Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-2)

- Advertisement -
- Advertisement -

ಜನರಲ್ ಪುನಃ ಅವನ ಮಾತಿಗೆ ಅಡ್ದಿಪಡಿಸಿ ಹೆಚ್ಚಿನ ಪ್ರಶ್ನೆಗಳನ್ನ ಕೇಳಲು ಶುರುಮಾಡಿದ; ಪ್ರಿನ್ಸ್ ನಾವು ಮೊದಲೆಲ್ಲಾ ಕೇಳಿದ ನಿರೂಪಣೆಯನ್ನೇ ಉತ್ತರದ ರೂಪದಲ್ಲಿ ಪುನರುಚ್ಚರಿಸಿದ. ಪಾವ್ಲಿಚೆಫ್ ಬಗ್ಗೆ ಜನರಲ್‌ಗೆ ಮೊದಲೇ ತಿಳಿದಿದ್ದಂತೆ ಕಂಡಿತು; ಅವನು ಪ್ರಿನ್ಸ್ ಬಗ್ಗೆ ಏಕೆ ಆಸಕ್ತಿವಹಿಸಿದ್ದ ಎನ್ನುವುದನ್ನ ಪ್ರಿನ್ಸ್ ಕೈಲಿ ವಿವರಿಸಲಾಗಲಿಲ್ಲ; ಬಹುಶಃ ಅವನ ತಂದೆಯ ಜತೆಯ ಗಾಢವಾದ ಸ್ನೇಹದಿಂದ ಇರಬೇಕು ಎಂದು ಆಲೋಚಿಸಿದ.

ಪ್ರಿನ್ಸ್ ಚಿಕ್ಕ ಮಗುವಾಗಿದ್ದಾಗಲೇ ಅನಾಥನಾಗಿದ್ದ ಮತ್ತು ಪಾವ್ಲಿಚೆಫ್ ತನ್ನ ಸಂಬಂಧಿಕಳೇ ಆದ ಒಬ್ಬಳು ವಯಸ್ಸಾದ ಹೆಂಗಸಿನ ಸುಪರ್ದಿಗೆ ಅವನನ್ನು ನೋಡಿಕೊಳ್ಳಲು ಒಪ್ಪಿಸಿದ್ದ. ಆ ಹೆಂಗಸು ಹಳ್ಳಿಯಲ್ಲಿ ವಾಸಿಸುತ್ತಿದ್ದಳು ಮತ್ತು ಪಾವ್ಲಿಚೆಫ್‌ನ ಉದ್ದೇಶ ಮಗುವಿಗೆ ಹಳ್ಳಿಯ ಜೀವನದಲ್ಲಿ ಲಭ್ಯವಾಗುತ್ತಿದ್ದ ಶುದ್ಧಗಾಳಿ ಮತ್ತು ವ್ಯಾಯಾಮ ದೊರೆಯಲಿ ಎಂಬುದು.

