ರಾಜ್ಯದ ಇಬ್ಬರು ಬಿಜೆಪಿಯ ಶಾಸಕರಿಗೆ ಜೈಲು ಶಿಕ್ಷೆಯಾಗಿದೆ. ಒಬ್ಬರು ಚೆಕ್‌ಬೌನ್ಸ್ ಪ್ರಕರಣದಲ್ಲಿ, ಮತ್ತೊಬ್ಬರು ನಕಲಿ ಬಿಲ್ ಸಷ್ಟಿಸಿ ಅಕ್ರಮ ಎಸಗಿದ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, “BJP ಎಂಬುದು ಕ್ರಿಮಿನಲ್‍ಗಳ ತೊಟ್ಟಿ ಎಂದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಕುಟುಕಿದೆ.
ಬಿಜೆಪಿಯ ಇಬ್ಬರು ಶಾಸಕರು ಜೈಲು ಸೇರಿರುವದರ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “BJP ಎಂಬುದು ಕ್ರಿಮಿನಲ್‍ಗಳ ತೊಟ್ಟಿ ಎಂದು ಮತ್ತೊಮ್ಮೆ ಸಾಬೀತಾಗಿದೆ! ಒಬ್ಬ ಶಾಸಕ ಚೆಕ್‍ಬೌನ್ಸ್ ಕೇಸಲ್ಲಿ 4 ವರ್ಷ ಶಿಕ್ಷೆಗೆ ಗುರಿಯಾದರೆ, ಮತ್ತೊಬ್ಬ ವಂಚನೆ ಕೇಸಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ! ಸ್ವಯಂಘೋಷಿತ ಸುಸಂಸ್ಕೃತ ಪಕ್ಷ ಬಿಜೆಪಿಯ ತುಂಬಾ ಭ್ರಷ್ಟಾಚಾರಿಗಳು & ಕ್ರಿಮಿನಲ್‍ಗಳೇ ತುಂಬಿರುವುದು ನಾಚಿಕೆಗೇಡಿನ ಸಂಗತಿ” ಎಂದು ತಿಳಿಸಿದೆ.
BJP ಎಂಬುದು ಕ್ರಿಮಿನಲ್‍ಗಳ ತೊಟ್ಟಿ ಎಂದು ಮತ್ತೊಮ್ಮೆ ಸಾಬೀತಾಗಿದೆ!
ಒಬ್ಬ ಶಾಸಕ ಚೆಕ್‍ಬೌನ್ಸ್ ಕೇಸಲ್ಲಿ 4 ವರ್ಷ ಶಿಕ್ಷೆಗೆ ಗುರಿಯಾದರೆ ಮತ್ತೊಬ್ಬ ವಂಚನೆ ಕೇಸಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ!
ಸ್ವಯಂಘೋಷಿತ ಸುಸಂಸ್ಕೃತ ಪಕ್ಷ @BJP4Karnataka ತುಂಬಾ ಭ್ರಷ್ಟಾಚಾರಿಗಳು & ಕ್ರಿಮಿನಲ್‍ಗಳೇ ತುಂಬಿರುವುದು ನಾಚಿಕೆಗೇಡಿನ ಸಂಗತಿ!! pic.twitter.com/JhCM9cPFL8
— Randeep Singh Surjewala (@rssurjewala) February 14, 2023
ಚೆಕ್ಬೌನ್ಸ್ ಕೇಸ್‌ನಲ್ಲಿ ಮೂಡಿಗೆರೆ ಶಾಸಕನಿಗೆ 4 ವರ್ಷ ಜೈಲು
ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಚೆಕ್‌ಬೌನ್ಸ್ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಚೆಕ್‌ಬೌನ್ಸ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಒಟ್ಟು ಎಂಟು ಚೆಕ್‌ಬೌನ್ಸ್ ಪ್ರಕರಣದಲ್ಲಿ 1.38 ಕೋಟಿ ರು. ಹಣ ಪಾವತಿಸಬೇಕು ಎಂದು ನ್ಯಾಯಾಲಯವು ತಿಳಿಸಿದೆ.
