ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯು ಇಂದು ಜಮ್ಮುವನ್ನು ಪ್ರವೇಶಿಸುತ್ತಿದೆ. ಆದರೆ 2018ರ ಕಥವಾ ಅತ್ಯಾಚಾರ ಆರೋಪಿಗಳ ಪರ ಪ್ರತಿಭಟನೆ ನಡೆಸಿದ್ದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಕೂಡ ಯಾತ್ರೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಪಕ್ಷದೊಳಗೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಥುವಾ ಸಂತ್ರಸ್ತರ ಪರವಾಗಿ ವಾದ ಮಾಡಿದ್ದ ವಕೀಲೆ ಮತ್ತು ಕಾಂಗ್ರೆಸ್ ಪಕ್ಷದ ವಕ್ತಾರೆಯೂ ಆಗಿರುವ ದೀಪಕ್ ಪುಷ್ಕರ್ ನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
2014ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಚೌಧರಿ ಲಾಲ್ ಸಿಂಗ್ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದಲ್ಲಿ ಜಮ್ಮು-ಕಾಶ್ಮೀರದ ಅರಣ್ಯ ಸಚಿವರಾಗಿದ್ದರು. 2018ರಲ್ಲಿ ದೇಶವನ್ನೆ ಬೆಚ್ಚಿ ಬೀಳಿಸಿದ ಕಥುವಾ ದೇವಾಸ್ಥಾನದೊಳಗೆ 8 ವರ್ಷದ ಮಗುವಿನ ಅತ್ಯಾಚಾರ – ಕೊಲೆಯ ಪ್ರಕರಣದಲ್ಲಿ ಈಗ ಅತ್ಯಾಚಾರ ಆರೋಪಿಗಳ ಪರ ಮೆರವಣಿಗೆ ನಡೆಸಿದ್ದ. ಅಲ್ಲದೆ ಸಂತ್ರಸ್ತರ ಪರ ವಕೀಲರಿಗೆ ಬೆದರಿಕೆ ಹಾಕಿದ್ದ ಆರೋಪವು ಅವರ ಮೇಲಿದೆ. ಆ ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ತೊರೆದು ಡೋಗ್ರಾ ಸ್ವಾಭಿಮಾನ್ ಸಂಘಟನೆ ಕಟ್ಟಿದ್ದಾರೆ. ಅವರೀಗ ಬಿಜೆಪಿಯ ಕಟು ಟೀಕಾಕಾರರಾಗಿದ್ದು, ತಮ್ಮ ಬೆಂಬಲಿಗರಿಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ.
ಈ ಕುರಿತು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಥುವಾ ಪ್ರಕರಣದ ಕುರಿತು ಪ್ರಶ್ನೆಗಳು ಕೇಳಿಬಂದಾಗ, “2018 ರಲ್ಲಿ ತಾನು ಆರೋಪಿಗಳ ಪರವಾಗಿ ನಡೆಸಿದ ಮೆರವಣಿಗೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಗುವಿಗೆ ನ್ಯಾಯ ಸಿಗಬೇಕು, ಹಾಗಾಗಿ ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಚೌಧರಿ ಲಾಲ್ ಸಿಂಗ್ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವುದು ದೃಢಪಡುತ್ತಲೇ ಕಥುವಾ ಸಂತ್ರಸ್ತರ ಪರವಾಗಿ ವಾದ ಮಾಡಿದ್ದ ವಕೀಲೆ ಮತ್ತು ಕಾಂಗ್ರೆಸ್ ಪಕ್ಷದ ವಕ್ತಾರೆಯೂ ಆಗಿರುವ ದೀಪಕ್ ಪುಷ್ಕರ್ ನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಅತ್ಯಾಚಾರಿಗಳನ್ನು ನಿರ್ಲಜ್ಜವಾಗಿ ಸಮರ್ಥಿಸುವ ಮೂಲಕ 2018 ರಲ್ಲಿ ಕಥುವಾ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಲಾಲ್ ಸಿಂಗ್ ಕಾರಣರಾಗಿದ್ದರು. ಹಾಗಾಗಿ ಬೇರೆ ದಾರಿಯಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದಿದ್ದಾರೆ.
