2021ರಲ್ಲಿ ಆಗಬೇಕಿದ್ದ ಜನಗಣತಿ 2024ರ ಚುನಾವಣೆಯ ಮುನ್ನ ಆಗುವುದಿಲ್ಲ ಎಂಬುದು ಈಗ ಬಹುತೇಕ ಖಚಿತವಾಗಿದೆ. ಅದರ ನಂತರ ಈ ದಶಕದಲ್ಲಿ ಯಾವಾಗ ಆಗುತ್ತದೋ ಅಥವಾ ಆಗುವುದೇ ಇಲ್ಲವೋ, ಎಂಬುದನ್ನು ಕೂಡ ಹೇಳಲಾಗದು. ಇದು ದೇಶದ ನೀತಿ ರಚನೆಯಲ್ಲಿ ಹಾಗೂ ವಿಶೇಷವಾಗಿ ಅವಕಾಶ ವಂಚಿತ ವರ್ಗಗಳಿಗೆ ಅತ್ಯಂತ ಕೆಟ್ಟ ಸುದ್ದಿಯಾಗಿದೆ. ಪ್ರತಿ ದಶಕದ ಮೊದಲ ವರ್ಷ ಆಗುವ ಜನಗಣತಿಯನ್ನು ಈಗ ಮುಂದೆ ಸಾಗಿಹಾಕಲು ಯಾವುದೇ ಕಾರಣಗಳಿಲ್ಲ, ಈ ಒಂದು ಕಾರಣ ಬಿಟ್ಟು: ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ನಷ್ಟ ಆಗುವ ಆತಂಕವಿದೆ. ದೇಶದ ಇನ್ನೊಂದು ಸಂಸ್ಥೆ ಚುನಾವಣಾ ಗಣಿತದ ಬಲಿಯಾಗಿದೆ ಅನಿಸುತ್ತಿದೆ.
ನಮ್ಮ ದೇಶದಲ್ಲಿ ಪ್ರತಿ ದಶಕದಲ್ಲಿ ಒಂದು ಬಾರಿ ಸೆನ್ಸಸ್ ಅಥವಾ ಜನಗಣತಿ ಮಾಡಬೇಕೆನ್ನುವ ನಿಯಮವಿದೆ. ಜನಗಣತಿ ಎಂಬುದು ಕೇವಲ ದೇಶದ ಜನಸಂಖ್ಯೆಯ ಸಾಮಾನ್ಯವಾದ ಎಣಿಕೆಯಲ್ಲ. ಇದು 10 ವರ್ಷಕ್ಕೊಂದು ಬಾರಿ ಆಗುವ ವಿಶೇಷ ಸಮೀಕ್ಷೆಯಾಗಿದ್ದು, ಇದರಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿಯ ಎಣಿಕೆ ಆಗುತ್ತದೆ, ಆ ವ್ಯಕ್ತಿ ಬೀದಿಯಲ್ಲಿ ವಾಸಿಸುವ ಸೂರಿಲ್ಲದ ವ್ಯಕ್ತಿಯಾಗಿದ್ದರೂ ಸರಿ. ಪ್ರತಿಯೊಂದು ಕುಟುಂಬದ ಎಲ್ಲಾ ಸದಸ್ಯರ ಲಿಂಗ, ವಯಸ್ಸು, ಶಿಕ್ಷಣ, ಕೆಲಸವನ್ನು ದಾಖಲಿಸಲಾಗುತ್ತದೆ. ಕುಟುಂಬದ ಜಾತಿ, ಧರ್ಮ, ಭಾಷೆ, ಮನೆಯ ಸ್ವರೂಪ, ವಿದ್ಯುತ್, ನೀರು, ಇಂಧನದ ಮೂಲ ಹಾಗೂ ಆಯ್ದ ಕೆಲವು ಆಸ್ತಿಯ ವಿವರಗಳನ್ನು ದಾಖಲಿಸಲಾಗುತ್ತದೆ. ಈ ಸೂಚನೆ, ದೇಶದಲ್ಲಿ ಪ್ರತಿಯೊಂದು ಅಂಕಿಅಂಶಗಳ ಅಧಿಕೃತ ಮೂಲವಾಗಿದೆ. ಜನಗಣತಿಯ ಈ ಪರಂಪರೆ ಬ್ರಿಟಿಷರ ಕಾಲದಿಂದ, ಅಂದರೆ 1872ರಿಂದ ನಡೆದು ಬಂದಿದೆ. ಅದರ ನಂತರ 1881ರಿಂದ ದಶಕದ ಮೊದಲ ವರ್ಷ ಜನಗಣತಿ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ. ಕಲ್ಲಲ್ಲಿ ಎಳೆದ ಈ ಗೆರೆಯು ದ್ವಿತೀಯ ಮಹಾಯುದ್ಧ ನಡೆಯುತ್ತಿರುವಾಗ, ಇಡೀ ವಿಶ್ವ ವ್ಯವಸ್ಥೆಯೇ ಅಸ್ತವ್ಯಸ್ಥಗೊಂಡ ಅವಧಿ 1941ರಲ್ಲಿ ಮಾತ್ರ ಮುರಿಯಲಾಗಿತ್ತು. ಸ್ವಾತಂತ್ರ್ಯದ ನಂತರ 1951ರಿಂದ 2011ರ ತನಕ ದೇಶಕ್ಕೆ ಒದಗಿದ ಎಲ್ಲಾ ವಿಪತ್ತುಗಳ ಹೊರತಾಗಿಯೂ ನಿಯಮಿತ ಸಮಯದಲ್ಲಿ ಜನಗಣತಿ ಆಗುತ್ತಲೇ ಇದೆ. 1971ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧದ ವಾತಾವರಣ ಇತ್ತು, ದೇಶದಲ್ಲಿ ಲೋಕಸಭೆ ಚುನಾವಣೆಗಳಿದ್ದವು, ಆದರೂ ಜನಗಣತಿ ಅದೇ ವರ್ಷ ನಡೆಯಿತು.
ಈ ದಶಕದ ಜನಗಣತಿ ಫೆಬ್ರುವರಿ 2021ರಲ್ಲಿ ನಡೆಯಬೇಕಿತ್ತು. ಅದಕ್ಕೆ ಸಿದ್ಧತೆಯಾಗಿ ಮೊದಲ ಸುತ್ತು ಅಂದರೆ ಮನೆಗಳು ಮತ್ತು ಕುಟುಂಬಗಳ ಎಣಿಕೆ 2020ರ ಫೆಬ್ರವರಿಯಿಂದ ಅಕ್ಟೋಬರ್ ಮಧ್ಯೆ ಆಗಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಿದ್ದರಿಂದ ಅದನ್ನು ಸ್ಥಗಿತಗೊಳಿಸಲಾಯಿತು. ಮಾರನೆಯ ವರ್ಷ ಮತ್ತೆ ಕೊರೊನಾದ ಎರಡನೆಯ ಅಲೆ ಶುರುವಾಗಿದ್ದರಿಂದ ಪುನಃ ಸ್ಥಗಿತಗೊಳಿಸಲಾಯಿತು. ಆದರೆ ಕೊರೊನಾ ಮುಗಿದ ನಂತರವೂ ಸರಕಾರ ಜನಗಣತಿ ಮಾಡುವ ಯಾವ ಇರಾದೆಯನ್ನೂ ತೋರಿಸಲಿಲ್ಲ. ಕಳೆದ ವರ್ಷ 2022ರಲ್ಲಿ ಜನಗಣತಿ ಮಾಡದೇ ಇರಲು ಯಾವ ಕಾರಣಗಳೂ ಇರಲಿಲ್ಲ. ಸರಕಾರ ಕೇವಲ ಒಂದು ಹೊಸ ಟೈಮ್ ಟೇಬಲ್‌ಅನ್ನು ಘೋಷಿಸಿ, ಈಗ ಜನಗಣತಿ 2023ರಲ್ಲಿ ಆಗುವುದು ಎಂದು ಮಾತ್ರ ಹೇಳಿತು.