ಚಿಕ್ಕಮಗಳೂರು ನಗರದ ನಿವಾಸಿಯಾಗಿರುವ ಹೂವಪ್ಪಗೌಡ ಎಂಬುವರಿಂದ 1.35 ಕೋಟಿ ರೂ.ಗಳನ್ನು ಎಂ.ಪಿ.ಕುಮಾರಸ್ವಾಮಿ ಸಾಲ ಪಡೆದಿದ್ದರು. ಸಾಲ ಮರುಪಾವತಿಗೆ ಎಂಟು ಚೆಕ್‌ಗಳನ್ನು ನೀಡಿದ್ದರು. ಆದರೆ, ಎಲ್ಲ ಚೆಕ್‌ಗಳು ಬೌನ್ಸ್ ಆಗಿದ್ದವು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯದಲ್ಲಿ ಹೂವಪ್ಪಗೌಡ ಎಂಟು ಪ್ರಕರಣಗಳನ್ನು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಎಂಟು ತಲಾ ಪ್ರಕರಣಗಳಿಗೆ ಆರು ತಿಂಗಳಂತೆ ಕುಮಾರಸ್ವಾಮಿ ಅವರಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ.
ಶಾಸಕ ಕುಮಾರಸ್ವಾಮಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಮ್ಮದೇಯಾದ ರೀತಿಯಲ್ಲಿ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿದ್ದರು. ದೂರುದಾರನ ಆರ್ಥಿಕ ಸಾಮರ್ಥ್ಯವನ್ನು ಪ್ರಶ್ನಿಸಿದ್ದು, ಚುನಾವಣಾ ಸಂದರ್ಭದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದ ಮುಕ್ತಿ ಪಡೆಯಲು ದೂರುದಾರರಿಗೆ 1.40 ಕೋಟಿ ರೂಪಾಯಿಗಳನ್ನು ನೀಡಿದ್ದೆ ಎಂದು ಹೇಳುವ ಮಟ್ಟಕ್ಕೆ ಹೋಗಿದ್ದಾರೆ.
ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಇಷ್ಟೊಂದು ಹಣವನ್ನು ಕೊಡಲು ಹೇಗೆ ಸಾಧ್ಯ ಎಂದು ನ್ಯಾಯಾಲಯದಲ್ಲಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇದು ಆರೋಪಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಹೆಣೆಯುವ ಕಥೆ ಎಂದು ನ್ಯಾಯಾಲಯದ ಗಮನಕ್ಕೆ ಬಂದಿದೆ.
ಆರೋಪಿ ಕುಮಾರಸ್ವಾಮಿ ವಿರುದ್ಧ 2021ರಲ್ಲಿ ಎಚ್‌ಆರ್ ಹೂವಪ್ಪಗೌಡ ಅವರು ದೂರು ದಾಖಲಿಸಿದ್ದರು. ದೂರುದಾರರು ಮತ್ತು ಆರೋಪಿಗಳಿಬ್ಬರೂ ಪರಸ್ಪರ ಪರಿಚಿತರಾಗಿದ್ದಾರೆ. ದೂರುದಾರರಿಗೆ ಶಾಸಕ 1.38 ಕೋಟಿ ರೂಪಾಯಿ ಹಣ ನೀಡಬೇಕಿತ್ತು. ಇದೀಗ ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಾಸಕ ಕುಮಾರಸ್ವಾಮಿಗೆ ನ್ಯಾಯಾಲಯ ಆದೇಶ ನೀಡಿದೆ.
ನಕಲಿ ಬಿಲ್ ಸಷ್ಟಿಸಿ ಅಕ್ರಮ ಎಸಗಿದ ಆರೋಪದಲ್ಲಿ ಹಾವೇರಿ ಶಾಸಕನಿಗೆ 2ವರ್ಷ ಜೈಲು
ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರೂ ಓಲೆಕಾರ್ ಅವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಶಿಕ್ಷೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಬೆಂಗಳೂರಿನ 91 ಸಿಸಿಹೆಚ್ ಕೋರ್ಟ್ ಆದೇಶವನ್ನು ಹೊರಡಿಸಿದೆ.
ಶಾಸಕ ನೆಹರೂ ಓಲೆಕಾರ್ ಜೊತೆ ಅವರ ಇಬ್ಬರು ಮಕ್ಕಳಿಗೂ 2 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಲಾಗಿದೆ. ನೆಹರೂ ಓಲೆಕಾರ್ ಮಕ್ಕಳಾದ ದೇವರಾಜ್ ಓಲೆಕಾರ್ ಹಾಗೂ ಮಂಜುನಾಥ್ ಓಲೆಕಾರ್ ಅವರೂ ಜೈಲು ಸೇರಲಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ, 2 ವರ್ಷ ಜೈಲು ಜೊತೆಗೆ 2 ಸಾವಿರ ರೂ. ದಂಡವನ್ನು ವಿಧಿಸಿ ಶಿಕ್ಷೆ ಪ್ರಕಟ ಮಾಡಲಾಗಿದೆ.
ಆರೋಪ ಏನು?
