Homeಅಂಕಣಗಳುಬಿಬಿಸಿ ಸಾಕ್ಷ್ಯಚಿತ್ರ; ಪ್ರಶ್ನಿಸುವುದನ್ನೇ ದಮನಿಸುತ್ತಿರುವ ಪ್ರಭುತ್ವ

ಬಿಬಿಸಿ ಸಾಕ್ಷ್ಯಚಿತ್ರ; ಪ್ರಶ್ನಿಸುವುದನ್ನೇ ದಮನಿಸುತ್ತಿರುವ ಪ್ರಭುತ್ವ

- Advertisement -
- Advertisement -

ಕೊಲಿಜಿಯಂ ಮುಂತಾದ ವಿಷಯಗಳನ್ನು ಮುಂದುಮಾಡಿ ಒಂದು ಕಡೆಗೆ ಸುಪ್ರೀಂ ಕೋರ್ಟ್ ಮೇಲೆ ಪರೋಕ್ಷ ದಾಳಿ; ಮತ್ತೊಂದು ಕಡೆಗೆ ಸುಪ್ರೀಂ ಕೋರ್ಟ್ ತೀರ್ಪಿತ್ತಿರುವುದರಿಂದ ಗುಜರಾತಿನ 2002ರ ನರಮೇಧದ ಬಗ್ಗೆ ಯಾವ ಪ್ರಶ್ನೆಯನ್ನೂ ಕೇಳುವಂತಿಲ್ಲ ಎಂಬ ಸೆನ್ಸಾರ್. ’ವಿಶ್ವ ಮಾಧ್ಯಮ  ಸ್ವಾತಂತ್ರ್ಯ’ ದಿನದಂದು ’ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾದ ಮುಕ್ತ ಮತ್ತು ಕ್ರಿಯಾಶೀಲ ಮಾಧ್ಯಮಕ್ಕೆ ನಮ್ಮ ಅಚಲ ಬೆಂಬಲವನ್ನು ಒತ್ತಿಹೇಳುವ ದಿನವಿದು’ ಎಂದು ಪ್ರಧಾನಿ ಟ್ವೀಟ್ ಮಾಡುವುದು; ಅದೇ ಟ್ವಿಟರ್ ವೇದಿಕೆಯಲ್ಲಿ ತಮ್ಮನ್ನು ಪ್ರಶ್ನಿಸುವ ಯಾವುದೇ ಕಂಟೆಂಟ್‌ಅನ್ನು ಮುಲಾಜಿಲ್ಲದೆ ತೆಗಿಸಲು ಕಾರ್ಯಪ್ರವೃತ್ತರಾಗುವುದು. ವಿರೋಧ ಪಕ್ಷಗಳ ಬಗ್ಗೆ ಸುಳ್ಳೋಪಳ್ಳೋ ಏನು ಬೇಕಾದರೂ ಆಪಾದನೆ ಮಾಡುವುದು; ಆಡಳಿತ ರೂಢ ಬಿಜೆಪಿ ವಿರುದ್ಧವಿರುವ ಯಾವುದೇ ಸುದ್ದಿ ಅಥವಾ ವಿಡಿಯೋಗಳನ್ನು ’ಪಿಐಬಿ ಫ್ಯಾಕ್ಟ್‌ಚೆಕ್’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಸುದ್ದಿ ಮಾಧ್ಯಮಗಳಿಂದ ತೆಗೆಸುವುದು. ಅಂತಹ ಸುದ್ದಿಗಳನ್ನು ಹಂಚಿಕೊಳ್ಳುವ ವಿರೋಧ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ವಿಚ್‌ಹಂಟ್‌ಗೆ ಇಳಿಯುವುದು. ಇದು ಪ್ರಸಕ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕುಟಿಲ ನೀತಿ. ಯುಕೆ ಮೂಲದ ಬಿಬಿಸಿ ಸುದ್ದಿ ಮಾಧ್ಯಮದವರು ಇತ್ತೀಚೆಗೆ ಬಿಡುಗಡೆ ಮಾಡಿದ ’ಇಂಡಿಯಾ: ದ ಮೋದಿ ಕೊಶ್ಚನ್’ ಸಾಕ್ಷ್ಯಚಿತ್ರವನ್ನು ದಮನ ಮಾಡಲು ಬಳಸುತ್ತಿರುವ ಅಧಿಕಾರ ದುರುಪಯೋಗವನ್ನು ನೋಡಿದರೆ ಇದು ಇನ್ನಷ್ಟು ನಿಚ್ಚಳವಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಐಟಿ ನಿಯಮಗಳು 2021ರ ತುರ್ತು ಅಧಿಕಾರವನ್ನು ಬಳಸಿ ಪ್ರಶ್ನೆಯಲ್ಲಿರುವ ಸಾಕ್ಷ್ಯಚಿತ್ರವನ್ನು ಯಾರೂ ಪ್ರಸಾರ ಮಾಡದಂತೆ ತಡೆ ಒಡ್ಡುತ್ತಿದೆ. ಅದಕ್ಕೆ ನಿಖರ ಕಾರಣಗಳನ್ನು ನೀಡಲು ಮಾತ್ರ ಇಲ್ಲಿಯವರೆಗೂ ಮುಂದಾಗಿಲ್ಲ!

