಕ ಲೇಖಕಿಯರ ಸಂಘ’ದ ಎಚ್ ಎಲ್ ಪುಷ್ಪಾ ಕಿಡಿಕಾರಿದ್ದಾರೆ. ಆದರೆ ಅದನ್ನು ಸರಿಪಡಿಸಿಕೊಳ್ಳಬಹುದಾದ ಸೌಜನ್ಯವನ್ನು ತೋರಿಸಲು ಕ್ಯಾಬಿನೆಟ್ ದರ್ಜೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿಯವರಿಗೆ ಪುರುಸೊತ್ತಿಲ್ಲ!

ಇನ್ನು, ಪ್ರತಿ ಸಮ್ಮೇಳನದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆ ಮೂಲಕ ಊರನ್ನು ಸುತ್ತಿಸಿ ಸಮ್ಮೇಳನದ ವೇದಿಕೆಗೆ ಕರೆದುಕೊಂಡು ಬರುವ ಸಂಪ್ರದಾಯ ಎಗ್ಗಿಲ್ಲದೇ ಮುಂದುವರೆದಿದೆ. ಈ ಮೆರವಣಿಗೆಯ ಉದ್ದೇಶವೇನು ಎಂಬುದು ಮಾತ್ರ ಇಂದಿಗೂ ನಿಗೂಢ! ಪ್ರಜಾಪ್ರಭುತ್ವದಲ್ಲಿ ’ವ್ಯಕ್ತಿ ವಿಶಿಷ್ಟತೆ’ಯನ್ನು ಮೆರೆಯುವ ಈ ಮೆರವಣಿಗೆ ಅನವಶ್ಯಕ ಎಂದು (ಜಿಎಸ್‌ಎಸ್ ಥರದ ಒಂದಿಬ್ಬರು ಸಾಹಿತಿಗಳನ್ನು ಹೊರತುಪಡಿಸಿ) ಇಲ್ಲಿಯವರೆಗೂ ಯಾಕೆ ಯಾವ ಸಮ್ಮೇಳನಾಧ್ಯಕ್ಷರಿಗೂ ಅನಿಸಿಲ್ಲ? ಯಾಕೆ ಮೆರವಣಿಗೆ ಬೇಡವೆಂದು ನಿರಾಕರಿಸಿಲ್ಲ? ಇದರ ಮುಂದುವರಿದ ಭಾಗವೆಂಬಂತೆ ವಿಐಪಿಗಳಿಗೆ ವಿಭಿನ್ನ ವಸತಿ, ವಿಭಿನ್ನ ಕೂರುವ ವ್ಯವಸ್ಥೆ, ವಿಭಿನ್ನ ಊಟ-ಉಪಚಾರವೆಸಗುವ ವ್ಯವಸ್ಥೆಯೆಲ್ಲವೂ ಪ್ರಜಾಪ್ರಭುತ್ವದ ಅಣಕವಲ್ಲದೆ ಇನ್ನೇನು? ಜನಸಾಮಾನ್ಯರ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆಯಬೇಕಿದ್ದರೆ ಇಂತಹ ತಾರತಮ್ಯದ ನೀತಿಗಳಿಗೆ ಕೊನೆ ಹಾಡಬೇಕಲ್ಲವೇ?

