Homeಮುಖಪುಟಸಿದ್ದು ಮೇಲೆ ಬಿಜೆಪಿಯ ದಿಢೀರ್ ಮಮಕಾರದ ಮರ್ಮವೇನು?

ಸಿದ್ದು ಮೇಲೆ ಬಿಜೆಪಿಯ ದಿಢೀರ್ ಮಮಕಾರದ ಮರ್ಮವೇನು?

- Advertisement -
- Advertisement -
  • ಮಾಚಯ್ಯ |

ರಾಜ್ಯದ ಎಲೆಕ್ಷನ್ ಸಮರ ಮುಗಿದು, ಒಂದರ ಮೇಲೊಂದರಂತೆ ಎರಡು ಸರ್ಕಾರಗಳು ರಚನೆಯಾದವು. ಉತ್ತರ ಸೀಮೆಯ ಮಜಬೂತು ಜೋಡಿ ಹೋರಿಗಳನ್ನು ನೆಚ್ಚಿಕೊಂಡು ನೊಗ ಕಟ್ಟಿದ್ದ ಯಡ್ಯೂರಪ್ಪನ ಚಕ್ಕಡಿಗೆ ಚಕ್ರಗಳೇ ಇರಲಿಲ್ಲ. ಹಾಗಾಗಿ ಅದು ಮೂರು ಗೇಣೂ ಮುಂದಕ್ಕೆ ಹೋಗದೆ ನಿಂತಲ್ಲೆ ಸುಸ್ತಾಗಿ ನೆಲಕಚ್ಚಿತು. ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಹವಾ ಶುರುವಾಗಿದೆ. ಹೆಚ್ಚೂಕಮ್ಮಿ ಒಂದು ದಶಕದ ಕಾಲ ಅಧಿಕಾರವಿಲ್ಲದೆ ಇನ್ನೇನು ಬೂಸ್ಟು ಹಿಡಿಯುವ ಹಂತಕ್ಕೆ ಬಂದಿದ್ದ ಜೆಡಿಎಸ್‌ಗೆ ಕುಮಾರಣ್ಣ ಸಿಎಂ ಆಗುವ ಸುಯೋಗ ಬಂದಿರೋದು ದೇವೇಗೌಡರಿಗೆ ಯೌವ್ವನವನ್ನು ಮರಳಿ ತಂದುಕೊಟ್ಟಿರೋದು ಮಾತ್ರವಲ್ಲ, ಅವರ ತಲೆಯಲ್ಲಿ ಮಲಗಿದ್ದ ಫೀನಿಕ್ಸ್ ಹಕ್ಕಿಗಳೆಲ್ಲ ಒಂದೊಂದಾಗಿ ರೆಕ್ಕೆ ಬಿಚ್ಚುವಂತೆ ಮಾಡಿದೆ. ಕುಮಾರಣ್ಣ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲೇ ಸಿಎಸ್, ಐಜಿಯಂತಹ ಎ.ಸಿ ಚೇಂಬರ್ ಅಧಿಕಾರಗಳನ್ನು ತನ್ನ ಮನೆಗೇ ಕರೆಸಿಕೊಂಡು ಪಿಚ್ ರಿಪೋರ್ಟ್ ಕಲೆಹಾಕಿದ್ದ ದೇವೇಗೌಡರ ಲಗುಬಗೆ ನೋಡಿದರೆ ಅವರ ಹಳೇ ಆಟಗಳು ಶುರುವಾಗುವುದರಲ್ಲಿ ಡೌಟೇ ಇಲ್ಲ. ಅಂದರೆ, ಫ್ಯಾಮಿಲಿ ಸೆಂಟ್ರಿಕ್ ಡ್ರಾಮಾ ಶುರು ಹಚ್ಚಿಕೊಂಡು ತಮ್ಮ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ತೆರೆಮರೆಗೆ ಸರಿಸುವ ಸೋಕಾಲ್ಡ್ ಚಾಣಾಕ್ಷ ತಂತ್ರ!

ದೇವೇಗೌಡರ ಈ ಪರಿ ಹುಮ್ಮಸ್ಸಿನ ಕಾರಣಕ್ಕೇ ಇದೀಗ ಎಲ್ಲರ ಗಮನ ಮಾಜಿ ಸಿಎಂ ಸಿದ್ರಾಮಯ್ಯನತ್ತ ನೆಟ್ಟಿದೆ. ಕಾಂಗ್ರೆಸ್ ಪಾರ್ಟಿಯ ಪ್ರಸ್ತುತ ಅನಾಟಮಿ ಮತ್ತು ದೇಶದ ಮುಂದಿರುವ ಪೊಲಿಟಿಕಲ್ ಕ್ರೈಸಿಸ್ ಬಗ್ಗೆ ಆಳವಾಗಿ ಅರಿವಿಲ್ಲದವರು, `ಇನ್ನು ಸಿದ್ದು ಕಥೆ ಮುಗೀತು. ಒಂದು ಕಡೆ ತಮ್ಮ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡ್ರು, ಮತ್ತೊಂದು ಕಡೆ ಕಾಂಗ್ರೆಸ್ ಪಾರ್ಟಿಯೊಳಗೇ ಇರುವ ಹಿತಶತ್ರುಗಳು ಸೇರಿಕೊಂಡು ಸಿದ್ರಾಮಯ್ಯರನ್ನು ಮೂಲೆಗುಂಪು ಮಾಡ್ತಾರೆ. ಹೈಕಮಾಂಡ್ ಕೂಡಾ ಸಿದ್ರಾಮಯ್ಯರನ್ನ ಕ್ಯಾರೇ ಅನ್ನಲ್ಲ’ ಎಂಬಂತಹ ವಾದಗಳನ್ನು ಹರಿಬಿಡುತ್ತಿದ್ದಾರೆ. ಇಂಥಾ ವಾದದ ಲಾಭವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ಕೂಡಾ ಸಿದ್ರಾಮಯ್ಯನ ಮೇಲೆ ದಿಡೀರ್ ಕಕ್ಕುಲಾತಿಯನ್ನು ಹುಟ್ಟಿಸಿಕೊಂಡು `ಅಯ್ಯೋ.., ಪಾಪಾ..’ ಎಂದು ಮರುಗಲು ಶುರು ಮಾಡಿದೆ. ಯಡ್ಯೂರಪ್ಪನವರು ಸಿದ್ರಾಮಯ್ಯನವರ ಕುರಿತು `ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರನ್ನು ಚೆನ್ನಾಗಿ ಬಳಸಿಕೊಂಡು, ಈಗ ಮೂಲೆಗೆ ಬಿಸಾಕಿದೆ’ ಎಂಬ ಹೇಳಿಕೆ ನೀಡಿದ್ದಲ್ಲದೆ ತಮ್ಮ ಪೌರಾಣಿಕ ಬುಟ್ಟಿಯೊಳಗಿರುವ ದುರಂತ ಪಾತ್ರಗಳನ್ನು ಹೆಕ್ಕಿತೆಗೆದು ಸಿದ್ದುವಿಗೆ ತಾಳೆ ಹಾಕುತ್ತಾ ಓಡಾಡುತ್ತಿದ್ದಾರೆ. ಇತ್ತ ಶೋಭಕ್ಕ, `ಸಿದ್ರಾಮಯ್ಯ ಇದ್ದಿದ್ದರಿಂದಲೇ ಕಾಂಗ್ರೆಸ್‌ಗೆ 78 ಸ್ಥಾನ ಬಂತು. ಆದ್ರೆ, ಕಾಂಗ್ರೆಸ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಅವಮಾನ ಮಾಡುತ್ತಿದೆ’ ಅಂತ ಹೇಳಿಕೆ ಕೊಡುತ್ತಾರೆ.

