HomeಎಕಾನಮಿExplainer: ಗೌತಮ್ ಅದಾನಿ ಯಾರು? ದಿಢೀರ್ ಅತಿ ದೊಡ್ಡ ಶ್ರೀಮಂತನಾಗಿದ್ದು ಹೇಗೆ?

Explainer: ಗೌತಮ್ ಅದಾನಿ ಯಾರು? ದಿಢೀರ್ ಅತಿ ದೊಡ್ಡ ಶ್ರೀಮಂತನಾಗಿದ್ದು ಹೇಗೆ?

ಈ ದೇಶ ನಾಲ್ಕು ಜನರಿಂದ ನಡೆಯುತ್ತಿದೆ. ಇಬ್ಬರು ದೇಶ ಮಾರುತ್ತಿದ್ದರೆ, ಇಬ್ಬರು ಖರೀದಿಸುತ್ತಿದ್ದಾರೆ. ಆ ನಾಲ್ವರು ಗುಜರಾತಿನವರು ಎಂದು ಅರುಂಧತಿ ರಾಯ್ ಹೇಳಿದ್ದರು.

- Advertisement -
- Advertisement -

ಕಳೆದ 10 ದಿನಗಳಿಂದ ಪ್ರತಿದಿನವೂ ಕೇಳಿಬರುತ್ತಿರುವ ಹೆಸರು ಅದು ಗೌತಮ್ ಅದಾನಿ. ವೇಗವಾಗಿ ಭಾರತದ ಮತ್ತು ಏಷ್ಯಾದ ನಂಬರ್ 1 ಶ್ರೀಮಂತ ಹಾಗೂ ಜಗತ್ತಿನ ನಂಬರ್ 2ನೇ ಶ್ರೀಮಂತನಾಗಿ ಬೆಳೆದಿದ್ದ ಅವರು ಷೇರು ಮಾರುಕಟ್ಟೆಯಲ್ಲಿ ವಂಚನೆ ಎಸಗಿದ್ದಾರೆ, ಲೆಕ್ಕ ಪತ್ರ ತಿದ್ದಿದ್ದಾರೆ, ಭ್ರಷ್ಟಾಚಾರವೆಸಗಿದ್ದಾರೆ ಎಂದು ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ವರದಿ ಬಿಡುಗಡೆ ಮಾಡಿದ ಕೂಡಲೇ ಅತಿ ವೇಗವಾಗಿ ಕುಸಿತಕ್ಕೊಳಗಾಗಿದ್ದಾರೆ. ಅದಾನಿ ಹಗರಣ ಹೊರಬರುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ‍ಷೇರು ಮೌಲ್ಯಗಳು ಪಾತಾಳ ಮುಟ್ಟಿದ್ದು ಅಂದಾಜು 10 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ ಎನ್ನಲಾಗಿದೆ. ಅದಾನಿ ಮಾತ್ರವಲ್ಲದೆ ಆತನ ಕಂಪನಿಗಳಲ್ಲಿ ಸಾರ್ವಜನಿಕರ ಹಣ ಹೂಡಿಕೆ ಮಾಡಿದ್ದ SBI, LIC ಯಂತಹ ಕಂಪನಿಗಳ ಷೇರುಗಳ ಬೆಲೆ ಕುಸಿದಿದೆ. NPS ನೌಕರರ ಹಣ ಮುಳುಗಿಹೋಗುತ್ತಿದೆ ಎಂಬ ಆತಂಕಗಳು ವ್ಯಕ್ತವಾಗಿದೆ. ಈ ಕುರಿತು ದೇಶದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ಸಿಗದ ಕಾರಣ ವಿಪಕ್ಷಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಇಂತಹ ಸಂದರ್ಭದಲ್ಲಿ ಗೌತಮ್ ಅದಾನಿ ಯಾರು? ದಿಢೀರ್ ಶ್ರೀಮಂತನಾಗಿದ್ದು ಹೇಗೆ? ಆತನಿಗೂ ಆಳುವ ಸರ್ಕಾರಕ್ಕೂ ಇರುವ ಸಂಬಂಧವೇನು? ಕುರಿತು ಚರ್ಚಿಸೋಣ.

ಒಂದು ಉದಾಹರಣೆ

2013ರಲ್ಲಿ ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ತಮ್ಮ ಮಗನ ಮದುವೆಯನ್ನು ಗೋವಾದಲ್ಲಿ ಹಮ್ಮಿಕೊಂಡಿದ್ದರು. ಅವರ ಅತಿಥಿಗಳ ಪಟ್ಟಿಯಲ್ಲಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ, ಅನೇಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉನ್ನತ ಬ್ಯಾಂಕರ್‌ಗಳು ಇದ್ದರು. ಅವರೆಲ್ಲರೂ ಮದುವೆಯ ಹಿಂದಿನ ದಿನವೇ ಬಂದು ನೂತನ ವಧು-ವರರನ್ನು ಆರ್ಶೀವಾದ ಮಾಡಿ ಅಂದೇ ಹೊರಟು ಹೋದರು. ಆದರೆ ಒಬ್ಬ ಮುಖ್ಯ ವ್ಯಕ್ತಿ ಮಾತ್ರ ಎರಡು ದಿನ ನಡೆದ ಇಡೀ ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವುದಕ್ಕಾಗಿ ತಂಗಿದ್ದರು. ವಧು-ವರರ ಪ್ರೀತಿಪಾತ್ರನಾಗಿ ಮತ್ತು ನೆಚ್ಚಿನ ಚಿಕ್ಕಪ್ಪನಂತೆ ವಿಶ್ರಾಂತಿ ಪಡೆದರು. ಅವರೇ ಅದಾನಿಯ ತವರು ರಾಜ್ಯ ಗುಜರಾತಿನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು.

