HomeಮುಖಪುಟExplainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ಕೇವಲ ಮೂರು ವರ್ಷಗಳ ಹಿಂದೆ 71 ಸಾವಿರ ಕೋಟಿ ರೂಗಳಿದ್ದ ಅದಾನಿ ಆಸ್ತಿ ಸೆಪ್ಟಂಬರ್ 2022ರ ವೇಳೆಗೆ 11.73 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿತ್ತು!

- Advertisement -
- Advertisement -

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ನಂಬರ್ ಒನ್ ಶ್ರಿಮಂತ ಎನಿಸಿಕೊಂಡಿದ್ದ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೆ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದ್ದ ಅವರು ಆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮತ್ತು ಮೊದಲ ಏಷ್ಯನ್ ಎನಿಸಿಕೊಂಡಿದ್ದರು. ಆದರೆ ಜನವರಿ 24ರಿಂದ ಅದಾನಿ ಸಮೂಹದ ಷೇರುಗಳು ಸತತವಾಗಿ ಕುಸಿಯುವ ಮೂಲಕ ಸುಮಾರು 3.4 ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟಕ್ಕೆ ಒಳಗಾಗಿ, ಸದ್ಯ ವಿಶ್ವದ 7ನೇ ಶ್ರೀಮಂತನ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೆ ಕಾರಣ ಫೊರೆನ್ಸಿಕ್ ಫೈನಾನ್ಷಿಯಲ್ ರಿಸರ್ಚ್ ಎಕ್ಸ್‌ಪರ್ಟ್ ಎಂದು ಹೇಳಿಕೊಳ್ಳುವ ಹಿಂಡೆನ್‌ಬರ್ಗ್ ಫೌಂಡೇಷನ್‍ ಬಿಡುಗಡೆ ಮಾಡಿದ ವರದಿ. ಹಾಗಿದ್ದರೆ ಆ ವರದಿ ಏನು? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ ಎಂಬುದನ್ನು ನೋಡೋಣ.

ಮೂರು ವರ್ಷದಲ್ಲಿ ಸುಮಾರು 17 ಪಟ್ಟು ಸಂಪತ್ತಿನ ಹೆಚ್ಚಳ ಕಂಡಿದ್ದ ಅದಾನಿ!

ಕೇವಲ ಮೂರು ವರ್ಷಗಳ ಹಿಂದೆ ಅಂದರೆ 2020ರ ಜನವರಿ ವೇಳೆಗೆ ಗೌತಮ್ ಅದಾನಿ ಹೊಂದಿದ್ದ ಸಂಪತ್ತಿನ ಮೌಲ್ಯ 71 ಸಾವಿರ ಕೋಟಿ ರೂಗಳಾಗಿತ್ತು. ಆನಂತರ ಅಪ್ಪಳಿಸಿದ ಕೋವಿಡ್ ಸಾಂಕ್ರಾಮಿಕ, ಲಾಕ್‌ಡೌನ್‌ ಹೊಡೆತದಿಂದ ಬಹುತೇಕ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದರೆ ಅದಾನಿ ಆಸ್ತಿ ಮಾತ್ರ ಏರುಗತಿಯಲ್ಲಿಯೇ ಸಾಗುತ್ತಿತ್ತು. ಕೊನೆಗೆ 2022ರ ಸೆಪ್ಟಂಬರ್ ವೇಳೆಗೆ 11.73 ಲಕ್ಷ ಕೋಟಿ ರೂಗಳ ಒಡೆಯರಾಗಿ ಪೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ 2ನೇ ಶ್ರೀಮಂತ ಸ್ಥಾನ ಪಡೆದಿದ್ದರು. ಕೇವಲ ಮೂರು ವರ್ಷಗಳಲ್ಲಿ 17 ಪಟ್ಟು ಆಸ್ತಿಯಲ್ಲಿ ಏರಿಕೆ ಕಂಡಿದ್ದು ಹೇಗೆ ಎಂಬ ಪ್ರಶ್ನೆಗಳೆದ್ದಿದ್ದವು.

