ಮಧ್ಯಪ್ರದೇಶ ಸರ್ಕಾರದ ಉದ್ಯೋಗ ಕಛೇರಿಗಳಲ್ಲಿ ನೋಂದಾಯಿಸಿಕೊಂಡಿರುವ 37.8 ಲಕ್ಷ ವಿದ್ಯಾವಂತರ ಪೈಕಿ ಕಳೆದ ಮೂರು ವರ್ಷಗಳಲ್ಲಿ 21 ಜನ ಮಾತ್ರ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದರೆ. 2.51 ಲಕ್ಷ ಜನರು ಖಾಸಗಿ ವಲಯದಿಂದ ಆಫರ್‌ಗಳನ್ನು ಪಡೆದಿದ್ದಾರೆ ಎನ್ನುವ ವಿಚಾರ ಸರ್ಕಾರವೇ ಹೇಳಿಕೊಂಡಿದೆ.
ಮಾರ್ಚ್ 1ರಂದು ಎಂಪಿ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಶಾಸಕ ಮೇವರಾಂ ಜಾತವ್ ಅವರು ಕೇಳಿದ್ದ ಪ್ರಶ್ನೆಗೆ ಮಂಗಳವಾರ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಲಿಖಿತ ಉತ್ತರ ನೀಡಲಾಗಿದ್ದು, ”2021-22ರ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರವು ತನ್ನ ಉದ್ಯೋಗ ಕಚೇರಿಗಳಿಗೆ 1,674 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ” ಎಂದು ತಿಳಿಸಲಾಗಿದೆ. ಈ ಲೆಕ್ಕದ ಪ್ರಕಾರ, ಉದ್ಯೋಗ ಕಚೇರಿಗಳ ವೆಚ್ಚವನ್ನು ಲೆಕ್ಕಹಾಕಿದರೆ, ಅದು ಒಬ್ಬ ವ್ಯಕ್ತಿಗೆ 80 ಲಕ್ಷ ರೂ. ವೆಚ್ಚ ಮಾಡಿದಂತಾಗುತ್ತದೆ ಎನ್ನುವ ಆತಂಕಕಾರಿ ಅಂಶ ಹೊರಬಂದಿದೆ.
”ಏಪ್ರಿಲ್ 2020ರಿಂದ ಪ್ರಶ್ನೆಯ ದಿನಾಂಕ (ಜನವರಿ-ಫೆಬ್ರವರಿ 2023)ವರೆಗೆ ಒಟ್ಟು 37,80,679 ವಿದ್ಯಾವಂತರು ಮತ್ತು 1,12,470 ಅವಿದ್ಯಾವಂತರು ಎಂಪಿ ಎಂಪ್ಲಾಯ್‌ಮೆಂಟ್ ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ” ಎಂದು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವೆ ಯಶೋಧರ ರಾಜೇ ಸಿಂಧಿಯಾ ಅವರು ಉತ್ತರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದಶಪಥವಲ್ಲ, ಇದು ಆರು ಪಥ: ಎಲ್ಲರೂ ಸರ್ವೀಸ್ ರಸ್ತೆಯಲ್ಲೇ ಹೋದರೆ ಟೋಲ್ ಕಟ್ಟುವವರು ಯಾರು?: ಯೋಜನಾ ನಿರ್ದೇಶಕರ ಹೇಳಿಕೆ
”ಈ ಅವಧಿಯಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ 21 ಜನರಿಗೆ ಉದ್ಯೋಗ ನೀಡಲಾಗಿದ್ದು, 2,51,577 ಮಂದಿ ಉದ್ಯೋಗ ಮೇಳದಲ್ಲಿ ಖಾಸಗಿ ಸಂಸ್ಥೆಗಳಿಂದ ಆಫರ್ ಲೆಟರ್ ಪಡೆದಿದ್ದಾರೆ” ಎಂದು ಅವರು ಹೇಳಿದ್ದಾರೆ.
2021-22ರ ಆರ್ಥಿಕ ವರ್ಷದಲ್ಲಿ ಉದ್ಯೋಗ ಕಚೇರಿಗಳನ್ನು ನಡೆಸಲು 1,674.73 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ನಿರಂತರ ಆರೋಪಗಳನ್ನು ಮಾಡುತ್ತಿದೆ.
”ರಾಜ್ಯ ಬಿಜೆಪಿ ಸರ್ಕಾರ ಹಣ ಪೋಲು ಮಾಡುತ್ತಿದೆ, ಅವರು ಸಾಲ ಮಾಡಿ ತುಪ್ಪ ಕುಡಿಯುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ವ್ಯವಸ್ಥೆ ಕುಸಿದಿದೆ. ಇದು ಸರಕಾರವಲ್ಲ ಸರ್ಕಸ್. ಇಲ್ಲಿ ಕಾನೂನು ಸುವ್ಯವಸ್ಥೆಗೆ ಅರ್ಥವಿಲ್ಲ” ಎಂದು ಕಾಂಗ್ರೆಸ್ ನ ಪಿ.ಸಿ.ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ಆರೋಪಗಳನ್ನು ತಳ್ಳಿ ಹಾಕಿರುವ ಬಿಜೆಪಿ ಶಾಸಕ ಗೌರಿಶಂಕರ್ ಬಿಸೆನ್ ಅವರು ”ಐದನೇ ಬಾರಿಗೆ ಶಿವರಾಜ್ ಮುಖ್ಯಮಂತ್ರಿಯಾಗಲಿದ್ದಾರೆ… ನಮ್ಮ ಸರಕಾರದ ಭರವಸೆಗಳನ್ನು ಈಡೇರಿಸುವುದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಮುಖ್ಯಮಂತ್ರಿಗಳು ಈಗಾಗಲೇ ಸದನದಲ್ಲಿ ಉತ್ತರ ನೀಡಿದ್ದಾರೆ. ನಾವು ಉದ್ಯೋಗ ನೀಡುತ್ತೇವೆ ಎಂದು ಹೇಳುತ್ತಿದ್ದೇವೆ” ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂಜಿನಿಯರ್‌ಗಳು ಮತ್ತು ಡಾಕ್ಟರೇಟ್ ಹೊಂದಿರುವವರು ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸರಿಸುಮಾರು 6,000 ಪಟ್ವಾರಿ (ಭೂ ಕಂದಾಯ ಅಧಿಕಾರಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ವರ್ಷ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಪ್ರಸ್ತುತಪಡಿಸಿದ ನಿರುದ್ಯೋಗ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 1, 2022 ರವರೆಗೆ 25.8 ಲಕ್ಷಕ್ಕೂ ಹೆಚ್ಚು ನೋಂದಾಯಿತ ನಿರುದ್ಯೋಗಿ ಯುವಕರು ಇದ್ದರು. ಈ ಅಂಕಿ ಅಂಶವು 1 ಜನವರಿ 2023 ರಂದು 38,92,949 ಕ್ಕೆ ಏರಿದೆ.


