ಅಕ್ರಮ ಪ್ರವೇಶದ ಆರೋಪದ ಮೇಲೆ ಅಧಿಕಾರಿಗಳು ಜನರನ್ನು ಅತಿಕ್ರಮಣಕಾರರು ಎಂದು ಕರೆಯುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್ ಅವರನ್ನು ತೆರವುಗೊಳಿಸಲು ಬುಲ್ಡೋಜರ್‌ಗಳು ಪರಿಹಾರವಲ್ಲ ಎಂದಿದೆ.
ಜಸ್ಟೀಸ್ ಗೌತಮ್ ಪಟೇಲ್ ಮತ್ತು ಜಸ್ಟೀಸ್ ನೀಲಾ ಗೋಖಲೆ ಅವರಿದ್ದ ಪೀಠವು ಮುಂಬೈನ ಪಶ್ಚಿಮ ರೈಲ್ವೇಯ ಭೂಮಿಯಲ್ಲಿನ 101 ಅಕ್ರಮ ಕಟ್ಟಗಳನ್ನು ನೆಲಸಮಗೊಳಿಸಲು ಅಧಿಕಾರಿಗಳು ಬುಲ್ಡೋಜರ್ ಬಳಿಸಿದ್ದಕ್ಕೆ ಅಸಮಾಧಾ ವ್ಯಕ್ತಪಡಿಸಿದೆ. ಅನಧಿಕೃತ ಒತ್ತುವರಿ ತೆರವು ಕಾಯಿದೆ, 1971ರ ಅಡಿಯಲ್ಲಿ ಯಾವುದೇ ಸಮೀಕ್ಷೆಯಿಲ್ಲದೆ ಮತ್ತು ಸಂಬಂಧಪಟ್ಟವರಿಗೆ ಅಗತ್ಯ ನೋಟಿಸ್ ಸಹ ನೀಡದೆ ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ ಎಂದಿದೆ.
ಸುಪ್ರೀಂ ಕೋರ್ಟ್ ನಿಯಮಾವಳಿಗಳನ್ನು ಉಲ್ಲಂಘಿಸಿ ಇನ್ನು ಮುಂದೆ ಯಾವುದೇ ಧ್ವಂಸ ಕಾರ್ಯಾಚರಣೆ ನಡೆಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ ಪೀಠ, ಆಪಾದಿತ ಅತಿಕ್ರಮಣಗಾರರ ಮೇಲೆ ಬೇರೆ ರೀತಿಯಲ್ಲಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ಅವರನ್ನು ಒಕ್ಕಲೆಬ್ಬಿಸುವುದು ಗಂಭೀರ ಸಮಸ್ಯೆಯಾಗಿದ್ದು, ಕೆಲವೊಮ್ಮೆ ಈ ಸ್ಥಳಾಂತರ ನಮ್ಮ ಊಹೆಗೂ ಮೀರಿದ್ದಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಬುಲ್ಡೋಜರ್‌ಗಳ ಬದಲಾಗಿ ಬೇರೆ ಮಾರ್ಗದಲ್ಲಿ ಜನರನ್ನು ಮನವೊಲಿಸಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಯಾವುದೇ ಪುನರ್ವಸತಿ ಕಲ್ಪಿಸದೆ, ಅವರಿಗೆ ಮನೆ ವ್ಯವಸ್ಥೆ ಮಾಡದೇ ಏಕಾಏಕಿ ಮನೆ ಕೆಡವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.
ಏಕ್ತಾ ವೆಲ್ಫೇರ್ ಟ್ರಸ್ಟ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲವು ತಕ್ಷಣವೇ ಒಕ್ಕಲೆಬ್ಬಿಸುವಿಕೆ ಕಾರ್ಯಾಚರಣೆ ನಿಲ್ಲಿಸಬೇಕೆಂದು ಆಗ್ರಹಿಸಿದೆ. ಅಲ್ಲದೆ ಮನೆ ಕಡೆವಿದ ನಂತರ ತ್ಯಾಜ್ಯಗಳನ್ನು ತಗ್ಗು ಪ್ರದೇಶಗಳಿಗೆ ಸುರಿಯವುದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ


