Homeಕರ್ನಾಟಕವ್ಯಕ್ತಿಚಿತ್ರ: ಪ್ರಖರ ವೈಚಾರಿಕತೆಯ ಪ್ರೊ.ಎನ್ನಾರ್

ವ್ಯಕ್ತಿಚಿತ್ರ: ಪ್ರಖರ ವೈಚಾರಿಕತೆಯ ಪ್ರೊ.ಎನ್ನಾರ್

- Advertisement -
- Advertisement -

ಪ್ರೊ.ನಗರಗೆರೆ ರಮೇಶ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗಡಿಯಲ್ಲಿರುವ, ದಟ್ಟ ತೆಲುಗು ಪ್ರಭಾವದಿಂದ ಕೂಡಿರುವ ನಗರಗೆರೆಯ ಮಡಿವಂತ ಶಾನುಭೋಗರ ಕುಟುಂಬಕ್ಕೆ ಸೇರಿದವರು. ತಾತ ಗ್ರಾಮದ ಶಾನುಭೋಗರು. ಇವರ ಹಿರಿಯ ಮಗ ಶಾನುಭೋಗ ಸುಬ್ಬರಾಯಪ್ಪ ತಂದೆಯಿಂದ ವಂಶ ಪಾರಂಪರ್ಯ ಬಂದ ಶಾನುಭೋಗ ವೃತ್ತಿಯನ್ನು ಮಾಡುತ್ತಾ ಪಟೇಲ್‌ಗಿರಿಯನ್ನು ಮೆರೆದವರು. ಊಳಿಗಮಾನ್ಯ ಪದ್ಧತಿಯ ಕೊನೆಯ ಕೊಂಡಿಯಂತಿದ್ದ ಇವರು ಗ್ರಾಮದಲ್ಲಿನ ವ್ಯಾಜ್ಯಗಳನ್ನು ಪರಿಹರಿಸುತ್ತಾ ತಪ್ಪಿತಸ್ಥರಿಗೆ ಚಾಟಿ ಏಟಿನ ಶಿಕ್ಷೆ ನೀಡಿ ಬಳಿಕ ಅದರಿಂದಾದ ಗಾಯಕ್ಕೆ ಔಷಧಿ ಮಾಡಿಸಿಕೊಳ್ಳಲು ಸ್ವಂತ ಹಣ ನೀಡುತ್ತಿದ್ದ ವಿಲಕ್ಷಣ ಸ್ವಭಾವದ ಶಾನುಭೋಗರು.

ದೊಡ್ಡಪ್ಪನ ಕಠಿಣವಾದ ತೀರ್ಪಿನ ಕಠಿಣತ್ವ ಮತ್ತು ಗಾಯಗೊಂಡ ಅಪರಾಧಿಗೆ ಹಣ ನೀಡಿ ಸಂತೈಸುತ್ತಿದ್ದ ಅಂತಃಕರಣವನ್ನು ಹತ್ತಿರದಿಂದ ಕಂಡಿದ್ದ ಬಾಲಕ ರಮೇಶ್ ಅದನ್ನು ಇಂದಿಗೂ ನೆನಪಿಸಿಕೊಂಡು, ’ದೊಡ್ಡಪ್ಪನದು ಒಂದು ರೀತಿಯ ಸಂಕೀರ್ಣತೆಯಿಂದ ಕೂಡಿದ್ದ ವ್ಯಕ್ತಿತ್ವ. ಅಜಾನುಬಾಹುವಾಗಿದ್ದ ದೊಡ್ಡಪ್ಪ ಗ್ರಾಮದ ಬೀದಿಗಳಲ್ಲಿ ನಡೆದು ಹೋಗುತ್ತಿದ್ದರೆ, ಗ್ರಾಮಸ್ಥರು ಭಯ ಭಕ್ತಿಯಿಂದ ಮನೆಗಳ ಒಳಗೆ ಅಡಗಿಕೊಳ್ಳುತ್ತಿದ್ದರು. ಆದರೆ ದೊಡ್ಡಪ್ಪ ಅದನ್ನು ನಿರೀಕ್ಷೆ ಮಾಡುತ್ತಿರಲಿಲ್ಲ. ಆದರೆ ಆ ಗ್ರಾಮದ ಜನರಿಗೆ ಅದೊಂದು ರೂಢಿಯಿಂದ ಬಂದ ಪದ್ಧತಿಯಂತಿತ್ತು. ಓದಿನಲ್ಲಿ ಮುಂದಿದ್ದ ನನ್ನನ್ನು ಕಂಡರೆ ಅತಿಯಾದ ಪ್ರೀತಿ. ಆದ್ದರಿಂದಲೇ ನಾನು ಶಾಲಾ ರಜಾ ದಿನಗಳಲ್ಲಿ ಊರಿಗೆ ಹೋದಾಗ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು’ ಎನ್ನುತ್ತಾರೆ.

