Homeಮುಖಪುಟಮದ್ದೂರು: ಕಾಂಗ್ರೆಸ್ ಸೇರಿದ ಕದಲೂರು ಉದಯ್ - ಡಿ.ಸಿ ತಮ್ಮಣ್ಣನವರ ಎದುರು ನೇರ ಹಣಾಹಣಿ

ಮದ್ದೂರು: ಕಾಂಗ್ರೆಸ್ ಸೇರಿದ ಕದಲೂರು ಉದಯ್ – ಡಿ.ಸಿ ತಮ್ಮಣ್ಣನವರ ಎದುರು ನೇರ ಹಣಾಹಣಿ

17 ಚುನಾವಣೆಗಳನ್ನು ಕಂಡಿರುವ ಮದ್ದೂರಿನಲ್ಲಿ 9 ಬಾರಿ ಕಾಂಗ್ರೆಸ್, ಒಮ್ಮೆ ಸ್ವತಂತ್ರ ಅಭ್ಯರ್ಥಿ, 3 ಬಾರಿ ಜನತಾಪರಿವಾರದ ಅಭ್ಯರ್ಥಿಗಳು ಗೆದ್ದರೆ, ಕಳೆದ 4 ಚುನಾವಣೆಗಳಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿದೆ.

- Advertisement -
- Advertisement -

ಮದ್ದೂರಿನಲ್ಲಿ ಮನೆ ಮಾತಾಗಿದ್ದ ಉದ್ಯಮಿ ಕದಲೂರು ಉದಯ್ ಕೊನೆಗೂ ಕಾಂಗ್ರೆಸ್ ಸೇರಿದ್ದಾರೆ. ಅಲ್ಲಿಗೆ ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದಲ್ಲಿ ಕಳೆ ಕುಂದಿದ್ದ ಕಾಂಗ್ರೆಸ್‌ಗೆ ಮತ್ತೆ ಬಲ ಬಂದಿದೆ. ಇನ್ನೊಂದೆಡೆ ಗೆದ್ದೆಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ ಶಾಸಕರಾದ ಡಿ.ಸಿ ತಮ್ಮಣ್ಣನವರಿಗೆ ಅಸಲಿ ಅಗ್ನಿ ಪರೀಕ್ಷೆ ಆರಂಭವಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ಸದ್ಯದ ರಾಜಕೀಯ ಚಿತ್ರಣ ಹೀಗಿದೆ.

ಎರಡು ಉಪಚುನಾವಣೆಗಳು ಸೇರಿದಂತೆ ಒಟ್ಟು 17 ಚುನಾವಣೆಗಳನ್ನು ಕಂಡಿರುವ ಮದ್ದೂರಿನಲ್ಲಿ 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ; ಒಮ್ಮೆ ಸ್ವತಂತ್ರ ಅಭ್ಯರ್ಥಿ, ಮೂರು ಬಾರಿ ಜನತಾಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಳೆದ 4 ಚುನಾವಣೆಗಳಿಂದ ಜೆಡಿಎಸ್ ಇಲ್ಲಿ ಸತತವಾಗಿ ವಿಜಯ ಪತಾಕೆ ಹಾರಿಸಿದೆ. ಇಂತಿಪ್ಪ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರು, ಮಾಜಿ ಸಚಿವರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗುರುತಿಸಲ್ಪಡುವ ದೇವೇಗೌಡರ ಬೀಗರಾದ ಡಿ.ಸಿ ತಮ್ಮಣ್ಣನವರು ತಮ್ಮ ಇಳಿವಯಸ್ಸಿನಲ್ಲಿ (80) ಕೊನೆಯ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ದೇವೇಗೌಡರ ಪಕ್ಷಪಾತದ ಕೃಪಾಕಟಾಕ್ಷ ಮತ್ತು ಎದುರಾಳಿ ಅಭ್ಯರ್ಥಿಗಳ ಬೆಂಬಲದಿಂದಲೇ ನಾಲ್ಕು ಬಾರಿ ಶಾಸಕರಾಗಿರುವ ಅವರಿಗೆ ಈ ಬಾರಿ ಕದಲೂರು ಉದಯ್ ಎಂಬ ಹಣವಂತ ನಡುಕ ಹುಟ್ಟಿಸಿದ್ದಾರೆನ್ನಲಾಗುತ್ತಿದೆ. ಹಾಗಾಗಿ ಮದ್ದೂರು ಕ್ಷೇತ್ರದ ಹಾಲಿ ಪರಿಸ್ಥಿತಿ ದಿನದಿನಕ್ಕೂ ರೋಚಕ ಘಟ್ಟ ತಲುಪುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಡಿ.ಸಿ ತಮ್ಮಣ್ಣನವರ ರಾಜಕೀಯ ಇತಿಹಾಸ

