Homeಮುಖಪುಟಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

ಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

- Advertisement -
- Advertisement -

ಕನ್ನಡದ ಪ್ರಜ್ಞೆಯನ್ನು ಕಾಡಿ, ಕದಡಿ, ತಲೆಮಾರುಗಳನ್ನೇ ಜೀವಪರ ಮೌಲ್ಯಗಳಿಗೆ ಒಗ್ಗಿಸಲು ತಮ್ಮ ಬರವಣಿಗೆ ಮತ್ತು ಪತ್ರಿಕೋದ್ಯಮದ ಮೂಲಕ ಪ್ರಯತ್ನಿಸಿದ ಪಿ. ಲಂಕೇಶ್ ಅವರ ಮಗಳಾದ್ದರಿಂದಲೋ ಏನೋ ಗೌರಿ ಲಂಕೇಶ್ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡರು. ಕನ್ನಡ ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದ್ದ ಅಪ್ಪನ ಪ್ರಭಾವ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಿದ್ದರೂ, ಇಂಗ್ಲಿಷ್ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ತನ್ನ ಸ್ವಂತಿಕೆಯ ಕಾರಣಕ್ಕೇ ಆಗಿತ್ತು. ಆ ಕಾಲಕ್ಕೆ ವಿದೇಶದಲ್ಲಿ, ದೇಶದ ಹಲವೆಡೆ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ಗೌರಿ ತಾಯ್ನಾಡಿಗೆ ಬರುವಷ್ಟರಲ್ಲಿ ಕನ್ನಡನಾಡು ಲಂಕೇಶರ ಪ್ರತಿಭೆಯಿಂದ ಸಾಕಷ್ಟು ಪ್ರಭಾವಕ್ಕೆ ಒಳಪಟ್ಟಿತ್ತು. ಆದರೆ, ಅಷ್ಟರಲ್ಲಿ ಲಂಕೇಶ್ ಭೌತಿಕವಾಗಿ ವೇದಿಕೆಯಿಂದ ನಿರ್ಗಮಿಸಿದ್ದರು. ಒಂದಿಡೀ ತಲೆಮಾರಿನ ಪ್ರಜ್ಞೆಯ ಜೊತೆಗೇ ಹೊಂದಿಕೊಂಡಿದ್ದ, ಆ ಪ್ರಜ್ಞೆಯನ್ನು ಆರೋಗ್ಯಕರವಾಗಿ ರೂಪಿಸಲು ಶ್ರಮಿಸುತ್ತಿದ್ದ ’ಲಂಕೇಶ್ ಪತ್ರಿಕೆ’ಯ ಹೊಣೆ ಗೌರಿ ಲಂಕೇಶರ ಹೆಗಲಿಗೆ ಬಿದ್ದಾಗ, ಆ ಜವಾಬ್ದಾರಿ ಕೇವಲ ಒಂದು ಪತ್ರಿಕೆಯನ್ನು ನಡೆಸುವುದಷ್ಟೇ ಅಲ್ಲ ಎಂಬ ಅರಿವು ಅವರಿಗಿತ್ತು. ಈ ಜವಾಬ್ದಾರಿಯನ್ನು ಅವರು ಕೋಮುವಾದದ ವಿರುದ್ಧದ ಸಕ್ರಿಯ ಹೋರಾಟದ ಮೂಲಕ ವಿಸ್ತರಿಸಿಕೊಂಡು ಸಾಗಿದರು.