ಇನ್ನು ಸಾಹಿತ್ಯ ಸಮ್ಮೇಳನವನ್ನು ಅಷ್ಟೇನು ತೂಕವಲ್ಲದ ಕಾರಣಗಳಿಗೂ ವಿರೋಧಿಸಿ ಪರ್ಯಾಯ ಸಮಾವೇಶ ನಡೆಸಿದ ಇತಿಹಾಸವೂ ಬಹಳಷ್ಟು ಚರ್ಚೆಯಾಗಿದೆ. 1990ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 59ನೇ ಸಾಹಿತ್ಯ ಸಮ್ಮೇಳದಲ್ಲಿ ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಮುನ್ನೆಲೆಗೆ ತಂದು, ಸಮ್ಮೇಳನದ ಅಧ್ಯಕ್ಷತೆಗೆ ಆರ್ ಸಿ ಹಿರೇಮಠ್ ಅವರ ಆಯ್ಕೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ’ಜಾಗೃತ ಸಾಹಿತ್ಯ ಸಮಾವೇಶ’ವನ್ನು ಆಯೋಜಿಸಲಾಗಿತ್ತು. ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ ಮುಂತಾದ ಸಾಹಿತಿಗಳು ಜಾಗೃತ ಸಮಾವೇಶದಲ್ಲಿ ಭಾಗವಹಿಸಿದ್ದು ಹೆಚ್ಚಿನ ಜನ ಅಲ್ಲಿಗೆ ಬರುವುದಕ್ಕೆ ಕಾರಣವಾಯಿತು ಎನ್ನಲಾಗುತ್ತದೆ. “ಯಾವುದು ಉತ್ತಮ ಸಾಹಿತ್ಯ, ಯಾವುದು ಅಷ್ಟು ಉತ್ತಮವಲ್ಲ ಎಂಬುದು ನನಗಂತೂ ಜೀವನ್ಮರಣದ ಪ್ರಶ್ನೆ” ಎಂದಿದ್ದರಂತೆ ಅಂದು ಆ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಅಡಿಗರು. ಅಂದು ಅಲ್ಲಿ ನೆರೆದಿದ್ದವರು ರಚಿಸಿದ ಸಾಹಿತ್ಯವನ್ನು ಶ್ರೇಷ್ಠ ಎಂದು ಬಗೆಯುವುದು ಹೇಗೆ? ಇಷ್ಟು ದಿನ “ಶ್ರೇಷ್ಠ” ಎಂದು ಬಿಂಬಿಸಲಾಗಿದ್ದ ಅಡಿಗರಂತಹವರ ಪದ್ಯಗಳ ಬಗ್ಗೆಯೇ ಹಲವು ಪ್ರಶ್ನೆಗಳಿವೆ. ಬ್ರಾಹ್ಮಣ್ಯದ ತಾರತಮ್ಯವನ್ನು ಮೆರೆಯುವ ಅವರ ಹಲವು ಕವನಗಳು ಹೇಗೆ ಶ್ರೇಷ್ಠವಾದವು? ಅಂದು ಅಲ್ಲಿ ಶ್ರೇಷ್ಠತೆಯ ನೆಪದಲ್ಲಿ ನೆರೆದಿದ್ದ ಎಷ್ಟೋ ಸಾಹಿತಿಗಳು ಇಂದು ಸಾರ್ವಜನಿಕ ನೆನಪಿನಿಂದಲೇ ಮರೆಯಾಗಿದ್ದಾರೆ. ಅದೇ ಸಮಾವೇಶದಲ್ಲಿ ಈ ’ಶ್ರೇಷ್ಠತೆಯ ವ್ಯಸನ’ವನ್ನು ಪ್ರಶ್ನಿಸಿ ಕೆ ವಿ ಸುಬ್ಬಣ್ಣ ಮಾಡಿದ ಭಾಷಣವೂ ಬಹಳ ಚರ್ಚೆಗೆ ಒಳಪಟ್ಟಿತ್ತು. ಅವರೂ ಕೂಡ ಶ್ರೇಷ್ಠತೆಯ ಮಾನದಂಡವನ್ನು ಒಪ್ಪಿಯೇ, ಅದು ವ್ಯಸನವಾಗಬಾರದು ಎಂಬ ರೀತಿಯಲ್ಲಿ ಚರ್ಚೆಯನ್ನು ಬೆಳೆಸಿದ್ದರು ಅಷ್ಟೇ. ಆದರೆ ಈ ಶ್ರೇಷ್ಠತೆಯ ಕಲ್ಪನೆ ಕಾಲ-ದೇಶಬದ್ಧವಾಗಿದ್ದು, ಸಾಪೇಕ್ಷವಾದದ್ದು. ಮತ್ತು ಈ ಕಲ್ಪನೆ ಸಮಾನತೆಗೆ ವಿರುದ್ಧವಾದ ಚಿಂತನೆಯಿಂದ ಕೂಡಿದ್ದು ಕೂಡ. ಇಂತಹ ಶ್ರೇಷ್ಠತೆಯ ಮಾನದಂಡಕ್ಕೂ ಸಾಹಿತ್ಯ ಸಮ್ಮೇಳನ ಗುರಿಯಾಗಿತ್ತು. ಆದರೆ ನಿಜವಾಗಿ ಯಾವುದೇ ಸಮ್ಮೇಳನಗಳಲ್ಲಿ ಎತ್ತಬೇಕಾದ ಪ್ರಶ್ನೆ ’ಪ್ರಾತಿನಿಧ್ಯ’ದ್ದಾಗಿರಬೇಕು.