1999ರಲ್ಲಿ ಪಕ್ಕದ ಕಿರುಗಾವಲು ಕ್ಷೇತ್ರದಲ್ಲಿ (ಈಗಿಲ್ಲ) ಡಿ.ಸಿ ತಮ್ಮಣ್ಣನವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ದೇವೇಗೌಡರ ಪರೋಕ್ಷ ಸಹಕಾರದೊಂದಿಗೆ ಕೇವಲ 724 ಮತಗಳ ಅಂತರದಿಂದ ಜೆಡಿಎಸ್‌ನ ಮಾಜಿ ಸಚಿವ ಕೆ.ಎನ್ ನಾಗೇಗೌಡರ ಎದುರು ಗೆಲುವು ಸಾಧಿಸಿರುತ್ತಾರೆ. ಕೆ.ಎನ್ ನಾಗೇಗೌಡರು ನಿಧನದ ನಂತರ 2004ರ ಚುನಾವಣೆಯಲ್ಲಿ ಅವರ ಪತ್ನಿ ನಾಗಮಣಿ ನಾಗೇಗೌಡರು ಕಿರುವಾಗಲಿನಲ್ಲಿ ಸ್ಪರ್ಧಿಸಲು ಮುಂದಾಗುತ್ತಾರೆ. ಅನುಕಂಪದ ಅಲೆಯ ಕಾರಣದಿಂದ ಅವರ ಎದುರು ಗೆಲುವು ಸಾಧ್ಯವಿಲ್ಲ ಎಂಬುದನ್ನು ಅರಿತ ಡಿ.ಸಿ ತಮ್ಮಣ್ಣನವರು ಮದ್ದೂರು ಕ್ಷೇತ್ರಕ್ಕೆ ಪಲಾಯನ ಮಾಡುತ್ತಾರೆ ಎಂಬ ಮಾತು ಇಂದಿಗೂ ಕೇಳಿಬರುತ್ತದೆ.

ಈ ವೇಳೆಗೆ ಎಸ್.ಎಂ ಕೃಷ್ಣರವರು ಸಹ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿರುತ್ತಾರೆ. ಹಾಗಾಗಿ 2004ರಲ್ಲಿ ಡಿ.ಸಿ ತಮ್ಮಣ್ಣನವರಿಗೆ ಸುಲಭವಾಗಿ ಕಾಂಗ್ರೆಸ್ ಟಿಕೆಟ್ ಲಭಿಸುತ್ತದೆ. ಆದರೆ ಗೆಲುವು ಸುಲಭವಿರಲಿಲ್ಲ. ಏಕೆಂದರೆ ಮದ್ದೂರಿನಲ್ಲಿ ಜೆಡಿಎಸ್ ಪಕ್ಷದ ಎಂ.ಎಸ್ ಸಿದ್ಧರಾಜುರವರು ಅಪಾರ ಜನಮನ್ನಣೆ ಗಳಿಸಿ ಅಭ್ಯರ್ಥಿಯಾಗಲು ಉತ್ಸುಕರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಎಚ್.ಡಿ ದೇವೇಗೌಡರು ತಮ್ಮ ಬೀಗ ತಮ್ಮಣ್ಣನವರ ಗೆಲುವಿಗೆ ದಾಳ ಉರುಳಿಸುತ್ತಾರೆ. ಎಂ.ಎಸ್ ಸಿದ್ಧರಾಜು ಮತ್ತು ಬಿ.ವಿವೇಕಾನಂದ ಇಬ್ಬರಿಗೂ ಜೆಡಿಎಸ್ ಬಿ ಫಾರಂ ನೀಡಿ ಗೊಂದಲ ಮೂಡಿಸಿದ್ದರಿಂದ ಒಬ್ಬರು ಜೆಡಿಎಸ್ ಮತ್ತೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುತ್ತಾರೆ. ಇಬ್ಬರ ನಡುವಿನ ಮತ ವಿಭಜನೆಯಿಂದಾಗಿ ಡಿ.ಸಿ ತಮ್ಮಣ್ಣನವರು 10,735 ಮತಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸುತ್ತಾರೆ ಎಂಬ ವಿಶ್ಲೇಷಣೆ ಜನಜನಿತವಾಗಿದೆ.

ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ಎಂ.ಎಸ್ ಸಿದ್ಧರಾಜುರವರು 2008ರಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು 49,954 ಮತಗಳನ್ನು ಪಡೆದು ಗೆಲುವು ಕಾಣುತ್ತಾರೆ. ಆಗ ಡಿ.ಸಿ ತಮ್ಮಣ್ಣನವರು 42,364 ಮತಗಳಿಗೆ ಸೀಮಿತಗೊಳ್ಳಬೇಕಾಗುತ್ತದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾದೇಗೌಡರ ಪುತ್ರ ಮಧು ಮಾದೇಗೌಡ 36,967 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆಯುತ್ತಾರೆ. ಆದರೆ ಶಾಸಕ ಎಂ.ಎಸ್ ಸಿದ್ಧರಾಜುರವರ ನಿಧನದಿಂದ ಅದೇ ವರ್ಷ ಉಪ ಚುನಾವಣೆ ಎದುರಾಗುತ್ತದೆ. ಅವರ ಪತ್ನಿ ಕಲ್ಪನಾ ಸಿದ್ಧರಾಜು ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ಆಗ ತಮ್ಮಣ್ಣ ಬಿಜೆಪಿ ಸೇರಿ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಪಕ್ಷವು ಎಸ್.ಎಂ ಕೃಷ್ಣರವರ ಸಹೋದರ ಎಸ್.ಎಂ ಶಂಕರ್‌ರವರ ಪುತ್ರ ಗುರುಚರಣ್ ಅವರಿಗೆ ಟಿಕೆಟ್ ನೀಡುತ್ತದೆ. ಮೂರು ಜನರ ನಡುವಿನ ಕಾಳಗದಲ್ಲಿ ಕಲ್ಪನಾ ಸಿದ್ಧರಾಜುರವರು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ.

2013ರ ಚುನಾವಣೆ ವೇಳೆಗೆ ಹಾಲಿ ಶಾಸಕಿ ಕಲ್ಪನಾ ಸಿದ್ಧರಾಜುರವರಿಗೆ ದೇವೇಗೌಡರು ಜೆಡಿಎಸ್ ಟಿಕೆಟ್ ನೀಡುವುದಿಲ್ಲ. ಬದಲಿಗೆ ತಮ್ಮ ಬೀಗರಾದ ಡಿ.ಸಿ ತಮ್ಮಣ್ಣನವರನ್ನು ಜೆಡಿಎಸ್‌ಗೆ ಬರಮಾಡಿಕೊಂಡು ಅಭ್ಯರ್ಥಿಯನ್ನಾಗಿಸುತ್ತಾರೆ. ಮುನಿಸಿಕೊಂಡ ಕಲ್ಪನಾ ಸಿದ್ಧರಾಜು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಪಕ್ಷವು ಮಧು ಮಾದೇಗೌಡರವರಿಗೆ ಟಿಕೆಟ್ ನೀಡುತ್ತದೆ. ಡಿ.ಸಿ ತಮ್ಮಣ್ಣ 80,926 ಮತಗಳನ್ನು ಪಡೆದು ಗೆಲುವು ಕಂಡರೆ, ಮಧು ಮಾದೇಗೌಡ 48,968 ಮತಗಳೊಂದಿಗೆ ಸೋಲು ಕಾಣುತ್ತಾರೆ. ಕಲ್ಪನಾ ಸಿದ್ಧರಾಜುರವರಿಗೆ ಕೇವಲ 15,797 ಮತಗಳು ಲಭಿಸುತ್ತವೆ.