ಗುಜರಾತಿನವರೆ ಆದ ಪ್ರಧಾನಿ ನರೇಂದ್ರ ಮೋದಿಯವರು ದೊಡ್ಡ ಬಂಡವಾಳಿಗರ ಪರವಾಗಿ ನೀತಿಗಳನ್ನು ಜಾರಿಗೊಳಿಸಿದರು. ಆಳುವವರ ನಡುವಿನ ಸಖ್ಯದಿಂದಾಗಿ ಸರ್ಕಾರದ ನೀತಿ ನಿರ್ಧಾರಗಳು ಮುಂಚಿತವಾಗಿಯೇ ತಿಳಿಯುವ ಪರಿಣಾಮ ಅದಾನಿ ಸಮೂಹವು ಆಯಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುತ್ತಿತ್ತು. ಹಾಗಾಗಿ ಬಂದರುಗಳು, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಗಣಿಗಳು ಸೇರಿದಂತೆ ಹಲವು ವಲಯಗಳಲ್ಲಿ ಪ್ರವೇಶ ಪಡೆದ ಅದಾನಿ ಲಾಭ ಕಂಡರು ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಗೌತಮ್ ಅದಾನಿಯವರ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಶ್ರೀಮಂತ ಅನಿವಾಸಿ ಭಾರತೀಯ (NRI) ಎನಿಸಿದ್ದಾರೆ. ಇದೇ ಸಂದರ್ಭದಲ್ಲಿ ಧೈರ್ಯವಂತಿಕೆಗೆ ಹೆಸರಾದ ದೇಶದ ಖ್ಯಾತ ಟಿವಿ ಚಾನೆಲ್ ಎನ್‌ಡಿಟಿವಿಯನ್ನು ಸಹ ಅದಾನಿ ಸಮೂಹ ಖರೀದಿಸಿತ್ತು. ಸತತ ಲಾಭ ಗಳಿಸುತ್ತ ಮುನ್ನುಗ್ಗುತ್ತಿದ್ದ ಅದಾನಿ ಸಮೂಹ FPO ನಲ್ಲಿ ಹೂಡಿಕೆ ಮಾಡಿತ್ತು. ಅಂತಹ ಸಂದರ್ಭದಲ್ಲಿ ಬಿಡುಗಡೆಯಾದ ಹಿಂಡೆನ್‌ಬರ್ಗ್ ವರದಿ ಅದಾನಿ ಸಮೂಹವನ್ನು ತಲ್ಲಣಗೊಳಿಸಿದೆ.

ಹಿಂಡೆನ್‌ಬರ್ಗ್ ವರದಿಯಲ್ಲೇನಿದೆ?

ಅದಾನಿ ಸಮೂಹದ ಕಂಪನಿಗಳು ಸಾಲ ಪಡೆಯುವುದಕ್ಕಾಗಿ ಕೃತಕವಾಗಿ ತಮ್ಮ ಷೇರುಗಳ ಬೆಲೆ ಏರಿಸಿಕೊಂಡಿದೆ. ತಮ್ಮ ಷೇರುಗಳ ಬೆಲೆಯನ್ನು ಅಕ್ರಮವಾಗಿ ಏರಿಸಿ, ಅವುಗಳ ಮೌಲ್ಯ ಹೆಚ್ಚಿಸಿಕೊಂಡು ನಂತರ ಅವುಗಳನ್ನು ಅಡವಿಟ್ಟು ಸಾಲ ಪಡೆದಿವೆ. ಸಾಗರದಾಚೆಗಿನ ವ್ಯವಹಾರಗಳಲ್ಲಿ ತೆರಿಗೆ ವಂಚಿಸುವುದಕ್ಕಾಗಿ ದಶಕಗಳ ಕಾಲ ಲೆಕ್ಕಪತ್ರಗಳಲ್ಲಿ ವಂಚನೆ ನಡೆಸಿವೆ. ಆ ಮೂಲಕ ಅತಿ ಹೆಚ್ಚು ಸಾಲದ ಸುಳಿಗೆ ಸಿಲುಕಿದ್ದು, ಒಟ್ಟಾರೆ ಅದರ ಆರ್ಥಿಕ ತಳಪಾಯವೇ ಅಪಾಯದಲ್ಲಿದೆ ಎಂದು ಹಿಂಡೆನ್‌ಬರ್ಗ್ ವರದಿ ಆರೋಪಿಸಿದೆ.

