Homeಮುಖಪುಟಐಟಿ ರೂಲ್ಸ್‌ ತಿದ್ದುಪಡಿ ಮಸೂದೆಗೆ ಪತ್ರಕರ್ತರ ಸಂಸ್ಥೆಗಳಿಂದ ಖಂಡನೆ

ಐಟಿ ರೂಲ್ಸ್‌ ತಿದ್ದುಪಡಿ ಮಸೂದೆಗೆ ಪತ್ರಕರ್ತರ ಸಂಸ್ಥೆಗಳಿಂದ ಖಂಡನೆ

- Advertisement -
- Advertisement -

ಮಾಹಿತಿ ತಂತ್ರಜ್ಞಾನ ನಿಯಮಗಳು, 2021ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮತ್ತು ಬಿಬಿಸಿ ಸಾಕ್ಷ್ಯಚಿತ್ರ ತಡೆಗೆ ಐಟಿ ನಿಯಮಗಳ ಅಡಿಯಲ್ಲಿನ ತುರ್ತು ಅಧಿಕಾರವನ್ನು ದುಪಯೋಗ ಮಾಡಿಕೊಂಡಿರುವುದನ್ನು ಖಂಡಿಸಿ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಎನ್‌ಎಜೆ) ಮತ್ತು ದೆಹಲಿ ಪತ್ರಕರ್ತರ ಒಕ್ಕೂಟ (ಡಿಯುಜೆ) ಜಂಟಿ ಹೇಳಿಕೆ ನೀಡಿವೆ.

ಡಿಯುಜೆ ಅಧ್ಯಕ್ಷ ಎಸ್.ಕೆ.ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ಸುಜಾತಾ ಮಾಧೋಕ್, ಎನ್‌ಎಜೆ ಪ್ರಧಾನ ಕಾರ್ಯದರ್ಶಿ ಎನ್. ಕೊಂಡಯ್ಯ, ಆಂಧ್ರಪ್ರದೇಶ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಎಪಿಡಬ್ಲ್ಯುಜೆಎಫ್‌) ಪ್ರಧಾನ ಕಾರ್ಯದರ್ಶಿ ಜಿ.ಆಂಜನೇಯುಲು ಅವರು ಸರ್ಕಾರದ ನಿಲುವುಗಳನ್ನು ಖಂಡಿಸಿದ್ದು, “ತುರ್ತು ಪರಿಸ್ಥಿತಿ ಕಾಲದ ಕ್ರಮಗಳನ್ನು ಜರುಗಿಸಲು ಸಾಧ್ಯವಿಲ್ಲ; ಪ್ರೆಸ್‌ ಇನ್ಫಾರ್ಮೆಷನ್ ಬ್ಯೂರೊ (ಪಿಐಬಿ) ಎಂದಿಗೂ ಪೊಲೀಸ್ ಇನ್‌ಫಾರ್ಮೆಷನ್ ಬ್ಯುರೊ ಆಗಿ ಬದಲಾಗಬಾರದು” ಎಂದು ಎಚ್ಚರಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಸರ್ಕಾರದ ಘಟಕವಾದ ‘ಪಿಐಬಿ’ ಯಾವ ಸುದ್ದಿಯನ್ನು ನಕಲಿ ಎನ್ನುತ್ತದೆಯೋ ಅದನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕುವ ಕಾನೂನು ತರಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಟಿದೆ.