ಕುಟುಂಬದ ಹಿರಿಯ ಮಗಳಾದ್ದರಿಂದ ಕೆಲವು ಸಂಕಷ್ಟಗಳೂ ಎದುರಾದವು. ’ಲಂಕೇಶ್ ಪತ್ರಿಕೆ’ಯನ್ನು ’ಗೌರಿ ಲಂಕೇಶ್ ವಾರ ಪತ್ರಿಕೆ’ಯನ್ನಾಗಿ ಬದಲಿಸಬೇಕಾಯಿತು. ಇಡೀ ಪತ್ರಿಕೆಯನ್ನು ಕೋಮುವಾದದ ವಿರುದ್ಧದ ಪ್ರಜ್ಞಾವಾಹಿನಿಯಾಗಿ ಬದಲಿಸಿದರು. ಟೀಕೆ, ಮೆಚ್ಚುಗೆಗಳ ಜೊತೆಗೆ ಹಳಬರ ನಿರ್ಗಮನ ಹೊಸಬರ ಆಗಮನಗಳಿಂದ ಗೌರಿ ಲಂಕೇಶ್ ’ಗೌರಿ’ಯಾಗುತ್ತಾ ಸಾಗಿದರು ಮತ್ತು ಅದೇ ದಾರಿಯಲ್ಲಿ ಹಠಾತ್ತನೆ ನಿರ್ಗಮಿಸಿದರು. ಅವರು ನಿರ್ಗಮಿಸುವಂತಹ ವಿಷಮ ವಾತಾವರಣ ಆಗಲೇ ಈ ನಾಡಿನಲ್ಲಿ ನಿರ್ಮಾಣವಾಗಿತ್ತು. ಅದರ ವಿರುದ್ಧದ ಅವರ ಹೋರಾಟದ ಕಾರಣಕ್ಕಾಗಿಯೇ, ಆ ವಿಷಮ ವಾತಾವರಣವನ್ನು ನಿರ್ಮಿಸಿದವರು ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು.

ಲಂಕೇಶರು ತೀರಿಹೋದಾಗಿನಿಂದ ಗೌರಿ ಅವರ ಬೆನ್ನಿಗೆ ನಿಂತ ಅವರ ತಂಗಿ ಕವಿತಾ ಲಂಕೇಶ್ ’ಗೌರಿ ಪ್ರಜ್ಞೆ’ಯನ್ನು ಈಗ ಪ್ರಪಂಚದಾದ್ಯಂತ ಹೊತ್ತು ಸಾಗುತ್ತಿದ್ದಾರೆ; ಇದು ಗೌರಿಯವರ ಹೋರಾಟದ ಮುಂದುವರಿಕೆಯೇ ಆಗಿದೆ. ಅದರ ಭಾಗವಾಗಿಯೇ ಕವಿತಾ ಅವರು ನಿರ್ದೇಶಿಸಿರುವ ’ಗೌರಿ’ ಸಾಕ್ಷ್ಯಚಿತ್ರ ಮೂಡಿಬಂದಿದೆ. ಇಡೀ ಚಿತ್ರ ಗೌರಿ ಲಂಕೇಶರ ಹೋರಾಟದ ಮತ್ತು ಪತ್ರಿಕೋದ್ಯಮದ ಬದುಕಿನ ಎಳೆಗಳನ್ನು ಹೆಣೆಯುವುದರಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ನೋಡುವವರಿಗೆ, ಪತ್ರಕರ್ತರಿಗಿರಬೇಕಾದ ಸಾಮಾಜಿಕ ಹೊಣೆಯ ಚಿತ್ರಣ ಹಾಗೂ ಕನ್ನಡ ಪ್ರಜ್ಞೆಯಂತಹ ಆದಿಮ ಪ್ರತಿಭಟನಾತ್ಮಕ ಧಾರೆಯು ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಹೇಗೆ ನಿಲ್ಲಬೇಕೆಂಬ ಮಾದರಿ ಸಿಗುತ್ತದೆ. ಅಲ್ಲದೆ, ಒಂದು ಚಳವಳಿ ಯಾವುದೆಲ್ಲವನ್ನು ಒಳಗೊಳ್ಳಬೇಕು ಹಾಗೂ ಆ ಮೂಲಕ ಜನಾಭಿಪ್ರಾಯವನ್ನು ಹೋರಾಟದ ಶಕ್ತಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬ ಅರಿವು ದಕ್ಕುತ್ತದೆ.