ಬಿಜೆಪಿಗರ ಈ ಸಿದ್ದು ಮಮಕಾರದ ಹೇಳಿಕೆಗಳು ಕೇವಲ ಬಾಯಿಚಪಲಕ್ಕೆ ಹೊರಬೀಳುತ್ತಿರುವ ಡೈಲಾಗ್‌ಗಳಲ್ಲ. ಅಥವಾ ಸಿದ್ದುವನ್ನು ಗೇಲಿ ಮಾಡುವ ಸಿಂಪಲ್ ಕೊಂಕು ಮಾತುಗಳೂ ಅಲ್ಲ. ಅವುಗಳ ಹಿಂದೆ ಅಡಗಿರಬಹುದಾದ ತಂತ್ರವನ್ನು ಊಹಿಸುತ್ತಾ ಸಾಗಿದರೆ, ಬಿಜೆಪಿಯ ಸ್ಟ್ರಾಟಜಿಯ ಜೊತೆಜೊತೆಗೆ `ಸಿದ್ದು ಕಥೆ ಮುಗೀತಾ?’ ಎಂಬ ಪ್ರಶ್ನೆಗೆ ಒಂದು ಸಾಲಿಡ್ ಉತ್ತರವೂ ಅರ್ಥವಾಗುತ್ತದೆ. ಮೊನ್ನೆ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇಡಿಯಾಗಿ ಬಡಿದಾಡಿದ್ದು ಕಾಂಗ್ರೆಸ್ ಎಂಬ ಶತಮಾನದ ಪಾರ್ಟಿಯ ಜೊತೆಗಲ್ಲ, ದಿಲ್ಲಿಯ ರಾಹುಲ್ ಗಾಂಧಿ ಸಂಗಡವೂ ಅಲ್ಲ; ಸಿದ್ದರಾಮಯ್ಯನ ವಿರುದ್ಧ! ಯಾಕೆಂದರೆ ಹೇಳಿಕೊಳ್ಳುವಂತಹ ದೊಡ್ಡ ಹಗರಣವಿಲ್ಲದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾದಾಡಲು ಬಿಜೆಪಿಗೆ ಯಾವ ಘನಂದಾರಿ ನೆಪವೂ ಇರಲಿಲ್ಲ. ಇದ್ದರೂ ಅವು ಆಧಾರರಹಿತ ಆಪಾದನೆಗಳು ಮಾತ್ರ. ಅವುಗಳನ್ನು ನೆಚ್ಚಿಕೊಂಡು ಜಾಹೀರಾತು ಕೊಡಲು ಹೋಗಿ ಖುದ್ದು ಚುನಾವಣಾ ಆಯೋಗದಿಂದಲೇ ನೋಟಿಸ್ ಪಡೆದುಕೊಂಡಿದ್ದ ಬಿಜೆಪಿಗೆ ರಾಹುಲ್ ಕೂಡಾ ಪ್ರಬಲ ಎದುರಾಳಿಯಾಗಿರಲಿಲ್ಲ. ಆದರೆ ಮೋದಿ, ಅಮಿತ್ ಶಾರಂತಹ ಬಿಜೆಪಿ ದಿಗ್ಗಜರನ್ನೆ ಪಂಚಾಯ್ತಿ ಮಟ್ಟದ ಎದುರಾಳಿಗಳಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ರಾಮಯ್ಯ ಬಿಜೆಪಿಗೆ ಬಲು ದೊಡ್ಡ ಸವಾಲಾಗಿ ಕಾಡಿದ್ದರು. ಹಾಗೆ ಕಾಡುವ ಸಾಮರ್ಥ್ಯವನ್ನು ಅವರ ಜನಪ್ರಿಯ ಯೋಜನೆಗಳು ಮತ್ತು ಕಪ್ಪುಚುಕ್ಕೆಯಿಲ್ಲದ ಆಡಳಿತ ಅವರಿಗೆ ನೀಡಿದ್ದವೆನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಕಾಡಿದ್ದ ಸಿದ್ದು ಬಗ್ಗೆ ಬಿಜೆಪಿಗೆ ಸುಖಾಸುಮ್ಮನೇ ಕಾಳಜಿ ಹುಟ್ಟಲು ಸಾಧ್ಯವೇ? ಅಧಿಕಾರಕ್ಕೆ ಹತ್ತಿರತ್ತಿರ ಬಂದು ಅವಕಾಶ ತಪ್ಪಿಸಿಕೊಂಡ ಹೊಟ್ಟೆಸಂಕಟದ ನಡುವೆಯೂ ಬಿಜೆಪಿ ಈಗ ಮೋದಿಗೋಸ್ಕರ 2019ರ ಚುನಾವಣೆಗೆ ಅಣಿಯಾಗಬೇಕಿದೆ. ಮೂರೇ ದಿನದ ಮುಖ್ಯಮಂತ್ರಿಗಿರಿಗೆ ರಾಜೀನಾಮೆ ಕೊಡುತ್ತಾ ಯಡ್ಯೂರಪ್ಪನವರು `ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ತೀವಿ’ ಎಂದು ಹೇಳಿದ ಮಾತನ್ನು