Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-3; ಭಾಗ-1)

- Advertisement -
- Advertisement -

ಜನರಲ್ ಇವಾನ್ ಫೆಡೊರೊವಿಚ್ ಎಪಾಂಚಿನ್ ರೂಮಿನ ಮಧ್ಯಭಾಗದಲ್ಲಿ ನಿಂತಿದ್ದ, ಮತ್ತು ಪ್ರಿನ್ಸ್ ಒಳಗೆ ಬರುತ್ತಿದ್ದಂತೆ ಅತ್ಯಂತ ಕುತೂಹಲದಿಂದ ಅವನ ಕಡೆಗೆ ನೋಡಿದ. ಅದಲ್ಲದೇ ಅವನನ್ನು ಭೇಟಿಮಾಡಲು ಎರಡು ಮೂರು ಹೆಜ್ಜೆಗಳನ್ನ ಮುಂದಕ್ಕಿಟ್ಟು ಮುಂದುವರಿದ.

ಪ್ರಿನ್ಸ್ ಸ್ವಲ್ಪ ಮುಂದಕ್ಕೆ ಬಂದವನೇ ತನ್ನನ್ನು ಪರಿಚಯಿಸಿಕೊಂಡ.

“ಒಳ್ಳೆಯದಾಯ್ತು” ಎಂದು ಜನರಲ್ ಉತ್ತರಿಸಿದ, “ಮತ್ತು ನನ್ನಿಂದ ಏನಾಗಬೇಕು?”

“ಓ, ನನಗೆ ವಿಶೇಷವಾದ ಕೆಲಸವೇನಿಲ್ಲ; ನನ್ನ ಮುಖ್ಯ ಉದ್ದೇಶ ನಿಮ್ಮ ಪರಿಚಯವನ್ನ ಮಾಡಿಕೊಳ್ಳುವುದು. ನಿಮಗೆ ತೊಂದರೆ ಕೊಡುವುದಕ್ಕೆ ನನಗೆ ಇಷ್ಟವಿಲ್ಲ. ನಿಮ್ಮ ಇಲ್ಲಿನ ವೇಳಾಪಟ್ಟಿ ಮತ್ತು ವ್ಯವಸ್ಥೆಗಳ ಬಗ್ಗೆ ನನಗೆ ತಿಳಿದಿಲ್ಲ, ಆದರೆ ನಾನು ಈಗಷ್ಟೆ ಈ ನಗರಕ್ಕೆ ಬಂದೆ. ರೈಲ್ವೆ ನಿಲ್ದಾಣದಿಂದ ನಿಮ್ಮಲ್ಲಿಗೆ ನೇರವಾಗಿ ಬರುತ್ತಿದ್ದೇನೆ. ನಾನು ಸೀದ ಸ್ವಿಟ್ಜರ್ಲೆಂಡಿನಿಂದ ಬರುತ್ತಿದ್ದೇನೆ.”

ಜನರಲ್ ಬಹುತೇಕ ಮುಗುಳ್ನಗೆ ಸೂಸುವಂತಿದ್ದ, ಆದರೆ ಅದರ ಬಗ್ಗೆ ಯೋಚಿಸಿ, ತನ್ನ ಮುಗುಳ್ನಗೆಯನ್ನ ತಡೆಹಿಡಿದ. ನಂತರ ಅವನು ತನ್ನ ಕಣ್ಣುಗಳನ್ನ ಮಿಟುಕಿಸುವುದರ ಮೂಲಕ ಅದೇ ಭಾವವನ್ನ ವ್ಯಕ್ತಪಡಿಸಿದ, ತನ್ನ ಅತಿಥಿಯನ್ನ ಇನ್ನೊಂದು ಬಾರಿ ಮೇಲಿನಿಂದ ಕೆಳಗಿನವರೆಗೂ ವೀಕ್ಷಿಸಿದ; ಇದ್ದಕ್ಕಿದ್ದಂತೆ ತನ್ನ ನೋಟದಿಂದಲೇ ಅವನನ್ನು ಖಾಲಿ ಇದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಸಂಜ್ಞೆಮಾಡಿದ. ನಂತರ ತಾನೇ ಕುಳಿತುಕೊಂಡು, ಸ್ವಲ್ಪ ಅಸಹನೆಯಿಂದಲೇ ಪ್ರಿನ್ಸ್ ಮಾತು ಶುರುಮಾಡುವುದನ್ನ ನಿರೀಕ್ಷಿಸುತ್ತಿದ್ದ.

ಗಾನಿಯ ಕೋಣೆಯ ದೂರದಲ್ಲಿನ ಮೂಲೆಯಲ್ಲಿ ತನ್ನ ಟೇಬಲ್ಲಿನ ಬಳಿ ಯಾವುದೋ ದಾಖಲೆಯನ್ನ ಅವಲೋಕಿಸುತ್ತಾ ನಿಂತಿದ್ದ.