ಇಂತಹ ಮಡಿವಂತ ಮತ್ತು ಊಳಿಗಮಾನ್ಯ ಪದ್ಧತಿಯನ್ನು ಪೋಷಿಸಿಕೊಂಡ ಬಂದ ಕುಟುಂಬದಿಂದ ಬಂದ ನಗರಗರೆ ರಮೇಶ್‌ರವರು ಇವುಗಳಿಗೆ ವ್ಯತಿರಿಕ್ತವಾಗಿ ವಿಚಾರವಾದಿಯಾಗಿ ಬೆಳೆದರು. ಮಡಿ ಮೈಲಿಗೆ ಪದಗಳ ಜೊತೆಗೆ ಆಚರಣೆಗಳನ್ನೂ ಧಿಕ್ಕರಿಸಿದರು. ತನಗೆ ಬಾಲ್ಯದಲ್ಲಿ ಮಾಡಿದ್ದ ಉಪನಯನವನ್ನು ಕಾಲಾನಂತರದಲ್ಲಿ ತ್ಯಜಿಸಿ, ಜನಿವಾರವೆಂಬುದು ಮೂರು ದಾರಗಳ ಎಳೆ; ಅದಕ್ಕೆ ಅಷ್ಟೊಂದು ಮಹತ್ವ ನೀಡುವುದೇ ಅನೌಚಿತ್ಯ ಎಂದು ಜನಿವಾರಕ್ಕೆ ಸಂಬಂಧಿಸಿದ ಎಲ್ಲಾ ಆಚರಣೆಗಳಿಗೆ ಪೂರ್ಣ ವಿರಾಮ ಹೇಳಿದರು. ಸಂಧ್ಯಾವಂದನೆಗಳು ಕಾಲದ ಗತಿಯಲ್ಲಿ ನಿಂತುಹೋದವು.

ಇದಕ್ಕೆಲ್ಲಾ ಕಾರಣವೇನು ಎಂದರೆ: ಅವರು ತಮ್ಮ ತಂದೆ ನಾರಾಯಣರಾವ್‌ರವರು ತಂದು ಕೊಟ್ಟ ‘ಮಾಲಪಲ್ಲಿ (ಹೊಲಗೇರಿ) ಎಂಬ ತೆಲುಗು ಕಾದಂಬರಿಯನ್ನು ನೆನಪಿಸಿಕೊಳ್ಳುತ್ತಾರೆ. ಹೊಲಗೇರಿಯಲ್ಲಿ ಹೊಲೆಯರು ಅನುಭವಿಸುವ ಯಾತನೆ, ಅವರ ಬಗ್ಗೆ ಸಮಾಜ ಹೊಂದಿರುವ ತುಚ್ಚ ಭಾವನೆ ನನ್ನ ಮನ ಮಿಡಿಯುವಂತೆ ಮಾಡಿತು’ ಎನ್ನುತ್ತಾರೆ.