ಅಂದ ಹಾಗೆ ಸರಕಾರವು 2023ರಲ್ಲಿ ಇದನ್ನು ಇನ್ನೂ ಮಂದೆ ಹಾಕುವ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಕಳೆದ ವಾರ ಗೃಹ ಸಚಿವಾಲಯದ ಒಂದು ಆದೇಶದ ಅನುಗುಣವಾಗಿ ಎಲ್ಲಾ ರಾಜ್ಯ ಸರಕಾರಗಳು ತಮ್ಮ ಶಾಸಕಾಂಗದ ಗಡಿಗಳಲ್ಲಿ ಬದಲಾವಣೆ ಮಾಡುವ ಇರುವ ವಿನಾಯಿತಿಯನ್ನು ಜೂನ್ 2023ರ ತನಕ ವಿಸ್ತರಿಸಲಾಗಿದೆ. ಜನಗಣತಿಗೆ ಮುನ್ನ ಆಡಳಿತಾತ್ಮಕ ಗಡಿಗಳ ಬದಲಾವಣೆಗಳನ್ನು ನಿಲ್ಲಿಸುವುದು ಅನಿವಾರ್ಯ. ಇದರರ್ಥ, ಜನಗಣತಿಯ ಮೊದಲ ಹಂತ ಈ ವರ್ಷ ಜುಲೈ ತಿಂಗಳಿಗಿಂತ ಮುನ್ನ ಶುರುವಾಗಲು ಸಾಧ್ಯವಿಲ್ಲ ಹಾಗೂ ಅದರ 6 ತಿಂಗಳ ನಂತರದ ತನಕ ಮುಗಿಸಲು ಸಾಧ್ಯವಿಲ್ಲ. ಅಂದರೆ ಇದರರ್ಥ ಈಗ ಎರಡನೆಯ ಹಂತ ಅಂದರೆ ವ್ಯಕ್ತಿಗಳ ಜನಗಣತಿ ಫೆಬ್ರವರಿ 2024ಗಿಂತ ಮುನ್ನ ಸಾಧ್ಯವೇ ಇಲ್ಲ. ಆ ವೇಳೆ ದೇಶದಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿರುತ್ತದೆ, ಹಾಗಾಗಿ ಆಗ ಜನಗಣತಿ ಸಾಧ್ಯವಾಗುವುದಿಲ್ಲ. ಸಾರಾಂಶದಲ್ಲಿ ಹೇಳಬೇಕೆಂದರೆ ಸರಕಾರವು ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಜನಗಣತಿ ಆಗದೇ ಇರುವಂತೆ ಸಂಪೂರ್ಣ ತಯ್ಯಾರಿ ಮಾಡಿಕೊಂಡಿದೆ.
ಇದನ್ನೂ ಓದಿ: ಜನಗಣತಿ: 2024-2025ಕ್ಕೆ ಮುಂದೂಡಿಕೆ
ದಶಕಕ್ಕೊಮ್ಮೆ ಆಗಬೇಕಾದ ಜನಗಣತಿ ಆಗದೇ ಇರುವುದು ಕೇವಲ ಅಂಕಿಅಂಶಗಳ ನಷ್ಟವಲ್ಲ. ದೇಶದ ಜನಸಂಖ್ಯೆಯ ಎಣಿಕೆಗೆ ಜನಗಣತಿ ಮಾಡುವ ಅವಶ್ಯಕತೆ ಇಲ್ಲ. ತಜ್ಞರ ಪ್ರಕಾರ, ಈ ವರ್ಷ ಭಾರತದ ಜನಸಂಖ್ಯೆ 141 ಕೋಟಿ ಮೀರಲಿದೆ ಹಾಗೂ ಇದೇ ವರ್ಷ ಚೀನಾದ ಜನಸಂಖ್ಯೆ ನಮಗಿಂತ ಕಡಿಮೆಯಾಗುವುದು. ಅಂದರೆ, 2023ರಲ್ಲಿ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಇದನ್ನು ತಿಳಿಯಲು ನಮಗೆ ಜನಗಣತಿಯ ಅವಶ್ಯಕತೆ ಇಲ್ಲ. ಜನಗಣತಿಯ ನಿಜವಾದ ಮಹತ್ವವಿರುವುದೇನೆಂದರೆ, ಇದರಿಂದ ದೇಶದ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ಬ್ಲಾಕ್, ಪ್ರತಿಯೊಂದು ನಗರ, ಪ್ರತಿಯೊಂದು ಗ್ರಾಮ, ಪ್ರತಿಯೊಂದು ಮನೆ, ಪ್ರತಿಯೊಂದು ವರ್ಗದ ಸಂಪೂರ್ಣ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಚಿತ್ರಣ ದೇಶದ ಎದುರಿಗೆ ಬರುವುದು, ಅಂದರೆ ಇಡೀ ದೇಶದ ಎಕ್ಸ್‌ರೆ ನಮ್ಮ ಮುಂದೆ ಇಟ್ಟಂತಾಗುವುದು. ಈ ಪ್ರಕ್ರಿಯೆಯಿಂದ ಹೊರಬರುವ ಅಂಕಿಅಂಶಗಳು ದೇಶದ ನೀತಿ ರಚನೆಯ ಸಲುವಾಗಿ ಅತ್ಯಂತ ಮಹತ್ವಪೂರ್ಣವಾಗಿರುತ್ತವೆ.
