ಹರಿಯಾಣದ ಗಡಿಯಲ್ಲಿರುವ ರಾಜಸ್ಥಾನದ ಘಟ್ಮೀಕಾ ಗ್ರಾಮದಲ್ಲಿ ಗುರುವಾರ ರಾತ್ರಿ ಭಾರೀ ಪೊಲೀಸರು ಜಮಾಯಿಸಿದ್ದರು. ಆದರೆ ರಾತ್ರಿಯ ವಿಲಕ್ಷಣ ಮೌನವು ಬೆಳಿಗ್ಗೆ ಇಲ್ಲವಾಗಿತ್ತು. ಘಟಮೀಕಾದ ಇಬ್ಬರು ಮುಸ್ಲಿಮರನ್ನು ಹತ್ಯೆಗೈದವರ ವಿರುದ್ಧ ಪ್ರತಿಭಟಿಸಲು ಸಮೀಪದ ಹಳ್ಳಿಗಳಿಂದ ಸುಮಾರು 2,000ಕ್ಕೂ ಜನರು ಧಾವಿಸಿದ್ದರು.
ರಾಜಸ್ಥಾನ-ಹರಿಯಾಣ ಗಡಿಗೆ ಸಮೀಪವಿರುವ ಹರಿಯಾಣದಲ್ಲಿ ನಾಸಿರ್ ಮತ್ತು ಜುನೈದ್ ಅವರನ್ನು ಹತ್ಯೆ ಮಾಡಿರುವ ಕುರಿತು ‘ದಿ ವೈರ್’ ವರದಿ ಮಾಡಿದೆ. ಈ ಅಪರಾಧಕ್ಕೆ ಸಂಬಂಧಿಸಿದ ಕಾರಣಗಳು ಮತ್ತು ಸ್ವಯಂಘೋಷಿತ ‘ಗೋ ರಕ್ಷಕರು’ ಎಂದು ಕರೆದುಕೊಂಡಿರುವ ಆರೋಪಿಗಳಿಂದಾಗಿ ಭೀತಿ ಉಂಟಾಗಿದೆ.
(ರಾಷ್ಟ್ರ ರಾಜಧಾನಿಯಿಂದ ಕೇವಲ 100 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಘಟನೆ ನಡೆದಿದ್ದು, ಗೋರಕ್ಷಣೆ ಹೆಸರಲ್ಲಿ ದುಷ್ಕೃತ್ಯ ಜರುಗಿದೆ. ರಾಜಸ್ಥಾನ-ಹರಿಯಾಣ ಗಡಿಯಲ್ಲಿದ್ದ ಇಬ್ಬರು ಮುಸ್ಲಿಮರನ್ನು ದುಷ್ಕರ್ಮಿಗಳ ಗುಂಪು ಅಪಹರಿಸಿ, ಕಾರಿನೊಳಗೆ ಕೂಡಿಹಾಕಿ ಜೀವಂತವಾಗಿ ಕೊಂದಿರುವ ಆರೋಪ ಕೇಳಿಬಂದಿದೆ.)
ಘಟಮೀಕದಲ್ಲಿ ಸಣ್ಣ ರೈತರು ಮತ್ತು ಲಾರಿ ಚಾಲಕರು ಹೆಚ್ಚಾಗಿ ವಾಸಿಸುತ್ತಿದ್ದು, 2017ರಲ್ಲಿ ಉಮರ್ ಖಾನ್ ಹತ್ಯೆಯಾಗಿತ್ತು. ಆ ನಂತರದಲ್ಲಿ ಈ ಗ್ರಾಮದಲ್ಲಿ ಅಂತಹ ಉದ್ವಿಗ್ನ ವಾತಾವರಣ ಕಂಡುಬಂದಿರಲಿಲ್ಲ.