ಇವರ ತಂದೆ ತೆಲುಗು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ತಾಯಿ ಶಾರದಮ್ಮ ಗೃಹಿಣಿ. ತೆಲುಗು ಸಾಹಿತ್ಯ ಅಧ್ಯಯನ ಮಾಡಿದ್ದರಿಂದಲೇ ತಂದೆ ಮಡಿವಂತಿಕೆಗೆ ಅಂಟಿಕೊಂಡು ಕೂರದೆ ಉದಾರವಾದಿಯಾಗಿದ್ದರು. ಅದು ತಾಯಿಯ ಮೇಲೆ ಸಹ ಪ್ರಭಾವ ಬೀರಿತ್ತು. ಇವರ ಸಹಪಾಠಿಗಳಲ್ಲಿ ಒಬ್ಬ ಕಡುಬಡವನಿದ್ದನು. ‘ಅನ್ಯಜಾತಿಯ ಗೆಳೆಯನ ಒಡನಾಟದ ಬಗ್ಗೆ ಅಮ್ಮ ಆಕ್ಷೇಪಿಸುತ್ತಿರಲಿಲ್ಲಾ, ಆದರೆ ಅವನನ್ನು ಮನೆಗೆ ಕರೆದುಕೊಳ್ಳುತ್ತಿರಲಿಲ್ಲವಾದರೂ ಅವನಿಗೆ ಅಗತ್ಯವಾದುದನ್ನು ನೀಡಿ ನೆರವಾಗಲು ಸೂಚಿಸುತ್ತಿದ್ದರು. ಆಗ ತಾನೆ ತೆರೆದುಕೊಳ್ಳುತ್ತಿದ್ದ ಇಂತಹ ಉದಾರವಾದಿ ಮನೆಯ ವಾತಾವರಣ ಯುವಕನಾಗಿದ್ದ ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಜೊತೆಗೆ ನಾನು ಓದಿದ ಇಂಗ್ಲೀಷ್ ಬರ್ಟ್ರಂಡ್ ರಸ್ಸೆಲ್‌ರಂತಹ ಉದಾರವಾದಿ ಲೇಖಕರ ಕೃತಿಗಳ ಫಲವಾಗಿ ಸಮಾಜದ ವಾಸ್ತವ ಸಂಗತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಅರಿತುಕೊಂಡು ಸಾಂಪ್ರದಾಯಿಕ ಸಂಕೋಲೆಗಳಿಂದ ಹೊರಬಂದು ವಿಶಾಲವಾಗಿ ಆಲೋಚಿಸುತ್ತಾ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗುವಂತೆ ಮಾಡಿತು’ ಎನ್ನುತ್ತಾರೆ ಎನ್ನಾರ್ ಮೇಷ್ಟ್ರು.