“ಮಾಧ್ಯಮಗಳಿಗೆ ಸರ್ಕಾರಿ ಸುದ್ದಿಗಳನ್ನು ಒದಗಿಸುವುದು ಪಿಐಬಿಯ ಕೆಲಸವಾಗಿದೆ. ಆ ಜವಾಬ್ದಾರಿಯಲ್ಲಿಯೇ ಮುಂದುವರಿಯಬೇಕು. ಮಾಧ್ಯಮಗಳ ಮೇಲೆ ನಿಗಾ ಇಡುವುದು, ಸೆನ್ಸಾರ್ ಮಾಡುವುದು ಮತ್ತು ಸರ್ಕಾರಕ್ಕೆ ಅನನುಕೂಲಕರವಾದ ಯಾವುದೇ ಮಾಹಿತಿಯನ್ನು ‘ನಕಲಿ ಸುದ್ದಿ’ ಎಂದು ಗುರುತಿಸುವ ಕೆಲಸವನ್ನು ಪಿಐಪಿ ಮಾಡುವುದಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ನಡೆಯನ್ನು ‘ವಿಷಾದನೀಯ’ ಎಂದು ಪತ್ರಕರ್ತ ಸಂಸ್ಥೆಗಳು ಬಣ್ಣಿಸಿವೆ.

“ಮಾಧ್ಯಮ ವ್ಯಕ್ತಿಗಳಿಗೆ ಸರ್ಕಾರದ ಅಧಿಕೃತ ಮಾಹಿತಿಗಳನ್ನು ಸುಲಭವಾಗಿ ದೊರಕಿಸುವುದು ಪಿಐಬಿಯ ಕೆಲಸವಾಗಿದೆ. ಸರ್ಕಾರಿ ವಿಷಯಗಳ ಬಗ್ಗೆ ಮಾನ್ಯತೆ ಪಡೆದ ವಿಶೇಷ ವರದಿಗಾರರು ಕೇಳಿದಾಗ ಪಿಐಬಿ ಕೆಲವು ಸಂದರ್ಭಗಳಲ್ಲಿ ನಿರಾಕರಿಸಿರುವುದು ಆಘಾತಕಾರಿಯಾಗಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಐಟಿ ನಿಯಮಗಳು, 2021ರ ಕರಡು ತಿದ್ದುಪಡಿಗಳನ್ನು ಹಲವಾರು ವಿರೋಧ ಪಕ್ಷಗಳು ಟೀಕಿಸಿವೆ. “ಇದು ಅತ್ಯಂತ ಅನಿಯಂತ್ರಿತ ಮತ್ತು ಏಕಪಕ್ಷೀಯ” ಎಂದು ಬಣ್ಣಿಸಿವೆ.

ಇದಲ್ಲದೆ, ಐಟಿ ನಿಯಮಗಳಿಗೆ ತರುತ್ತಿರುವ ಇತ್ತೀಚಿನ ತಿದ್ದುಪಡಿಯು ಪಿಐಬಿ ಮಾತ್ರವಲ್ಲದೆ ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೆನ್ಸಾರ್‌ಶಿಪ್ ಅಧಿಕಾರವನ್ನು ನೀಡುತ್ತಿದೆ. ಇವುಗಳು ಆಕ್ಷೇಪಿಸಿದ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮ ಕಂಪನಿಗಳು ತೆಗೆದುಹಾಕಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ಇದು ಸಣ್ಣ, ಸ್ವತಂತ್ರ ಡಿಜಿಟಲ್ ಮಾಧ್ಯಮಗಳನ್ನು ಸೆನ್ಸಾರ್ ಮಾಡುವ ಗುರಿಯನ್ನು ಹೊಂದಿರುವ ಕ್ರಮವೆಂದು ತೋರುತ್ತದೆ” ಎಂದು ಪತ್ರಿಕಾ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಒಕ್ಕೂಟಗಳ ಮೇಲೆ ಹೆಚ್ಚುತ್ತಿರುವ ದಾಳಿಯಿಂದ ತೀವ್ರವಾಗಿ ನೊಂದಿರುವುದಾಗಿ ಪತ್ರಕರ್ತರ ಸಂಸ್ಥೆಗಳು ತಿಳಿಸಿವೆ. “ಇದು ಪತ್ರಿಕಾ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಮೇಲಿನ ನಿರಂತರ ದಾಳಿಯ ಭಾಗವಾಗಿದೆ” ಎಂದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...