‘ದಿ ವೈರ್’ನೊಂದಿಗೆ ಮಾತನಾಡಿರುವ ಉಮರ್ ಅವರ ಮಗ ಮಕ್ಸೂದ್, “ಹಾಲಿನ ಉದ್ದೇಶಕ್ಕಾಗಿಯಾದರೂ ಪಕ್ಕದ ಹಳ್ಳಿಗಳಿಂದ ಹಸುಗಳನ್ನು ಖರೀದಿಸಲು ಸಾಧ್ಯವಿಲ್ಲವಾಗಿದೆ ಎಂದು ಜನ ಹೇಳುತ್ತಿದ್ದಾರೆ. ನನ್ನ ತಂದೆಗೆ ಬಂದೊದಗಿದ ಸ್ಥಿತಿಯು ಅವರಲ್ಲಿ ಭೀತಿಯನ್ನು ಉಂಟುಮಾಡಿದೆ” ಎಂದಿದ್ದಾರೆ.
“ಪೆಹ್ಲು, ರಖ್ಬರ್, ಜುನೈದ್ ಮತ್ತು ನನ್ನ ತಂದೆ ಉಮರ್ ಅವರಂತಹ ಹಲವಾರು ಪ್ರಕರಣಗಳ ನಂತರವೂ ಗೂಂಡಾಗಳು ತಮ್ಮ ಧೈರ್ಯವನ್ನು ಮುಂದುವರಿಸಿದ್ದಾರೆ. ಅಪರಾಧಿಗಳಿಗೆ ಪ್ರಸ್ತುತ ಕೇಂದ್ರ ಬಿಜೆಪಿ ಸರ್ಕಾರವು ಭೀತಿಯಿಲ್ಲದ ವಾತಾವರಣವನ್ನು ಸೃಷ್ಟಿ ಮಾಡಿದೆ” ಎನ್ನುತ್ತಾರೆ ಮಕ್ಸೂದ್.
ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಆರೋಪಗಳಲ್ಲಿ ಪೊಲೀಸರು ಕೊಲೆಯ ಸೆಕ್ಷನ್‌ಗಳನ್ನು ಏಕೆ ಸೇರಿಸಿಲ್ಲ? ಅದನ್ನು ಕೇವಲ ಅಪಹರಣದ ಪ್ರಕರಣವೆಂದು ಏಕೆ ತೋರಿಸಲು ಪ್ರಯತ್ನಿಸುತ್ತಿದ್ದಾರೆ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 365 (ಅಪಹರಣ), 367 (ಒಬ್ಬ ವ್ಯಕ್ತಿಗೆ ನೋವು ನೀಡಲು ಅಪಹರಣ) ಮತ್ತು 368 (ತಪ್ಪಾದ ಬಂಧನ) ಅಡಿಯಲ್ಲಿ FIR ದಾಖಲಿಸಲಾಗಿದೆ. ಆದಾಗ್ಯೂ, ಕೆಲವು ಸ್ಥಳೀಯರು ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ರಾಜಸ್ಥಾನ ಪೊಲೀಸರು ಬಂಧಿಸಬಹುದೆಂದು ಇಲ್ಲಿನ ಜನ ಭಾವಿಸಿದ್ದಾರೆ.

ಹಳ್ಳಿಯ ಯುವ ವಿದ್ಯಾರ್ಥಿ ಮುರ್ಸಲೀನ್ ಪ್ರತಿಕ್ರಿಯಿಸಿ, “ತನ್ನ ನೆರೆಹೊರೆಯ ಇಬ್ಬರು ವ್ಯಕ್ತಿಗಳನ್ನು ಜೀವಂತವಾಗಿ ಸುಟ್ಟುಹಾಕಿದ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದಾನೆ. ಮೋನು ಮಾನೇಸರ್ ಅವರು ಪೋಸ್ಟ್ ಮಾಡಿದ ವೀಡಿಯೊಗಳನ್ನು ಗಮನಿಸಿದ್ದೇನೆ” ಎಂದು ತಿಳಿಸಿದ್ದಾರೆ.
“ರೈಫಲ್‌ಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಪೋಸ್ಟ್‌ನಲ್ಲಿ ಪೋಸ್ ನೀಡಲಾಗಿದೆ. ಹರಿಯಾಣ ಪೊಲೀಸರ ಬೆಂಬಲ ತಮಗಿರುವುದಾಗಿ ಇವರು ಹೆಮ್ಮೆ ಪಡುತ್ತಿದ್ದಾರೆ. ಇಂದು ಜುನೈದ್, ನಾಳೆ ಅವರು ನನ್ನನ್ನೂ ಕೊಂದು ಹೂಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನಮಗೆ ಎಂದಿಗೂ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುವುದಿಲ್ಲ” ಎಂದು ವಿಷಾದಿಸಿದ್ದಾರೆ.