ನಿಜ ಮಾಡಿಕೊಳ್ಳಲು ಹೆಣಗಾಡಬೇಕಿದೆ. ಅದರ ಭಾಗವಾಗಿಯೇ ಸಿದ್ದು ಮಮಕಾರದ ಮಾತುಗಳು ಬಿಜೆಪಿ ನಾಯಕರಿಂದ ಕೇಳಿ ಬರುತ್ತಿವೆ. ಬಿಜೆಪಿಗಿಂತ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಸಿದ್ದು ಸೋತಂತೆ ಕಾಣುತ್ತಾರಾದರು, ವೋಟ್ ಶೇರ್ ವಿಚಾರದಲ್ಲಿ ಬಿಜೆಪಿಗಿಂತಲೂ ಮುಂದಿದ್ದಾರೆ. ಬಿಜೆಪಿ ಶೇ.36.2 ಮತಗಳನ್ನಷ್ಟೆ ಗಳಿಸಿದ್ದರೆ, ಕಾಂಗ್ರೆಸ್ ಶೇ.38ರಷ್ಟು ಮತ ಗಳಿಸಿದೆ. ಅದರರ್ಥ, ಸಿದ್ರಾಮಯ್ಯ ನೇತೃತ್ವವನ್ನು ಒಪ್ಪುವವರ ಸಂಖ್ಯೆ ಜಾಸ್ತಿಯೇ ಇದೆ. ಅವುಗಳಲ್ಲಿ ಅಹಿಂದ ಮತಗಳ ಪ್ರಮಾಣ ಹೆಚ್ಚೆನ್ನುವುದನ್ನು ಅವರ ರಾಜಕೀಯ ಬದುಕನ್ನು ಕಂಡ ಎಂತವರಿಗೇ ಆದರು ಅರ್ಥವಾಗುತ್ತದೆ. ಅಂದರೆ, ಈಗಲೂ ಅಪಾರ ಸಂಖ್ಯೆಯಲ್ಲಿರುವ ಅಹಿಂದ ಮತಗಳಿಗೆ ಸಿದ್ರಾಮಯ್ಯನವರೇ ಫೇವರಿಟ್ಟು! ಈ ಅಂಶದ ಮೇಲೆ ಕಣ್ಣಿಟ್ಟೆ ಬಿಜೆಪಿ, ಸಿದ್ದು ಬಗ್ಗೆ ಮಮಕಾರದ ಮಾತಾಡುತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಸಿದ್ರಾಮಯ್ಯನಿಗೆ ಅನ್ಯಾಯವಾಯ್ತು, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಹೈಕಮಾಂಡ್ ಕೂಡಾ ದೇವೇಗೌಡರ ಶರತ್ತಿಗೆ ತಲೆಬಾಗಿ ಸಿದ್ರಾಮಯ್ಯನನ್ನು ದೂರ ಇಡುತ್ತಿದೆ ಎಂಬ ಗೊಂದಲವನ್ನು ಅಹಿಂದ ಮತಸಮೂಹದ ನಡುವೆ ಹುಟ್ಟುಹಾಕುವುದು ಈ ಮಮಕಾರದ ಇರಾದೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೊ ಗೊತ್ತಿಲ್ಲ, ಆದರೆ ಇಂಡಿಯಾದ ಜನ ರಾಜಕೀಯ ವಿಚಾರದಲ್ಲಿ ವಸ್ತುಸ್ಥಿತಿ ವಿಸ್ಲೇಷಣೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇಂತಹ ಭಾವನಾತ್ಮಕ ಮೆಲೊಡಿಗಳಿಗೆ ಈಡಾಗಿಬಿಡುತ್ತಾರೆ. ಇವತ್ತಿಗೂ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತಿರುವುದು ಕೂಡಾ ಜನರ ಇಂತಹ ಭಾವನಾತ್ಮಕ ವೀಕ್ನೆಸ್ಸಿನಿಂದಾಗಿಯೇ. ಅದನ್ನೆ ಬಂಡವಾಳ ಮಾಡಿಕೊಂಡು ಒಂದು ಅಸ್ತ್ರ ಪ್ರಯೋಗಿಸಿ ನೋಡಲು ಬಿಜೆಪಿ ಮುಂದಾಗಿದೆ. ಆ ಮೂಲಕ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಹರಿದುಹೋಗಿರುವ ಮತಗಳ ಪ್ರಮಾಣವನ್ನು ಕುಗ್ಗಿಸುವುದು ಅದರ ಹುನ್ನಾರ!

ದಿಲ್ಲಿಯತ್ತ ಸಿದ್ದಣ್ಣ?