“ನನಗೆ ನನ್ನದೇ ಆದ ನಿಯಮದ ಪ್ರಕಾರ ಹೊಸಬರನ್ನು ಪರಿಚಯ ಮಾಡಿಕೊಳ್ಳುವಷ್ಟು ನನಗೆ ಬಿಡುವಿಲ್ಲ” ಎಂದು ಜನರಲ್ ಹೇಳಿದ, “ಆದರೆ ನಿನಗೆ ಇಲ್ಲಿಗೆ ಬರುವುದಕ್ಕೆ ಯಾವುದೋ ಒಂದು ಉದ್ದೇಶವಿರುವುದರಿಂದ, ನಾನು……”

“ನನ್ನ ಈ ಭೇಟಿಯ ಹಿಂದೆ ಒಂದು ಉದ್ದೇಶವಿದೆ ಎಂಬ ಭಾವನೆ ನಿಮಗೆ ಬರಬಹುದು ಎಂದು ನಿಮ್ಮನ್ನು ಭೇಟಿ ಮಾಡುವ ನಿರ್ಧಾರ ಮಾಡದಾಗಲೇ ಖಂಡಿತವಾಗಿ ನನಗೂ ಅನಿಸಿತ್ತು” ಪ್ರಿನ್ಸ್ ಜನರಲ್‌ನ ಮಾತನ್ನು ಅಡ್ಡಿಪಡಿಸುತ್ತಾ ಹೇಳಿದ. “ಆದರೆ ನಾನು ನಿಮಗೆ ಆಶ್ವಾಸನೆ ಕೊಡುತ್ತೇನೆ, ನಿಮ್ಮ ಪರಿಚಯ ಮಾಡಿಕೊಳ್ಳುವ ಆನಂದದಿಂದಾಚೆಗೆ ನನಗೆ ಖಾಸಗಿಯಾದ ಯಾವುದೇ ರೀತಿಯ ಉದ್ದೇಶವಿಲ್ಲ.”

“ಖಂಡಿತಾ, ಆ ಆನಂದ ಖಂಡಿತವಾಗಿಯೂ ಪರಸ್ಪರವಾದದ್ದು; ಆದರೆ ಜೀವನದಲ್ಲಿ ಎಲ್ಲವೂ ಆನಂದಮಯವಾಗಿಯೇ ಇರುವುದಿಲ್ಲ, ನಿಮಗೂ ಅದು ತಿಳಿದಿರದೆ ಏನಿಲ್ಲ. ವ್ಯವಹಾರ ಎನ್ನುವುದೊಂದು ಇರುತ್ತದೆ, ಮತ್ತು ಇನ್ನ್ಯಾವ ಬೇರೇ ಕಾರಣಗಳಿರಲು ಸಾಧ್ಯ ಅಥವಾ ನನ್ನ ಮತ್ತು ನಿನ್ನ ನಡುವೆ ಸಮಾನ ಹೊಂದಾಣಿಕೆಯಾಗುವಂಥಾದ್ದು ಏನೆಂಬುದೂ ನನಗೆ ತಿಳಿಯದಾಗಿದೆ.”