2018ರ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ ತಮ್ಮಣ್ಣನವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿರುತ್ತದೆ. ಆದರೂ ಅವರು ಕಾಂಗ್ರೆಸ್‌ನ ಮಧು ಮಾದೇಗೌಡರ ಎದುರು 54,030 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸುತ್ತಾರೆ. ಡಿ.ಸಿ ತಮ್ಮಣ್ಣನವರಿಗೆ 1,09,239 ಮತಗಳು ಬಿದ್ದರೆ, ಮಧು ಮಾದೇಗೌಡ 52,209 ಮತಗಳನ್ನು ಪಡೆಯುತ್ತಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮದ್ದೂರು ಸತೀಶ ಕೇವಲ 4,159 ಮತಗಳನ್ನು ಪಡೆಯುತ್ತಾರೆ. ಮಧು ಮಾದೇಗೌಡರು ಡಿ.ಸಿ ತಮ್ಮಣ್ಣನವರ ಗೆಲುವಿಗಾಗಿ ಸರಿಯಾಗಿ ಚುನಾವಣೆಯನ್ನು ಎದುರಿಸಲಿಲ್ಲ ಎಂಬ ಆರೋಪಗಳು ಇಂದಿಗೂ ಕೇಳಿ ಬರುತ್ತಿವೆ.

ಅಂದಾಜು ಜಾತಿವಾರು ಮತಗಳು

ಮಂಡ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಂತೆ ಮದ್ದೂರು ಸಹ ಒಕ್ಕಲಿಗ ಮತಬಾಹುಳ್ಯದ ಕ್ಷೇತ್ರವಾಗಿದೆ. ಇದುವರೆಗೂ ಇಲ್ಲಿಂದ ಗೆದ್ದವರೆಲ್ಲ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಒಟ್ಟು ಅಂದಾಜು 2,20,000 ಮತದಾರರಿರುವ ಮದ್ದೂರಿನಲ್ಲಿ ಸುಮಾರು 1 ಲಕ್ಷ ಒಕ್ಕಲಿಗ ಮತಗಳಿವೆ ಎನ್ನಲಾಗಿದೆ. ಪರಿಶಿಷ್ಟ ಜಾತಿಯ 36,000 ಮತಗಳು, 12,000 ದಷ್ಟು ಮುಸ್ಲಿಂ ಮತಗಳು, 12,000ದಷ್ಟು ಕುರುಬ ಸಮುದಾಯದ ಮತಗಳು ಮತ್ತು 10,000ದಷ್ಟು ಲಿಂಗಾಯತ ಸಮುದಾಯದ ಮತಗಳಿವೆ ಎನ್ನಲಾಗಿದೆ. ಇತರೆ ಎಲ್ಲಾ ಸಮುದಾಯದ ಸುಮಾರು 50,000 ಮತಗಳು ಕ್ಷೇತ್ರದಲ್ಲಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ನಾಲ್ಕನೇ ಬಾರಿಗೆ ಶಾಸಕರಾದ ಡಿ.ಸಿ ತಮ್ಮಣ್ಣನವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ, ಕೆರೆಗಳನ್ನು ತುಂಬಿಸಿದ್ದಾರೆ ಮತ್ತು ಒಂದಷ್ಟು ರಸ್ತೆಗಳನ್ನು ಮಾಡಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ದ ತಮ್ಮಣ್ಣನವರು ’ಕ್ಷೇತ್ರದಿಂದ ಮುಖ್ಯಮಂತ್ರಿ ಆಗಿದ್ದ ಎಸ್.ಎಂ ಕೃಷ್ಣರವರಿಗೆ ಆಗ ಐಡಿಯಾ ಕೊಟ್ಟಿದ್ದೇ ನಾನು. ಅವರಿಗಿಂತಲೂ ಹೆಚ್ಚಿನ ಅಭಿವೃದ್ದಿ ನಾನು ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದರು.

