Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-3: ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3: ಭಾಗ-4)

- Advertisement -
- Advertisement -

ಈಗ ಜನರಲ್‌ಗೆ ತೃಪ್ತಿಯಾಯಿತು. ತಾನು ಉನ್ಮಾದಗೊಂಡು ಅತಿರೇಕಕ್ಕೆ ಹೋದದ್ದರ ಬಗ್ಗೆ ಪಶ್ಚಾತ್ತಾಪಪಡುತ್ತಿದ್ದುದು ಕಾಣಿಸುತ್ತಿತ್ತು. ಅವನು ಪ್ರಿನ್ಸ್ ಕಡೆಗೆ ತಿರುಗಿ ನೋಡಿದ, ಮತ್ತು ಇದ್ದಕ್ಕಿದ್ದಂತೆ ಅವನ ಉಪಸ್ಥಿತಿಯ ಬಗ್ಗೆ ಉಂಟಾದ ತಿರಸ್ಕಾರದ ಭಾವ ಅವನನ್ನು ಆವರಿಸಿಕೊಂಡಿತು. ಖಂಡಿತವಾಗಿಯೂ ಈ ಸಂಭಾಷಣೆಯ ಪ್ರತಿಯೊಂದು ವಾಕ್ಯವನ್ನೂ ಅವನು ಕೇಳಿಸಿಕೊಂಡಿರಬಹುದೆಂದು. ಆದರೆ ಮರುಕ್ಷಣದಲ್ಲಿಯೇ ಅವನು ಸಮಾಧಾನಗೊಂಡ; ಅದಕ್ಕೆ ಬೇಕಾಗಿದ್ದು ಪ್ರಿನ್ಸ್‌ನ ಕಡೆಗೆ ಒಂದು ನೋಟ ಮಾತ್ರ ಮತ್ತು ಅವನಿಂದ ಭಯಪಡಬೇಕಾದದ್ದು ಏನು ಇಲ್ಲ ಅನ್ನುವುದನ್ನ ತಿಳಿಯುವುದಕ್ಕೆ ಅಷ್ಟೇ ಸಾಕಾಗಿತ್ತು.

“ಓ”, ಈಗ ಪ್ರಿನ್ಸ್ ಅವನ ಕೈಗೆ ತಾನು ಬರೆದಿದ್ದ ಸುಂದರವಾದ ಬರಹವನ್ನ ಪರಿಶೀಲಿಸುವುದಕ್ಕೋಸ್ಕರ ಕೊಟ್ಟ ನಂತರ ಅದನ್ನ ನೋಡಿ, ಜನರಲ್ ಜೋರಾಗಿ ಉದ್ಗರಿಸಿದ. “ಏಕೆ, ಇಷ್ಟು ಸುಂದರವಾಗಿದೆ ಇದು; ಅದನ್ನು ನೋಡು ಗಾನಿಯಾ, ಅದರಲ್ಲಿ ನಿಜವಾದ ಪ್ರತಿಭೆ ಅಡಗಿದೆಯಲ್ಲವೇ!”

ಪ್ರಿನ್ಸ್ ಒಂದು ದಪ್ಪಗಿನ ಬರೆಯುವ ಕಾಗದದ ಮೇಲೆ ಮಧ್ಯಯುಗದ ರಷ್ಯ ಭಾಷೆಯ ಅಕ್ಷರಗಳನ್ನ ಬರೆದಿದ್ದ: “ಅಬ್ಬಾಟ್ ಪಾಫ್ನ್ಯೂಟ್‌ನಾದ ನಾನು ಸೈನ್ ಮಾಡಿದ್ದೇನೆ.”