ಗೌರಿ ಇಲ್ಲವಾಗಿ ಐದು ವರ್ಷಗಳು ಸಂದುಹೋಗಿವೆ. ಅದರ ಜೊತೆಗೆ ಜಗತ್ತಿನ ಇತಿಹಾಸದಲ್ಲಿ ಅಳಿದು ಹೋದ ಫ್ಯಾಸಿಸ್ಟ್ ಶಕ್ತಿಗಳನ್ನೂ ಮೀರಿಸುವ ಕ್ರೌರ್ಯ ನಮ್ಮ ನೆಲದಲ್ಲಿ ಚಿಗುರೊಡೆದು ವರ್ಷಗಳಾಗಿವೆ. ಈ ಕ್ರೌರ್ಯವನ್ನು ಕನ್ನಡ ಪ್ರಜ್ಞೆ ಒಂದು ಎಚ್ಚರವಾಗಿ ಎದುರಿಸಬೇಕಿರುವುದನ್ನು ’ಗೌರಿ’ ಸಿನಿಮಾ ನೆನಪಿಸಿ ಸಾಕ್ಷೀಕರಿಸುತ್ತದೆ. ಗೌರಿಯವರು ಪತ್ರಿಕೆ ವಹಿಸಿಕೊಂಡ ದಿನದಿಂದ ಅವರು ಒಡನಾಡಿದ, ಹೋರಾಟಗಳನ್ನು ದಾಖಲಿಸಲಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಕೋಮುವಾದದ ವಿರುದ್ಧ ನಡೆದ ಮೂರು ದಶಕಗಳ ಹೋರಾಟವನ್ನು ಸಾಕ್ಷ್ಯಚಿತ್ರ ದಾಖಲಿಸುತ್ತದೆ. ಈ ದಾಖಲೆಯಲ್ಲಿ ಸಾಹಿತಿಗಳು, ಹೋರಾಟಗಾರರು, ಕಲಾವಿದರು ಮೊದಲಾಗಿ ಗೌರಿಯವರ ಒಡನಾಡಿಗಳೆಲ್ಲ ಕಾಣಸಿಗುತ್ತಾರೆ.

ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

ಗೌರಿ ಲಂಕೇಶರನ್ನು ಕಂಡರೇ ನಡುಗುತ್ತಿದ್ದ ಸಂಘ ಪರಿವಾರದವರ ಮೈ ಪರಚಿಕೊಳ್ಳುವ ಭಾಷಣಗಳ ಫುಟೇಜ್‌ಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಗೌರಿಯನ್ನು ಸುಟ್ಟೆವೆಂದು ಹರ್ಷಾಚರಣೆ ಮಾಡಿದ ಮುಠ್ಠಾಳರಿಗೆ ಈ ಮೂಲಕ ಲಕ್ಷಾಂತರ ಗೌರಿಯರ ಬದುಕು ನಿದ್ದೆಗೆಡಿಸುತ್ತದೆ. ಅವರನ್ನು ಕೊಂದಾಗ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಗ್ರೌಂಡಿಗೆ “ನಾನೂ ಗೌರಿ ನಾವೆಲ್ಲಾ ಗೌರಿ” ಎಂದು ಎದೆ ತಟ್ಟಿಕೊಳ್ಳುತ್ತಾ ಹರಿದು ಬಂದ ಜನಸಾಗರದ ದೃಶ್ಯಗಳಂತೂ ಗೌರಿ ಸಿನಿಮಾದ ಮುಖ್ಯ ಭಾಗ. ಆ ದಿನ ಬೆಂಗಳೂರಿನಲ್ಲಿ ಮೊಳಗಿದ ಘೋಷಣೆಗಳು ಆನಂತರದ ದಿನಗಳಲ್ಲಿ ಪ್ರತಿರೋಧದ ಶಕ್ತಿಯಾಗಿ ದೇಶಾದ್ಯಂತ ಪಸರಿಸಿದ ಹೋರಾಟದ ಕಿಚ್ಚನ್ನೂ ಸಿನಿಮಾದಲ್ಲಿ ಪ್ರಾತಿನಿಧಿಕವಾಗಿ ಒಳಗೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಕರ್ನಾಟಕದಲ್ಲಿ ನನ್ನಂತಹ ಹೊಸತಲೆಮಾರಿನ ಯುವಜನರಿಗಂತೂ ಕೋಮುವಾದವನ್ನು, ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲೇಬೇಕಾದ ಪಾಠಗಳನ್ನು ಆ ’ನಾನೂ ಗೌರಿ’ ಸಮಾವೇಶ ನೀಡಿತು.