ಅವನಿಗೆ ವಿದ್ಯಾಭ್ಯಾಸವೂ ಮಾಮೂಲಿಯಾಗಿ ದೊರಕಿತು, ಮೊದಲು ಒಬ್ಬಳು ಮನೆಯ ಅಧ್ಯಾಪಕಿಯಿಂದ, ನಂತರ ಒಬ್ಬ ಬೋಧಕನಿಂದ; ಆದರೆ ತನ್ನ ಜೀವನದ ಈ ಘಟ್ಟದ ಹೆಚ್ಚು ಸಂಗತಿಗಳು ಪ್ರಿನ್ಸ್‌ನ ನೆನಪಿನಿಂದ ಮಾಯವಾಗಿಹೋಗಿದ್ದವು. ಅವನ ಮೇಲೆ ಎರಗುತ್ತಿದ್ದ ಮೂರ್ಛೆ ರೋಗ ಆ ಸಮಯದಲ್ಲಿ ಎಷ್ಟು ಪುನರಾವರ್ತನೆಗೊಳ್ಳುತ್ತಿದ್ದೆಂದರೆ, ಅದು ಅವನನ್ನು ಮೂರ್ಖನಂತೆ ಮಾಡಿಬಿಟ್ಟಿತ್ತು. (ಪ್ರಿನ್ಸ್ ಈ “ಮೂರ್ಖ” ಎನ್ನುವ ಪದವನ್ನ ತಾನೇ ಬಳಸಿದ್ದ). ಪಾವ್ಲಿಚೆಫ್ ಪ್ರೊಫೆಸರ್ ಶ್ನೈಡರ್‌ಅನ್ನು ಬರ್ಲಿನ್‌ನಲ್ಲಿ ಭೇಟಿ ಮಾಡಿದ್ದ, ಮತ್ತು ಸ್ವಿಡ್ಜರ್ಲೆಂಡ್‌ನಲ್ಲಿನ ಶ್ನೈಡರ್‌ನದೇ ಆದ ಸಂಸ್ಥೆಗೆ ಹುಡುಗನ ಮೂರ್ಛೆರೋಗವನ್ನ ಗುಣಪಡಿಸಲು ಕಳುಹಿಸುವಂತೆ ಮನವೊಲಿಸಿದ್ದ. ಈ ಸಮಯದಿಂದ ಐದು ವರ್ಷದ ಕೆಳಗೆ ಪ್ರಿನ್ಸ್‌ನನ್ನು ಕಳುಹಿಸಲಾಯಿತು. ಆದರೆ ಇದಾದ ನಂತರದ ಎರಡನೆಯ ಅಥವ ಮೂರನೆಯ ವರ್ಷದಲ್ಲಿ ಪಾವ್ಲಿಚೆಫ್ ಸತ್ತುಹೋದ. ಆಗ ಶ್ನೈಡರ್ ಸ್ವತಃ ತನ್ನ ಖರ್ಚಿನಲ್ಲೇ ಹುಡುಗನನ್ನು ಆ ದಿನದಿಂದ ಇಲ್ಲಿಯವರೆವಿಗೂ ಬೆಂಬಲಿಸಿದ್ದ. ಕಾಯಿಲೆಯನ್ನು ಹೇಳಿಕೊಳ್ಳುವ ರೀತಿಯಲ್ಲಿ ವಾಸಿಮಾಡದೇ ಇದ್ದರೂ ಕೂಡ, ಅವನ ಆರೋಗ್ಯದ ಪರಿಸ್ಥಿತಿಯನ್ನ ಉತ್ತಮಗೊಳಿಸಿದ್ದ; ಮತ್ತು ಕೊನೆಗೂ ಪ್ರಿನ್ಸ್‌ನ ಇಚ್ಛೆಯ ಮೇರೆಗೇ, ಮತ್ತು ಕೆಲವು ವಿಷಯಗಳು ಅವನ ಕಿವಿಯಮೇಲೆ ಬಿದ್ದ ಕಾರಣದಿಂದ, ಶ್ನೈಡರ್ ಯುವಕನನ್ನು ರಷ್ಯಗೆ ರವಾನಿಸಿದ.

ಜನರಲ್ ಈಗ ಬಹಳಷ್ಟು ಆಶ್ಚರ್ಯಚಕಿತನಾದ.

“ಅಂದರೆ ರಷ್ಯದಲ್ಲಿ ನಿನ್ನವರು ಅಂತ ಯಾರೂ ಇಲ್ಲ, ಯಾರೊಬ್ಬರೂ ಇಲ್ಲ?” ಅವನು ಕೇಳಿದ.

“ಸದ್ಯಕ್ಕೆ ಯಾರೂ ಇಲ್ಲ; ಆದರೆ ನಾನು ಸ್ನೇಹಿತರುಗಳನ್ನ ಸಂಪಾದಿಸಿಕೊಳ್ಳುತ್ತೇನೆನ್ನುವ ಭರವಸೆ ನನಗಿದೆ; ಅಲ್ಲದೆ, ನನ್ನ ಹತ್ತಿರ ಒಂದು ಪತ್ರವಿದೆ-”

“ಏನೇ ಆದರೂ ಕೂಡ” ಪತ್ರದ ಬಗೆಗಿನ ಸುದ್ದಿಯನ್ನ ಕೇಳಿಸಿಕೊಳ್ಳದೇ ಜನರಲ್ ತನ್ನ ಮಾತು ಮುಂದುವರಿಸಿದ. “ಏನೇ ಆದರೂ ನೀನು ಏನನ್ನಾದರೂ ಕಲಿತಿದ್ದಿರಲೇಬೇಕು ಮತ್ತು ನಿನ್ನ ಕಾಯಿಲೆ ಯಾವುದಾದರೂ ಸುಲಭವಾದ ಕೆಲಸವನ್ನ ಎತ್ತಿಕೊಳ್ಳಲು ಅಡ್ಡ ಬರಲಾರದು, ಉದಾಹರಣೆಗೆ ಯಾವುದಾದರೂ ಇಲಾಖೆಯಲ್ಲಿನ ಕೆಲಸ.”