ಆದರೆ ಮದ್ದೂರಿನ ವಾಸ್ತವ ಸ್ಥಿತಿ ಬೇರೆಯದೆ ಕಥೆ ಹೇಳುತ್ತದೆ. ಮದ್ದೂರು ನಗರದಲ್ಲಿ ಇಂದಿಗೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ ಎಂದು ಜನ ಬೊಟ್ಟು ಮಾಡಿ ತೋರಿಸುತ್ತಾರೆ. 14 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕೆಮ್ಮಣ್ಣು ನಾಲೆ ಕಸಕಡ್ಡಿಗಳಿಂದ ತುಂಬಿಹೋಗಿದೆ. ಅದನ್ನು ಶುದ್ಧೀಕರಿಸಲು ಇನ್ನೂ ಸಾಧ್ಯವಾಗಿಲ್ಲವೆಂದರೆ ಇಷ್ಟು ವರ್ಷ ತಮ್ಮಣ್ಣನವರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಸಮರ್ಪಕ ಯಂತ್ರಗಳಿಲ್ಲ, ಸಿಬ್ಬಂದಿಗಳಿಲ್ಲ, ಎಳನೀರು ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ಆನ್‌ಲೈನ್ ಸೇವೆಗೆ ಉನ್ನತೀಕರಿಸಿಲ್ಲ, ಕಾಡು ಹಂದಿ-ಮುಳ್ಳಂದಿ ದಾಳಿಗೆ ಪರಿಹಾರ ಸಿಕ್ಕಿಲ್ಲ, ರೈತರ ವಿದ್ಯುತ್ ಬಿಲ್ ಕಡಿತವಾಗಿಲ್ಲ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಕ್ಕಿಲ್ಲ-ಒ॒ಟ್ಟಿನಲ್ಲಿ ಈ ಇಲ್ಲಗಳ ನಡುವೆ ಬೇರೇನೂ ಹೆಚ್ಚು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮಾಜಿ ಅಧಿಕಾರಿಯಾದ ಡಿ.ಸಿ ತಮ್ಮಣ್ಣನವರಲ್ಲಿ ಅಧಿಕಾರಶಾಹಿತನ ಇಂದಿಗೂ ಉಳಿದುಕೊಂಡಿದೆ. ಜನಸಾಮಾನ್ಯರ ಕೈಗೆ ಸಿಗುವುದಿಲ್ಲ. ಇನ್ನು ಎಷ್ಟು ದಿನ ಅವರೆ ಕ್ಷೇತ್ರದ ಶಾಸಕರಾಗಬೇಕು ಎಂಬ ಪ್ರಶ್ನೆಗಳು ಕ್ಷೇತ್ರದಲ್ಲಿ ಕೇಳಿ ಬರುತ್ತವೆ. ಆಶ್ಚರ್ಯವೆಂದರೆ ಜನ ಇಷ್ಟೆಲ್ಲ ಸಂಕಷ್ಟದಲ್ಲಿದ್ದರೂ ತಮ್ಮಣ್ಣನವರು ತಲೆ ಕೆಡಿಸಿಕೊಂಡಿಲ್ಲ, ಹೋಗಲಿ ಉಳಿದ ಪಕ್ಷದ ಮುಖಂಡರಾದರೂ ಈ ಕುರಿತು ದನಿ ಎತ್ತುವರೆ ಎಂದರೆ ಅದೂ ಇಲ್ಲ. ಕ್ಷೇತ್ರದ ಯಾವೊಬ್ಬ ರಾಜಕಾರಣಿಗೂ ತಮ್ಮಣ್ಣನವರ ವಿರುದ್ಧ ದನಿ ಎತ್ತಿ ಮಾತನಾಡುವ ಧೈರ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಹ ತಮ್ಮಣ್ಣನವರ ವೈಫಲ್ಯಗಳ ಕುರಿತು ಮಾತನಾಡದಷ್ಟು ಅಸಮರ್ಥರಾಗಿದ್ದಾರೆ. ಹಾಗಾಗಿ ತಮ್ಮಣ್ಣನವರು ಯಾವುದೇ ಚಿಂತೆಯಿಲ್ಲದೆ ಗೆಲುವು ನನ್ನದೆ ಎಂದುಕೊಂಡು ಆರಾಮಾಗಿದ್ದರು.

