“ಮೋದಿ ಹಠಾವೋ, ದೇಶ್ ಬಚಾವೋ (ಮೋದಿಯನ್ನು ತೊಲಗಿಸಿ, ದೇಶವನ್ನು ಉಳಿಸಿ)” ಎಂಬ ಘೋಷಣೆಯ ಪೋಸ್ಟರ್‌ಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ ಎರಡು ದಿನಗಳ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪದಚ್ಯುತಗೊಳಿಸಲು ಕರೆ ನೀಡುವ ಪೋಸ್ಟರ್‌ಗಳು ಇಂದು ಬೆಳಿಗ್ಗೆ ದೆಹಲಿಯಲ್ಲಿ ಕಾಣಿಸಿಕೊಂಡವೆ. ಇದು ಬಿಜೆಪಿ-ಎಎಪಿ ನಡುವಿನ ಪೋಸ್ಟರ್ ವಾರ್‌ಗೆ ಸಾಕ್ಷಿಯಾಗಿದೆ.
ದೆಹಲಿ ಪೊಲೀಸರು ಮೋದಿ ವಿರೋಧಿ ಪೋಸ್ಟರ್ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿ, ”ಮೋದಿ ಹಠಾವೋ, ದೇಶ್ ಬಚಾವೋ (ಮೋದಿಯನ್ನು ತೊಲಗಿಸಿ, ದೇಶವನ್ನು ಉಳಿಸಿ)” ಎಂಬ ಘೋಷಣೆಯುಳ್ಳ ಸಾವಿರಾರು ಪೋಸ್ಟರ್‌ಗಳನ್ನು ವಶಕ್ಕೆ ಪಡಿಸಿಕೊಂಡರು. ಈ ಪೋಸ್ಟರ್‌ಗಳನ್ನು ಆಪ್ ಕಚೇರಿಗೆ ಸಾಗಿಸಲಾಗುತ್ತಿತ್ತು ಎಂದು ವಾಹನ ಚಾಲಕ ಹೇಳಿದ್ದಾನೆ. ಈ ಘಟನೆಯ ನಂತರ ಪ್ರಿಂಟಿಂಗ್ ಪ್ರೆಸ್‌ನ ಇಬ್ಬರು ಮಾಲೀಕರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಮತ್ತು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೀಗ ಬಿಜೆಪಿಯು ಎಎಪಿ ವಿರುದ್ಧ ಪೋಸ್ಟರ್ ವಾರ್‌ಗೆ ಮುಂದಾಗಿದ್ದು, ”ಕೇಜ್ರಿವಾಲ್ ಅಪ್ರಾಮಾಣಿಕ, ಭ್ರಷ್ಟ ಸರ್ವಾಧಿಕಾರಿ”, ”ಅರವಿಂದ್ ಕೇಜ್ರಿವಾಲ್ ಅವರನ್ನು ತೆಗೆದುಹಾಕಿ, ದೆಹಲಿಯನ್ನು ಉಳಿಸಿ” ಎಂಬ ಘೋಷಣೆಯನ್ನು ಹೊಂದಿರುವ ಪೋಸ್ಟರ್‌ಗಳನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹಾಕಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ”ತಮ್ಮನ್ನು ಪದಚ್ಯುತಗೊಳಿಸುವಂತೆ ಹೇಳಲಾದ ಪೋಸ್ಟರ್‌ಗಳನ್ನು ನೋಡಿದ್ದೇನೆ ಮತ್ತು ಪ್ರಜಾಪ್ರಭುತ್ವದಲ್ಲಿ ಅಂತಹ ಪೋಸ್ಟರ್‌ಗಳನ್ನು ಅಂಟಿಸಲು ಎಲ್ಲರಿಗೂ ಹಕ್ಕಿದೆ” ಎಂದು ಹೇಳಿದ್ದಾರೆ.