“ಓ, ಯಾವುದೇ ಕಾರಣ ಇಲ್ಲ, ಖಂಡಿತವಾಗಿಯೂ, ನಾನಂದುಕೊಂಡಿರುವಂತೆ ಕೂಡ ನಮ್ಮಿಬ್ಬರಲ್ಲಿ ಸಾಮಾನ್ಯತೆ ಏನೂ ಇಲ್ಲ, ಇದ್ದರೂ ಅದು ಬಹಳ ಕಡಿಮೆ; ನಾನು ಪ್ರಿನ್ಸ್ ಮೂಯಿಶ್ಕಿನ್, ಮತ್ತು ನಿನ್ನ ಹೆಂಡತಿ ಕೂಡ ಸಂಭವನೀಯವಾಗಿ ನಮ್ಮ ಮನೆಯ ಒಬ್ಬಳು ಸದಸ್ಯಳಾಗಿದ್ದಳು, ಮತ್ತು ಅದನ್ನೇ ’ಕಾರಣ’ವೆಂದು ಹೇಳುವುದೂ ಕಷ್ಟ. ನಾನದನ್ನ ನಿಜವಾಗಲೂ ಅರ್ಥಮಾಡಿಕೊಳ್ಳುತ್ತೇನೆ. ಆದರೂ ನಾನು ಬರುವುದಕ್ಕೆ ಅದೇ ಸಂಪೂರ್ಣವಾದ ಪ್ರೇರಣೆ. ನೋಡಿ, ನಾನು ನಾಲ್ಕು ವರ್ಷಗಳ ಕಾಲ ರಷ್ಯದ ಕಡೆಗೆ ಸುಳಿದೇ ಇಲ್ಲ, ಮತ್ತು ನಾನು ರಷ್ಯಾ ಬಿಟ್ಟುಹೋದಾಗ ಯಾವ ಸಂಗತಿಯ ಬಗ್ಗೆಯಾದರೂ ನನ್ನ ತಿಳಿವಳಿಕೆ ಅತ್ಯಲ್ಪದ್ದಾಗಿತ್ತು. ನಾನು ಬಹಳ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದೆ, ಮತ್ತು ಈಗ ನನಗೆ ಒಳ್ಳೆಯ ಕೆಲವು ಸ್ನೇಹಿತರ ಅವಶ್ಯಕತೆ ಬಹಳಷ್ಟು ಇದೆಯೆಂದು ಅನ್ನಿಸಿದೆ. ವಾಸ್ತವವಾಗಿ, ನನ್ನಲ್ಲಿ ಕೆಲವು ಪ್ರಶ್ನೆಗಳಿವೆ, ಅವುಗಳಿಗೆ ಸಲಹೆ ಬೇಕಿದೆ, ಆದರೆ ಅದಕ್ಕಾಗಿ ಯಾರ ಬಳಿಗೆ ಹೋಗಬೇಕೆನ್ನುವುದು ನನಗೆ ತಿಳಿಯಲಿಲ್ಲ. ನಾನು ಬರ್ಲಿನ್ ಮೂಲಕ ಬರುತ್ತಿದ್ದಾಗ ನಾನು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿದೆ. ’ಅವರು ಬಹುತೇಕ ನನ್ನ ಸಂಬಂಧಿಗಳು’ ಎಂದು ನನಗೆ ನಾನೇ ಹೇಳಿಕೊಂಡೆ, ’ಆದ್ದರಿಂದ ಅವರಿಂದಲೇ ಪ್ರಾರಂಭಿಸುತ್ತೇನೆ; ಅವರು ದಯಾಪರರಾಗಿದ್ದರೆ, ಬಹುಶಃ ನಾವು ಹೊಂದಿಕೊಂಡು ಹೋಗಬಹುದು, ನಾನು ಅವರ ಜೊತೆ ಮತ್ತು ಅವರು ನನ್ನ ಜೊತೆ ಎಂದುಕೊಂಡೆ’ ಮತ್ತು ನೀವುಗಳೆಲ್ಲಾ ಬಹಳ ದಯಾಪರರು ಎಂದು ನಾನು ಕೇಳಲ್ಪಟ್ಟಿದ್ದೆ!”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-4)

“ಓ, ಧನ್ಯವಾದಗಳು, ಧನ್ಯವಾದಗಳು, ಖಂಡಿತವಾಗಿಯೂ” ಸಾಕಷ್ಟು ಗಾಬರಿಗೊಂಡವನಂತೆ ಜನರಲ್ ಉತ್ತರಿಸಿದ. “ನೀನು ನಿನ್ನ ವಸತಿಯನ್ನ ಎಲ್ಲಿ ಮಾಡಿದ್ದೀಯ ಎಂದು ಕೇಳಬಹುದೇ?”

“ಇದುವರೆಗೆ ಎಲ್ಲೂ ಇಲ್ಲ.”

“ಏನು, ಸೀದ ಸ್ಟೇಷನ್ನಿನಿಂದ ನಮ್ಮ ಮನೆಗೆ ಬಂದೆಯಾ? ಮತ್ತು ನಿನ್ನ ಸಾಮಾನುಗಳು ಎಲ್ಲಿ?”

“ನನ್ನ ಬಳಿ ಬರೀ ನನ್ನ ಬಟ್ಟೆ ಬರೆಗಳಿಂದ ತುಂಬಿರುವ ಸಣ್ಣ ಗಂಟಿತ್ತು, ಇನ್ನೇನೂ ಇರಲಿಲ್ಲ. ಅದನ್ನ ನನ್ನ ಕೈಯ್ಯಲ್ಲೇ ಸುಲಭವಾಗಿ ಹಿಡಿದುಕೊಂಡು ಬರಬಹುದಾಗಿತ್ತು. ಹೊಟೇಲಿನಲ್ಲಿ ಸಂಜೆಯ ವೇಳೆಗೆ ರೂಮೊಂದನ್ನು ತೆಗೆದುಕೊಳ್ಳುವುದಕ್ಕೆ ಇನ್ನೂ ಸಾಕಷ್ಟು ಸಮಯ ಸಿಗಲಿದೆ.”

“ಓ, ಹಾಗಾದರೆ ರೂಮೊಂದನ್ನು ಮಾಡಿಕೊಳ್ಳುತ್ತೀರಾ?”

“ಖಂಡಿತವಾಗಿಯೂ ಹೌದು.”

“ನಿನ್ನ ಮಾತುಗಳಿಂದ ನಾನು ತೀರ್ಮಾನಕ್ಕೆ ಬರುವುದಾದರೆ, ನೀನು ಸ್ಟೇಷನ್ನಿನಿಂದ ಸೀದ ಇಲ್ಲಿಗೆ ಬಂದು ನನ್ನ ಮನೆಯಲ್ಲಿಯೇ ಇರಲು ಯೋಚಿಸಿದ್ದೀಯ.”

“ಅದು ನಿಮ್ಮ ಆಹ್ವಾನವಿದ್ದರೆ ಮಾತ್ರ ಸಾಧ್ಯವಾಗುತ್ತಿತ್ತು. ನಾನು ಅರಿಕೆ ಮಾಡಿಕೊಳ್ಳುತ್ತೇನೆ, ನೀವು ನನ್ನನ್ನು ಆಹ್ವಾನಿಸಿದ್ದರೂ ಕೂಡ ನಾನು ಇಲ್ಲಿ ವಾಸಿಸುತ್ತಿರಲಿಲ್ಲ, ಯಾವುದೇ ಒಂದು ನಿರ್ದಿಷ್ಟ ಕಾರಣಕ್ಕಲ್ಲ, ಆದರೆ ಅದಕ್ಕೆ ಕಾರಣ… ಸರಿ, ಅದು ಹೇಗೋ ಗೊತ್ತಿಲ್ಲ, ನನ್ನ ಸ್ವಭಾವ ಮತ್ತು ಅಭ್ಯಾಸಕ್ಕೆ ತದ್ವಿರುದ್ಧವಾದದ್ದು.”

“ಓ, ನಿಜವಾಗಲೂ! ಅಂದರೆ, ಅದು ಬಹುಶಃ ನಾನು ನಿನ್ನನ್ನು ಆಹ್ವಾನಿಸಲಿಲ್ಲ ಮತ್ತು ಈಗ ಆಹ್ವಾನಿಸುವ ಉದ್ದೇಶವೂ ಇಲ್ಲ ಎಂಬುದೂ ಇರಬಹುದು. ನನ್ನನ್ನು ಕ್ಷಮಿಸು ಪ್ರಿನ್ಸ್, ಒಮ್ಮೆಗೇ ಈ ವಿಷಯವನ್ನ ಸ್ವಲ್ಪ ಸ್ಪಷ್ಟಪಡಿಸಿಕೊಳ್ಳೋಣ. ನಾವಿಬ್ಬರೂ ಈಗ ತಾನೆ ಒಪ್ಪಿಕೊಂಡಂತೆ, ನಮ್ಮ ಪರಸ್ಪರ ಕುಟುಂಬಗಳು ನಡುವಿನ ಸಂಬಂಧದ ಬಗ್ಗೆ ಹೇಳಿಕೊಳ್ಳುವಂತಾದ್ದೇನೂ ಇಲ್ಲ, ನಿಜವಾಗಲೂ ಈ ರೀತಿಯ ಸಂಬಂಧವಿದೆ ಎನ್ನುವ ಭಾವನೆ ನಮಗೆಲ್ಲಾ ಸಂತೋಷಕರವಾದದ್ದೇ ಆದರೂ ಕೂಡ, ಆದದ್ದರಿಂದ ಬಹುಶಃ…..”

“ಆದದ್ದರಿಂದ, ಬಹುಶಃ ನಾನು ಮೇಲೆದ್ದು ಹೊರಟುಹೋಗುವುದು ಒಳ್ಳೆಯದು?” ತನ್ನ ಜಾಗದಿಂದಲೇ ಉಲ್ಲಾಸದ ನಗುವಿನೊಂದಿಗೆ ಮೇಲಕ್ಕೇಳುತ್ತಾ ಪ್ರಿನ್ಸ್ ಹೇಳಿದ. ಎಷ್ಟು ಉಲ್ಲಾಸದಿಂದ ಎಂದರೆ ಅಲ್ಲಿ ಉಂಟಾಗಿದ್ದ ಪರಿಸ್ಥಿತಿ ಯಾವುದೇ ರೀತಿಯಲ್ಲಿಯೂ ಅಹಿತಕರವಾದದ್ದು ಅನ್ನುವ ಭಾವನೆ ಉಂಟಾಗಲು ಆಸ್ಪದ ಕೊಡದೇ ಇರುವಷ್ಟು. “ನಾನು ನಿಮಗೆ ನನ್ನ ಮಾತು ಕೊಡುತ್ತೇನೆ, ಜನರಲ್, ನನಗೆ ಸಮಾಜದಲ್ಲಿನ ನಡೆನುಡಿಗಳ ಪರಿಚಯ ಎಳ್ಳಷ್ಟೂ ಇಲ್ಲದಿದ್ದರೂ, ಮತ್ತು ಜನ ಹೇಗೆ ಬದುಕುತ್ತಾರೆ ಅನ್ನುವುದು ಮತ್ತು ಮುಂತಾದ ಸಂಗತಿಗಳ ಬಗ್ಗೆಯೂ ತಿಳಿಯದಿದ್ದರೂ, ನನಗೆ ಖಚಿತವಾದ ನಂಬಿಕೆ ಇದ್ದದ್ದು ಈ ನನ್ನ ಭೇಟಿ ಇದೇ ರೀತಿಯಲ್ಲಿ ಕೊನೆಗೊಳ್ಳುತ್ತದೆ ಎಂದು. ಓ, ನಾನಂದುಕೊಳ್ಳುವುದು ಎಲ್ಲವೂ ಆಗುವುದು ಒಳ್ಳೆಯದಕ್ಕೇ ಎಂದು, ಅದರಲ್ಲೂ ವಿಶೇಷವಾಗಿ ನೀವು ನನ್ನ ಪತ್ರಕ್ಕೆ ಉತ್ತರಿಸದೇ ಇರುವುದು ಕೂಡ. ಸರಿ, ಗುಡ್ ಬೈ, ನಿಮಗೆ ತೊಂದರೆಕೊಟ್ಟಿದ್ದಕ್ಕೆ ನನ್ನನ್ನು ಕ್ಷಮಿಸಿಬಿಡಿ!”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-3)