ಅಂತಹ ಪ್ರಾತಿನಿಧ್ಯದ ಪ್ರಶ್ನೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎದ್ದಿತ್ತು. ದಲಿತ ಗೋಷ್ಠಿ ಇರಬೇಕೆಂದ ವಾದಕ್ಕೆ ಅಂದಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಹಂಪನಾ ಅವರು ನೀಡಿದ ಬೇಜವಾಬ್ದಾರಿ ಉತ್ತರ ಮುಂದೆ ಬಂಡಾಯ ಸಾಹಿತ್ಯ ಸಮ್ಮೇಳನ ಹುಟ್ಟಲು ಕಾರಣವಾಗಿತ್ತು. ಈಗ ಮುಸಲ್ಮಾನ ಬರಹಗಾರರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪ ಸದರಿ ಹಾವೇರಿ ಸಾಹಿತ್ಯ ಸಮ್ಮೇಳನದ ಮೇಲಿದೆ. ಟೋಕನಿಸಂ ಎಂಬಂತೆ ಅಲ್ಲಲ್ಲಿ ಕೆಲವು ಮುಸ್ಲಿಂ ಸಮುದಾಯದ ಸಾಹಿತಿಗಳು-ಕವಿಗಳಿಗೆ ಅವಕಾಶ ನೀಡಿದ್ದರೂ ಅದು ಸಮರ್ಪಕ ಮಟ್ಟದಲ್ಲಿಲ್ಲ. ಇದನ್ನು ಸರಿಪಡಿಸಿಕೊಳ್ಳುವ ಎಲ್ಲ ಅವಕಾಶವೂ ಮಹೇಶ ಜೋಶಿಯವರ ಮುಂದೆ ಇತ್ತು. ಆದರೆ ಅವರು ಸಮ್ಮೇಳನದ ಪ್ರಾತಿನಿಧ್ಯದ ಪ್ರಶ್ನೆ ಎತ್ತಿದವರ ಮೇಲೆ ವೈಯಕ್ತಿಕ ಪ್ರತ್ಯಾರೋಪಕ್ಕೆ ನಿಂತರು. ಅವುಗಳಿಗೆ ಯಾವ ಸಾಕ್ಷ್ಯಾಧಾರಗಳನ್ನೂ ನೀಡುವ ಗೋಜಿಗೆ ಹೋಗಲಿಲ್ಲ. ಪ್ರಜಾಪ್ರಭುತ್ವದ ಲಕ್ಷಣಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ಸಾಹಿತ್ಯ ಪರಿಷತ್ತಿನ ಈ ಅಧ್ಯಕ್ಷರಿಗೆ ಗೌರವವಿದ್ದಿದ್ದರೆ ಈ ರೀತಿಯ ವರ್ತನೆಯ ಅಗತ್ಯವೇ ಬೀಳುತ್ತಿರಲಿಲ್ಲ. 2020ರಲ್ಲಿ ರೈತರ ಪ್ರತಿರೋಧಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು. ಯಾವುದೇ ದೋಷಗಳನ್ನು ಸರಿಪಡಿಸಿಕೊಳ್ಳುವ ಅವಕಾಶವಿದ್ದಾಗ, ಸಾಹಿತ್ಯ ಪರಿಷತ್ ಸಂಸ್ಥೆಯ ಅಧ್ಯಕ್ಷರ ಮೊಂಡುತನಕ್ಕೆ ಯಾವ ಸಮರ್ಥನೆಯೂ ಇಲ್ಲ!

