ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮಾಡಲು ರಾಜ್ಯಕ್ಕೆ ಬಂದಿದ್ದಾರೆ. ಈ ವೇಳೆ ಅವರು ರೋಡ್ ಶೋ ನಡೆಸಲಿದ್ದು, ಆ ರಸ್ತೆಯ ಒಂದು ಬದಿಗಷ್ಟೇ ಡಾಂಬರು ಹಾಕಿದ್ದು, ಇನ್ನೊಂದು ಬದಿಯಲ್ಲಿ ಗುಂಡಿಗಳನ್ನು ಹಾಗೇ ಉಳಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾಗಮಂಗಲ: ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ರಂಗ ಮಂದಿರದಿಂದ ಸುಮಲತಾ ಫೋಟೋ ಕಿತ್ತೆಸೆದ ಯುವಕರು
ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಫಥದ ನಡುವೆ ರಸ್ತೆ ವಿಭಜಕವಿದ್ದು, ಪ್ರಧಾನಿ ಸಂಚರಿಸುವ ರಸ್ತೆಯ ಎಡಬದಿಗೆ ಮಾತ್ರ ಡಾಂಬರು ಹಾಕಿ ಬಣ್ಣ ಬಳಿಯಲಾಗಿದೆ. ಬಲಬದಿಯಲ್ಲಿ ಎಂದಿನಂತೆ ಗುಂಡಿಗಳಿದ್ದು ಬಣ್ಣ, ಅಲಂಕಾರವಿಲ್ಲ ಇದು ಎಲ್ಲರ ಗಮನ ಸೆಳೆಯುತ್ತಿದೆ. ಈ ಬಗ್ಗೆ ಶನಿವಾರ ಸಿದ್ಧತೆಯಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ಅವ್ಯವಸ್ಥೆ ಬಗ್ಗೆ ನಾಕರಿಕರೊಬ್ಬರು ಮಾತನಾಡಿದ್ದು, ‘ಡಾಂಬರು ಹಾಕಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಇನ್ನೊಂದು ಬದಿಗೆ ಹಾಕುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಪ್ರಧಾನಿಗೆ ಮಾಡುತ್ತಿರುವ ಅವಮಾನ. ಸರ್ಕಾರದ ಹುಳುಕು ಎದ್ದು ಕಾಣಿಸುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರು ಪ್ರವಾಸಿ ಮಂದಿರದಿಂದ ನಂದಾ ಟಾಕೀಸ್‌ವರೆಗೆ ಪ್ರಧಾನಿ 1.8 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಅಮರಾವತಿ ಹೋಟೆಲ್‌ವರೆಗೆ 6 ಕಿ.ಮೀ ಕಾರಿನಲ್ಲಿ ಮುಂದುವರಿಯುತ್ತಾರೆ. ಅವರು ಸಂಚರಿಸುವ ಅಷ್ಟು ದೂರಕ್ಕೂ ರಸ್ತೆಯ ಒಂದೇ ಬದಿಗಷ್ಟೇ ಡಾಂಬರು ಹಾಕಲಾಗಿದೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರತಿಕ್ರಿಸಿದ್ದು, ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಅಪೂರ್ಣಗೊಂಡಿರುವ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಅಲ್ಲದೆ, ಈ ರಾಷ್ಟ್ರೀಯ ಹೆದ್ದಾರಿಯ ಟೋಲ್ ಮೂಲಕ ₹25 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಈ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿ ಅಪೂರ್ಣಗೊಂಡಿರುವ ಹೆದ್ದಾರಿ ಉದ್ಘಾಟನೆ ಮಾಡುತ್ತಿದ್ದು, ಟೋಲ್ ಹೆಸರಲ್ಲಿ ಕನ್ನಡಿಗರಿಂದ ಹಣ ಸಂಗ್ರಹಿಸಲು ಬಿಜೆಪಿ ಹೊರಟಿದೆ. ಈ ಹೆದ್ದಾರಿಯ ವಿನ್ಯಾಸ ಅವೈಜ್ಞಾನಿಕವಾಗಿದ್ದು, ನೀರು ಸುಗಮವಾಗಿ ಹರಿದುಹೋಗಲು ಅವಕಾಶ ಕಲ್ಪಿಸಿಲ್ಲ’ ಎಂದು ಅವರು ದೂರಿದ್ದಾರೆ.
ಸುಜೇವಾಲಾರಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ
1/9
Inauguration of Incomplete Bangalore- Mysore National Highway 👇🏼
Publicity + Polls = Sacrificing Lives & Endangering Public Safety!
Modi Government is Profiteering to the tune of ₹ 25,000 Crore in Toll Collection!OUR STATEMENT👇#MysuruExpressway pic.twitter.com/wtf7n7wCUg
— Randeep Singh Surjewala (@rssurjewala) March 11, 2023
ಇದನ್ನೂ ಓದಿ: ತೀವ್ರ ವಿರೋಧದ ಬಳಿಕ ರಾತ್ರೋರಾತ್ರಿ ಉರಿಗೌಡ, ನಂಜೇಗೌಡ ಮಹಾದ್ವಾರ ತೆರವು
- ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 21 ಕಿ.ಮೀ (118 ಕಿ.ಮೀ ಪೈಕಿ) ಉದ್ದದಷ್ಟು ರಸ್ತೆ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿದೆ. ಈ ಕುರಿತ ಚಿತ್ರಗಳನ್ನು ಸೇರಿಸಲಾಗಿದೆ. ಅಪೂರ್ಣಗೊಂಡಿರುವ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಗಿಮಿಕ್ ಅಲ್ಲವೇ?
- ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು- ಮೈಸೂರು ರಸ್ತೆ ಅಪೂರ್ಣಗೊಂಡಿದ್ದು, ಈ ರಸ್ತೆಯ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ. 50 ಅಂಡರ್ ಪಾಸ್ ಗಳ ಪೈಕಿ ಕೇವಲ 22 ಅಂಡರ್ ಪಾಸ್ ಮಾತ್ರ ಪೂರ್ಣಗೊಂಡಿದೆ. 12 ಓವರ್ ಪಾಸ್ ಗಳ ಪೈಕಿ ಕೇವಲ 6 ಮಾತ್ರ ಪೂರ್ಣಗೊಂಡಿವೆ. 12 ಹಗುರ ವಾಹನ ಅಂಡರ್ ಪಾಸ್ ಗಳ ಪೈಕಿ ಕೇವಲ 6 ಮಾತ್ರ ಪೂರ್ಣವಾಗಿವೆ. 18 ಪಾದಚಾರಿ ಅಂಡರ್ ಪಾಸ್ ಗಳ ಪೈಕಿ ಕೇವಲ 8 ಮಾತ್ರ ಪೂರ್ಣಗೊಂಡಿವೆ. ಅಪೂರ್ಣಗೊಂಡಿರುವ, ಛಿದ್ರವಾಗಿರುವ ಹಾಗೂ ತೇಪೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದೇಕೆ?
- 118 ಕಿ.ಮೀ ಉದ್ದದ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸರ್ವೀಸ್ ರಸ್ತೆ ಅಪೂರ್ಣಗೊಂಡಿದೆ. ಪರಿಣಾಮ ಈ ಹೆದ್ದಾರಿಯ ಭಾಗದ ರೈತರಿಗೆ, ನಿವಾಸಿಗಳಿಗೆ ತೊಂದರೆಯಾಗಿದ್ದು, ಜನಜೀವನ ಹಾಗೂ ದಿನನಿತ್ಯದ ಚಟುವಟಿಕೆಗೆ ತೊಡಕಾಗಿದೆ. ಪ್ರಧಾನಮಂತ್ರಿಗಳು ಸರ್ವೀಸ್ ರಸ್ತೆ ಪೂರ್ಣಗೊಳಿಸದೇ ರೈತರು, ಜನಸಾಮಾನ್ಯರ ರಕ್ಷಣೆ ಪಣಕ್ಕಿಟ್ಟಿರುವುದೇಕೆ?
