Homeಮುಖಪುಟಕಾವೇರಿದ ಚುನಾವಣಾ ಕದನ: ಅವಾಚ್ಯ ಪದಗಳಿಂದ ಪರಸ್ಪರ ನಿಂದಿಸಿಕೊಂಡ ಬಿಜೆಪಿ-ಕಾಂಗ್ರೆಸ್ ನಾಯಕರು

ಕಾವೇರಿದ ಚುನಾವಣಾ ಕದನ: ಅವಾಚ್ಯ ಪದಗಳಿಂದ ಪರಸ್ಪರ ನಿಂದಿಸಿಕೊಂಡ ಬಿಜೆಪಿ-ಕಾಂಗ್ರೆಸ್ ನಾಯಕರು

- Advertisement -
- Advertisement -

2018 ರಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿಗೆ ಪಕ್ಷಾಂತರಗೊಂಡ ಶಾಸಕರನ್ನು ವೇಶ್ಯೆಯರಿಗೆ ಹೋಲಿಸುವ ಮೂಲಕ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು ವಿವಾದ ಹುಟ್ಟುಹಾಕಿದ್ದಾರೆ.

“ಜೀವನಕ್ಕಾಗಿ ವೇಶ್ಯಾವಾಟಿಕೆಗೆ ಪ್ರವೇಶಿಸುವ ಮಹಿಳೆಯನ್ನು ‘ವೇಶ್ಯೆ’ ಎಂದು ಕರೆಯಲಾಗುತ್ತದೆ. ತಮ್ಮನ್ನು ತಾವು ಮಾರಿಕೊಂಡ ಶಾಸಕರನ್ನು ಏನೆಂದು ಕರೆಯುತ್ತೀರಿ? ಬಿಸಿ ಪಾಟಿಲ್ ಪೊಲೀಸ್ ಅಧಿಕಾರಿ ಇದ್ದಾಗ ಯಶವಂತಪುರದಲ್ಲಿ ಚಪ್ಪಲಿ, ಪೊರಕೆ ಸೇವೆ ಮಾಡಿದ್ದು ಯಾಕೆ ಅಂತ ಹೇಳಲಿ. ಬೋರಿಂಗ್ ಇನ್ಸ್ಟಿಟ್ಯೂಟ್ ಅಲ್ಲಿ ಕಾಲಪತ್ಥರ್ ರೌಡಿಗೆ ಯಾವ ಸೇವೆ ಮಾಡಿದ್ದಾರೆ ಎನ್ನುವುದು ಗೊತ್ತಿದೆ” ಎಂದು ಬಿಸಿ ಪಾಟೀಲ್ ವಿರುದ್ಧ ಬಿಕೆ ಹರಿಪ್ರಸಾದ್  ವಾಗ್ಧಾಳಿ ನಡೆಸಿದರು.

ಬಿಜೆಪಿಯಲ್ಲಿ ಸ್ಯಾಂಟ್ರೊ ರವಿ, ಸಿಟಿ ರವಿ, ಪೈಟರ್ ರವಿ, ಪಿಂಪ್ ರವಿಗಳೇ ತುಂಬಿ ತುಳುಕುತ್ತಿದ್ದಾರೆ. ಇವರಿಂದ ಏನು ನಿರೀಕ್ಷೆ ಮಾಡೋದಕ್ಕೆ ಆಗೋದಿಲ್ಲ ಎಂದು ಸಿಟಿ ರವಿಗೆ ಬಿಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಸ್ಯಾಂಟ್ರೊ ರವಿಗೂ ಕಾಂಗ್ರೆಸ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿಕೆ ನೀಡಿದ್ದ ಮುನಿರತ್ನಗೆ ತಿರುಗೇಟು ನೀಡಿದ ಹರಿಪ್ರಸಾದ್, “ಮುನಿರತ್ನ ನನ್ನ ಗರಡಿಯಲ್ಲಿ ಬೆಳೆದವನು, ಅವನು ಹೇಗೆ ಅಂತ ಗೊತ್ತಿದೆ. ಧೈರ್ಯ ಇದ್ದರೆ ಮಾತಾಡಲಿ, ನಾನು ಮಾತಾಡ್ತೀನಿ” ಎಂದರು.

“ಯತ್ನಾಳ್ ಅವರೇ ಖುದ್ದಾಗಿ ಹೇಳಿದ್ದಾರೆ. ಬಿಜೆಪಿ ಸರಕಾರದ ಮಂತ್ರಿಗಳು ಸಪ್ಲೈ ಮಾಡಿ ಮಂತ್ರಿಗಳಾಗಿದ್ದಾರೆ ಎಂದು, ಇನ್ನೊಬ್ಬ ಶಾಸಕರು ಹೇಳ್ತಾರೆ ಇವರು ಪಿಂಪ್ ಕೆಲಸ ಮಾಡಿ ಮಂತ್ರಿ ಆಗಿದ್ದಾರಂತೆ. ಇವರೆಲ್ಲಾ (ವಲಸೆ ಸಚಿವರು) ಮಂತ್ರಿಗಳು ನಮ್ಮ ಸರಕಾರದಲ್ಲಿ ಮಂತ್ರಿ ಆಗೋದಕ್ಕೆ ಏನು ಮಾಡಿದಾರೆ ಎನ್ನುವುದು ಗೊತ್ತಿದೆ. ಆದರೆ ಅದನ್ನು ಹೇಳಿ ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ” ಎಂದು ಹರಿಪ್ರಸಾದ್ ಅವರು ವಲಸೆ ಸಚಿವರ ಮೇಲೆ ಕಿಡಿಕಾರಿದ್ದಾರೆ.

“ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಹುಮತ ನೀಡದೇ ಅತಂತ್ರ ಫಲಿತಾಂಶ ನೀಡಿದ್ದರು. ಹಾಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಂದಾಗಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಆದರೆ, ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸಲು ಕೆಲ ಶಾಸಕರು ತಮ್ಮನ್ನೇ ತಾವು ಮಾರಿಕೊಂಡಿದ್ದಾರೆ, ಅವರನ್ನು ಏನೆಂದು ಕರೆಯುತ್ತೀರಿ? ಇದೀಗ ಮತ್ತೆ ಚುನಾವಣೆ ಬರುತ್ತಿದೆ. ಈ ವೇಳೆ ಸ್ಥಳೀಯ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಿದೆ” ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಹೊಸಪೇಟೆಯಲ್ಲಿ ಮುಖಂಡರು ಮನವಿ ಮಾಡಿದರು.

ಹರಿಪ್ರಸಾದ್ ಅವರ ವೇಶ್ಯೆ ಪದ ಬಳಕೆಯು ರಾಜ್ಯರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ತನ್ನ ಮಾತುಗಳನ್ನು ತಿರುಚುತ್ತಿದೆ ಮತ್ತು ಲೈಂಗಿಕ ಕಾರ್ಯಕರ್ತರ ಬಗ್ಗೆ ಅನಗತ್ಯ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

“ನಮಗೆ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಅಪಾರ ಗೌರವವಿದೆ. ಅವರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹರಿಪ್ರಸಾದ್ ಹೇಳಿದ್ದಾರೆ.

ಹರಿಪ್ರಸಾದ್‌ಗೆ ತಿರುಗೇಟುವ ನೀಡುವ ಭರದಲ್ಲಿ ಬಿಸಿ ಪಾಟೀಲ್ ಕೂಡ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. “ಕಾಂಗ್ರೆಸ್ ಪಕ್ಷ ದ್ರೋಹ ಮಾಡಿದ್ದಕ್ಕೆ ನಾವು ರಾಜೀನಾಮೆ ಕೊಟ್ಟು ಹೊರಗಡೆ ಬಂದೆವು. ಆ ಬಳಿಕ ಬಿಜೆಪಿ ಸೇರಿ, ಜನಾದೇಶದ ಮೇಲೆ ಮರು ಆಯ್ಕೆಯಾಗಿದ್ದೇವೆ. ಆಮೇಲೆ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಿದ್ದೇವೆ.
ಹರಿಪ್ರಸಾದ್ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ? ನಾವು ಜನರಿಂದ ಆಯ್ಕೆಯಾಗಿದ್ದೇವೆ. ಹರಿಪ್ರಸಾದ್ ಯಾವ ಜನರಿಂದ ಆಯ್ಕೆಯಾಗಿದ್ದಾರೆ? ಅವರು ಹಿಂಬಾಗಿಲಿನಿಂದ ಬಂದು ಇವತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹಿಂಬದಿಯಿಂದ ಬಂದವರನ್ನ ‘ಪಿಂಪ್‌’ಗಳು ಅಂತ ಹೇಳಬೇಕಾಗತ್ತದೆ. ಆದರೆ ಆ ರೀತಿ ಹೇಳಲು ನಮ್ಮ ನಾಲಿಗೆ ಒಪ್ಪಲ್ಲ. ಏಕೆಂದರೆ ಅವರ ಸಂಸ್ಕೃತಿಯೆರ ಬೇರೆ ನಮ್ಮ ಸಂಸ್ಕೃತಿಯೇ ಬೇರೆ. ಹಾಗಾಗಿ ಇನ್ನಾದ್ರೂ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಕಾಂಗ್ರೆಸ್ ನವರು ಹತಾಶೆಯಿಂದ ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆ” ಎಂದರು.

“ಅವರು ಅಧಿಕಾರಕ್ಕೆ ಬರ್ತಾರೆ ಎಂದು ಕನಸ ಕಂಡಿದ್ದಾರೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ್ರು ಎನ್ನುವ ಹಾಗೆ ಈಗಲೇ ಸಿಎಂ ಗಾಗಿ ತಮ್ಮಲ್ಲೇ ಕಾದಾಡುತ್ತಿದ್ದಾರೆ” ಎಂದರು.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ ಉತ್ತರ ನೀಡಿದ ಸಿಎಂ, “ಅಂತಹ ಕೀಳು, ಮಟ್ಟದ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇಷ್ಟೇ ನನ್ನ ಪ್ರತಿಕ್ರಿಯೆ” ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read