ವಾರಿಸ್ ಪಂಜಾಬ್ ಡಿ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಬಂಧಿಸಿದ ವಿದ್ಯಮಾನದ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಮಾನವ ಹಕ್ಕುಗಳ ದಮನ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಂಜಾಬ್‌ನಲ್ಲಿ ಇಂಟರ್ನೆಟ್ ಸ್ಥಗಿತವು ಮಧ್ಯೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕೆಲವು ಪತ್ರಕರ್ತರು, ಬರಹಗಾರರ ಟ್ವಿಟರ್ ಖಾತೆಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಕೆನಡಾದ ಲೇಖಕಿ ರೂಪಿ ಕೌರ್‌ಗೆ ಸೇರಿದ ಖಾತೆಯನ್ನು ಟ್ವಿಟರ್ ಖಾತೆಗೂ ತಡೆ ನೀಡಲಾಗಿದೆ.
ಸಂಘಟನೆಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಶಂಕಿತರನ್ನು ಇದುವರೆಗೆ ರಾಜ್ಯದಾದ್ಯಂತ ಬಂಧಿಸಲಾಗಿದೆ. ಆಮ್ ಆದ್ಮಿ ಪಕ್ಷದ ಸರ್ಕಾರವು ‘ಮುಗ್ಧ ಸಿಖ್ ಯುವಕ’ರನ್ನು ಟಾರ್ಗೆಟ್ ಮಾಡಬಾರದು ಎಂದು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಒತ್ತಾಯಿಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಕಮಲ್‌ದೀಪ್ ಸಿಂಗ್ ಬ್ರಾರ್, ಪ್ರೊ ಪಂಜಾಬ್ ಟಿವಿ ಬ್ಯೂರೋ ಮುಖ್ಯಸ್ಥ ಗಗನ್‌ದೀಪ್ ಸಿಂಗ್, ಸ್ವತಂತ್ರ ಪತ್ರಕರ್ತ ಸಂದೀಪ್ ಸಿಂಗ್ ಮತ್ತು ಡಿಜಿಟಲ್ ಕಾರ್ಯಕರ್ತ ಪೀಟರ್ ಫ್ರೆಡ್ರಿಕ್ ಅವರ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಹಾಗೆಯೇ ಕೆನಡಾದ ರಾಜಕಾರಣಿ ಜಗ್ಮೀತ್ ಸಿಂಗ್ ಮತ್ತು ಎಸ್‌ಎಡಿ ಸಂಗ್ರೂರ್ ಸಂಸದ ಸಿಮ್ರಂಜೀತ್ ಸಿಂಗ್ ಮಾನ್ ಅವರ ಖಾತೆಗಳನ್ನು ತಡೆಹಿಡಿಯಲಾಗಿದೆ.
“ಈ ಖಾತೆಗಳನ್ನು ಕಾನೂನು ಪ್ರತಿಕ್ರಿಯೆಯ ಭಾಗವಾಗಿ ಭಾರತದಲ್ಲಿ ನಿರ್ಬಂಧಿಸಲಾಗಿದೆ” ಎಂದು ವಿವರಣೆಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಪತ್ರಕರ್ತರಲ್ಲಿ ಒಬ್ಬರು ಮಾತ್ರ ಈ ಕ್ರಿಯೆಗೆ ಸಂಬಂಧಿಸಿದಂತೆ ಇಮೇಲ್ ಸಂದೇಶವನ್ನು ಟ್ವಿಟರ್ ಸಂಸ್ಥೆಯಿಂದ ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟ್ವಿಟರ್ ಸಂಸ್ಥೆಯನ್ನು ಸಂಪರ್ಕಿಸಿರುವ ‘ನ್ಯೂಸ್‌ಲಾಂಡ್ರಿ’ ಜಾಲತಾಣ, “ಕಾನೂನು ವಿಚಾರವೇನು? ಯಾರು ಅವುಗಳನ್ನು ಪ್ರಸ್ತಾಪಿಸಿದ್ದಾರೆ? ಎಷ್ಟು ಸಮಯದವರೆಗೆ ಈ ಖಾತೆಗಳನ್ನು ತಡೆಹಿಡಿಯಲಾಗುತ್ತದೆ” ಎಂದು ಪ್ರಶ್ನಿಸಿದೆ. “ಟ್ವಿಟರ್‌ನ ಪತ್ರಿಕಾ ತಂಡದಿಂದ ಇಲ್ಲಿಯವರೆಗೆ ಇಮೋಜಿಯೊಂದನ್ನು ಮಾತ್ರ ಪ್ರತಿಕ್ರಿಯೆಯಾಗಿ ಸ್ವೀಕರಿಸಿದ್ದೇವೆ. ನಿಜವಾದ ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ವರದಿಯನ್ನು ನವೀಕರಿಸುತ್ತೇವೆ” ಎಂದು ‘ನ್ಯೂಸ್‌ಲಾಂಡ್ರಿ’ ಬರೆದುಕೊಂಡಿದೆ.