ದಿಢೀರ್ ಎಂಟ್ರಿ ಕೊಟ್ಟ ಕದಲೂರು ಉದಯ್

ಅಷ್ಟರಲ್ಲಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡಿದವರು ಸೋಕಾಲ್ಡ್ ಸಮಾಜ ಸೇವಕರೆನಿಸಿಕೊಂಡ ಕದಲೂರು ಉದಯ್. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗುವುದಲ್ಲಿ ಪಾತ್ರವಹಿಸಿದ್ದಾರೆ ಎನ್ನಲಾದ ಇವರು ಹತ್ತಾರು ಕೆಸಿನೋ, ಕ್ಲಬ್‌ಗಳ ಮಾಲೀಕರಾಗಿ ಬಹುಕೋಟಿಗಳ ಒಡೆಯರೆನಿಸಿಕೊಂಡು ಕ್ಷೇತ್ರದಲ್ಲಿ ದುಡ್ಡನ್ನು ನೀರಿನಂತೆ ಖರ್ಚು ಮಾಡುವ ಮೂಲಕ ಮುನ್ನೆಲೆಗೆ ಬಂದಿದ್ದಾರೆನ್ನಲಾಗಿದೆ.

ಕದಲೂರು ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ಕನಿಷ್ಠ ಒಂದು ವರ್ಷದಿಂದ ಮತಬೇಟೆಗೆ ಇಳಿದಿದ್ದಾರೆ. ಗ್ರಾಮಗಳಿಗೆ ಶುದ್ಧನೀರಿನ ಘಟಕ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ, ಆರೋಗ್ಯ ಶಿಬಿರ, ಶಿಕ್ಷಕರಿಗೆ ಸನ್ಮಾನ, ಮಕ್ಕಳಿಗೆ ಬ್ಯಾಗು, ಧರ್ಮಸ್ಥಳ, ಓಂ ಶಕ್ತಿ ದೇವಾಲಯಗಳಿಗೆ ಹೋಗುವವರಿಗೆ ಸಾರಿಗೆ-ವಸತಿ ವ್ಯವಸ್ಥೆ, ಕ್ಷೇತ್ರದ ಮಹಿಳೆಯರಿಗೆ ಸೀರೆ, ಬಳೆ, ಕ್ಯಾಲೆಂಡರ್ ಉಳ್ಳ ಸಂಕ್ರಾತಿ ಬಾಗಿನ ಸೇರಿದಂತೆ ಹತ್ತಾರು ಜನಪ್ರಿಯ ಸಮಾಜಸೇವೆಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ಕೆಲ ಗ್ರಾಮಗಳಿಗೆ ರಸ್ತೆ ನಿರ್ಮಾಣಕ್ಕೂ ಮುಂದಾಗಿ ಗಮನ ಸೆಳೆದಿದ್ದಾರೆ. ಆ ಮೂಲಕ ಮಿಂಚಿನ ಸಂಚಾರ ನಡೆಸಿರುವ ಅವರು ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿ ತಮ್ಮಣ್ಣನವರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಅಪಾರ ಕಾರ್ಯಕರ್ತರ ಬಳಗ ಕಟ್ಟಿಕೊಂಡು ಸದ್ಯಕ್ಕೆ ಸ್ವತಂತ್ರವಾಗಿ ಗುರುತಿಸಿಕೊಂಡಿದ್ದ ಕದಲೂರು ಉದಯ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಸದ್ಯ ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಟಿಕೆಟ್ ನೀಡಲು ಉತ್ಸುಕರಾಗಿದ್ದರೂ ಅವರ ಮನಸ್ಸು ಮಾತ್ರ ಕಾಂಗ್ರೆಸ್‌ನಲ್ಲಿದೆ ಎಂಬುದನ್ನು ನಿರೂಪಿಸಿದ್ದಾರೆ. ಇನ್ನು ಈ ಬಾರಿ ಕಾಂಗ್ರೆಸ್  ಅಭ್ಯರ್ಥಿಯಾಗಲು ನಿರ್ಧರಿಸಿ ಎಸ್.ಎಂ ಗುರುಚರಣ್ ಅರ್ಜಿ ಸಲ್ಲಿಸಿದ್ದರು. ಅವರ ತಾತ ಎಸ್.ಎಂ ಕೃಷ್ಣ ಬಿಜೆಪಿಗೆ ಗುಡ್ ಬೈ ಹೇಳಿ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದರಿಂದ ಅವರು ತನಗೆ ಕಾಂಗ್ರೆಸ್ ಟಿಕೆಟ್ ದಕ್ಕಿಸಿಕೊಡುತ್ತಾರೆ ಮತ್ತು ತನ್ನ ಪರ ಪ್ರಚಾರ ಮಾಡುತ್ತಾರೆ ಎಂದು ನಂಬಿದ್ದರು.