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಗೌರಿಬಿದನೂರಿನ ಅಇಸಂ (ಅಶ್ವತ್ಥಯ್ಯ ಇಸ್ತೂರಿ ಸಂಜೀವಮ್ಮ) ನ್ಯಾಷನಲ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿದ ಪ್ರೊ.ರಮೇಶ್, ಇಲ್ಲಿ 20 ವರ್ಷಗಳು, ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 10 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ದ್ದಾರೆ. ನಂತರ ಗೌರಿಬಿದನೂರು ನ್ಯಾಷನಲ್ ಕಾಲೇಜಿನ, ಬಸವನಗುಡಿ, ಜಯನಗರ ನ್ಯಾಷನಲ್ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದರು. ವಿಶೇಷವೆಂದರೆ ತಂದೆ ತೆಲುಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಕಾಲೇಜಿಗೆ ಮಗ ರಮೇಶ್ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ. ಬಳಿಕ ತಂದೆ ಹಿಂದೂಪುರದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗುತ್ತಾರೆ. ಆ ಪ್ರಿನ್ಸಿಪಾಲರ ಮಗ ಕರ್ನಾಕಟದ ಪ್ರತಿಷ್ಠಿತ ಮೂರು ಕಾಲೇಜುಗಳಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಗೌರಿಬಿದನೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಸಾಹಿತಿಗಳಾದ ಪ್ರೊ.ಬಿ.ಗಂಗಾಧರಮೂರ್ತಿ, ಡಾ.ರಂಗಾರೆಡ್ಡಿ ಕೋಡಿರಾಂಪುರ, ಡಾ.ಎಚ್.ವಿ.ವೇಣುಗೋಪಾಲರೊಂದಿಗೆ ಸೇರಿ ಸಮುದಾಯ ಸಂಘಟನೆಯನ್ನು ರಚಿಸಿಕೊಂಡು ತಾಲ್ಲೂಕಿನ ಹಳ್ಳಿಗಳನ್ನು ಸುತ್ತಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಬೀದಿ ನಾಟಕಗಳ ಪ್ರದರ್ಶನ ಏರ್ಪಡಿಸಿದರು. 80ರ ದಶಕದಲ್ಲಿ ಸ್ಥಾಪನೆಗೊಂಡ ದಲಿತ ಸಂಘರ್ಷ ಸಮಿತಿಗೆ ವೈಚಾರಿಕ ಚಿಂತನೆಯ ಧಾರೆಯೆರೆದು ಪೋಷಿಸಿದರು. ಸ್ಟಡಿ ಸರ್ಕಲ್‌ನಂಥ ಅಧ್ಯಯನ ವೃತ್ತಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದರು. ಅಂತಹ ಸ್ಟಡಿ ಸರ್ಕಲ್‌ಗಳ ಪ್ರಯೋಜನ ಪಡೆದು ವೈಚಾರಿಕ ಪ್ರಜ್ಞೆ, ಸಾಮಾಜಿಕ ಎಚ್ಚರ ಮೂಡಿಸಿಕೊಂಡವರಲ್ಲಿ ನಾನೂ ಒಬ್ಬ (ಲೇಖನದ ಲೇಖಕ). ಶೋಷಿತರ ಪರ ಬೀದಿಗಿಳಿದು ಹೋರಾಡಿದರು. ಎಚ್.ನಾಗಸಂದ್ರ ಗ್ರಾಮದ ಜೀತದಾಳುಗಳಿಗಾಗಿ ನಡೆದ ಭೂ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದರು. ಜೀತ ಮುಕ್ತರ ಪುನರ್‌ವಸತಿಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿ, ಪುನರ್‌ವಸತಿ ಗ್ರಾಮಕ್ಕೆ ಶಂಭೂಕನಗರ ಎಂದು ನಾಮಕರಣ ಮಾಡಿದ ವೈಚಾರಿಕ ಚಿಂತಕರ ಗುಂಪಿನ ಸದಸ್ಯರಲ್ಲಿ ಇವರೂ ಒಬ್ಬರು.

ಕೈತುಂಬ ಸಂಬಳ ಕೊಡುವ ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಸಾಮಾಜಿಕ ಸವಲತ್ತುಗಳೆಲ್ಲವನ್ನೂ ಪಡೆದಿದ್ದ ಪ್ರೊ.ರಮೇಶ್‌ರವರು ಅಷ್ಟಕ್ಕೆ ತೃಪ್ತಿಪಟ್ಟುಕೊಂಡು ಕೂರದೆ, ತನ್ನ ಹಾಗೆ ಈ ಸಮಾಜವೂ ಸಮೃದ್ಧ ಜೀವನ ಮಾಡಬೇಕು; ಕುವೆಂಪು ಅವರು ಹೇಳಿದಂತೆ ಸರ್ವರಿಗೂ ಸಮಪಾಲು, ಸಮ ಬಾಳು ದೊರೆಯಬೇಕೆಂದು ಹಪಿಹಪಿಸಿದರು. ಅದಕ್ಕಾಗಿಯೇ ಹಮ್ಮು ಬಿಮ್ಮು ತೊರೆದು ಬೀದಿಗಿಳಿದು ಶೋಷಕರ ವಿರುದ್ಧ ಧ್ವನಿ ಎತ್ತಿದರು.

ಇದನ್ನೂ ಓದಿ: ಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

ಗೌರಿಬಿದನೂರಿನಲ್ಲಿ ದಲಿತ ವಿದ್ಯಾರ್ಥಿಗಳಿಗೆ ಕಾಲೇಜು ವಿದ್ಯಾರ್ಥಿನಿಲಯವಿಲ್ಲದೆ ಬಡತನದ ಬೇಗೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದ ದಿನಗಳಲ್ಲಿ ಅವರ ವ್ಯಾಸಂಗಕ್ಕೆ ನೆರವಾಗಲು ದಸಂಸದ ಜೊತೆ ಸೇರಿ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಕಣ್ತೆರೆಸಿ ಹಾಸ್ಟೆಲ್ ತೆರೆಯಲು ಕಾರಣೀಭೂತರಾದರು. ಬಳಿಕ ಆ ಹಾಸ್ಟೆಲ್ ವಾರ್ಡನ್ ಆಗಿ ದಲಿತ ಮಕ್ಕಳನ್ನು ಪೋಷಿಸಿದ ವ್ಯಕ್ತಿತ್ವ ನಮ್ಮ ಮೇಷ್ಟ್ರದ್ದು. ಅದಕ್ಕಾಗಿ ದೊರೆಯುತ್ತಿದ್ದ ಸಂಭಾವನೆಯನ್ನು ಸಂಬಳ ಸಾಲದೆ ಪರದಾಡುತ್ತಿದ್ದವರಿಗೆ ನೀಡಿ ಉದಾರತೆ ಮೆರೆದರು.