“ಅದೇ”, ಪ್ರಿನ್ಸ್ ಉತ್ಕೃಷ್ಟವಾದ ಸಂತೊಷ ಮತ್ತು ಉತ್ಸಾಹದಿಂದ ವಿವರಿಸಿದ, “ಅದೇ, ಅಬ್ಬಾಟ್‌ನ ನಿಜವಾದ ರುಜು- ಹದಿನಾಲ್ಕನೇ ಶತಮಾನದ ಹಸ್ತಪ್ರತಿಯಲ್ಲಿದ್ದದ್ದು. ಈ ಎಲ್ಲಾ ಅಬ್ಬಾಟ್‌ಗಳು ಮತ್ತು ಬಿಶಪ್‌ಗಳು ಉತ್ತಮ ಅಭಿರುಚಿ, ಎಚ್ಚರ ಮತ್ತು ಶ್ರದ್ಧೆಯಿಂದ ಬಹಳ ಸುಂದರವಾದ ಹಸ್ತಾಕ್ಷರದಲ್ಲಿ ಬರೆಯುತ್ತಿದ್ದರು. ನಿಮ್ಮ ಹತ್ತಿರ ಪೊಗೊಡಿನ್ ಅವರ ಹಸ್ತಾಕ್ಷರದ ಪ್ರತಿ ಇಲ್ಲವಾ ಜನರಲ್? ನಿಮ್ಮ ಹತ್ತಿರ ಇದ್ದರೆ ನಿಮಗೆ ಇನ್ನೊಂದು ವಿಧದ ಬರಹವನ್ನ ತೋರಿಸಬಲ್ಲೆ. ಸ್ವಲ್ಪ ಇರಿ-ಇಲ್ಲಿರುವುದನ್ನ ನೋಡಿ, ಇದು ಫ್ರಾನ್ಸ್‌ನಲ್ಲಿ ಸಾಮಾನ್ಯವಾಗಿ ಹದಿನೆಂಟನೇ ಶತಮಾನದಲ್ಲಿ ಬಳಕೆಯಲ್ಲಿದ್ದ ದೊಡ್ಡದಾದ ಗುಂಡಗಿನ ಅಕ್ಷರಗಳು. ಈಗ ಅಳವಡಿಸಿಕೊಂಡಿರುವ ಅಕ್ಷರಗಳ ಆಕಾರಕ್ಕಿಂತ ಬಹಳವಾಗಿ ವಿಭಿನ್ನವಾಗಿವೆ. ಅದು ಆಗಿನ ಕಾಲದಲ್ಲಿನ ಬರಹದ ಶೈಲಿ ಮತ್ತು ಸಾಮಾನ್ಯವಾಗಿ ಸಾರ್ವಜನಿಕ ಬರಹಗಾರರು ಅದನ್ನ ಅಳವಡಿಸಿಕೊಂಡಿದ್ದರು. ನಾನಿದನ್ನ ಅದರ ಪ್ರತಿಯೊಂದರಿಂದ ನಕಲು ಮಾಡಿಕೊಂಡೆ, ಅಲ್ಲಿನ ದುಂಡಗಿನ ಎ ಮತ್ತು ಡಿ ಎಷ್ಟು ಚೆನ್ನಾಗಿವೆ ಎನ್ನುವುದನ್ನ ನೀವೇ ಕಾಣಬಹುದು. ನಾನು ಈ ಫ್ರೆಂಚ್ ಅಕ್ಷರಗಳನ್ನು ರಷ್ಯನ್ ಅಕ್ಷರಗಳಿಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಿದೆ. ಬಹಳ ಕಷ್ಟಕರವಾದಂತಹ ಕೆಲಸ, ಆದರೆ ನನಗನಿಸುವುದು ನಾನದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದೇನೆ ಎಂದು. ಇಲ್ಲೊಂದು ಸುಂದರ ವಾಕ್ಯ ಇದೆ ನೋಡಿ. ಅದನ್ನು ಬಹಳ ಒಳ್ಳೆಯ, ಮೂಲ ಹಸ್ತಾಕ್ಷರದಲ್ಲಿ ಬರೆಯಲಾಗಿದೆ-’ಹುರುಪು ಎಲ್ಲದರ ಮೇಲೂ ಜಯಗಳಿಸುತ್ತದೆ, Zeal triumphs over all’. ಅದೊಂದು ರಷ್ಯದ ಯುದ್ಧದ ಕಚೇರಿಯಲ್ಲಿನ ಕೈಬರವಣಿಗೆ. ಪ್ರಮುಖ ವ್ಯಕ್ತಿಗಳಿಗೆ ಸಂಬೋಧಿಸುವ ಬರವಣಿಗೆ ಈ ವಾಕ್ಯದಿಂದ ಪ್ರಾರಂಭವಾಗುತ್ತಿತ್ತು. ಅಕ್ಷರಗಳು ಗುಂಡಗೆ ಕಪ್ಪಗಿದ್ದವು, ಮತ್ತು ಶೈಲಿ ಸ್ವಲ್ಪ ಮಟ್ಟಿಗೆ ಗಮನಾರ್ಹವಾಗಿತ್ತು. ಒಬ್ಬ ಉತ್ತಮ ಶೈಲಿಗಾರ ಈ ರೀತಿಯ ಅಲಂಕಾರಗಳಿಗೆ ಅವಕಾಶ ಕೊಡುವುದಿಲ್ಲ, ಅಥವಾ ವಿನ್ಯಾಸಗಳನ್ನು ಪ್ರಯತ್ನಿಸುವುದಿಲ್ಲ. ಇಲ್ಲಿರುವ ಅಪೂರ್ಣಗೊಂಡ ಅಕ್ಷರದ ಬಾಲಗಳನ್ನು ನೋಡಿ! ಆದರೆ ಅದರಲ್ಲಿ ವಿಶಿಷ್ಟತೆಯಿದೆ ಮತ್ತು ಅದು ಬರಹಗಾರನ ಆತ್ಮವನ್ನ ಚಿತ್ರಿಸುತ್ತದೆ. ಇಲ್ಲಿ ಅವನು ತನ್ನ ಕಲ್ಪನಾಶಕ್ತಿಯ ಜತೆಗೆ ಆಟವಾಡಲು ಬಯಸುತ್ತಿದ್ದಾನೆ ಮತ್ತು ತನ್ನ ಅಸಾಧಾರಣವಾದ ಬುದ್ಧಿಶಕ್ತಿಯಿಂದ ಉಂಟಾದ ಸ್ಫೂರ್ತಿಯನ್ನ ಅನುಸರಿಸುತ್ತಿದ್ದಾನೆ, ಆದರೆ ಒಬ್ಬ ಸೈನಿಕ ತನ್ನ ಕಾವಲು ಕೊಠಡಿಯಲ್ಲಿ ಮಾತ್ರ ನಿಶ್ಚಿಂತೆಯಿಂದ ಇರುತ್ತಾನೆ ಮತ್ತು ಲೇಖನಿ ಅರ್ಧದಾರಿಯಲ್ಲಿಯೇ ನಿಂತುಬಿಡುತ್ತದೆ, ಅದು ಶಿಸ್ತಿಗೆ ಗುಲಾಮನಾಗಿದೆ. ಎಷ್ಟು ಉಲ್ಲಾಸಕಾರಿಯಾಗಿದೆ! ನಾನು ಇದರಿಂದ ಧನಾತ್ಮಕವಾಗಿ ಬೆರಗುಗೊಂಡಿದ್ದೇನೆ, ಈ ರೀತಿಯ ಹಸ್ತಾಕ್ಷರದ ಉದಾಹರಣೆ ನನಗೆ ಅಕಸ್ಮಾತ್ತಾಗಿ ಮೊದಲಬಾರಿಗೆ ಸಿಕ್ಕಿದ್ದು ಎಲ್ಲಿ ಗೊತ್ತೇ? ಎಲ್ಲಾ ಬಿಟ್ಟು ಸ್ವಿಟ್ಜರ್ಲೆಂಡಿನಲ್ಲಿ! ಈಗ ಅದೊಂದು ಸಾಮಾನ್ಯವಾದ ಇಂಗ್ಲೀಷಿನ ಕೈಬರಹ. ಅದನ್ನು ಇನ್ನೇನೂ ಉತ್ತಮಗೊಳಿಸಬೇಕಾಗಿಲ್ಲ, ಅದೆನ್ನೆಷ್ಟು ಸಂಸ್ಕರಿಸಲಾಗಿದೆ ಮತ್ತು ಅದೆಷ್ಟು ಅಂದವಾಗಿದೆ ಅಂದರೆ – ಅದು ಬಹುತೇಕ ಪರಿಪೂರ್ಣತೆಯಿಂದ ಕೂಡಿದೆ. ಇದು ಮತ್ತೊಂದು ರೀತಿಯದ್ದರ ಉದಾಹರಣೆ, ಶೈಲಿಗಳ ಮಿಶ್ರಣ. ಇದರ ಪ್ರತಿಯನ್ನ ಒಬ್ಬ ಫ್ರೆಂಚ್‌ನ ವ್ಯಾಪಾರಿ ಪ್ರಯಾಣಿಕ ನನಗೆ ಕೊಟ್ಟ. ಅದರ ತಳಹದಿ ಮಾತ್ರ ಇಂಗ್ಲಿಷ್, ಆದರೆ ಕೆಳಗಿನ ಗೀಟುಗಳು ಸ್ವಲ್ಪ ಹೆಚ್ಚು ಕಪ್ಪುಬಣ್ಣದ್ದಾಗಿದೆ ಮತ್ತು ಹೆಚ್ಚು ಮಾರ್ಕ್ ಆಗಿದೆ. ಅದರಲ್ಲಿರುವ ಅಂಡಾಕಾರದಲ್ಲಿ ಸ್ವಲ್ಪ ಮಾರ್ಪಾಡಾದಂತಿದೆ, ಅದು ಹೆಚ್ಚು ದುಂಡಾಗಿದೆ, ಈ ಬರಹ ಇನ್ನಷ್ಟು ಬೆಳವಣಿಗೆಗೆ ಅವಕಾಶ ನೀಡುತ್ತದೆ; ಈಗ ಬೆಳವಣಿಗೆ ಅಪಾಯಕಾರಿಯಾದ ವಿಷಯ! ಅದನ್ನ ಉಪಯೋಗಿಸುವುದಕ್ಕೆ ಬೇಕಾಗಿರುವುದು ಅಭಿರುಚಿ, ಆದರೆ ಅದೊಮ್ಮೆ ಯಶಸ್ವಿಯಾಗಿಬಿಟ್ಟರೆ, ಅದು ಪರಿಪೂರ್ಣತೆಗೆ ಎಂಥ ವಿಶಿಷ್ಟತೆಯನ್ನು ಕೊಡುತ್ತದೆ! ಅದರ ಪರಿಣಾಮವೇ ಹೋಲಿಸಲಾಗದಷ್ಟು ಸುಂದರ ಅಕ್ಷರ, ಯಾರೇ ಆದರೂ ಆಗಲಿ ಅದನ್ನು ಪ್ರೀತಿಸುವುದಂತೂ ನಿಶ್ಚಿತ!”

