ನಮ್ಮ ಆರ್ಥಿಕತೆಯ ಆರೋಗ್ಯ ಪರಿಸ್ಥಿತಿಯು ಉತ್ತಮವಾಗಿಲ್ಲ. ಬೆಲೆ ಏರಿಕೆಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ. ನಿರುದ್ಯೋಗ ಚಾರಿತ್ರಿಕವಾಗಿ ಅತ್ಯಧಿಕ ಮಟ್ಟದಲ್ಲಿದೆ. ಯುವ ಜನರ ಆಸೆ-ಆಕಾಂಕ್ಷೆಗಳು ನೆಲ ಕಚ್ಚುತ್ತಿವೆ. ಮಹಿಳೆಯರ ಭದ್ರತೆಯು ಗಗನಕುಸುಮವಾಗಿದೆ. ರೈತರು ಬೆವರು-ಕಣ್ಣೀರು-ರಕ್ತ ಹರಿಸಿ ದುಡಿಯುತ್ತಿದ್ದರೂ ಅದಕ್ಕೆ ಅವರಿಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಕಾರ್ಮಿಕರ ಹಿತಾಸಕ್ತಿಗಳನ್ನು ಸರ್ಕಾರ ಮೂಲೆಗುಂಪು ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಏನು ನಡೆಯಬಾರದೋ ಅದೆಲ್ಲವೂ ನಡೆಯುತ್ತಿದೆ. ಸಾರ್ವಜನಿಕ ಬಂಡವಾಳ ಹೂಡಿಕೆಯು ಕುಸಿಯುತ್ತಾ ನಡೆದಿದೆ. ಅತಿಯಾದ ಉತ್ತೇಜನ, ವಿನಾಯಿತಿ, ರಿಯಾಯಿತಿ ನೀಡುತ್ತಿದ್ದರೂ ಖಾಸಗಿ ಬಂಡವಾಳ ಹೂಡಿಕೆಯಲ್ಲಿ ಏರಿಕೆಯಾಗುತ್ತಿಲ್ಲ. ಉದಾ: ನಮ್ಮ ಆರ್ಥಿಕತೆಯಲ್ಲಿ 2011ರಲ್ಲಿ ಜಿಡಿಪಿಯಲ್ಲಿ ಉಳಿತಾಯ ಪ್ರಮಾಣ ಶೇ.36.9ರಷ್ಟಿದ್ದುದು 2020-21ರಲ್ಲಿ ಶೇ.28.2ಕ್ಕಿಳಿದಿದೆ. ಇದೇ ರೀತಿಯಲ್ಲಿ ಹೂಡಿಕೆ ಪ್ರಮಾಣ ಜಿಡಿಪಿಯಲ್ಲಿ 2014-15ರಲ್ಲಿ ಶೇ.34.27 ರಷ್ಟಿದ್ದುದು 2020-21ರಲ್ಲಿ ಶೇ.31.
ನಮ್ಮ ಆರ್ಥಿಕತೆಯ ಇಂದಿನ ಮೂಲ ಸಮಸ್ಯೆ ’ಸಮಗ್ರ ಬೇಡಿಕೆ’ಯಲ್ಲಿನ ಕೊರತೆ ಮತ್ತು ’ಮರುವಿತರಣೆ ನೀತಿ’ಯ ನಿರ್ಲಕ್ಷ್ಯ ಎಂದು ಆರ್ಥಿಕ ತಜ್ಞರು ಹೇಳುತ್ತಾ ಬಂದಿದ್ದಾರೆ. ಆದರೆ ಸರ್ಕಾರವು ’ಪೂರೈಕೆ-ಉತ್ಪಾದನೆ-ಬಂಡವಾಳ ಹೂಡಿಕೆ’ ಪ್ರಣೀತ ಆರ್ಥಿಕ ನೀತಿಯನ್ನು ನೆಚ್ಚಿಕೊಂಡಿದೆ. ರೈತರ, ಕಾರ್ಮಿಕರ, ಕೂಲಿಕಾರರ, ಮಹಿಳೆಯರ ಬೆನ್ನುಮೂಳೆ ಮುರಿಯುತ್ತಿರುವ ಅಪ್ರತ್ಯಕ್ಷ ತೆರಿಗೆ(ಜಿಎಸ್‌ಟಿ)ಗಳನ್ನು ಏರಿಸುವುದಕ್ಕೆ ತೋರುತ್ತಿರುವಷ್ಟು ಮುತುವರ್ಜಿಯನ್ನು ಸರ್ಕಾರವು ಕಾರ್ಪೋರೆಟ್ ವಲಯಕ್ಕೆ ಮತ್ತು ಉಳ್ಳವರಿಗೆ ಸಂಬಂಧಿಸಿದ ಪ್ರತ್ಯಕ್ಷ ತೆರಿಗೆಗಳನ್ನು ಏರಿಸುವುದಕ್ಕೆ ತೋರಿಸುತ್ತಿಲ್ಲ. ಇದಕ್ಕೆ ಬದಲಾಗಿ ಅವುಗಳನ್ನು ತಗ್ಗಿಸುತ್ತಿದೆ. ಉದಾ: ಕಾರ್ಪೋರೆಟ್ ತೆರಿಗೆಯನ್ನು 2019-20ರಲ್ಲಿ ಶೇ.30ರಿಂದ ಶೇ.22ಕ್ಕೆ ಇಳಿಸಲಾಯಿತು ಮತ್ತು ಹೊಸ ಆಂತರಿಕ ಕಂಪನಿಗಳಿಗೆ ಇದನ್ನು ಶೇ.15ಕ್ಕೆ ನಿಗದಿ ಮಾಡಲಾಯಿತು. ಅಪ್ರತ್ಯಕ್ಷ ಜಿಎಸ್‌ಟಿಯಲ್ಲಿ ತೆರಿಗೆ ದರಗಳು ಶೇ.12, ಶೇ.18 ಮತ್ತು ಶೇ.28ರವರೆಗಿವೆ.
ಈ ಹಿನ್ನೆಲೆಯಲ್ಲಿ ನಾವು ಒಕ್ಕೂಟ ಸರ್ಕಾರದ 2023-24ನೆಯ ಸಾಲಿನ ಬಜೆಟ್ಟನ್ನು ಪರಿಶೀಲಿಸಬೇಕಾಗಿದೆ. ಬಜೆಟ್ಟೆನ್ನುವುದು ಹೇಳಿಕೇಳಿ ಸರ್ಕಾರದ ಹಣಕಾಸಿನ ವಾರ್ಷಿಕ ಚಟುವಟಿಕೆಯಾಗಿದೆ. ಆದ್ದರಿಂದ ಆರ್ಥಿಕತೆಯು ಎದುರಿಸುತ್ತಿರುವ ಮತ್ತು ಜನರ ಜೀವನೋಪಾಯದ ಸಮಸ್ಯೆಗಳಿಗೆ ಬಜೆಟ್ಟಿನಲ್ಲಿ ಪರಿಹಾರವನ್ನು ನಿರೀಕ್ಷಿಸುವುದು ಸಹಜ. ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಇದ್ಯಾವುದಕ್ಕೂ ಜಪ್ಪೆನ್ನದ ಸರ್ಕಾರವು ಜನರ ಸಂಕಷ್ಟಗಳಿಗೆ ಗಮನ ನೀಡದೆ ಕಣ್ಣುಕಿವಿಗಳೆಲ್ಲವನ್ನೂ ಮುಚ್ಚಿಕೊಂಡು (ಇದರ ಬಾಯಿ ಮಾತ್ರ ’ದೊಡ್ಡ’ದಾಗಿ ಸದಾ ತೆರೆದುಕೊಂಡಿರುತ್ತದೆ) 2023-24ರ ಬಜೆಟ್ಟನ್ನು ಮಂಡಿಸಿದೆ. ಸಮಗ್ರ ಬೇಡಿಕೆಯನ್ನು ಉತ್ತಮಪಡಿಸುವ ಯಾವ ಕ್ರಮಗಳೂ ಈ ಬಜೆಟ್ಟಿನಲ್ಲಿಲ್ಲ. ಸಾರ್ವತ್ರಿಕ ಚುನಾವಣೆ ಮುಂದೆ ಬರುತ್ತಿದ್ದರೂ ಜನರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸದೆ ಸರ್ಕಾರವು ಈ ಬಜೆಟ್ಟನ್ನು ಮಂಡಿಸಿದೆ. ಈ ಸರ್ಕಾರಕ್ಕೆ ಅಭಿವೃದ್ಧಿಯ ಮೇಲೆ ಚುನಾವಣೆ ಗೆಲ್ಲುವ ಕ್ರಮದಲ್ಲಿ ವಿಶ್ವಾಸವಿಲ್ಲ. ಜನರ ಭಾವನೆಯನ್ನು ಕೆರಳಿಸುತ್ತಾ, ಭ್ರಮಾತ್ಮಕ ಸಂಗತಿಗಳನ್ನು ಮುಂದಿಟ್ಟುಕೊಂಡು, ಮಂದಿರ-ಮಸೀದಿ-ಚರ್ಚುಗಳನ್ನು ಗುರಿಯಾಗಿಟ್ಟುಕೊಂಡು ಉದ್ವೇಗ-ಉನ್ಮಾದ ವಾತಾವರಣವನ್ನು ಸೃಷ್ಟಿಸಿ ಚುನಾವಣೆ ಗೆಲ್ಲುವ ಕಾರ್ಯತಂತ್ರದಲ್ಲಿ ನಿಸ್ಸೀಮವಾಗಿರುವ ಈ ಸರ್ಕಾರಕ್ಕೆ ಬಜೆಟ್ಟು ಒಂದು ವಾರ್ಷಿಕ ರೂಢಿಗತ ಕ್ರಿಯೆ ಮಾತ್ರವಾಗಿದೆ.