Lal Singh divided the entire region of Jammu & Kashmir to protect the rapists and @bharatjodo is ideologically opposite. On ideological grounds, I cannot share the party platform with such a person. @kcvenugopalmp @Jairam_Ramesh @rajanipatil_in @RahulGandhi
— Deepika Pushkar Nath (@DeepikaSRajawat) January 17, 2023
ಅತ್ಯಾಚಾರಿಗಳನ್ನು ರಕ್ಷಿಸಲು ಲಾಲ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಪ್ರದೇಶವನ್ನು ವಿಭಜಿಸಿದರು. ಆತನ ವಿಚಾರಗಳು ಭಾರತ್ ಜೋಡೋ ಯಾತ್ರೆಗೆ ಸೈದ್ಧಾಂತಿಕವಾಗಿ ವಿರುದ್ಧವಾಗಿವೆ. ಸೈದ್ಧಾಂತಿಕ ಆಧಾರದ ಮೇಲೆ, ಅಂತಹ ವ್ಯಕ್ತಿಯೊಂದಿಗೆ ನಾನು ಪಕ್ಷದ ವೇದಿಕೆಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಹ ಭಾರತ್ ಜೋಡೋ ಯಾತ್ರೆಗೆ ಚೌಧರಿ ಲಾಲ್ ಸಿಂಗ್‌ಗೆ ಆಹ್ವಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮರು ಚಿಂತಿಸುವಂತೆ ಕಾಂಗ್ರೆಸ್‌ಗೆ ಸಲಹೆ ನೀಡಿರುವ ಅವರು, “ಭಾರತ್ ಜೋಡೋ ಯಾತ್ರೆಯ ಹೆಸರು ಹೇಳಿಕೊಂಡು ಅದನ್ನು ಹಾಳು ಮಾಡಲು ಯಾವುದೇ ನಾಯಕರಿಗೆ ಕಾಂಗ್ರೆಸ್ ಅವಕಾಶ ನೀಡಬಾರದು. ಕಥುವಾ ಪ್ರಕರಣದಲ್ಲಿ ಆತನ ಪಾತ್ರದ ಬಗ್ಗೆ ಎಲ್ಲಿರಿಗೂ ಗೊತ್ತಿದೆ” ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಕಥವಾ ಪ್ರಕರಣ
2018ರ ಜನವರಿ 17ರಂದು ಪ್ರಮುಖ ಆರೋಪಿ ಸಂಜಿ ರಾಮ್ ಅವರ ನಿವಾಸದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಎಂಟು ವರ್ಷದ ಬಾಲಕಿಯ ವಿರೂಪಗೊಂಡ ಶವ ಪತ್ತೆಯಾಗಿತ್ತು. ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ರಾಷ್ಟ್ರಾವ್ಯಾಪಿ ಪ್ರತಿಭಟನೆಗಳು ಜರುಗಿದವು. ಅಂದಿನ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರವು ಸಂತ್ರಸ್ತೆಯ ಕುಟುಂಬದ ಕೋರಿಕೆಯ ಮೇರೆಗೆ ಪ್ರಕರಣವನ್ನು ಜಮ್ಮುವಿನ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿತು.
ಘಟನಾ ಸ್ಥಳದಲ್ಲಿ ಸುಳ್ಳು ಪುರಾವೆಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು ಪೊಲೀಸರು ಅಪ್ರಾಪ್ತ ಸಂತ್ರಸ್ತೆಯ ಬಟ್ಟೆಗಳನ್ನು ತೊಳೆದಿದ್ದಾರೆ ಎಂದು ಕ್ರೈಂ ಬ್ರಾಂಚ್ ತನ್ನ ತನಿಖೆಯಲ್ಲಿ ತಿಳಿಸಿದೆ.