ಪ್ರಿನ್ಸ್‌ನ ಮುಖಭಾವ ಈ ಕ್ಷಣದಲ್ಲಿ ಎಷ್ಟು ಸ್ನೇಹಪರವಾಗಿತ್ತೆಂದರೆ, ಅದು ಯಾವುದೇ ರೀತಿಯ ಅನುಮಾನಗಳನ್ನು ಮತ್ತು ಅಹಿತಕರವಾದ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಹೊರತಾಗಿತ್ತು; ಜನರಲ್ ಮಾತನಾಡುತ್ತಿರುವಾಗ ಅವನ ಕಡೆಗೆ ಯಾವ ರೀತಿಯ ನಗುಮುಖದಿಂದ ನೋಡುತ್ತಿದ್ದನೋ ಅದೇ ನಗುವಿನಲ್ಲಿತ್ತು, ಮತ್ತು ಜನರಲ್ ಇದ್ದಕ್ಕಿದ್ದಂತೆ ತನ್ನ ಮಾತನ್ನು ನಿಲ್ಲಿಸಿದ, ಮತ್ತು ತನ್ನ ಅತಿಥಿಯ ಕಡೆಗೆ ಬೇರೆಯೇ ದೃಷ್ಟಿಕೋನದಿಂದ ನೋಡುತ್ತಿರುವಂತೆ ಕಂಡಿತು, ಇದೆಲ್ಲವೂ ಕ್ಷಣಮಾತ್ರದಲ್ಲಿ ಸಂಭವಿಸಿತು.

“ನಿನಗೆ ಗೊತ್ತಾ ಪ್ರಿನ್ಸ್” ಈಗ ಮೊದಲಿನದಕ್ಕಿಂತ ಬೇರೆಯೇ ರೀತಿಯ ಧ್ವನಿಯಲ್ಲಿ ಅವನು ಕೇಳಿದ, “ನನಗೆ ನೀನ್ಯಾರೆಂದೇ ತಿಳಿದಿಲ್ಲ, ಆದರೂ, ಬಹುಶಃ ಎಲಿಜಬೆತ ಪ್ರೊಕೊಫೀವ್ನ ಅವಳದೇ ಹೆಸರಿನ ಒಬ್ಬ ವ್ಯಕ್ತಿಯನ್ನು ಒಮ್ಮೆ ನೋಡಿದರೆ ಸಂತೋಷಪಡಬಹುದು. ನಿನಗೆ ಅಭ್ಯಂತರವಿಲ್ಲದಿದ್ದರೆ, ಮತ್ತು ನಿನಗೆ ಕಾಲಾವಕಾಶವಿದ್ದರೆ, ಸ್ವಲ್ಪ ಹೊತ್ತು ಇಲ್ಲೇ ಕಾಯುತ್ತಿರು.”