(1) ಬಜೆಟ್ಟಿನ ಗಾತ್ರದಲ್ಲಿ ಸಾಪೇಕ್ಷ ಇಳಿಕೆ
ಬಜೆಟ್ಟಿನ ಗಾತ್ರ 2022-23ರಲ್ಲಿ ರೂ.41.87 ಲಕ್ಷ ಕೋಟಿಯಿದ್ದುದು 2023-24ರಲ್ಲಿ ರೂ.45.03 ಲಕ್ಷ ಕೋಟಿಯಾಗಿದೆ. ಇಲ್ಲಿನ ಏರಿಕೆ ಶೇ.7.56ರಷ್ಟಾಗಿದೆ. ಆದರೆ 2022-23ರ ಬಜೆಟ್ ವೆಚ್ಚವು ಸದರಿ ವರ್ಷದ ಜಿಡಿಪಿಯ (ರೂ.273.07 ಲಕ್ಷ ಕೋಟಿ) ಶೇ.15.29ರಷ್ಟಿತ್ತು. ಆದರೆ 2023-24ರ ಬಜೆಟ್ ವೆಚ್ಚವು ಸದರಿ ವರ್ಷದ ಜಿಡಿಪಿಯ (ರೂ.301.75 ಲಕ್ಷ ಕೋಟಿ) ಶೇ.14.92ರಷ್ಟಾಗಿದೆ. ಅಂದರೆ ಬಜೆಟ್ಟಿನ ಗಾತ್ರ ರೂಪಾಯಿಗಳಲ್ಲಿ ಏರಿಕೆಯಾಗಿದೆಯೇ ವಿನಾ ಸಾಪೇಕ್ಷವಾಗಿ ಮತ್ತು ನಿಜ ಬೆಲೆಯ ರೂಪದಲ್ಲಿ ಏರಿಕೆಯಾಗಿಲ್ಲ. ಆರ್ಥಿಕತೆಯ ಜಿಡಿಪಿಯಲ್ಲಿ ಏರಿಕೆ 2022-23ರಿಂದ 2023-24ರಲ್ಲಿ ಶೇ.10.5ರಷ್ಟಾಗಿದ್ದರೆ ಬಜೆಟ್ ಗಾತ್ರದಲ್ಲಿನ ಏರಿಕೆ ಶೇ.7.56ರಷ್ಟಾಗಿದೆ.
(2) ಸಬ್ಸಿಡಿಯಲ್ಲಿ ಗಣನೀಯ ಕಡಿತ
ಈ ಸರ್ಕಾರಕ್ಕೆ ಸಬ್ಸಿಡಿಗಳ ಮೇಲೆ ಇನ್ನಿಲ್ಲದ ಅಸಮಾಧಾನವಿದೆ. ಇದನ್ನು ತೊಡೆದು ಹಾಕಬೇಕೆಂಬುದೇ ಇದರ ಉದ್ದೇಶವಾಗಿದೆ. ಆದರೆ ಉದ್ದಿಮೆಗಳಿಗೆ, ವ್ಯಾಪಾರಿಗಳಿಗೆ, ಬಂಡವಾಳಿಗರಿಗೆ ನೀಡುವ ರಿಯಾಯಿತಿ-ವಿನಾಯಿತಿಗಳನ್ನು ’ಉತ್ಪಾದಕ’ ಎಂದು ಪರಿಗಣಿಸಿ ಅವುಗಳನ್ನು ಮುಂದುವರಿಸುತ್ತಿದೆ ಮತ್ತು ಹೆಚ್ಚಿಸುತ್ತದೆ. ಆದರೆ ಕೂಲಿಕಾರರಿಗೆ, ರೈತರಿಗೆ, ಮಹಿಳೆಯರಿಗೆ ಸಲ್ಲುವ ಸಬ್ಸಿಡಿಗಳನ್ನು ಸರ್ಕಾರ ಕೊಲ್ಲುತ್ತಿದೆ. ಇವರಿಗೆ ನೀಡುವ ಸಬ್ಸಿಡಿಯು ಅನುತ್ಪಾದಕ ಎಂದು ಇದನ್ನು ಹೀಯಾಳಿಸುತ್ತಿದೆ. ಇಲ್ಲಿದೆ ಇದರ ವಿವರ:
(i) ಆಹಾರ ಸಬ್ಸಿಡಿ: 2022-23: ರೂ.2.25 ಲಕ್ಷ ಕೋಟಿ. 2023-24: ರೂ.1.75 ಲಕ್ಷ ಕೋಟಿ
(ii) ರಸಗೊಬ್ಬರ ಸಬ್ಸಿಡಿ: 2022-23: ರೂ.2.87 ಲಕ್ಷ ಕೋಟಿ. 2023-24: ರೂ.1.98 ಲಕ್ಷ ಕೋಟಿ.
(iii) ಆಹಾರ ಕಾರ್ಪೋರೇಶನ್ ಸಬ್ಸಿಡಿ: 22-23: ರೂ.2.15 ಲಕ್ಷ ಕೋಟಿ. 2023-24 ರೂ.1.37 ಲಕ್ಷ ಕೋಟಿ
(iv) ಆಹಾರ ಪ್ರೊಕ್ಯೂರ್‌ಮೆಂಟ್ ಸಬ್ಸಿಡಿ: 22-23: ರೂ.0.72 ಲಕ್ಷ ಕೋಟಿ. 2023-24: ರೂ.0.60 ಲಕ್ಷ ಕೋಟಿ
ಒಟ್ಟು: 2022-23; ರೂ. 7.99 ಲಕ್ಷ ಕೋಟಿ. 2023-24; ರೂ.5.70 ಲಕ್ಷ ಕೋಟಿ. ಕಡಿತ: (-)ಶೇ.28.66.