ರಾಜಕೀಯ ನೇತಾರರೊಂದಿಗೆ ಉದ್ಯಮಪತಿಗಳು ಹೊಂದಿರುವ ಸಂಬಂಧದ ಸ್ವರೂಪವು ಅವರ ಏಳು-ಬೀಳುಗಳನ್ನು ನಿರ್ಧರಿಸುತ್ತದೆ ಎಂಬುದಕ್ಕೆ ಮೇಲಿನ ಘಟನೆಯನ್ನು ನೆನಪಿಸಿಕೊಳ್ಳಬೇಕಾಗಿದೆ. ಅಂದು ಗೌತಮ್ ಅದಾನಿಯವರು ಅಂದಾಜು $2.8 ಶತಕೋಟಿ ಮೌಲ್ಯದೊಂದಿಗೆ ವಿಶ್ವದ ನಂ. 609 ನೇ ಶ್ರೀಮಂತನ ಸ್ಥಾನದಲ್ಲಿದ್ದರು. ಅವರ ವ್ಯವಹಾರದ ದೊಡ್ಡ ಭಾಗವು ಗುಜರಾತ್‌ನಲ್ಲಿ ಕೇಂದ್ರೀಕರಣಗೊಂಡಿತ್ತು. ಏಕೆಂದರೆ 2001ರಿಂದ ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರು ಉಳಿದೆಲ್ಲ ಉದ್ಯಮಿಗಳಿಗಿಂತ ಹೆಚ್ಚಿನ ಒಲವನ್ನು ಅದಾನಿಗೆ ತೋರಿಸಿದ್ದರು. ಆ ಪರಿಣಾಮವಾಗಿ ಗೌತಮ್ ಅದಾನಿ ಉದ್ಯಮ ಆರಂಭಿಸಿದ 25 ವರ್ಷಗಳಲ್ಲಿ ಬಿಲಿಯನೇರ್ ಆಗಿ ಬೆಳೆದಿದ್ದರು. ಅದಕ್ಕೆ ಮೋದಿಯವರು ಹೇಗೆ ಸಹಕರಿಸಿ ಎಂಬುದನ್ನು ನೋಡೋಣ.

ಜೂನ್ 24, 1962ರಲ್ಲಿ ಗುಜರಾತಿನ ಅಹಮದಾಬಾದ್‌ನಲ್ಲಿ ಜನಿಸಿದ ಅದಾನಿಗೆ ಏಳು ಜನ ಸಹೋದರರಿದ್ದರು. ತಂದೆ ಸಣ್ಣ ಟೆಕ್ಸ್‌ಟೈಲ್ ಕಂಪನಿ ನಡೆಸುತ್ತಿದ್ದರು. ಕಾಲೇಜು ತ್ಯಜಿಸಿ ತಂದೆಯ ಉದ್ಯಮ ನೋಡಿಕೊಳ್ಳಲು ಮುಂದಾದ ಅದಾನಿ ಬಾಂಬೆಗೆ ತೆರಳಿದರು. ಸಹೋದರನ ಜೊತೆಗೂಡಿ 1988ರಲ್ಲಿ ಬಟ್ಟೆ ರಫ್ತು, ಪ್ಲಾಸ್ಟಿಕ್, ವಜ್ರ ಕಟ್ ಮಾಡುವ ಅದಾನಿ ಸಮೂಹ ಕಂಪನಿಗಳನ್ನು ನಿರ್ವಹಿಸುತ್ತಾರೆ. ಇವೆಲ್ಲದರಿಂದ ಅದಾನಿ ಒಬ್ಬ ಉದ್ಯಮಿ ಆಗಿ ರೂಪುಗೊಂಡರೂ ಈ ಯಾವ ಕಂಪನಿಗಳಿಂದ ಅವರ ನಿರೀಕ್ಷಿತ ಲಾಭ ಬಂದಿರುವುದಿಲ್ಲ. ಅವರ ಅದೃಷ್ಟ ಖುಲಾಯಿಸುವುದು ಗುಜರಾತಿನಲ್ಲಿರುವ ದೇಶದ ಅತಿ ದೊಡ್ಡ ಬಂದರನ್ನು 1998 ರಿಂದ ವಶಪಡಿಸಿಕೊಂಡ ಮೇಲೆ ಮತ್ತು 2001ರಲ್ಲಿ ಗುಜರಾತಿನ ಸಿಎಂ ಆಗಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರವಷ್ಟೆ.