ಆದರೆ, ವಿಷಯ ಇಲ್ಲಿಗೇ ನಿಲ್ಲುವುದಿಲ್ಲ. ಜನಗಣತಿಯ ಅಂಕಿಅಂಶಗಳು ನೇರವಾಗಿ ಕೆಲವು ಸಾಂವಿಧಾನಿಕ ಅವಕಾಶಗಳು/ನಿಬಂಧನೆಗಳು, ದೇಶದ ಬಡವರ ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಕ್ಕುಗಳೊಂದಿಗೆ ಥಳುಕುಹಾಕಿಕೊಂಡಿವೆ. ಅಂದರೆ, ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಮೀಸಲಾತಿ ಎಷ್ಟಿರಬೇಕು ಎಂಬುದು ಕೂಡ ಜನಗಣತಿಯ ಮೇಲೆ ಅವಲಂಬಿತವಾಗಿರುತ್ತದೆ. ಕಳೆದ 11 ವರ್ಷಗಳಲ್ಲಿ ದೇಶದ ಜನಸಂಖ್ಯೆಯಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯಗಳ ಅನುಪಾತ ಹೆಚ್ಚಾಗಿದೆ. ಆದರೆ ಎಲ್ಲಿಯವರೆಗೆ ಜನಗಣತಿಯ ಅಧಿಕೃತ ಅಂಕಿಅಂಶಗಳು ಸಿಗುವುದಿಲ್ಲವೋ, ಅಲ್ಲಿಯವರೆಗೆ ಮೀಸಲಾತಿಯಲ್ಲಿ ಹೆಚ್ಚಳ ಮಾಡಲು ಸಾಧ್ಯವಾಗುವುದಿಲ್ಲ. ಜನಗಣತಿಯು ನೇರವಾಗಿ ಬಡವರ ಪಡಿತರದೊಂದಿಗೂ ಸಂಬಂಧಿಸಿದೆ. ಆಹಾರ ಭದ್ರತೆ ಕಾನೂನಿಗೆ ಅನುಗುಣವಾಗಿ ದೇಶದ ಗ್ರಾಮೀಣ ಜನರಲ್ಲಿ 75%, ನಗರದ 50% ಜನರಿಗೆ ಕಡಿಮೆ ದರದಲ್ಲಿ ಪಡಿತರ ವಿತರಿಸಲಾಗುವುದು. ಹಳೆಯ ಜನಗಣತಿಯ ಪ್ರಕಾರ, ಈ ಸಂಖ್ಯೆ 80 ಕೋಟಿ ಇತ್ತು, ಆದರೆ ಒಂದು ವೇಳೆ 2021ರಲ್ಲಿ ಜನಗಣತಿ ಆಗಿದ್ದಲ್ಲಿ ಈ ಸಂಖ್ಯೆ 92 ಕೋಟಿ ತಲುಪುತ್ತಿತ್ತು. ಅಂದರೆ, ದೇಶದ 12 ಕೋಟಿ ಜನರು ಪಡಿತರದಿಂದ ವಂಚಿತರಾಗಿದ್ದಕ್ಕೆ ಕಾರಣ ಸಮಯಕ್ಕೆ ಸರಿಯಾಗಿ ಜನಗಣತಿ ಆಗದೇ ಇದ್ದದ್ದು.