ಮಾಹಿತಿ ಮತ್ತು ಪ್ರಸಾರ ಖಾತೆಯ ಹಿರಿಯ ಸಲಹೆಗಾರರಾಗಿರುವ ಕಾಂಚನ್ ಗುಪ್ತಾ ಅವರು ಜನವರಿ 21ರಂದು ನೀಡಿರುವ ಹೇಳಿಕೆಯ ಪ್ರಕಾರ, ’ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಅಲ್ಲಗೆಳೆಯುವುದರಿಂದ’ ಮತ್ತು ’ಸಮರ್ಥನೆಯಿಲ್ಲದ ಆರೋಪಗಳನ್ನು ಮಾಡಿರುವುದರಿಂದ’ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಹಂಚಿಕೊಳ್ಳುವ ಎಲ್ಲಾ ಲಿಂಕ್‌ಗಳನ್ನು ತೆಗೆಯುವಂತೆ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದೆ ಎಂದಿದ್ದಾರೆ.

2002ರ ಗುಜರಾತ್ ನರಮೇಧದದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ವಿಮರ್ಶಿಸುವ ಈ ಸಾಕ್ಷ್ಯಚಿತ್ರ, ನರಮೇಧದ ಸಮಯದ ಹಲವು ದೃಶ್ಯಾವಳಿಗಳನ್ನು ಪೋಣಿಸಿ, ಹಲವರನ್ನು ಸಂದರ್ಶಿಸಿ (ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಳ್ಳುವವರನ್ನೂ ಸಂದರ್ಶಿಸಲಾಗಿದೆ), ಇಷ್ಟೆಲ್ಲಾ ಸಮಯ ಕಳೆದಮೇಲೂ ಉಳಿದಿರುವ ಪ್ರಶ್ನೆಗಳನ್ನು ವೀಕ್ಷಕರ ಮುಂದಿಡುತ್ತದೆ. ಇದು ಯಾವುದೇ ಪಕ್ಷದ ಪ್ರಾಯೋಜಿತ ಕಾರ್ಯಕ್ರಮವಾಗಿರದೆ, ಮಾಧ್ಯಮವೊಂದು ಸ್ವತಂತ್ರವಾಗಿ ನಡೆಸಿದ ವರದಿಗಾರಿಕೆ, ತನಿಖೆ ಮತ್ತು ಸಂದರ್ಶನಗಳ ಮೇಲೆ ಚಿತ್ರಿತವಾಗಿರುವ ಸಾಕ್ಷ್ಯಚಿತ್ರ. ಈ ಸಾಕ್ಷ್ಯಚಿತ್ರ ಮಾಡಿರುವ ಆರೋಪಗಳಿಗೆ ತಮ್ಮ ಪ್ರತಿಕ್ರಿಯೆಗಾಗಿ ಸರ್ಕಾರವನ್ನು ಕೇಳಿದಾಗ, ಸರ್ಕಾರ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಕೂಡ ಬಿಬಿಸಿ ಹೇಳಿದೆ. ಹೀಗಿರುವಾಗ, ಸುಪ್ರೀಂ ಕೋರ್ಟ್ ತೀರ್ಪನ್ನು ಮುಂದೆ ಮಾಡಿ ಈ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವುದು ಯಾವ ಪಂಚಾಯಿತಿ ನ್ಯಾಯ? ಪತ್ರಿಕೋದ್ಯಮದ ಮಾನದಂಡಗಳನ್ನು ಅನುಸರಿಸದೆ ಏಕಪಕ್ಷೀಯವಾದ ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿದ್ದರೆ ಆಗ ಸರ್ಕಾರ ತನ್ನ ಪ್ರಶ್ನೆಗಳನ್ನು ಬಿಬಿಸಿಗೆ ಎಸೆಯಬಹುದಿತ್ತು! ಆದರೆ ತಾನೇ ಪ್ರಶ್ನೆಗಳಿಂದ ನುಣುಚಿಕೊಂಡು ಸೆನ್ಸಾರ್ ಮೊರೆ ಹೋದರೆ ಏನನ್ನೋ ಮುಚ್ಚಿಡುವ ಪ್ರಯತ್ನದಂತೆ ಕಾಣುವುದಿಲ್ಲವೇ?