ದೇಶದ ಅತಿ ದೊಡ್ಡ ಬಂದರಿನ ಒಡೆಯನಾದ ಕಥೆ

2002ರ ಗುಜರಾತ್ ಗಲಭೆಯಿಂದಾಗಿ ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ಬಂದಿರುತ್ತದೆ. ಹಲವಾರು ದೇಶಗಳು ಅವರಿಗೆ ವೀಸಾ ನಿರಾಕರಿಸುತ್ತವೆ. ಗುಜರಾತ್ ಗಲಭೆಯಿಂದಾಗಿ ರಾಜ್ಯದ ಶಾಂತಿ ಸುವ್ಯವಸ್ಥೆ ಹದಗೆಟ್ಟ ಪರಿಣಾಮ ಕೈಗಾರಿಕೆಗಳಿಗೆ ನೆಚ್ಚಿನ ತಾಣವಾದ ಗುಜರಾತ್‌ನಲ್ಲಿ ಹೂಡಿಕೆ ಮಾಡಲು ಬಂಡವಾಳಿಗರು ಹಿಂದೆ ಸರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಅದಾನಿ ಮೋದಿ ಬೆನ್ನಿಗೆ ನಿಲ್ಲುತ್ತಾರೆ. ತಾನು ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ಇದಕ್ಕೆ ಪ್ರತಿಯಾಗಿ ಮೋದಿ ಅದಾನಿಗೆ ದೇಶದ ದೊಡ್ಡ ಬಂದರಾದ ಮುಂದ್ರಾ ಬಂದರನ್ನು ಬಿಟ್ಟುಕೊಡುತ್ತಾರೆ! ಅದು ಅದಾನಿ ಬಂದರಾಗಿ ಬದಲಾಗುತ್ತದೆ. ಹಲವಾರು ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತಾರೆ.

ಬಿಡಿಗಾಸಿಗೆ ಸಾವಿರಾರು ಹೆಕ್ಟೇರ್ ಭೂಮಿ ಖರೀದಿ

ಎಲ್ಲಕ್ಕಿಂತ ಹೆಚ್ಚಾಗಿ ಕಚ್ಛ್ ಜಿಲ್ಲೆಯ 7,350 ಹೆಕ್ಟೇರ್ ಭೂಮಿಯನ್ನು ಬಿಡಿಗಾಸಿಗೆ ಅದಾನಿ ಸುಪರ್ದಿಗೆ ಬಿಟ್ಟುಕೊಡುತ್ತಾರೆ! 2005 ಮತ್ತು 2007 ರ ನಡುವೆ ಕನಿಷ್ಠ 1,200 ಹೆಕ್ಟೇರ್ ಗೋಮಾಳ ಭೂಮಿಯನ್ನು ಗ್ರಾಮಸ್ಥರಿಂದ ಕಸಿದು ಅದಾನಿಗೆ ನೀಡಲಾಗುತ್ತದೆ. ಈ ರೀತಿಯ ಅಗ್ಗದ ಬೆಲೆ ಭೂಮಿ ಪಡೆದ ಅದಾನಿಯವರು ಸ್ಥಳೀಯರ ವಿರೋಧದ ನಡುವೆಯೆ ಅಕ್ರಮವಾಗಿ 4,620-ಮೆಗಾವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರ ನಿರ್ಮಿಸುತ್ತಾರೆ. ಈ ಕುರಿತ ಮೊಕದ್ದಮೆಗಳು ಇಂದಿಗೂ ವಿಚಾರಣೆಯಲ್ಲಿವೆ.

ಹತ್ತಾರು ಎಸ್‌ಇಜೆಡ್‌ಗಳಲ್ಲಿ ರಫ್ತು ಕೇಂದ್ರಿತ ಕಂಪನಿಗಳನ್ನು ಸ್ಥಾಪಿಸಲಾಯಿತು. ಒಂದಷ್ಟನ್ನು ಇತರ ಕೈಗಾರಿಕೋದ್ಯಮಿಗಳಿಗೆ ಬಾಡಿಗೆಗೆ ನೀಡಲಾಯಿತು. ಬಂದರಿನಿಂದ ಹೈವೆ ರಸ್ತೆಗೆ ಸಂಪರ್ಕ ಕಲ್ಪಿಸುವ 40 ಮೈಲು ಉದ್ದದ ಖಾಸಗಿ ರೈಲು ಮಾರ್ಗ, ಚಾರ್ಟರ್ಡ್ ಫ್ಲೈಟ್‌ಗಳಿಗೆ ಬಳಸಬಹುದಾದ 1.1 ಮೈಲಿ ಉದ್ದದ ಖಾಸಗಿ ಏರ್‌ಸ್ಟ್ರಿಪ್ ಸ್ಥಾಪಿಸಲಾಯಿತು. ತನ್ನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಗಣಿಗಳನ್ನು ಖರೀದಿಸಿದರು. ಮುಂದ್ರಾದಲ್ಲಿ ಏಷ್ಯಾದ ಅತಿದೊಡ್ಡ ಕಲ್ಲಿದ್ದಲು ಆಮದು ಟರ್ಮಿನಲ್ ಅನ್ನು ಪ್ರಾರಂಭಿಸಿದರು. ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಕಲ್ಲಿದ್ದಲು ಟರ್ಮಿನಲ್ ಅನ್ನು ಖರೀದಿಸಲಾಯಿತು. ಇದರ ಬಹುಭಾಗವನ್ನು ಬ್ಯಾಂಕುಗಳಲ್ಲಿ ಸಾಲ ಪಡೆದೆ ಖರೀದಿ ಮಾಡಲಾಗಿದೆ. ಇಷ್ಟೆಲ್ಲಾ ಅವಕಾಶಗಳು ಉಳಿದ ಉದ್ಯಮಿಗಳಿಗೆ ಸಿಗದಿದ್ದರೂ ಸಹ ಅವರು ಮೋದಿಯವರ ಸಹಾಯ ಪಡೆದರು ಎಂಬುದು ನಿಜ.