ಈ ಎಲ್ಲ ಸಬ್ಸಿಡಿಗಳ ಗುರಿಯು ರೈತರಿಗೆ, ಕಾರ್ಮಿಕರಿಗೆ, ಕೂಲಿಕಾರರಿಗೆ ಹಾಗೂ ದುಡಿಯುವ ಮಹಿಳೆಯರಿಗೆ ಪರಿಹಾರ ನೀಡುವ ಕ್ರಮವಾಗಿದೆ. ಈ ಕಡಿತದಿಂದ ಜನರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಮತ್ತು ಜನರ ಅನುಭೋಗ ವೆಚ್ಚದ ಸಾಮರ್ಥ್ಯವು ಕುಸಿಯುತ್ತದೆ. ಇದು ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಈ ಸಮಗ್ರ ಬೇಡಿಕೆಯು ಕುಸಿಯುತ್ತಿರುವಾಗ ಖಾಸಗಿ ವಲಯದಲ್ಲಿನ ಬಂಡವಾಳ ಹೂಡಿಕೆ ಸಾಧ್ಯವಾಗುವುದಿಲ್ಲ. ಬಂಡವಾಳ ಹೂಡಿಕೆಯಿಂದ ನಿರೀಕ್ಷಿತ ಲಾಭದ ಭರವಸೆಯಿಲ್ಲದಿದ್ದರೆ ಬಂಡವಾಳಿಗರು ಹೂಡಿಕೆ ಮಾಡುವುದಿಲ್ಲ. ಇದನ್ನು 1930ರ ದಶಕದಲ್ಲಿಯೇ ಕೇನ್ಸ್ ಸಾರಿದ್ದಾನೆ. ಬಂಡವಾಳದಿಂದ ನಿರೀಕ್ಷಿಸಿದ ಪ್ರತಿಫಲ ಹೆಚ್ಚಿಗಿದ್ದರೆ ಬಂಡವಾಳಿಗರು ಬಡ್ಡಿ ಅಧಿಕವಾಗಿದ್ದರೂ ಹೂಡಿಕೆ ಮಾಡುತ್ತಾರೆ. ಬಂಡವಾಳ ಹೂಡಿಕೆಯಿಂದ ನಿರೀಕ್ಷಿಸಿದ ಲಾಭ ಆಕರ್ಷಣೀಯವಾಗಿರಬೇಕಾದರೆ ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆಯು ಉತ್ತಮವಾಗಿರಬೇಕು. ನಮ್ಮ ಆರ್ಥಿಕತೆಯಲ್ಲಿ ಇಂದು ಸಮಗ್ರ ಬೇಡಿಕೆಯು ಕೆಳಮಟ್ಟದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿನ ಹೂಡಿಕೆಗೆ ಉತ್ತೇಜನ (ಇನ್‌ಸೆಂಟಿವ್ಸ್), ರಿಯಾಯಿತಿ (ರಿಬೇಟ್), ವಿನಾಯಿತಿ (ಕನ್‌ಸೆಶನ್ಸ್) ಮಾತ್ರ ಸಾಕಾಗುವುದಿಲ್ಲ. ಖಾಸಗಿ ವಲಯದ ಬಗೆಗಿನ ಸರ್ಕಾರದ ನಿರೀಕ್ಷೆಯು ವಿಫಲವಾಗಿದೆ. ಬಂಡವಾಳ ಹೂಡಿಕೆಯಾಗದಿದ್ದರೆ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ.
(3) ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ
ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಸತತವಾಗಿ ಕಾಡುತ್ತಾ ಬಂದಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಯೆಂದರೆ ಅಪೌಷ್ಟಿಕತೆ (ಅನಿಮಿಯ-ರಕ್ತಹೀನತೆ). ಅಪೌಷ್ಟಿಕತೆಯನ್ನು ’ಮುಚ್ಚಿಟ್ಟ ಹಸಿವು’ ಎನ್ನುತ್ತಾರೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 121 ದೇಶಗಳ ಪೈಕಿ 107ನೆಯ ಸ್ಥಾನದಲ್ಲಿದೆ. ಈ ಸಂಸ್ಥೆಯು ಭಾರತವನ್ನು ’ಹಸಿವಿನ ಸ್ಥಿತಿ ಗಂಭೀರ’ ಎನ್ನುವ ಗುಂಪಿನಲ್ಲಿರಿಸಿದೆ. ಯುಎನ್‌ಡಿಪಿಯ 2021-22ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ದೇಶಗಳಲ್ಲಿ ಭಾರತದ ಸ್ಥಾನ 132. ಒಕ್ಕೂಟ ಸರ್ಕಾರದ್ದೇ ನೀತಿ ಆಯೋಗದ ವರದಿ ಪ್ರಕಾರ ಭಾರತದಲ್ಲಿರುವ ಬಹುಮುಖಿ ಬಡವರ ಪ್ರಮಾಣ ಶೇ.25. ಅಂದರೆ ಇಂದಿನ ಜನಸಂಖ್ಯೆಯ 140 ಕೋಟಿಯಲ್ಲಿ ಬಹುಮುಖಿ ಬಡವರ ಸಂಖ್ಯೆ 35 ಕೋಟಿ. ಬಹುಮುಖಿ ಬಡತನ ಎನ್ನುವುದು ವರಮಾನ ಬಡತನಕ್ಕಿಂತ (ಬಿಪಿಎಲ್) ಹೆಚ್ಚು ವಿಸ್ತೃತವಾದ ಪರಿಭಾವನೆ. ಇದು ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ. ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಮಕ್ಕಳು ಮತ್ತು ಮಹಿಳೆಯರಲ್ಲಿನ ಅನಿಮಿಯ (ರಕ್ತಹೀನತೆ) 2015-16ರಿಂದ 2019-2021ರ ನಡುವೆ ತೀವ್ರ ಏರಿಕೆಯಾಗಿದೆ. ಆದರೆ ಅದನ್ನು ನಿವಾರಿಸುವ ಕಾರ್ಯಕ್ರಮಕ್ಕೆ ನೀಡಿರುವ ಅನುದಾನ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.
(i) ಸ್ಟಂಟೆಡ್ ಮಕ್ಕಳ ಪ್ರಮಾಣ (ವಯಸ್ಸಿಗೆ ಅನುಗುಣ ಎತ್ತರದ ಕೊರತೆ ಮಕ್ಕಳು) 2019-20: ಶೇ.36
(ii) ವೇಸ್ಟೆಡ್ ಮಕ್ಕಳ ಪ್ರಮಾಣ (ಎತ್ತರಕ್ಕೆ ಅನುಗುಣ ತೂಕದ ಕೊರತೆ ಮಕ್ಕಳು) 2019-20: ಶೇ.19.
(iii) ನಿಗದಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಮಕ್ಕಳು (ವಯಸ್ಸಿಗೆ ಅನುಗುಣ ತೂಕದ ಕೊರತೆ ಮಕ್ಕಳು): 2019-20: ಶೇ.32.
(iv) ಒಟ್ಟು 15ರಿಂದ 49 ವರ್ಷಗಳ ವಯೋಮಾನದ ಮಹಿಳೆಯರಲ್ಲಿನ ಅನಿಮಿಯ: 2015-16: ಶೇ.53.4, 2019-20: ಶೇ.57.7
(v) ಒಟ್ಟು 6ರಿಂದ 59 ತಿಂಗಳುಗಳ ವಯೋಮಾನದ ಮಕ್ಕಳಲ್ಲಿ ಅನಿಮಿಯ: 2019-20: ಶೇ.58.6, 2019-20: ಶೇ.67.
ಈ ಅಂಕಿಅಂಶಗಳು ದೇಶದಲ್ಲಿನ ಸರಿಸುಮಾರು ಶೇ.65ರಷ್ಟು ಜನರ ಆರೋಗ್ಯ ಪರಿಸ್ಥಿತಿಯು ಎಷ್ಟು ಗಂಭೀರವಾಗಿದೆ ಎಂಬುದನ್ನು ಸೂಚಿಸುತ್ತವೆ. ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿ ಅನಿಮಿಯ ಪ್ರಮಾಣವು 2015-16ರಿಂದ 2019-20ರ ಶ್ರೀ ನರೇಂದ್ರ ಮೋದಿ ಆಳ್ವಿಕೆಯ ಅವಧಿಯಲ್ಲಿ ಏರಿಕೆಯಾಗಿದೆ.