“ನಾವು ಎರಡು ವರ್ಷದ ಸಂಶೋಧನೆಯ ವರದಿಯನ್ನು ಇಂದು ಬಹಿರಂಗಪಡಿಸುತ್ತಿದ್ದೇವೆ. 17.8 ಟ್ರಿಲಿಯನ್ (218 ಬಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ವಹಿವಾಟು ನಡೆಸುವ ಭಾರತೀಯ ಅದಾನಿ ಸಮೂಹವು ದಶಕಗಳ ಕಾಲ ಸ್ಟಾಕ್ ತಿರುಚುವಿಕೆ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿದೆ ಎಂಬುದಕ್ಕೆ ಪುರಾವೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ” ಎಂದು ಸರಣಿ ಟ್ವೀಟ್‌ಗಳನ್ನು ಹಿಂಡೆನ್‌ಬರ್ಗ್‌ ಅಧಿಕೃತ ಟ್ವಿಟರ್‌ನಲ್ಲಿ ಮಾಡಲಾಗಿದೆ.

ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಸುಮಾರು 120 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ್ದಾರೆ. ಕಳೆದ 3 ವರ್ಷಗಳಲ್ಲಿಯೇ 100 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಮೌಲ್ಯವನ್ನು ತಮ್ಮ 7 ಕಂಪನಿಗಳ ಸ್ಟಾಕ್ ಬೆಲೆ ಏರಿಸುವ ಮೂಲಕ ಗಳಿಸಿದ್ದಾರೆ. ಆ 7 ಲಿಸ್ಟೆಡ್‌ ಕಂಪನಿಗಳು ಈ ಅವಧಿಯಲ್ಲಿ ಸರಾಸರಿ ಶೇ. 819 ಏರಿಕೆ ಕಂಡಿವೆ ಎಂದು ವರದಿ ತಿಳಿಸಿದೆ.