ಇದರಿಂದ ಕಛ್ ಭಾಗದ ರೈತರು ತೊಂದರೆಗೆ ಸಿಲುಕಿದ್ದಾರೆ. ಅವರು ಬೆಳೆಯುತ್ತಿದ್ದ ತೆಂಗು ಮತ್ತು ಸಪೋಡಿಲ್ಲಾ ಎಂಬ ಹಣ್ಣಿನ ಬೆಳೆ ಬೆಳೆಯಲು ಈಗ ಸಾಧ್ಯವಾಗುತ್ತಿಲ್ಲ. ಅದಾನಿ ಪವರ್ ಮತ್ತು ಹತ್ತಿರದ ಟಾಟಾ ಪವರ್ ಕಂ. ಲಿಮಿಟೆಡ್ ಪ್ಲಾಂಟ್‌ನಿಂದ ಬರುವ ಹಾರುಬೂದಿ, ರಾಸಾಯನಿಕ ತ್ಯಾಜ್ಯ ನೀರು ಬೆಳೆಗಳನ್ನು ಹಾಳುಮಾಡುತ್ತಿದೆ ಮತ್ತು ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದೆ ಎಂದು ರೈತರು ಆರೋಪಿಸುತ್ತಾರೆ. ಈ ಕುರಿತು ಕೇಂದ್ರ ಪರಿಸರ ಸಚಿವಾಲಯ 2012ರಲ್ಲಿ ನೇಮಿಸಿದ್ದ ಸುನೀತಾ ನರೈನ್ ಆಯೋಗವು “ಅದಾನಿ SEZ ತನ್ನ ಬೃಹತ್ ಯೋಜನೆಯ ವಿವಿಧ ಹಂತಗಳಲ್ಲಿ ಬಹು ಹಸಿರು ನಿಯಮಗಳನ್ನು ಉಲ್ಲಂಘಿಸಿದೆ- ಮ್ಯಾಂಗ್ರೋವ್‌ಗಳನ್ನು ನಾಶಪಡಿಸುವುದು, ರಾಸಾಯನಿಕ ನೊರೆಗಳು ಮತ್ತು ಹಾರುಬೂದಿಯನ್ನು ಸುರಿಯುವ ಮೂಲಕ ಭೂಮಿ ಹಾಗೂ ನೀರಿನ ಅವನತಿಗೆ ಕಾರಣವಾಗಿದೆ” ಎಂದು ವರದಿ ನೀಡಿತ್ತು. ಆದರೆ ಅದಾನಿ ಮೇಲೆ ಯಾವುದೇ ಕ್ರಮವಾಗಲಿಲ್ಲ. ಏಕೆಂದರೆ ಅವರ ರಕ್ಷಣೆಗೆ ಮೋದಿ ನಿಂತಿದ್ದರು.

2004ರಲ್ಲಿ ಗುಜರಾತ್ ಸರ್ಕಾರವು ಅದಾನಿ ಕಂಪನಿಗೆ ಕಛ್ ಜಿಲ್ಲೆಯ ಮುಂದ್ರಾದಲ್ಲಿ 1,840 ಹೆಕ್ಟೇರ್ ಮತ್ತು ಧಾರ್ಬ್ ಗ್ರಾಮದಲ್ಲಿ 168.42 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಆ ಅರಣ್ಯ ಭೂಮಿಯ ಬೆಲೆ ಎಕೊ ಕ್ಲಾಸ್ 2 ಪ್ರಕಾರ ಒಂದು ಹೆಕ್ಟೇರಿಗೆ 7.5 ಲಕ್ಷ ರೂ. ಆಗಿತ್ತು. ಆದರೆ ಮೋದಿ ಆ ಭೂಮಿಯನ್ನು ಎಕೊ ಕ್ಲಾಸ್ 4 ಪ್ರಕಾರ ಹೆಕ್ಟೇರಿಗೆ ಕೇವಲ 4.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು. ಇದರಿಂದ ಗುಜರಾತ್ ರಾಜ್ಯ ಸರ್ಕಾರಕ್ಕೆ 58.04 ಕೋಟಿ ರೂ ನಷ್ಟವಾಗಿತ್ತು ಎಂದು ರಾಜ್ಯದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ಸಲ್ಲಿಸಿದೆ. ಆದರೂ ಸದ್ಯಕ್ಕೆ ಗುಜರಾತ್‌ನಲ್ಲಿ ಅದಾನಿ ಹೊಂದಿರುವ ಎಸ್‌ಇಜೆಡ್‌ ಪ್ರಮಾಣ 18,000 ಹೆಕ್ಟೇರ್‌ಗೂ ಹೆಚ್ಚಿದೆ!