ಪ್ರಶ್ನೆ ಏನೆಂದರೆ, ಜನಗಣತಿಯನ್ನು ಸಮಯಕ್ಕೆ ಸರಿಯಾಗಿ ಸರಕಾರ ಏಕೆ ಮಾಡುತ್ತಿಲ್ಲ? 2021ರಲ್ಲಿ ಇದನ್ನು ಮುಂದೂಡುವುದಕ್ಕೆ ಕಾರಣ ಇದ್ದವು ಎಂದು ಅರ್ಥಮಾಡಿಕೊಳ್ಳಬಹುದು; ಆದರೆ ಅದರ ನಂತರವೂ ಮುಂದಕ್ಕೆ ಹಾಕುತ್ತಿರುವುದಕ್ಕೆ ಕಾರಣವೇನು? ಒಂದಿಷ್ಟು ಪರಿಶೀಲನೆ ಮಾಡಿದರೆ, ಎರಡು ಮುಖ್ಯ ಕಾರಣಗಳು ಕಾಣಿಸುತ್ತವೆ ಹಾಗೂ ದುರದೃಷ್ಟವಷಾತ್ ಎರಡೂ ಕಾರಣಗಳಿಗೆ ರಾಷ್ಟ್ರದ ಹಿತಾಸಕ್ತಿ, ಆಡಳಿತ ವ್ಯವಸ್ಥೆ ಹಾಗೂ ಅಂಕಿಅಂಶಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಮೊದಲನೆಯ ಕಾರಣ, ಜಾತಿವಾರು ಜನಗಣತಿಗೆ ಹೆಚ್ಚುತ್ತಿರುವ ಒತ್ತಾಯ. ಕಳೆದ ಮೋದಿ ಸರಕಾರದಲ್ಲಿ ಆಗಿನ ಗೃಹಮಂತ್ರಿ ರಾಜನಾಥ್ ಸಿಂಗ್ ಅವರು ಮುಂಬರುವ ಜನಗಣತಿಯಲ್ಲಿ ಜಾತಿವಾರು ಅಂಕಿಅಂಶಗಳನ್ನು ಸಂಗ್ರಹಿಸುವುದಾಗಿ ಭರವಸೆ ನೀಡಿದ್ದರು. ಸಂಸತ್ತಿನ ತನ್ನ ಸಮಿತಿ ಮತ್ತು ಸರಕಾರದ ಹಿಂದುಳಿದ ವರ್ಗಗಳ ಆಯೋಗವು ಇದನ್ನು ಶಿಫಾರಸ್ಸು ಮಾಡಿತ್ತು. ಆರು ರಾಜ್ಯ ಸರಕಾರಗಳು ಇದಕ್ಕೆ ಬೇಡಿಕೆ ಇಟ್ಟಿವೆ ಹಾಗೂ ಬಿಹಾರದಲ್ಲಂತೂ ಸರಕಾರವು ಜಾತಿವಾರು ಜನಗಣತಿ ಶುರು ಮಾಡಿ ಕೇಂದ್ರ ಸರಕಾರಕ್ಕೆ ಸವಾಲು ಹಾಕಿದೆ. ಜಾತಿವಾರು ಜನಗಣತಿಯ ಅಂಕಿಅಂಶಗಳು ಬಿಜೆಪಿಯ ರಾಜಕೀಯಕ್ಕೆ ಸರಿಹೊಂದುವುದಿಲ್ಲ ಎಂದು ಮೋದಿ ಸರಕಾರಕ್ಕೆ ಗೊತ್ತಿದೆ. ಸರಕಾರ ಜಾತಿವಾರು ಜನಗಣತಿ ಮಾಡುವುದನ್ನು ಬಯಸುತ್ತಿಲ್ಲ ಹಾಗೂ ಅದನ್ನು ತಾನೇ ನಿರಾಕರಿಸುತ್ತಿದೆ ಎಂದು ತೋರಿಸಿಕೊಳ್ಳಲೂ ಇಷ್ಟವಿಲ್ಲ. ಈ ರಾಜಕೀಯ ದ್ವಂದದಿಂದ ಬಚಾವಾಗುವ ಅತ್ಯಂತ ಸರಳ ದಾರಿ ಜನಗಣತಿಯನ್ನೇ ಮುಂದೂಡುವುದಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಇಂದಿನಿಂದ ಜಾತಿಗಣತಿ ಆರಂಭ: ಜಾತಿ ಗಣತಿ ಕುರಿತು ಚಿಂತಕರ ಅಭಿಪ್ರಾಯಗಳಿವು