ಅದಾನಿ ಸಮೂಹದ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ 22 ಜನರಲ್ಲಿ 8 ಜನರು ಅದಾನಿ ಕುಟುಂಬದವರೆ ಆಗಿದ್ದಾರೆ. ಸಾಗರದಾಚೆಗಿನ ತೆರಿಗೆ ಸ್ವರ್ಗ ಎಂದು ಕರೆಸಿಕೊಳ್ಳುವ ಮಾರಿಷಸ್, ಯುಎಇ, ಕೆರಿಬಿಯನ್ ದ್ವೀಪಗಳು ಸೇರಿದಂತೆ ದೇಶಗಳಲ್ಲಿ ಹಲವಾರು ಶೆಲ್ ಕಂಪನಿಗಳನ್ನು ತೆರೆಯುವಲ್ಲಿ ಅದಾನಿ ಕುಟುಂಬ ನಿರತವಾಗಿದೆ. ಆ ಮೂಲಕ ಮನಿ ಲಾಂಡರಿಂಗ್, ತೆರಿಗೆದಾರರ ಹಣ ಕಬಳಿಕೆ ಮತ್ತು ಅಂದಾಜು 17 ಬಿಲಿಯನ್ ಅಮೆರಿಕನ್ ಡಾಲರ್ ಭ್ರಷ್ಟಾಚಾರ ನಡೆಸಿದ್ದಾರೆ. ಈ ಪ್ರಯತ್ನದಲ್ಲಿ ಕಾನೂನುಬಾಹಿರ ವಜ್ರದ ರಫ್ತು / ಆಮದು ಪ್ರಕರಣದಲ್ಲಿ ಅದಾನಿ ಸಹೋದರ ರಾಜೇಶ್ ಅದಾನಿ ಆರೋಪಿಯಾಗಿದ್ದು, ಅವರನ್ನು 2004-05ರಲ್ಲಿ ಎರಡು ಬಾರಿ ಬಂಧಿಸಲಾಗಿತ್ತು. ಆದರೆ ನಂತರ ಅವರನ್ನು ಅದಾನಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ನೀಡಲಾಯಿತು. ಅದೇ ರೀತಿ ಅದಾನಿ ಅವರ ಸೋದರ ಮಾವ ಸಮೀರ್ ವೋರಾ ಮತ್ತು ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿ ಸಹ ಆಯಕಟ್ಟಿನ ಜಾಗದಲ್ಲಿ ಕುಳಿತಿದ್ದು ಅಕ್ರಮ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ನಮ್ಮ ಸಂಶೋಧನೆಯು ಅದಾನಿ ಗ್ರೂಪ್‌ನ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಹತ್ತಾರು ವ್ಯಕ್ತಿಗಳ ಸಂದರ್ಶನ, ಸಾವಿರಾರು ದಾಖಲೆಗಳ ಪರಿಶೀಲನೆ ಮತ್ತು ಹಲವು ದೇಶಗಳ ಭೇಟಿಯನ್ನು ಆಧರಿಸಿದೆ ಎಂದು ಹಿಂಡೆನ್‌ಬರ್ಗ್ ಹೇಳಿದೆ.

ಅತ್ತ ಹಿಂಡೆನ್‌ಬರ್ಗ್‌ ವರದಿ ಹೊರಬೀಳುತ್ತಲೇ ಇತ್ತ ಅದಾನಿ ಗ್ರೂಪ್‌ನ ಷೇರುಗಳು ಕುಸಿಯಲಾರಂಭಿಸಿದ್ದವು. ಬುಧವಾರ ಸಂಜೆ ವೇಳೆಗೆ ಅದಾನಿ ಸುಮಾರು 46 ಸಾವಿರ ಕೋಟಿ ರೂಗಳ ನಷ್ಟಕ್ಕೆ ಒಳಗಾಗಿದ್ದರು. ಹಾಗಾಗಿ ಹಿಂಡೆನ್‌ಬರ್ಗ್‌ ವರದಿಯು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವುದಾಗಿ ಅದಾನಿ ಪರ ವಕೀಲರು ಬೆದರಿಕೆಯೊಡ್ಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿಂಡೆನ್‌ಬರ್ಗ್ “ಅದಾನಿ ಸಮೂಹದ ಕುರಿತ ವರದಿ ಬಿಡುಗಡೆ ಮಾಡಿ 36 ಗಂಟೆಗಳು ಕಳೆದಿವೆ. ಈವರೆಗೆ ಅದಾನಿ ಒಂದೇ ಒಂದು ವಿಷಯವನ್ನು ಪ್ರಸ್ತಾಪಿಸಿಲ್ಲ. ವರದಿಯ ಕೊನೆಯಲ್ಲಿ 88 ಪ್ರಶ್ನೆಗಳನ್ನು ಕೇಳಿದ್ದೆವು, ಅದಾನಿ ಯಾವುದೇ ಪ್ರಶ್ನೆಗೂ ಸಹ ಉತ್ತರ ನೀಡಿಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಬೆದರಿಕೆಗಳನ್ನು ಆಶ್ರಯಿಸುತ್ತಿದ್ದಾರೆ” ಎಂದು ಹೇಳಿತ್ತು.

