ನಕಲಿ ಅಂಕಪಟ್ಟಿ ತಯಾರಿಸುವ ದಂಧೆ ನಡೆಸುತ್ತಿದ್ದ ‘ಸಿಸ್ಟಮ್ಸ್ ಕ್ವೆಸ್ಟ್ ಪ್ರೈವೇಟ್ ಲಿಮಿಟೆಡ್’ ಎಂಬ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಶನಿವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ವಿಕಾಸ್ ಭಗತ್ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ನಕಲಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ನೀಡಿದ ಆರೋಪವನ್ನು ಪೊಲೀಸರು ಹೊರಿಸಿದ್ದಾರೆ.
26 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ವಿದ್ಯಾಭ್ಯಾಸವನ್ನು ಕರೆಸ್ಪಾಂಡೆನ್ಸ್ ಕೋರ್ಸ್ ಮೂಲಕ ಮುಂದುವರಿಸುವ ಉದ್ದೇಶದಿಂದ ಶಂಕಿತನ ಕಚೇರಿಯನ್ನು ಸಂಪರ್ಕಿಸಿದಾಗ ನಕಲಿ ಅಂಕ ಪಟ್ಟಿ ತಯಾರಿಸುವ ವಂಚನೆಯ ಯೋಜನೆ ಬಯಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಚೇರಿ ಸಿಬ್ಬಂದಿಯು ವಿದ್ಯಾರ್ಥಿಗೆ 25,000 ರೂಪಾಯಿ ನೀಡಿದರೆ ಪರೀಕ್ಷೆಗೆ ಹಾಜರಾಗದೆ ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ವಿದ್ಯಾರ್ಥಿಯು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಜನವರಿ 3 ರಂದು ಅಧಿಕೃತವಾಗಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ರಾಜಾಜಿನಗರದ ನ್ಯೂ ಕ್ವೆಸ್ಟ್ ಟೆಕ್ನಾಲಜೀಸ್, ಜೆ.ಪಿ.ನಗರದ ಸಿಸ್ಟಂ ಕ್ವೆಸ್ಟ್, ಚಂದ್ರಪ್ಪ ಲೇಔಟ್‌ನ ಆರೋಹಿ ಇನ್ಸ್‌ಟಿಟ್ಯೂಟ್, ದಾಸರಹಳ್ಳಿಯ ವಿಶ್ವ ಜ್ಯೋತಿ ಕಾಲೇಜು ಮತ್ತು ವಿಜಯನಗರದ ಬೆನಕ ಕರೆಸ್ಪಾಂಡೆನ್ಸ್ ಕಾಲೇಜಿನಲ್ಲಿ ಪೊಲೀಸರು ಹಲವು ಬಾರಿ ಸಂಘಟಿತ ದಾಳಿ ನಡೆಸಿದ್ದು, ಈ ವೇಳೆ 6,800 ನಕಲಿ ಅಂಕಪಟ್ಟಿ ಕಾರ್ಡ್‌ಗಳು, 22 ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳನ್ನು ಮತ್ತು 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಕಂಪನಿ ಮತ್ತು ಅದರ ಸಹವರ್ತಿಗಳ ಕಚೇರಿಗಳ ಬಗ್ಗೆ ಹುಡುಕಾಡಿದಾಗ, ಸಂಸ್ಥೆಯನ್ನು ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯ ವ್ಯವಹಾರವಾಗಿ ನೋಂದಾಯಿಸಲ್ಪಟ್ಟಿತ್ತು. ಆದರೆ ಈ ಸಂಸ್ಥೆಗಳಲ್ಲಿ ಯಾವುದೇ ಶಿಕ್ಷಣ-ಸಂಬಂಧಿತ ಸೇವೆಗಳನ್ನು ನೀಡುವುದಿಲ್ಲ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಪ್ರಮುಖ ಆರೋಪಿ ವಿಕಾಸ್ ಭಗತ್ ತನಗೆ ಹೆಸರಾಂತ ವಿಶ್ವವಿದ್ಯಾನಿಲಯಗಳೊಂದಿಗೆ ಸಂಪರ್ಕವಿದೆ ಮತ್ತು ವಂಚನೆಯ ಪ್ರಮಾಣಪತ್ರಗಳನ್ನು ನೀಡುವುದಾಗಿ ವಿದ್ಯಾರ್ಥಿಗಳನ್ನು ನಂಬಿಸಿ ವಂಚಿಸುತ್ತಿದ್ದ ಎಂದು ವರದಿಯಾಗಿದೆ.
ಪ್ರತಿ ನಕಲಿ ದಾಖಲೆಗೆ ಭಗತ್ ವಿದ್ಯಾರ್ಥಿಗಳಿಂದ 25 ಸಾವಿರರಿಂದ 30 ಸಾವಿರ ರೂಗಳ ವರೆಗೆ ವಸೂಲಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಸಿಕ್ಕಿಂ ವಿಶ್ವವಿದ್ಯಾಲಯ, ಅಣ್ಣಾಮಲೈ ವಿಶ್ವವಿದ್ಯಾಲಯ, ಗೀತಂ ವಿಶ್ವವಿದ್ಯಾಲಯ, ಬಿಎಸ್‌ಐಟಿ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್ ಕಂಪನಿಯ ಹಿನ್ನಲೆಯೇನು?