ಎರಡನೆಯ ಕಾರಣ ನ್ಯಾಷನಲ್ ಪಾಪ್ಯುಲೇಷನ್ ರೆಜಿಸ್ಟರ್‌ಗೆ ಸಂಬಂಧಿಸಿದೆ. 2019ರಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿ ಮಾಡಿದಾಗ ಸರಕಾರ ಘೋಷಿಸಿದ್ದೇನೆಂದರೆ, ಅದು ಹೊಸ ಜನಗಣತಿಯ ಜೊತೆಗೆ ಇಡೀ ದೇಶದ ಒಂದು ಹೊಸ ಜನಸಂಖ್ಯಾ ರೆಜಿಸ್ಟರ್ ಮಾಡುವುದು, ಅದರ ಆಧಾರದ ಮೇಲೆ ಅಕ್ರಮ ನಾಗರಿಕರನ್ನು ಗುರುತಿಸಬಹುದು ಎಂದು. ಆದರೆ ಈ ಕಾನೂನಿನ ವಿರುದ್ಧ ಶಾಹೀನ್ ಬಾಗ್‌ನಂತಹ ಪ್ರದರ್ಶನಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ಆದ ಬಂಡಾಯ ಕಾರಣದಿಂದ ಸರಕಾರ ಇದರಿಂದ ಹಿಂದಕ್ಕೆ ಸರಿಯಬೇಕಾಯಿತು. ಕಾನೂನು ಇನ್ನೂ ಜಾರಿಯಲ್ಲಿದೆ. ಆದರೆ ಅದನ್ನು ಅನುಷ್ಠಾನಗೊಳಿಸಲು ನಿಯಮ ರಚಿಸುವಲ್ಲಿ ಸರಕಾರ ಮೌನವಹಿಸಿದೆ. ಇಲ್ಲಿ ಮೋದಿ ಸರಕಾರದ ಚಿಂತೆಗೆ ಅಸಲಿ ಕಾರಣ ಧಾರ್ಮಿಕ ಅಲ್ಪಸಂಖ್ಯಾತರ ವಿರೋಧವಲ್ಲ. ಆ ವಿರೋಧದಿಂದ ಸರಕಾರ ರಾಜಕೀಯ ಲಾಭ ಪಡೆಯುವ ಚಿಂತನೆ ಮಾಡಬಲ್ಲದು. ಮೋದಿ ಸರಕಾರದ ಅಸಲಿ ಕಾರಣ, ರಾಷ್ಟ್ರೀಯ ಜನಸಂಖ್ಯಾ ರೆಜಿಸ್ಟರ್‌ದಿಂದ ಈಶಾನ್ಯ ಭಾರತದ ಮೇಲೆ ಆಗುವ ಪರಿಣಾಮ, ಅದರಿಂದ ಅಸ್ಸಾಂ ಮತ್ತು ಈಶಾನ್ಯ ಭಾಗದ ಅನೇಕ ಗುಡ್ಡಗಾಡಿನ ರಾಜ್ಯಗಳಲ್ಲಿ ಬಿಜೆಪಿಯ ರಾಜಕೀಯ ವಿಸ್ತರಣೆಗೆ ತಡೆಯೊಡ್ಡಬಹುದು. ಒಟ್ಟಾರೆಯಾಗಿ ಹೇಳಬಹುದೇನೆಂದರೆ, ಚುನಾವಣೆಗಳಲ್ಲಿ ಆಗುವ ಲಾಭ ನಷ್ಟಗಳ ಈ ರಾಜಕೀಯ ಗಣಿತದ ಕಾರಣದಿಂದ ದೇಶದ ಇನ್ನೊಂದು ಮಹತ್ವಪೂರ್ಣ ಸಂಸ್ಥೆಯನ್ನು ಬಲಿಯಾಗಿಸಲಾಗಿದೆ.
(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