“ನಮ್ಮ ವರದಿಯ ವಿರುದ್ಧ ಪರಿಹಾರ ಮತ್ತು ದಂಡನಾತ್ಮಕ ಕ್ರಮಕ್ಕೆ ಮುಂದಾಗುವುದಾಗಿ ಅದಾನಿ ಸಮೂಹ ಮಾಧ್ಯಮಗಳಿಗೆ ಹೇಳಿಕೆ ನೀಡಿದೆ. ಅಮೆರಿಕ ಮತ್ತು ಭಾರತೀಯ ಕಾನೂನುಗಳ ಅಡಿ ಹೋರಾಟ ನಡೆಸುವುದಾಗಿ ಅದಾನಿ ಸಮೂಹ ಹೇಳಿದೆ. ಈ ಕಾನೂನು ಹೋರಾಟವನ್ನು ನಾವು ಸ್ವಾಗತಿಸುತ್ತೇವೆ. ನಾವು ನಮ್ಮ ವರದಿಗೆ ಬದ್ಧರಾಗಿರುತ್ತೇವೆ ಮತ್ತು ನಮ್ಮ ವಿರುದ್ಧ ಯಾವುದೇ ಕಾನೂನು ಕ್ರಮವು ಅರ್ಹವಲ್ಲ ಎಂದು ನಂಬುತ್ತೇವೆ. ಅದಾನಿ ಈ ವಿಚಾರದಲ್ಲಿ ಗಂಭೀರವಾಗಿದ್ದರೆ, ನಾವು ಕಾರ್ಯನಿರ್ವಹಿಸುವ ಅಮೆರಿಕದಲ್ಲಿಯೂ ಮೊಕದ್ದಮೆ ಹೂಡಬೇಕು” ಎಂದು ಸವಾಲು ಹಾಕಿದೆ.

16 ಪ್ರತಿಶತದಷ್ಟು ಕರಗಿದ ಅದಾನಿ ಆಸ್ತಿ

ಇನ್ನು ಶುಕ್ರವಾರ ಷೇರು ಮಾರುಕಟ್ಟೆ ಆರಂಭವಾಗುತ್ತಲೇ ಅದಾನಿ ಸಮೂಹದ ಕಂಪನಿಗಳು ಷೇರುಗಳ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ. ಆ ಮೂಲಕ ಅದಾನಿ ನಿವ್ವಳ ಮೌಲ್ಯವು 16 ಪ್ರತಿಶತದಷ್ಟು ಕರಗಿಹೋಗಿದೆ. ಪ್ರಮುಖ ಏಳು ಕಂಪನಿಗಳ ಷೇರು ಬೆಲೆಗಳು ಕುಸಿತ ಕಂಡಿವೆ. ಅದಾನಿ ಟೋಟಲ್ ಗ್ಯಾಸ್‌ನ ಷೇರುಗಳು ಶೇ. 19.65% ನಷ್ಟು ಕುಸಿದರೆ, ಅದಾನಿ ಟ್ರಾನ್ಸ್‌ಮಿಷನ್ ಶೇಕಡಾ 19 ಕ್ಕಿಂತ ಹೆಚ್ಚು ಕುಸಿದಿದೆ. ಅದಾನಿ ಗ್ರೀನ್ ಎನರ್ಜಿ ಶೇಕಡಾ 15.50 ರಷ್ಟು ಕುಸಿದರೆ, ಅದಾನಿ ಪೋರ್ಟ್ಸ್ ಶೇ.5.31ರಷ್ಟು ಕುಸಿತ ಕಂಡಿದೆ. ಅದಾನಿ ಪವರ್ ಮತ್ತು ಅದಾನಿ ವಿಲ್ಮಾರ್ ಶೇರುಗಳು ತಲಾ ಶೇ.5ರಷ್ಟು ಕುಸಿದಿವೆ. ಅದಾನಿ ಸಮೂಹದ ಪ್ರಮುಖ ಕಂಪನಿ ಅದಾನಿ ಎಂಟರ್‌ಪ್ರೈಸಸ್ ಶೇಕಡಾ 6.19 ರಷ್ಟು ಕುಸಿದಿದೆ.