“ಓ, ಇಲ್ಲ ನನ್ನ ಪ್ರೀತಿಪಾತ್ರನೇ, ಇಲ್ಲವೇ ಇಲ್ಲ! ಈಗಿನ ಪರಿಸ್ಥಿತಿಯಲ್ಲಿ, ನಾನೊಂದು ದಾರಿಯನ್ನ ಕಂಡುಕೊಳ್ಳಲು ಇಷ್ಟಪಡುತ್ತೇನೆ, ಕಾರಣ ಈಗ ನಾನು ಯಾವ ರೀತಿಯ ಕೆಲಸಕ್ಕೆ ಯೋಗ್ಯ ಅನ್ನುವುದನ್ನ ಕಂಡುಕೊಳ್ಳಬೇಕಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಸಾಕಷ್ಟು ವಿಷಯಗಳನ್ನ ಕಲಿತಿದ್ದೇನೆ, ಅದಲ್ಲದೇ ನಾನು ಅನೇಕ ರಷ್ಯನ್ ಪುಸ್ತಕಗಳನ್ನ ಓದಿದ್ದೇನೆ.”

“ರಷ್ಯನ್ ಪುಸ್ತಕಗಳ? ಒಳ್ಳೆಯದಾಯಿತು, ಅಂದರೆ ನಿನಗೆ ಸರಿಯಾಗಿ ಓದುವುದು ಬರೆಯುವುದು ತಿಳಿದಿದೆ ಅಲ್ಲವೇ?”

“ಖಂಡಿತ ಹೌದು ಪ್ರೀತಿಪಾತ್ರನೆ!”

“ದೊಡ್ಡಕ್ಷರಗಳು! ಮತ್ತು ನಿನ್ನ ಕೈಬರಹ?”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-1)

“ಆಹಾ, ನನ್ನ ನಿಜವಾದ ಕೌಶಲ್ಯ ಅದರಲ್ಲಿಯೇ ಅಡಗಿರುವುದು. ಹೇಳಬೇಕೆಂದರೆ ನಾನು ನಿಜವಾಗಲೂ ಸುಂದರ ಬರವಣಿಗೆಗಾರ. ನಿಮಗೆ ನನ್ನ ಕ್ಯಾಲಿಗ್ರಫಿ ಕೌಶಲ್ಯ ತೋರಿಸಲೋಸುಗ ಬರೆಯುತ್ತೇನೆ” ಪ್ರಿನ್ಸ್ ಸ್ವಲ್ಪ ಉತ್ಸಾಹದಿಂದಲೇ ಹೇಳಿದ.

“ಬಹಳ ಸಂತೋಷದಿಂದ! ವಾಸ್ತವಿಕವಾಗಿ ಅದರ ಅಗತ್ಯ ಬಹಳಷ್ಟಿದೆ. ನಿನ್ನ ಸಿದ್ಧತೆ ಮತ್ತು ತತ್ಪರತೆಯನ್ನ ನಾನು ಮೆಚ್ಚುತ್ತೇನೆ ಪ್ರಿನ್ಸ್; ನಿಜವಾಗಿಯೂ ಹೇಳಬೇಕೆಂದರೆ ನಿನ್ನನ್ನು ಒಟ್ಟಾರೆ ನಾನು… ನಾನು ಇಷ್ಟಪಡಲು ಶುರುಮಾಡಿದ್ದೇನೆ” ಜನರಲ್ ಹೇಳಿದ.

