ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಬಿಬಿಸಿ ತಯಾರಿಸಿರುವ, ‘ಇಂಡಿಯಾ – ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರದ ವಿರುದ್ಧ ವಿಧಿಸಿದ ಸೆನ್ಸಾರ್ಶಿಪ್ ಅನ್ನು ವಿರೋಧಿಸಿ, ಹಲವಾರು ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗಳನ್ನು ಆಯೋಜಿಸುತ್ತಿವೆ.
ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ (EFLU) ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ (UoH) ವಿದ್ಯಾರ್ಥಿ ಸಂಘಟನೆಗಳು ತಮ್ಮ ಕ್ಯಾಂಪಸ್ ಆವರಣದಲ್ಲಿ ನಿಷೇಧಿತ ಸಾಕ್ಷ್ಯಚಿತ್ರವನ್ನು ವೀಕ್ಷಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸುಮಾರು 60-70 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಜಮಾಯಿಸಿ ತಮ್ಮ ಸೆಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು ಎಂದು EFLU ನ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಕಾರ್ಯಕ್ರಮವನ್ನು ಪೂರ್ವಸಿದ್ಧತೆಯಿಲ್ಲದೆ ಯೋಜಿಸಲಾಗಿದ್ದು, ವಿಶ್ವವಿದ್ಯಾಲಯದ ಆಡಳಿತವು ತಡೆಯಬಹುದಾಗಿದ್ದರಿಂದ ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಚಿತ್ರ ಪ್ರದರ್ಶನದ ನಂತರ, ಸಾಕ್ಷ್ಯಚಿತ್ರದ ಬಗ್ಗೆ ಸಂವಾದ ನಡೆಸಲಾಗಿದೆ ಎಂದು ವಿದ್ಯಾರ್ಥಿ ಹೇಳಿದ್ದಾರೆ. ಇಷ್ಟೆ ಅಲ್ಲದೆ, ಸೆನ್ಸಾರ್‌ಶಿಪ್‌ನಿಂದಾಗಿ ಉಂಟಾಗುವ ಸಮಸ್ಯೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಗಳು ಮತ್ತು ವಿಶ್ವವಿದ್ಯಾಲಯದಲ್ಲಿ ದಮನ ಸಂಸ್ಕೃತಿಯ ಕುರಿತು ಚರ್ಚೆ ನಡೆಯಿತು ಎಂದು ವಿದ್ಯಾರ್ಥಿ ಹೇಳಿದ್ದಾರೆ.
ಅದೇ ರೀತಿ, ಹೈದರಾಬಾದ್ ವಿಶ್ವವಿದ್ಯಾನಿಲಯದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಘಟಕವು ಗುರುವಾರ ಕ್ಯಾಂಪಸ್‌ನ ಲೇಡಿಸ್ ಹಾಸ್ಟೆಲ್‌ನಲ್ಲಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿತ್ತು. ಇದಕ್ಕೆ ಪ್ರತೀಕಾರವಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸದಸ್ಯರು ಕ್ಯಾಂಪಸ್‌ನ ಬೇರೆ ಸ್ಥಳದಲ್ಲಿ ದಿ ಕಾಶ್ಮೀರ ಫೈಲ್ಸ್ ಅನ್ನು ಪ್ರದರ್ಶಿಸಿದರು. ಎರಡು ಪ್ರದರ್ಶನಗಳೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ಮುಕ್ತಾಯಗೊಂಡಿವೆ.
ಇದಕ್ಕೂ ಮೊದಲು, ಫ್ರಟರ್ನಿಟಿ ಮೂವ್‌ಮೆಂಟ್ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದರು. ಹೀಗಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಚಾರಣೆಯನ್ನು ಪ್ರಾರಂಭಿಸಿತ್ತು.
ಬಿಬಿಸಿ ಸಾಕ್ಷ್ಯಚಿತ್ರವು 2002 ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿದೆ. ಗಲಭೆ ವೇಳೆ ಪ್ರಧಾನಿ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸಾಕ್ಷ್ಯಚಿತ್ರವು 2002 ರ ಹಿಂಸಾಚಾರವನ್ನು ಸ್ವತಂತ್ರವಾಗಿ ತನಿಖೆ ನಡೆಸಿದ್ದ ಇಂಗ್ಲೇಂಡ್‌ನ ಅಧಿಕಾರಿಗಳನ್ನು ಸಂದರ್ಶಿಸಿತ್ತು, ಜೊತೆಗೆ ಗಲಭೆಯನ್ನು ವರದಿ ಮಾಡಿದ್ದ ಬಿಬಿಸಿ ಪತ್ರಕರ್ತರನ್ನು ಕೂಡಾ ಸಂದರ್ಶಿಸಿದೆ.
ಇದನ್ನೂ ಓದಿ: ‘ಜನರ ಮೇಲಿನ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ’: ಕೇಂದ್ರದ ವಿರುದ್ಧ ಗುಡುಗಿದ ಸ್ಟಾಲಿನ್