ಈ ಸಮಸ್ಯೆಯ ಪರಿಹಾರಕ್ಕೆ ಎರಡು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಮೊದಲನೆಯದು ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮತ್ತು ಎರಡನೆಯದು ಪೋಷಣ್ 2. ಇವುಗಳಿಗೆ 2022-23ರಲ್ಲಿದ್ದ ಅನುದಾನ ರೂ.33063 ಕೋಟಿ. ಇದನ್ನು 2023-24ರಲ್ಲಿ ರೂ.32154 ಕೋಟಿಗಿಳಿಸಲಾಗಿದೆ. ಇದೇ ರೀತಿಯಲ್ಲಿ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (ನ್ಯೂಟ್ರಿಷನ್ ಬೇಸ್ಡ್ ಸಬ್ಸಿಡಿ ಯೋಜನೆ) ಎಂಬ ಕಾರ್ಯಕ್ರಮದಲ್ಲಿ ಅನುದಾನವನ್ನು 2022-23ರ ರೂ.71122 ಕೋಟಿಯಿಂದ 2023-24ರಲ್ಲಿ ರೂ.44000 ಕೋಟಿಗಿಳಿಸಲಾಗಿದೆ. ಒಟ್ಟು ಈ ಮೂರು ಕಾರ್ಯಕ್ರಮಗಳು ಸೇರಿ 2022-23ರ ರೂ. 1.04 ಲಕ್ಷ ಕೋಟಿ ಅನುದಾನವನ್ನು 2023-24ರಲ್ಲಿ ರೂ.76154 ಕೋಟಿಗಿಳಿಸಲಾಗಿದೆ. ಇಲ್ಲಿನ ಕಡಿತ ಶೇ.26.9. ಜನಗಣತಿ 2011ರ ಪ್ರಕಾರ ದೇಶದಲ್ಲಿನ ಮಹಿಳೆಯರ ಸಂಖ್ಯೆ 49.64 ಕೋಟಿ ಮತ್ತು ಮಕ್ಕಳ ಸಂಖ್ಯೆ 16.38 ಕೋಟಿ.
ಒಟ್ಟಾರೆ ಬಜೆಟ್ಟಿನಲ್ಲಿ ಆರೋಗ್ಯ ಕ್ಷೇತ್ರದ ಅನುದಾನವೂ ಕನಿಷ್ಠ ಮಟ್ಟದಲ್ಲಿದೆ. ಇದಕ್ಕೆ 2023-24ರಲ್ಲಿ ನೀಡಿರುವ ಅನುದಾನ ರೂ.89155 ಕೋಟಿ. ಇದು ದೇಶದ 2023-24ನೆಯ ಸಾಲಿನ ನಿರೀಕ್ಷಿತ ಜಿಡಿಪಿಯ ಶೇ. 0.29 ರಷ್ಟಾಗಿದೆ. ಕೋವಿಡ್ ವಿಪತ್ತಿನಿಂದ ಜರ್ಜರಿತವಾದ ಜನಸಮೂಹಕ್ಕೆ ಆರೋಗ್ಯ ಭದ್ರತೆಯನ್ನು ನೀಡುವ ರೀತಿಯಲ್ಲಿ ಅನುದಾನವಿಲ್ಲ.
(4). ಬಜೆಟ್ಟು ಮತ್ತು ರೈತರ ಅಳಲು
ಒಕ್ಕೂಟ ಸರ್ಕಾರ ಕೃಷಿಯನ್ನು ಕಾರ್ಪೋರೆಟೀಕರಣಗೊಳಿಸುವುದಕ್ಕಾಗಿ ಜಾರಿಗೊಳಿಸಿದ್ದ ಮೂರು ಕರಾಳ ಕೃಷಿ ಕಾಯಿದೆಗಳ ವಿರುದ್ಧ ಭಾರತದ ರೈತ ಸಮುದಾಯ ಒಂದು ವರ್ಷಕ್ಕೂ ಮೇಲ್ಪಟ್ಟು ಹೋರಾಟ ನಡೆಸಿ, ಇಡೀ ಜಗತ್ತೇ ಬೆರಗಾಗುವಂತೆ ಸರ್ಕಾರವು ಮಂಡಿಯೂರಿ ಕ್ಷಮಾಪಣೆ ಕೇಳಿ ವಾಪಸ್ಸು ತೆಗೆದುಕೊಳ್ಳುವಂತೆ ಮಾಡಿತು. ಆದರೆ ಅವರ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಶಾಸನಾತ್ಮಕ ಸಾರ್ವತ್ರೀಕರಣದ ಬಗ್ಗೆ ವಿತ್ತ ಮಂತ್ರಿ ಬಜೆಟ್ಟಿನಲ್ಲಿ ಚಕಾರವೆತ್ತಿಲ್ಲ. ರೈತರ ತಲಾ ಜಿಡಿಪಿಯು ಕೈಗಾರಿಕೆ ಮತ್ತು ಸೇವಾ ವಲಯದ ತಲಾ ಜಿಡಿಪಿಗಿಂತ ಮೂರು-ನಾಲ್ಕು ಪಟ್ಟು ಕಡಿಮೆಯಿದೆ. ಒಟ್ಟು ಸಾಗುವಳಿದಾರರಾದ 12.72 ಕೋಟಿಯಲ್ಲಿ ಶೇ.85ರಷ್ಟು ಅತಿಸಣ್ಣ ಮತ್ತು ಸಣ್ಣ ಹಿಡುವಳಿದಾರರಿದ್ದಾರೆ. ಭೂರಹಿತ ದಿನಗೂಲಿ ಕೂಲಿಕಾರರ ಸಂಖ್ಯೆ 10.66 ಕೋಟಿ. ಈ ಬೃಹತ್ ಜನಸ್ತೋಮಕ್ಕೆ 2023-24ನೆಯ ಸಾಲಿನ ಬಜೆಟ್ಟಿನಲ್ಲಿ ಏನಿದೆ?
ಇದನ್ನೂ ಓದಿ: ಒಕ್ಕೂಟ ಬಜೆಟ್ 2023-24: ‘ಕಡಿತ-ಬಡಿತ’ಗಳ ಬಜೆಟ್ – ಟಿ. ಆರ್. ಚಂದ್ರಶೇಖರ
ಕೃಷಿ, ಕೃಷಿಕರ ಕಲ್ಯಾಣ, ಕೃಷಿ ಸಂಶೋಧನೆ, ಕೃಷಿ ಶಿಕ್ಷಣ, ಮೀನುಗಾರಿಕೆ ಮತ್ತು ಪಶುಸಂಗೋಪನೆ ಸೇರಿ 2021-22ರ ಅನುದಾನ ರೂ.1.27 ಲಕ್ಷ ಕೋಟಿಯಾದರೆ 2022-23ರ ಅನುದಾನ ರೂ. 1.24 ಲಕ್ಷ ಕೋಟಿ. ಮುಂದೆ 2023-24ನೆಯ ಸಾಲಿನ ಅನುದಾನ ರೂ.1.32 ಲಕ್ಷ ಕೋಟಿ. ಈ ಅನುದಾನಗಳು ಕ್ರಮವಾಗಿ ಆಯಾ ವರ್ಷದ ಜಿಡಿಪಿಯ ಶೇ.0.54, ಶೇ.0.45 ಮತ್ತು ಶೇ.0.43ರಷ್ಟಾಗುತ್ತದೆ. ಅಂದರೆ ಕೃಷಿ ಮತ್ತು ತತ್ಸಬಂಧಿ ಚಟುವಟಿಕೆಗಳಿಗೆ ನೀಡಿದ ಅನುದಾನ ಜಿಡಿಪಿಗೆ ಸಾಪೇಕ್ಷವಾಗಿ 2021-22ರಿಂದ ಕಡಿಮೆಯಾಗುತ್ತಾ ನಡೆದಿದೆ.
