Homeಮುಖಪುಟಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

ಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

- Advertisement -
- Advertisement -

ಆಲ್ಬರ್ಟ್ ಕಮುನ ’ಪ್ಲೇಗ್’; ಫ್ರಾಜ್ ಕಾಪ್ಕಾನ ’ದಿ ಟ್ರಯಲ್’; ವಿಲಿಯಂ ಗೋಲ್ಡಿಂಗ್‌ನ ’ಲಾರ್ಡ್ ಆಫ್ ದಿ ಫ್ಲೈಸ್’; ವೆಲ್ಸಾನ ’ಕಂಟ್ರಿ ಆಫ್ ದಿ ಬ್ಲೈಂಡ್’; ಕನ್ನಡ ರಾವ್ ಬಹದ್ದೂರರ ’ಗ್ರಾಮಾಯಣ’ ಈ ಸರಣಿ ಕಾದಂಬರಿಗಳ ವಸ್ತುವಿನ ಜೊತೆ ಹೋಲಿಸಬಹುದಾದ ಕಾದಂಬರಿ ಜೋಸೆ ಸರಮಾಗೋನ ’ಕುರುಡು’; ಜೋಸೆ ಸರಮಾಗೋ ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಕಾರರಲ್ಲೊಬ್ಬ. ಇವನ ಬ್ಲೈಂಡ್‌ನೆಸ್ ಕಾದಂಬರಿಯನ್ನು ಡಾ. ವಿಜಯ ಸುಬ್ಬರಾಜ್ ಕನ್ನಡಕ್ಕೆ ’ಕುರುಡು’ ಎಂದು ಅನುವಾದಿಸಿದ್ದಾರೆ. ಪ್ರಕಾಶಕ ಸೃಷ್ಟಿ ನಾಗೇಶ್ ಇದನ್ನು 2022ರಲ್ಲಿ ಪ್ರಕಟಿಸಿದ್ದಾರೆ.

ನಾವು ಕಟ್ಟಿದ ಈ ಸೈತಾನೀ ನಾಗರಿಕ ಸ್ವರ್ಗ ದಿಢೀರನೆ ಕುಸಿದರೆ?

ಇದೊಂದು ವಿಶಿಷ್ಟ ಕಾಲ್ಪನಿಕ ರೂಪಕಾತ್ಮಕ ಕಥೆ. ಇಲ್ಲಿ ಬರುವ ಪಾತ್ರಗಳಿಗೆ ಪ್ರದೇಶಗಳಿಗೆ ಹೆಸರಿಲ್ಲ. ದಿಢೀರನೆ ಒಂದು ಅನಾಮಧೇಯ ನಗರದಲ್ಲಿ ಕುರುಡಿನ ಸೋಂಕು ಕಾಣಿಸಿಕೊಳ್ಳುತ್ತದೆ. ಎಂದೂ ಕಂಡು ಕೇಳರಿಯದ ಕುರುಡಿನ ಆ ಸೋಂಕು ಇಡೀ ನಗರದ ಪ್ರಜೆಗಳಿಗೆ ಹರಡಿಬಿಡುತ್ತದೆ. ಪ್ರಜೆಗಳ ಬದುಕು ಅಸ್ತವ್ಯಸ್ತವಾಗುತ್ತದೆ; ಅರಾಜಕತೆಗೊಳಗಾಗುತ್ತದೆ. ಎಂಥ ಹೃದಯ ವಿದ್ರಾವಕ ಚಿತ್ರ! ಓದುಗರ ಜೀವ ಹಿಂಡಿಬಿಡುತ್ತದೆ.