“ಪ್ರೀತಿ ಪಾತ್ರನೆ! ಹೇಗೆ ನೀನು ಈ ಪ್ರಶ್ನೆಯ ವಿವರಗಳು ಮತ್ತು ಪರಿಷ್ಕರಣೆಗಳ ಆಳವನ್ನ ಹೊಕ್ಕಿದ್ದೀಯ! ನೀನ್ಯಾಕೆ ಕ್ಯಾಲಿಗ್ರಾಫಿಸ್ಟ್ ಆಗಲಿಲ್ಲ, ನೀನೊಬ್ಬ ಕಲಾಕಾರ! ಹೌದಲ್ಲವ ಗಾನಿಯಾ?”

“ಅತ್ಯದ್ಭುತ” ಗಾನಿಯ ಹೇಳಿದ, “ಮತ್ತು ಅವನಿಗೂ ಕೂಡ ಇದು ತಿಳಿದಿದೆ”, ಅವನು ವ್ಯಂಗ್ಯದಿಂದ ಕೂಡಿದ ನಗುವಿನೊಂದಿಗೆ ಹೇಳಿದ.

“ನೀನು ನಗಬಹುದು, ಆದರೆ ಈ ವೃತ್ತಿಯಲ್ಲಿ ಉನ್ನತವಾದ ಭವಿಷ್ಯವಿದೆ” ಜನರಲ್ ಹೇಳಿದ. “ನಿನಗೆ ಗೊತ್ತಿಲ್ಲ ಪ್ರಿನ್ಸ್, ನಾನಿದನ್ನ ಎಂತೆಂತಹ ಶ್ರೇಷ್ಟ ವ್ಯಕ್ತಿಗಳಿಗೆ ತೋರಿಸುತ್ತೇನೆಂದು. ಶುರುವಿನಲ್ಲಿಯೇ ನೀನು ಮೂವತ್ತೈದು ರೂಬಲ್‌ನಷ್ಟು ಸಂಬಳವನ್ನ ತಕರಾರಿಲ್ಲದೇ ಪಡೆಯಬಹುದು. ಏನೇ ಆದರೂ ಈಗಾಗಲೇ ಹನ್ನೆರಡೂವರೆ ಗಂಟೆಯಾಗಿದೆ,” ಅವನು ತನ್ನ ಕೈಗಡಿಯಾರದ ಕಡೆಗೆ ನೋಡುತ್ತಾ ತನ್ನ ಮಾತನ್ನು ಮುಗಿಸಿದ; “ಈಗ ನನಗೆ ವ್ಯವಹಾರದ ಕೆಲಸಗಳಿವೆ ಪ್ರಿನ್ಸ್, ನಾನು ಇಂದು ಪುನಃ ನಿನ್ನನ್ನು ಕಾಣಲು ಸಾಧ್ಯವಿಲ್ಲ. ಒಂದು ನಿಮಿಷ ಕುಳಿತುಕೊ. ನಾನಾಗಲೇ ನಿನಗೆ ಹೇಳಿದ್ದೇನೆ ನಾನು ನಿನ್ನನ್ನು ಆಗಾಗ್ಗೆ ಭೇಟಿಮಾಡಲು; ಸಾಧ್ಯವಿಲ್ಲ ಎಂದು ಆದರೆ ನಾನು ನಿನಗೆ ಸ್ವಲ್ಪ ಸಹಾಯವನ್ನು ಮಾಡಲು ಇಚ್ಚಿಸುತ್ತೇನೆ, ಸಣ್ಣ ಸಹಾಯ, ನಿನಗೆ ತೃಪ್ತಿಯಾಗುವ ತರಹದ್ದು. ಸರ್ಕಾರೀ ಇಲಾಖೆಯಲ್ಲಿ ನಿನಗೊಂದು ಕೆಲಸವನ್ನ ಕೊಡಿಸುತ್ತೇನೆ, ಸುಲಭವಾದ ಕೆಲಸ. ಆದರೆ ನೀನು ನಿನ್ನ ಕೆಲಸಗಳಲ್ಲಿ ನಿಖರತೆಯನ್ನ ಪ್ರದರ್ಶಿಸಬೇಕು. ಈಗ ನಿನ್ನ ಮುಂದಿನ ಯೋಜನೆಗಳ ಬಗ್ಗೆ- ಮನೆಯಲ್ಲಿ ಅಂದರೆ ಇಲ್ಲಿರುವ ನನ್ನ ಯುವಕ ಸ್ನೇಹಿತ ಗಾನಿಯಾನ ಮನೆಯಲ್ಲಿ- ಯಾರನ್ನು ಮುಂದೆ ನೀನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀಯೊ, ಅವನ ತಾಯಿ ಮತ್ತು ಸೋದರಿ ವಸತಿಗಾಗಿ ಬಾಡಿಗೆಗೆ ಕೊಡುವುದಕ್ಕೆ ಮೂರು ಕೋಣೆಗಳನ್ನ ಕಟ್ಟಿಸಿದ್ದಾರೆ ಮತ್ತು ಅದನ್ನ ಯುವಕರಿಗೆ ಇನ್ನಷ್ಟು ಅನುಕೂಲತೆಯೊಂದಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ನನ್ನ ಶಿಫಾರಸ್ಸಿನ ಮೇರೆಗೆ ಖಂಡಿತವಾಗಿಯೂ ನೀನ ಅಲೆಕ್ಸಾಂಡ್ರೊವ್ನ ನಿನ್ನನ್ನು ಅಲ್ಲಿಗೆ ಸೇರಿಸಿಕೊಳ್ಳುತ್ತಾರೆ ಅನ್ನುವ ನಂಬಿಕೆ ನನಗಿದೆ. ಅಲ್ಲಿ ನೀನು ಆರಾಮದಾಯಕವಾಗಿರಬಹುದು, ನಿನ್ನನ್ನು ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ; ನಿನ್ನಂತಹವನನ್ನು ಈ ಪೀಟರ್ಸಬರ್ಗ್ ಅಂತಹ ನಗರದಲ್ಲಿ ವಿಧಿಯ ಆಟಕ್ಕೆ ಒಡ್ಡುವುದು ಸರಿಯಲ್ಲ. ನೀನ ಅಲೆಕ್ಸಾಂಡ್ರೊವ್ನ, ಗಾನಿಯಾನ ತಾಯಿ, ಮತ್ತು ಮಗಳು ವಾರ್ವರ ಅಲೆಕ್ಸಾಂಡ್ರೊವ್ನ, ಈ ಇಬ್ಬರೂ ಹೆಂಗಸರ ಬಗ್ಗೆ ನನಗೆ ಅತೀವವಾದ ಗೌರವ ಮತ್ತು ಮರ್ಯಾದೆ ಇದೆ. ನೀನ ಅಲೆಕ್ಸಾಂಡ್ರೊವ್ನ ಜನರಲ್ ಆರ್ಡಾಲಿಯನ್ ಅಲೆಕ್ಸಾಂಡ್ರೊವಿಚ್ ಅವರ ಪತ್ನಿ, ಅವನು ಯುದ್ಧಕಾಲದಲ್ಲಿ ನನ್ನ ಜೊತೆಯಲ್ಲಿಯೇ ಹೋರಾಡಿದ ಸಹೋದ್ಯೋಗಿ. ಮತ್ತು ಅವನ ಜೊತೆಯಲ್ಲೀಗ ನಾನು ಯಾವುದೋ ಒಂದು ಪರಿಸ್ಥಿತಿಯ ಕಾರಣದಿಂದ ಸಂಪರ್ಕವನ್ನ ಹೊಂದಿಲ್ಲ. ನಾನು ನಿನಗೆ ಈ ಎಲ್ಲಾ ಮಾಹಿತಿಯನ್ನ ಕೊಡುತ್ತಿರುವ ಕಾರಣ ಏನೆಂದರೆ ಪ್ರಿನ್ಸ್, ನಾನು ನನ್ನ ವೈಯಕ್ತಿಕವಾದ ಆಸಕ್ತಿಯಿಂದ ನಿನ್ನನ್ನು ಆ ಕುಟುಂಬಕ್ಕೆ ಶಿಫಾರಸ್ಸು ಮಾಡುತ್ತಿದ್ದೇನೆ ಅನ್ನುವುದನ್ನ ನಿನಗೆ ಮನದಟ್ಟು ಮಾಡಿಕೊಡಲು ಮತ್ತು ಹಾಗೆ ಮಾಡುವುದರಿಂದ, ನಾನು ನಿನ್ನ ಪರವಾಗಿ ಅವರಿಗೆ ಉತ್ತರಿಸುವ ಜವಾಬ್ದಾರಿಯನ್ನ ನನ್ನ ಮೇಲೆ ಹೇರಿಕೊಳ್ಳುತ್ತಿದ್ದೇನೆ. ಷರತ್ತುಗಳೆಲ್ಲವೂ ಒಪ್ಪಿಕೊಳ್ಳುವಂತಹವೇ, ನನಗೆ ನಂಬಿಕೆಯಿದೆ, ನಿನಗೆ ಬರುವ ಸಂಬಳದಲ್ಲಿ ನಿನ್ನ ಖರ್ಚನ್ನ ನಿಬಾಯಿಸಬಹುದೆಂದು, ನಿನ್ನ ಇತರೇ ಖರ್ಚಿಗೂ ಖಂಡಿತವಾಗಿಯೂ ಹಣ ಸಾಕಾಗುತ್ತದೆ; ಅದು ಇತಿಮಿತಿಯಲ್ಲಿದ್ದರೆ ಮಾತ್ರ; ನಿನ್ನ ಜೇಬಿನಲ್ಲಿ ಹಣವನ್ನು ಇಟ್ಟುಕೊಂಡು ಹೋಗದೇ ಇದ್ದರೆ ಒಳ್ಳೆಯದು ಎಂದು ನಾನು ನಿನಗೆ ಸಲಹೆ ನೀಡಿದರೆ ನನ್ನ ಮೇಲೆ ಕೋಪಗೊಳ್ಳಬೇಡ ಪ್ರಿನ್ಸ್. ಈಗ ಈ ಕ್ಷಣದಲ್ಲಿ ನಿನ್ನ ಪರ್ಸ್ ಸಾಕಷ್ಟು ಖಾಲಿ ಇರುವುದರಿಂದ, ನಾನು ಕೊಡುವ ಈ ಇಪ್ಪತ್ತೈದು ರೂಬಲ್ಲುಗಳನ್ನು ತೆಗೆದುಕೊಳ್ಳಲೇಬೇಕು, ಎಲ್ಲವನ್ನೂ ಶುರುಮಾಡುವುದಕ್ಕೆ ಅದರ ಅಗತ್ಯ ಇದ್ದೇ ಇರುತ್ತದೆ. ಇದರ ಲೆಕ್ಕವನ್ನು ಇನ್ನೊಮ್ಮೆ ಯಾವಾಗಲಾದರೂ ಚುಕ್ತ ಮಾಡುವೆಯಂತೆ ಮತ್ತು ನೀನು ಎದುರಿಗೆ ಕಾಣುವಂತೆಯೇ ಪ್ರಾಮಾಣಿಕನಾಗಿದ್ದರೆ, ನಮ್ಮಿಬ್ಬರ ಮಧ್ಯೆ ಯಾವುದೇ ತೊಂದರೆಯನ್ನು ನಾನು ಈ ವಿಷಯದಲ್ಲಿ ನಿರೀಕ್ಷಿಸುವುದಿಲ್ಲ. ನೀನು ಗ್ರಹಿಸಿರಬಹುದಾದಂತೆ, ನಾನು ನಿನ್ನ ಬಗ್ಗೆ ಇಷ್ಟೊಂದು ಆಸಕ್ತಿವಹಿಸಿರುವುದು ಯಾವುದೇ ರೀತಿಯ ನಿರ್ದಿಷ್ಟವಾದ ಉದ್ದೇಶವಿಲ್ಲದೇ ಇಲ್ಲ ಅಂತಲೂ ಅಲ್ಲ. ಸರಿಯಾದ ಸಮಯ ಬಂದಾಗ ಅದನ್ನು ನೀನು ತಿಳಿದುಕೊಳ್ಳುತ್ತೀಯ. ನೋಡು ನಾನು ನಿನ್ನ ಹತ್ತಿರ ಸಂಪೂರ್ಣವಾಗಿ ಮುಚ್ಚುಮರೆಯಿಲ್ಲದೆ ಮಾತನಾಡುತ್ತಿದ್ದೇನೆ. ಗಾನಿಯಾ, ಪ್ರಿನ್ಸ್ ನಿಮ್ಮ ಮನೆಯಲ್ಲಿನ ಬಾಡಿಗೆಗೆ ಇರುವ ವಸತಿಯಲ್ಲಿ ಇರುವುದರ ಬಗ್ಗೆ ನಿನ್ನ ಅಭ್ಯಂತರವೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-2)