“ಆತ ನನ್ನೆದುರು ಬೆಳೆವಣಿಗೆ ಕಂಡವರು. ಅವನು ಯಾವಾಗಲೂ ಕಠಿಣ ಪರಿಶ್ರಮಿ, ಸಹೃದಯ ಯುವಕ ಎಂದು ನನಗೆ ತಿಳಿದಿತ್ತು” ಎಂದು ಜುನೈದ್‌ನ ನೆರೆಹೊರೆಯವರಾದ ಸಾಹುನಿಯವರು ‘ದಿ ವೈರ್’ಗೆ ತಿಳಿಸಿದ್ದಾರೆ. “ಅವರು ನಮ್ಮ ಹಳ್ಳಿಯಲ್ಲಿ ಗೌರವಾನ್ವಿತರಾಗಿ ಗುರುತಿಸಿಕೊಂಡಿದ್ದರು, ಅವರ ಸೌಮ್ಯ ಸ್ವಭಾವದ ಕಾರಣಕ್ಕಾಗಿ ಎಲ್ಲರಿಗೂ ಅವರು ಗೊತ್ತಿದ್ದರು” ಎಂದಿದ್ದಾರೆ.
“ಆತನ ತಲೆಬುರುಡೆಯನ್ನು ನೋಡುವುದಕ್ಕೆ ನನ್ನಿಂದಾಗುತ್ತಿಲ್ಲ. ನನ್ನ ಮಗನನ್ನೇ ಕಳೆದುಕೊಂಡಂತಾಗಿದೆ. ಜುನೈದ್ ಅನೇಕ ಜನರಿಗೆ ಅನ್ನದಾತನಾಗಿದ್ದನು. ಆತನಿಲ್ಲದೆ ಅವನ ಕುಟುಂಬದ ಭವಿಷ್ಯ ಚಿಂತಾಜನಕವಾಗಿದೆ” ಎಂದು ದುಃಖಿಸಿದ್ದಾರೆ.
ಘಟಮೀಕ ಪಕ್ಕದ ಗ್ರಾಮವಾದ ಧಿಮ್ರಿಯಲ್ಲಿ ಸರಪಂಚ್ ತಾಹಿರ್ ಹುಸೇನ್ ಮಾತನಾಡಿ, “ಈ ಪ್ರದೇಶದಲ್ಲಿ ವ್ಯಾಪಕವಾಗಿರುವ ಭಯೋತ್ಪಾದಕ ಕೃತ್ಯವನ್ನು ರಾಜ್ಯ ಸರ್ಕಾರ ಹೇಗೆ ತಡೆಯಲು ಹೊರಟಿದೆ ಎಂಬುದನ್ನು ತಿಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಭೀಕರ ಘಟನೆಗೆ ಕಾರಣರಾದವರನ್ನು ಬಂಧಿಸಿ, ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಗಲ್ಲಿಗೇರಿಸಬೇಕು” ಎಂದು ಒತ್ತಾಯಿಸಿದರು.
ಕೆಲವು ವಾರಗಳ ಹಿಂದೆ, ವಾರಿಸ್ ಎಂಬ ಮುಸ್ಲಿಂ ವ್ಯಕ್ತಿ ಈ ಪ್ರದೇಶದಲ್ಲಿ ಸಾವನ್ನಪ್ಪಿದ್ದರು. ರಸ್ತೆ ಅಪಘಾತದಿಂದ ಸಾವಾಗಿದೆ ಎಂದು ಪೊಲೀಸರು ಹೇಳಿದರು. ವಾರಿಸ್ ಅವರ ಕುಟುಂಬವು ಅದನ್ನು ಅಲ್ಲಗಳೆಯಿತು. ಬಜರಂಗದಳದ ಮುಖಂಡರಾದ ಮೋನು ಮಾನೇಸರ್ (ಜುನೈದ್, ನಾಸಿರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಿಗಳು) ಮತ್ತು ಇತರರು ಕೊಲೆ ಮಾಡಿದ್ದಾರೆ ಎಂದು ದೂರಿತು.