ಮನುಷ್ಯರ ಬದುಕುಗಳು ಬಲಿಷ್ಠರ ಮೂಲಕ ಅವಮಾನಕ್ಕೆ ಗುರಿಯಾಗುತ್ತವೆ ಎಂದು ಹೇಳುವಾಗ, ಕೇವಲ ಕುರುಡುತನ, ಅಂಗವಿಕಲತೆಗಳ ಬಗ್ಗೆ ಮಾತ್ರವಲ್ಲ, ಮನೋವೈಜ್ಞಾನಿಕ ಆಯಾಮಗಳನ್ನೂ ಒಳಗು ಮಾಡಿಕೊಳ್ಳುತ್ತವೆ. ಕಥಾ ಸಂವಿಧಾನವನ್ನು ಈತ ಎಷ್ಟು ಕುಶಲತೆಯಿಂದ ನಿರ್ವಹಿಸಿದ್ದಾನೆ ಎಂದರೆ ಅಚ್ಚರಿ ಮೂಡಿಸುತ್ತಾನೆ. ಅನಾಮಧೇಯ ಪ್ರದೇಶವೊಂದರಲ್ಲಿ, ಕೇವಲ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಕುರುಡು ಸೋಂಕಿಗೆ ಒಳಗಾಗುತ್ತಾರೆ. ಅಂಧತ್ವದಿಂದ ತಪ್ಪಿಸಿಕೊಂಡ ಒಬ್ಬ ಹೆಣ್ಣು ಮಗಳು, ಉಳಿದ ಕುರುಡರನ್ನು ಸಂರಕ್ಷಿಸುತ್ತಾಳೆ. ಮತ್ತು ಅವರ ಮುಂದಾಳಾಗಿ ಗುಂಪು ಮುನ್ನಡೆಸುತ್ತಾಳೆ. ಇಡೀ ಕಾದಂಬರಿಯ ನಿರೂಪಕಿ ಇವಳು. ಅಲ್ಲದೆ, ಆ ವಿಪತ್ತಿನ ಪರಿಣಾಮಗಳು, ಪ್ರಜೆಗಳ ಬದುಕುಗಳಲ್ಲಿ ಉಂಟಾದ ಸ್ಥಿತ್ಯಂತರಗಳು, ಕುರುಡು ಸೋಂಕಿಗೆ ಒಳಗಾದವರ ದುರಂತಗಳು- ಇವೆಲ್ಲಕ್ಕೂ ಸಾಕ್ಷಿಪ್ರಜ್ಞೆಯೂ ಅವಳೇ ಆಗಿದ್ದಾಳೆ. ಅಂಧತ್ವವೆಂಬುದು ಜನರ ಬದುಕುಗಳಲ್ಲಿ ಸಾವುನೋವುಗಳನ್ನು ಸೃಷ್ಟಿಸುವ ಚಂಡಮಾರುತವಾಗಿಯೂ ಮಹಾವಿನಾಶಕಾರಿ ಪ್ರಳಯವಾಗಿಯೂ ಪರಿಣಮಿಸುತ್ತದೆ. ನಗರಗಳಲ್ಲಿ ಬದುಕುವುದು ಸಾಧ್ಯವೇ ಇಲ್ಲವಾಗಿ, ಒಂದು ಗುಂಪಿನ ಕುರುಡರು ಅಲೆಮಾರಿ ಆದಿಮಾನವ ಬದುಕಿನ ಅವ್ಯವಸ್ಥೆಗೆ ಮರಳುತ್ತಾರೆ. ಇದೂ ಕೂಡಾ ಒಂದು ರೂಪಕದಂತೆಯೇ ಬಳಕೆಯಾಗಿದೆ. [ಕುರುಡು, ಡಾ. ವಿಜಯಾ ಸುಬ್ಬರಾಜ್. ಪುಟ x-xi]

ಜೋಸೆ ಸರಮಾಗೋನ

ಕಾದಂಬರಿಯು ವಾಸ್ತವತೆ ಮತ್ತು ಕಾಲ್ಪನಿಕತೆಗೆ ಸದಾ ಮುಖಾಮುಖಿಯಾಗುತ್ತದೆ. ಮೊದಲಿಗೆ ’ಬಳಿಕರುಡು ಸೋಂಕು’ ಕಾಲ್ಪನಿಕವಾದರೂ ವಾಸ್ತವವನ್ನು ಅಲ್ಲಗಳೆದ ಗಾಳಿಗೋಪುರವಲ್ಲ. ವಸ್ತು ಕಾಲ್ಪನಿಕವಾದರೂ ಅದರೊಂದಿಗೆ ವಾಸ್ತವದ ರಾಜಕೀಯ ಸಾಮಾಜಿಕ ಸಂಗತಿಗಳನ್ನು ಸಮೀಕರಿಸಿ ಕಥೆಯನ್ನು ನೇಯುತ್ತಾನೆ ಲೇಖಕ. ಕೋವಿಡ್-19ರ ಕೊರೊನಾ ವೈರಸ್ ಹರಡಿದುದನ್ನೂ ಅದರ ಪರಿಹಾರೋಪಾಯ ಕ್ರಮದೊಡನೆ ಅದನ್ನು ರಾಜಕೀಯಗೊಳಿಸಿದುದನ್ನೂ ಈಚೆಗೆ ಕಂಡವರು ನಾವು. ಅಮಾಯಕ ಜನ ನಮ್ಮ ಪ್ರಭುತ್ವ ಹೇಳಿದಂತೆ ಚಪ್ಪಾಳೆ ತಟ್ಟಿದರು, ಗಂಟೆ ಜಾಗಟೆ ಬಾರಿಸಿದರು. ಮಾಸ್ಕ್ ಧರಿಸಿದರು. ಸಾರಿಗೆ ಸಂಚಾರ ರದ್ದು ಎಂದಾಗ ನಗರಕ್ಕೆ ವಲಸೆ ಬಂದಿದ್ದ ಜನ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಸಾವಿರಾರು ಮೈಲಿ ಕಾಲುನಡಿಗೆಯಲ್ಲೇ ತಂತಮ್ಮ ಊರು ಕೇರಿ ಹುಡುಕಿ ಹೊರಟರು. ಹಾದಿ ಬೀದಿಯಲ್ಲಿ ಬಿದ್ದು ಹೆಣವಾದವರೂ ಉಂಟು. ಆ ಹೆಣಗಳನ್ನು ಮುಟ್ಟುವವರಿಲ್ಲ. ದಫನ್ ಮಾಡುವವರಿಲ್ಲ. ನಾಗರಿಕ ಜಗತ್ತೇ ಅಯೋಮಯವಾಯಿತು.