(5) ಮನ್‌ರೇಗ – ನಿರುದ್ಯೋಗ
ಕೋವಿಡ್ ವಿಪತ್ತಿನಲ್ಲಿ ಗ್ರಾಮೀಣ ಜನಸಮುದಾಯವನ್ನು, ವಲಸೆ ಕಾರ್ಮಿಕರ ಬದುಕನ್ನು ಕಾಯ್ದಿದ್ದು ಮನ್‌ರೇಗಾ (MGNREGA ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯಿದೆ) ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಸದರಿ ಒಕ್ಕೂಟ ಸರ್ಕಾರವು ಅಸಮಾಧಾನದಿಂದಲೇ ಅನುದಾನ ನೀಡುತ್ತಾ ಬಂದಿದೆ. ನಮ್ಮ ಪ್ರಧಾನಮಂತ್ರಿ 2015ರಲ್ಲಿ ಮನ್‌ರೇಗಾ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಾ ’ಲಿವಿಂಗ್ ಮಾನ್ಯುಮೆಂಟಲ್ ಫೈಲ್ಯೂರ್ ಆಫ್ ಯುಪಿಎ’ ಎಂದು ಅಬ್ಬರಿಸಿದ್ದರು. ಇವರ ಸಂಪುಟದ ಮಂತ್ರಿ ನರೇಂದ್ರಸಿಂಗ್ ತೋಮರ್ ಅವರು 2019ರಲ್ಲಿ ’ಇದನ್ನು ಖಾಯಂ ಆಗಿ ಮುಂದುವರಿಸಿಕೊಂಡು ಹೋಗುವುದಿಲ್ಲ’ ಎಂದು ಹೇಳಿದ್ದರು. ಆದರೆ ಪರಿಸ್ಥಿತಿಯು ಸರ್ಕಾರವನ್ನು ತಲೆ ಬಾಗುವಂತೆ ಮಾಡಿ ಅನಿವಾರ್ಯವಾಗಿ ಮನ್‌ರೇಗಾವನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿದೆ.
ಈ ಕೆಳಗಿನ ಕೋಷ್ಟಕವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರೆ ಸರ್ಕಾರವು ಗ್ರಾಮೀಣ ದುಡಿಮೆದಾರರ ಬಗ್ಗೆ ಎಷ್ಟೊಂದು ಅಸೂಯೆಯಿಟ್ಟುಕೊಂಡಿದೆ ಎಂದು ಸ್ಟಷ್ಟವಾಗುತ್ತದೆ.

ಕೋಷ್ಟಕ 1. ಮನ್‌ರೇಗಾ ಅನುದಾನ: ಒಕ್ಕೂಟ ಸರ್ಕಾರದ ತಾರತಮ್ಯ
ಇಲ್ಲಿನ ಏಳು ವರ್ಷಗಳಲ್ಲಿಯೂ ಮನ್‌ರೇಗಾ ಕಾರ್ಯಕ್ರಮಕ್ಕೆ ಬಜೆಟ್ಟಿನಲ್ಲಿ ನೀಡಿರುವ ಅನುದಾನಕ್ಕಿಂತ ವರ್ಷದ ಕೊನೆಯಲ್ಲಿ ವೆಚ್ಚವನ್ನು ಪರಿಷ್ಕೃತಗೊಳಿಸಿದಾಗ ನಿಜವಾಗಿ ಖರ್ಚಾದ ಅನುದಾನ ಅಧಿಕವಾಗಿದೆ. ಈ ಎರಡು ಅನುದಾನಗಳ ನಡುವಣ ವ್ಯತ್ಯಾಸವು ಸರ್ಕಾರದ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ ವರ್ಷಕ್ಕೆ ನೀಡಿರುವ ಅನುದಾನವು 2019-20ರಲ್ಲಿನ ಅನುದಾನಕ್ಕೆ ಸಮನಾಗಿದೆ. ಅಂದರೆ ವರ್ಷದಿಂದ ವರ್ಷಕ್ಕೆ ನಿರುದ್ಯೋಗ ಸಮಸ್ಯೆಯು ಬಿಗಡಾಯಿಸುತ್ತಾ ನಡೆದಿರುವುದು ಸರ್ಕಾರಕ್ಕೆ ಕಾಣುತ್ತಿಲ್ಲವೇ? ವಾಸ್ತವವಾಗಿ 2022-23ನೆಯ ಸಾಲಿನ ಮನ್‌ರೇಗ ಕೂಲಿ ಬಾಕಿಯೇ ರೂ.16071 ಕೋಟಿಯಿದೆ. ಈ ಯೋಜನೆಯ ಕಾರ್ಯಕರ್ತರಾದ ನಿಖಿಲ್ ಡೇ ಪ್ರಕಾರ ದೇಶದ ದುಡಿಮೆದಾರರೆಲ್ಲರಿಗೂ 100 ದಿನಗಳ ಉದ್ಯೋಗ ನೀಡಲು 2023-24ರಲ್ಲಿ ಇದಕ್ಕೆ ರೂ.2.72 ಲಕ್ಷ ಕೋಟಿಯ ಅಗತ್ಯವಿದೆ. ಈಗ ನೀಡಿರುವ ಅನುದಾನದಲ್ಲಿ 50 ದಿನಗಳ ಉದ್ಯೋಗ ನೀಡುವುದು ಕಷ್ಟಸಾಧ್ಯ.
ಸರ್ಕಾರಕ್ಕೂ ತಿಳಿದಿರುವಂತೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರಕಾರ ಒಟ್ಟು ನಿರುದ್ಯೋಗ ಪ್ರಮಾಣ ಶೇ.8ರಷ್ಟಿದ್ದರೆ 15ರಿಂದ 29ರ ವಯೋಮಾನದ ಯುವಕರಲ್ಲಿ ಇದು ಶೇ.25ರಷ್ಟಿದೆ. ಒಕ್ಕೂಟ ಸರ್ಕಾರವು ಉದ್ಯೋಗ ಮತ್ತು ನಿರುದ್ಯೋಗಗಳ ಸಾಂಖ್ಯಿಕ ವಿವರಗಳ ವರದಿಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿದೆ. ಆರ್ಥಿಕತೆಗೆ ಸಂಬಂಧಿಸಿದ ಸಾಂಖ್ಯಿಕ ಮಾಹಿತಿಯನ್ನು ಹತ್ತಿಕ್ಕುವುದೇ ತನ್ನ ಕರ್ತವ್ಯವನ್ನಾಗಿ ಮಾಡಿಕೊಂಡಿದೆ. ಒಕ್ಕೂಟ ಸರ್ಕಾರವು ಕಾರ್ಮಿಕ ಬ್ಯೂರೋದ ತ್ರೈಮಾಸಿಕ ಉದ್ದಿಮೆಗಳ ಸಮೀಕ್ಷೆಯನ್ನು ನಿಷೇಧಿಸಿದೆ. ವಾರ್ಷಿಕ ಉದ್ಯೋಗ-ನಿರುದ್ಯೋಗ ಸಮೀಕ್ಷೆಯನ್ನು 2017-18ರಲ್ಲಿ ನಿಲ್ಲಿಸಿತು. ಆರ್ಥಿಕ ಸಾಂಖ್ಯಿಕ ಮಾಹಿತಿಯನ್ನು ಹತ್ತಿಕ್ಕುತ್ತಿರುವ ಸರ್ಕಾರ ಕ್ರಮವು ಆ ವಿಷಯದಲ್ಲಿನ ಅದರ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳುವುದನ್ನು ಸೂಚಿಸುತ್ತದೆ.