ವೈಬ್ರಂಟ್ ಗುಜರಾತ್ ಮತ್ತು ಗುಜರಾತ್ ಮಾಡೆಲ್

ಒಂದು ಕಡೆ ಸರ್ಕಾರದ ಬಹುಪಾಲು ಟೆಂಡರ್‌ಗಳು, ಯೋಜನೆಗಳು, ಕಾಮಗಾರಿಗಳು ಅದಾನಿ ಪಾಲಾಗುತ್ತಿದ್ದವು. ಇತ್ತ ಸರ್ಕಾರ ವೈಬ್ರಂಟ್ ಗುಜರಾತ್ ಮತ್ತು ಗುಜರಾತ್ ಮಾಡೆಲ್ ಎಂದು ಪ್ರಚಾರ ಮಾಡಿತು. ಇದಕ್ಕೆ ಪ್ರತಿಯಾಗಿ ಅದಾನಿ ನರೇಂದ್ರ ಮೋದಿಯವರ ಇಮೇಜ್ ಬಿಲ್ಡಿಂಗ್‌ಗೆ ಫಂಡ್ ಮಾಡಿದರು. 2014ರ ಪ್ರಧಾನಿ ಅಭ್ಯರ್ಥಿಯಾದಾಗ ಚುನಾವಣಾ ಖರ್ಚಿಗೆ ಹಣ ಕೊಟ್ಟವರು ಅದಾನಿ ಮತ್ತು ಅಂಬಾನಿ. ಮೋದಿಯವರ ಎಲ್ಲಾ ಚುನಾವಣಾ ಪ್ರಚಾರಕ್ಕೆ ಅದಾನಿಯ ಚಾರ್ಟಡ್ ವಿಮಾನಗಳನ್ನು ಬಳಸಲಾಯಿತು ಮತ್ತು ಅಂತಿಮವಾಗಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು.

2014ರ ನಂತರ

2002ರಲ್ಲಿ 765 ಮಿಲಿಯನ್‌ ಡಾಲರ್ ಇದ್ದ ಅದಾನಿ ಸಮೂಹದ ನಿವ್ವಳ ಮೌಲ್ಯವು 2014ರ ಮಾರ್ಚ್ ವೇಳೆ 8 ಶತಕೋಟಿ ಡಾಲರ್‌ಗೆ ಏರಿತ್ತು. ಆನಂತರ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾದರು. ಅವರ ಪರಮಾಪ್ತ ಗೆಳೆಯನಾಗಿ ಅದಾನಿ ಬೆಳೆದರು. ಅಲ್ಲದೆ ಭಾರತದ ಆರ್ಥಿಕತೆಯನ್ನು ನಿರ್ಧರಿಸುವ ಕೀ ವ್ಯಕ್ತಿಗಳಲ್ಲಿ ಒಬ್ಬರಾದರು.

2016ರ ನಂತರ ದೇಶದ 8 ವಿಮಾನ ನಿಲ್ದಾಣಗಳ ನಿರ್ವಹಣೆಯ ಗುತ್ತಿಗೆಯನ್ನು ಪಿಪಿಪಿ ಮಾದರಿಯಲ್ಲಿ ಉದ್ಯಮಿಗಳಿಗೆ ನೀಡಲಾಯಿತು. ಅದರಲ್ಲಿ ತ್ರಿವೇಂಡ್ರಂ, ಮಂಗಳೂರು, ಮುಂಬೈ, ಅಹಮದಾಬಾದ್, ಜೈಪುರ್, ಲಕ್ನೊ, ಗುವಾಹಟಿ ಸೇರಿ 7 ವಿಮಾನ ನಿಲ್ದಾಣಗಳ ಮುಂದಿನ 50 ವರ್ಷಗಳ ನಿರ್ವಹಣೆಯ ಗುತ್ತಿಗೆ ಅದಾನಿ ಪಾಲಾಯಿತು. ಆಶ್ಚರ್ಯವೆಂದರೆ ಅದುವರೆಗೂ ಆ ಕ್ಷೇತ್ರದಲ್ಲಿ ಅವರಿಗೆ ಯಾವುದೇ ಅನುಭವವಿರಲಿಲ್ಲ.

ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ಕೊಳ್ಳಲು ಅದಾನಿ ಮುಂದಾದಾಗ ಅವರಿಗೆ SBI ಬ್ಯಾಂಕ್ ಸಾಲ ಕೊಡುವಂತೆ ಪ್ರಧಾನಿ ಮೋದಿ ಪ್ರಭಾವ ಬೀರಿದ್ದರು ಎಂಬ ಆರೋಪವಿದೆ. ಸದ್ಯ SBI ಅದಾನಿಗೆ 21,000 ಕೋಟಿ ರೂ.ಗಳನ್ನು ಸಾಲ ನೀಡಿದೆ.

ಅದಾನಿಯ ಅತಿ ದೊಡ್ಡ ಬಂದರಿನ ಮೂಲಕ ದೇಶದ ಶೇ.25ಕ್ಕೂ ಹೆಚ್ಚಿನ ಆಮದು- ರಫ್ತು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಶೇ.21ರಷ್ಟು ಅಡುಗೆ ಎಣ್ಣೆಯನ್ನು ಅದಾನಿ ಕಂಪನಿ ತಯಾರಿಸುತ್ತಿದೆ. ಎಸಿಸಿ ಸಿಮೆಂಟ್ ಕಂಪನಿ ಅದಾನಿ ಪಾಲಾಗಿದೆ. ದೇಶದ ಅತಿ ದೊಡ್ಡ ಸೋಲಾರ್ ವಿದ್ಯುತ್ ತಯಾರಿಗೆ ಅದಾನಿಯದ್ದಾಗಿದೆ. ಅವರು ಗ್ರೀನ್ ಎನರ್ಜಿ ಆರಂಭಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ 7 ಪಬ್ಲಿಕ್ ಲಿಸ್ಟೆಡ್ ಕಂಪನಿಗಳ ಮಾಲೀಕ ಅದಾನಿಯಾಗಿದ್ದಾರೆ.