ಇದನ್ನೂ ಓದಿ: ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲು ಮನಸ್ಸು ಒಪ್ಪುತ್ತಿಲ್ಲ: ಕಸಾಪ ಎಡವಟ್ಟಿಗೆ ಕವಯತ್ರಿ ಸುಜಾತ ಪ್ರತಿರೋಧ

ಇನ್ನು ಗೋಷ್ಠಿಗಳ ಆಯೋಜನೆಯಲ್ಲಿಯೂ ಇಂದಿನ ಜ್ವಲಂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಪರಿಣಾಮಕಾರಿಯಾಗಿಲ್ಲ. ಇಂದು ಇಡೀ ಜಗತ್ತನ್ನು ಕೃತಕ ಬುದ್ಧಿಮತ್ತೆ ಆವರಿಸಿಕೊಳ್ಳುತ್ತಿದೆ. ಇದರ ಬಗ್ಗೆ ನಾವು ಕನ್ನಡಿಗರು ಚರ್ಚಿಸುವ ಅಗತ್ಯ ಇತ್ತಲ್ಲವೇ? ’ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಎಂಬ ಗೋಷ್ಠಿಯಲ್ಲಿ ಅವೇ ಓಬಿರಾಯನ ಕಾಲದ ಚರ್ಚೆಗಳು! ಉತ್ತರ ಕರ್ನಾಟಕ ಹವಾಮಾನ ವೈಪರೀತ್ಯಕ್ಕೆ ಕಳೆದ ಕೆಲವು ವರ್ಷಗಳಿಂದ ಗುರಿಯಾಗುತ್ತಲೇ ಇದೆ. ಹಾವೇರಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ಚರ್ಚೆ ಬೇಡವೇ? ಜಗತ್ತಿನಾದ್ಯಂತ ಹವಾಮಾನ ಬದಲಾವಣೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಸಾಹಿತ್ಯ ಸಾಗಿದೆ. ’ಕನ್ನಡ ಚಳವಳಿ ಪರಿಣಾಮಗಳು’ ಎಂಬ ಗೋಷ್ಠಿಯಲ್ಲಿ ಭಾಷೆ ಮತ್ತು ಗಡಿಗೆ ಸಂಬಂಧಿಸಿದ ಕೆಲವು ವಿಷಯಗಳ ಮಂಡನೆ ಇದೆ. ಕರ್ನಾಟಕದಲ್ಲಿ ನಡೆದ ರೈತ, ದಲಿತ, ಕೋಮು ಸೌಹಾರ್ದ ಚಳವಳಿಗಳೆಲ್ಲವೂ ಕನ್ನಡ ಚಳವಳಿಗಳೇ ತಾನೇ? ಅವಕ್ಕೆ ಅಲ್ಲಿ ಸ್ಥಾನ ಬೇಡವೇ? ’ಕರ್ನಾಟಕ: ಭಾಷಾ ವೈವಿಧ್ಯ ಎಂಬ ಗೋಷ್ಠಿಯಲ್ಲಿ ಉರ್ದು ಮತ್ತು ಬ್ಯಾರಿ ಭಾಷೆಗಳಂತಹ ಕನ್ನಡ ನಾಡಿನ ಭಾಷೆಗಳ ಚರ್ಚೆಗೆ ಜಾಗವೇ ಇಲ್ಲ. ಈ ಪಟ್ಟಿಯನ್ನು ಮುಂದುವರಿಸುತ್ತಲೇ ಹೋಗಬಹುದು.