ಗೌರಿ ಅವರ ಜೊತೆಗೆ ಒಡನಾಡಿದ ಕೆಲವು ಪ್ರಮುಖ ವ್ಯಕ್ತಿಗಳನ್ನು ಸಿನಿಮಾಗಾಗಿ ಮಾತನಾಡಿಸಲಾಗಿದೆ. ಅದರಲ್ಲಿ ಕವಿತಾ ಅವರ ಮಗಳು ಇಶಾ ಮಾತುಗಳು ಹೆಚ್ಚು ಆರ್ದ್ರವಾಗಿ ಮೂಡಿಬಂದಿವೆ. ಸಾವಿನ ದಿನಗಳಲ್ಲಿ ಗೌರಿಯವರ ಪ್ರೀತಿಯಲ್ಲಿ ಮಿಂದಿದ್ದ ನೂರಾರು ಯುವಜನರ ಕಣ್ಣುಗಳ ಹನಿಗಳನ್ನು ಇಶಾ ಮಾತಾಗಿಸಿದ್ದಾರೆ. ಕೆ.ಷರೀಫಾ ಅವರ ಒಡನಾಟದ ನೆನಪು ಗೌರಿಯವರ ಎಲ್ಲಾ ಒಡನಾಡಿಗಳ ನೆನಪಾಗಿ ನೋಡುಗರ ಎದೆಯೊಳಗೆ ಪಲ್ಲವಿಸುತ್ತದೆ.

ಇನ್ನು ಕೋಮು ಸೌಹಾರ್ದ ವೇದಿಕೆಯ ಪ್ರತಿಭಟನೆಗಳು, ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಶನದಲ್ಲಿ ಗೌರಿ ಅವರು ಮಾತನಾಡಲು ಹೋದಾಗ ಅಲ್ಲಿ ಅವರಿಗೆ ಎದುರಾದ ವಿರೋಧವನ್ನು ಚಂದ್ರಶೇಖರ ಪಾಟೀಲರು ಛಲಬಿಡದೆ ನಿಭಾಯಿಸಿದ್ದು, ದಿಡ್ಡಳ್ಳಿ ಹೋರಾಟದಲ್ಲಿ ಭೂಮಿ ವಸತಿ ವಂಚಿತರಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದು ಈ ಎಲ್ಲಾ ವಿವರಗಳೂ ಪತ್ರಕರ್ತೆಯಾಗಿದ್ದ ಗೌರಿಯವರು ಹೋರಾಟಗಾರ್ತಿ ಪತ್ರಕರ್ತೆಯಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಮಂಡಿಸುತ್ತವೆ.

ಪಶ್ಚಿಮಘಟ್ಟದ ಕಾಡುಗಳಲ್ಲಿ ಇಳಿದು ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿದ ವಿವರಗಳಂತೂ ಮೈಜುಮ್ಮೆನ್ನಿಸುತ್ತವೆ. ಕನ್ನಡ ಪತ್ರಿಕೋದ್ಯಮದಲ್ಲಿ ಮರೆವಿಗೆ ಸಂದಿದ್ದ ಸಾಹಸದ ಆಕ್ಟಿವಿಸ್ಟ್ ಪತ್ರಿಕೋದ್ಯಮ ಗೌರಿಯವರಿಂದ ಮುನ್ನಲೆಗೆ ಬರುತ್ತದೆ. ನಕ್ಸಲ್ ಹೋರಾಟಗಳಲ್ಲಿದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜರವರನ್ನು ಸಮಾಜದ ಮುಖ್ಯವಾಹಿನಿಗೆ ತಂದದ್ದು ಮುಖ್ಯ ಸಾಹಸಗಳಲ್ಲೊಂದು.