ಇಷ್ಟು ಬೆಳೆಯುವುದರಲ್ಲಿ ಗೌತಮ್ ಅದಾನಿಯ ಪಾತ್ರ ಇಲ್ಲವೇ ಇಲ್ಲ ಎನ್ನಲಾಗುವುದಿಲ್ಲ. ಆತನೊಬ್ಬ ನುರಿತ ಕಾರ್ಪೊರೇಟ್ ತಂತ್ರಗಾರ. ಹೊಸದನ್ನು ಕಟ್ಟುವ ಬದಲು ಈಗಾಗಲೇ ಲಾಭ ಮಾಡುತ್ತಿದ್ದ ಅತ್ಯುತ್ತಮ ಗಟ್ಟಿ ಕಂಪನಿಗಳನ್ನು ತನ್ನದಾಗಿಸಿಕೊಂಡರು. ಅಂಬುಜ ಸಿಮೆಂಟ್, ಎಸಿಸಿ ಸಿಮೆಂಟ್, MRPl ಸೇರಿದಂತೆ ಚೆನ್ನಾಗಿ ಕೆಲಸ ಮಾಡುತ್ತಿರುವ ಕಂಪನಿಗಳನ್ನು ಅದಾನಿ ತನ್ನ ವಶಕ್ಕೆ ಪಡೆದುಕೊಂಡರು. ದೊಡ್ಡ ವಿಶ್ವಾಸಾರ್ಹತೆ ಇರುವ ಎನ್‌ಡಿಟಿವಿಯನ್ನು ಕೊಂಡುಕೊಂಡರು. ಸೂರ್ಯಕಾಂತಿ ಎಣ್ಣೆಯ ಮೇಲೆ ಏಕಸ್ವಾಮ್ಯ ಸಾಧಿಸಿದರು. ಅಂದರೆ ಬಂಡವಾಳ ಹೂಡಿಕೆಯಲ್ಲಿ ಬಹಳ ಚಾಣಾಕ್ಷ ನಡೆಸ ಅನುಸರಿಸಿದರು. ಕೇವಲ ಮೋದಿ ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಬಳಿ ಮಾಡಿಸಿಕೊಳ್ಳುವ, ಕೇರಳದ ಎಡರಂಗ ಸರ್ಕಾರ ಬಂಡೇಳದಂತೆ ನೋಡಿಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಆದರೆ ಅನಿಲ್ ಅಂಬಾನಿಗೂ ಸಹಾಯ ಮಾಡುವುದಕ್ಕಾಗಿ ರಫೇಲ್ ಒಪ್ಪಂದ ಕೊಡಿಸಿದರೂ ಸಹ ಆತ ಮೇಲೆಳಲು ಸಾಧ್ಯವಾಗಲಿಲ್ಲ.

ಮೋದಿ ಆಳ್ವಿಕೆಯಲ್ಲಿ ವೇಳೆ ಅದಾನಿ ಮಾತ್ರ ಬೆಳೆಯಲಿಲ್ಲ. ಬದಲಿಗೆ ಗುಜರಾತಿನ ಮೊತ್ತೊಬ್ಬ ಉದ್ಯಮಿ ಮುಖೇಶ್ ಅಂಬಾನಿ ಸಹ ಬೆಳೆದರು. ಅವರು ತನ್ನ ಜಿಯೋ ನೆಟ್‌ವರ್ಕ್ ಲಾಂಚ್ ಮಾಡಿದಾಗ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಮೋದಿ ಫೋಟೊ ಬಳಸಿ ಪ್ರಚಾರ ಮಾಡಿದ್ದರು. ನಂತರ ಟೆಲಿಕಾಂ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ.

ಅದಾನಿ- ಅಂಬಾನಿಯ ವಿದೇಶಗಳಲ್ಲಿನ 18 ಒಪ್ಪಂದಗಳಿಗೆ ಖುದ್ದು ಮಧ್ಯಸ್ಥಿಕೆ ವಹಿಸಿದ ಮೋದಿ!

ಭಾರತದ ಪ್ರಧಾನಿಯಾದ ಮೊದಲ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿಯವರು 165 ದಿನಗಳ ಅವಧಿಯ 41 ಸಂದರ್ಭಗಳಲ್ಲಿ 52 ವಿವಿಧ ದೇಶಗಳಿಗೆ ಭೇಟಿ ನೀಡಿದ್ದಾರೆ. ಅದರಲ್ಲಿ ಬಹಳಷ್ಟು ಬಾರಿ ತಮ್ಮೊಂದಿಗೆ ಅದಾನಿ ಮತ್ತು ಅಂಬಾನಿ ಇಬ್ಬರನ್ನು ಕರೆದೊಯ್ದಿದ್ದಾರೆ. ಆ ಸಮಯದಲ್ಲಿ ಈ ಇಬ್ಬರ ಕಂಪನಿಗಳು 16 ದೇಶಗಳಲ್ಲಿ 18 ಒಪ್ಪಂದಗಳಿಗೆ ಸಹಿ ಹಾಕಿವೆ. ಅವುಗಳಲ್ಲಿ ರಕ್ಷಣೆ, ಲಾಜಿಸ್ಟಿಕ್ ಮತ್ತು ಇಂಧನ ಕಂಪನಿಗಳಿಗೆ ಸಂಬಂಧಿಸಿದ ವ್ಯಾಪಾರ ವಿಸ್ತರಣೆಗೆ ಮೋದಿ ಸಹಕರಿಸಿದ್ದಾರೆ ಎಂದು ದಾಖಲೆಗಳ ಸಮೇತ ನ್ಯೂಸ್‌ ಕ್ಲಿಕ್ ವರದಿ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅದಾನಿ ಸಂಪತ್ತು 17 ಪಟ್ಟು ಏರಿಕೆ