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ವಿಚಾರ: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಉಳಿಸಲು ಇದು ಸಕಾಲ ಎಂದ ಅಮೆರಿಕ

ಗುಜರಾತಿನ 2002ರ ನರಮೇಧಕ್ಕೆ ಅಂದಿನ ಮುಖ್ಯಮಂತ್ರಿ ಮೋದಿಯವರ ವೈಫಲ್ಯತೆ ಕಾರಣವಲ್ಲ ಅಥವಾ ಅದರಲ್ಲಿ ಅವರ ಪಾತ್ರವಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿರಬಹುದು. ಆದರೆ ಪತ್ರಿಕೋದ್ಯಮದ ಕೆಲಸ ಹೊಸ ಸಾಕ್ಷ್ಯಗಳನ್ನು ಹುಡುಕುವುದು ಮತ್ತು ತನ್ನ ಪ್ರಶ್ನಿಸುವ ಮನೋಭಾವವನ್ನು ಸದಾ ಉಳಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಸುಪ್ರೀಂ ಕೋರ್ಟ್ ತೀರ್ಪನ್ನೇನೂ ಮರೆಮಾಚದೆ, ತನ್ನ ವರದಿಗಾರಿಕೆಯ ಹಿನ್ನೆಲೆಯಲ್ಲಿ ಉಳಿದುಕೊಂಡಿರುವ ಪ್ರಶ್ನೆಗಳನ್ನು ಮತ್ತೆ ಕೇಳುವ ದಿಟ್ಟತನ ತೋರಿದೆ. ಇದಕ್ಕೆ ಮೋದಿಯವರೋ ಅಥವಾ ಸರ್ಕಾರದ ಪ್ರತಿನಿಧಿಗಳೋ ಉತ್ತರಿಸಬಹುದಿತ್ತು. ಆರೋಪ ಮತ್ತು ಅದಕ್ಕೆ ಸರ್ಕಾರ ನೀಡುವ ಉತ್ತರಗಳನ್ನು ತಾಳೆ ಹಾಕಿ ಡಾಕ್ಯುಮೆಂಟರಿಯನ್ನು ವೀಕ್ಷಿಸಿದ ಜನರು ತಮ್ಮ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿತ್ತು. ಇದನ್ನು ಬಲವಂತದಿಂದ ನಿಯಂತ್ರಿಸುವ ಹುನ್ನಾರ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ನಡೆಸುವ ದಾಳಿಯಲ್ಲದೆ ಮತ್ತೇನು? ಕೋಮುವಾದಿಗಳು ಸುಟ್ಟುಹಾಕಿದ ಮಾಜಿ ಸಂಸದ ಎಶಾನ್ ಜಾಫ್ರಿಯವರ ಕೊಲೆಗೆ ನ್ಯಾಯ ಸಿಕ್ಕಿಲ್ಲ ಎಂದು ಕೇಳುವುದು ಅಪರಾಧವಾಗಿಹೋಗಿದೆಯೇ?