’ಕುರುಡು ಸೋಂಕು’ ಹಬ್ಬಿದ್ದೂ ಇದೇ ರೀತಿ. ಜನ ಸಂತ್ರಸ್ತರಾದದ್ದೂ ಪ್ರಭುತ್ವ ಬೇಕಾಬಿಟ್ಟಿ ಸೋಂಕಿತರನ್ನು ನಡೆಸಿಕೊಂಡದ್ದು ಹಾಗೂ ಪ್ರಶ್ನಿಸಿದವರನ್ನು ಮಿಲ್ಟ್ರಿ ಪಡೆ ನಿಯೋಜಿಸಿ ಅವರ ಸೊಲ್ಲಡಗಿಸಿದ್ದು, ಕಾಯುವವನೇ ಕೊಲೆಗೈದ ಎಂಬಂತೆ ಆ ಕುರುಡು ಮಿಲ್ಟ್ರಿ ಸೈನಿಕರೇ ಶೋಷಕರಾದದ್ದು; ಕುರುಡರ ಆಹಾರ ಹಾಗೂ ಅವರಲ್ಲಿದ್ದ ವಸ್ತುಗಳನ್ನು ಕೊಳ್ಳೆ ಹೊಡೆದು, ಕಣ್ಣು ಕಾಣದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ ತಮ್ಮ ಕಾಮತೃಷೆ ನೀಗಿಕೊಂಡದ್ದು, ಕಡೆಗೆ ಪುಂಡ ಕುರುಡರಿಗೂ ಹುಚ್ಚಾಸ್ಪತ್ರೆ ವಾರ್ಡಿನಲ್ಲಿದ್ದ ಜನರಿಗೂ ಕುರುಡು ಯುದ್ಧವೇ ನಡೆದದ್ದು, ಮಹಿಳೆಯೊಬ್ಬಳು ಸಿಗರೇಟ್ ಲೈಟರ್‌ನಿಂದ ಅವರಿಗೆ ಬೆಂಕಿ ಹಚ್ಚಿದ್ದೂ, ಆ ಬೆಂಕಿಯಲ್ಲಿ ಇಡೀ ಕ್ವಾರಂಟೈನ್ ವಾರ್ಡ್‌ಗಳೇ ಹತ್ತಿಕೊಂಡದ್ದು, ಪುಂಡ ಕುರುಡರು ಭಸ್ಮವಾದದ್ದು, ಆ ಅಗ್ನಿದುರಂತಕ್ಕೆ ತುತ್ತಾಗದೆ ಉಳಿದವರು ಬೀದಿಗೆ ಬಂದದ್ದು, ಸುರಿವ ಮಳೆ ಹರಿವ ನೀರು ಕೆಸರು ತುಂಬಿದ ರಸ್ತೆಗಳಲ್ಲಿ ಒಂದೊಂದು ವಾರ್ಡಿನಲ್ಲಿದ್ದ ಕುರುಡರು ತಂಡತಂಡವಾಗಿ ದಿಕ್ಕಾಪಾಲಾಗಿ ದಿಕ್ಕುಕಾಣದೆ ಹೊರಬಿದ್ದು ಅನ್ನಾಹಾರ ನೀರು ಇಲ್ಲದೆ ನೆಪ್ಪಿನ ಮೇಲೆ ಗುರುತು ಹಿಡಿದು ಅಂಗಡಿಗಳನ್ನು ಮಾಲುಗಳನ್ನೂ ಹೊಕ್ಕು ಆಹಾರ ಪದಾರ್ಥಗಳನ್ನು ತಡಕಿ ಹುಡುಕಿ ಹೊಟ್ಟೆ ತುಂಬಿಸಿಕೊಂಡದ್ದು, ಮಲಮೂತ್ರಗಳ ಕೊಚ್ಚೆ ರೊಚ್ಚೆಗಳಲ್ಲಿ ನಗರದ ಕಸ ಕಡ್ಡಿ ರಾಡಿಯಲ್ಲಿ ಜನ ಬಿದ್ದು ಎದ್ದು ನಡೆಯುತ್ತಿದ್ದದ್ದು ಬೈಬಲ್‌ನ ಜಲ ಪ್ರಳಯವನ್ನು ನೆನಪಿಸುತ್ತದೆ!