- ಬೆಂಗಳೂರು ಮೈಸೂರು ಹೆದ್ದಾರಿಯನ್ನು ಇಂಡಿಯನ್ ರೋಡ್ ಕಾಂಗ್ರೆಸ್ (IRC) ಗುಣಮಟ್ಟದಲ್ಲಿ ನಿರ್ಮಾಣ ಮಾಡಿಲ್ಲ. ಹಲವೆಡೆಗಳಲ್ಲಿ ಈ ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಅಲ್ಲದೆ ಕಳಪೆ ಗುಣಮಟ್ಟದ ಸಾಮಾಗ್ರಿ ಬಳಸಿದ್ದು, ಒಟ್ಟಾರೆ ರಸ್ತೆಯ ನಿರ್ಮಾಣ ಯೋಜನೆ ಕಳಪೆಯಾಗಿದೆ. 2022ರ ಅಕ್ಟೋಬರ್ ನಿಂದ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 122 ಜನರಿಗೆ ಗಂಭೀರ ಗಾಯಗಳಾಗಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ. ಪ್ರಧಾನಮಂತ್ರಿಗಳಿಗೆ ಸಾರ್ವಜನಿಕರ ರಕ್ಷಣೆಯನ್ನು ಅಪಾಯಕ್ಕೆ ಸಿಲುಕಿರುವ ಹಾಗೂ ಅಮಾಯಕ ಜೀವಗಳನ್ನು ಬಲಿಯಾಗುತ್ತಿರುವ ಬಗ್ಗೆ ಅರಿವಿಲ್ಲವೇಕೆ?
- ಸಂಚಾರಿ ಸಮೀಕ್ಷೆ ಪ್ರಕಾರ 2018ರಲ್ಲಿ ಈ ರಸ್ತೆಯಲ್ಲಿ 53 ಸಾವಿರ ಪ್ಯಾಸೆಂಜರ್ ಕಾರ್ ಯುನಿಟ್ (PCU) ನಷ್ಟಿದ್ದು ಇದು 2023ಕ್ಕೆ 90 ಸಾವಿರ ತಲುಪುವ ನಿರೀಕ್ಷೆ ಇದೆ. ಇದರ ಜತೆಗೆ ವಾಣಿಜ್ಯ ಉದ್ದೇಶಿತ ವಾಹನಗಳು ಸೇರ್ಪಡೆಯಾಗಲಿವೆ. 118 ಕಿ.ಮೀ ರಸ್ತೆಯ ಟೋಲ್ (56 ಕಿ.ಮೀ.ಗೆ 135 ಹಾಗೂ 62 ಕಿ.ಮೀ.ಗೆ 165) ಒಂದು ಕಡೆಗೆ ಸಾಗಲು 300 ರೂ. ನಿಗದಿ ಮಾಡಿದ್ದು, ಎರಡೂ ಕಡೆ ಓಡಾಡಲು ಕಾರಿಗೆ 600 ರೂ. ನಿಗದಿ ಮಾಡಲಾಗಿದೆ. ಇನ್ನು ಭಾರಿ ವಾಹನ ಹಾಗೂ ವಾಣಿಜ್ಯ ವಾಹನಗಳಿಗೆ ಒಂದು ಕಡೆಗೆ 2 ಸಾವಿರದಂತೆ ಎರಡೂ ಕಡೆ ಸಾಗಲು 4 ಸಾವಿರ ನಿಗದಿ ಮಾಡಲಾಗಿದೆ. ಈ ಲೆಕ್ಕಾಚಾರದಲ್ಲಿ 90 ಸಾವಿರ ಕಾರುಗಳಿಗೆ 600 ರೂನಂತೆ ಪ್ರತಿನಿತ್ಯ 5,40,00,000 (5.40 ಕೋಟಿ) ರೂ. ಸಂಗ್ರಹವಾಗಲಿದೆ. ಆಮೂಲಕ ವರ್ಷದ 365 ದಿನಕ್ಕೆ 1971 ಕೋಟಿಯಿಂದ 2 ಸಾವಿರ ಕೋಟಿಯಷ್ಟು ಸಂಗ್ರಹವಾಗಲಿದೆ. 10 ವರ್ಷ ಟೋಲ್ ಸಂಗ್ರಹಿಸಿದರೆ 20 ಸಾವಿರ ಕೋಟಿ ಸಂಗ್ರಹವಾಗಲಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಟೋಲ್ ದರ ಹೆಚ್ಚಳ ಮಾಡಿದಾಗ 110 ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ಹಣವನ್ನು ಟೋಲ್ ಮೂಲಕ ಸಂಗ್ರಹವಾಗಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಮೋದಿ ಸರ್ಕಾರ 15 ಸಾವಿರ ಕೋಟಿ ಲಾಭ ಮಾಡಲು ಮುಂದಾಗಿರುವುದೇಕೆ?
- ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೆಚ್ಚ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 6420 ಕೋಟಿಯಷ್ಟಿತ್ತು. ಬಿಜೆಪಿ ಅವಧಿಯಲ್ಲಿ ಇದು 10 ಸಾವಿರ ಕೋಟಿಗೆ ಹೆಚ್ಚಾಗಿದೆ. ಈ ಹೆದ್ದಾರಿಯ ನಿರ್ಮಾಣದ ವೆಚ್ಚ ದುಪ್ಪಟ್ಟಾಗಲು ಕಾರಣವೇನು ಎಂದು ಪ್ರಧಾನಮಂತ್ರಿಗಳು ಉತ್ತರಿಸುವರೇ?
- 2022ರ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿ ಬಳಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸದ ಕಾರಣ ಕುಂಬಳಗೋಡು, ಇನೋರು ಪಾಳ್ಯ ಟೋಲ್ ಹಗೇಟೆ, ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಪ್ರವಾಹ ಉಂಟಾಗಿತ್ತು. ಇನ್ನು ಹೆದ್ದಾರಿಯ ಎರಡೂ ಬದಿಯಲ್ಲಿರುವ ರೈತರ ಕೃಷಿ ಭೂಮಿಗೆ ನೀರಾವರಿ ನೀರು ಹರಿಯಲು ಅಡ್ಡಿಯುಂಟಾಗಿದೆ. ಪರಿಣಾಮ ಪ್ರತಿ ಮಳೆಗಾಲದಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವವಾಗಲಿದೆ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸದೇ, ಹೆದ್ದಾರಿಯ ಎರಡೂ ಬದಿಯ ರೈತರಿಗೆ ಸರಿಯಾದ ನೀರಾವರಿ ವ್ಯವಸ್ಥೆ ಕಲ್ಪಿಸದೇ ಪ್ರಧಾನಮಂತ್ರಿಗಳು ಈ ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದೇಕೆ?
- ಬಿಜೆಪಿ ಸರ್ಕಾರದ ಈ ಮಾನವ ನಿರ್ಮಿತ ಪ್ರವಾಹ ಪರಿಸ್ಥಿತಿಯನ್ನು ಕಂಡರೂ ಕಾಣದಂತೆ ಮಂಡ್ಯ ಹಾಗೂ ಮೈಸೂರು ಭಾಗದ ಸಂಸದರು ವರ್ತಿಸುತ್ತಿದ್ದಾರೆ. ಪ್ರಧಾನಮಂತ್ರಿಗಳು ಹಾಗೂ ಮಂಡ್ಯ ಮತ್ತು ಮೈಸೂರಿನ ಸಂಸದರು ಪ್ರಯಾಣಿಕರು ಹಾಗೂ ರೈತರ ದುರಾವಸ್ಥೆಯನ್ನು ಕಂಡರೂ ಈ ಬಗ್ಗೆ ಅಸಡ್ಡೆ ತೋರುತ್ತಿರುವುದೇಕೆ?