ರಮೇಶ್ ಅವರು ತಮ್ಮ ಹೋರಾಟದ ಜೊತೆಜೊತೆಗೇ ಸಾಹಿತ್ಯ ಕೃಷಿಯನ್ನೂ ಮಾಡಿಕೊಂಡು ಬಂದವರು. ಮಾವೋತ್ಸೆತುಂಗ್ ಮತ್ತು ಸಾಹಿತ್ಯ ಕ್ಷೇತ್ರದ ಕ್ರಾಂತಿಗಳು ಸ್ವತಂತ್ರ ಕೃತಿಗಳಾದರೆ, ಸಾಂಸ್ಕೃತಿಕ ರಂಗದ ಕ್ರಾಂತಿಕಾರಿ ಮುಬ್ದಂ ಮೊಯುದ್ದೀನ್, ಬಾಲ್ಯದಿಂದ ಪ್ರಾಯಕ್ಕೆ, ಬೇಕನ್‌ನಿಂದ ಮಾರ್ಕ್ಸ್‌ವರೆಗೆ, ಪ್ರಕ್ಷುಬ್ದ ಕಣಿವೆ, ಬಂಡವಾಳಯುಗ, ಆರ್ಯರು, ಅಭಿವೃದ್ಧಿಯ ಕತ್ತಲೆ ಬೆಳಕು, ನೀರು, ನಿಷೇಧ, ಗಣಪತಿ, ಅಸ್ಪೃಶ್ಯ ವಸಂತ ಅನುವಾದಿತ ಕೃತಿಗಳು. ಇವುಗಳ ಜೊತೆಗೆ ಕೆಲವು ಬಿಡಿ ಲೇಖನಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಇವರು ಅನುವಾದಿಸಿದ ‘ಮೌರ್ಯರ ಕಾಲದ ಭಾರತ’ ಕೃತಿಗೆ ಕುವೆಂಪು ಭಾಷಾ ಭಾರತಿ 2014ರಲ್ಲಿ ಶ್ರೇಷ್ಠ ಅನುವಾದ ಕೃತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ವೃತ್ತಿಯ ಕಾರಣಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಪ್ರೊ. ರಮೇಶ್ ಮಡದಿ ಮತ್ತು ಇಬ್ಬರು ಮಕ್ಕಳ ಜೊತೆಗೆ ತುಂಬು ಕುಟುಂಬ ಜೀವನ ನಡೆಸುತ್ತಿದ್ದಾರೆ. ತಮ್ಮ ಇಳಿ ವಯಸ್ಸಿನಲ್ಲೂ ವೈಚಾರಿಕ ಚಿಂತನೆಯ ಪ್ರಖರತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಮಡದಿ ಮಕ್ಕಳು ಆಕ್ಷೇಪಿಸುವುದಿಲ್ಲವೇ ಎಂದರೆ, ’ಅವರ ನಂಬಿಕೆ ಅವರದು, ನನ್ನ ಅಪನಂಬಿಕೆ ನನ್ನದು. ಪತ್ನಿ ವಿನುತರ ನಂಬಿಕೆಗೆ ನಾನು ಅಡ್ಡಿ ಉಂಟು ಮಾಡುವುದಿಲ್ಲ. ಅವರು ನನ್ನ ವಿಚಾರಗಳನ್ನು ಒಪ್ಪಿಕೊಂಡು ಪಾಲಿಸಿದರೆ, ಸಂತೋಷ! ಅವರಿಗೆ ಅಪಥ್ಯವೆನ್ನಿಸಿದರೆ ನಾನು ಒತ್ತಡ ಏರುವುದಿಲ್ಲ. ನನ್ನದು ಪ್ರಜಾಪ್ರಭುತ್ವ ದಾರಿ. ಅವರು ದೇವಾಲಯಕ್ಕೆ ಹೋಗಬೇಕೆಂದಾಗ ನಾನು ಅವರಿಗೆ ಬೆಂಗಾವಲಾಗಿ ಹೋಗುತ್ತೇನೆ. ಆದರೆ ನಾನು ದೇವಾಲಯದ ಹೊರಗೆ. ಅವರು ಒಳಗೆ’ ಎನ್ನುತ್ತಾರೆ.

ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ಜನಶಕ್ತಿಯ ಗೌರವ ಅಧ್ಯಕ್ಷರಾಗಿ, ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷರಾಗಿ, ದಸಂಸ ಮತ್ತು ಸಮುದಾಯಗಳ ಜೊತೆ ಕೆಲಸ ಮಾಡುವ ಮೂಲಕ ತಮ್ಮ ವೈಚಾರಿಕ ಯಾನ ಮುಂದುವರೆಸಿದ್ದಾರೆ. ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರಾಗಿ ಶೋಷಿತರ, ದಮನಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವಸ್ತುಸ್ಥಿತಿಯನ್ನು ಅರಿತುಕೊಂಡು ಸರ್ಕಾರಕ್ಕೆ ವರದಿ ನೀಡಿ ಸರ್ಕಾರದ ಕಣ್ತೆರೆಸುವ ಕೆಲಸ ಮಾಡಿದ್ದಾರೆ.

ವಿಚಾರವಾದಿಗಳು ಒಬ್ಬೊಬ್ಬರಾಗಿ ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ವೈಚಾರಿಕ ಚಿಂತಕರ ಕೊಂಡಿಯಾಗಿ ಕೆಲಸ ಮಾಡುತ್ತಾ ಇಂದಿನ ಯುವ ಪೀಳಿಗೆಗೆ ವೈಚಾರಿಕ ಪ್ರಜ್ಞೆಯನ್ನು ಜತನದಿಂದ ಮೂಡಿಸುವ ಮೂಲಕ ಸಮಾಜಮುಖಿ ಚಿಂತಕರೆನ್ನಿಸಿಕೊಂಡಿರುವ ಪ್ರೊ.ನಗರಗೆರೆ ರಮೇಶ್‌ರವರನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷ ಗಾದಿಗೆ ಆಯ್ಕೆ ಮಾಡುವ ಮೂಲಕ ತಾಲ್ಲೂಕಿನ ವೈಚಾರಿಕ ರಂಗವನ್ನು ಪ್ರಖರಗೊಳಿಸುವ ಕೆಲಸ ಮಾಡಿದ್ದಕ್ಕಾಗಿ ಅಭಿನಂದಿಸುತ್ತೇನೆ.

ನನ್ನ ವಿದ್ಯಾಗುರುಗಳೂ ಆಗಿರುವ ಎನ್ನಾರ್ ಮೇಷ್ಟ್ರು ಸಾಹಿತ್ಯ ಲೋಕದಲ್ಲಿ ಹೀಗೆ ಪಯಣಿಸುತ್ತಾ ವೈಚಾರಿಕ ಲೋಕವನ್ನು ಶ್ರೀಮಂತಗೊಳಿಸುತ್ತಾ ಜೊತೆಜೊತೆಗೆ ನಮ್ಮನ್ನೂ ಕರೆದೊಯ್ಯುತ್ತಾ ಘನತೆ ಗೌರವಗಳನ್ನು ಪಡೆಯುವಂತಾಗಲಿ ಎಂದು ಆಶಿಸುತ್ತೇನೆ.

ಡಾ. ಕೆ.ಪಿ.ನಾರಾಯಣಪ್ಪ
ಪ್ರಾಂಶುಪಾಲರು, ಅಇಸಂ ನ್ಯಾಷನಲ್ ಪದವಿ ಕಾಲೇಜು,
ಗೌರಿಬಿದನೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...