“ಸುಂದರವಾದ ಬರಹಕ್ಕೆ ಬೇಕಾದ ಎಂತೆಂಥಾ ಸಲಕರಣೆಗಳಿವೆ ನಿಮ್ಮ ಬಳಿ ಇವೆ, ಅಂದರೆ ವಿಧವಿಧವಾದ ಪೆನ್ಸಿಲ್ಲುಗಳು ಮತ್ತು ವಸ್ತುಗಳು, ಎಂತಹ ಸುಂದರವಾದ ಹಾಳೆಗಳು! ಒಟ್ಟಿನಲ್ಲಿ ಇದೊಂದು ಆಕರ್ಷಕವಾದ ಕೋಣೆ. ಅಲ್ಲಿ ನೇತುಹಾಕಿದ್ದ ಚಿತ್ರವನ್ನು ನೋಡುತ್ತಾ ಹೇಳಿದ, ’ನನಗೆ ಆ ಕಲಾಕೃತಿಯ ಬಗ್ಗೆ ಗೊತ್ತು, ಅದೊಂದು ಸ್ವಿಸ್‌ನಲ್ಲಿನ ವಿಹಂಗಮ ದೃಶ್ಯ, ಖಚಿತವಾಗಿ ಅದನ್ನು ಅಲ್ಲಿನ ಪ್ರಕೃತಿಯನ್ನ ನೋಡಿ ಚಿತ್ರಿಸಲಾಗಿದೆ’, ನಾನು ಆ ಜಾಗವನ್ನ ನೋಡಿದ್ದೇನೆ ಕೂಡ.”

“ಖಂಡಿತ ಇರಬಹುದು, ಆದರೆ ನಾನದನ್ನು ಕೊಂಡಿದ್ದು ಇಲ್ಲೇ. ಗಾನಿಯ, ಪ್ರಿನ್ಸ್‌ಗೆ ಸ್ವಲ್ಪ ಕಾಗದವನ್ನ ಕೊಡು. ಇಲ್ಲಿದೆ ಕಾಗದ ಮತ್ತು ಪೆನ್‌ಗಳು. ಈಗ ಈ ಟೇಬಲ್ಲನ್ನ ಉಪಯೋಗಿಸಿಕೊ. ಇದೇನಿದು?” ಎಂದು ಜನರಲ್, ಗಾನಿಯಾ ಜೊತೆ ಮಾತನ್ನು ಮುಂದುವರಿಸುತ್ತಾ ಕೇಳಿದ; ಆ ಸಮಯದಲ್ಲಿ ಗಾನಿಯಾ ತನ್ನ ಬ್ರೀಫ್‌ಕೇಸಿನಿಂದ ದೊಡ್ಡ ಛಾಯಾಚಿತ್ರವೊಂದನ್ನು ಆಚೆ ತೆಗೆಯುತ್ತಿದ್ದಾಗ ತನ್ನ ಯಜಮಾನನಿಗೆ ತೋರಿಸುತ್ತಿದ್ದ. “ಅಯ್ಯೊ, ಇದು ನಸ್ಟಾಸಿಯ ಪಿಲಿಪೊವ್ನ! ಅವಳೇ ಇದನ್ನು ನಿನಗೆ ಕಳುಹಿಸಿದಳಾ? ಅವಳೇ?” ಅವನು ಬಹಳಷ್ಟು ಕುತೂಹಲ ಮತ್ತು ಉತ್ಸಾಹಗಳ ಹಾವಭಾವದೊಂದಿಗೆ ವಿಚಾರಿಸಿದ.

“ನಾನು ಅವಳಿಗೆ ಶುಭಾಶಯ ಕೋರಲು ಹೋದಾಗ ಈಗತಾನೆ ಅವಳು ನನಗೆ ಕೊಟ್ಟಳು. ನಾನು ಬಹಳ ಹಿಂದೆಯೇ ಇದನ್ನು ಕೊಡಲು ಕೇಳಿದ್ದೆ. ಅವಳ ಹುಟ್ಟುಹಬ್ಬಕ್ಕೆ ಯಾವುದೇ ಉಡುಗೊರೆ ತೆಗೆದುಕೊಂಡು ಹೋಗದೆ, ಅವಳ ಬಳಿಗೆ ನಾನು ಬರಿಗೈಯ್ಯಲ್ಲಿ ಹೋಗಿದ್ದಕ್ಕೆ ಹಂಗಿಸಲು ಕೊಟ್ಟಳೊ ಇಲ್ಲವೊ ಅನ್ನುವುದು ನನಗೆ ತಿಳಿಯದಾಗಿದೆ, ಅಥವ ಇನ್ನ್ಯಾವುದೆ ಬೇರೆ ಕಾರಣಕ್ಕೂ ಇರಬಹುದು”, ಗಾನಿಯ ಅಹಿತಕರವಾದ ನಗುವನ್ನ ಸೂಸುತ್ತಾ ಹೇಳಿದ.