“ಓ, ನಾನು ನಿಮಗೆ ಭರವಸೆ ಕೊಡುತ್ತೇನೆ, ನನಗೆ ಬೇಕಾದಷ್ಟು ಕಾಲಾವಕಾಶ ಇದೆ, ನನಗೆ ಬೇರೆ ಇನ್ನೇನೂ ಕೆಲಸವಿಲ್ಲ!” ಎಂದು ತಕ್ಷಣ ತನ್ನ ಮೃದುವಾದ ದುಂಡನೆಯ ಹ್ಯಾಟನ್ನು ಟೇಬಲ್ಲಿನ ಮೇಲೆ ಇಟ್ಟ. “ನಾನು ಅರಿಕೆ ಮಾಡಿಕೊಳ್ಳುವುದು, ಎಲಿಜೆಬೆತ ಪ್ರೊಕೊಫೀವ್ನ ನಾನು ಬರೆದ ಪತ್ರದ ಬಗ್ಗೆ ಇನ್ನೂ ನೆನಪಿನಲ್ಲಿಟ್ಟುಕೊಂಡಿರುವ ಸಾಧ್ಯತೆ ಬಹಳಷ್ಟು ಇದೆ ಎಂದು ನನಗನ್ನಿಸಿದೆ. ಈಗ ತಾನೆ, ನಾನು ಭಿಕ್ಷೆ ಬೇಡಲು ಬಂದಿದ್ದೇನೆ ಎಂದು ತಿಳಿದು ಹೊರಗಡೆ ಇರುವ ನಿಮ್ಮ ಸೇವಕ ಭಯಂಕರ ಅನುಮಾನಪಡುತ್ತಿದ್ದದ್ದು. ಅದನ್ನು ನಾನು ಗಮನಿಸಿದೆ! ಇಂತಹ ವಿಷಯಗಳಲ್ಲಿ ಆತನಿಗೆ ಕಟ್ಟುನಿಟ್ಟಾದ ಆದೇಶಗಳಿವೆ ಎಂದೆನಿಸುತ್ತದೆ. ಆದರೆ ನಾನು ನಿಮಗೆ ನಿಶ್ಚಿತವಾಗಿ ಹೇಳ ಬಯಸುತ್ತೇನೆ, ನಾನು ಭಿಕ್ಷೆ ಬೇಡಲು ಬರಲಿಲ್ಲ. ನಾನು ಬಂದಿದ್ದು ಸ್ನೇಹಿತರುಗಳನ್ನ ಪಡೆದುಕೊಳ್ಳುವುದಕ್ಕೆ, ಆದರೆ ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಿದ್ದು ಮಾತ್ರ ನನ್ನನ್ನು ಕಾಡುತ್ತಿದೆ; ನನ್ನ ಕಾಳಜಿ ಅಷ್ಟಕ್ಕೆ ಮಾತ್ರ ಸೀಮಿತ.-”

“ಇಲ್ಲಿ ನೋಡು ಪ್ರಿನ್ಸ್” ಜನರಲ್ ಸೌಹಾರ್ದಯುತವಾದ ನಗುವಿನೊಂದಿಗೆ ಹೇಳಿದ, “ನೀನೀಗ ನಿಜವಾಗಲೂ ಕಾಣಿಸುತ್ತಿರುವ ರೀತಿಯಂತಹ ಮನುಷ್ಯನೇ ಆಗಿದ್ದರೆ, ನಿನ್ನನ್ನು ಆತ್ಮೀಯನಾದ ಪರಿಚಯಸ್ಥನನ್ನಾಗಿ ಮಾಡಿಕೊಳ್ಳುವುದು ನಮಗೆಲ್ಲಾ ಅತ್ಯಂತ ಸಂತೋಷಕರವಾದಂತ ವಿಷಯವಾಗುತ್ತದೆ, ಆದರೆ ನೀನೇ ಕಂಡ ಹಾಗೆ ನಾನೊಬ್ಬ ಬಿಡುವಿಲ್ಲದಂತಹ ವ್ಯಕ್ತಿ, ಮತ್ತು ಇಲ್ಲೇ ಕುಳಿತುಕೊಂಡು ನಿರಂತರವಾಗಿ ದಾಖಲೆಗಳಿಗೆ ಸಹಿ ಹಾಕುತ್ತಿರಬೇಕು, ಅಥವ ಮೇಲಿನವರನ್ನ ಕಾಣಲು ಹೋಗುತ್ತಿರಬೇಕು, ಅಥವ ನನ್ನ ಇಲಾಖೆಗೆ ಹೋಗುತ್ತಿರಬೇಕು, ನನಗೆ ಹೆಚ್ಚು ಜನಗಳನ್ನ ಭೇಟಿ ಮಾಡಲು ತುಂಬಾ ಸಂತೋಷ, ಅಂದರೆ ಒಳ್ಳೆಯ ಜನಗಳನ್ನ, ನೋಡು, ಅವೆಲ್ಲದರ ಜೊತೆಗೆ, ನನಗೆ ನಂಬಿಕೆ ಇರುವುದು ನಿನ್ನನ್ನು ಒಳ್ಳೆಯ ರೀತಿಯಲ್ಲಿ ಬೆಳೆಸ್ದಿದ್ದಾರೆ ಎನ್ನುವುದು, ಅದೇ ಕಾರಣಕ್ಕೆ ನಿನಗೆ ಒಮ್ಮೆಲೇ ಇವೆಲ್ಲವೂ ಅರ್ಥವಾಗುತ್ತದೆ. ಅದು ಸರಿ, ಈಗ ನಿನಗೆ ಎಷ್ಟು ವಯಸ್ಸು ಪ್ರಿನ್ಸ್?”