“ಓ, ಅದಕ್ಕೆ ತದ್ವಿರುದ್ಧವಾಗಿ! ನನ್ನ ತಾಯಿಗೆ ಬಹಳ ಸಂತೋಷವಾಗುತ್ತದೆ” ಗಾನಿಯಾ ಸೌಜನ್ಯದಿಂದ ಮತ್ತು ಕರುಣೆಯಿಂದ ಹೇಳಿದ.

“ನನ್ನ ಪ್ರಕಾರ ನಿಮ್ಮ ಆ ರೂಮುಗಳಲ್ಲಿ ಒಂದನ್ನು ಮಾತ್ರ ಇವತ್ತಿನವರೆಗೂ ಬಾಡಿಗೆಗೆ ಕೊಟ್ಟಿರುವುದು ಅಲ್ಲವಾ? ಅದೇ ಆ ಮನುಷ್ಯ ಫರ್ಡ್ ಅನ್ನುವವನಿಗೆ-”

“ಫರ್ಡಿಶೆಂಕೊ.”

“ಹೌದು, ನಾನು ಆ ಫರ್ಡಿಶೆಂಕೊನನ್ನು ಇಷ್ಟಪಡುವುದಿಲ್ಲ. ನಸ್ಟಾಸಿಯ ಫಿಲಿಪೊವ್ನ ಅವನನ್ನು ಯಾಕೆ ಅಷ್ಟೊಂದು ಪ್ರೋತ್ಸಾಹಿಸುತ್ತಾಳೆ ಅನ್ನುವುದೇ ನನಗೆ ಅರ್ಥವಾಗುವುದಿಲ್ಲ. ಅವನು ಹೇಳುವಂತೆಯೇ ಅವನು ನಿಜವಾಗಲೂ ಅವಳ ಕಸಿನ್ ಹೌದ?”

“ಓ, ಇಲ್ಲ, ಅದೊಂದು ತಮಾಷೆ ಅಷ್ಟೆ, ನಾನೂ ಅವಳಿಗೆ ಕಸಿನ್ ಅಂತಾದರೆ ಅವನೂ ಅವಳ ಕಸಿನ್ನೇ.”

“ಸರಿ, ಈ ವ್ಯವಸ್ಥೆಯ ಬಗ್ಗೆ ನಿನಗೇನನ್ನಿಸುತ್ತದೆ ಪ್ರಿನ್ಸ್?”

“ಧನ್ಯವಾದಗಳು ಜನರಲ್; ನೀವು ನನ್ನ ವಿಷಯದಲ್ಲಿ ಬಹಳವಾಗಿ ದಯಾಪರತೆಯನ್ನು ತೋರಿಸಿದ್ದೀರಿ; ಅದಕ್ಕಿಂತ ಹೆಚ್ಚಾಗಿ ನಾನು ಸಹಾಯಮಾಡಲು ಏನನ್ನೂ ಕೇಳದೆ ಇದ್ದರೂ ಕೂಡ. ನಾನಿದನ್ನು ಜಂಭದಿಂದ ಹೇಳುತ್ತಿಲ್ಲ. ನನಗೆ ನಿಜವಾಗಲೂ ಇಂದಿನ ರಾತ್ರಿ ನನ್ನ ತಲೆಯನ್ನ ಎಲ್ಲಿಟ್ಟು ನಿದ್ರಿಸುವುದು ಎಂದು ತಿಳಿದಿರಲಿಲ್ಲ. ರೊಗೊಜಿನ್ ತನ್ನ ಮನೆಗೆ ಬಾ ಎಂದು ಕರೆದಿದ್ದ, ಆದರೆ….”

“ರೊಗೊಜಿನ್ನ? ಬೇಡ ಬೇಡ ನನ್ನ ಸ್ನೇಹಿತನೇ. ನಾನು ನಿನಗೆ ನಿನ್ನ ತಂದೆಯ ರೀತಿ ಸಲಹೆ ನೀಡುವುದೇನೆಂದರೆ, ಅಥವಾ ನಿನ್ನ ಸ್ನೇಹಿತ ಎಂದುಕೊಳ್ಳಲು ಇಷ್ಟಪಟ್ಟರೆ, ರೊಗೊಜಿನ್ ಬಗ್ಗೆ ಎಲ್ಲವನ್ನೂ ಮರೆತುಬಿಡು. ನಿಜವಾಗಲೂ ನೀನೀಗ ಹೋಗುತ್ತಿರುವ ಕುಟುಂಬಕ್ಕೆ ಬದ್ಧನಾಗಿದ್ದುಬಿಡು.”

“ಧನ್ಯವಾದಗಳು” ಪ್ರಿನ್ಸ್ ಪ್ರಾರಂಭಿಸಿದ;

“ನೀವು ನನ್ನ ಬಗ್ಗೆ ಇಷ್ಟೊಂದು ಕರುಣೆಯನ್ನ ತೋರಿಸುತ್ತಿರುವುದರಿಂದ ನಾನು ಒಂದು ವಿಷಯವನ್ನ-”

“ಈಗ ನೀನು ನನ್ನನ್ನು ಕ್ಷಮಿಸಲೇಬೇಕು” ಮಧ್ಯದಲ್ಲೇ ಅವನ ಮಾತಿಗೆ ಜನರಲ್ ಅಡ್ಡಿ ಬಂದ, “ನಿಜವಾಗಿಯೂ ನನಗೀಗ ಒಂದು ಕ್ಷಣವೂ ಬಿಡುವಿಲ್ಲ. ನಾನೀಗಲೇ ಎಲಿಜಬೆತ ಪ್ರೊಕೊಫಿಯೆವ್ನಳಿಗೆ ನಿನ್ನ ಬಗ್ಗೆ ಹೇಳುತ್ತೇನೆ, ಅವಳು ಈ ತಕ್ಷಣವೇ ನಿನ್ನ ಭೇಟಿಗೆ ಸಮ್ಮತಿಸಿದರೆ, ನಾನೂ ಅವಳಿಗೆ ಅದನ್ನೇ ಸಲಹೆಯ ರೀತಿಯಲ್ಲಿ ತಿಳಿಸುತ್ತೇನೆ. ನಾನು ನಿನಗೆ ಒತ್ತುಕೊಟ್ಟು ಹೇಳುವುದೇನೆಂದರೆ ಅವಳನ್ನು ಭೇಟಿಯಾಗಿ, ಅವಕಾಶ ಸಿಕ್ಕಿದ ತಕ್ಷಣ ಕೃತಜ್ಞತೆಯನ್ನ ಸಲ್ಲಿಸು, ಕಾರಣ ನನ್ನ ಹೆಂಡತಿ ನಿನಗೆ ಬೇಕಾದಷ್ಟು ರೀತಿಗಳಲ್ಲಿ ನಿನ್ನ ಸಹಾಯಕ್ಕೆ ಬರಬಹುದು. ಅವಳು ಈಗಲೇ ನಿನ್ನನ್ನು ಭೇಟಿಯಾಗಲು ಇಚ್ಛಿಸದಿದ್ದರೆ, ಇನ್ನೊಂದು ಕಾಲಾವಕಾಶಕ್ಕೆ ತಾಳ್ಮೆಯಿಂದ ಕಾಯಬೇಕು. ಏತನ್ಮಧ್ಯೆ, ನೀನು, ಗಾನಿಯಾ, ಆ ಲೆಕ್ಕಪತ್ರಗಳನ್ನು ಪರಾಮರ್ಶಿಸು, ಮಾಡುತ್ತೀಯ? ಆ ವಿಷಯವನ್ನ ಅರ್ಧಕ್ಕೆ ಬಿಡದೇ ಮುಗಿಸುವುದನ್ನ ನಾವು ಮರೆಯಬಾರದು-”