ಇದನ್ನೂ ಓದಿ: ಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- “ಬೆಳಕಿನ ಬೇಸಾಯ”

ಈ ಭಾಗಕ್ಕು ಮುನ್ನ ಬರುವ ದೃಶ್ಯ: ಹುಚ್ಚಾಸ್ಪತ್ರೆ ವಾರ್ಡ್‌ನಲ್ಲಿ ಲ್ಯಾವೆಟರಿ, ನೀರು ವ್ಯವಸ್ಥೆ ಏನೂ ಸರಿಯಿಲ್ಲದೆ ಎಲ್ಲೆಂದರಲ್ಲಿ ಕುರುಡರು ಮಾಡಿಕೊಂಡ ಹೇಲು ಕುಪ್ಪೆ, ಉಚ್ಚೆ ರೊಚ್ಚೆಗಳಲ್ಲಿ ಬಿದ್ದು ಎದ್ದು ಬದುಕುತ್ತಿದ್ದುದನ್ನು ನೋಡಿದರೆ ಡಾಂಟೆಯ ಡಿವೈನ್ ಕಾಮೆಡಿಯ ಹೆಲ್ (ನರಕ) ಕಣ್ಣಿಗೆ ಕಟ್ಟುತ್ತದೆ. ಹಾಗೆ ನೋಡಿದರೆ ಸರಮಾಗೋ ಇಪ್ಪತ್ತನೇ ಶತಮಾನದ ಡಾಂಟೆಯೇನೋ ಎನಿಸಿಬಿಡುತ್ತದೆ. ಆದ್ದರಿಂದಲೇ ಇವನ ಕೃತಿಗಳು ಪೋರ್ಚುಗೀಸ್‌ನಿಂದ ಪ್ರಪಂಚದ ಇನ್ನಿತರ ಭಾಷೆಗಳಿಗೂ ಅನುವಾದಗೊಂಡು ಅವನ ಪ್ರಸಿದ್ಧಿ ಬೆಳೆದಿದೆ.

ಬ್ಲೈಂಡ್‌ನೆಸ್ ಕಾದಂಬರಿಯಲ್ಲಿ ಪರಮಾಶ್ಚರ್ಯವೆಂದರೆ ಕುರುಡು ಡಾಕ್ಟರನ ಹೆಂಡತಿ ಒಬ್ಬಳು ಮಾತ್ರ ಸೋಂಕಿನಿಂದ ಪಾರಾಗಿದ್ದಾಳೆ. ಇಡೀ ಕಾದಂಬರಿ ಇವಳ ಕಣ್ಣೋಟದಲ್ಲಿ ಹೇಳಲ್ಪಟ್ಟಿದೆ. ಅವಳೇ ನಿರೂಪಕಿ. ಕ್ಷಮಯಾ ಧರಿತ್ರಿಯಾಗಿ ಆಕೆ ತನ್ನ ದೃಷ್ಟಿವಲಯಕ್ಕೆ ಬಂದ ಎಲ್ಲ ವಿಚಾರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ ತನ್ನ ಶಕ್ತಿ ಮೀರಿ ಸೋಂಕಿತರಿಗೆ ಸಹೃದತೆಯಿಂದ ಸಹಾಯ ಮಾಡುತ್ತಾಳೆ. ಇವಳಿದ್ದ ಕ್ವಾರಂಟೈನಿನ ನಂ.1 ವಾರ್ಡಿನಲ್ಲಿ ಇವಳೊಂದಿಗೆ ಇನ್ನೂ ಅನೇಕ ಅನಾಮಧೇಯ ಪಾತ್ರಗಳಿವೆ. ಈಕೆಯ ಗಂಡ ಕಣ್ಣಿನ ಡಾಕ್ಟರ್; ಡಾಕ್ಟರ್‌ನ ಕಾರು ಕದ್ದ ಕಳ್ಳ (ಈಗ ಅವನೂ ಕುರುಡ); ಈತ ಕಪ್ಪು ಕನ್ನಡಕದ ಹುಡುಗಿಯನ್ನು ಮುಟ್ಟಲು ಹೋಗಿ ಅವಳಿಂದ ಕಾಲು ತುಳಿಸಿಕೊಂಡು ಅದು ಕೀತು ಬಾತು ವೈದ್ಯಕೀಯ ನೆರವಿಲ್ಲದೆ ಸೆಪ್ಟಿಕ್ ಆಗಿ ಸಾವಿಗೀಡಾಗುತ್ತಾನೆ; ಕಪ್ಪು ಕನ್ನಡಕದ ಹುಡುಗಿಯ ಜೊತೆಗೆ ಸದಾ ಅಮ್ಮಾ ಬೇಕು ಎಂದು ಹಂಬಲಿಸುವ ಮೆಳ್ಳಗಣ್ಣಿನ ಹುಡುಗ; ಇನ್ನೊಬ್ಬ ಕಣ್ಣಿನ ಮೇಲೆ ಕಪ್ಪು ಪ್ಯಾಚ್‌ವುಳ್ಳ ಮುದುಕ; ಇನ್ನಿಬ್ಬರು ಕುರುಡು ದಂಪತಿಗಳು; ಪುಂಡು ಕುರುಡರಿಂದ ಅತ್ಯಾಚಾರಕ್ಕೊಳಗಾಗಿ ಸತ್ತ ’ಇನ್‌ಸೋಮ್ನಿಯಾ’ದಿಂದ ಬಳಲುತ್ತಿದ್ದ ಹೆಂಗಸು; ಇತ್ಯಾದಿ.