2014ರಲ್ಲಿ ಅದಾನಿ ಆಸ್ತಿ ಕೇವಲ 7 ಬಿಲಿಯನ್ ಡಾಲರ್ ಇತ್ತು. ಕೇವಲ ಮೂರು ವರ್ಷಗಳ ಹಿಂದೆ ಅಂದರೆ 2020ರ ಜನವರಿ ವೇಳೆಗೆ ಗೌತಮ್ ಅದಾನಿ ಹೊಂದಿದ್ದ ಸಂಪತ್ತಿನ ಮೌಲ್ಯ 71 ಸಾವಿರ ಕೋಟಿ ರೂ.ಗಳಾಗಿತ್ತು. ಆನಂತರ ಅಪ್ಪಳಿಸಿದ ಕೋವಿಡ್ ಸಾಂಕ್ರಾಮಿಕ, ಲಾಕ್‌ಡೌನ್‌ ಹೊಡೆತದಿಂದ ಬಹುತೇಕ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದರೆ ಅದಾನಿ ಮತ್ತು ಅಂಬಾನಿಗಳ ಆಸ್ತಿ ಮಾತ್ರ ಏರುಗತಿಯಲ್ಲಿಯೇ ಸಾಗುತ್ತಿತ್ತು. ಕೊನೆಗೆ 2022ರ ಏಪ್ರಿಲ್‌ನಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ ಭಾರತದ ನಂಬರ್ 1 ಶ್ರೀಮಂತ ಎನಿಸಿಕೊಂಡರು. ಆನಂತರ ಏಷ್ಯಾದ ನಂಬರ್ 1 ಆದರೆ, ಸೆಪ್ಟಂಬರ್ ವೇಳೆಗೆ ಅದಾನಿ 11.73 ಲಕ್ಷ ಕೋಟಿ ರೂ.ಗಳ ಒಡೆಯರಾಗಿ ಪೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ 2ನೇ ಶ್ರೀಮಂತ ಸ್ಥಾನ ಪಡೆದಿದ್ದರು.

ಅದಾನಿಯ ಮಿತಿ ಮೀರಿದ ಲಾಭಕೋರತನ, ಕಡಿಮೆ ಅವಧಿಯಲ್ಲಿ ಮೇಲೆರಬೇಕೆಂಬ ಹಠದಿಂದಲೇ ಅವರು ಅಡ್ಡದಾರಿ ಹಿಡಿದು ಕೇವಲ ಮೂರು ವರ್ಷಗಳಲ್ಲಿ 17 ಪಟ್ಟು ಆಸ್ತಿಯಲ್ಲಿ ಏರಿಕೆ ಕಂಡರು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳೆದ್ದಿದ್ದವು.

ಅದಕ್ಕೆ ಉತ್ತರ ಹಿಂಡೆನ್‌ಬರ್ಗ್ ವರದಿಯಲ್ಲಿದೆ. ಷೇರು ಮಾರುಕಟ್ಟೆಯಲ್ಲಿ ತನ್ನ ಕಂಪನಿಗಳ ಷೇರುಗಳ 75 ಭಾಗವನ್ನು ತನ್ನಲ್ಲೆ ಇಟ್ಟುಕೊಂಡಿದ್ದಲ್ಲದೆ ಉಳಿದ 15%ರಷ್ಟನ್ನು ಮಾರಿಷಸ್, ಯುಎಇ, ಕೆರಿಬಿಯನ್ ದ್ವೀಪಗಳು ಸೇರಿದಂತೆ ಹಲವು ತೆರಿಗೆ ಮುಕ್ತ ದೇಶಗಳಲ್ಲಿ ಹಲವಾರು ಶೆಲ್ ಕಂಪನಿಗಳನ್ನು ತೆರೆದು ಲೆಕ್ಕ ಪತ್ರ ವಂಚನೆ ಮಾಡಿ ಅದರ ಹಿಡಿತಕ್ಕೆ ಕೊಟ್ಟಿತ್ತು. ಹಾಗಾಗಿ ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ಷೇರುಗಳ ಪ್ರಮಾಣ ಕಡಿಮೆಯಾಗಿ ಅವುಗಳಿಗೆ ಕೃತಕವಾಗಿ ಬೆಲೆ ಹೆಚ್ಚು ಮಾಡಿಕೊಂಡಿತ್ತು. ಒಟ್ಟಾರೆಯಾಗಿ ತಮ್ಮ 7 ಕಂಪನಿಗಳ ಸ್ಟಾಕ್ ತಿರುಚಿ ಬೆಲೆಯನ್ನು ಕೃತಕವಾಗಿ ಏರಿಸುವ ಮೂಲಕ ಈ ಅವಧಿಯಲ್ಲಿ ಸರಾಸರಿ ಶೇ. 819 ಏರಿಕೆ ಕಂಡಿವೆ ಎಂದು ವರದಿ ತಿಳಿಸಿದೆ. ನಂತರ ಅವುಗಳನ್ನು ಅಡವಿಟ್ಟು ಬ್ಯಾಂಕುಗಳಲ್ಲಿ ದೊಡ್ಡ ಮಟ್ಟದ ಸಾಲ ಪಡೆದಿತ್ತು ಅದಾನಿ ಸಮೂಹ.