ಕಳೆದ ಐದಾರು ವರ್ಷಗಳಿಂದ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದ ’ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿ, ಜಾನ್ ಡ್ರೀಜ್ ಮುಂತಾದವರು ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸಲು ಒತ್ತಾಯಿಸುತ್ತಿದ್ದಾರೆ. ಆದರೆ ಉದ್ಯೋಗ ನಿರ್ಮಾಣದ ಬಗ್ಗೆ ಔದಾಸೀನ್ಯ ಭಾವನೆ ತಳೆದಿರುವ ಒಕ್ಕೂಟ ಸರ್ಕಾರ ಇದಕ್ಕೆ ಸಿದ್ಧವಿಲ್ಲ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ತನ್ನ ’ಸ್ಟೇಟ್ ಆಫ್ ಇನ್‌ಈಕ್ವಾಲಿಟಿ ರಿಪೋರ್ಟ್ 2022’ರಲ್ಲಿ ಏರಿಕೆಯಾಗುತ್ತಿರುವ ಅಸಮಾನತೆಯನ್ನು ಮತ್ತು ಉದ್ಯೋಗಗಳ ನಷ್ಟವನ್ನು ಎದುರಿಸಲು ನಗರ ಪ್ರದೇಶಕ್ಕೂ ಒಂದು ಉದ್ಯೋಗ ಖಾತ್ರಿ ಯೋಜನೆಯನ್ನು ಶಿಫಾರಸ್ಸು ಮಾಡಿತ್ತು. ಆದರೆ 2023-24ರ ಬಜೆಟ್ಟಿನಲ್ಲಿ ಇದರ ಬಗ್ಗೆ ಯಾವುದೇ ಚರ್ಚೆಯಿಲ್ಲ. ಈ ಸರ್ಕಾರಕ್ಕೆ ಉದ್ಯೋಗ ನಿರ್ಮಾಣದ ಬಗ್ಗೆ ಆಸಕ್ತಿಯೇ ಇಲ್ಲ.
(5) ಮೂಲಸೌಕರ್ಯ, ಡಿಜಿಟಲೈಸೇಶನ್, ಆಪ್ ಸೇವೆ ಇತ್ಯಾದಿ
ಈ ಸರ್ಕಾರಕ್ಕೆ ಮತ್ತು ಅದರ ನಾಯಕರಿಗೆ ಆರ್ಥಿಕತೆಯ ಮೂಲ ತಳಮಟ್ಟದಲ್ಲಿನ ಜನರ, ರೈತರ, ದುಡಿಮೆದಾರರ, ಅಸಂಘಟಿತ ಕೂಲಿಕಾರರ, ಕಾರ್ಮಿಕರ, ತಲೆಮೇಲೆ ಹೊತ್ತುಕೊಂಡು-ತಳ್ಳುಗಾಡಿಯಲ್ಲಿ-ಗೂಡಂಗಡಿಗಳಲ್ಲಿ ಮಾರಾಟ ಮಾಡುವ ಪುಟ್ಟ ವ್ಯಾಪಾರಗಾರರ, ಮಹಿಳಾ ದುಡಿಮೆದಾರರ ಬದುಕಿನ ಅರಿವಿಲ್ಲ, ಅವರ ನೋವು-ಸಂಕಟಗಳ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿಲ್ಲ. ಈ ಸರ್ಕಾರಕ್ಕೆ ರೈತರು ಮತ್ತು ಕಾರ್ಮಿಕರ ಬಗ್ಗೆ ಅಭಿಮಾನವಿಲ್ಲ. ಉದ್ದಿಮೆದಾರರನ್ನು ಸರ್ಕಾರವು ’ವೆಲ್ಥ್ ಕ್ರಿಯೇಟರ್‍ಸ್’ ಎಂದು ಕರೆಯುತ್ತಿದೆ. ಆದರೆ ರೈತ-ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲ. ಹಕ್ಕುಗಳ ಬಗ್ಗೆ ಜಾಗೃತರಾಗಿರುವ ರೈತರು-ಕಾರ್ಮಿಕರನ್ನು ಹತ್ತಿಕ್ಕುವ ಉದ್ದೇಶದಿಂದಲೇ ಪ್ರಧಾನಮಂತ್ರಿ, ವಿತ್ತ ಮಂತ್ರಿಗಳು ಹಕ್ಕುಗಳ ಬಗ್ಗೆ ಹೋರಾಟ ಮಾಡುವುದು ವೇಲ್ತ್ ಆಫ್ ಟೈಮ್ ಎಂದು, ಕರ್ತವ್ಯಗಳ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಹೇಳುತ್ತಿದ್ದಾರೆ.
ಮೂಲ ಸೌಕರ್ಯಗಳು, ಡಿಜಿಟಲೈಸೇಶನ್, ಆಪ್ ಸೇವೆ, ಫಾರ್‍ಮಲೈಸೇಶನ್ ಮುಂತಾದವುಗಳನ್ನು ಸರ್ಕಾರ ವ್ಯಸನದಂತೆ ಹಚ್ಚಿಕೊಂಡಿದೆ. ದಿನದ ಊಟಕ್ಕೂ ಭಂಗ ಪಡುತ್ತಿರುವ ಕೋಟ್ಯಂತರ ದುಡಿಮೆದಾರರು-ಕೂಲಿಕಾರರಿಗೆ ಡಿಜಿಟಲ್ ಜಗತ್ತಿಗೆ ಪ್ರವೇಶಿಸುವುದು ಸಾಧ್ಯವಿಲ್ಲ. ಒಟ್ಟಾರೆ ಈ ಸರ್ಕಾರ ಉಳ್ಳವರ ಹಿತಾಸಕ್ತಿಗಳನ್ನು ಪೋಷಿಸುತ್ತಿದೆಯೇ ವಿನಾ ಉಳಿದವರ ಹಿತಾಸಕ್ತಿ ಬಗ್ಗೆ ರವಷ್ಟು ಕಾಳಜಿಯಿಲ್ಲ.
(6) ಉಳ್ಳವರಿಗೆ ತೆರಿಗೆ ವಿನಾಯಿತಿ: ಉಳಿದವರಿಗೆ ತೆರಿಗೆ ಶೂಲ
ಉಳ್ಳವರಿಗೆ ತೆರಿಗೆ ವಿನಾಯಿತಿ, ಉಳಿದವರಿಗೆ ತೆರಿಗೆ ಶೂಲವಾಗುತ್ತಿರುವ ಒಕ್ಕೂಟ ಸರ್ಕಾರದ ತೆರಿಗೆ ನೀತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದರ ಪ್ರತಿಗಾಮಿತನ ಜಗಜ್ಜಾಹೀರಾಗುತ್ತದೆ. ಕಾರ್ಪೋರೆಟ್ ತೆರಿಗೆಯ ಬೆಳವಣಿಗೆ 2021-22ರಿಂದ 23-24ರ ನಡುವೆ ಶೇ.29.63ರಷ್ಟಾಗಿದ್ದರೆ ವರಮಾನ ತೆರಿಗೆಯ ಬೆಳವಣಿಗೆ ಇದೇ ಅವಧಿಯಲ್ಲಿ ಶೇ.29.45ರಷ್ಟಿದೆ. ಆದರೆ 2021-22ರಿಂದ 23-24ರ ನಡುವೆ ಜಿಎಸ್‌ಟಿ ಬೆಳವಣಿಗೆ ಶೇ.37.11ರಷ್ಟಿದೆ. ವರಮಾನ ತೆರಿಗೆಯು 2023-24ರಲ್ಲಿ ಜಿಡಿಪಿಯ ಶೇ.3.06ರಷ್ಟಿದ್ದರೆ, ಇದು 2021-22ರಲ್ಲಿ ಜಿಡಿಪಿಯಲ್ಲಿ ಶೇ. 2.91ರಷ್ಟಿತ್ತು. ಆದರೆ ಜಿಎಸ್‌ಟಿಯು ಜಿಡಿಪಿಯ ಶೇ.3.17ರಷ್ಟಾಗಿದೆ.