ಶಾಸಕರ ಅನುದಾನದಲ್ಲಿ 1 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಶಾಸಕರ ಅನುದಾನವನ್ನು ಕಬಳಿಸುವ ಉದ್ದೇಶದಿಂದ 2010ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ತಮ್ಮ ಕ್ಷೇತ್ರದಲ್ಲಿ 50 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಅದರಂತೆ ಜಿಲ್ಲಾಧಿಕಾರಿ ಹಣವನ್ನು ಬಿಡುಗಡೆ ಮಾಡಿದ್ದಾರೆ. 10 ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಶಿಫಾರಸ್ಸು ಪತ್ರದಲ್ಲಿ ಪಟ್ಟಿ ಮಾಡಲಾಗಿದ್ದು, ಈ ಪೈಕಿ ನಾಲ್ಕು ಕಾಮಗಾರಿಗಳ ಗುತ್ತಿಗೆಗಳನ್ನು ಹಿರಿಯ ಮಗನಿಗೆ ಹಂಚಿಕೆ ಮಾಡಲಾಗಿತ್ತು. ಟೆಂಡರ್ ನೀಡುವ ವೇಳೆ ಶಾಸಕರು ಶಿಫಾರಸ್ಸಿನೊಂದಿಗೆ ತಮ್ಮ ಪ್ರಭಾವ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಹಲವು ಲೋಕೋಪಯೋಗಿ ಗುತ್ತಿಗೆಗಳನ್ನು ಶಾಸಕರ ಕುಟುಂಬದವರೇ ಪಡೆದುಕೊಂಡಿದ್ದಾರೆ. ಎಂ.ಜಿ.ತಿಮ್ಮಾಪುರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 5 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಗುತ್ತಿಗೆ ಪಡೆದಿದ್ದಾರೆ ಮತ್ತು ನೆಲೋಗಲ್ ಗ್ರಾಮ ಮತ್ತು ತೋಟದ ಯಲ್ಲಾಪುರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಸಹ ಪಡೆದುಕೊಂಡಿದ್ದಾರೆ. ಹಾವೇರಿ ತಾಲೂಕಿನ ಗ್ರಾಮ ಹಾಗೂ ಸವಣೂರು ತಾಲೂಕಿನ ಹೊನ್ನಿಕೊಪ್ಪ ಗ್ರಾಮಗಳಲ್ಲಿ ಪ್ರತಿ ಗುತ್ತಿಗೆ ಅಂದಾಜು 5 ಲಕ್ಷ ರೂ.ನಂತೆ ಗುತ್ತಿಗೆ ಪಡೆದಿದ್ದಾರೆ. ಜೊತೆಗೆ, ಬೇರೊಬ್ಬರು ಯಾರೂ ಟೆಂಡರ್‌ನಲ್ಲಿ ಭಾಗವಹಿಸದಂತೆ ಬೆದರಿಕೆ ಹಾಕಿದ್ದಾರೆ. ಕಾನೂನಿಗೆ ತಿಳಿದಿಲ್ಲದ ಇತರ ಯಾವುದೇ ವ್ಯಕ್ತಿಗೆ ಗುತ್ತಿಗೆಗಳನ್ನು ಪಡೆಯಲು ಅವಕಾಶ ನೀಡದೆ ಎಲ್ಲಾ ಸರ್ಕಾರಿ ಗುತ್ತಿಗೆಗಳನ್ನು ತಮ್ಮ ಮನೆಯವರೇ ಪಡೆದುಕೊಂಡು ನಿರ್ವಹಣೆ ಮಾಡಿದ್ದರು. ಇದರಲ್ಲಿ ಭಾರಿ ಪ್ರಮಾಣದ ಅಕ್ರಮ ಎಸಗಿದ್ದು, ಭ್ರಷ್ಟಾಚಾರದ ಆರೋಪ ಕೂಡ ಎದುರಾಗಿತ್ತು.
ಶಾಸಕರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಹಾವೇರಿ ಜಿಲ್ಲಾ ಪೊಲೀಸರು ತನಿಖೆ ಕೈಗೊಂಡು ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಇದಕ್ಕೆ ಸಂಬಂಧಿಸದಂತೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದಾಗ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಣದ ದುರುಪಯೋಗ ಹಾಗೂ ಅಧಿಕಾರ ದುರ್ಬಳಕೆ ಹಿನ್ನೆಲೆಯಲ್ಲಿ ಅವರಿಗೆ 2ವರ್ಷ ಜೈಲು ಶಿಕ್ಷೆ ವಿಧಿಸಿದೆ.