ಅಮೃತಪಾಲ್ ಅವರನ್ನು ಪೊಲೀಸರು ಬೆನ್ನಟ್ಟುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಗಗನ್‌ದೀಪ್ ಅವರ ಖಾತೆಯನ್ನು ಸೋಮವಾರ ತಡೆಹಿಡಿಯಲಾಗಿದೆ ಎಂದು ‘ನ್ಯೂಸ್‌ಲಾಂಡ್ರಿ’ ವರದಿ ಮಾಡಿದೆ. ಗಗನ್‌ದೀಪ್ ಅವರು ಹಂಚಿಕೊಳ್ಳುವ ಮುನ್ನವೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಒಂದು ವರದಿಯನ್ನು ಹೊರತುಪಡಿಸಿ, ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರ ಕಮಲ್‌ದೀಪ್ ಅವರು ಶನಿವಾರ ಪೋಸ್ಟ್ ಮಾಡಿದ ಎಲ್ಲಾ ಟ್ವೀಟ್‌ಗಳು ಮತ್ತು ವರದಿಗಳು ಪಂಜಾಬ್‌ನಲ್ಲಿನ ವಿದ್ಯಮಾನಕ್ಕೆ ಸಂಬಂಧಿಸಿವೆ. ಅವರು ಭಾನುವಾರ ಯಾವುದೇ ಅಪ್‌ಡೇಟ್ ಪೋಸ್ಟ್ ಮಾಡಿಲ್ಲ.
ಪಂಜಾಬ್‌ನಲ್ಲಿ ಜಿ 20 ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವಾಗ ಎಸ್‌ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಸಿಖ್ ಅವರು ಮಾನವ ಹಕ್ಕುಗಳ ವಿಷಯವನ್ನು ಪ್ರಸ್ತಾಪಿಸಿರುವ ವರದಿಯನ್ನು ಕಮಲ್‌ದೀಪ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಳೊಂದಿಗೆ ಎರಡು ಟ್ವೀಟ್‌ಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಪಂಜಾಬ್‌ನಲ್ಲಿನ ಮಾನವ ಹಕ್ಕುಗಳ ದಮನಕ್ಕೆ ಸಂಬಂಧಿಸಿದ ಅವರ ವರದಿ ಹಾಗೂ ಸಂಬಂಧಿಸಿದ ಟ್ವಿಟರ್ ಥ್ರೆಡ್‌ಗಳನ್ನು ಶನಿವಾರ ಪೋಸ್ಟ್ ಮಾಡಿದ್ದಾರೆ.
ಭಾನುವಾರದ ಪರಿಸ್ಥಿತಿಯ ಕುರಿತು ಟ್ವೀಟ್ ಮಾಡಿದ ಡಿಜಿಟಲ್ ಕಾರ್ಯಕರ್ತ ಪೀಟರ್ ಫ್ರೆಡ್ರಿಕ್, “ನನಗೆ ಸ್ವಲ್ಪವೇ ತಿಳಿದಿರುವ ಅಮೃತಪಾಲ್ ಸಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಇರಲಿ, ಪಂಜಾಬ್‌ನಲ್ಲಿ ಮೂಲಭೂತ ನಾಗರಿಕ ಸ್ವಾತಂತ್ರ್ಯಗಳ ಮೇಲೆ ಸಾಮೂಹಿಕ ನಿರ್ಬಂಧ ನಿರಂಕುಶ ದುಃಸ್ವಪ್ನವಾಗಿದೆ. ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ನಿಷೇಧಿಸಲಾಗಿದೆ, ಅಸೆಂಬ್ಲಿಯನ್ನು ನಿಷೇಧಿಸಲಾಗಿದೆ, ಮಾಧ್ಯಮಗಳಿಗೆ ಸೆನ್ಸಾರ್‌ಶಿಪ್ ಅನ್ವಯಿಸಲಾಗಿದೆ. ಕಾಶ್ಮೀರದಿಂದ ಪಂಜಾಬ್‌ವರೆಗೆ ಆಜಾದಿ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.
ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಎಎಪಿ ಸರ್ಕಾರ ಶನಿವಾರ ಸ್ಥಗಿತಗೊಳಿಸಿದೆ. ಆರಂಭದಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಮತ್ತು ಮತ್ತೆ ಮಂಗಳವಾರದವರೆಗೆ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಸೋಮವಾರದಂದು ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧಗಳನ್ನು ವಿಸ್ತರಿಸುವ ಆದೇಶದಲ್ಲಿ ಗೃಹ ವ್ಯವಹಾರಗಳು ಮತ್ತು ನ್ಯಾಯ ಇಲಾಖೆಯು, “ಎಲ್ಲಾ ಮೊಬೈಲ್ ಇಂಟರ್ನೆಟ್ ಸೇವೆಗಳು, ಎಸ್‌ಎಂಎಸ್ ಸೇವೆಗಳು ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿನ ಎಲ್ಲಾ ಡಾಂಗಲ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಯಾವುದೇ ಪ್ರಚೋದನೆಯನ್ನು ತಡೆಯಲು, ಹಿಂಸಾಚಾರವನ್ನು ನಿರ್ಬಂಧಿಸಲು, ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಭಂಗ ಉಂಟಾಗದಂತೆ ತಡೆಯಲು ಈ ಕ್ರಮ ಜರುಗಿಸಲಾಗಿದೆ” ಎಂದು ತಿಳಿಸಲಾಗಿದೆ.