”ಇಂತಹ ಪೋಸ್ಟರ್‌ಗಳಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ನಿನ್ನೆ ಪ್ರಿಂಟಿಂಗ್ ಪ್ರೆಸ್ ಮಾಲೀಕ ಮತ್ತು ಪೋಸ್ಟರ್ ಅಂಟಿಸುತ್ತಿದ್ದ ಆರು ಬಡವರನ್ನು ಏಕೆ ಬಂಧಿಸಲಾಯಿತು ಎಂದು ನನಗೆ ಅರ್ಥವಾಗುತ್ತಿಲ್ಲ. ಇಂತಹ ಪೋಸ್ಟರ್‌ಗಳಿಗೆ ಪ್ರಧಾನಿ ಹೆದರುತ್ತಿದ್ದಾರೆ ಎಂದು ತೋರಿಸುತ್ತದೆ. ನಾಲ್ಕು ಜನ ಬಂದು ಹೀಗೆ ಪೋಸ್ಟರ್ ಅಂಟಿಸಿದರೆ ಏನು ವ್ಯತ್ಯಾಸವಾಗುತ್ತದೆ? ಜನರು ಅಂತಹ ಪೋಸ್ಟರ್‌ಗಳನ್ನು ಅಂಟಿಸುತ್ತಾರಾ? ಅಂತಹ ಶಕ್ತಿಶಾಲಿ ಪ್ರಧಾನಿ ಇದನ್ನು ನಿಭಾಯಿಸುವುದು ಚೆನ್ನಾಗಿ ಕಾಣುತ್ತಿಲ್ಲ” ಎಂದು ಕೇಜ್ರಿವಾಲ್ ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಟೀಕಿಸುವ ಪೋಸ್ಟರ್ ವಿಚಾರ: ದೆಹಲಿಯಲ್ಲಿ 100 ಎಫ್‌ಐಆರ್ ದಾಖಲು, 6 ಜನರ ಬಂಧನ
ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ ನಂತರ ಬಿಜೆಪಿ-ಎಎಪಿ ವಾರ್ ಮತ್ತಷ್ಟು ತೀವ್ರಗೊಂಡಿದೆ. ಅದರ ಭಾಗವಾಗಿ ಎರಡೂ ಪಕ್ಷದವರು ಈಗ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದಾರೆ.
”ದಾಖಲಾದ 138 ಪ್ರಕರಣಗಳಲ್ಲಿ 36 ಪ್ರಕರಣಗಳು ಪ್ರಧಾನಿ ಮೋದಿ ವಿರೋಧಿ ಪೋಸ್ಟರ್‌ಗಳಿಗಾಗಿ ದಾಖಲಾಗಿವೆ. ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸಿದ್ದಕ್ಕಾಗಿ ಕೆಲವರನ್ನು ಬಂಧಿಸಲಾಗಿದೆ ಮತ್ತು ಪೋಸ್ಟರ್‌ಗಳು ಪ್ರಿಂಟಿಂಗ್ ಪ್ರೆಸ್‌ನ ಹೆಸರನ್ನು ಕಾನೂನಿನಡಿಯಲ್ಲಿ ಹೊಂದಿರಬೇಕು ಹಾಗಾಗಿ ಪ್ರಿಂಟಿಂಗ್‌ಪ್ರೆಸ್ ಮಾಲೀಕರನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಪೊಲೀಸರ ಈ ಸಮರ್ಥನೆಯನ್ನು ಕೇಜ್ರಿವಾಲ್ ಅವರು ತಿರಸ್ಕರಿಸಿದ್ದು, ಪ್ರಧಾನಿ “ಹೆದರಿದ್ದಾರೆ” ಎಂದು ಹೇಳಿದರು.
”ಪೋಸ್ಟರ್‌ಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಯಾರಾದರೂ ಈ ಪೋಸ್ಟರ್‌ಗಳನ್ನು ನಗರದ ತುಂಬೆಲ್ಲಾ ಅಂಟಿಸಬಹುದು ಎನ್ನುವ ಭಯದಿಂದ ಮೋದಿಜಿ ಈ ಕ್ರಮಕ್ಕೆ ಮುಂದಾಗಿದ್ದಾರಾ? ಇವರು ಹೆದರುವ ಪ್ರಧಾನಿ, ಅಸುರಕ್ಷಿತ ಪ್ರಧಾನಿ” ಎಂದು ಕೇಜ್ರಿವಾಲ್ ಲೇವಡಿ ಮಾಡಿದ್ದಾರೆ.