“ಓ, ಅಸಂಬದ್ಧ, ಅಸಂಬದ್ಧ” ನಿರ್ಧಾರದೊಂದಿಗೆ ಜನರಲ್ ಹೇಳಿದ. “ಅದೆಂತಹಾ ಅಸಾಧಾರಣವಾದ ಕಲ್ಪನೆಗಳು ನಿನ್ನವು ಗಾನಿಯಾ! ಅವಳು ಸೂಕ್ಷ್ಮವಾಗಿ ಅದನ್ನು ಸೂಚಿಸುತ್ತಾಳೆ ಅನ್ನುವುದು; ಅವಳು ಆ ಬಗೆಯ ಸ್ವಭಾವದವಳಲ್ಲವೇ ಅಲ್ಲ, ಅದಲ್ಲದೇ ನಿನ್ನ ಬಳಿ ಸಾವಿರಾರು ರೂಬಲ್ ಇಲ್ಲದೇ ಇದ್ದಾಗ ನೀನೇನು ಅವಳಿಗೆ ಕೊಡಬಲ್ಲೆ? ಏನೇ ಆದರೂ ನಿನ್ನ ಛಾಯಾಚಿತ್ರವನ್ನ ಅವಳಿಗೆ ಕೊಟ್ಟಿರುತ್ತಿದ್ದೆ. ಅವಳೇನಾದರೂ ನಿನ್ನನ್ನು ಕೊಡು ಎಂದು ಕೇಳಿದ್ದಳಾ?”

“ಇಲ್ಲ, ಇದುವರೆಗೂ ಇಲ್ಲ. ಕೇಳುವ ಸಾಧ್ಯತೆಗಳು ಬಹಳಷ್ಟು ಕಡಿಮೆ. ನೀವು ಇವತ್ತಿನ ರಾತ್ರಿಯ ಬಗ್ಗೆ ಮರೆತಿಲ್ಲ ಎಂದುಕೊಂಡಿದ್ದೇನೆ; ಮರೆತಿಲ್ಲಾ ತಾನೆ ಇವಾನ್ ಫೆಡೊರೊವಿಚ್? ಮತ್ತು ನಿಮಗೆ ತಿಳಿದಂತೆ, ವಿಶೇಷ ಆಮಂತ್ರಿತರಲ್ಲಿ ನೀವೂ ಒಬ್ಬರು.”

“ನಾನು ಅದನ್ನ ಮರೆತಿಲ್ಲ, ಖಂಡಿತವಾಗಿಯೂ ನಾನು ಹೋಗುತ್ತೇನೆ. ಈಗ ನನ್ನ ಪ್ರಕಾರ ಇವತ್ತಿಗೆ ಅವಳಿಗೆ ಇಪ್ಪತ್ತೈದು ವರ್ಷ ವಯಸ್ಸು! ನಿನಗೆ ಗೊತ್ತಾ ಗಾನಿಯ, ಈಗ ನೀನು ಮುಂದೆ ಸಂಭವಿಸುವ ಪ್ರಮುಖ ಸಂಗತಿಗಳಿಗೆ ತಯಾರಾಗಿರಬೇಕಾಗುತ್ತದೆ; ಅವಳು ಇಂದು ನನಗೆ ಮತ್ತು ಅಫಾನಸಿ ಇವಾನೊವಿಚ್‌ಗೆ ತನ್ನ ಕೊನೆಯ ನಿರ್ಧಾರವನ್ನು ಹೇಳಲಿದ್ದಾಳೆ. ಹೌದು ಅಥವ ಇಲ್ಲ ಎಂದು. ಆದದ್ದರಿಂದ ನೀನು ತಯಾರಾಗಿರಬೇಕು!”