ಜನರಲ್ ರೂಮಿನಿಂದ ಆಚೆ ಹೋದರು, ಪ್ರಿನ್ಸ್ ಯಾವುದೊ ವ್ಯವಹಾರದ ಬಗ್ಗೆ ಮಾತನಾಡಲು ನಿರ್ಧರಿಸಿ ಬಂದವನಿಗೆ ಅದನ್ನು ಪ್ರಸ್ತಾಪಿಸಲು ನಾಲ್ಕು ಬಾರಿ ಪ್ರಯತ್ನಿಸಿದರೂ ಕೊನೆಗೂ ಅದಕ್ಕೆ ಅವಕಾಶವೇ ಸಿಗಲಿಲ್ಲ.

ಗಾನಿಯಾ ಒಂದು ಸಿಗರೇಟನ್ನು ಹತ್ತಿಸಿ ಒಂದನ್ನು ಪ್ರಿನ್ಸ್‌ಗೆ ಕೊಟ್ಟ. ಪ್ರಿನ್ಸ್ ಅದನ್ನು ಸ್ವೀಕರಿಸಿದ ಮತ್ತು ಏನನ್ನೂ ಮಾತನಾಡಲಿಲ್ಲ, ಕಾರಣ ಗಾನಿಯಾ ಮಾಡುತ್ತಿದ್ದ ಕೆಲಸಕ್ಕೆ ಅಡ್ಡಿ ಬರಲು ಅವನಿಗೆ ಇಷ್ಟವಾಗಲಿಲ್ಲ. ಅವನು ಇಡೀ ಓದುವ ಕೋಣೆಯನ್ನ ತಪಾಸಣೆ ಮಾಡಲು ಪ್ರಾರಂಭಿಸಿದ. ಗಾನಿಯ ಅವನ ಮುಂದಿದ್ದ ಕಾಗದ ಪತ್ರಗಳ ಕಡೆಗೆ ನೋಡುತ್ತಲೇ ಅನ್ಯಮನಸ್ಕನಾಗಿ ಯೋಚನಾಪರವಶನಾಗಿ ಕುಳಿತಿದ್ದ, ಅವನ ಸಾಮಾನ್ಯವಾದ ಬಾಹ್ಯ ನೋಟ ಪ್ರಿನ್ಸ್‌ಗೆ ಹೆಚ್ಚು ಮುಜುಗರವನ್ನ ಉಂಟು ಮಾಡಿತು, ಕಾರಣ ಆ ರೂಮಿನಲ್ಲಿ ಅವರಿಬ್ಬರೇ ಇದ್ದುದರಿಂದ.

ಗಾನಿಯ ಇದ್ದಕ್ಕಿದ್ದಂತೆ ನಸ್ಟಾಸಿಯ ಫಿಲಿಪೊವ್ನಳ ಚಿತ್ರವನ್ನ ವೀಕ್ಷಿಸುತ್ತ ಅದರ ಹತ್ತಿರವೇ ನಿಂತಿದ್ದ ನಮ್ಮ ನಾಯಕನ ಸಮೀಪಕ್ಕೆ ಬಂದ.

“ನೀನು ಆ ರೀತಿಯ ಹೆಂಗಸನ್ನ ಮೆಚ್ಚುತ್ತೀಯ ಪ್ರಿನ್ಸ್?” ಅವನ ಕಡೆಗೆ ತೀವ್ರತೆಯಿಂದ ನೋಡುತ್ತಾ ಅವನು ಕೇಳಿದ. ಅವನ ಪ್ರಶ್ನೆಯಲ್ಲಿ ಅದೇನೊ ಒಂದು ವಿಶೇಷವಾದ ಉದ್ದೇಶವಿರುವಂತೆ ಕಂಡಿತು.

