ಮಾಂಸ ತಿನ್ನುವುದು ತಿನ್ನದಿರುವುದು, ದೇವಸ್ಥಾನಗಳಿಗೆ ಹೋಗುವುದು ಹೋಗದಿರುವುದು ವೈಯಕ್ತಿಕ ಆಯ್ಕೆಗಳು. ಇದು ರಾಜಕೀಯ ಚರ್ಚೆಯ ವಸ್ತು ಆಗಬಾರದು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ಸಿ.ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ವಿಚಾರದ ಕುರಿತು ಸರಣ ಟ್ವೀಟ್ ಮಾಡಿರುವ ಅವರು, “ರಾಜಕೀಯ ನಾಯಕರು ಜನತೆಯ ಕಲ್ಯಾಣ, ರಾಜ್ಯದ ಅಭಿವೃದ್ದಿ ಬಗ್ಗೆ ಚರ್ಚಿಸಬೇಕು. ಪರದೂಷಣೆಯಲ್ಲಿ ನಿರತರಾಗಿರುವ ಸಿ.ಟಿ ರವಿ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ” ಎಂದಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಜಗತ್ತಿಗೆಲ್ಲ ಸತ್ಯ ಸಾರುತ್ತಿರುವಾಗ “ತಾನು ತಿಂದದ್ದು ನಿಜ, ದೇವಸ್ಥಾನದ ಒಳಪ್ರವೇಶಿಸಿಲ್ಲ, ರಸ್ತೆಯಲ್ಲಿಯೇ ನಿಂತು ಕೈಮುಗಿದಿದ್ದೆ’’ ಎಂಬ ಸಿ.ಟಿ ರವಿಯವರ ವಾದ, ಸದಾ ಹಸಿಹಸಿ ಸುಳ್ಳು ಹೇಳುವ ಅವರ ಹುಟ್ಟು ಗುಣಕ್ಕೆ ತಕ್ಕ ಹಾಗೆ ಇದೆ ಎಂದು ಸಿದ್ದರಾಯ್ಯ ಕಿಡಿಕಾರಿದ್ದಾರೆ.
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು @BJP4Karnataka ನಾಯಕರು ಪ್ರಚಾರ ಮಾಡಿದ್ದರು. ಆ ರೀತಿ ಅಪಪ್ರಚಾರ ಮಾಡಿದವರೆಲ್ಲರೂ ಈಗ @CTRavi_BJP ಅವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ. 3/4
— Siddaramaiah (@siddaramaiah) February 23, 2023
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಸುಳ್ಳು ಸುದ್ದಿಯನ್ನೇ ಪ್ರಚಾರ ಮಾಡಿ ನನ್ನನ್ನು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಆ ರೀತಿ ಅಪಪ್ರಚಾರ ಮಾಡಿದವರೆಲ್ಲರೂ ಈಗ ಸಿ.ಟಿ ರವಿಯವರ ಕೃತ್ಯದಿಂದಾಗಿ ತಾವು ಮಾಡಿದ್ದ ವಾಂತಿಯನ್ನು ತಾವೇ ತಿನ್ನುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂಬ ಬಿಜೆಪಿ ನಾಯಕರ ಸುಳ್ಳು ಸುದ್ದಿಯನ್ನು ನಂಬಿ ನನ್ನನ್ನು ಟೀಕಿಸಿದ್ದ ರಾಜ್ಯದ ಕೆಲವು ಮಠಾಧೀಶರು, ಸಿ.ಟಿ.ರವಿ ಅವರು ಮಾಂಸತಿಂದು ದೇವಸ್ಥಾನಕ್ಕೆ ಹೋಗಿರುವ ಬಗ್ಗೆ ಮೌನವಾಗಿರುವುದು ನನಗೆ ಅಚ್ಚರಿ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 19ರಂದು ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ್ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸವಿದಿದ್ದರು. ಬಾಡೂಟ ಸವಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಸಿ.