ಆತ್ಮಾಹುತಿ ಬಾಂಬ್ ಸ್ಪೋಟದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪೇಶಾವರ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯಲ್ಲಿ ನಡೆದಿದೆ. ಘಟನೆಯಲ್ಲಿ 147 ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಾರ್ಥನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಸೀದಿಯಲ್ಲಿ ಸೇರಿದ್ದ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ಸಿಕಂದರ್ ಖಾನ್ ತಿಳಿಸಿದ್ದಾರೆ. ಮಸೀದಿಯು ಪೊಲೀಸ್ ವಸತಿ ಬ್ಲಾಕ್‌ಗೆ ಸಮೀಪದಲ್ಲಿದೆ ಮತ್ತು ಸ್ಫೋಟ ಸಂಭವಿಸಿದಾಗ ಒಳಗೆ ಸುಮಾರು 260 ಜನರು ಸ್ಥಳದಲ್ಲಿದ್ದರು ಎಂದು ಪೋಲೀಸರು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
“ಕಟ್ಟಡದ ಒಂದು ಭಾಗವು ಕುಸಿದಿದೆ ಮತ್ತು ಹಲವಾರು ಜನರು ಅದರ ಅಡಿಯಲ್ಲಿದ್ದಾರೆ ಎಂದು ನಂಬಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು: ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದೇನು?
ಅಫ್ಘಾನಿಸ್ತಾನದ ಬಳಿಯ ಪೇಶಾವರದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮುಖ್ಯಸ್ಥ ಮುಹಮ್ಮದ್ ಇಜಾಜ್ ಖಾನ್ ಎಎಫ್‌ಪಿಗೆ ತಿಳಿಸಿದ್ದಾರೆ.
ಘಟನೆ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಹೇಳಿಕೆ ನೀಡಿದ್ದು, “ಈ ಬಾಂಬ್ ಸ್ಫೋಟವನ್ನು ಖಂಡಿಸುತ್ತೇನೆ ಮತ್ತು ಸಂತ್ರಸ್ತರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ದಾಳಿಯ ಹಿಂದಿರುವವರ ವಿರುದ್ಧ “ಕಠಿಣ ಕ್ರಮ” ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಟ್ವಿಟ್ ಮಾಡಿ, ಈ ಬಾಂಬ್ ಸ್ಫೋಟವನ್ನು “ಭಯೋತ್ಪಾದಕ ಆತ್ಮಾಹುತಿ ದಾಳಿ” ಎಂದು ಖಂಡಿಸಿದ್ದಾರೆ.
“ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ನಮ್ಮ ಗುಪ್ತಚರ ಇಲಾಖೆಯಲ್ಲಿ ಸುಧಾರಣೆ ಆಗಬೇಕಿದೆ. ಇವೆಲ್ಲವನ್ನು ಎದುರಿಸಲು ನಮ್ಮ ಪೊಲೀಸ್ ಪಡೆಗಳನ್ನು ಸರಿಯಾಗಿ ಸಜ್ಜುಗೊಳಿಸುವುದು ಅತ್ಯಗತ್ಯವಾಗಿದೆ” ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.


