Homeಕರ್ನಾಟಕಬಿಜೆಪಿ ಎಂಎಲ್‌ಸಿ ಆರ್ ಶಂಕರ್ ಮನೆ ಮೇಲೆ ಐಟಿ ರೈಡ್: ಸರ್ಕಾರದ ವಿರುದ್ಧ ಬೆಂಬಲಿಗರ ಆಕ್ರೋಶ

ಬಿಜೆಪಿ ಎಂಎಲ್‌ಸಿ ಆರ್ ಶಂಕರ್ ಮನೆ ಮೇಲೆ ಐಟಿ ರೈಡ್: ಸರ್ಕಾರದ ವಿರುದ್ಧ ಬೆಂಬಲಿಗರ ಆಕ್ರೋಶ

- Advertisement -
- Advertisement -

ಬಿಜೆಪಿ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಸುಮಾರು 8 ಕೊಟಿ ರೂಪಾಯಿ ವೆಚ್ಚದ ವಸ್ತುಗಳು ಪತ್ತೆಯಾಗಿವೆ ಎಂದು ಅಂದಾಜಿಸಲಾಗಿದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದಲ್ಲಿರುವ ಶಂಕರ್ ಮನೆಗೆ ಮಂಗಳವಾರ ತಡರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಗೆ ಹಂಚಲು ತಂದಿದ್ದ ಹಲವು ವಸ್ತುಗಳು ಪತ್ತೆಯಾಗಿವೆ. ಸುಮಾರು ಏಳು ಗಂಟೆಗಳ ಕಾಲ ಶಂಕರ್‌ ಮನೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. 6000ಕ್ಕೂ ಹೆಚ್ಚು ಸೀರೆ, 9000 ಕ್ಕೂ ಹೆಚ್ಚು ಶಾಲಾ ಕಾಲೇಜು ಬ್ಯಾಗ್ ಗಳು ಸೇರಿದಂತೆ ತಟ್ಟೆಲೋಟಗಳನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ ವಸ್ತುಗಳನ್ನು ಅಧಿಕಾರಿಗಳು ಪೊಲೀಸರ‌ ವಶಕ್ಕೆ ನೀಡಿದ್ದಾರೆ.

ಐಟಿ ಅಧಿಕಾರಿಗಳು ಪರಿಶೀಲನೆ ವೇಳೆ ಈ ಎಲ್ಲ ವಸ್ತುಗಳ ಸರಕು ಸಾಗಣಿ ತೆರಿಗೆ (ಜಿಎಸ್‌ಟಿ) ಪಾವತಿಸಿರುವ ರಶೀದಿ ನೀಡುವಂತೆ ಆರ್‌.ಶಂಕರ್‌ ಅವರನ್ನು ಕೇಳಿದ್ದಾರೆ.

ಆರ್‌ ಶಂಕರ್ ಚುನಾವಣೆ ನಿಯಮ ಉಲ್ಲಂಘನೆ ಮಾಡಿದ್ದಾರೆಯೇ?

ಎಂಟು ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗುತ್ತಿದ್ದಂತೆ ಎಂಎಲ್‌ಸಿ ಶಂಕರ್‌ ಅವರು ಚುನಾವಣೆ ನಿಯಮ ಉಲ್ಲಂಘನೆ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಹಾಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ಕೂಡಾ ಶಂಕರ್ ಮನೆ ಮೇಲೆ ದಾಳಿ ಮಾಡಿದ್ದಾರೆ. ”ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡೆಸಿ, ಒಪ್ಪಿಗೆ ಪಡೆದು ಎಫ್‌ಐಆರ್‌ ದಾಖಲಿಸಲಾಗುವುದು” ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.