ಆದರೆ ಕಾಂಗ್ರೆಸ್‌ನೊಳಗೆ ವಸ್ತುಸ್ಥಿತಿ ಈ ಥರ ಇಲ್ಲ. ಶಾಸಕರ ಸಂಖ್ಯಾ ಬಲದಲ್ಲಿ ಸೋತರೂ ಸಿದ್ರಾಮಯ್ಯನ ಸಾಮರ್ಥ್ಯ ಏನು ಅನ್ನೋದು ಹೊಸತನದ ತುಡಿತದಲ್ಲಿರುವ ರಾಹುಲ್ ಗಾಂಧಿಗೆ ಅರ್ಥವಾಗಿದೆ. ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥರಂತಹ ಬಿಜೆಪಿ ಘಟಾನುಘಟಿಗಳನ್ನೆ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಸಿದ್ದುವಿನ `ಮಾಸ್ ಲೀಡರ್’ ಕೆಪಾಸಿಟಿ ರಾಹುಲ್‌ಗೆ ವಿಪರೀತ ಇಷ್ಟವಾಗಿದೆ. ವೇದಿಕೆ ಮೇಲಿರಬಹುದು, ಅಥವಾ ಸದನದ ಒಳಗಿರಬಹುದು ಒಂದು ಬಗೆಯ ನವಿರಾದ ಒರಟುತನದಿಂದ, ಅಸಂಬದ್ಧವಲ್ಲದ ಆಕ್ರೋಶದಿಂದ, ಸುಳ್ಳಲ್ಲದ ಅಂಕಿಅಂಶಗಳಿಂದ ಎದುರಾಳಿಗಳನ್ನು ತಿವಿಯುವ, ಕಟ್ಟಿಹಾಕುವ ಸಿದ್ದು ಸುಭದ್ರ ಅಹಿಂದ ಕೋಟೆಯನ್ನು ಕಟ್ಟಿರುವುದಲ್ಲದೇ ಅದರ ಸಾಮರ್ಥ್ಯ ಏನು ಅನ್ನೋದನ್ನು ವೋಟ್ ಶೇರ್ ಮೂಲಕವೂ ಸಾಬೀತು ಮಾಡಿ ತೋರಿದ್ದಾರೆ. 2013ರ ಚುನಾವಣೆಯಲ್ಲಿ ಶೇ.36.6ರಷ್ಟಿದ್ದ ಕಾಂಗ್ರೆಸ್‌ನ ಮತಗಳಿಕೆ 2018ರಲ್ಲಿ ಶೇ.38ಕ್ಕೆ ಏರಿಕೆಯಾಗಿರುವುದರ ಹಿಂದೆ ಸಿದ್ರಾಮಯ್ಯನ ಆಡಳಿತ ಕೆಲಸ ಮಾಡಿದೆ ಅನ್ನೋದು ಹೈಕಮಾಂಡ್‌ಗೆ ಗೊತ್ತಾಗಿರುವುದರಿಂದಲೇ ಸದ್ಯದ ಪರಿಸ್ಥಿತಿಯಲ್ಲಿ, ಅಂದರೆ 2019ರ ಲೋಕಸಭಾ ಎಲೆಕ್ಷನ್ ಪರಿಸ್ಥಿತಿಯಲ್ಲಿ, ಸಿದ್ದುವನ್ನು ಮೂಲೆಗುಂಪು ಮಾಡಿ ಮುನ್ನಡೆಯುವುದು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ಮುಖ್ಯವಾಗಿ, ರಾಹುಲ್‌ಗೆ ಅದು ಇಷ್ಟವೂ ಇಲ್ಲ.

