ಸಶಸ್ತ್ರ ಪಡೆಗಳ ಅರ್ಹ ಪಿಂಚಣಿದಾರರಿಗೆ ಒಂದು ಶ್ರೇಣಿ ಒಂದು ಪಿಂಚಣಿ (ಒಆರ್‌ಒಪಿ) ಅಡಿಯಲ್ಲಿ ಬಾಕಿ ಮೊತ್ತವನ್ನು ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವಿಚಾರಣೆ ನಡೆಸಿದರು. ಈ ವೇಳೆ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಮುಚ್ಚಿದ ಲಕೋಟೆಗಳನ್ನು ನ್ಯಾಯಾಲಯಗಳಿಗೆ ಸಲ್ಲಿಸುವ ಅಭ್ಯಾಸವನ್ನು ಟೀಕಿಸಿದ್ದಾರೆ.
ಪಿಂಚಣಿ ಪಾವತಿ ಕುರಿತು ರಕ್ಷಣಾ ಸಚಿವಾಲಯದ ನಿರ್ಧಾರವನ್ನು ತಿಳಿಸುವ ಭಾರತದ ಅಟಾರ್ನಿ ಜನರಲ್ ಸಲ್ಲಿಸಿದ ಮುಚ್ಚಿದ ಕವರ್ ಲಕೋಟೆಯನ್ನು ಸ್ವೀಕರಿಸಲು ನ್ಯಾಯಮೂರ್ತಿ ಚಂದ್ರಚೂಡ್ ನಿರಾಕರಿಸಿದರು. ಅದನ್ನು ಬಹಿರಂಗವಾಗಿ ಓದಬೇಕು ಇಲ್ಲವೇ ಮರಳಿ ತಗೆದುಕೊಂಡು ಹೋಗುವಂತೆ ಸರ್ಕಾರದ ಉನ್ನತ ವಕೀಲರಿಗೆ ವಿರುದ್ಧ ಗರಂ ಆದರು.
”ನಾವು ಯಾವುದೇ ಗೌಪ್ಯ ದಾಖಲೆಗಳನ್ನು ಅಥವಾ ಮುಚ್ಚಿದ ಕವರ್‌ಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಇದಕ್ಕೆ ವೈಯಕ್ತಿಕವಾಗಿ ವಿರುದ್ಧವಾಗಿದ್ದೇನೆ. ನ್ಯಾಯಾಲಯದಲ್ಲಿ ಪಾರದರ್ಶಕತೆ ಇರಬೇಕು. ಇದು ಆದೇಶಗಳನ್ನು ಅನುಷ್ಠಾನಗೊಳಿಸುವ ಜಾಗ, ಇಲ್ಲಿ ಗೌಪ್ಯತೆ ಯಾಕೆ? ನಾನು ಮುಚ್ಚಿದ ಕವರ್ ವ್ಯವಹಾರವನ್ನು ಕೊನೆಗೊಳಿಸಲು ಬಯಸುತ್ತೇನೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಇದನ್ನೂ ಓದಿ: ಒಂದು ಶ್ರೇಣಿ ಒಂದು ಪಿಂಚಣಿ: ನ್ಯಾಯಾಂಗ ನಿಂದನೆ ನೋಟಿಸ್ ನೀಡುವುದಾಗಿ ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ
ಮುಚ್ಚಿದ ಲಕೋಟೆಯನ್ನು ಸ್ವೀಕರಿಸುವ ಪದ್ದತಿಯನ್ನು ಸುಪ್ರೀಂ ಕೋರ್ಟ್ ಅನುಸರಿಸಿದರೆ, ಹೈಕೋರ್ಟ್‌ಗಳು ಸಹ ಅದನ್ನೇ ಅನುಸರಿಸುತ್ತವೆ ಎಂದು ಅವರು ಅಟಾರ್ನಿ ಜನರಲ್‌ಗೆ ತಿಳಿಸಿದರು.
ಮುಚ್ಚಿದ ಲಕೋಟೆ ಸ್ವೀಕರಿಸುವ ಪದ್ದತಿಯು ನ್ಯಾಯಯುತ ನ್ಯಾಯದ ಮೂಲಭೂತ ಪ್ರಕ್ರಿಯೆಗೆ ಮೂಲಭೂತವಾಗಿ ವಿರುದ್ಧವಾಗಿದೆ ಮುಖ್ಯ ನ್ಯಾಯಾಧೀಶರು ಹೇಳಿದರು.
”ಮೂಲಗಳ ಬಗ್ಗೆ ಅಥವಾ ಇನ್ನೊಬ್ಬರ ಜೀವಕ್ಕೆ ಅಪಾಯವನ್ನುಂಟುಮಾಡಿದಾಗ ಮಾತ್ರ ಆ ರೀತಿ ಮುಚ್ಚಿದ ಲಕೋಟೆಯನ್ನು ಬಳಸಬಹುದು” ಎಂದು ಡಿವೈ ಚಂದ್ರಚೂಡ್ ಹೇಳಿದರು.
ಮಾಜಿ ಸೈನಿಕರಿಗೆ ಒಂದು ಶ್ರೇಣಿ ಒಂದು ಪಿಂಚಣಿ ಅಡಿಯಲ್ಲಿ ಬಾಕಿ ಪಾವತಿಯಲ್ಲಿ ಸರ್ಕಾರದ ನಿಧಾನಗತಿಯನ್ನು ನ್ಯಾಯಾಲಯವು ಗಮನಿಸಿದೆ. ಬಾಕಿ ಪಿಂಚಣಿ ಹಣವನ್ನು ಕಂತುಗಳಲ್ಲಿ ಪಾವತಿಸುವುದಾಗಿ ಸರ್ಕಾರ ಹೇಳಿತ್ತು. ಅದು ಯಾವ ಕ್ರಮದಲ್ಲಿ ಪಾವತಿಸುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ನಂತರ ಅಟಾರ್ನಿ ಜನರಲ್ ಅಬರು ಮುಚ್ಚಿದ ಲಕೋಟೆ ತೆರೆದು ವರದಿಯನ್ನು ಓದಿದರು.