ಟಿ.ರವಿ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ್ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಸಿ.ಟಿ.ರವಿ ದೇವಸ್ಥಾನಕ್ಕೆ ತೆರಳಿದ್ದರು. ಇದು ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ಕಾಂಗ್ರೆಸ್‌ನವರು ತಿಂದರೆ ಮಾಂಸ, ಬಿಜೆಪಿಗರು ತಿಂದರೆ ಮಾಂಸವೂ ಕ್ಯಾರೆಟ್ ಹಲ್ವಾದಂತಾಗುತ್ತದೆಯೇ? ಮಾಂಸದೂಟ ಸೇವಿಸಿ ಹನುಮನ ದೇವಸ್ಥಾನಕ್ಕೆ ಹೋಗಿದ್ದ ಸಿ.ಟಿ.ರವಿಯವರು ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಬಾಯಿ ಬಡಿದುಕೊಳ್ಳುತ್ತಿಲ್ಲವೇಕೆ? ಈಗ ದೇವಾಲಯ ಮೈಲಿಗೆಯಾಗಿಲ್ಲವೇ? ಗೋಮೂತ್ರ ಎರಚುವುದಿಲ್ಲವೇ?” ಎಂದು ಕೇಳಿತ್ತು.
ತಲೆಗೆ ಸುರಿದ ನೀರು ಕಾಲಿಗೆ ಬರಲೇಬೇಕಲ್ಲ, ರವಿಯವರೆ! ಬರೀ ಇಂತಹ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಮುಖ್ಯ ಸಂಗತಿಗಳಿಂದ ಜನರನ್ನು ವಿಮುಖರನ್ನಾಗಿಸುತ್ತಿದ್ದ ಬಿಜೆಪಿಯ ‘ಹುರಿಯಾಳು’ ಈ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಏನು ಹೇಳುತ್ತಿದೆ? ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’, ಎಂಬಂತಾಗಲಿಲ್ಲವೆ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ @CTRavi_BJP ಯವರು ಬಾಡೂಟ ಸೇವಿಸಿ ಭಟ್ಕಳದ ನಾಗಬನ ಹಾಗೂ ಕರಿಬಂಟ ಹನುಮನ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಬಾಡೂಟ ಸೇವಿಸುವಾಗ ತೆಗೆದ ಪಟವು ಪ್ರಕಟವಾಗಿದೆ. ಸಿ.ಟಿ.ರವಿಯವರೆ, ಸತ್ಯ ಬಹಿರಂಗಪಡಿಸುವಿರೆ?1/4 pic.twitter.com/Skn6I7hcdc
— Janata Dal Secular (@JanataDal_S) February 22, 2023
ಅಂದಹಾಗೆ, ನೀವು ತಿಂದ ಮಾಂಸ ಯಾವುದು ಎಂದು ಹೇಳುತ್ತೀರಾ, ರವಿಯವರೆ? ಆಹಾರ ಸೇವನೆ ವೈಯಕ್ತಿಕ ವಿಷಯ. ನಂಬಿಕೆಗಳು ಅಷ್ಟೆ. ಆದರೆ, ಎಲ್ಲದರ ಕಲಸುಮೇಲೋಗರ ಮಾಡಿ, ಜನರನ್ನು ದಿಕ್ಕು ತಪ್ಪಿಸುವ ಹೇಸಿಗೆ ರಾಜಕಾರಣ ಮಾಡುವವರಿಗೆ ಅನಿವಾರ್ಯವಾಗಿ ಈ ಪ್ರಶ್ನೆ ಕೇಳಬೇಕಿದೆ ಎಂದು ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಮಾಂಸಾಹಾರದ ಪರ ಸಿ.ಟಿ.ರವಿ ಬ್ಯಾಟಿಂಗ್; ಕಾಂಗ್ರೆಸ್, ಸಿದ್ದರಾಮಯ್ಯ ಪ್ರತಿಕ್ರಿಯೆ