“ಇಪ್ಪತ್ತಾರು.”

“ಇಲ್ಲ? ನಾನಂದುಕೊಂಡಿದ್ದು ನೀನಿನ್ನೂ ತುಂಬಾ ಚಿಕ್ಕವನು ಎಂದು.”

“ಹೌದು, ಎಲ್ಲರೂ ಹೇಳುವುದು ನನ್ನ ಮುಖ ನನ್ನ ವಯಸ್ಸಿಗಿಂತ ಚಿಕ್ಕವನನ್ನಾಗಿ ಮಾಡುತ್ತದೆ ಎಂದು. ನಿಮಗೆ ತೊಂದರೆ ಕೊಡುವುದರ ಬಗ್ಗೆ ಹೇಳುವುದಾದರೆ, ಮುಂದೆ ಅದು ಆಗದೇ ಇರುವ ಹಾಗೆ ನೋಡಿಕೊಳ್ಳುತ್ತೇನೆ, ಅದಲ್ಲದೇ ಜನಗಳಿಗೆ ತೊಂದರೆ ಕೊಡುವುದನ್ನ ನಾನು ದ್ವೇಷಿಸುತ್ತೇನೆ. ಜೊತೆಗೆ, ನೀವು ಮತ್ತು ನಾನು ಇಬ್ಬರೂ ವಿಭಿನ್ನ ಸನ್ನಿವೇಶದಲ್ಲಿದ್ದೇವೆ, ನಾನು ಯೋಚಿಸಬೇಕಾದದ್ದು, ನನ್ನ ಮತ್ತು ನಿಮ್ಮ ನಡುವೆ ಸಮಾನವಾಗಿರುವುದು ಅತ್ಯಂತ ಕಡಿಮೆ ಎಂದು. ಹಾಗೆನ್ನುವಾಗ, ಹಲವರು ತೀರ್ಪು ನೀಡುವಂತೆ ಯಾವುದೇ ಇಬ್ಬರಲ್ಲಿ ಸಮಾನವಾದದ್ದು ಏನೂ ಇರುವುದಿಲ್ಲ ಎಂಬುದನ್ನ ನಾನು ನಂಬುತ್ತೇನೆಂದಲ್ಲ. ನನಗೆ ನಿಶ್ಚಿತವಾಗಿ ಅನಿಸಿದ್ದು ಅವರ ಬಾಹ್ಯ ಚಹರೆಗಳ ಪ್ರಕಾರ ಜನ ತಮ್ಮತಮ್ಮನ್ನೇ ಕೆಲವು ಗುಂಪುಗಳನ್ನಾಗಿ ವಿಂಗಡಿಸಿಕೊಂಡು ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದು; ನಾನು ನಿಮಗೆ ತಲೆಚಿಟ್ಟು ಹಿಡಿಸುತ್ತಿದ್ದೇನೆ ಅಂತ ಕಾಣುತ್ತದೆ, ನಿಮ್ಮನ್ನ ನೋಡಿದರೆ ಹಾಗೆ ಕಾಣುತ್ತಿದೆ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-2)

“ಬರೀ ಎರಡು ಮಾತುಗಳು; ನಿನಗೆ ಬದುಕುವುದಕ್ಕೆ ಯಾವುದಾದರೂ ದಾರಿ ಇದೆಯೇ? ಅಥವ ಬಹುಶಃ ನೀನು ಯಾವುದಾದರೂ ಉದ್ಯೋಗವನ್ನ ಮಾಡಲು ಇಚ್ಛಿಸುತ್ತಿದ್ದೀಯ? ನಿನ್ನನ್ನ ಈ ರೀತಿ ಪ್ರಶ್ನಿಸಿದ್ದಕ್ಕೆ ನನ್ನನ್ನು ಕ್ಷಮಿಸು, ಆದರೆ…..”

