ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ ಕೊನೆಯ ದಿನಕ್ಕೆ ಕಾಲಿಟ್ಟಿದೆ. ಇಂದು ಶ್ರೀನಗರದ ಪಂಥಾಚೌಕ್‌ನಿಂದ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 10:45 ಕ್ಕೆ ತಮ್ಮ ಟ್ರೇಡ್‌ಮಾರ್ಕ್ ಬಿಳಿ ಟಿ-ಶರ್ಟ್‌ನೊಂದಿಗೆ ಯಾತ್ರೆಯನ್ನು ಪ್ರಾರಂಭಿಸಿದರು.
ತ್ರಿವರ್ಣ ಧ್ವಜ ಮತ್ತು ಪಕ್ಷದ ಧ್ವಜಗಳನ್ನು ಹಿಡಿದುಕೊಂಡಿದ್ದ ಮಹಿಳೆಯರು ಸೇರಿದಂತೆ ನೂರಾರು ಕಾಂಗ್ರೆಸ್ ಬೆಂಬಲಿಗರೊಂದಿಗೆ ಗಾಂಧಿಯವರು ಹೆಜ್ಜೆಹಾಕಿದರು.
ಯಾತ್ರೆಯು ನಗರದ ಸೋನ್ವಾರ್ ಪ್ರದೇಶದವರೆಗೆ ಏಳು ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಅಲ್ಲಿ ಸ್ವಲ್ಪ ಸಮಯದ ಬಳಿಕ ಲಾಲ್ ಚೌಕ್ ಸಿಟಿ ಸೆಂಟರ್‍ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ; ಜ. 30ಕ್ಕೆ ಸಮಾರೋಪ ಕಾರ್ಯಕ್ರಮ
ಲಾಲ್ ಚೌಕ್ ಸುತ್ತಮುತ್ತಲಿನ ಸಂಪೂರ್ಣ ಪ್ರದೇಶವನ್ನು ಕ್ಲೋಸ್ ಮಾಡಲಾಗಿದೆ. ನಗರ ಕೇಂದ್ರದ ಸುತ್ತಲೂ ಭದ್ರತಾ ರಿಂಗ್ ನಿಯೋಜಿಸಲಾಗಿದೆ. ಲಾಲ್ ಚೌಕ್ ನಂತರ ಯಾತ್ರೆಯು ನಗರದ ಬೌಲೆವಾರ್ಡ್ ಪ್ರದೇಶದ ನೆಹರೂ ಪಾರ್ಕ್‌ಗೆ ಸಂಚರಿಸಲಿದೆ.
ಭಾರತ್ ಜೋಡೋ ಯಾತ್ರೆಯು 2022 ಸೆ.7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು, ದೇಶದ 75 ಜಿಲ್ಲೆಗಳಲ್ಲಿ ಸಂಚರಿಸಿ, 4,080 ಕಿ.ಮೀ. ಕ್ರಮಿಸಿದೆ. ಇದು ಐತಿಹಾಸಿಕ ಪಾದಯಾತ್ರೆಯಾಗಿದೆ.
ಸೋಮವಾರ, ರಾಹುಲ್ ಗಾಂಧಿ ಅವರು ಇಲ್ಲಿನ ಎಂಎ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ನಂತರ ಎಸ್‌ಕೆ ಕ್ರೀಡಾಂಗಣದಲ್ಲಿ ಸಾರ್ವಜನಿಕ ರ್ಯಾಲಿ ನಡೆಯಲಿದೆ. ಈ ಸಮಾರೋಪಕ್ಕೆ 23 ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ.
ಪ್ರಮುಖ ವಿರೋಧ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಡಿಎಂಕೆ, ಸಿಪಿಎಂ, ಸಿಪಿಐ, ಶಿವಸೇನಾ, ಆರ್‌ಜೆಡಿ, ನ್ಯಾಷನಲ್ ಕಾನ್ಫರೆನ್ಸ್, ಹಾಗೂ ಬಿಎಸ್‌ಪಿ ಸೇರಿದಂತೆ 23 ಸಮಾನ ಮನಸ್ಕ ಪಕ್ಷಗಳ ನಾಯಕರುಗಲಿಗೆ ಭಾರತ್ ಜೋಡೋ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಆಹ್ವಾನ ನೀಡಿದ್ದಾರೆ.