ಆಡಳಿತದ ಬಿಗಿತದಿಂದ ಮಾತ್ರವಲ್ಲದೇ, ಯಾವ ಮರ್ಜಿ, ಮುಲಾಜೂ ಇಲ್ಲದೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಿದ್ರಾಮಯ್ಯನ ನೇರವಂತಿಕೆಯ ಬಗ್ಗೆ ರಾಹುಲ್ ಮೆಚ್ಚಿ ಮಾತಾಡಿದ ಹಲವು ನಿದರ್ಶನಗಳನ್ನು ಕಾಂಗ್ರೆಸ್ಸಿಗರೇ ಮಾತಾಡಿಕೊಳ್ಳುತ್ತಾರೆ. ತಮ್ಮ ಮುಂದೆ ಮಾತಾಡುವುದಕ್ಕೆ ಹಿಂದೇಟು ಹಾಕುವಷ್ಟು ಅತಿವಿನಯ ತೋರುವ ನಾಯಕರ ನಡುವೆ ಅಗತ್ಯಕ್ಕಿಂತ ಹೆಚ್ಚುವರಿ ಮುಲಾಜುಗಳಿಗೆ ಆಸ್ಪದವಿಲ್ಲದೆ ವ್ಯವಹರಿಸುವ ಸಿದ್ದು ಎಂದರೆ ಸದ್ಯದ ಹೈಕಮಾಂಡ್‌ಗೆ ಅಕ್ಕರೆ ಜಾಸ್ತಿ. ಚುನಾವಣೆಗೂ ಮುನ್ನ ಜೆಡಿಎಸ್, ಕುಮಾರಸ್ವಾಮಿ ಮತ್ತು ದೇವೇಗೌಡರ ಮೇಲೆ ರಾಜಕೀಯವಾಗಿ ಹರಿಹಾಯುತ್ತಿದ್ದ ಸಿದ್ರಾಮಯ್ಯ, ಫಲಿತಾಂಶ ಹೊರಬಿದ್ದು ಅತಂತ್ರವೇರ್ಪಟ್ಟಾಗ ಹೈಕಮಾಂಡ್ ಮಾತಿಗೆ ಬೆಲೆ ಕೊಡುವ ಸಲುವಾಗಿ ತನ್ನ ವೈಯಕ್ತಿಕ ಮುಜುಗರವನ್ನೆಲ್ಲ ಬದಿಗಿರಿಸಿ, ದೇವೇಗೌಡರ ಮನೆಗೆ ಹೋಗಿ ಮೈತ್ರಿಗೆ ಅಡಿಗಲ್ಲು ಹಾಕಿದ ಸಿದ್ದು ಪ್ರಾಮಾಣಿಕ ಪ್ರಯತ್ನದಿಂದಾಗಿ ಸಿದ್ರಾಮಯ್ಯನನ್ನು ದಿಲ್ಲಿ ರಾಜಕಾರಣದ ಕಡೆ ಕರೆದೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆ ಅನ್ನೋದು ಲೇಟೆಸ್ಟ್ ಸುದ್ದಿ. ಪೂರಾ ಭಾರತಕ್ಕೆ ಅಲ್ಲದಿದ್ದರೂ ದಕ್ಷಿಣ ಭಾರತದ ರಾಜ್ಯಗಳ ಮಟ್ಟಿಗಾದರು ಸಿದ್ದು ಸ್ಟಾರ್ ಕ್ಯಾಂಪೇನ್ ಆಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಬಿಜೆಪಿ-ವಿರೋಧಿ ಮೈತ್ರಿ ಬಳಗದ ಪ್ರಭಾವಕ್ಕೆ ಒಳಗಾಗಿರುವ ಈ ರಾಜ್ಯಗಳಲ್ಲಿ, ಯಡ್ಯೂರಪ್ಪ ಅಧಿಕಾರಕ್ಕೇರಲು ನಡೆಸಿದ ಹೈಡ್ರಾಮಾ `ಎಕ್ಸ್ಕ್ಲೂಸಿವ್ ಲೈವ್’ ಆಗಿ ಬಿತ್ತರಗೊಂಡ ತರುವಾಯ ಸಿದ್ದು ಚಿರಪರಿಚಿತ ಲೀಡರ್ ಎನಿಸಿಬಿಟ್ಟಿದ್ದಾರೆ. ಹಾಗಾಗಿ ಅವರನ್ನು ಎಂಪಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಮತ್ತು ಲೋಕಸಭೆಯಲ್ಲಿ ಮೈತ್ರಿ ಬಲದಲ್ಲಿ ಅಧಿಕಾರಕ್ಕೇರಿದರೆ ಸೂಕ್ತ ಹುದ್ದೆ ಕೊಟ್ಟು ಗೌರವಿಸುವ ಲೆಕ್ಕಾಚಾರದಲ್ಲಿದೆ ಹೈಕಮಾಂಡ್.

ಸ್ಪೀಕರ್ ರಮೇಶ್ ಕುಮಾರ್‌ರು ಮೊನ್ನೆ ಮಾತಾಡುತ್ತಾ, `ಸಿದ್ರಾಮಯ್ಯ ಇನ್ನು ಎರಡ್ಮೂರು ತಿಂಗಳಲ್ಲಿ ಮತ್ತೆ ಮುನ್ನೆಲೆಗೆ ಬರಲಿದ್ದಾರೆ, ಅದಕ್ಕೆ ಬೇಕಾದ ತಯಾರಿಗಳೆಲ್ಲ ನಡೆಯುತ್ತಿವೆ’ ಅಂತ ಹೇಳಿದ್ದು ಇದರದ್ದೆ ಮುನ್ಸೂಚನೆಯಿರಬಹುದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...