“ಓ, ನನ್ನ ಪ್ರೀತಿಪಾತ್ರರೇ, ನೀವು ಈ ರೀತಿ ಪ್ರಶ್ನಿಸುವುದರಲ್ಲಿನ ನಿಮ್ಮ ದಯಾಪರತೆಯನ್ನ ನಾನು ಗೌರವಪೂರ್ವಕವಾಗಿ ಅರ್ಥಮಾಡಿಕೊಳ್ಳುತ್ತೇನೆ. ಉತ್ತರ, ಇಲ್ಲ; ಸದ್ಯಕ್ಕೆ ನನಗೆ ಯಾವುದೇ ರೀತಿಯ ಅನುಕೂಲ ಇಲ್ಲ, ಯಾವುದೇ ಉದ್ಯೋಗವೂ ಕೂಡ ಇಲ್ಲ, ಆದರೆ ಯಾವುದಾದರೂ ಉದ್ಯೋಗವನ್ನ ಪಡೆಯಬಹುದು ಎಂಬ ಭರವಸೆಯಲ್ಲಿದ್ದೀನಿ. ನಾನು ಇನ್ನೊಬ್ಬರ ಹಂಗಿನಲ್ಲಿ ವಿದೇಶದಲ್ಲಿ ಬದುಕುತ್ತಿದ್ದೆ. ಸ್ಕ್ನೀಡರ್ ಎಂಬ ಪ್ರೊಫೆಸರ್, ಯಾರು ನನಗೆ ಚಿಕಿತ್ಸೆಯನ್ನ ಮಾಡಿ ವಿದ್ಯೆ ಕಲಿಸಿದರೊ, ಅವರೂ ಕೂಡ ಸ್ವಿಟ್ಜರ್ಲೆಂಡಿನಲ್ಲಿ ನನ್ನ ಪ್ರಯಾಣಕ್ಕೆ ಆಗುವ ಖರ್ಚಿಗೆ ಮಾತ್ರ ಹಣ ಕೊಟ್ಟರು, ಮತ್ತು ಈಗ ನನ್ನ ಬಳಿ ಕೆಲವು ಕೊಪೆಕ್‌ಗಳು ಮಾತ್ರ ಉಳಿದಿದೆ. ನಾನು ನಿಮ್ಮ ಸಲಹೆಯನ್ನ ಪಡೆಯುವುದಕ್ಕೆ ಕಾತರನಾಗಿರುವ ವಿಷಯಗಳಲ್ಲಿ ಇದೂ ಒಂದು ಸೇರಿದೆ, ಆದರೆ-”

“ಈಗ ನನಗೆ ಹೇಳು, ನಿನ್ನ ಮುಂದಿನ ಬದುಕಿನ ಬಗೆಗಿನ ನಿನ್ನ ಯೋಜನೆಗಳೇನು? ಮತ್ತು ತತ್ತಕ್ಷಣದಲ್ಲಿ ನಿನ್ನ ಮುಂದಿನ ನಡೆಯೇನು?” ಎಂದು ಜನರಲ್ ಮಧ್ಯ ತಡೆದು ಕೇಳಿದ.

“ಹೇಗಾದರೂ ಸರಿ, ಕೆಲಸ ಮಾಡಿ ದುಡಿದು ಬದುಕುವುದು.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-2; ಭಾಗ-1)

“ಅದು ಸರಿ, ಆದರೆ ಈಗ ನೀನೊಬ್ಬ ತತ್ವಜ್ಞಾನಿ. ನೀನು ಇನ್ನೂ ಯಾವುದಾದರೂ ಕೌಶಲ್ಯವನ್ನ ರೂಢಿಸಿಕೊಂಡಿದ್ದೀಯ, ಅಥವ ಇನ್ನ್ಯಾವುದಾದರೂ ದಿಶೆಯಲ್ಲಿ ಸಾಮರ್ಥ್ಯವನ್ನ ಹೊಂದಿದ್ದೀಯ, ಅಂದರೆ ನಿನಗೆ ಹಣ ಆಹಾರವನ್ನು ತಂದುಕೊಡುವಂತಹ ಸಾಮರ್ಥ್ಯವನ್ನ? ಪುನಃ ಹೀಗೆ ಕೇಳಿದ್ದಕ್ಕೆ ನನ್ನನ್ನು ಕ್ಷಮಿಸು-”

“ಓ, ಕ್ಷಮೆಯನ್ನೇನೂ ನೀವು ಕೇಳಬೇಕಾಗಿಲ್ಲ. ನಿಜ ಹೇಳಬೇಕೆಂದರೆ ನಾನು ಯಾವುದೇ ರೀತಿಯ ಕೌಶಲ್ಯವನ್ನಾಗಲೀ, ಅಥವ ವಿಶೇಷವಾದ ಸಾಮರ್ಥ್ಯವನ್ನಾಗಲೀ ಹೊಂದಿಲ್ಲ; ಇದಕ್ಕೆ ತದ್ವಿರುದ್ಧವಾಗಿ ನಾನು ಸದಾಕಾಲ ದೀರ್ಘ ಖಾಯಿಲೆಯಿಂದ ಅಶಕ್ತನಾಗಿಯೇ ಇರುತ್ತಿದ್ದೆ, ಅದೇ ಕಾರಣಕ್ಕೆ ಹೆಚ್ಚು ಕಲಿಯಲಾಗಲಿಲ್ಲ. ನನ್ನ ಊಟದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯೋಚನೆ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದೇನೆ-”

(ಕನ್ನಡಕ್ಕೆ): ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...