ಅಂದರೆ ಉಳ್ಳವರು ಮತ್ತು ವರಮಾನವು ಒಂದು ಮಟ್ಟಕ್ಕಿಂತ ಅಧಿಕವಿರುವವರು ನೀಡುವ ಪ್ರತ್ಯಕ್ಷ ತೆರಿಗೆಯ ಬೆಳವಣಿಗೆಯು ಮಂದಗತಿಯಲ್ಲಿದ್ದರೆ, ಜನರೆಲ್ಲರೂ- ಅಂದರೆ ಕೂಲಿಕಾರರು, ದುಡಿಮೆಗಾರರು, ಕಾರ್ಮಿಕರು, ಮಹಿಳೆಯರು ನೀಡುವ ಅಪ್ರತ್ಯಕ್ಷ ತೆರಿಗೆಯಾದ ಜಿಎಸ್‌ಟಿಯ ಬೆಳವಣಿಗೆಯು ತೀವ್ರಗತಿಯಲ್ಲಿ ನಡೆದಿದೆ. ಒಕ್ಕೂಟ ಸರ್ಕಾರದ 2021-22ನೆಯ ಸಾಲಿನ ಕಾರ್ಪೋರೆಟ್ ತೆರಿಗೆಗಿಂತ (ರೂ.7.12 ಲಕ್ಷ ಕೋಟಿ), ಜಿಎಸ್‌ಟಿ ತೆರಿಗೆಯು (ರೂ.6.98 ಲಕ್ಷ ಕೋಟಿ) ಕಡಿಮೆಯಿತ್ತು. ಆದರೆ 2023-24ರಲ್ಲಿ ಕಾರ್ಪೋರೆಟ್ ತೆರಿಗೆಗಿಂತ (ರೂ. 9.23 ಲಕ್ಷ ಕೋಟಿ), ಜಿಎಸ್‌ಟಿ ತೆರಿಗೆ (ರೂ.9.57 ಲಕ್ಷ ಕೋಟಿ) ಅಧಿಕವಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಕಾರ್ಪೋರೆಟ್ ವಲಯದ ಲಾಭದ ಪ್ರಮಾಣ ವರ್ಷವರ್ಷವೂ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ಸ್ವೀಕೃತಿಯಲ್ಲಿ ಇದರ ಪ್ರಮಾಣ ಕಳೆದ ಮೂರು ವರ್ಷಗಳಿಂದ ಕಡಿಮೆಯಾಗುತ್ತಾ ನಡೆದಿದೆ.
(7) ಬಜೆಟ್ಟಿನಲ್ಲಿ ಸಾಲದ ಶೂಲ
ಒಕ್ಕೂಟ ಸರ್ಕಾರವು 2023-24ರಲ್ಲಿ ಎತ್ತಲಿರುವ ಸಾಲ ರೂ.17.86 ಲಕ್ಷ ಕೋಟಿ. ಈ ಬಜೆಟ್ಟಿನ ಗಾತ್ರ ರೂ.45.03 ಲಕ್ಷ ಕೋಟಿ. ಇದರಲ್ಲಿ ಸಾಲದ ಪ್ರಮಾಣ ಶೇ.40ರಷ್ಟಾಗುತ್ತದೆ. ಸಾಲ ಎತ್ತಬೇಕು. ಆದರೆ ಇದರಿಂದ ಆತ್ಮನಿರ್ಭರ ಅಭಿವೃದ್ಧಿ ಸಾಧ್ಯವಿಲ್ಲ. ಪ್ರಸ್ತುತ 2023-24ನೆಯ ಸಾಲಿನಲ್ಲಿ ಒಟ್ಟು ಸಾಲದ ಬಡ್ಡಿ ಪಾವತಿ ರೂ.10.79 ಲಕ್ಷ ಕೋಟಿ. ಇದು ಬಜೆಟ್ಟಿನ ಒಟ್ಟು ಗಾತ್ರದ ಶೇ.23.96ರಷ್ಟಾಗುತ್ತದೆ. ಇದು 2021-22ರಲ್ಲಿ ಶೇ.21.22ರಷ್ಟಿತ್ತು. ಪ್ರತ್ಯಕ್ಷ ತೆರಿಗೆಗಳ ದರಗಳನ್ನು ಹೆಚ್ಚಿಸುವುದರ ಮೂಲಕ ಮತ್ತು ಸಂಪತ್ತು ತೆರಿಗೆ ಆರಂಭಿಸುವುದರ ಮೂಲಕ ಸರ್ಕಾರ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳಬೇಕು. ಆ ಮೂಲಕ ಸಾಲ ಎತ್ತುವುದನ್ನು ಕಡಿಮೆಮಾಡಬೇಕು. ಬಂಡವಾಳ ವೆಚ್ಚಕ್ಕೆ ಸಾಲ ಎತ್ತಿದರೆ ಅದು ಸೂಕ್ತ. ಆದರೆ ಅನುಭೋಗ ವೆಚ್ಚಕ್ಕೆ ಸಾಲ ಬಳಸಿದರೆ ಅದು ವಿತ್ತೀಯ ಅಶಿಸ್ತು.
ಇದಕ್ಕಿಂತ ಹೆಚ್ಚು ಅಪಾಯಕಾರಿ ಬೆಳವಣಿಗೆಯೆಂದರೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಒಕ್ಕೂಟ ಸರ್ಕಾರದ ಸಾರ್ವಜನಿಕ ಋಣ. ಇದು 2017-18ರಲ್ಲಿ ರೂ.82.34 ಲಕ್ಷ ಕೋಟಿಯಿತ್ತು. ಈಗ 2023-24ರಲ್ಲಿ ಇದು ರೂ.169.45 ಲಕ್ಷ ಕೋಟಿಯಾಗುತ್ತಿದೆ. (ನೋಡಿ: ಸ್ಟೇಟ್‌ಮೆಂಟ್ ಆಫ್ ಲಯಬಲಿಟೀಸ್ ಆಫ್ ಸೆಂಟ್ರಲ್ ಗೌರ್ವನಮೆಂಟ್: ಬಜೆಟ್ ಅಟ್ ಎ ಗ್ಲಾನ್ಸ್: 2023-24). ಅಂದರೆ ಕಳೆದ ಒಂಬತ್ತೂವರೆ ದಶಕಗಳಲ್ಲಿ 2017-18ರವರೆಗೆ ಮಾಡಿದ್ದ ಸಾಲ ರೂ.82.34 ಲಕ್ಷ ಕೋಟಿ. ಇದು 2023-24ರಲ್ಲಿ ರೂ.169.45 ಲಕ್ಷ ಕೋಟಿ. ಅಂದರೆ ಕಳೆದ 6 ವರ್ಷಗಳಲ್ಲಿ ಒಕ್ಕೂಟ ಸರ್ಕಾರ ಮಾಡಿರುವ ಸಾಲ ರೂ.87.11 ಲಕ್ಷ ಕೋಟಿ. ದೇಶ 1950-51ರಿಂದ 2017-18ರವರೆಗೆ ಎಷ್ಟು ಸಾಲ ಮಾಡಿತ್ತೋ ಅದಕ್ಕಿಂತ ಹೆಚ್ಚಿನ ಸಾಲವನ್ನು ಕಳೆದ ಆರು ವರ್ಷಗಳಲ್ಲಿ ಮಾಡಿದೆ. ಇದೊಂದು ಅತ್ಯಂತ ಅಪಾಯ-ಆತಂಕಕಾರಿ ಬೆಳವಣಿಗೆಯಾಗಿದೆ.
(8) ಒಕ್ಕೂಟ ತತ್ವಕ್ಕೆ ಧಕ್ಕೆ
ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಒಕ್ಕೂಟ ಸರ್ಕಾರವು ಯಾವ ಬಿಡೆಯಿಲ್ಲದೆ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಒಕ್ಕೂಟವು ತನ್ನ ಒಟ್ಟು ತೆರಿಗೆ ರಾಶಿಯಲ್ಲಿ ಶೇ.41ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು. ಆದರೆ 2023-24ನೆಯ ಸಾಲಿನ ಬಜೆಟ್ಟಿನಲ್ಲಿ ಒಕ್ಕೂಟದ ಒಟ್ಟು ತೆರಿಗೆ ರಾಶಿ ರೂ.33.61 ಲಕ್ಷ ಕೋಟಿ. ಇದರಲ್ಲಿ ವಿತ್ತ ಮಂತ್ರಿ ರಾಜ್ಯಗಳಿಗೆ 2023-24ರಲ್ಲಿ ವರ್ಗಾಯಿಸುತ್ತಿರುವುದು ರೂ.10.21 ಲಕ್ಷ ಕೋಟಿ. ಇದು ಒಕ್ಕೂಟದ ತೆರಿಗೆ ರಾಶಿಯ ಶೇ.30.37ರಷ್ಟಾಗುತ್ತದೆ. ರಾಜ್ಯಗಳಿಗೆ ರೂ.13.78 ಲಕ್ಷ ಕೋಟಿಯನ್ನು ವರ್ಗಾಯಿಸಬೇಕಾಗಿತ್ತು. ಇಲ್ಲಿನ ನಷ್ಟ ರೂ.3.57 ಲಕ್ಷ ಕೋಟಿ.