ಇವರ ಕ್ವಾರಂಟೈಂನ್ ವಾರ್ಡ್ ಸುಟ್ಟು ಹೋದನಂತರ ಬೀದಿಗೆ ಬಂದು ಆಹಾರ ನೀರು ಹುಡುಕುತ್ತಾ ಹೋಗಿ ಮಾಲ್ ಒಂದರಲ್ಲಿ ಸಿಕ್ಕಿದಷ್ಟು ಹೊತ್ತು ತಿರುಗುತ್ತಾ ಸುಸ್ತಾಗಿ ಕಣ್ಣೀರು ಸುರಿಸುತ್ತಾ ಒಂದೆಡೆ ಕುಳಿತಿದ್ದ ಡಾಕ್ಟರ್‌ನ ಹೆಂಡತಿಯ ಕಣ್ಣೀರು ನೆಕ್ಕಿ ಅವಳನ್ನು ಹಿಂಬಾಲಿಸಿ ಬಂದ ’ಕಂಬನಿ ನಾಯಿ’ (ಕಂಬನಿ ನೆಕ್ಕಿದ್ದಕ್ಕೆ ಅದೇ ಹೆಸರು ಬಿತ್ತು); ಕುರುಡರಿಗೆ ಕೊಡುತ್ತಿದ್ದ ಆಹಾರವನ್ನು ಕಿತ್ತುವಶಪಡಿಸಿಕೊಂಡು, ಅವರಲ್ಲಿದ್ದ ವಸ್ತುಗಳನ್ನು ಕೊಟ್ಟರೆ ಮಾತ್ರ ಆಹಾರವೆಂದೂ, ಅದಾದ ನಂತರ ಹೆಂಗಸರನ್ನು ಒದಗಿಸಬೇಕೆಂದೂ, ಆದೇಶದ ಮೇಲೆ ಆದೇಶ ಹೊರಡಿಸುತ್ತಿದ್ದ, ಕಡೆಗೆ ಕುರುಡು ಹೆಂಗಸೊಬ್ಬಳು ಅವರ ಬಾಗಿಲಿಗೆ ಹಾಸಿಗೆಗಳನ್ನು ಪೇರಿಸಿ ಸಿಗರೇಟ್ ಲೈಟರ್‌ನಿಂದ ಬೆಂಕಿ ಹಚ್ಚಿದಾಗ ಅಗ್ನಿಗಾಹುತಿಯಾದ ಮಿಲ್ಟ್ರಿ ಪಡೆಯ ಪುಂಡ ಕುರುಡರೂ; ಆಹಾರದ ಪಾಕೆಟ್ ಬಗ್ಗೆ ಸುಳ್ಳು ಲೆಕ್ಕ ಬರೆಯುತ್ತಿದ್ದ ಅಕೌಂಟೆಂಟ್; ಕಪ್ಪು ಕನ್ನಡಕದ ಹುಡುಗಿಯ ತಂದೆ ತಾಯಿಗಳಿದ್ದ ಖಾಲಿ ಮನೆ ಆಕ್ರಮಿಸಿಕೊಂಡಿದ್ದ ಬ್ರೈಲ್ ಲಿಪಿಯ ಬರಹಗಾರ; ಮತ್ತು ಕ್ವಾರಂಟೈನ್ ತಪ್ಪಿಸಿಕೊಂಡು, ಕಪ್ಪು ಕನ್ನಡಕದ ಹುಡುಗಿ ಮನೆಗೆ ಹಿಂದಿನ ಬಾಗಿಲಿನಿಂದ ಒಳಹೋಗಿ ಬಚ್ಚಿಟ್ಟುಕೊಂಡು ಒಬ್ಬ ನರಪೇತಲ ಮುದುಕಿ- ಹೀಗೆ ಹಲವಾರು ಹೆಸರಿಲ್ಲದ ಹೆಸರೊಲ್ಲದ ಪಾತ್ರಗಳು ಇಲ್ಲಿವೆ.

ಅಂಧತ್ವವೆನ್ನುವುದು ಮಹಾ ವಿನಾಶಕಾರಿ ಪ್ರಳಯಕ್ಕೆ ಸಮಾನ. ಸೋಂಕಿತರು ತಮ್ಮ ಮನೆ ಮಠ, ಆಸ್ತಿ ಪಾಸ್ತಿ, ತನ್ನದು ಪರರದ್ದು ಮುಂತಾಗಿ ಎಲ್ಲವನ್ನೂ ತೊರೆದು ಬಂದಿದ್ದಾರೆ. ಹುಚ್ಚಾಸ್ಪತ್ರೆ ವಾರ್ಡ್‌ನ ರೂಮುಗಳಲ್ಲಿ ಗುಂಪುಗುಂಪಾಗಿ ತಡವರಿಸುತ್ತಾ ನಡೆದಾಡುತ್ತಿದ್ದಾರೆ. ಕ್ವಾರಂಟೈನ್ ಕಟ್ಟಡಕ್ಕೆ ಬೆಂಕಿ ತಗುಲಿ ಆ ಸೋಂಕಿತರು ಸ್ವತಂತ್ರರಾದರು ನಿಜ. ಆದರೆ ಊಟ-ವಸತಿ ಎಲ್ಲಿ? ಮಳೆ-ಕತ್ತಲು ದಾರಿ ದೂರ; ಅಕ್ಷರಶಃ ಬಿಕಾರಿಗಳು; ಆದರೆ ಅವರು ಆಹಾರ, ವಸತಿ ಹಾಗೂ ಮೈಥುನ ಪ್ರಾಣಿಸಹಜ ಪ್ರವೃತ್ತಿಯನ್ನು ಹತ್ತಿಕ್ಕಲಾರರು. ಮಲಮೂತ್ರ ವಿಸರ್ಜನೆ ಕೂಡ ಎಲ್ಲೆಂದರಲ್ಲೇ! ಮುಚ್ಚುಮರೆ ಎಗ್ಗು ಸಿಗ್ಗು ಏನಿಲ್ಲ;