ಅದಾನಿಗಷ್ಟೇ ಸಮಸ್ಯೆಯಲ್ಲ

ಈ ಬೆಳವಣಿಗೆಯು ಅದಾನಿ ಕಂಪನಿ ಲಾಭ ನಷ್ಟಕ್ಕೆ ಮಾತ್ರ ಸಂಬಂಧಿಸಿಲ್ಲ. ಬದಲಿಗೆ ಭಾರತದ ಆರ್ಥಿಕತೆ ಮತ್ತು ಬ್ಯಾಂಕುಗಳ ಹಿನ್ನಡೆಗೂ ಹೆಣೆದುಕೊಂಡಿದೆ. ಹಾಗಾಗಿ ಸದ್ಯದ ವರದಿಯ ಬಹಿರಂಗದಿಂದ ಕೇವಲ ಅದಾನಿ ಕಂಪನಿಗಳು ಮಾತ್ರವಲ್ಲದೆ ಅವುಗಳಿಗೆ ಹೊಂದಿಕೊಂಡಿದ್ದ ಭಾರತೀಯ ಬ್ಯಾಂಕುಗಳು ಮತ್ತು ಎಲ್‌ಐಸಿ ಷೇರುಗಳು ಸಹ ಕುಸಿತ ಕಂಡಿವೆ. NSE ಬ್ಯಾಂಕ್ ನಿಫ್ಟಿ ಸೂಚ್ಯಂಕವು ಹಿಂದಿನ ಅವಧಿಯ ಕುಸಿತವನ್ನು ಮತ್ತಷ್ಟು ವಿಸ್ತರಿಸಿದೆ. ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಅತಿ ಹೆಚ್ಚು ಕುಸಿತ ಕಂಡಿವೆ.

“ಮಾರುಕಟ್ಟೆಯಲ್ಲಿ ನಕಾರಾತ್ಮಕ ಭಾವನೆಯು ಚಾಲ್ತಿಯಲ್ಲಿದೆ, ಇದು ಬ್ಯಾಂಕ್ ಷೇರುಗಳ ಮೇಲೆ ಪ್ರಭಾವ ಬೀರುತ್ತಿದೆ” ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ. ಇದು ಮತ್ತಷ್ಟು ಮುಂದುವರೆಯಲಿದ್ದು ಈಗಾಗಲೇ ಆರ್ಥಿಕ ಕುಸಿತದ ಹಾದಿಯಲ್ಲಿರುವ ಭಾರತದ ಹಣಕಾಸು ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ. ಅದು ದೇಶದ ಪ್ರತಿಯೊಬ್ಬರನ್ನು ಬಾಧಿಸಲಿದೆ.

ಗಟ್ಟಿ ತಳಪಾಯವಿಲ್ಲದ ಸಾಲದ ಮೇಲಿನ ಸಾಮ್ರಾಜ್ಯ ಕುಸಿಯದಿರುವುದೆ?