“ಇದೊಂದು ಅದ್ಭುತವಾದ ಮುಖ” ಪ್ರಿನ್ಸ್ ಹೇಳಿದ. “ಮತ್ತೆ ನನಗೆ ಖಂಡಿತವಾಗಿ ಅನಿಸುವುದು ಅವಳ ಅದೃಷ್ಟ ಸಾಮಾನ್ಯ ರೀತಿಯದ್ದಾಗಿರುವುದಿಲ್ಲ ಮತ್ತು ಮಹತ್ವದಿಂದ ಕೂಡಿದ್ದಾಗಿರುತ್ತದೆ ಎಂದು, ಅವಳ ಮುಖ ಸಾಕಷ್ಟು ನಗುವನ್ನ ಸೂಸುತ್ತಿದೆ, ಆದರೆ ಅವಳು ಭಯಂಕರವಾದ ಸಂಕಷ್ಟವನ್ನ ಒಮ್ಮೆ ಅನುಭವಿಸಿದ್ದಾಳೆ ಅನ್ನುವುದೂ ಬಿಂಬಿತವಾಗುತ್ತಿದೆ. ಹೌದು ತಾನೆ? ಅವಳ ಕಣ್ಣುಗಳು ಅದನ್ನ ಬಿಂಬಿಸುತ್ತಿವೆ. ಅದೇ ಕಣ್ಣಿನ ಕೆಳಗಿನ ಆ ಎರಡು ಉಬ್ಬಿದ ಮೂಳೆಗಳು, ಅಂದರೆ ಅವಳ ಕೆನ್ನೆ ಎಲ್ಲಿಂದ ಪ್ರಾರಂಭವಾಗುತ್ತಿದೆಯೊ ಅದರಿಂದಲೂ ತಿಳಿಯುತ್ತದೆ. ಅವಳ ಮುಖ ಹೆಮ್ಮೆಯಿಂದ ಕೂಡಿದ ಮುಖ. ಭಯಂಕರವಾದ ಹೆಮ್ಮೆಯ ಮುಖ! ಮತ್ತು ನಾನು- ನಾನು ಅವಳು ಒಳ್ಳೆಯವಳೋ ಮತ್ತು ಕರುಣಾಮಯಿಯೋ ಅಥವಾ ಇಲ್ಲವೋ ಎಂದು ಹೇಳುವುದಿಲ್ಲ, ಓ ಅವಳು ಒಳ್ಳೆಯವಳೇ ಅಗಿದ್ದರೆ ಅದು ಒಳ್ಳೆಯದಕ್ಕೇ ಅಲ್ಲವೇ?”

“ನೀನು ಆ ರೀತಿಯ ಹೆಣ್ಣನ್ನು ಈಗ ಮದುವೆಯಾಗಲು ಒಪ್ಪುತ್ತೀಯ?” ತನ್ನ ಉದ್ದೀಪನಗೊಂಡ ಕಣ್ಣುಗಳನ್ನ ಪ್ರಿನ್ಸ್‌ನ ಮುಖದ ಕಡೆಯಿಂದ ಸರಿಸದೆ ಗಾನಿಯಾ ತನ್ನ ಮಾತನ್ನು ಮುಂದುವರಿಸಿ ಕೇಳಿದ.

“ನಾನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದ ಪ್ರಿನ್ಸ್. “ನಾನೊಬ್ಬ ವಿಕಲಚೇತನ.”

“ರೊಗೊಜಿನ್ ಅವಳನ್ನ ಮದುವೆಯಾಗಬಹುದ? ನಿನಗೆ ಹಾಗೆ ಅನಿಸುತ್ತದೆಯಾ?”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-1)

“ಯಾಕಿಲ್ಲ? ಖಂಡಿತ ಬೇಕಾದರೆ ಆಗುತ್ತಾನೆ. ನಾಳೆಯೇ ಬೇಕಾದರೆ ಆಗುತ್ತಾನೆ! ನಾಳೆ ಮದುವೆಯಾಗುತ್ತಾನೆ ಮತ್ತು ಒಂದು ವಾರದಲ್ಲಿಯೇ ಅವಳನ್ನ ಕೊಲೆಮಾಡುತ್ತಾನೆ!”

ಅವನು ತನ್ನ ಮಾತಿನ ಕೊನೆಯ ಪದವನ್ನ ಇನ್ನೂ ಹೇಳುತ್ತಿರುವಾಗಲೇ ಗಾನಿಯ ಭಯಭೀತನಾಗಿ ಗಡಗಡನೆ ಹೇಗೆ ನಡುಗಿದ ಎಂದರೆ ಪ್ರಿನ್ಸ್ ಕೂಗಿಕೊಂಡ.

ಗಾನಿಯಾನ ಕೈ ಹಿಡಿದುಕೊಂಡು “ಏನಾಯಿತು? ಏನು ವಿಷಯ?” ಅಂತ ಕೇಳಿದ.

“ಮಹನೀಯರೆ! ಯಜಮಾನರು ಯಜಮಾನಿಯವರ ವಸತಿಯಲ್ಲಿ ನಿಮ್ಮ ಉಪಸ್ಥಿತಿಯನ್ನ ಬಯಸುತ್ತಿದ್ದಾರೆ!” ಕಾಲಾಳು ಬಾಗಿಲ ಬಳಿ ಬಂದು ಘೋಷಿಸಿದ.

ಪ್ರಿನ್ಸ್ ತಕ್ಷಣ ಆ ಕಾಲಾಳುವನ್ನು ರೂಮಿನ ಹೊರಗಡೆಗೆ ಹಿಂಬಾಲಿಸಿ ನಡೆದ.

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೆಚ್ಚುವರಿ ಹಣ ಬೇಕಾದರೆ ಸುಪ್ರೀಂಕೋರ್ಟ್‌ನಿಂದ ಮೊಕದ್ದಮೆ ಹಿಂಪಡೆಯಿರಿ: ಕೇರಳ ಸರಕಾರಕ್ಕೆ ಹೇಳಿದ ಕೇಂದ್ರ

0
ಕೇರಳದ ಪ್ರಸ್ತುತ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿಯಾಗಿ 11,731 ಕೋಟಿ ರೂ.ಗಳ ಸಾಲವನ್ನು ಪಡೆಯಲು ಕೇರಳಕ್ಕೆ ಅವಕಾಶ ನೀಡುವ ಬಗ್ಗೆ ಪರಿಗಣಿಸಲು ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ರಾಜ್ಯ...