“ದೇಶದ ಸಾಮಾಜಿಕ ರಚನೆಯನ್ನು ಹಾಳುಮಾಡಲು ಬಯಸುವ ಕೆಲವು ಜನರಿದ್ದಾರೆ, ಕೆಲವರು ಸಮುದಾಯಗಳ ನಡುವಿನ ಸಾಮಾಜಿಕ ಶಾಂತಿಯನ್ನು ಕದಡಲು ಬಯಸುತ್ತಾರೆ” ಎಂದಿದ್ದಾರೆ ಸರ್‌ಪಂಚ್.
ಇದನ್ನೂ ಓದಿರಿ: ತಮಿಳುನಾಡು ದಲಿತ ಬಾಲಕಿಯರಿಗೆ ಶಿಕ್ಷಕರಿಂದ ಜಾತಿನಿಂದನೆ: ಫಿನಾಯಿಲ್ ಕುಡಿದು ಆತ್ಮ*ತ್ಯೆಗೆ ಯತ್ನ
“ಸರ್ಕಾರವು ಈ ಘಟನೆಗಳನ್ನು ಗಮನಿಸಬೇಕು, ಅಗತ್ಯ ಕ್ರಮಗಳನ್ನು ಜರುಗಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಸದ್ಯದ ಆಡಳಿತದ ವ್ಯವಸ್ಥೆಯ ನಮಗೆ ಸಂತೃಪ್ತಿಯಿದೆ. ಐಜಿ ಮತ್ತು ಎಸ್ಪಿ ನಮ್ಮೊಂದಿಗಿದ್ದಾರೆ. ಈ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಅವರಿಗೆ ವಿನಂತಿಸುತ್ತೇವೆ” ಎಂದಿದ್ದಾರೆ.
“ಹರಿಯಾಣ ಪೊಲೀಸರ ಪಾತ್ರವು ಪ್ರಶ್ನಾರ್ಹವಾಗಿದೆ. ಹರಿಯಾಣದಿಂದ ಯಾರಾದರೂ ರಾಜಸ್ಥಾನಕ್ಕೆ ಬಂದು, ಅಂತಹ ಭಯಾನಕ ಅಪರಾಧವನ್ನು ಮಾಡಿ ಹೋಗುವುದು ಹೇಗೆ? ಅವರನ್ನು ತಡೆಯಲು ಪೊಲೀಸ್ ಬೂತ್, ಚೆಕ್ ಪೋಸ್ಟ್ ಇರಲಿಲ್ಲವೇ? ಅವರು ಈ ಬಗ್ಗೆ ಯೋಚಿಸಬೇಕು. ಯಾರಾದರೂ ಎಲ್ಲಿಗಾದರೂ ಹೋಗಿ ಜನರನ್ನು ಹೊಡೆದು ಸುಟ್ಟು ಹಾಕುತ್ತಿರುವುದಾದರೂ ಹೇಗೆ?” ಎಂದು ಹುಸೇನ್ ಪ್ರಶ್ನಿಸಿದ್ದಾರೆ.
“ಅಧಿಕಾರದಲ್ಲಿರುವವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಈ ರೀತಿಯ ಪ್ರಕರಣಗಳು ಮುಂದುವರಿಯುತ್ತಲೇ ಇರುತ್ತವೆ. ವಾತಾವರಣ ಹದಗೆಟ್ಟಿದೆ, ಜನರು ಭಯದಿಂದ ಬದುಕುತ್ತಿದ್ದಾರೆ. ಜನರು ಹೊರಗೆ ಬರುವುದಾದರೂ ಹೇಗೆ? ವ್ಯಾಪಾರ ವಹಿವಾಟು ನಡೆಸುವುದಾದರೂ ಹೇಗೆ? ದೇಶ ಈ ರೀತಿ ಮುಂದುವರಿಯಬಾರದು” ಎಂದು ಅಭಿಪ್ರಾಯಪಟ್ಟಿದ್ದಾರೆ.