ಡಾ. ವಿಜಯ ಸುಬ್ಬರಾಜ್

ಕ್ವಾರಂಟೈನ್‌ನಲ್ಲಿರುವ ಕುರುಡು ರೋಗಿಗಳ ಮೇಲ್ವಿಚಾರಣೆಗೆ ನೇಮಕಗೊಂಡ ಮಿಲ್ಟ್ರಿ ಸಿಬ್ಬಂದಿ ಕೂಡ ಕುರುಡರಾಗಿದ್ದಾರೆ; ಆದರೆ ತಿಲಮಾತ್ರವೂ ಪಾಪ ಪ್ರಜ್ಞೆಯಿಲ್ಲ. ಸೋಂಕಿತರ ಪಾಲಿನ ಆಹಾರವನ್ನು ಅವರ ಒಡವೆ ವಸ್ತ್ರಗಳನ್ನು ಲಪಟಾಯಿಸುತ್ತಾರಲ್ಲದೆ, ಸೋಂಕಿತ ಮಹಿಳೆಯರನ್ನು ಸರದಿಯ ಮೇಲೆ ಕರೆದುಕೊಂಡು ತಮ್ಮ ಕಾಮತೃಷೆಯನ್ನು ತೃಪ್ತಿಪಡಿಸಿಕೊಳ್ಳುತ್ತಾರೆ. ’ಇನ್‌ಸೋಮ್ನಿಯಾ’ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯ ಮೇಲೂ ದೌರ್ಜನ್ಯವೆಸಗುತ್ತಾರೆ; ಅವಳು ಸಾವಿಗೀಡಾಗುತ್ತಾಳೆ. ಈ ಲೈಂಗಿಕ ದೌರ್ಜನ್ಯ ಅತ್ಯಂತ ಭಯಾನಕವೂ ಭೀಭತ್ಸವೂ ಆಗಿರುವುದು ಒಂದೆಡೆಯಾದರೆ, ಸುಳ್ಳುಲೆಕ್ಕ ಬರೆದು ಒಳರೋಗಿಗಳಲ್ಲಿದ್ದ ಹಣ ವಸ್ತು ಇತ್ಯಾದಿ ದೋಚಿಕೊಂಡು ಊಟದ ಲೆಕ್ಕಕ್ಕೆ ಸಮಮಾಡಿಕೊಳ್ಳುತ್ತಿದ್ದುದು ಇನ್ನೊಂದೆಡೆ. ಮಾನವೀಯತೆಯನ್ನು ಮರುವಿಮರ್ಶೆಗೆ ಒಡ್ಡುವ ಕಾಲ! ರನ್ನನ ಗದಾಯುದ್ಧ ಕಾವ್ಯದಲ್ಲಿ ಕೆಲವು ಧೂರ್ತ ಪಿಶಾಚಿಗಳು ಹೆಣಗಳ ಬಣವೆಗಳ ಮೇಲೆ ಕುಳಿತು ತಾವೂ ತಿನ್ನದೆ ಪರರಿಗೂ ಇಕ್ಕದೆ ಮಿಳ್‌ಮಿಳನೆ ನೋಡುತ್ತಿದ್ದವಂತೆ. ಕುರುಡು ಸೋಂಕಿಗೆ ತುತ್ತಾದರೂ ಮನುಷ್ಯರ ವ್ಯಾಪಾರ ಬುದ್ಧಿ ಹೋಗದಷ್ಟೆ! ಮನುಷ್ಯ ಸಂಬಂಧಗಳು ಕೇವಲ ಆದರ್ಶಗಳಾಗಿ ಉಳಿದುಬಿಡುತ್ತವೆ ಎಂಬಲ್ಲಿಗೆ..