ಭಾರತದ ಯುವ ಪ್ರಜ್ಞೆಗಳಾದ ಜಿಗ್ನೇಶ್ ಮೆವಾನಿ, ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್ ಮತ್ತು ಉಮರ್ ಖಾಲಿದ್ ಅವರನ್ನು ಗೌರಿ ಅವರು ಹಚ್ಚಿಕೊಂಡಿದ್ದು ಮತ್ತು ಅವರೂ ಗೌರಿಯವರನ್ನು ತಾಯಿಯಂತೆ ಭಾವಿಸುತ್ತಿದ್ದುದು ಕರ್ನಾಟಕದ ಹೋರಾಟಗಾರ ಯುವಜನತೆಗೆ ಸ್ಫೂರ್ತಿಯಾಗಿತ್ತು. ಸಿನಿಮಾ ಅದನ್ನೂ ದಾಖಲಿಸಿದೆ.

ಬಹಳ ಶ್ರಮವಹಿಸಿ ಕವಿತಾ ಅವರು ’ಗೌರಿ’ ಸಿನಿಮಾ ಕಟ್ಟಿದ್ದಾರೆ. ಆದರೆ, ನನ್ನ ತಿಳಿವಿನ ಮಿತಿಯಲ್ಲಿ ಸಿನಿಮಾ ಒಳಗೊಳ್ಳಬೇಕಿದ್ದ ಇನ್ನೂ ಕೆಲವು ಅಂಶಗಳಿದ್ದವು; ಗೌರಿಯವರನ್ನು ಆತುಕೊಂಡ ದಲಿತ ಹೋರಾಟಗಾರರ-ಹೋರಾಟಗಳ ವಿವರಗಳು, ಚಲೋ ಉಡುಪಿ ಜಾಥಾ ಹಾಗೂ ಸಮಾವೇಶ, ಅವರೇ ಜಿಗ್ನೇಶ್ ಜೊತೆ ನಿಂತು ಕಂಬನಿ ತುಂಬಿದ ಕಣ್ಣುಗಳಿಂದಲೇ ಭಾಗವಹಿಸಿದ ಚಲೋ ತುಮಕೂರು, ಹಗಲು ರಾತ್ರಿ ಫ್ರೀಡಂ ಪಾರ್ಕಿನ ಹುಲ್ಲುಹಾಸಿನ ಮೇಲೆ ಕೂತು ಶ್ರಮವಹಿಸಿ ನಡೆಸಿದ ಬೆಂಗಳೂರು ಚಲೋ ಹೋರಾಟಗಳ ವಿವರಗಳನ್ನು ಸಿನಿಮಾ ಒಳಗೊಂಡಿದ್ದರೆ ಗೌರಿಯ ವ್ಯಕ್ತಿತ್ವದ ವಿಸ್ತೃತ ಹರವನ್ನು ದಾಖಲಿಸಿದಂತಾಗುತ್ತಿತ್ತು. ಹಾಗೂ ಗೌರಿಯವರು ಒಡನಾಟ ಇಟ್ಟುಕೊಂಡಿದ್ದ ಹಲವು ಬಗೆಯ ಪ್ರಗತಿಪರ ಸಂಘಟನೆಗಳ ಚಿತ್ರಣವೂ ಅದಾಗುತ್ತಿತ್ತು.

ಈ ಸಣ್ಣಪುಟ್ಟ ಕೊರತೆಗಳೊಂದಿಗೆಯೇ ಕವಿತಾ ಲಂಕೇಶ್ ರೂಪಿಸಿದ ’ಗೌರಿ’ ಎಲ್ಲರೂ ನೋಡಲೇಬೇಕಾದ ಸಿನಿಮಾ.

ಅಶ್ವಿನಿ ಬೋಧ್

ಅಶ್ವಿನಿ ಬೋಧ್
ಕನ್ನಡ ಉಪನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...