ಆದರೆ ಯಾವಾಗ ಕದಲೂರು ಉದಯ್ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದರೋ ಆಗಿನಿಂದ ಗುರುಚರಣ್‌ಗೆ ಆತಂಕ ಶುರುವಾಗಿದ್ದು ನಿಜ. ತನಗೆ ಈ ಬಾರಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ, ಆದರೆ ಕದಲೂರು ಉದಯ್‌ಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಸಿಗಬಾರದು ಎಂಬ ಯೋಚನೆ ಅವರದು. ಒಂದು ವೇಳೆ ಕದಲೂರು ಉದಯ್‌ಗೆ ಟಿಕೆಟ್ ಸಿಕ್ಕಲ್ಲಿ ಅವರು ಬೆಳೆದು ತಾವು ಮೂಲೆಗುಂಪಾಗುತ್ತೇವೆಂಬ ಭಯದಲ್ಲಿ ಮತ್ತೊಂದು ಗೇಮ್ ಪ್ಲಾನ್ ಮಾಡಿದ್ದಾರೆನ್ನಲಾಗುತ್ತಿದೆ. ಅದೇನೆಂದರೆ ಮತ್ತೋರ್ವ ಟಿಕೆಟ್ ಆಕಾಂಕ್ಷಿ ರಾಮೃಕೃಷ್ಣರವರು ಮತ್ತು ಹಲವು ಕಾಂಗ್ರೆಸ್ ಮುಖಂಡರೊಂದಿಗೆ ರಾತ್ರೋರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರನ್ನು ಭೇಟಿ ಮಾಡಿ ನೀವೇ ಮದ್ದೂರಿನಲ್ಲಿ ಬಂದು ಸ್ಪರ್ಧಿಸಿ ಎಂಬ ಆಹ್ವಾನ ನೀಡಿದ್ದಾರೆ! ಆದರೆ ಡಿ.ಕೆ ಶಿವಕುಮಾರ್ ಮದ್ದೂರಿಗೆ ಬರುವ ಮನಸ್ಸು ಮಾಡಲಿಲ್ಲ.

ಉಳಿದಂತೆ ಕಾಂಗ್ರೆಸ್‌ನಿಂದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ರಾಮಕೃಷ್ಣ ಮತ್ತು ಕೆಐಎಡಿಬಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ವಿ.ಬಿ ಶಂಕರೇಗೌಡರವರು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಕದಲೂರು ಉದಯ್‌ಗೆ ಟಿಕೆಟ್ ಕೊಟ್ಟರೆ ತಮ್ಮಣ್ಣನವರ ವಿರುದ್ಧ ನೇರಾನೇರ ಪೈಪೋಟಿ ಏರ್ಪಡುತ್ತದೆ ಎಂಬ ಅಭಿಪ್ರಾಯವನ್ನು ಕೆಲ ಕಾಂಗ್ರೆಸ್ ಕಾರ್ಯಕರ್ತರೇ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕದಲೂರು ಉದಯ್‌ರವರಿಗಿರುವ ಅನುಯಾಯಿಗಳು, ಅಭಿಮಾನಿಗಳು ಮತ್ತು ಹಣ ಅವರು ನಿಜವಾಗಿ ಡಿ.ಸಿ ತಮ್ಮಣ್ಣನವರಿಗೆ ಪ್ರಬಲ ಪೈಪೋಟಿ ನೀಡುತ್ತಾರೆ, ಗೆಲ್ಲುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಜೆಡಿಎಸ್ ತೊರೆದ ಸ್ವಾಮಿಗೆ ಬಿಜೆಪಿ ಟಿಕೆಟ್?

ಜೆಡಿಎಸ್ ಟಿಕೆಟ್ ಸಿಗುವುದಿಲ್ಲ ಎಂಬುದನ್ನು ಅರಿತು ಪಕ್ಷ ತೊರೆದು ಬಿಜೆಪಿ ಸೇರಿರುವ ಮುನ್ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿಯವರು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮಂಡ್ಯ ಜಿ.ಪಂ ಅಧ್ಯಕ್ಷರಾಗಿದ್ದ ಅವರ ಪತ್ನಿ ನಾಗರತ್ನರವರ ಜೊತೆಗೂಡಿ ಬಿಜೆಪಿ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ಖಾತ್ರಿ ಎನ್ನಲಾಗುತ್ತಿದೆ.