ಕರ್ನಾಟಕದಲ್ಲಿ ಸಾಹಿತಿಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ನೀಡುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ತಮ್ಮ ಕ್ಷೇತ್ರವಲ್ಲದಿದ್ದರೂ ಅವುಗಳ ಬಗ್ಗೆ ಸಾಹಿತಿಗಳಿಂದ ಪ್ರತಿಕ್ರಿಯೆಗಳನ್ನು ಪಡೆಯುವ ಸಂಪ್ರದಾಯ ಈ ನಾಡಿನಲ್ಲಿ ಹೇಗೋ ಬೆಳೆದುಬಂದಿದೆ. ಕೆಲವೊಮ್ಮೆ ಅದು ಆರೋಗ್ಯಕರವಾಗಿ ಪರಿಣಮಿಸಿದ್ದರೂ, ಅಪಾಯಗಳನ್ನೂ ತಂದೊಡ್ಡಿದ್ದಿದೆ. ಉದಾಹರಣೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು ಎಂದು ಮೇಲ್ಪದರಲ್ಲಿ ಆಗ್ರಹಿಸುತ್ತಾ ಬರುವ ಸಾಹಿತಿಗಳು, ಅದಕ್ಕಾಗಿ ನಡೆಸುವ ಅಧ್ಯಯನಗಳ ಬಗ್ಗೆ ಹೆಚ್ಚು ಆಸಕ್ತಿ ತಳೆಯುವುದಿಲ್ಲ. ಹೀಗೆ ಸಾಹಿತಿಗಳಿಗೆ ಸಿಕ್ಕ ಅನಗತ್ಯ ಪ್ರಾಶಸ್ತ್ಯದಿಂದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯ ಸಮ್ಮೇಳನಗಳಿಗೂ ’ಪ್ರತಿಷ್ಠೆ’ ಲಭ್ಯವಾಗಿದೆ. ಈ ಪ್ರತಿಷ್ಠೆಯನ್ನು ಸರಿ ದಾರಿಗೆ, ಜನಪರ ಮಾರ್ಗಕ್ಕೆ ತಿರುಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಬಿಸಾಡಿ, ಕರ್ನಾಟಕದ ಎಲ್ಲ ಜನರ ಆಶೋತ್ತರಗಳಿಗೆ ಮತ್ತು ನಾಡಿನ ಬಹುತ್ವ ಪರಂಪರೆಗೆ ಮಿಡಿಯುವ ಸಂಸ್ಥೆಯಾಗಿ ಇದನ್ನು ರೂಪಾಂತರಗೊಳಿಸುವ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕಿದೆ. ಪ್ರತಿರೋಧ ಒಂದು ಮಾರ್ಗವಾದರೆ, ಸಂಸ್ಥೆಯ ಒಳಹೊಕ್ಕು ಸುಧಾರಣೆಗೆ ಮುಂದಾಗುವುದು ಮತ್ತೊಂದು. ಈ ನಿಟ್ಟಿನಲ್ಲಿ ಇವುಗಳ ನಡುವೆ ಸಮನ್ವಯವನ್ನು ಸಾಧಿಸುವತ್ತ ನಾವೆಲ್ಲರೂ ಚಿಂತಿಸಬೇಕಿದೆ.

ಗುರುಪ್ರಸಾದ್ ಡಿ ಎನ್

ಸಂಪಾದಕರು, ನ್ಯಾಯಪಥ

ಇದನ್ನೂ ಓದಿ; ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಂಭ್ರಮ ಮತ್ತು ಪ್ರತಿರೋಧಗಳ ನಡುವೆ ಜನಸಾಹಿತ್ಯ ಸಮ್ಮೇಳನದ ರೂವಾರಿಗಳು ಹೇಳುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಮ್ಮ ಪುಸ್ತಕದ ಮಳಿಗೆಯೂ ಹಾವೇರಿಗೆ ಹೋದಂತಿದೆ!?
    ಗೌರಿಯವರಿದ್ದಿದ್ದರೆ ಹೀಗಾಗುತ್ತಿರಲಿಲ್ಲವೇನೋ.

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...