ಗಾನಿಯ ಇದ್ದಕ್ಕಿದ್ದಂತೆ ತನ್ನ ಮುಖವೆಲ್ಲಾ ಬಿಳಿಚಿಕೊಳ್ಳುವಷ್ಟು ಅಸಮಾಧಾನಗೊಂಡ.

“ಅವಳು ಅದನ್ನು ಹೇಳಿದ್ದರ ಬಗ್ಗೆ ನೀವು ಖಚಿತವಾಗಿದ್ದೀರಾ?” ಅವನು ನಡುಗುವ ಧ್ವನಿಯಿಂದ ಕೇಳಿದ.

“ಹೌದು, ಅವಳು ಭರವಸೆ ನೀಡಿದ್ದಾಳೆ. ನಾವಿಬ್ಬರೂ ಅವಳನ್ನು ನಾವು ಸಾಕಷ್ಟು ಪೀಡಿಸಿದ ನಂತರ ಅವಳು ನಂತರ ನಮ್ಮ ದಾರಿಗೆ ಬಂದಳು; ಆದರೆ ನಿನಗೆ ಆ ದಿನದವರೆಗೂ ಏನನ್ನೂ ಹೇಳಕೂಡದೆಂದು ಕೂಡ ಅವಳು ಇಚ್ಛಿಸಿದಳು.”

ಜನರಲ್, ಗಾನಿಯಾನ ಗೊಂದಲವನ್ನ ತೀವ್ರವಾಗಿ ಅವಲೋಕಿಸಿದ ಮತ್ತು ಅದನ್ನ ಅವನು ಇಷ್ಟಪಡಲಿಲ್ಲ.

“ನೆನಪಿನಲ್ಲಿಟ್ಟುಕೊಳ್ಳಿ ಇವಾನ್ ಫೆಡೊರೊವಿಚ್” ಗಾನಿಯ ಬಹಳವಾಗಿ ತಳಮಳಗೊಂಡು ಹೇಳಿದ, “ನನಗೂ ಕೂಡ ಹೌದು ಅಥವ ಇಲ್ಲ ಅಂತ ಹೇಳಲು ಸ್ವಾತಂತ್ರ್ಯವಿದೆ, ಅವಳು ಯಾವುದೇ ನಿರ್ಧಾರ ತೆಗೆದುಕೊಂಡರೂ ಕೂಡ ನನಗೂ ಒಪ್ಪಿಕೊಳ್ಳಬೇಕೊ ಬೇಡವೊ ಎನ್ನುವ ಆಯ್ಕೆಯನ್ನು ಚಲಾಯಿಸಲು ಅವಕಾಶ ಇದೆ ಎಂದು ತಿಳಿದಿದ್ದೇನೆ.”

“ಯಾಕೆ? ನಿನಗಿಷ್ಟವಿಲ್ಲವೇ? ನೀನು ಒಪ್ಪಿಕೊಳ್ಳುವುದಿಲ್ಲವೇ?” ಜನರಲ್ ಗಾಬರಿಗೊಂಡು ಕೇಳಿದ.

“ಓ, ನಾನು ಹೇಳಿದ್ದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ-”

“ಆದರೆ, ನನ್ನ ಪ್ರೀತಿಪಾತ್ರನೇ, ನೀನೇನನ್ನು ಮಾಡುತ್ತಿದ್ದೀಯ? ನಿನ್ನ ಮಾತಿನ ಅರ್ಥವೇನು?”

“ಓ, ನಾನೇನೂ ಅವಳನ್ನ ತಿರಸ್ಕರಿಸುತ್ತಿಲ್ಲ. ನಾನು ಹೇಳಬೇಕಾಗಿದ್ದುದನ್ನ ಸರಿಯಾಗಿ ಹೇಳಲಿಲ್ಲ ಅಂತ ಕಾಣುತ್ತದೆ. ಆದರೆ ನಾನು ಆ ರೀತಿಯಲ್ಲಿ ಅರ್ಥಬರುವಂತೆ ಹೇಳಲಿಲ್ಲ ಅಷ್ಟೆ.”