2023ರ ಸಾಧ್ಯತೆಗಳೇನು?

ಆರು ತಿಂಗಳ ಹಿಂದಿನವರೆಗೂ ಡಿ.ಸಿ ತಮ್ಮಣ್ಣನವರು ಸುಲಭವಾಗಿ ಗೆಲ್ಲುತ್ತಾರೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆಲ್ಲಾ ತಮ್ಮಣ್ಣನವರ ಹೊಂದಾಣಿಕೆ ರಾಜಕಾರಣಕ್ಕೆ ಸುಲಭವಾಗಿ ಬಗ್ಗುವ ಅಭ್ಯರ್ಥಿಗಳಿದ್ದರು. ಇದುವರೆಗೂ ತಮ್ಮಣ್ಣನವರನ್ನು ಎದುರಿಸುವ, ಅವರೆದುರು ಗೆಲ್ಲುವ ತಾಕತ್ತಿರುವ ಒಬ್ಬ ಡೈನಾಮಿಕ್ ವ್ಯಕ್ತಿಯ ನಿರೀಕ್ಷೆಯಲ್ಲಿತ್ತು ಮದ್ದೂರು ಕ್ಷೇತ್ರ. ಆ ಸ್ಥಾನಕ್ಕೆ ಉದ್ಯಮಿ ಕದಲೂರು ಉದಯ್ ಪ್ರತಿಷ್ಠಾಪಿತರಾಗುತ್ತಿದ್ದಾರೆ. ಒಂದರ್ಥದಲ್ಲಿ ಉದಯ್‌ರವರು ಡಿ.ಸಿ ತಮ್ಮಣ್ಣನವರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಕ್ಕೆ ಬಂದ ಕಾರಣದಿಂದಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಮದ್ದೂರು ಕ್ಷೇತ್ರವನ್ನು ಗೆದ್ದುಕೊಳ್ಳುವ ಇರಾದೆ ಇದ್ದರೆ ಅದು ಕದಲೂರು ಉದಯ್‌ಗೆ ಮಣೆ ಹಾಕಲೇಬೇಕಾಗುತ್ತದೆ ಎನ್ನುತ್ತಾರೆ ಹಲವು ಕಾಂಗ್ರೆಸ್ ಬೆಂಬಲಿಗರು. ಇಲ್ಲದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಕದಲೂರು ಉದಯ್ ಹೇಳಿದ್ದಾರೆ. ಆದರೆ ಗುರುಚರಣ್ ಮತ್ತುವರ ಬೆಂಬಲಿಗರು ಯಾವ ನಿರ್ಧಾರ ಮಾಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಸಮ್ಮಿಶ್ರ ಸರ್ಕಾರ ಉರುಳಿಸಿದ ಆರೋಪ ಅವರ ಮೇಲಿದ್ದು ಚುನಾವಣೆ ಸಮದಯಲ್ಲಿ ಮತ್ತೆ ಮೇಲೆದ್ದು ಬರಬಹುದು. ಒಟ್ಟಾರೆಯಾಗಿ ಕಳೆದ ಎರಡು ಚುನಾವಣೆಗಳಲ್ಲಿ ಚುನಾವಣೆಗೂ ಮುನ್ನವೇ ಕ್ಷೇತ್ರದ ಫಲಿತಾಂಶ ಸುಲಭವಾಗಿ ಊಹಿಸಬಹುದಾಗಿತ್ತು. ಆದರೆ ಈ ಬಾರಿ ಕತ್ತುಕತ್ತಿನ ಹೋರಾಟ ನಡೆಯುವುದು ಖಚಿತವಾಗಿದ್ದು ಯಾರು ಗೆಲ್ಲುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕೊನೆಯ ಸುತ್ತಿನ ಮತ ಎಣಿಕೆವರೆಗೂ ಕಾಯುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ; ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಾಗಮಂಗಲ: ರಾಜಕೀಯ ಜಿದ್ದಾಜಿದ್ದಿನಲ್ಲಿ ಚಲುವರಾಯಸ್ವಾಮಿ ಮೇಲುಗೈ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...