ಸರಕುಗಳ ವ್ಯಾಪಾರದೊಂದಿಗೆ 1980 ರ ದಶಕದ ಉತ್ತರಾರ್ಧದಲ್ಲಿ ಅದಾನಿ ಗ್ರೂಪ್‌ ಪ್ರಾರಂಭವಾಯಿತು. ನಂತರ ಗಣಿಗಳು, ಬಂದರುಗಳು ಮತ್ತು ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು, ಡೇಟಾ ಕೇಂದ್ರಗಳು ಮತ್ತು ರಕ್ಷಣಾ ಕ್ಷೇತ್ರದಲ್ಲೂ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅದಾನಿ ಸಮೂಹವು ಕಳೆದ ಕೆಲವು ವರ್ಷಗಳಿಂದ ಆಕ್ರಮಣಕಾರಿಯಾಗಿ ತನ್ನ ವ್ಯಾಪಾರದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿದೆ. ದೇಶದ ಪ್ರಮುಖ ಸುದ್ದಿ ಮಾಧ್ಯಮವಾದ ಎನ್‌ಡಿಟಿವಿ ಮತ್ತು ಕ್ರೆಡಿಟ್‌‌‌ಸೈಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿ ಗ್ರೂಪ್ ಇತ್ತೀಚೆಗೆ ಆಕ್ರಮಣಕಾರಿ ಕ್ರಮವನ್ನು ಕೈಗೊಂಡಿತ್ತು.

ಅದಾನಿ ಸಮೂಹವು ತನ್ನೆಲ್ಲ ಆರ್ಥಿಕ ಚಟುವಟಿಕೆಗಳನ್ನು ಷೇರುಗಳ ಹೆಚ್ಚಿನ ಮೌಲ್ಯ ತೋರಿಸಿ, ದೊಡ್ಡ ಮಟ್ಟದಲ್ಲಿ ಸಾಲ ಪಡೆದು ನಡೆಸುತ್ತಿತ್ತೆ ಹೊರತು ತನ್ನ ಸ್ವಂತ ಬಲದಿಂದಲ್ಲ. ಹಾಗಾಗಿ ದಿಢೀರ್ ಕುಸಿತವನ್ನು ತಾಳುವ ಶಕ್ತಿ ಆ ಕಂಪನಿಗಿಲ್ಲ. ಈಗಾಗಲೇ ಸುಮಾರು 2.5 ಲಕ್ಷ ಕೋಟಿಯಷ್ಟು ಸಾಲ ಪಡೆದಿರುವ ಅದಾನಿಗೆ ಮತ್ತಷ್ಟು ಸಾಲ ಕೊಡುವ ಪರಿಸ್ಥಿತಿಯಲ್ಲಿ ದೇಶದ ಬ್ಯಾಂಕುಗಳಿಲ್ಲ. ಇವೆಲ್ಲವೂ ಸಂಕಷ್ಟವನ್ನು ಹೆಚ್ಚು ಮಾಡುತ್ತಿವೆಯೆ ಹೊರತು ಪರಿಹಾರ ಸೂಚಿಸುವುದಿಲ್ಲ.

ಅದಾನಿ ಸಮೂಹವು ಪ್ರತಿ ನಿತ್ಯ ತನ್ನ ಆರ್ಥಿಕ ವ್ಯವಹಾರಗಳನ್ನು ಮತ್ತಷ್ಟು ವಿಸ್ತರಿಸಲು ಬಯಸುತ್ತಿತ್ತು. ಆದರೆ ಅದರ ತೀರದ ದಾಹಕ್ಕೆ ದೇಶದ ಸಾರ್ವಜನಿಕ ವಲಯದ ವಿಮಾನ ನಿಲ್ದಾಣಗಳು, ಬಂದರುಗಳು, ಗಣಿಗಳು ಬಲಿಯಾಗಿದ್ದವು. ಈಗ ಕುಸಿತದ ಸುಳಿಗೆ ಸಿಲುಕಿರುವ ಅದಾನಿ ಸಮೂಹವು ತಾನು ಕುಸಿಯುವುದಲ್ಲದೆ, ದೇಶವನ್ನು ಕುಸಿಯುವಂತೆ ಮಾಡುವ ಪರಿಸ್ಥಿತಿಗೆ ತಂದಿದೆ.

ಇದನ್ನೂ ಓದಿ; ಅದಾನಿ ಸಂಸ್ಥೆಗೆ ಅಕ್ರಮ ಭೂ ಮಂಜೂರಾತಿ: ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂ ನಷ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...