“ಅವಳನ್ನು ತಿರಸ್ಕರಿಸಿದ ಹಾಗಲ್ಲದೇ ಮತ್ತೇನು?” ಜನರಲ್ ತನಗೆ ಅಸಮಾಧಾನ ಉಂಟಾಗಿದ್ದನ್ನ ತೋರಿಸಿಕೊಳ್ಳದೇ ಇರಲು ಯಾವ ಪ್ರಯತ್ನವನ್ನೂ ಮಾಡದೆ, “ಯಾತಕ್ಕೆ ನನ್ನ ಪ್ರೀತಿ ಪಾತ್ರನೇ, ಇಲ್ಲಿರುವ ಪ್ರಶ್ನೆ ನೀನು ಅವಳನ್ನ ತಿರಸ್ಕರಿಸುವ ಬಗ್ಗೆ ಅಲ್ಲ, ನೀನು ಅವಳ ಒಪ್ಪಿಗೆಯನ್ನ ಖುಷಿಯಿಂದ ಸ್ವೀಕರಿಸಲು ತಯಾರಾಗಿದ್ದೀಯೋ ಅನ್ನುವುದು, ಮತ್ತು ಅದನ್ನು ತೃಪ್ತಿಕರವಾಗಿ ಸ್ವೀಕರಿಸುತ್ತೀಯಾ ಅನ್ನುವುದು. ಈಗ ನಿಮ್ಮ ಮನೆಯಲ್ಲಿ ಎಲ್ಲವೂ ಹೇಗೆ ನಡೆಯುತ್ತಿದೆ?”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-4)

“ನಮ್ಮ ಮನೆಯಲ್ಲಾ? ನಾನಲ್ಲಿ ನನಗಿಷ್ಟ ಬಂದಂತೆ ಏನನ್ನು ಬೇಕಾದರೂ ಮಾಡಬಹುದು; ಎಂದಿನಂತೆ ನನ್ನ ತಂದೆ ಮಾತ್ರ ಪೆದ್ದನಂತಾಡುತ್ತಾನೆ. ಅವನು ಕ್ರಮೇಣ ದೊಡ್ಡ ಉಪದ್ರವವಾಗುತ್ತಿದ್ದಾನೆ. ನಾನು ಅವನ ಹತ್ತಿರ ಮಾತನಾಡುವುದೇ ಇಲ್ಲ, ಆದರೆ ಅವನ ಮೇಲೊಂದು ಕಣ್ಣಿಟ್ಟು ಎಚ್ಚರಿಕೆಯಿಂದ ಇರುತ್ತೇನೆ. ನಾನು ಪ್ರಾಮಾಣಿಸಿ ಹೇಳುವುದು ನನ್ನ ತಾಯಿ ಇಲ್ಲದೇ ಇದ್ದಿದ್ದರೆ ಅವನನ್ನು ಎಂದೋ ಮನೆಯಿಂದ ಆಚೆಗೆ ಕಳುಹಿಸಿಬಿಡುತ್ತಿದ್ದೆ. ನನ್ನ ತಾಯಿ ಸದಾಕಾಲ ಅಳುತ್ತಿರುತ್ತಾಳೆ, ಆದರೆ ನನ್ನ ಸೋದರಿ ಮಾತ್ರ ಸದಾಕಾಲ ಸಿಡುಕುತ್ತಲೇ ಇರುತ್ತಾಳೆ. ನಾನವರಿಗೆ ಕೊನೆಗೂ ಹೇಳಿದ್ದು, ನನ್ನ ಈಗಿನ ಇಚ್ಛೆಯೇನೆಂದರೆ ನನ್ನ ಭವಿಷ್ಯವನ್ನ ನಿರ್ಧರಿಸಬೇಕಾದವನು ನಾನೊಬ್ಬನೇ, ಮತ್ತು ಅದನ್ನು ಮನೆಯವರೆಲ್ಲರೂ ಪರಿಪಾಲಿಸಬೇಕೆಂದು. ಇದನ್ನ ಅರ್ಥಮಾಡಿಕೊಳ್ಳುವಂತೆ ನನ್ನ ಸೋದರಿಗೆ ನನ್ನ ತಾಯಿಯ ಸಮ್ಮುಖದಲ್ಲಿಯೇ ಹೇಳಿದೆ.”