ಒಂದು ಕಡೆ ಸಲ್ಲದ ಕಾರಣಗಳಿಗೆ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ನಟಿಸಿರುವ ’ಪಠಾನ್’ ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಕೊಡುತ್ತಿರುವ ಕರೆಗಳನ್ನು ವಿರೋಧಿಸುವ ಪ್ರಾಥಮಿಕ ಕರ್ತವ್ಯವನ್ನೂ ಪಾಲಿಸುತ್ತಿಲ್ಲ; ಸಿನಿಮಾ ಪ್ರದರ್ಶನಕ್ಕೆ ಅಗತ್ಯ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸುವ ಮಾತುಗಳನ್ನೂ ಆಡದ ಕೇಂದ್ರ ಸರ್ಕಾರ ಈಗ ತನಗೆ ಅಪಥ್ಯವಾದ ಒಂದು ಸಾಕ್ಷ್ಯಚಿತ್ರವನ್ನು ಭಾರತದ ಜನತೆಯಿಂದ ಮರೆಮಾಚಲು ಸಕ್ರಿಯವಾಗಿದೆ. ಒಂದೊಂದು ಲಿಂಕಿನಿಂದಲೂ ಆ ಸಾಕ್ಷ್ಯಚಿತ್ರವನ್ನು ತೆಗೆದುಹಾಕುವ ಸೂಚನೆ ಬರುತ್ತಿದ್ದಂತೆ ಅದು ಬೇರೇಬೇರೆ ಲಿಂಕುಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದಂತೂ ಸತ್ಯ. ಅಂತರ್ಜಾಲದಲ್ಲಿ ನಿರ್ಬಂಧಿಸುವುದು ಎಂದರೆ ಪ್ರವಾಹದ ಸಮಯದಲ್ಲಿ ಅಣೆಕಟ್ಟು ಕಟ್ಟಲು ಶ್ರಮಪಟ್ಟಂತೆ. ಹೊಸಹೊಸ ಲಿಂಕುಗಳನ್ನು ಸಂಸದರಾದ ಟಿಎಂಸಿ ನಾಯಕಿ ಮೊಹುವಾ ಮೊಯಿತ್ರಾ ಸೇರಿದಂತೆ ಹಲವು ಪ್ರಾಜ್ಞರು ಮತ್ತೆಮತ್ತೆ ಟ್ವೀಟ್ ಮಾಡಿದ್ದಾರೆ. ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮೂಹ ಈ ಸಾಕ್ಷ್ಯಚಿತ್ರದ ಸಾರ್ವಜನಿಕ ಪ್ರದರ್ಶನವನ್ನು ಏರ್ಪಡಿಸಿತ್ತು. ಜೆಎನ್‌ಯು ಇದರ ಪ್ರದರ್ಶನ ಏರ್ಪಡಿಸಿದಾಗ ವಿದ್ಯುತ್‌ಚ್ಛಕ್ತಿ ನಿಲ್ಲಿಸಿದ ವರದಿಗಳಿವೆ. ಕೇರಳದಲ್ಲಿ ಕೆಲವು ಸಾರ್ವಜನಿಕ ಪ್ರದರ್ಶನಗಳು ನಡೆದಿವೆ. ಹೀಗೆ ಕೇಂದ್ರ ಸರ್ಕಾರದ ನಡೆಗೆ ಪ್ರತಿರೋಧವನ್ನು ಹಲವರು ತೋರಿಸುತ್ತಿದ್ದಾರೆ. ’ತಮ್ಮ ಸುರಕ್ಷತೆಯ ಬಗೆಗಿನ ಭಯದಿಂದ ಸುಮಾರು 30ಕ್ಕೂ ಹೆಚ್ಚು ಜನ ಈ ಸಾಕ್ಷ್ಯಚಿತ್ರದ ಸಂದರ್ಶನದಲ್ಲಿ ಭಾಗವಹಿಸಲು ನಿರಾಕರಿಸಿದರು’ ಎಂದು ಸಾಕ್ಷ್ಯಚಿತ್ರದಲ್ಲಿ ಒಂದು ಕಡೆ ಬರುತ್ತದೆ. ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಜನ ಆತಂಕ ಪಡುವ ಸ್ಥಿತಿ ಭಾರತದಲ್ಲಿದೆ ಎಂಬುದು ಜಗತ್ತಿಗೆ ಈ ದೇಶದ ಬಗ್ಗೆ ಎಂತಹ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂಬುದರ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ಅರಿವಿದೆಯೇ? ಈ ಭಯವನ್ನು ಮೀರಿದ ಯುವಜನರು ಎಚ್‌ಸಿಯು ಅಂತಹ ಜಾಗದಲ್ಲಿ ಸಾರ್ವಜನಿಕ ಪ್ರದರ್ಶನ ಏರ್ಪಡಿಸುತ್ತಾರೆ ಎಂಬ ಸಂಗತಿಯಾದರೂ ಈ ಸರ್ಕಾರದ ಮಂದಿಗೆ ವಿವೇಕ ನೀಡಲಿ. ದಮನಕಾರಿ ದುರುಳತನ ಕೊನೆಯಾಗಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...