“ಸ್ಥಳೀಯ ಅಂಗಡಿಯಿಂದ ಖರೀದಿಸಿದ ನಿದ್ರಾಜನಕಗಳ ಮೂಲಕ ಪ್ರಜ್ಞೆ ತಪ್ಪಿಸಿ ಬಾಲಕಿಯನ್ನು ರಸಾನಾದಲ್ಲಿನ ದೇವಸ್ಥಾನದಲ್ಲಿ ಕೆಲವು ದಿನಗಳ ಕಾಲ ಬಚ್ಚಿಟ್ಟು ಕ್ರೂರ ರೀತಿಯಲ್ಲಿ ಕತ್ತು ಹಿಸುಕಿ ಸಾಯಿಸಲಾಯಿತು” ಎಂದು ಅಪರಾಧ ವಿಭಾಗದ ಚಾರ್ಜ್‌ಶೀಟ್ ಬಹಿರಂಗಪಡಿಸಿದೆ. “ಆರೋಪಿಗಳು ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ, ಆದರೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಾಕ್ಷ್ಯವನ್ನು ನಾಶಪಡಿಸಿದ್ದಾರೆ” ಎಂದು 15 ಪುಟಗಳ ಆರೋಪಪಟ್ಟಿ ಹೇಳಿದೆ.
ಬಾಲಾಪರಾಧಿ ಸೇರಿದಂತೆ ಎಂಟು ಜನರ ವಿರುದ್ಧ ಚಾರ್ಜ್ ಶೀಟ್ಅನ್ನು ಕ್ರೈಂ ಬ್ರಾಂಚ್ ಸಲ್ಲಿಸಿದೆ. ಬಾಲಾಪರಾಧಿಗಳ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ. ಯಾಕೆಂದರೆ ಅವರ ವಯಸ್ಸನ್ನು ನಿರ್ಧರಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇನ್ನೂ ವಿಚಾರಣೆ ನಡೆಸಬೇಕಿದೆ.
ದೇವಾಲಯದೊಳಗೆ ಅಪ್ರಾಪ್ತ ಬಾಲಕಿಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಂತರ, 2018 ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದಿಂದ ಹೊರಗೆ ವರ್ಗಾಯಿಸಲು ಸೂಚಿಸಿತು. ಪಠಾಣ್‌ಕೋಟ್‌ನ ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
“ಐದು ವರ್ಷಗಳ ಶಿಕ್ಷೆಯನ್ನು ಪೂರೈಸುವ ಮೊದಲು ಅವರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಅಪರಾಧಿಗಳನ್ನು ಗಲ್ಲಿಗೇರಿಸಬೇಕೆಂದು ನಾವು ಯಾವಾಗಲೂ ಒತ್ತಾಯಿಸುತ್ತೇವೆ” ಎಂದು ಸಂತ್ರಸ್ತ ಕುಟುಂಬ ಆಗ್ರಹಿಸಿದೆ.
ಈ ಜನರು (ಅಪರಾಧಿ ಪೊಲೀಸರು) ಈಗ ಹೊರಗಿದ್ದಾರೆ ಮತ್ತು ಅವರು ನಮಗೆ ಏನು ಬೇಕಾದರೂ ಮಾಡಬಹುದಾದ್ದರಿಂದ ನಾವು ಮತ್ತೆ ಬೆದರಿಕೆಯನ್ನು ಅನುಭವಿಸುತ್ತೇವೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಇದನ್ನೂ ಓದಿ ; ಕಥುವಾ ಅತ್ಯಾಚಾರ ಪ್ರಕರಣ: ಮತ್ತೊಬ್ಬ ಅಪರಾಧಿ ಬಿಡುಗಡೆ, ಆತಂಕದಲ್ಲಿ ಸಂತ್ರಸ್ತ ಕುಟುಂಬ