ಒಕ್ಕೂಟ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಚ್‌ಗಳ ಮೂಲಕ ಅಪಾರ ತೆರಿಗೆಯನ್ನು ಸಂಗ್ರಹಿಸಿಕೊಳ್ಳುತ್ತಿದೆ. ಆದರೆ ಇದನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತಿಲ್ಲ. ಸೆಸ್ ಮತ್ತು ಸರ್‌ಚಾರ್ಚ್‌ಗಳ ತೆರಿಗೆಯು ಒಕ್ಕೂಟ ಸರ್ಕಾರದ ಒಟ್ಟು ತೆರಿಗೆಯಲ್ಲಿ ಶೇ.25ರಷ್ಟಾಗುತ್ತದೆ.
ಒಕ್ಕೂಟ ಸರ್ಕಾರವು ರಾಜ್ಯಗಳ ಅಧಿಕಾರಗಳನ್ನು ಹತ್ತಿಕ್ಕುತ್ತಿದೆ. ಒಕ್ಕೂಟ ತತ್ವದ ಬಗ್ಗೆ ಅದಕ್ಕೆ ಒಪ್ಪಿಗೆಯಿಲ್ಲ. ’ಸಂವಿಧಾನಾತ್ಮಕ ಒಕ್ಕೂಟ ತತ್ವವು ದೇಶದ ಐಕ್ಯತೆಗೆ ಅಪಾಯ’ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥರ ಸಿದ್ಧಾಂತವನ್ನು ಇಂದಿನ ಸರ್ಕಾರ ಪಾಲಿಸುತ್ತಿದೆ. ಆದರೆ ಈ ಜನಕ್ಕೆ ಕಳೆದ 75 ವರ್ಷಗಳಿಂದ ಒಕ್ಕೂಟ ತತ್ವವು ಯಾವುದೇ ಸಮಸ್ಯೆಗಳಿಲ್ಲದೆ ನಡೆದುಕೊಂಡು ಬರುತ್ತಿದೆ ಎಂಬುದು ತಿಳಿದಿಲ್ಲ.
(9) ಕಾಲ ಮಿಂಚಿಲ್ಲ; ಈ ಬಜೆಟ್ಟಿನ ತೀವ್ರ ಪರಿಷ್ಕರಣೆಯಾಗಬೇಕು!
(i) ನಮ್ಮ ಆರ್ಥಿಕತೆಯ ಅಭಿವೃದ್ಧಿಯು ರಾಜ್ಯಗಳಲ್ಲಿನ ಅಭಿವೃದ್ಧಿಯನ್ನು ಅವಲಂಬಿಸಿದೆ. ರಾಜ್ಯಗಳ ಹಿತಾಸಕ್ತಿಗಳನ್ನು ಹತ್ತಿಕ್ಕಿದರೆ ದೇಶದ ಆರ್ಥಿಕತೆಗೆ ಅಪಾಯ. ಇದನ್ನು ಅರಿತುಕೊಂಡು ವಿತ್ತಮಂತ್ರಿಗಳು 2023-24ನೆಯ ಸಾಲಿನ ಬಜೆಟ್ಟಿನಲ್ಲಿ ರಾಜ್ಯಗಳ ಹಿತವನ್ನು ಕಾಪಿಡುವಂತಹ ಯೋಜನೆಗಳನ್ನು ಸೇರಿಸಿ ಪರಿಷ್ಕರಿಸಬೇಕು.
(ii) ಈಗ ಏನೆಲ್ಲ ಬಾಬ್ತುಗಳಲ್ಲಿ ಅನುದಾನಗಳನ್ನು ಕಡಿತ ಮಾಡಲಾಗಿದೆಯೋ ಅವೆಲ್ಲವನ್ನು ಹೆಚ್ಚಿಸಬೇಕು. ಅಸಮಾನತೆಯ ವಿರುದ್ಧದ ಸಿದ್ಧಾಂತದ ಪ್ರಸಿದ್ಧ ಅರ್ಥ ವಿಜ್ಞಾನಿ ಥಾಮಸ್ ಪಿಕ್ಕೆಟ್ಟಿ ಹೇಳುತ್ತಿರುವಂತೆ ದೇಶದ ಅತಿಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆ ವಿಧಿಸಬೇಕು.
(iii) ಕಾರ್ಪೋರೆಟ್ ತೆರಿಗೆ ಹಾಗೂ ವರಮಾನ ತೆರಿಗೆಗಳ ದರಗಳನ್ನು ಹೆಚ್ಚಿಸಬೇಕು. ಮನ್‌ರೇಗಾಕ್ಕೆ ಕನಿಷ್ಠ ರೂ.2.5 ಲಕ್ಷ ಕೋಟಿ ಅನುದಾನ ನೀಡಬೇಕು.
(iv) ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆ ನಿವಾರಣೆಗೆ ರೂ.2.00 ಲಕ್ಷ ಕೋಟಿ ಅನುದಾನ ನೀಡಿ ಸದರಿ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕು.
(v) ಈ ಸರ್ಕಾರ, ಸರ್ಕಾರದ ವಕ್ತಾರರು, ಪಕ್ಷದ ಕಾರ್ಯಕರ್ತರು ಸ್ವಾತಂತ್ರ್ಯ ಬಂದ ಅಮೃತ ಮಹೋತ್ಸವದ ಬಗ್ಗೆ ಕಳೆದ ವರ್ಷ ಮಾತನಾಡುತ್ತಿದ್ದರು. ಈಗ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷ 2049ರ ಅಮೃತ ಕಾಲದ ಬಗ್ಗೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಎನ್ನುವುದು ಜನರು ಅನುಭವಿಸಬೇಕಾದ ಸಂಗತಿಯೇ ವಿನಾ ಕನಸು ಕಾಣುವ ಸಂಗತಿಯಲ್ಲ. ಸುಮಾರು 90 ವರ್ಷಗಳ ಹಿಂದೆ 1930ರಲ್ಲಿ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಕೀನ್ಸ್ ಅವರು ’ದೀರ್ಘಾವಧಿಯಲ್ಲಿ ನಾವೆಲ್ಲ ಸತ್ತಿರುತ್ತೇವೆ’ ಎಂದು ಹೇಳಿದ್ದರು. ಒಕ್ಕೂಟ ಸರ್ಕಾರವು ಜನರ ಸದ್ಯದ ಮೂಲಭೂತ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆಹಾರ ಭದ್ರತೆ, ಯೋಗ್ಯ ಉದ್ಯೋಗ, ಸಾರ್ವಜನಿಕ ಆರೋಗ್ಯ, ಮಕ್ಕಳ ಶಿಕ್ಷಣ – ಮುಂತಾದ ಸಂಗತಿಗಳು ಸರ್ಕಾರಕ್ಕೆ ಮುಖ್ಯವಾಗಬೇಕು ಮತ್ತು ಅಭಿವೃದ್ಧಿಯ ಆದ್ಯತೆಯಾಗಬೇಕು. ಈ ದಿಶೆಯಲ್ಲಿ ಈಗ ಮಂಡಿಸಿರುವ 2023-24ನೆಯ ಸಾಲಿನ ಬಜೆಟ್ಟನ್ನು ಪೂರ್ಣ ಬದಲಾಯಿಸಬೇಕು.

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿ.ಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.