“ಸರಿ ಆದರೂ ನನಗೆ ಇದೇನೆಂದು ಅರ್ಥವಾಗುತ್ತಲೇ ಇಲ್ಲ!” ಜನರಲ್ ತನ್ನ ಭುಜವನ್ನ ಕುಣಿಸುತ್ತಾ ತನ್ನ ಕೈಗಳನ್ನ ಕೆಳಗೆ ಬೀಳುವ ರೀತಿ ಮಾಡುತ್ತಾ ಹೇಳಿದ. “ನಿನಗೆ ನೆನಪಿದೆಯಾ, ನಿನ್ನ ತಾಯಿ ನೀನಾ ಅಲೆಕ್ಸಾಂಡ್ರೊವ್ನ, ಆ ಒಂದು ದಿನ ಇಲ್ಲಿ ಬಂದು ಕುಳಿತು ಗೋಳಿಡುತ್ತಿದ್ದಳು, ನಾನವಳನ್ನು ಏನು ವಿಷಯ ಎಂದು ಕೇಳಿದಾಗ, ಅವಳು ಹೇಳಿದ್ದು, ’ಓ ಇದೊಂದು ಅವಮಾನಕರವಾದ ವಿಷಯ ನಮಗೆಲ್ಲಾ!’ ಅವಮಾನಕರವಾದದ್ದು! ಇದೆಲ್ಲಾ ಅಸಂಬದ್ಧವಾದ ವಿಷಯಗಳು! ನಾನು ತಿಳಿಯಬಯಸುವುದು ನಸ್ಟಾಸಿಯ ಪಿಲಿಪೊವ್ನಳನ್ನು ಯಾರಿಗೆ ತಾನೆ ನಿಂದಿಸಲು ಸಾಧ್ಯ, ಅಥವ ಯಾರಿಗೆ ಅವಳ ವಿರುದ್ಧವಾಗಿ ಏನನ್ನಾದರೂ ಹೇಳಲು ಸಾಧ್ಯ. ನಸ್ಟಾಸಿಯ, ಟಾಟಸ್ಕಿಯ ಜೊತೆಯಲ್ಲಿ ಬದುಕುತ್ತಿದ್ದಳು ಎನ್ನುವ ಕಾರಣಕ್ಕಾ ಅವಳು ಹಾಗಂದಿದ್ದು? ಇದೆಂತಹ ಮೂರ್ಖತನದ ಮಾತು! ನೀನು ನಿನ್ನ ಸ್ವಂತ ಹೆಣ್ಣುಮಕ್ಕಳ ಹತ್ತಿರಕ್ಕೆ ಅವಳನ್ನು ಬರುವುದಕ್ಕೆ ಬಿಡುವುದಿಲ್ಲ, ಅಂತ ನೀನ ಅಲೆಕ್ಸಾಂಡ್ರೊವ್ನ ಹೇಳುತ್ತಾಳೆ. ಮುಂದೇನು ಅನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಅವಳ್ಯಾತಕ್ಕೆ ಅರ್ಥಮಾಡಿಕೊಳ್ಳುತ್ತಿಲ್ಲ ಅನ್ನುವುದೇ ನನಗೆ ತಿಳಿಯುತ್ತಿಲ್ಲ.”

“ಅವಳ ನಿಲುವೇನು ಅಂದರೆ?” ಗಾನಿಯ ಪ್ರೇರೇಪಿಸಿದ. “ಅವಳಿಗೆ ಅರ್ಥವಾಗುತ್ತದೆ. ಅವಳ ಬಗ್ಗೆ ಅಸಮಾಧಾನಗೊಳ್ಳಬೇಡಿ. ನಾನವಳಿಗೆ ಬೇರೆಯವರ ವ್ಯವಹಾರದಲ್ಲಿ ತಲೆತೂರಿಸಬೇಡ ಎಂದು ಎಚ್ಚರಿಸಿದ್ದೇನೆ. ಏನೇ ಆದರೂ ಮೊದಲಿಗೆ ಹೋಲಿಸಿದರೆ ಈಗ ಸದ್ಯಕ್ಕೆ ಮನೆಯಲ್ಲಿ ಶಾಂತಿ ನೆಲೆಸಿದೆ, ಆದರೆ ಆ ಶಾಂತಿಯನ್ನ ಇಂದಿನ ರಾತ್ರಿಯ ಬೆಳವಣಿಗೆಯಿಂದ ಉಂಟಾಗುವ ಚಂಡಮಾರುತ ಕದಡಲೂಬಹುದು.”

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...