ಮಾನವೀಯತೆಯೆನ್ನುವುದೇ ಅಳಿಸಿಹೋಗುತ್ತದೆ. ಕುರುಡರನ್ನು ಕ್ವಾರಂಟೈನ್ ಮಾಡಿ ನೋಡಿಕೊಳ್ಳಬೇಕಾದ ಸರಕಾರವೂ ಅಸಹಾಯಕವಾಗುತ್ತದೆ. ಕೇವಲ ತನ್ನ ಘೋಷಣೆಗಳನ್ನು ಕೇಳಿಸುವುದಕ್ಕಷ್ಟೇ ಸೀಮಿತವಾಗುತ್ತದೆ. ಹುಚ್ಚರ ಆಸ್ಪತ್ರೆಯನ್ನೇ ಕುರುಡರ ಆಶ್ರಯಧಾಮವನ್ನಾಗಿ ರೂಪಾಂತರಿಸಲಾಗುತ್ತದೆಯೇ ಹೊರತಾಗಿ, ನೀರಿನ, ಆಹಾರದ ವ್ಯವಸ್ಥೆಯಾಗಲೀ, ನೈರ್ಮಲ್ಯದ ವ್ಯವಸ್ಥೆಯಾಗಲೀ ಇಲ್ಲದೆ ಕೇವಲ ಕೊಳಕು, ಹೇಸಿಗೆಗಳಿಂದ ತುಂಬಿದ ನರಕಸದೃಶ ಪ್ರದೇಶದಲ್ಲಿ, ಪ್ರಾಣಿಗಳಂತೆ ಇರುವ ಪರಿಸರ ನಿರ್ಮಿಸುತ್ತದೆ. ಸರಕಾರ ತನ್ನ ನಿಲುವುಗಳನ್ನು ಪ್ರತಿಬಾರಿಯೂ ಬದಲಾಯಿಸುತ್ತಾ, ಸುಳ್ಳು ಭರವಸೆಗಳನ್ನು ನೀಡುತ್ತಾ, ಮೋಸ ಮಾಡುತ್ತದೆ. ಬ್ಯಾಂಕುಗಳೆಲ್ಲ ಲೂಟಿಯಾಗಿ, ದಿವಾಳಿತನವೇ ಎದ್ದೆದ್ದು ಕಾಣಿಸುತ್ತದೆ. [ಕುರುಡು. ಡಾ. ವಿಜಯಾ ಸುಬ್ಬರಾಜ್. ಪುಟ xv] ಇದು ಇಂದಿನ ಸರಕಾರಗಳ ಪ್ರತೀಕ!

ಇಷ್ಟಾಗಿಯೂ ಜೋಸೆ ಸರಮಾಗೋ ಕೇವಲ ನಿರಾಶಾವಾದಿಯೇನಲ್ಲ. ಮಾನವತೆಯಲ್ಲಿ ಅಪಾರ ನಂಬಿಕೆಯುಳ್ಳವನು. ಇಲ್ಲಿ ಕೊಡುವುದೇನು? ಕೊಂಬುದೇನು? ಒಲವು ಸ್ನೇಹ ಪ್ರೀತಿ ಎಂಬುದನ್ನು ಚೆನ್ನಾಗಿ ಬಲ್ಲವನು ಅವನ ’ಡೆತ್ ವಿತ್ ಇಂಟರಪ್ಷನ್’ ಕಾದಂಬರಿಯಲ್ಲಿ ಒಂದು ಅನಾಮಧೇಯ ಊರಿನಲ್ಲಿ, ಯಾರೂ ಸಾಯದಂತಾಗಲು, ಸೃಷ್ಟಿಯಾಗುವ ಅರಾಜಕತೆಯ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಾನೆ. ಯಾರೇ ಆಗಲಿ, ಸಾಯುವಂತಿದ್ದರೂ ಸಾಯುವುದಿಲ್ಲ. ಚರ್ಚಿನಲ್ಲಿ ಬೇಸರ ಅಶಾಂತಿಗಳು ಸೃಷ್ಟಿಯಾಗುತ್ತವೆ. ಶವಸಂಸ್ಕಾರಕ್ಕೆ ಅಗತ್ಯ ವಸ್ತುಗಳ ಮಾರಾಟಗಾರರು ಕೊಳ್ಳುವವರಿಲ್ಲದೆ ದಿವಾಳಿಯಾಗುತ್ತಾರೆ. ಸಾವು ಒಬ್ಬ ವೀಣಾವಾದಕನ ಪ್ರೇಮದಲ್ಲಿ ಸಿಲುಕಿದೆ. ಆದ್ದರಿಂದಲೇ ಸಂತೋಷವಾಗಿದೆ. ಸಾವಿಗೇ ಸಾವಿನ ಭಯವಿಲ್ಲ! ಆದರೆ ಅಂತಿಮವಾಗಿ ಸಾವು ಮರಳಿ ಬರುತ್ತದೆ. ಬೇರೆ ಅವತಾರದಲ್ಲಿ. ಅತ್ಯಂತ ವಿನಯದೊಂದಿಗೆ, ಸಾಯಲಿರುವ ವ್ಯಕ್ತಿಗೆ ಒಂದು ಎಚ್ಚರಿಕೆಯ ಪತ್ರ ಕಳಿಸುತ್ತದೆ. ಪ್ರೀತಿ, ಪ್ರೇಮ ಎನ್ನುವುದು ಎಷ್ಟೆಲ್ಲ ಬದಲಾವಣೆಗಳನ್ನು ತರುತ್ತದೆ! [ಅದೇ, ಪುಟ xiii]