ಬಿಜೆಪಿ ವಿರುದ್ಧ ಅಭಿಮಾನಿಗಳ ಆಕ್ರೋಶ

ಆರ್.ಶಂಕರ್ ನಿವಾಸದ ಮೇಲೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ”ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಆರ್‌. ಶಂಕರ್‌ ಅವರ ತ್ಯಾಗವೇ ಕಾರಣ ಅಂಥವರ ಮನೆ ಮೇಲೆ ದಾಳಿ ನಡೆಸುತ್ತಾರೆ ಎಂದರೆ ಮುಂಬರುವ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕೆಲ ಬೆಂಬಲಿಗರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಬಗ್ಗೆ ಮಾತನಾಡಿರುವ ಆರ್ ಶಂಕರ್ ಅವರು, ಇದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿದ್ದಾರೆ. ನಾನು ಬೇರೆ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿಯೂ ಗೆಲ್ಲುವ ಸಾಮರ್ಥ್ಯ ಇದೆ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ. ಈ ಹಿಂದೆ ಬಿಜೆಪಿ ಸಭೆಯಲ್ಲಿ ಶಂಕರ್ ಅವರು ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನನಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಹೇಳಿ ನಂಬಿಸಿ ದ್ರೋಹ ಮಾಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ”ಆರ್.ಶಂಕರ್ ಮನೆ ಮೇಲಿನ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ. ತನಿಖಾ ಸಂಸ್ಥೆಗಳು ಎಷ್ಟು ಮುಕ್ತವಾಗಿವೆ ಅನ್ನೋದಕ್ಕೆ ಇದು ಸಾಕ್ಷಿ. ಯಾರೇ ತಪ್ಪು ಮಾಡಿದ್ರೂ ಸರ್ಕಾರ ಶಿಕ್ಷಿಸುವ ಕೆಲಸ ಮಾಡುತ್ತೆ. ಆರ್ .ಶಂಕರ್ ಕೇಸ್ ನಲ್ಲೂ ತನಿಖಾ ಸಂಸ್ಥೆ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.

ಆರ್ ಶಂಕರ್ ಹಿನ್ನೆಲೆ

ಆರ್‌. ಶಂಕರ್ ಮೂಲತಃ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಶಾಸಕರಾಗಿ ಆಯ್ಕೆಗೊಂಡರು. ರಾಣೆಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಅವರನ್ನು ಸೋಲಿಸಿ ಕರ್ನಾಟಕ ಪ್ರಜಾ ಜನತಾ ಪಕ್ಷದಿಂದ ಏಕೈಕ ಶಾಸಕರಾಗಿ ಆಯ್ಕೆಯಾದರು.

2018ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿದ್ದ ವೇಳೆ ಶಂಕರ್ ಅವರು ಯಡಿಯೂರಪ್ಪನವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದರು. ಆದರೆ ದಿಢೀರ್ ರಾಜಕೀಯ ಬದಲಾವಣೆ ನಂತರ ಅದೇ ದಿನ ಸಾಯಂಕಾಲ ಕೆಪಿಸಿಸಿ ಕಚೇರಿಗೆ ಹೋಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು.

ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಬಳಿಕ ಕಾಂಗ್ರೆಸ್ ಜೊತೆಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಿದರು. ಆದರೆ ನಂತರ ಅವರು ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡರು. ಆಗ ತಮ್ಮ ಶಾಸಕ ಸ್ಥಾನ ಕಳೆದುಕೊಂಡರು.

ಆ ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಶಂಕರ್ ಅವರಿಗೆ ಟಿಕೆಟ್ ನೀಡಲಿಲ್ಲ. ಆದರೆ, ಯಡಿಯೂರಪ್ಪನವರು ಸಚಿವ ಸ್ಥಾನದ ಭರವಸೆ ನೀಡಿದ್ದರು. ಆನಂತರ ಅವರಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುವತಿಯರ ಮೇಲಿನ ಪುನರಾವರ್ತಿತ ದಾಳಿಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಬೇಕು: ಗೃಹ ಸಚಿವ

0
ಹುಬ್ಬಳ್ಳಿಯಲ್ಲಿ ನಡೆದ ಯುವತಿಯರ ಹತ್ಯೆ ಪ್ರಕರಣದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪ್ರತಿಪಕ್ಷ ಬಿಜೆಪಿ ಗುರಿಯಾಗಿಸಿದ್ದು, ಗೃಹ ಸಚಿವ ಜಿ ಪರಮೇಶ್ವರ ಅವರು, 'ಇಂತಹ ಪುನರಾವರ್ತಿತ...