ಅದಾನಿ ಸಮೂಹದ ನಿರ್ಧಾರ ತೆಗೆದುಕೊಳ್ಳುವ ಪ್ರಮುಖ 22 ಜನರಲ್ಲಿ 8 ಜನರು ಅದಾನಿ ಕುಟುಂಬದವರೆ ಆಗಿದ್ದಾರೆ. ಅವರ ಅಣ್ಣ ವಜ್ರದ ರಫ್ತು ಪ್ರಕರಣದಲ್ಲಿ ಭ್ರಷ್ಟಾಚಾರವೆಸಗಿದ ಆರೋಪದ ಮೇಲೆ ಎರಡು ಬಾರಿ ಜೈಲು ಸೇರಿದ್ದರು. ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಹಿಂಡೆನ್‌ಬರ್ಗ್ ಕಂಪನಿಯು ಅದಾನಿ ಷೇರುಗಳನ್ನು ಶಾರ್ಟ್ ಮಾಡಿ ಆನಂತರ ವರದಿ ಬಿಡುಗಡೆ ಮಾಡಿತ್ತು. ಈಗ ಅದಾನಿ ಕಂಪನಿಯ ಷೇರುಗಳು ಪಾತಾಳ ತಲುಪುತ್ತಿರುವುದರಿಂದ ಅದರ ಬಹುಪಾಲು ಲಾಭವನ್ನು ಹಿಂಡೆನ್‌ಬರ್ಗ್ ಪಡೆದುಕೊಳ್ಳಲಿದೆ.

ಈ ದೇಶ ನಾಲ್ಕು ಜನರಿಂದ ನಡೆಯುತ್ತಿದೆ. ಇಬ್ಬರು ದೇಶ ಮಾರುತ್ತಿದ್ದಾರೆ, ಇಬ್ಬರು ಖರೀದಿಸುತ್ತಿದ್ದಾರೆ.
ಆ ನಾಲ್ವರು ಗುಜರಾತಿನವರು ಎಂದು ಮೋದಿ, ಅಮಿತ್ ಶಾ, ಅದಾನಿ, ಅಂಬಾನಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ ದೇಶದ ಖ್ಯಾತ ಚಿಂತಕಿ ಅರುಂಧತಿ ರಾಯ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದು ನಿಜ ಎಂದು ಹಿಂಡೆನ್‌ ಬರ್ಗ್ ವರದಿ ನಿರೂಪಿಸಿದೆ. ಅದಾನಿ ಬಂಡವಾಳ ಬಯಲಾಗಿದೆ. ನಾಳೆ ದಿನ ಅಂಬಾನಿ ಬಂಡವಾಳವೂ ಬಯಲಾಗಿ ಕುಸಿತ ಕಾಣಬಹುದು. ಏಕೆಂದರೆ ಜನವರಿ 2020ರ ವೇಳೆಗೆ 4.20 ಲಕ್ಷ ಕೋಟಿ ರೂ. ಇದ್ದ ಅಂಬಾನಿಯ ಆಸ್ತಿ ಸೆಪ್ಟಂಬರ್ 2022ರ ವೇಳೆಗೆ 7.33 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅವರು ಸಹ ವಂಚನೆ ಮಾಡಿರುವ ಸಾಧ್ಯತೆಯಿದೆ. ಆದರೆ ಸದ್ಯ ಅದಾನಿ ಕುಸಿತದಿಂದ ಆತನಿಗೆ ಸಾಲ ಕೊಟ್ಟಿದ್ದ ದೇಶದ ಬ್ಯಾಂಕುಗಳು, ಎಲ್‌ಐಸಿ ಕಂಪನಿಗಳು ಕುಸಿಯುತ್ತಿವೆ. ಸಾರ್ವಜನಿಕರ ಹಣ ನಷ್ಟವಾಗಿದೆ. ಭಾರತದ ಆರ್ಥಿಕ ಕುಸಿತ ಮತ್ತಷ್ಟು ಕುಸಿಯಲು ಆರಂಭಿಸುತ್ತಿದೆ. ಕ್ರೋನಿ ಕ್ಯಾಪಿಟಲಿಸಂ ಅನ್ನು ಮೋದಿಯವರು ಬೆಳೆಸಿದ ಪರಿಣಾಮವಾಗಿ ಅದರ ನಷ್ಟವನ್ನು ಇಡೀ ದೇಶದ ಜನ ಅನುಭವಿಸುವ ಪರಿಸ್ಥಿತಿ ಬಂದಿದೆ ಎಂಬುದಕ್ಕೆ ಈ ಸಂದರ್ಭ ಸಾಕ್ಷಿಯಾಗಿದೆ.

ಇದನ್ನೂ ಓದಿ: ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...