ಹೀಗೆ ಬ್ಲೈಂಡ್‌ನೆಸ್ ಕಾದಂಬರಿಯಲ್ಲೂ ಡಾಕ್ಟರ್‌ನ ಹೆಂಡತಿ, ಗುಂಪಿನ ಸಂಘಟಿತ ಬದುಕನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಕಪ್ಪು ಕನ್ನಡಕದ ಹುಡುಗಿ, ತನ್ನ ಪಾಲಿನ ಆಹಾರವನ್ನೂ ಹುಡುಗನಿಗೆ ನೀಡುತ್ತಾಳೆ. ಅಲ್ಲದೆ, ಪ್ರೀತಿಗಾಗಿ, ಗುಂಪನ್ನು ತೊರೆಯಲು ಮುಂದಾಗುತ್ತಾಳೆ. ಡಾಕ್ಟರನ ಹೆಂಡತಿಯಂತೂ ತನ್ನ ಗುಂಪಿನ ಪ್ರತಿಯೊಬ್ಬರ ಅಗತ್ಯಗಳನ್ನೂ ಪೂರೈಸುತ್ತಾಳೆ. ತನ್ನ ಮನೆಯಲ್ಲಿಯೇ ಇರಿಸಿಕೊಂಡು, ತಾನೇ ಸ್ವತಃ ಆಹಾರವನ್ನು ಹುಡುಕಿಕೊಂಡು ಹೋಗಿ ಎಷ್ಟೋ ಅಪಾಯಗಳನ್ನು ಎದುರಿಸುತ್ತಾ, ಆಹಾರ ತಂದು ಗುಂಪಿನ ಸದಸ್ಯರೆಲ್ಲರ ಹೊಟ್ಟೆ ತುಂಬಿಸುತ್ತಾಳೆ. ಅವರಿಗೆ ಬಟ್ಟೆ ಬರೆ ಒದಗಿಸುತ್ತಾಳೆ. ಅವರ ಶುಚಿತ್ವಕ್ಕೂ ಗಮನ ಕೊಡುತ್ತಾಳೆ. ಇನ್ನೂ ಅವಳಲ್ಲಿ ಮನುಷ್ಯತ್ವ ಬದುಕಿದೆ ಎನ್ನುವುದು ಸತ್ಯವೇ. [ಅದೇ, ಪುಟ xvi]

ಕಾದಂಬರಿಯ ಮುಕ್ತಾಯದಲ್ಲಿ ಕಣ್ಣಿನ ಡಾಕ್ಟರ್ ಮತ್ತು ಅವನ ಹೆಂಡತಿಯ ಗುಂಪಿನ ಎಲ್ಲರಿಗೂ ದಿಢೀರನೆ ಮತ್ತೆ ದೃಷ್ಟಿ ಮರಳುತ್ತದೆ. ಆ ಸ್ವರ್ಗದ ಬೆಳಕಿನಿಂದ ಚ್ಯುತಿಗೊಂಡವರೆಲ್ಲ ಪುನಃ ಆ ಸ್ವರ್ಗದ ಬೆಳಕನ್ನು ಕಂಡು ಉಲ್ಲಸಿತರಾಗುತ್ತಾರೆ. ಡಾಕ್ಟರನ ಹೆಂಡತಿಯ ಕಣ್ಣೀರು ನೆಕ್ಕಿ ಸಾಂತ್ವನಗೊಳಿಸಿದ ’ಕಂಬನಿ ನಾಯಿ’ ಕುವೆಂಪು ಅವರ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆ ಅವಳೊಂದಿಗೇ ಇದೆ. ಕಣ್ಣೀರು ಉಪ್ಪು- ಆ ಋಣ ತೀರಿಸಲೋ ಎಂಬಂತೆ!

ಆದರೆ ದೃಷ್ಟಿ ಮರಳಿದವರೂ ಕುರುಡರಂತೆಯೇ ವರ್ತಿಸುತ್ತಿದ್ದರು. ಇದು ವಾಸ್ತವ ಲೋಕ. ಆಗ ಕುರುಡಾಗಿಯೂ ನೋಡಬಲ್ಲವರಾಗಿದ್ದರು. ಈಗ ನೋಡಬಲ್ಲವರೂ ನೋಡಲಾಗದ ಕುರುಡರಾಗಿದ್ದರು! ಜೋಸೆ ಸರಮಾಗೋನ ಬ್ಲೈಂಡ್‌ನೆಸ್ ಒಂದು ಎಪಿಕ್ ಕಾದಂಬರಿ. ಸ್ಮಶಾನ ಕುರುಕ್ಷೇತ್ರದಂತೆ.

ಇಂಥ ಒಂದು ಕೃತಿಯನ್ನು ಕನ್ನಡದಕ್ಕೆ ತಂದ ಡಾ. ವಿಜಯಾ ಸುಬ್ಬರಾಜ್ ಅವರಿಗೂ ಇದನ್ನು ಪ್ರಕಾಶಪಡಿಸಿದ ಸೃಷ್ಟಿ ನಾಗೇಶ್‌ರಿಗೂ ಅಭಿನಂದನೆಗಳು ಸಲ್ಲಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...